ಯಾವುದೇ ಒಂದು ಧರ್ಮವು ಒಂದು ದೇಶದ ಜನಸಾಮಾನ್ಯರು ಅಥವಾ ಬಹುಜನರ ಧರ್ಮವಾಗಿಯೂ ಬೆಳೆದು ನಿಲ್ಲಬೇಕೆಂದರೆ ಅದಕ್ಕೆ ಆ ದೇಶದ ರಾಜಾಶ್ರಯವು ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ಚರ್ಚಿಸುತ್ತಾ, ಇತಿಹಾಸಗಳಿಂದಲೂ ಉದಾಹರಣೆಗಳನ್ನು ನೀಡುತ್ತಾ ಬರೆಯುತ್ತಿರುವ ರಾಜಾಶ್ರಯ ಬೇಕು ಬೌದ್ಧಧಮ್ಮಕ್ಕೆ ಸರಣಿ ಲೇಖನದ ಎರಡನೆಯ ಭಾಗ ಇದು.
ಭಾರತದಲ್ಲಿ ಬೌದ್ಧ ಧರ್ಮವು ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದು, ಕಾಲಾನಂತರದಲ್ಲಿ ಹೇಗೆ ಅದು ಅವನತಿಯ ಹಾದಿ ಹಿಡಿಯಿತು, ಅದಕ್ಕೆ ಇದ್ದ ಕಾರಣಗಳೇನು, ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಲ್ಲಿ ಬೌದ್ಧ ಧರ್ಮವು ಇಂದಿಗೂ ಜನಸಾಮಾನ್ಯರ ಧರ್ಮವಾಗಿ ಉಳಿಯಲು ಇರುವ ಕಾರಣಗಳೇನು, ಮುಂದೆ ಭಾರತದಲ್ಲೂ ಬೌದ್ಧ ಧರ್ಮವು ಸರ್ವಜನರ ಧರ್ಮವಾಗಿ ಮತ್ತೆ ಮರುಕಳಿಸಬೇಕೆಂದರೇ, ಭಾರತದ ರಾಜಕೀಯ ಅಧಿಕಾರವು ಬೌದ್ಧ ಧರ್ಮದ ಕುರಿತಂತೆ ತಳೆಯಬೇಕಾಗಿರುವ ನಿಲುವುಗಳೇನು, ಎಂಬುದನ್ನು ಈ ಚರ್ಚಿಸುವ ಮುಂದಿನ ಹಂತದ ಹೆಜ್ಜೆಯಾಗಿ, ಈ ಲೇಖನದಲ್ಲಿ ಕೆಲವು ವಿಷಯಗಳನ್ನು ಚರ್ಚಿಸಿದ್ದೇನೆ. ಓದಿ ಅಭಿಪ್ರಾಯ ತಿಳಿಸಿ ಚರ್ಚೆಗೆ ಮತ್ತೆ ಮತ್ತೆ ಸ್ವಾಗತ ಇದ್ದೆ ಇರುತ್ತದೆ
ಬೃಹದ್ರತ್ತ ಮೌರ್ಯನನ್ನು ಕೊಲ್ಲಿಸಿದ ಪುಶ್ಯಮಿತ್ರನು, ಸುಮತಿ ಭಾರ್ಗವನಿಂದ ಬರೆಸಿದ ಮನುಧರ್ಮ ಶಾಸ್ತ್ರಕ್ಕೆ ಸ್ವತಃ ಪುಶ್ಯಮಿತ್ರನದೇ ರಾಜಾಶ್ರಯ ಸಿಕ್ಕಾದ ಮೇಲೆ ಇನ್ನು ಹೇಳುವುದೇನು ಬಂತು? ಕೊಬ್ಬಿದ ವೈದಿಕರು ತಮ್ಮ ಬಾಲ ಬಿಚ್ಚತೊಡಗಿದರು, ತಂತ್ರ ಕುತಂತ್ರಗಳ ಮಾಡತೊಡಗಿದರು. ದೋಚಬಹುದಾದವರನ್ನು ದೋಚಿದರು, ರಮಿಸಬಹುದಾದವರನ್ಬು ರಮಿಸಿದರು, ಮರುಳು ಮಾಡಬಹುದಾದವರನ್ನು ಮರುಳು ಮಾಡಿದರು, ತಗ್ಗದವರನ್ನು ಬಗ್ಗದವರನ್ನು ಕುಟುಂಬದ ಒಳಗೇ ಕಲಹಗಳ ಸೃಷ್ಟಿಸಿ ಕೊಲ್ಲಿಸತೊಡಗಿದರು.
ಮೊದಲಭಾಗವನ್ನೂ ಓದಿ: ರಾಜಾಶ್ರಯ ಬೇಕು ಬೌದ್ಧ ಧಮ್ಮಕ್ಕೆ
ಮನುಷ್ಯ ಎಂದ ಮೇಲೆ ಸಮಸ್ಯೆಗಳಿಂದ ಹೊರತಾಗಿ ಇರಲಾರ. ರಾಜರೂ ಇಂತಹ ಸಮಸ್ಯೆಗಳಿಂದ ಹೊರತಾಗಿರಲಿಲ್ಲ. ಭವಿಷ್ಯ, ಜ್ಯೋತಿಷ್ಯ ಎಂಬ ಬುಡುಬುಡುಕೆ ಕವಡೆ ಶಾಸ್ತ್ರಗಳ ಮೂಲಕ ಜನರನ್ನು ನಂಬಿಸತೊಡಗಿದರು. ಆ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಗಳಿಸತೊಡಗಿದರು. ದೇವರು ಧರ್ಮಗಳ ಹೆಸರಲ್ಲಿ ಭಾರತದ ಮೂಲನಿವಾಸಿ ರಾಜರುಗಳನ್ನೆಲ್ಲಾ ಭಯಕ್ಕೊಳಪಡಿಸಿ ಸಂದರ್ಭಗಳ ದುರ್ಲಾಭ ಪಡೆದು, ಮನುಧರ್ಮಕ್ಕೆ ರಾಜಾಶ್ರಯಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಭಾರತದ ನೆಲದಲ್ಲಿ ಜೀವವಿರೋಧಿ ಮನುಧರ್ಮವು ಅದ್ಯಾವಾಗ ರಾಜಾಶ್ರಯದ ಕೃಪೆಗೆ ಪಾತ್ರವಾಯಿತೋ, ಆಗಿನಿಂದಲೇ ಕುಟಿಲ ಆರ್ಯ ವೈದಿಕರು ಭಾರತದ ಆತ್ಮದಂತಿದ್ದ ಬೌದ್ಧ ಧಮ್ಮವನ್ನು ಹಿಂಸಿಸ ತೊಡಗಿದರು. ಬುದ್ದನ ಕಾಲದಲ್ಲಿ ಸಂಪೂರ್ಣ ನಿಷೇಧಕ್ಕೊಳಪಟ್ಟಿದ್ದ, ಅನಾಚಾರದ ಕೊಂಪೆಗಳಾಗಿದ್ದ ಯಾಗ ಯಜ್ಞಗಳನ್ನು ಮರುಸ್ಥಾಪಿಸಿದರು. ಅತ್ಯಂತ ಅಪಾಯಕಾರಿ ಮಟ್ಟದ ಪ್ರಕೃತಿ ವಿರೋಧಿ ಕೃತ್ಯಗಳಾಗಿದ್ದ ವೈದಿಕಾಚರಣೆಗಳನ್ನು ಪುನಃ ಆಚರಣೆಗೆ ತರತೊಡಗಿದರು. ಬುದ್ದನ ಅನುಸರಣೆಯಂತೆ ವೈದಿಕಾಚರಣೆಗಳನ್ನು ವಿರೋಧಿಸುತ್ತಿದ್ದ ಬೌದ್ದರನ್ನು ರಾಜಾಶ್ರಯವಿದ್ದ ಮನುಧರ್ಮ ಶಾಸ್ತ್ರಗಳ ಮೂಲಕ ಶಿಕ್ಷೆಗೆ ಒಳಪಡಿಸತೊಡಗಿದರು. ಶಂಕರಾಚಾರ್ಯ ಒಂದು ಹೆಜ್ಜೆ ಮುಂದೆ ಹೋಗಿ ಬೌದ್ದರ ಮಾರಣ ಹೋಮಕ್ಕೆ ಮುನ್ನುಡಿ ಬರೆದು ಬಿಡುತ್ತಾನೆ. ಬೌದ್ದರ ಪ್ರತೀ ತಲೆಗೆ ಇಂತಿಷ್ಟು ಚಿನ್ನದ ವರಹ ಎಂದು ತನ್ನ ಮನುಧರ್ಮದ ರಾಜಾಶ್ರಯದ ಪ್ರಭಾವದಿಂದ ಘೋಷಿಸಿಬಿಡುತ್ತಾನೆ. ಲಕ್ಷಾಂತರ ಬೌದ್ದರನ್ನು ಕಂಡ ಕಂಡಲ್ಲಿ ಕೊಂದು ಬಿಸಾಕಲಾಗುತ್ತದೆ.
ನಾವು ಮತ್ತೆ ಮತ್ತೆ ಇಲ್ಲಿ ಅತಿ ಮುಖ್ಯವಾಗಿ ಗಮನಸಿಬೇಕಾದ್ದೇನೆಂದರೇ, ರಾಜಾಶ್ರಯ ಕಳೆದುಕೊಂಡಿದ್ದ ಬೌದ್ಧ ಧಮ್ಮ ಹಿಂಸೆಗೆ ಒಳಗಾಗಿತ್ತು. ದೌರ್ಜನ್ಯಕ್ಕೆ ಸಿಲುಕಿ ನರಳುತ್ತಿತ್ತು. ಹಲ್ಲೆ, ಕೊಲೆ, ಸುಲಿಗೆ ಮತ್ತು ಅತ್ಯಾಚಾರಗಳಿಗೆ ಒಳಗಾಗಿ ದೇಶದಿಂದ ಆಚೆಗೆ ಓಡುತ್ತಿತ್ತು. ಆದರೆ, ಅದೇ ಸಮಯಕ್ಕೆ ರಾಜಾಶ್ರಯಕ್ಕೆ ಒಳಗಾಗಿ ತನ್ನ ಶಕ್ತಿ ವರ್ಧಿಸಿಕೊಳ್ಳುತ್ತಿದ್ದ ಮನುವಾದವು ಮೇರೆ ಮೀರಿ ಮೆರೆಯುತ್ತಿತ್ತು. ತನ್ನ ರಕ್ತದಾಹವನ್ನು ಎಗ್ಗು ಸಿಗ್ಗಿಲ್ಲದೇ ತೀರಿಸಿಕೊಳ್ಳುತ್ತಿತ್ತು. ರಾಜಾಶ್ರಯದ ಮುನುವಾದಿಗಳ ಹೆಂಡತಿ ಮಕ್ಕಳು ಸಕಲ ಕುಟುಂಬವೂ ತಿಂದುಂಡು ಕೊಬ್ಬಿ ಮೆರೆಯುತ್ತಿದ್ದರೇ, ರಾಜಾಶ್ರಯ ಕಳೆದುಕೊಂಡಿದ್ದ ಬೌದ್ದ ಧಮ್ಮವು ಅತ್ಯಂತ ನಿಕೃಷ್ಠವಾಗಿ ಭಾರತದಿಂದ ಕಣ್ಮರೆಯಾಗುತ್ತಿತ್ತು.
ಜಗತ್ತಿನ ಕೆಲವು ರಾಷ್ಟ್ರಗಳು ಕ್ರಿಸ್ತಶಕ ಮೂರನೇ ಶತಮಾನದಿಂದ ಕ್ರಿಸ್ತಶಕ ಹನ್ನೆರಡು ಅಥವಾ ಹದಿನೈದನೆಯ ಶತಮಾನಗಳವರೆಗೂ ಬೌದ್ಧರಾಷ್ಟಗಳಾಗಿದ್ದವು ಎಂದು ಕಂಡು ಬರುತ್ತದೆ. ಹನ್ನೆರಡನೆಯ ಶತಮಾನದ ನಂತರ ಜಗತ್ತಿನ ಹಲವು ದೇಶಗಳಿಗೆ ಇಸ್ಲಾಂ ಪ್ರವೇಶಿಸುತ್ತದೆ. ಇಸ್ಲಾಂನ ಪ್ರಭಾವಕ್ಕೆ ಒಳಗಾಗುವ ಹಲವು ದೇಶಗಳ ರಾಜರು ಇಸ್ಲಾಂ ಧರ್ಮಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡುತ್ತಾರೆ. ರಾಜಾಶ್ರಯಕ್ಕೆ ಒಳಗಾದ ಇಸ್ಲಾಂ ಅಷ್ಟೇ ವೇಗವಾಗಿ ಆ ದೇಶದ ಬಹು ಜನರ ಧರ್ಮವಾಗಿ ಪ್ರಚಲಿತಕ್ಕೆ ಬರುತ್ತದೆ ಮತ್ತು ಯುದ್ದಗಳ ಮೂಲಕವೂ ಮತ್ತಿತರ ಕಾರಣಗಳಿಂದಲೂ ರಾಜ್ಯಾಧಿಕಾರ ಕಳೆದುಕೊಂಡ ಬೌದ್ಧ ರಾಜರ ರಾಜಾಶ್ರಯ ಕಳೆದುಕೊಳ್ಳುವ ಬೌದ್ದ ಧರ್ಮವು ಆ ದೇಶಗಳಿಂದ ನಿಧಾನವಾಗಿ ಕಣ್ಮರೆಯಾಗುತ್ತದೆ. ಮಲೇಷಿಯಾ ದೇಶವು ಹದಿಮೂರನೇ ಶತಮಾನದವರೆಗೂ ಬೌದ್ಧ ರಾಷ್ಟವಾಗಿತ್ತು. ಆನಂತರ ಬದಲಾದ ಕಾಲಘಟ್ಡದಲ್ಲಿ ಬೌದ್ಧ ಧರ್ಮವು ಮಲೆಷಿಯಾದಲ್ಲಿ ರಾಜಾಶ್ರಯವನ್ನು ಕಳೆದುಕೊಳ್ಳುತ್ತದೆ. ಹದಿನೈದನೆಯ ಶತಮಾನದ ಹೊತ್ತಿಗೆ ಮಲೇಷಿಯಾದಲ್ಲಿ ಇಸ್ಲಾಂ ಧರ್ಮಕ್ಕೆ ಸಿಗುವ ರಾಜಾಶ್ರಯದ ಕಾರಣಕ್ಕೆ ಮಲೇಷಿಯ ಮುಸ್ಲಿಂ ರಾಷ್ಟ್ರವಾಗಿದೆ. ಮಲೇಷಿಯಾದಲ್ಲಿ ಈಗಲೂ ಮಲೇಷಿಯಾದ ಒಟ್ಟು ಜನಸಂಖ್ಯೆಯ 18ರಿಂದ 20% ಬೌದ್ಧರು ನೆಲೆಸಿದ್ದಾರೆ.
ರಾಜಾಶ್ರಯವಿರುವ ಕಾರಣವಾಗಿಯೇ ಭೂತಾನ್, ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ಶ್ರೀಲಂಕಾ ದೇಶಗಳಲ್ಲಿ ಬೌದ್ಧಧಮ್ಮವು ಅಧಿಕೃತ ಧರ್ಮವಾಗಿದೆ. ಥೈಲ್ಯಾಂಡ್ ಮತ್ತು ಲಾವೋಸ್ ದೇಶಗಳಲ್ಲಿ ಬೌದ್ಧ ಧರ್ಮವು ವಿಶೇಷ ಸ್ಥಾನಮಾನವನ್ನು ಹೊಂದಿದೆ. ರಾಜಾಶ್ರಯದ ಕಾರಣವಾಗಿಯೇ ಚೀನಾ, ಹಾಂಗ್ ಕಾಂಗ್, ಜಪಾನ್, ಟಿಬೆಟ್, ಮಕಾವು, ಸಿಂಗಾಪುರ, ತೈವಾನ್, ಕಲ್ಮಿಕಿಯಾ ಮತ್ತು ವಿಯೆಟ್ನಾಂನಲ್ಲೂ ಬೌದ್ಧ ಧರ್ಮವು ಪ್ರಬಲವಾಗಿ ಬೆಳೆದು ನಿಂತಿದೆ. ಉತ್ತರ ಕೊರಿಯಾ, ನೇಪಾಳ, ಮತ್ತು ದಕ್ಷಿಣ ಕೊರಿಯಾ ದೇಶಗಳಲ್ಲೂ ಬೌದ್ಧರ ಅತಿದೊಡ್ಡ ಜನಸಂಖ್ಯೆ ಇದೆ.
ಹಾಗಾದರೇ, ಮುಂದೆ ಭಾರತದಲ್ಲಿ ಏನಾಗಬೇಕಿದೆ ಎಂದು ಚರ್ಚಿಸುವ ಮುಂಚೆ, ಭಾರತದಲ್ಲಿ ಬೌದ್ಧ ಧಮ್ಮದ ಹೆಜ್ಜೆಗಳನ್ನು ಮರುಸ್ಥಾಪಿಸಲು ಬಾಬಾ ಸಾಹೇಬರು ಕಂಡಿದ್ದ ಕನಸುಗಳೇನು, ಅವರು ಹಾಕಿದ್ದ ಯೋಜನೆಗಳೇನು? ಬಾಬಾಸಾಹೇಬರ ಯೋಚನೆ ಮತ್ತು ಯೋಜನೆಗಳಿಗೆ ಆದ ಗತಿ ಏನು? ಬಾಬಾ ಸಾಹೇಬರ ಕರುಣೆಯ ಕುಡಿಗಳಾದ ನಾವು ಮುಂದೇನು ಮಾಡಬಹುದು ಎಂಬುದರ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸೋಣ.