ಛತ್ತೀಸ್ಗಢ (18-02-2023): ವಿವಿಧ ಚಿತ್ರರಂಗಗಳ ತಾರೆಯರ ಸೆಲೆಬ್ರಿಟಿಗಳ ಕ್ರಿಕೆಟ್ ಲೀಗ್ (CCL) ಪಂದ್ಯಾವಳಿ ಇಂದು ಛತ್ತೀಸ್ಗಢದ ರಾಯ್ಪುರದಲ್ಲಿ ಪ್ರಾರಂಭವಾಯಿತು. ಮೊಟ್ಟಮೊದಲ ಪಂದ್ಯ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಮತ್ತು ಜಿಶು ನೇತೃತ್ವದ ಬೆಂಗಾಳ್ ಟೈಗರ್ಸ್ ವಿರುದ್ಧ ನಡೆಯಿತು.
ಪ್ರತಿ ಹತ್ತು ಓವರ್ ಗಳು ಎರಡು ಇನ್ನಿಂಗ್ಸ್ಗಳಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಳ್ ಟೈಗರ್ಸ್ ತಂಡ ಕ್ರಮವಾಗಿ 71 ಮತ್ತು 76 ರನ್ನುಗಳನ್ನು ದಾಖಲಿಸುವಲ್ಲಿ ಸಫಲವಾಯಿತು. ಕರ್ನಾಟಕದ ಬುಲ್ಡೋಜರ್ಸ್ ಪರವಾಗಿ ನಾಯಕ ಪ್ರದೀಪ್, ಡಾರ್ಲಿಂಗ್ ಕೃಷ್ಣ ಇವರಿಬ್ಬರ ಆರಂಭಿಕ ಜೊತೆಯಾಟದಲ್ಲಿ ಉತ್ತಮ ಸ್ಕೋರ್ ದಾಖಲಿಸುವಲ್ಲಿ ಯಶಸ್ವಿಯಾಯಿತು. ಬೆಂಗಾಲ್ ಟೈಗರ್ಸ್ ಎರಡೂ ಇನ್ನಿಂಗ್ಸ್ ಗಳಿಂದ ಒಟ್ಟು 157 ರನ್ನುಗಳನ್ನು ದಾಖಲಿಸಿತು. ಇದರ ಬೆನ್ನಟ್ಟಿದ ಸುದೀಪ್ ತಂಡ ಇನ್ನೂ ಎರಡು ಓವರ್ ಗಳು ಬಾಕಿ ಇರುವಂತೆಯೇ ಜಯಭೇರಿ ಬಾರಿಸಿತು.
ಬೌಲಿಂಗ್ ವಿಭಾಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ನಿರುಪ್ ಭಂಡಾರಿ, ಚಂದನ್ ಕುಮಾರ್, ಜೆ.ಕೆ, ಸುನೀಲ್ ರಾವ್ ಕಮಾಲ್ ಮಾಡಿದರೆ ಬ್ಯಾಟಿಂಗ್ ವಿಭಾಗದಲ್ಲಿ ಪ್ರದೀಪ್, ಸುದೀಪ್, ಡಾರ್ಲಿಂಗ್ ಕೃಷ್ಣ, ಗೋಲ್ಡನ್ ಸ್ಟಾರ್ ಗಣೇಶ್, ರಾಜೀವ್ ಫೋರ್, ಸಿಕ್ಸರ್ ಗಳನ್ನು ಬಾರಿಸಿ ಮಿಂಚಿದರು. ಕಾಂತಾರ ನಟಿ ಸಪ್ತಮಿ ಗೌಡ, ಸಾನ್ವಿ ಶ್ರೀವಾತ್ಸವ್, ಮಿಲನ ನಾಗರಾಜ್ ತಂಡದ ಟೀ ಶರ್ಟ್ ಧರಿಸಿ ಚಪ್ಪಾಳೆ ತಟ್ಟುತ್ತಾ ಆಟಗಾರರಿಗೆ ಬೆಂಬಲ ನೀಡುತ್ತಿದ್ದರು.
ಪಂದ್ಯ ಮುಗಿದ ನಂತರ ನಡೆದ ಸಮಾರಂಭದಲ್ಲಿ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಗೋಲ್ಡನ್ ಸ್ಟಾರ್ ಗಣೇಶ್ ಪಡೆದುಕೊಂಡರು, ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ ಬೆಂಗಾಲ್ ಟೈಗರ್ಸ್ ನ ಜಾಮಿ ಬ್ಯಾನರ್ಜಿ ಪಾಲಾಯಿತು. ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಅರ್ಧ ಶತಕ ಸಿಡಿಸಿ, ಬೌಲಿಂಗ್ ನಲ್ಲಿ ಕೂಡ ಅತ್ಯುತ್ತಮ ಸಾಧನೆ ಮಾಡಿದ ಪ್ರದೀಪ್ ಬೋಗಾದಿಗೆ ಸಂದಿತು.
ಕೋವಿಡ್-19 ಸಾಂಕ್ರಾಮಿಕ ರೋಗ ಅಬ್ಬರಿಸಿದ ಕಾರಣ ಕಳೆದ ಎರಡು ಮೂರು ವರ್ಷಗಳ ಕಾಲ ಸ್ಥಗಿತಗೊಂಡಿದ್ದ CCL ಈ ವರ್ಷ ಮತ್ತೆ ಪ್ರಾರಂಭವಾಗಿದ್ದು ವಿವಿಧ ಭಾಷೆಗಳ ಒಟ್ಟು ಎಂಟು ಚಿತ್ರರಂಗಗಳ ಸೆಲೆಬ್ರಿಟಿಗಳ ಕ್ರಿಕೆಟ್ ತಂಡಗಳು CCL ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.
ಬಿಗ್ ಕನ್ನಡ ನ್ಯೂಸ್ ಡೆಸ್ಕ್