ಶಿಕ್ಷಣವೆಂಬುದು ಮನುಷ್ಯನ ಉನ್ನತಿಗೆ ಅತ್ಯವಶ್ಯಕವಾಗಿದೆ. ಶಿಕ್ಷಣವೆಂದರೆ ಮನುಷ್ಯನ ಉದ್ಧಾರವೋ ಅಥವಾ ಅತಿಯಾದ ಮುಖವಾಡದ ಸೋಗಿನ ಜೀವನವೋ ಅಲ್ಲ. ಆದರೆ ಮಾನವನ ಮನೋವಿಕಾಸ , ಮನುಷ್ಯತ್ವದ ಆವಾಹನೆ, ಮತ್ತು ಮಾನವ ಕಲ್ಯಾಣವೆಂದೇ ತಿಳಿಯಬೇಕಿದೆ. ಲೋಕದ ಜ್ಞಾನವನ್ನು ಅರಿತು ತನ್ನ ಸುತ್ತಲಿನ ಸಮಾಜದ ಏಳ್ಗೆಗಾಗಿ ವಿನಿಯೋಗಿಸುವ ಪ್ರಕ್ರಿಯೆಗೆ ಶಿಕ್ಷಣವೆನ್ನಬಹುದು.
ಲಂಗು-ಲಗಾಮಿಲ್ಲದೇ ಓಡುವ ಕುದುರೆಗೆ ರಿಕಾಪು ಹಾಕಿ ಶಿಸ್ತು ಸಂಯಮ ಸಮಯಪಾಲನೆ ಸಮಾಜಮುಖಿ ಚಿಂತನೆಗಳ ಬೋಧನೆಯನ್ನು ಶಿಕ್ಷಣದ ಮೂಲಕ ಒದಗಿಸುವುದೇ ಮುಖ್ಯವಾದ ಧ್ಯೇಯವಾಗಿದೆ. ಆದರೆ ಈ ಎಲ್ಲಾ ಅಂಶಗಳನ್ನು ಕೇವಲ ಪುಸ್ತಕಗಳಲ್ಲಿ ಅಥವಾ ತರಗತಿಯ ಕೊಠಡಿಗಳಲ್ಲಿ ಅಥವಾ ಪರೀಕ್ಷಾ ದೃಷ್ಟಿಯಿಂದಾಗಿ ಯಾಂತ್ರಿಕತೆಯ ಮನೋಭಾವದಿಂದ ಬೋಧಿಸಿದಲ್ಲಿ ಅದರ ಸತ್ಪರಿಣಾಮವು ಎಂದಿಗೂ ಈ ಸಮಾಜದ ಮೇಲೆ ಆಗಲಾರದು.
ಚುನಾಯಿತ ಪ್ರತಿನಿಧಿಗಳು ಸರ್ಕಾರದ ಮುಂದಾಳುಗಳು ತಾವು ಎಲ್ಲಿಂದ ಬಂದೆವು ಎಂಬ ವಿಷಯವನ್ನು ಹಾಗೂ ತಾನು ಪ್ರತಿನಿಧಿ ಆಗುವ ಮುಂಚೆ ಸರ್ಕಾರದ ಮುಂದಾಳು ಆಗುವ ಮೊದಲು ಕಂಡುಂಡ ಸಮಸ್ಯೆಗಳನ್ನು ಮರೆತರೆ ಎಷ್ಡೇ ವಿಶ್ವ ವಿದ್ಯಾಲಯಗಳು ಸ್ಥಾಪನೆಗೊಂಡರೂ ಎಷ್ಟೇ ಪದವಿಗಳನ್ನು ಪಡೆದವರು ಬೋಧಿಸಿದರೂ ಅದು ವ್ಯರ್ಥವೇ ಹೊರತು ಸಾರ್ಥಕವಾಗುವುದಿಲ್ಲ. ಕಾರಣ ನಮ್ಮ ಸಂವಿಧಾನವು ನೀಡಿರುವ ಅಧಿಕಾರವನ್ನು ತಿರುಚಿ ಅನುಭವಿಸುವ ವಿದ್ಯೆ ಯಾವ ವಿಶ್ವವಿದ್ಯಾಲಯವೂ ಕಲಿಸದೇ ಕಲಿಯಲಾಗುತ್ತದೆ ಮತ್ತು ಆ ಎಲ್ಲಾ ವ್ಯವಸ್ಥೆಯ ಮುಂದಾಳು ಅಥವಾ ನಿರ್ಣಾಯಕ ಪಾತ್ರಧಾರಿ ಈ ಚುನಾಯಿತ ಪ್ರತಿನಿಧಿಯೇ ಆಗಿರುತ್ತಾನೆ. ಅಂತಹ ಚುನಾಯಿತ ಪ್ರತಿನಿಧಿಗೆ ಮಾನವೀಯ ಮೌಲ್ಯಗಳ ಪರಿಚಯವಿದ್ದಲ್ಲಿ ಆತನ/ಆಕೆಯ ಆಂತರ್ಯದಲ್ಲಿ ಮನುಷ್ಯತ್ವದ ತೇವಾಂಶವಿದ್ದಲ್ಲಿಎಂತಹದ್ದೇ ಐಷಾರಾಮಿ ಬದುಕು ಬಂದು ಹೊಸ್ತಿಲಲ್ಲಿ ನಿಂತಿರೂ ಕೂಡಾ ವಿಚಲಿತಕ್ಕೊಳಗಾಗದೇ ಒಮ್ಮೆ ಸಾವಧಾನದಿಂದ ಮನೆಯ ಒಳಗೆ (ತನ್ನ ಸುತ್ತಲಿನ ಜನಜೀವನ) ಕಾಲುಮುರಿದುಕೊಂಡು ಬಿದ್ದಿರುವ ಸಮಸ್ಯೆಗಳನ್ನು ಮನನ ಮಾಡಿಕೊಳ್ಳಬೇಕು ಸದಾ ಕಾಲ ಅದೇ ಗುಂಗಿನಲ್ಲಿದ್ದು ಅವುಗಳ ಪರಿಹಾರಕ್ಕೆ ತನ್ನ ಜನರ ಉದ್ಧಾರಕ್ಕಾಗಿ ಶ್ರಮಿಸಬೇಕು ಅಂತಹ ಧೀರೋದತ್ತ ವ್ಯಕ್ತಿತ್ವವನ್ನು ಶಿಕ್ಷಣವು ನೀಡಬೇಕಿದೆ.
ಆದರೆ ಆಗುತ್ತಿರುವುದಾದರೂ ಏನು? ಚುನಾವಣಾ ಸಮಯದಲ್ಲಿ ಮಾತ್ರ ಸಕಲ ಕಲಾವಲ್ಲಭರಂತೆ ನಟಿಸಿ ಗೆದ್ದ ನಂತರ ಕುಂಭಿ ಮೇಲೆ ಕುಳಿತು, ಜನರ ಕಷ್ಟಕೋಟಲೆಗಳನ್ನು ಕಂಡು ಉದಾಸೀನ ತೋರುವ ಉಡಾಫೆಯಿಂದ ಜೀವಿಸುವ ದಂತಗೋಪುರದ ಗಿಳಿಗಳಾಗುವ ಪರಿ ಅವರ ಮುಖವಾಡದ ಬದುಕಿಗೆ ನಿದರ್ಶನವಾಗಿದೆ. ಮತ ಯಾಚನೆಯ ಸಮಯದಲ್ಲಿ ಗಿಳಿಯಂತೆ ಮಾತನಾಡಿ, ಗೆದ್ದು ಗದ್ದುಗೆ ಏರಿದ ನಂತರ ಹದ್ದಿನಂತೆ ಎರಗಿ, ಕರುಳು ಬಳ್ಳಿಗಳನ್ನು ಕಣ್ಣು ಕಿವಿಗಳನ್ನೂ ಕಿತ್ತು ತಿಂದು ಅಂಗಹೀನರನ್ನಾಗಿ ಮಾಡುವ ಪರಿವರ್ತನೆ ಎಂತಹವರನ್ನೂ ಕೂಡಾ ಸ್ಥಂಭೀಭೂತರನ್ನಾಗಿಸದೇ ಇರದು.
ನಾಡು ನುಡಿಯ ಹಿತ ಕಾಯುವ ಬದಲು ಪರರಿಗೆ ಅಡವಿಟ್ಟು ಎರವರನ್ನು ಓಲೈಸಿ ಬೂಟು ನೆಕ್ಕುವ ಮನಸ್ಥಿತಿಗೆ ಇನ್ನೆಷ್ಟು ತಲೆಮಾರುಗಳು ತಲೆ ತಗ್ಗಿಸಿ ಸಂಯಮದಿಂದಿರಬೇಕು. ವಿದ್ಯಾ ದದಾತಿ ವಿನಯಂ ಎಂಬ ಒಂದು ಮಾತನ್ನು ಶಾಲಾ ದಿನಗಳಲ್ಲಿ ಕಲಿತ ನುಡಿಗಟ್ಟು ಅದರ ಅರ್ಥ ವಿಸ್ತಾರವೇನೆಂದರೆ ವಿದ್ಯೆ ಇಲ್ಲದಿದ್ದರೆ ವಿನಯವಿರಲ್ಲ ಎಂಬುದು , ಹಾಗಾದರೆ ಈಗ ಬೀದಿ ಬೀದಿಗೆ ಹತ್ತು ಶಾಲೆಗಳು ಎಂತಹ ಕುಗ್ರಾಮಗಳಿಗೂ ಸಹ ಖಾಸಗಿ ಶಾಲೆಗಳು ತಮ್ಮ ಕಬಂಧ ಬಾಹುಗಳನ್ನು ಚಾಚಿ ಸರಕಾರಿ ಶಾಲೆಗಳನ್ನು ಆಪೋಶನ ತೆಗೆದುಕೊಳ್ಳುವ ಮಟ್ಟಿಗೆ ಬೆಳೆದಿದೆ ಮಂಗಳಗ್ರಹಕ್ಕೆ ಹಾರಿ ಮನೆ ಕಟ್ಟುವ ಯೋಜನೆ ಹಾಕುವಂತಹ ಪದವಿ ಗಳಿಸಿದರೂ ಕೂಡಾ ಆಧುನಿಕ ಜಗತ್ತಿನ ನವ ಸಾಕ್ಷರತೆಯ ಕೂಸುಗಳಲ್ಲಿ ಇಂತಜ ನಿರ್ಲಜ್ಯ ನಿರ್ವೀರ್ಯ ನಿರಭಿಮಾನದ ನಡವಳಿಕೆ ಏಕೆ? ಹಾಗಾದರೆ ನಮ್ಮ ಶಿಕ್ಷಣ ವ್ಯವಸ್ಥೆ ಎಡವಿದ್ದೆಲ್ಲಿ? ಏಕೆ ರಾಷ್ಟ್ರಪ್ರೇಮ ನಾಡು ನುಡಿಯ ಬಗ್ಗೆ ಜವಾಬ್ದಾರಿ ಮತ್ತು ಅಭಿಮಾನವನ್ನು ಕಲಿಸುತ್ತಿಲ್ಲ? ಒಂದು ಪ್ರಾಂತ್ಯದ ಪ್ರತಿನಿಧಿಯಾದ ಮೇಲೆ ಆ ಜನರ ಆಶೋತ್ತರಗಳನ್ನು ಆ ಜನರ ನೆಲದ ಬಾಂಧವ್ಯದ ಮಹತ್ವವನ್ನು ಏಕೆ ಅರಿಯುವುದಿಲ್ಲ? ಮಣ್ಣಿನ ಮೇಲೆ ದಾಳಿ ಮಾಡುವ ಜನರನ್ನು ಓಲೈಸುವ ಆ ಓಲೈಕೆಯಿಂದ ನೂರು ತಲೆಮಾರು ತಿನ್ನುವ ಷ್ಟು ಆಸ್ತಿಯನ್ನು ಮಾಡುವ ಲೋಭಿತನವೇಕೆ? ವಿವಿಧ ಬಗೆಯ ಯೋಜನೆಗಳನ್ನು ರೂಪಿಸಿ ಅದಕ್ಕೊಂದು ದೈವತ್ವವೋ ಡಾಂಭಿಕತನವೋ ತುಂಬಿ ಜನರ ಮನೋದೌರ್ಬಲ್ಯಗಳನ್ನೇ ಬಂಡವಾಳ ಮಾಡಿಕೊಂಡು ಸಮಾಜವನ್ನು ದೋಚುವ ಮತ್ತು ನಂಬಿಕೆಯಿಟ್ಟು ಓಟು ಕೊಟ್ಟು ಗೆಲ್ಲಿಸಿದ ಜನರ (ನೋಟು ಪಡೆದವರನ್ನು ಕ್ಯಾಕರಿಸಿ ಉಗಿಯುತ್ತಾ) ನಂಬಿಕೆಯನ್ನು ತುಳಿದು ಬಲಿಯುವ ನಿಮಗೆ ಮನಃಸ್ಸಾಕ್ಷಿ ಇದೆಯೇ?
ಸ್ವತಂತ್ರ ಬಂದ ಹೊಸತರಲ್ಲಿ ಮತ್ತು ಭಾರತವೆಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಬ್ಬಿದ್ದಂತಹ ವಿವಿಧ ದೇಶಗಳನ್ನು ಒಗ್ಗೂಡಿಸಿ ಏಕೀಕರಣದ ಮಂತ್ರ ಪಠಿಸಿ ದೇಶಗಳನ್ನು ರಾಜ್ಯಗಳೆಂದು ಪರಿಗಣಿಸಿ “ಗಣ ರಾಜ್ಯಗಳ ಒಕ್ಕೂಟ ಭಾರತ” (The Republic of India) ಎಂಬ ಹೊಸ ಹೆಸರಿನಿಂದ ಗುರುತಿಸಿ ಸಾಧಿಸಿದ ದೇಶದಲ್ಲಿ ಪ್ರಾಂತೀಯ ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದು ಈಗೀಗ ಪ್ರಾಂತೀಯ ಅಥವಾ ಪ್ರಾದೇಶಿಕ ಮನಸ್ಥಿತಿಯನ್ನು ಇಲ್ಲವಾಗಿಸುವ ಹುನ್ನಾರಗಳನ್ನು ಸಹ ಈ ಶಿಕ್ಷಣವೇ ಕಲಿಸಿತೆ!?
ಬಾಬಾಸಾಹೇಬ ಡಾ. ಅಂಬೇಡ್ಕರರ ಸ್ಪಷ್ಟ ಆಶಯವು ಶಿಕ್ಷಣವೇ ಶಕ್ತಿ ಮತ್ತು ದೇವಸ್ಥಾನಗಳ ಘಂಟೆ ಬಡಿಯುವುದಕ್ಕಿಂತ, ಶಾಲೆಯ ಘಂಟೆಯ ಶಬ್ದ ಹೆಚ್ಚು ಕೇಳುವಂತಾಗಬೇಕು ಎಂಬುದೇ ಆಗಿದೆ. ಶಾಲೆಗಳೇನೋ ತೆರೆದಿವೆ ಯಥೇಚ್ಛವಾಗಿ ಪಾರ್ಥೇನಿಯಂ ಕಳೆಯ ಹಾಗೆ, ಆದರೆ ಅಲ್ಲಿ ಬಡಿಯುತ್ತಿರುವುದು ಅರಿವಿನ ಘಂಟೆಯಲ್ಲ ಹಣದ ಹರಿವಿನ ನಿನಾದ. ಇದಕ್ಕೆ ಪೂರಕವೆಂಬಂತೆ ಆಳುವ ಪ್ರತಿನಿಧಿಗಳು ಮೌನ ವಹಿಸಿ ಬಡಜನರ ದಮನಿತರ ಮೂಲಭೂತ ಹಕ್ಕುಗಳ ದಮನವನ್ನು ಪುಸಲಾಯಿಸುತ್ತಿರುವಂತಿದೆ. ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ಮತ್ತು ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ವಿದ್ಯಾರ್ಥಿವೇತನವನ್ನೂ ನೀಡಲಾಗುತ್ತಿತ್ತು ಈಗ ಘಟಿಸುತ್ತಿರುವ ಘಟನೆಗಳಿಂದಾಗಿ ಬಡಜನರ ಹಳ್ಳಿಗಾಡಿನ ಮಕ್ಕಳು ಶಿಕ್ಷಣದಿಂದ ವಂಚಿತರಾದಂತಲ್ಲವೇ!?
ಶಿಕ್ಷಣದ ಮತ್ತು ಶಿಕ್ಷಕರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರ ವಹಿಸಿಕೊಂಡವರು ಯೋಚಿಸಬೇಕಾದಂತಹ ವಿಷಯ ವಾಗಿದೆ. ಶಿಕ್ಷಕರ ಮನೋಭಾವ ಅವರು ಅರ್ಜಿಸಿದ ವಿದ್ಯೆಯು ಸಮಾಜೋದ್ಧಾರಕ್ಕೆಂದು ಸಂಕಲ್ಪವನ್ನು ತೊಟ್ಟರೂ ಕೂಡಾ ಶಿಕ್ಷಣ ವ್ಯವಸ್ತೆಯ ಹಣೆಬರಹ ಬರೆಯುವ ವ್ಯಕ್ತಿಗೆ ಸರಿಯಾದ ವ್ಯಕ್ತಿತ್ವವಿಲ್ಲದೇ ಸರಿಯಾದ ಪ್ರೌಢಿಮೆ ಇಲ್ಲದೇ ಪರಿಪಕ್ವ ಬೌದ್ಧಿಕತೆ ಇಲ್ಲದೇ ಹೋದರೆ ಯಾವುದೂ ಪ್ರಯೋಜನವಿರುವುದಿಲ್ಲ. ಅದೇನೋ ಗಾದೆ ಹೇಳುವರಲ್ಲ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತೆ ಎಂಬಂತೆ ನಿರರ್ಥಕವಾಗುವುದು.
ಚುನಾವಣೆ ಸಮೀಪಿಸುತ್ತಿದೆ ಹಿಂದಿನ ಕಾಲಕ್ಕೆ ಹೋಲಿಕೆ ಮಾಡಿಕೊಂಡರೆ ಈಗಿನ ಕಾಲದಲ್ಲಿ ವಿದ್ಯಾವಂತರ ಸಂಖ್ಯೆ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಾಗಿದೆ. ಇಷ್ಟು ದಶಕಗಳ ಕಾಲ ತಿಂದ ಪೆಟ್ಟುಗಳಿಂದ ಪಾಠ ಕಲಿತಿದ್ದರೆ ಬುದ್ಧಿ ಬಲಿತಿದ್ದರೆ ಬಹುಶಃ ಮುಂದಿನ ತಲೆಮಾರುಗಳ ಕಾಲಕ್ಕೆ ಈ ದೇಶ ಈ ನಾಡು ನುಡಿಯ ಮಹತ್ವವನ್ನು ಹಾಗೂ ಚರಿತ್ರೆಯನ್ನು ಮತ್ತು ಇತಿಹಾಸವನ್ನು ನೆಮ್ಮದಿಯ ಜೀವನದ ಬದುಕನ್ನೂ ಬಳುವಳಿಯಾಗಿ ಕೊಡಬಲ್ಲರೇನೋ?
ದುರಂತವೆಂದರೆ ಈಗಿನ ಸಮಾಜದಲ್ಲಿ ಯಾರು ಪದವೀಧರರೋ (ವಿದ್ಯೆಯಲ್ಲಿ) ಶಿಕ್ಷಣ ಪಡೆದಿರುವರೋ ಅವರಲ್ಲಿಯೇ ಅತೀ ಹೆಚ್ಚು ಒಡೆದು ಆಳುವ ಮನಸ್ಥಿತಿ ತುಂಬಿ ತುಳುಕುತ್ತಿದೆ. ಯಾರೊಬ್ಬರಿಗೂ ನೈತಿಕತೆ ಇಲ್ಲ ಯಾರಲ್ಲಿಯೂ ಸೌಹಾರ್ದ ಮನೋಭಾವವಿಲ್ಲ. ಹಣದ ಹುಚ್ವು ಹೊಳೆಯಲ್ಲಿ ಕೊಚ್ಚಿ ಹೋಗುತ್ತಿವೆ ಸಾಮಾಜಿಕ ಜನ ಜೀವನದ ಮೌಲ್ಯಗಳು ವೇದಿಕೆಯ ಭಾಷಣಕ್ಕೆ ಮತ್ತು ಚಪ್ಪಾಳೆ ಶಬ್ದಗಳಿಗಷ್ಟೇ ಸೀಮಿತವಾಗಿವೆ. ಜಾತಿ ವೇದಿಕೆಗಳು ಜನರ ಮನಸ್ಸನ್ನು ಛಿದ್ರಗೊಳಿಸಿ ಸಮಾಜವೆಂಬ ಬಹುದೊಡ್ಡ ಪರಿಕಲ್ಪನೆ ಅಳಿದು ಈಗ ಸಮಾಜವೆಂದರೆ ನಿರ್ಧಿಷ್ಟವಾದ ಸೀಮಿತ ಜಾತಿಯ ಸಮಾವೇಶವೆಂಬಲ್ಲಿಗೆ ಬಂದು ನಿಂತಿದೆ.
ಶಿಕ್ಷಿತರು ಪ್ರೌಢರಾಗಲಿ, ವಿದ್ಯಾವಂತರು ವಿಚಾರವಂತರಾಗಲಿ, ಸಚಿವರು ಸದ್ಬುದ್ಧಿ ಪಡೆಯಲಿ ನಾಗರೀಕರು ಸೌಹಾರ್ದತೆಯ ಸೌಧವನ್ನು ಕಟ್ಟುವಂತಾಗಲಿ. ತನ್ನತನವನ್ನು ಬಿಟ್ಟು ಪರರ ಓಲೈಕೆ ಮಾಡುವುದನ್ನು ನಿಲ್ಲಿಸಲಿ ಕನ್ನಡ ನೆಲದಲ್ಲಿ ಗಡಿ ಭಾಗಗಳಲ್ಲಿ ಭಾಷೆ ಸಂಸ್ಕೃತಿಗಳ ರಕ್ಷಣೆಗೆ ಚುನಾಯಿತ ಪ್ರತಿನಿಧಿಗಳು ಕಟಿಬದ್ಧರಾಗಲಿ. ಉಡಾಫೆತನಗಳನ್ನು ಬಿಟ್ಟು ಕುಟುಂಬ ಕಲ್ಯಾಣಕ್ಕಾಗಿ ಮುಗ್ಧ ಜನರ ಬದುಕುಗಳನ್ನು ಬಲಿ ಕೊಡದಿರಲಿ, ನೆಲ ಜಲ ಭಾಷೆ ಗಡಿಗಳ ವಿಚಾರದಲ್ಲಿ ಗಟ್ಟಿತನದ ನಿಲುವು ಇರುವಂತಹ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರೌಢಿಮೆ ಜನರಿಗೆ ಬರಲಿ. ದೀನರ ದಲಿತರ ದಮನಿತರ ನೆಲ ಕಬಳಿಸುವಂತಹ ಮೈಗಳ್ಳ ದೇವಮಾನವರನ್ನು ಪ್ರೋತ್ಸಾಹಿಸುವುದನ್ನು ಬಿಟ್ಟು ರೈತನ ನೇಗಿಲಿಗೆ ಜೀವ ತುಂಬುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿ ಎಂಬುದೇ ಎಲ್ಲರ ಮನದಾಶಯ. ಜನಪ್ರತಿನಿಧಿಗಳಾಗ ಬಯಸುವವರಿಗೆ ಕನಿಷ್ಟ ಪದವಿ ಶಿಕ್ಷಣದ ಮಾನದಂಡವಾಗಬೇಕು ಈ ಬಗ್ಗೆ ಚುನಾವಣಾ ಆಯೋಗ ಚಿಂತಿಸಲಿ. ಸದ್ದುಗದ್ದಲವಿಲ್ಲದೇ ಕಿತ್ತಾಟವಿಲ್ಲದೇ ಅನುದಾನ ಮತ್ತು ಸಂಬಳವನ್ನು ಹೆಚ್ಚಳ ಮಾಡಿಕೊಳ್ಳುವ ಚುನಾಯಿತ ಪ್ರತಿನಿಧಿಗಳು ಈ ಬಗ್ಗೆಯೂ ಚಿಂತಿಸುವಂತಾಗಲಿ ಮುಂಬರುವ ಚುನಾವಣೆಯು ಹೊಸ ಮನ್ವಂತರಕ್ಕೆ ಸಾಕ್ಷಿಯಾಗಲಿ.
ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
9844673976
ಇದು ಮನ ಮುಟ್ಟುವ ಅಂಕಣ ಎಲ್ಲರೂ ಅರ್ಥೈಸಿ ಕೊಳ್ಳಬೇಕಾದ ವಿಷಯ.
ಶಿಕ್ಷಣ ಅನ್ನೋದು ದಂಧೆ ಆಗಿ ಮಾರ್ಪಟ್ಟಿರೋದು ನಾಚಿಗೇಡಿತನ…
ಸರ್ಕಾರಿ ಶಾಲೆ ಯಲ್ಲಿ ಓದಿರೋ ಅದೆಷ್ಟೋ ವಿದ್ಯಾರ್ಥಿಗಳು ಎಲ್ಲಾ ರಂಗ ಗಳಲ್ಲೂ ಮುಂದೆ ಇರಬೇಕಾದರೆ..
ಈ ಡೊನೇಷನ್ ದುಂದು ವೆಚ್ಚ ದ ಖಾಸಗಿ ಶಿಕ್ಷಣ ಯಾತಕ್ಕಾಗಿ?…
ನಿಮ್ಮ ಮೌಲಿಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್
🙏🙏 ಇದು ಸತ್ಯ ಸರ್, ಬದಲಾವಣೆ ಬಹಳ ಜನಕ್ಕೆ ಬೇಕಾಗಿಯೇ ಇಲ್ಲ, ಪ್ರಯತ್ನ ಬಹಳಷ್ಟು ಇದೆ.ಮುಂದೆ 20 ವರ್ಷದಲ್ಲಿ ಜ್ಞಾನವನ್ನು ಪಡೆಯದ ಮಕ್ಕಳು, ಜೀವನ ಮಾಡೋದಾದ್ರು ಹೇಗೆ ??