ಮೊನ್ನೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023ರ ಒಕ್ಕೂಟ ಸರಕಾರದ ಬಜೆಟ್ ಗಾತ್ರ ರೂ.45 ಲಕ್ಷ ಕೋಟಿ! ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಮಂಡಿಸಿದ ಯಾವುದೇ ಬಜೆಟ್ ಗಿಂತಲೂ ಇದು ಭಿನ್ನವಾಗಿಲ್ಲ. ಯಥಾಪ್ರಕಾರ ಸಿರಿವಂತರ ಸೋಪಾನಕ್ಕೆ ಮತ್ತಷ್ಟು ಕಂಫರ್ಟ್ ನೀಡಲು ಈ ಬಾರಿ ಇನ್ನಷ್ಟು ಕಸರತ್ತು ನಡೆಸಿರುವುದನ್ನು ಕಾಣಬಹುದು. ಹೀಗೆ ಸಿರಿವಂತರಿಗೆ ಸೋಪಾನ ಮಾಡಲು ಬಡವರನ್ನೇ ಬಗ್ಗುಬಡಿದು ಉಣಬಡಿಸಲಾಗಿದೆ.
ಇಡೀ ಬಜೆಟ್ ನ ಒಳಹುನ್ನಾರಗಳನ್ನು ಆರ್ಥಿಕ ತಜ್ಞರು ಜನಪರ ಕಾಳಜಿಯಿಂದ ವಿಶ್ಲೇಷಣೆ ಮಾಡಿದರೆ ಬಹಳ ಉಪಕಾರಿ. ನಾವು ಕೇವಲ ಜನಸಾಮಾನ್ಯರ ದೃಷ್ಟಿಕೋನದಲ್ಲಿ ನೋಡುವಾಗ ಕಳೆದ ಬಜೆಟ್ ನಲ್ಲಿ ಬಡವರಿಗೆ ಎಷ್ಟು ಕೊಡಮಾಡಲಾಗಿತ್ತು ಈಗಿನ ಕಾಲಘಟ್ಟಕ್ಕೆ ಎಷ್ಟು ಕೊಡಮಾಡಲಾಗಿದೆ? ಎಂದು ನೋಡುವಾಗ ಸಹಜವಾಗಿ ಹಿಂದಿನದಕ್ಕಿಂತ ಮುಂದಿನದು ಯಾವಾಗಲೂ ಹೆಚ್ಚಿರಬೇಕಾದ್ದು ಕನಿಷ್ಟ ತಿಳುವಳಿಕೆ. ಆದರೆ ಹಿಂದೆ ಇದ್ದುದನ್ನೂ ಕೊಡದೆ ಬಡವರ ಪಾಲಿಗೆ ಇನ್ನಷ್ಟು ಕಡಿತಗೊಳಿಸಿರುವ ಈ ಬಜೆಟ್ ಮಾತ್ರ ಅಪ್ಪಟ ಬಹುಜನ ವಿರೋಧಿ ಮಾತ್ರವಲ್ಲ ಭಯಂಕರ ಜೀವವಿರೋಧಿಯಾಗಿದೆ. ಕೆಲವು ಆರ್ಥಿಕ ವಿಶ್ಲೇಷಕರು ಮಾಡಿರುವ ಈ ಕೆಳಗಿನ ವಿವರಣೆಗಳನ್ನು ನೋಡಿ;
ಈಗಿನ ಬಜೆಟ್ ಗಾತ್ರವನ್ನು ಹೊಂದಿಸಲು ಆದಾಯದ ಮೂಲವೇನು ಎಂಬುದನ್ನು ನೋಡಿ…
ಮುಖ್ಯವಾಗಿ ತೆರಿಗೆ ಮೂಲದ ಆದಾಯ ರೂ.23 ಲಕ್ಷ ಕೋಟಿ ಇತರ ಆದಾಯ 3 ಲಕ್ಷ ಕೋಟಿ ಒಟ್ಟು 26.32 ಲಕ್ಷ ಕೋಟಿ ಅಂದರೆ ಸದರಿ ಸರಕಾರ ಅಂದಾಜು 19 ಲಕ್ಷ ಕೋಟಿ ಮತ್ತೆ ಸಾಲ ಮಾಡಬೇಕು.!
2022-23ನೇ ಸಾಲಿನಲ್ಲಿ ಮಾಡಿದ ಸಾಲ ರೂ.17.55 ಲಕ್ಷ ಕೋಟಿ. ಈ ಸಾಲಿನ ಸಾಲ ಸೇರಿದರೆ ಒಟ್ಟಾರೆ ಮೋದಿ ಸರಕಾರ ದೇಶದ ಮೇಲೆ ಹೊರಿಸಿರುವ ಸಾಲ ರೂ.123ಲಕ್ಷ ಕೋಟಿ!
2014ರಲ್ಲಿದ್ದ ಒಟ್ಟಾರೆ ಸಾಲ 53 ಲಕ್ಷ ಕೋಟಿ. ಮೋದಿ ಸರಕಾರ ಕಳೆದ 8 ವರ್ಷಗಳಲ್ಲಿ 120 ಲಕ್ಷ ಕೋಟಿ ಸಾಲ ಮಾಡಿ ದೇಶದ ಮೇಲೆ ಹೊರೆ ಹೊರಿಸಿದೆ.
ಈ ಸಾಲಿನ ಸಾಲದ ಬಡ್ಡಿ ಮರುಪಾವತಿಗೇ ರೂ.10.8 ಲಕ್ಷ ಕೋಟಿ ಖರ್ಚಾಗುತ್ತಿದೆ. ಅಂದರೆ ಅಂದಾಜು ಆದಾಯದ 42%
ಇಂಥಾ ಸ್ಥಿತಿಯಲ್ಲಿ ಬಜೆಟ್ಟಿನಲ್ಲಿ ಏನಾದರೂ ಜನೋಪಕಾರಿ ಅನುದಾನ ನೀಡಿದ್ದಾರೆಯೇ ಎಂದು ನೋಡಿದರೆ ಗ್ರಾಮ ಭಾರತವನ್ನು ನಿರ್ಲಕ್ಷಿಸಿರುವ ಆಘಾತಕಾರಿ ವಿವರಗಳು ಕಂಡು ಬರುತ್ತವೆ. ಅದನ್ನು ಸಾಬೀತುಪಡಿಸುವ ಈ ಕೆಳಗಿನ ಕೆಲವು ಸ್ಯಾಂಪಲ್ ಗಳನ್ನು ಗಮನಿಸಿ…
- ಉದ್ಯೋಗ ಖಾತರಿ ಯೋಜನೆಯ ಅನುದಾನ 30 ಸಾವಿರ ಕಡಿತ
- ರಸಗೊಬ್ಬರದ ಸಬ್ಸಿಡಿ ಅನುದಾನದ ಮೊತ್ತ 50 ಸಾವಿರ ಕೋಟಿ ಕಡಿತ
- ಆಹಾರ ಸಬ್ಸಿಡಿ ಅನುದಾನದಲ್ಲಿ 90 ಸಾವಿರ ಕೋಟಿ ಕಡಿತ
- ಕೃಷಿ ಸೀಂಚಾಯಿ ಅನುದಾನದಲ್ಲಿ 2300 ಕೋಟಿ ಕಡಿತ.
- ಗ್ರಾಮೀಣ ಜೀವನೋಪಾಯ ಮಿಷನ್ ಗೆ ಅನುದಾನ ಕಡಿತ
- ಕಿಸಾನ್ ಸಮ್ಮಾನ್ ಅನುದಾನ 60 ಸಾವಿರ ಕೋಟಿಗೆ ಸ್ಥಗಿತವಾಗಿದೆ.
ಅದಲ್ಲದೆ ಈ ಯೋಜನೆಗಳಿಗೆ ಹೊಸ ರೈತರ ಸೇರ್ಪಡೆಗೆ ಅವಕಾಶವೇ ಇಲ್ಲದಂತಾಗಿದೆ. ಅಷ್ಟೇ ಅಲ್ಲ, ಬೆಲೆ ಏರಿಕೆ ಪರಿಗಣಿಸಿದರೆ ಈ ಆರು ಸಾವಿರ ಸಹಾಯಧನವನ್ನು ರೂ.7500ಕ್ಕಾದರೂ ಏರಿಸಬೇಕಿತ್ತು. - ಕನಿಷ್ಠ ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿಗೆ ಇದ್ದ ಅನುದಾನ ಕಳೆದ ವರ್ಷ ರೂ.72 ಸಾವಿರ ಕೋಟಿ. ಈ ವರ್ಷ ಕೇವಲ 59.7 ಸಾವಿರ ಕೋಟಿ ನೀಡಲಾಗಿದೆ.
- ಕರ್ನಾಟಕಕ್ಕೆ ಯಾವುದೇ ವಿಶೇಷ ಅನುದಾನ ಇಲ್ಲ.
ಭದ್ರಾ ಮೇಲ್ದಂಡೆ ಯೋಜನೆಯ ಯೋಜನಾ ವೆಚ್ಚ ರೂ.23 ಸಾವಿರ ಕೋಟಿ. ಕೇಂದ್ರ ಸರಕಾರದ ಅನುದಾನಿತ ಯೋಜನೆ ಆಗಬೇಕಿದ್ದರೆ ಕೇಂದ್ರ ಸರಕಾರ ಕನಿಷ್ಠ 50% ಅನುದಾನ ಘೋಷಿಸಬೇಕಿತ್ತು. ಆದರೆ ಘೋಷಿಸಿರುವುದು ಕೇವಲ 5300 ಕೋಟಿ ರೂಪಾಯಿ. ಇದರ ವಿವರ ಇನ್ನೂ ಅಸ್ಪಷ್ಟ. ಇನ್ನು ಸಿರಿವಂತರಿಗೆ ತೆರಿಗೆ ವಿನಾಯಿತಿ ಮಿತಿಯನ್ನು ಈ ಬಾರಿ ಇನ್ನೂ ಹೆಚ್ಚಿಗೆ ನೀಡಲಾಗಿದೆ.
ಇದೆಲ್ಲವನ್ನು ಗಮನಿಸಿದಾಗ ಎಂತಹ ದಡ್ಡನೂ ಕೂಡ ಹೇಳಬಹುದು ಈ ಸರ್ಕಾರ ಬಡವರ ಕೈಗೆ ಖಾಲಿ ಚೊಂಬು ನೀಡಿ ನಿದ್ರೆಗೆಡಿಸಿ, ಸಿರಿವಂತರ ಸೋಪಾನಕ್ಕೆ ದಿಂಬು ನೀಡಿ ನಿಶ್ಚಿಂತೆಯಿಂದ ನಿದ್ರಿಸಲು ಅನುವು ಮಾಡಿಕೊಟ್ಟಿದೆ ಎಂಬುದು.