ಕನ್ನಡ ಚಿತ್ರರಂಗದಲ್ಲಿ ಮನುವಾದವು ಬಹಳ ಆಳವಾಗಿ ಬೇರೂರಿ ತನ್ನ ಹಿತಾಸಕ್ತಿಗಳನ್ನು ಭದ್ರವಾಗಿ ಸ್ಥಾಪಿಸಿದೆ. ಮನುವಾದದ ಜೀವವಿರೋಧಿ ಮೌಲ್ಯಗಳನ್ನೇ ಜನಸಾಮಾನ್ಯರೆಲ್ಲರ ತಲೆಯೊಳಗೆ ರಕ್ತಗತಗೊಳಿಸುವಲ್ಲಿ ಬಹಳವೇ ಯಶಸ್ವಿಯಾಗಿದೆ. ಇಂತಹ ಸ್ಥಾಪಿತ ಹಿತಾಸಕ್ತಿಗಳನ್ನೇ ಕಥೆ, ಕವಿತೆ, ಕಾದಂಬರಿ ಮುಂತಾದ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಗಟ್ಟಿಗೊಳಿಸಿದ್ದಾರೆ. ಹಾಗೆಯೇ ರೇಡಿಯೋ, ನಾಟಕ, ಸಿನಿಮಾ, ಹಾಡುಗಾರಿಕೆ, ನೃತ್ಯ ಮಾಧ್ಯಮಗಳಲ್ಲೂ ಬಹಳ ಶಕ್ತಿಯುತವಾಗಿ ಮನುವಾದಿ ಧೋರಣೆಗಳನ್ನು ಆಳವಾಗಿ ಬೇರೂರಿಸಿದ್ದಾರೆ.

ಅಸ್ಪೃಶ್ಯತೆ-ಜಾತಿಯತೆ ಎಂಬುದು ದೈವನಿಯಮ, ಬಡತನ- ಕಷ್ಟ- ನಷ್ಟಗಳೆಲ್ಲವೂ ಪೂರ್ವಜನ್ಮದ ಪಾಪದ ಫಲಗಳು, ಹೆಣ್ಣು ಗಂಡಿಗಿಂತ ಕೀಳು ಮತ್ತು ಅವಳು ಕೇವಲ ಭೋಗದ ವಸ್ತು, ಬ್ರಾಹ್ಮಣರು ಶ್ರೇಷ್ಟರು, ಬ್ರಾಹ್ಮಣ ಸಂಸ್ಕೃತಿಯೇ ಶ್ರೇಷ್ಟ ಸಂಸ್ಕೃತಿ, ಬ್ರಾಹ್ಮಣರನ್ನು ನಿಂದಿಸಬಾರದು, ಬ್ರಾಹ್ಮಣರಿಂದಲೇ ಬ್ರಾಹ್ಮಣರನ್ನು ಕೇಳಿಯೇ ಸಕಲ ಮಂಗಳ ಕಾರ್ಯಗಳನ್ನೂ ನಡೆಸಬೇಕು… ನಮ್ಮ ಕಷ್ಟ ಸುಖಗಳಿಗೆ ದೇವರ ಮೊರೆ ಹೋಗಬೇಕು… ದೈವನಿಂದನೆ ಮಾಡಿದವರಿಗೆ ಕಷ್ಟಕೋಟಲೆಗಳು ಉಂಟಾಗುತ್ತವೆ… ಹೀಗೆ ವರದಕ್ಷಿಣೆ, ಬಾಲ್ಯವಿವಾಹ, ವಿಧವೆಯ ಕಟ್ಟುಪಾಡುಗಳು, ಗಣಕೂಟದ ಸಜಾತಿಯ ಮದುವೆಗಳು… ವರ್ಣಸಂಕರದ ಅಪಾಯ… ಇತರೆ ಎಲ್ಲಾ ರೀತಿಯ ಜೀವವಿರೋಧಿ ಮನುವಾದದ ಕ್ರೂರ ಧೋರಣೆಗಳೇ ಕತೆಗಳಾಗಿ ಜನಸಾಮಾನ್ಯರನ್ನು ಮರುಳು ಮಾಡಿವೆ.

ಭಾರತೀಯ ಸಿನಿಮಾ ಕೂಡ ಇಷ್ಟೇ ಕತೆಗಳನ್ನು ಕಾಲಕಾಲಕ್ಕೆ ತಿರುಗಿಸಿ ಮುರುಗಿಸಿ ಕಟ್ಟಿಕೊಟ್ಟಿದ್ದಾರೆ. ಪ್ರೀತಿಗಾಗಿ ಹೊಡೆದಾಟ, ಆಸ್ತಿಗಾಗಿ ಕುಟುಂಬ ಕಲಹ, ಅಧಿಕಾರಕ್ಕಾಗಿ ತಂತ್ರ, ಪೂಜೆ ಪುನಸ್ಕಾರ, ದೆವ್ವಭೂತಗಳ ಕಾಟ.. ಇತ್ತೀಚಗೆ ಭೂಗತಲೋಕದ ವಿಜೃಂಭಣೆ
ಇದಿಷ್ಟು ಬಿಟ್ಟರೆ ಭಾರತೀಯ ಚಿತ್ರರಂಗದ ಚಿತ್ರಕತೆ ಬೇರೇನಿದೆ ಹೇಳಿ? ಇದರ ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ಶ್ರಮಿಕರ, ರೈತರ ಸ್ತ್ರೀಯರ ಚಿತ್ರಗಳು ಬಂದವು. ಅವುಗಳು ಯಶಸ್ವಿಯಾದರೂ ಅಂತಹ ಕತೆಗಳನ್ನೂ, ಅದನ್ನು ತೆರೆಗೆ ತಂದ ತಂತ್ರಜ್ಞರ ಆಲೋಚನೆಗಳನ್ನೂ ವ್ಯವಸ್ತಿತವಾಗಿ ಮನುವಾದಿಗಳು ಹತ್ತಿಕ್ಕಿದರು ಅಥವಾ ಅಂತಹವರಿಗೂ ಸ್ಥಾಪಿತ ಮೌಲ್ಯಗಳನ್ನೇ ಅನಿವಾರ್ಯವಾಗಿಸಿದರು.

ತಳವರ್ಗದ ತಂತ್ರಜ್ಞರು ಮತ್ತು ಕಲಾವಿದರನ್ನೂ ತುಳಿದರು. ಇದರ ನಡುವೆಯೂ ಬೆಂಗಾಲಿ ಸಿನಿಮಾಗಳು ತಮ್ಮ ಅಸ್ಮಿತೆಯನ್ನು ಕಟ್ಟಿಕೊಟ್ಟವು. ಆದರೆ ಅಂತಹ ಹೊಸತನದ ಗಾಳಿ ದಕ್ಷಿಣ ಭಾರತದ ಚಿತ್ರರಂಗಕ್ಕೆ ಬರದಂತೆ ತಡೆದವರೂ ಇದೇ ಮನುವಾದಿಗಳೇ! ಆದರೆ, ಬಹುಜನರಲ್ಲಿ ಉಂಟಾದ ಸಮತೆ ಮತ್ತು ಮಾನವತೆಯ ಪ್ರಜ್ಞೆಯಿಂದಾಗಿ ಇತ್ತೀಚಗೆ ಮರಾಠಿ, ತಮಿಳು, ಮಲೆಯಾಳಂ ಚಿತ್ರಗಳು ಹೊಸತರದ ಚಿತ್ರಗಳನ್ನು ತೆರೆಗೆ ತರಲಾರಂಭಿಸಿವೆ.

ಮರಾಠಿಯ ಫಂಡ್ರಿ, ದಿ ಕೋರ್ಟ್, ಸೈರಾಟ್; ಮಲಯಾಳಂನ ಜನಗಣಮನ, ಗ್ರೇಟ್ ಇಂಡಿಯನ್ ಕಿಚನ್, ಜಯಜಯಜಯಹೇ; ತಮಿಳಿನ ಪರಿಯೇರುಂ ಪೆರುಮಾಳ್, ಅಸುರನ್, ಕರ್ಣನ್ ಮುಂತಾದ ಚಿತ್ರಗಳು ಮನುವಾದದ ಸ್ಥಾಪಿತ ಹಿತಾಸಕ್ತಿಗಳನ್ನು ಧಿಕ್ಕರಿಸಿ ಸ್ತ್ರೀವಾದಿ ಮತ್ತು ಬಹುಜನರ ಆಶಯಗಳನ್ನು ಚಿತ್ರವಾಗಿಸಿ ಭರ್ಜರಿಯಾಗಿ ಯಶಸ್ವಿಯಾಗುತ್ತಲೂ ಇವೆ. ಆದರೆ ಕನ್ನಡ ಚಿತ್ರರಂಗದಲ್ಲಿ ಮಾತ್ರ ಅಂತಹ ಪ್ರಯೋಗಗಳು ಮುಖ್ಯವಾಹಿನಿ ನಿರ್ದೇಶಕರು ಮತ್ತು ಸ್ಟಾರ್ ನಟನಟಿಯರುಗಳಿಂದ ನಡೆಯುತ್ತಿಲ್ಲ. ಮಾತ್ರವಲ್ಲ ಕನ್ನಡದ ಪ್ರೇಕ್ಷಕರೂ ಮನುವಾದಿ ಮನಸ್ಥಿತಿಯಿಂದ ಮುಕ್ತರಾಗಿಲ್ಲ ಎಂಬುದು ಕಾಣುತ್ತದೆ.

ಕನ್ನಡದಲ್ಲಿ ಅಂತಹ ಪ್ರಯೋಗಗಳು ಆಗಿಲ್ಲವೆಂದಲ್ಲ. ಮೇಯರ್ ಮುತ್ತಣ್ಣ, ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ಜನುಮದ ಜೋಡಿ, ಏಳುಸುತ್ತಿನ ಕೋಟೆ, ಕಾನೂರು ಹೆಗ್ಗಡತಿ ತರದ ಶ್ರಮ ಸಂಸ್ಕೃತಿ ಮಹತ್ವದ, ಮನುವಾದ ಧಿಕ್ಕರಿಸುವ ಚಿತ್ರಗಳು ಬಂದವು. ಆದರೆ ಇದರ ಸುಳಿವರಿತ ಮನುವಾದಿಗಳು ಅಂತಹ ಬೆಳವಣಿಗೆಯನ್ನು ತಮ್ಮ ಕೈಲಿದ್ದ ಪತ್ರಿಕಾ ಮಾಧ್ಯಮಗಳ ಮೂಲಕ ಹತ್ತಿಕ್ಕಿದರು. ಸಿದ್ದಲಿಂಗಯ್ಯ ಅಂತಹ ನಿರ್ದೇಶಕರನ್ನು ಮೂಲೆಗುಂಪು ಮಾಡಿದ್ದಲ್ಲದೆ, ಡಾ.ರಾಜ್ ಜೊತೆಗೆ ಅವರ ಸಂಬಂಧ ಹಳಸುವಂತೆ ಪಿತೂರಿ ಹೂಡಿ ಇವರ ಜೋಡಿಯನ್ನು ಒಡೆದು, ಮುಂದೆ ಅಂತಹ ಪ್ರಯತ್ನಗಳಾಗದಂತೆ ತಡೆಯುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲ ಶ್ರಮಸಂಸ್ಕೃತಿಯ ಡಾ.ರಾಜ್ ಅವರು ಜನಪ್ರಿಯ ಧಾಟಿಯ ಸಿನಿಮಾಗಳಿಗೆ ಮಾತ್ರ ಸೀಮಿತವಾಗುವಂತೆ ಕಟ್ಟಿಹಾಕಿದರು. ಹೀಗೆ ಮಾಡುವ ಮೂಲಕ ಚಿತ್ರರಂಗದ ವಿಸ್ತರಣೆ ಮತ್ತು ವಿಶಾಲ ಮನೋಭಾವವನ್ನು ಸಹ ಕಟ್ಟಿಹಾಕಿದರು.

ಈಗ ಕನ್ನಡ ಚಿತ್ರರಂಗ ಕೆಲವೇ ಕೆಲವು ಸ್ಟಾರ್ ನಟರು, ಸ್ಟಾರ್ ನಿರ್ದೇಶಕರು ಮತ್ತು ಸ್ಟಾರ್ ನಿರ್ಮಾಪಕರ ಮೇಲೆ ಮಾತ್ರ ನಿಂತಿದೆ. ದುರಂತವೆಂದರೇ ಬಹುತೇಕರು ಬಹುಜನ ಸಮಾಜದಿಂದಲೇ ಬಂದಿದ್ದರೂ ಮನುವಾದದ ಪ್ರತಿನಿಧಿಗಳಾಗಿದ್ದಾರೆ ಮತ್ತು ಮನುವಾದದ ಚಿತ್ರಕತೆಗಳನ್ನೇ ವಿಜೃಂಭಿಸುತ್ತಿದ್ದಾರೆ!!

ಈ ಸ್ಥಿತಿಯಲ್ಲಿ ತಮಿಳು,ಮಲಯಾಳಂ,ಮರಾಠಿ ಚಿತ್ರಗಳಿಂದ ಪ್ರೇರಿತರಾಗಿ ನಮ್ಮ ಕೆಲವು ಗೆಳೆಯರು ಸಣ್ಣಮಟ್ಟದಲ್ಲಿ ನಮ್ಮತನದ ಕತೆಗಳನ್ನು ಸಿನಿಮಾ ಆಗಿಸಲು ಇನ್ನಿಲ್ಲದ ಪ್ರಯತ್ನ ಮಾಡಿ ಸೋತು ನಿರಾಶರಾಗುತ್ತಿದ್ದಾರೆ. ಇದಕ್ಕೆ ಕಾರಣ ಇಂತಹ ಸಾಹಸ ಮತ್ತು ಪ್ರಯೋಗಕ್ಕೆ ಸ್ಟಾರ್ ಗಳ ವಿತರಕರ, ಚಿತ್ರಮಂದಿರಗಳ ಮತ್ತು ಮಾಧ್ಯಮದ ಸಹಕಾರಗಳು ಸಿಗದಿರುವುದು ಮತ್ತು ಅವೆಲ್ಲವೂ ಮನುವಾದಿಗಳ ಹಿಡಿತದಲ್ಲೇ ಇರುವುದೇ ಆಗಿದೆ.

ಇಂದು ಪ್ರಸಿದ್ದರಾಗಿರುವ ಬಹುಜನ ಸಮಾಜದ ನಿರ್ದೇಶಕರೊಬ್ಬರು ಆರಂಭದಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಬಂದಾಗ ಇವರ ಜಾತಿ ತಿಳಿದು ಮನುವಾದಿಗಳು ಆಗಲೇ ನೇರವಾಗಿ ಬೆದರಿಕೆ ಒಡ್ಡಿದ್ದರಂತೆ “ಕಲಾವಿದನಾಗಿಯೋ, ಸಹಾಯಕನಾಗಿಯೋ ಮಾತ್ರ ಇದ್ದರೆ ನಿನಗೆ ಉಳಿಗಾಲ. ಬರಹಗಾರ ಅಥವಾ ನಿರ್ದೇಶಕನಾಗಬೇಕೆಂಬ ಕನಸು ಕಾಣಬೇಡ. ನಾವಿರೋದು ಬರೆಯೋಕೆ, ನೀವಿರೋದು ತರೆಯೋಕೆ” ಅಂದಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಮತ್ತೊಬ್ಬ ನಮ್ಮ ಆಪ್ತ ನಿರ್ದೇಶಕ ಗೆಳೆಯ ಪ್ರಕಾಶ್ ರಾಜ್ ಮೇಹು, ಬಹಳ ಕಾಲ ಡಾ.ರಾಜ್ ಒಡನಾಟದಲ್ಲಿದ್ದವರು. ಡಾ.ರಾಜ್ ಅವರಿಗೆ ಕೆಲವು ಮನುವಾದಿ ನಿರ್ದೇಶಕರು, ಮಾಧ್ಯಮದವರು ಎಷ್ಟು ಕಿರುಕುಳ ನೀಡುತ್ತಿದ್ದರು, ಡಾ.ರಾಜ್ ಅವರ ಅತ್ಯುತ್ತಮ ಚಿತ್ರಗಳನ್ನು ಸಹ ಸಾಧಾರಾಣ ಚಿತ್ರಗಳೆಂದೂ, ನಟನೆಯೇ ಸರಿಯಿಲ್ಲ ಎಂದು ಬರೆಯುತ್ತಿದ್ದರು. ಎಂದು ತಮ್ಮ ಫೇಸ್ ಬುಕ್ ಪೋಸ್ಟ್‌ನಲ್ಲಿ ಬರೆಯುತ್ತಾರೆ. ಖುದ್ದು ಪುಟ್ಟಣ್ಣ ಕಣಗಾಲ್ ಬಂಗಾರದ ಮನುಷ್ಯ ಚಿತ್ರ ಅಟ್ಟರ್ ಫ್ಲಾಪ್ ಆಗುತ್ತದೆ ಎಂದು ಸಿದ್ದಲಿಂಗಯ್ಯನವರನ್ನು ಅಧೀರರಾಗಿಸಿದ್ದರು ಎಂಬುದು ಪ್ರಕಟವಾಗಿತ್ತು. ಇದು ಕನ್ನಡ ಚಿತ್ರರಂಗದ ರೋಗ!

ಸಿನಿಮಾ ಒಂದು ದೊಡ್ಡ ಉದ್ಯಮ. ಆದರೆ ಇಲ್ಲಿ ಬಹುಜನರು ಇಂದಿಗೂ ಕೇವಲ ಗ್ರಾಹಕರಾಗಿ ಅಷ್ಟೇ ಉಳಿದು, ಮನುವಾದಿಗಳ ಗಲ್ಲಾ ಪೆಟ್ಟಿಗೆ ತುಂಬಿಸುತ್ತಿದ್ದಾರೆ ಮತ್ತು ಇತರರನ್ನು ಸ್ಟಾರ್ ಗಳಾಗಿ ಮೆರೆಸುತ್ತಿದ್ದಾರೆ. ಈ ಸ್ಟಾರ್ ಗಳು ಮಾತ್ರ ಮನುವಾದವನ್ನು ಜನರ ತಲೆಗೆ ತುಂಬುತ್ತಿದ್ದಾರೆ. ನಾವಿಲ್ಲಿ ಉದ್ಯಮಿಗಳಾಗಿ, ತಂತ್ರಜ್ಞರಾಗಿ, ಕಲಾವಿದರಾಗಿ, ವಿತರಕರಾಗಿ, ಚಿತ್ರಮಂದಿರದ ಮಾಲಿಕರಾಗಿ ನಮ್ಮ ಭಾಗವಹಿಸುವಿಕೆಯನ್ನು ಸ್ಥಾಪಿಸಬೇಕು. ಈಗಾಗಲೇ ಅಲ್ಲಿ ಸ್ಥಾಪಿತವಾಗಿರುವ ಹಿತಾಸಕ್ತಿಗಳ ಭಯಂಕರ ವಿರೋಧಗಳು ಮತ್ತು ನಿರಾಕರಣೆಯ ಕೋಟೆಯನ್ನು ಮೀರಿ ಮುನ್ನುಗ್ಗುವುದು ಸುಲಭದ ಕೆಲಸವಲ್ಲ. ಅದೊಂದು ದುಸ್ಸಾಹಸವೇ ಸರಿ.

ಈಗಿನ ಚಿತ್ರೋದ್ಯಮದ ಲೆಕ್ಕಾಚಾರಗಳು ಬದಲಾಗಿವೆ. ಚಿತ್ರನಿರ್ಮಾಣದ ತಂತ್ರಗಳೂ ಬದಲಾಗಿವೆ. ಅದಲ್ಲದೆ ಚಿತ್ರನಿರ್ಮಾಣದ ವ್ಯಾಕರಣವೂ ಬದಲಾಗಿದೆ. ಪ್ರೇಕ್ಷಕರ ಅಭಿರುಚಿಯ ನಾಡಿಮಿಡಿತವೇ ಲೆಕ್ಕಕ್ಕೆ ಸಿಗದಾಗಿದೆ. ಓಟಿಟಿ ಮತ್ತು ಮಲ್ಟಿಪ್ಲೆಕ್ಸ್ ಸಂಸ್ಕೃತಿಯಲ್ಲಿ ಬಡಜನರೂ ಸಹ ತಮ್ಮ ಕನಸುಗಳಿಗೆ ಭಯಂಕರವಾದ ಹಣ ಸುರಿದು ಮಾರಾಟ ಮಾಡಬೇಕಾದ ಈ ಸಂದರ್ಭದಲ್ಲಿ ನಾವು ಚಿತ್ರನಿರ್ಮಾಣಕ್ಕಿಳಿದಿರುವುದೇ ಭರ್ಜರಿ ಸಾಹಸದ ಕೆಲಸ.

ಇಂದಿನ ಮತ್ತು ಹಿಂದಿನ ದೊಡ್ಡ ದೊಡ್ಡ ಸ್ಟಾರ್ ನಟರ, ಸ್ಟಾರ್ ನಿರ್ದೇಶಕರ, ಸ್ಟಾರ್ ನಿರ್ಮಾಪಕರುಗಳ ಸೃಷ್ಟಿಕರ್ತರು ಬೆವರು ಸುರಿಸಿ ಬದುಕು ನಡೆಸುವ ನಮ್ಮ ಜನರೇ! ಹೀಗಿರುವಾಗ ನಮ್ಮೊಳಗಿಂದಲೇ ಏಕೆ ನಟನಟಿಯರು ತಂತ್ರಜ್ಞರನ್ನು ಬೆಳೆಸುವುದಿಲ್ಲಾ? ನಾವೂ ಏಕೆ ಇಲ್ಲಿ ಉದ್ಯಮಿಗಳಾಗುವುದಿಲ್ಲ!? ಇತಿಹಾಸ ಗೊತ್ತಿದ್ದರೆ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಇತಿಹಾಸವನ್ನು ಸೃಷ್ಟಿಸಲು ಯಾರೊ ಬರುತ್ತಾರೆ ಎಂದು ನಾವು ಕಾಯುತ್ತಾ ಕೂರುವುದರಿಂದ ಪ್ರಯೋಜನವಿಲ್ಲ.

ನಾವೇ ಮನಸು ಮಾಡಬೇಕು
ಬಾಬಾಸಾಹೇಬರು ಹೇಳಿದಂತೆ “History will never be created on its own, we have to create the history. Those who forget histery can never creat it” ದೂರದಲ್ಲಿ ನಿಂತು ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದರೆ ಇತಿಹಾಸ ನಿರ್ಮಾಣವಾಗದು ನಾವೇ ಅಖಾಡಕ್ಕಿಳಿಯಬೇಕು. ಕಷ್ಟವೋ ನಷ್ಟವೋ ಅದನ್ನು ನಿಭಾಯಿಸಿ ಆ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕು. ಯಾವುದೇ ವಿದ್ಯೆ, ಉದ್ಯಮ, ಕಲಿಕೆಗಳು ಒಂದೇ ಗುಕ್ಕಿಗೆ ಯಾರಿಗೂ ದಕ್ಕುವುದಿಲ್ಲ.

ಚಿತ್ರ ನೋಡುವಲ್ಲಿ ವಿಮರ್ಶೆ ಮಾಡುವಲ್ಲಿ ಎಷ್ಟೇ ಪ್ರಖಾಂಡರಾಗಿದ್ದರೂ ಅದನ್ನು ನಾವೇ ಮಾಡುವಾಗ ತಪ್ಪುಗಳಾಗುತ್ತವೆ. ನಡೆಯುವವರು ಮಾತ್ರ ಎಡವಬಲ್ಲರು. ಕ್ರಿಕೆಟ್ಟೊ ಇನ್ನೊಂದೊ ಕ್ರೀಡೆ ನೋಡುವಾಗ ನಮಗೆ ಅವನು ಹಾಗೆ ಮಾಡಬೇಕಿತ್ತು ಹೀಗೆ ಮಾಡಬೇಕಿತ್ತು ಎಂದು ನಮಗನ್ನಿಸುತ್ತದೆ. ಆದರೆ ಫೀಲ್ಡಿಗೆ ಇಳಿದಾಗಲೇ ಅಲ್ಲಿನ ಒತ್ತಡ, ಭಯ ಮತ್ತು ಅಳುಕುಗಳು ಅರಿವಾಗುವುದು. ಹಾಗೆಂದು ಹೇಗಿದ್ದರೂ ನೋಡಿ, ಹೇಗಿದ್ದರೂ ಗೆಲ್ಲಿಸಿ ಎಂದು ಹೊಸಬರು ಅಸಹಾಯಕರಾಗಿ ಕೇಳುವುದನ್ನು ಒಪ್ಪಬೇಕೆಂಬುದು ನನ್ನ ಮಾತಿನ ಅರ್ಥವಲ್ಲ. ಹೊಸಬರ ಪ್ರಯತ್ನಗಳನ್ನು ನೋಡಿಬೇಕು. ಇಷ್ಟವಾಗದಿದ್ದರೆ ಅವರ ತಪ್ಪುಗಳನ್ನಾದರೂ ಹೇಳುವ ಮೂಲಕವೆ ಅವರನ್ನು ಉತ್ತೇಜಿಸಬಹುದಲ್ಲವೇ?

ಈ ದೃಷ್ಟಿಯಲ್ಲಿಯೇ ನಾನು ಚಿತ್ರ ನಿರ್ದೇಶನ ಮತ್ತು ನಿರ್ಮಾಣಕ್ಕೆ ಇಳಿದೆ. ಮೊದಲು ಮಾಮೂಲಿ ತರದ ಕತೆ ಹೆಣೆದೆ ಅದು. ‘ಡ್ರ್ಯಾಗನ್” ಚಿತ್ರ ಬೇರೆಯವರಿಗೆ ಹಣ ಮಾಡಿಕೊಟ್ಟಿತು! ನಂತರ ನಮ್ಮ ಬಹುಜನರ ಕತೆಯ “ಊಟಿ” ಮಾಡಿದೆವು ಅದು ಸೋತಿತು. ತೆಲಂಗಾಣದ ಮರ್ಯಾದೆ ಹತ್ಯೆಯ ಸುತ್ತ “ಪ್ರೇಮಂ ಶರಣಂ ಗಚ್ಚಾಮಿ” ಕಿರುಚಿತ್ರ ಮಾಡಿದೆ. ಅದು ಒಂದಷ್ಟು ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಹೆಸರು ಮಾಡಿತು. ಇದೀಗ “ಭಾರತದ ಪ್ರಜೆಗಳಾದ ನಾವು” ಚಲನಚಿತ್ರ ಮಾಡಿದ್ದೇನೆ. ಈ ಚಿತ್ರ ಬಹುತೇಕ ಎಲ್ಲಾ ವಿಭಾಗದಲ್ಲೀ ಮೂವತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪುರಸ್ಕಾರ ಪಡೆದಿದೆ. ಈಗಾಗಲೇ ಚಾಮರಾಜನಗರ ಮತ್ತು ಮೈಸೂರಿನಲ್ಲಿ ಎರಡು ಪ್ರೀಮಿಯರ್ ಶೋ ಗಳನ್ನು ಏರ್ಪಡಿಸಿದ್ದೇನೆ. ನನಗೆ ಬಿಡುಗಡೆ ಮಾಡಲು ಯಾರಾದರು ಇದ್ದರೆ ಸಹಕರಿಸಿ ಅಥವಾ ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ/ ತಾಲೂಕುಗಳಲ್ಲಿ ಶೋ ಗಳನ್ನು ಏರ್ಪಡಿಸಿದರೆ ಜನರ ಬಳಿಗೇ ಸಿನಿಮಾ ಕೊಂಡೊಯ್ದು ಅಂತಹ ನೋಡುಗ ವರ್ಗವನ್ನು ಸೃಷ್ಟಿಸಿ ಮುಂದಿನವರಿಗೆ ಹಾದಿ ಸುಗಮಗೊಳಿಸಬಹುದು.

ಇದೀಗ ನಮ್ಮ ಬಹುಜನ ಸಮುದಾಯದ ಸೋದರ Jeeva Naveen ತಂಡದ ” ಪಾಲಾರ್” ಚಿತ್ರ ಸಹ ಗಮನ ಸೆಳೆಯುತ್ತಿದೆ. “ಪಾಲಾರ್” ಮತ್ತು “ಭಾರತದ ಪ್ರಜೆಗಳಾದ ನಾವು” ದಮನಿತ ಸಮುದಾಯಗಳ ಕತೆಗಳನ್ನು ಕಟ್ಟುತ್ತಾ ದೌರ್ಜನ್ಯದ ವಿರುದ್ದ ಪ್ರತಿರೋಧ ತೋರುವ ಕತೆಗಳು.

ಈ ಚಿತ್ರಗಳನ್ನು ತಪ್ಪದೆ ನೋಡಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ತಿದ್ದಿ ತೀಡಿ, ಬುದ್ದಿವಾದ ಹೇಳಿ, ಹೇಗೆ ಬೇಕು ಹೇಳಿ ಮುನ್ನಡೆಸಿ….
ಇದು ಮುಂದೊಮ್ಮೆ ದೊಡ್ಡದಾದ ಫಲ ಕೊಡುತ್ತದೆ.

-ಡಾ. ಚಮರಂ

Leave a Reply

Your email address will not be published. Required fields are marked *