ಬೆಂಗಳೂರು (16-02-2023): ಸೆಲೆಬ್ರಿಟಿಗಳ ಕ್ರಿಕೆಟ್ ಲೀಗ್ (CCL) ಮತ್ತೆ ಬಂದಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಅಬ್ಬರಿಸಿದ ಕಾರಣ ಕಳೆದ ಎರಡು ಮೂರು ವರ್ಷಗಳ ಕಾಲ ನಿಂತು ಹೋಗಿದ್ದ CCL ಈ ವರ್ಷ ಮತ್ತೆ ಪ್ರಾರಂಭವಾಗಲಿದೆ. ವಿವಿಧ ಭಾಷೆಗಳ ಒಟ್ಟು ಎಂಟು ಚಿತ್ರರಂಗಗಳ ಸೆಲೆಬ್ರಿಟಿಗಳ ಕ್ರಿಕೆಟ್ ತಂಡಗಳು CCL ಟ್ರೋಫಿಗಾಗಿ ಸೆಣದಾಡಲಿವೆ.
18ನೇ ಫೆಬ್ರವರಿ 2023 ರಿಂದ ಪ್ರಾರಂಭವಾಗುವ ಪಂದ್ಯಾವಳಿಗಳು ವಾರಾಂತ್ಯದ ಪ್ರತಿ ಶನಿವಾರ ಮತ್ತು ಭಾನುವಾರ ನಡೆಯಲಿವೆ. ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್, ಅಖಿಲ್ ಅಕ್ಕಿನೇನಿ ನಾಯಕತ್ವದ ತೆಲುಗು ವಾರಿಯರ್ಸ್, ಆರ್ಯ ನಾಯಕತ್ವದ ಚೆನ್ನೈ ರೈನೋಸ್, ರಿತೇಶ್ ದೇಶ್ಮುಖ್ ನಾಯಕತ್ವದ ಮುಂಬೈ ಹೀರೋಸ್, ಕುಂಚಿಕೊ ಬೊಬನ್ ನಾಯಕತ್ವದ ಕೇರಳ ಸ್ಟ್ರೈಕರ್ಸ್, ಜಿಶು ನಾಯಕತ್ವದ ಬೆಂಗಾಳ್ ಟೈಗರ್ಸ್, ಸೋನು ಸೂದ್ ನಾಯಕತ್ವದ ಪಂಜಾಬ್ ದಿ ಶೇರ್ ಮತ್ತು ಮನೋಜ್ ತಿವಾರಿ ನಾಯಕತ್ವದ ಬೋಜ್ಪುರಿ ದಬಾಂಗ್ಸ್ ಹೀಗೆ ಒಟ್ಟು ಎಂಟು ತಂಡಗಳು ಸಿಸಿಎಲ್ ಸರಣಿಯಲ್ಲಿ ಭಾಗವಹಿಸುತ್ತಿವೆ.
ಕರ್ನಾಟಕದ ತಂಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಿಚ್ಚಾ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ನಿರೂಪ್ ಭಂಡಾರಿ, ಪ್ರತಾಪ್ ನಾರಾಯಣ್, ಜೆ.ಕೆ, ಚಂದನ್ ಕುಮಾರ್, ಸುನಿಲ್, ಪ್ರದೀಪ್, ರಾಜೀವ್, ಪೆಟ್ರೋಲ್ ಪ್ರಸನ್ನ ಮುಂತಾದವರಿದ್ದು ಈ ಸಲ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಪ್ರತಿ ಸಲದ ಪಂದ್ಯಾವಳಿಯಲ್ಲಿ ಬಲಿಷ್ಠ ತಂಡಗಳೆಂದೇ ಪರಿಗಣಿಸಿರುವ ದಕ್ಷಿಣ ಭಾರತದ ತಂಡಗಳಾದ ಕರ್ನಾಟಕ ಬುಲ್ಡೋಜರ್ಸ್, ತೆಲುಗು ವಾರಿಯರ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್ ತಂಡಗಳು ರೋಚಕ ಪಂದ್ಯಗಳಲ್ಲಿ ಸೆಣಸಲಿವೆ.
ಕರ್ನಾಟಕ ಬುಲ್ಡೋಜರ್ಸ್ ತಂಡದ ಬ್ರಾಂಡ್ ಅಂಬಾಸಿಡರ್ ಗಳಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಮತ್ತು ಸಾನ್ವಿ ಶ್ರೀವಾಸ್ತವ್ ತಂಡವನ್ನು ಚೀಯರ್ ಮಾಡಲಿದ್ದಾರೆ.