ಇತ್ತೀಚೆಗೆ ಭಾರತದ ಬಹುದೊಡ್ಡ ಉದ್ಯಮಿ ರತನ್ ಟಾಟಾ ಅವರ ಜನ್ಮದಿನದ ಪ್ರಯುಕ್ತ ಒಂದು ಫೋಸ್ಟ್ ಬಹುಜನರ/ಬಡಜನರ ಜಾಲತಾಣದಲ್ಲಿ ಕಂಡುಬಂದಿತು. “ಉಪ್ಪಿನಿಂದ ಉಕ್ಕಿನ ತನಕ ದೇಶದ ಉದ್ಯಮ ನಡೆಸುವ ರತನ್ ಟಾಟಾ ಅವರಿಗೆ ಜನ್ಮ ದಿನದ ಶುಭಾಶಯಗಳು” ಅನ್ನುವ ತಾತ್ಪರ್ಯದಲ್ಲಿರುವ ಈ ಪೋಸ್ಟ್ ಅನ್ನು ಬಹುಜನರು ಬಹಳ ಹೆಮ್ಮೆಯಿಂದ ಹಂಚಿಕೊಂಡಿದ್ದರು.

Chairman of India’s Tata Motors, Ratan Tata (Photo source internet)

ಒಬ್ಬನೇ ವ್ಯಕ್ತಿ, ಒಂದೇ ಕುಟುಂಬ, ಒಂದೇ ಸಂಸ್ಥೆ, ಒಬ್ಬರದೇ ಒಡೆತನದ ಕೈಲಿ ಒಂದು ದೇಶದ ಸಕಲ ಉದ್ಯಮವೂ ಇರುವುದು ನಿಜಕ್ಕೂ ಹೆಮ್ಮೆಪಡುವ ವಿಷಯವಲ್ಲ. ಇದು ಪ್ರಜಾಪ್ರಭುತ್ವದ ದುರಂತ! ಇಂತಹ ದುರಂತವನ್ನು ಪ್ರಜಾಪ್ರಭುತ್ವದ ಪ್ರಜೆಗಳು ಹೆಮ್ಮೆ ಎಂದು ಬೀಗುವುದೇ ಬಹುದೊಡ್ಡ ವಿಪರ್ಯಾಸ! ಬಹುಜನರ ಕನಸು, ಭವಿಷ್ಯ ಮತ್ತು ಬದುಕನ್ನು ಕಸಿದುಕೊಂಡ ಟಾಟಾ, ಬಿರ್ಲಾ, ಅದಾನಿ, ಅಂಬಾನಿಗಳು ಬಹುದೊಡ್ಡ ಉದ್ಯಮಿಗಳಾಗಿ, ಬಹುದೊಡ್ಡ ಸಿರಿವಂತರಾಗಿ ಉಪ್ಪಿನಿಂದ ಉಕ್ಕಿನ ತನಕ ಎಲ್ಲಾ ವ್ಯವಹಾರ ವಹಿವಾಟುಗಳನ್ನೂ ನಿಯಂತ್ರಿಸುವುದನ್ನು ಹಾಡಿ ಹೊಗಳುವ ಬಹುಜನರನ್ನು ನೋಡಿ ಜಗತ್ತು ಗಹಗಹಿಸಿ ನಗುತ್ತಿದೆ!!

ಪ್ರಜೆಗಳನ್ನಷ್ಟೇ ಈ ಉದ್ಯಮಿಗಳು ನಿಯಂತ್ರಿಸುತ್ತಿಲ್ಲ ಪ್ರಜಾತಂತ್ರ ವ್ಯವಸ್ಥೆಯನ್ನು ಸಹ ಈ ಬೆರಳೆಣಿಕೆಯ ಉದ್ಯಮಿಗಳು ನಿಯಂತ್ರಿಸುತ್ತಿದ್ದಾರೆ ಎಂಬುದೂ ಜಗತ್ತಿನ ಮುಂದೆ ನಗೆಪಾಟಲಿಗೀಡಾಗಿದೆ! ಸಿರಿವಂತ ಉದ್ಯಮಿಗಳ ಹಣದಲ್ಲಿ, ಸಿರಿವಂತ ಉದ್ಯಮಿಗಳ ಮರ್ಜಿಯಲ್ಲಿ , ಸಿರಿವಂತ ಉದ್ಯಮಿಗಳ ನಿಯಂತ್ರಣದಲ್ಲಿಂದು ಕೇಂದ್ರ ಸರ್ಕಾರ ಹಾಗೂ ರಾಜ್ಯಗಳ ಸರ್ಕಾರಗಳು ನಡೆಯುತ್ತಿವೆ ಎಂಬುದನ್ನು ನಾವು ಕಾಣುತ್ತಿದ್ದೇವೆ.

ಹಾಗಿದ್ದರೆ ಬಡಬಹುಜನರ, ರೈತರ, ಕೂಲಿ ಕಾರ್ಮಿಕರ, ಸರ್ಕಾರಿ, ಅರೆಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರ ಓಟು, ತೆರಿಗೆ, ಶ್ರಮ ಎಲ್ಲವೂ ಯಾರಿಗಾಗಿ? ಸಣ್ಣ ಉದ್ಯಮಿಗಳು ಏನು ಮಾಡಬೇಕು? ಎಲ್ಲಿಗೆ ಹೋಗಿ ಸಾಯಬೇಕು? ರೈತರು ತಮ್ಮ ಉತ್ಪನ್ನಗಳನ್ನು ಏನು ಮಾಡಬೇಕು? ಅವರಿಗೆ ಎಂದಾದರೂ ಸೂಕ್ತ ಬೆಲೆ ಸಿಕ್ಕಿದೆಯೇ? ಸರ್ಕಾರ ರೈತರನ್ನು ತನ್ನ ಸ್ವಾಮ್ಯದ ಉದ್ಯಮಗಳ ಪಾಲುದಾರರನ್ನಾಗಿ ಮಾಡಿಕೊಳ್ಳಬೇಕಿತ್ತಲ್ಲ ಮಾಡಿಕೊಂಡಿದೆಯೇ?

ಬಡಜನರಿಗೆ ಕಿರು ಉದ್ಯಮಗಳನ್ನು ನೀಡಿ ಆರ್ಥಿಕ ಸಬಲತೆ ನೀಡಬೇಕಾದ್ದು ಸರ್ಕಾರದ ಹೊಣೆಯಲ್ಲವೇ? ಖಾಸಗೀ ಒಡೆತನಗಳಲ್ಲೂ ಕೌಶಲ್ಯಯುತ ಯುವಜನತೆಗೆ ವಿದ್ಯಾವಂತರಿಗೆ ಮೀಸಲಾತಿಗೆ ಅನುಗುಣವಾಗಿ ಉದ್ಯೋಗ ನೀಡಬೇಕಲ್ಲವೇ? ಆದರೆ, ಇದ್ಯಾವುದನ್ನೂ ನೀಡದೆ, ಸರ್ಕಾರಿ ಜಾಗ, ಹಣ, ವಿದ್ಯುತ್, ನೀರು, ರಸ್ತೆ ಇತ್ಯಾದಿ ಸೌಲಭ್ಯಗಳನ್ನು ಗಳಿಸಿಕೊಂಡು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ಬಹುಜನರ ಬಡಜನರ ಕೋಟಿಕೋಟಿ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡು, ತೆರಿಗೆಗಳನ್ನೂ ವಂಚಿಸುತ್ತಾ ಜಗತ್ತಿನ ನಂಬರ್ ಒನ್ ಸಿರಿವಂತರೆನಿಸಿಕೊಳ್ಳುವ ಟಾಟಾ, ಬಿರ್ಲಾ, ಬಜಾಜ್, ಮಲ್ಯ, ನೀರವ್, ಅದಾನಿ, ಅಂಬಾನಿ, ಮಲ್ಯ ಮುಂತಾದ ಸಿರಿವಂತ ಉದ್ಯಮಿಗಳನ್ನು ಇದೇ ಸರ್ಕಾರಗಳು ಮೆರೆಸುತ್ತವೆ! ಅವರ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡುತ್ತವೆ. ಅವರ ಅನುಕೂಲಕ್ಕಾಗಿ ಕಾನೂನುಗಳನ್ನೇ ತಿದ್ದುಪಡಿ ಮಾಡುತ್ತವೆ.

ಅದನ್ನು ನೋಡಿ ಅವರ ಉಪ್ಪುತಿಂದ ಮಾಧ್ಯಮಗಳೂ ಜನರಿಗೆ ಅವರನ್ನೇ ಹೀರೋಗಳಾಗಿ ಬಿಂಬಿಸುತ್ತವೆ! ತಿರುಬೋಕಿ ಜನರೂ ಈ ಸಿರಿವಂತರ ಬಳಿ ಇರುವುದೆಲ್ಲ ಆಸ್ತಿಯೂ ತಮ್ಮದೇ ಬೆವರಿನ ಫಲ ಎಂದರಿಯದೇ ಸಿರಿವಂತರನ್ನು ದೇಶದ ಹೆಮ್ಮೆ ಎಂಬಂತೆ ಬಿಂಬಿಸಿ ಬೀಗುತ್ತಿದ್ದಾರೆ. ಈ ಜನ ಹೀಗೆ ತಮ್ಮತನಗಳನ್ನೇ ಮರೆತು ತಿರುಬೋಕಿಗಳನ್ನೇ ಹಾಡಿಹೊಗಳುವ ತನಕವೂ ಇವರು ಗುಲಾಮಗಿರಿಯಲ್ಲೇ ಇರುತ್ತಾರೆ, ಇಂತಹ ಸಿರಿವಂತರ ಗುಲಾಮರಾಗಿಯೇ ಇರುತ್ತಾರೆ. ಇದಾ ಪ್ರಜಾಪ್ರಭುತ್ವ? ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವ ಪ್ರಜೆಗಳ ಸರ್ಕಾರ ಅಂದ್ರೆ ಇದಾ?

ಇದಲ್ಲ ಪ್ರಜಾಪ್ರಭುತ್ವ!
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳ ರಕ್ಷಣೆ, ಪ್ರಜೆಗಳ ಪಾಲನೆಯೇ ಪ್ರಜಾಪ್ರತಿನಿಧಿಗಳ ಕರ್ತವ್ಯವಾಗಬೇಕು ಎಂಬುದನ್ನು ಭಾರತದ ಪ್ರಜೆಗಳು ಅರಿಯುವುದು ಯಾವಾಗ? ಪ್ರಜಾತಂತ್ರ ವ್ಯವಸ್ಥೆ ರೂಪುಗೊಂಡು ಎಪ್ಪತೈದು ವರ್ಷಗಳಾಗುತ್ತಾ ಬಂದಿದೆ. ಆದರೆ ಪ್ರಜೆಗಳಿಗೆ ಮಾತ್ರ ಪ್ರಭುತ್ವದ ಅರ್ಥವೇ ಅರಿವಾಗಿಲ್ಲ. ಪ್ರಭುತ್ವವೆಂದರೆ ಅದು ಜನಸಾಮಾನ್ಯರದು, ಅದು ನಮಗಾಗಿ ಇರುವುದು, ನಮ್ಮ ಅಣತಿಯಂತೆ ನಡೆಯಬೇಕಾದ್ದು, ಹಾಗೆ ನಡೆಯದಿದ್ದರೆ ಅದನ್ನು ಬದಲಿಸುವ ಶಕ್ತಿ ಇರುವುದು ನಮಗೇನೆ ಎಂಬ ಸಣ್ಣ ಅರಿವೂ ಪ್ರಜೆಗಳಿಗೆ ಇದ್ದಂತಿಲ್ಲ.

ಇಡೀ ಸಂವಿಧಾನದ ಆಶಯ ಸಕಲರಿಗೂ ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಘನತೆಯ ಬದುಕು ಮತ್ತು ಸುರಕ್ಷೆಯನ್ನು ಕೊಡಮಾಡಿದೆ ಎಂಬುದನ್ನೇ ಜನರು ಅರಿತುಕೊಂಡಿಲ್ಲ. ಹೀಗೆ ಅರಿವಾಗಿದ್ದರೆ, ಜನಪ್ರತಿನಿಧಿಗಳನ್ನು ತಮ್ಮ ಸೇವಕರೆಂದು ಕಂಡುಕೊಳ್ಳುತ್ತಿದ್ದರು. ತಮ್ಮ ಸೇವೆಗೆ, ತಮ್ಮ ಹಿತಾಸಕ್ತಿಗೆ ದುಡಿಯುವಂತೆ ಧಮ್ಕಿ ಹಾಕುತ್ತಿದ್ದರು. ಆದರೆ ಅದರ ಅರಿವಿಲ್ಲದೆ ಕೇವಲ ಧರ್ಮ, ದೇವರು, ಜಾತಿಯ ಮೇಲುಕೀಳಿನ ರೋಗದಲ್ಲೇ ನರಳುತ್ತಿರುವ ಜನ ತಾವೇ ಓಟು ಹಾಕಿ ಗೆಲ್ಲಿಸಿದ ಜನಪ್ರತಿನಿಧಿಗಳ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದಾರೆ, ಕೈಮುಗಿದು ಬೇಡುತ್ತಿದ್ದಾರೆ, ಅವರ ದರ್ಶನಕ್ಕಾಗಿ ಹಪಹಪಿಸುತ್ತಿದ್ದಾರೆ! ಪ್ರಜಾಪ್ರಭುತ್ವಕ್ಕೆ ಇದಕ್ಕಿಂತಲೂ ಅವಮಾನ ಮತ್ತೊಂದಿದೆಯೇ?

ಆಳು-ಅರಸ, ಮೇಲು- ಕೀಳು, ಬಡವ-ಬಲ್ಲಿದ, ಶ್ರೇಷ್ಟ- ಕನಿಷ್ಟ ಎಂಬ ಬೇಧಭಾವದ ದೊಡ್ಡ ದೊಡ್ಡ ಅಡ್ಡಗೋಡೆಗಳನ್ನು ಕೆಡವಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಸಾರಿದ ಪ್ರಜಾತಂತ್ರ ವ್ಯವಸ್ಥೆಯನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳದೇ ಹೋದರು. ಆದರೆ ಮನುವಾದಿಗಳು ಅರ್ಥಮಾಡಿಕೊಂಡಿದ್ದಾರೆ. ಈಗ ಇದೇ ಪ್ರಜಾಪ್ರಭುತ್ವದ ಮೂಲಕ ಅಧಿಕಾರ ಗಳಿಸಿ ಪ್ರಜಾತಂತ್ರ ವ್ಯವಸ್ಥೆಯನ್ನೇ ಇಲ್ಲವಾಗಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅದರ ಕುರುಹುಗಳೇ ಕೆಲವರ ಕೈಗೆ ದೊಡ್ಡ ಉದ್ಯಮಿಗಳು, ಅಧಿಕಾರ, ನ್ಯಾಯಾಂಗ ಎಲ್ಲವೂ ಜಾತಿಯಾಧಾರಿತವಾಗಿ ಕೇಂದ್ರೀಕೃತವಾಗುತ್ತಿರುವುದು. ಇದನ್ನು ಹೆಮ್ಮೆ ಎಂದು ಜನರು ಬೀಗುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಅಣಕ.

-ಡಾ.ಚಮರಂ

ಲೇಖಕರು ಕನ್ನಡ ಚಲನಚಿತ್ರ ನಿರ್ದೇಶಕರು ಮತ್ತು ಬಹುಜನ ಚಳುವಳಿಯಲ್ಲಿ ಗುರುತಿಸಿಕೊಂಡವರು.

Leave a Reply

Your email address will not be published. Required fields are marked *