ಸಾಹಿತ್ಯ ಮತ್ತು ಸಂಸ್ಕೃತಿ ವಿಮರ್ಶಕರಾದ ಶ್ರೀಪಾದ ಭಟ್ ಅವರು ಜಗತ್ತಿನಾದ್ಯಂತ ನಡೆದ ಕಪ್ಪು ಜನರ, ದಲಿತ ಚಳುವಳಿಗಳ ಅಗಾಧತೆ ಮತ್ತು ಅವುಗಳ ಪ್ರಭಾವವನ್ನು ಕುರಿತು ಸರಣಿ ಲೇಖನಗಳನ್ನು ಬರೆಯಲಿದ್ದಾರೆ. ಬ್ಲಾಕ್ ಪ್ಯಾಂಥರ್ಸ್ ನಿಂದ ಹಿಡಿದು, ಭಾರತದಲ್ಲಿ ರೂಪುಗೊಂಡ ದಲಿತ್ ಪ್ಯಾಂಥರ್ಸ್ ವರೆಗೂ ವಿವಿಧ ಆಯಾಮಗಳನ್ನು ಕಟ್ಟಿಕೊಡಲಿದ್ದಾರೆ. ಅದರ ಭಾಗವಾಗಿ ಮೊದಲ ಲೇಖನ ಇಲ್ಲಿದೆ.
***
ನೀನೊಬ್ಬನೆಯೆ ಅಲ್ಲ, ಸಾವಿನಳುಕಿಗೆ ಸಿಕ್ಕಿ
ಮುದ್ದಾಡಲರ್ಹವಹ ಶಿಶುಗಳೇನು ಶಿಲೆಗೆ
ಬಡಿದು ಕೊಂದೆಂಟನೆಯದರ ಕೈಲಿ ಸೀಳಲ್ಗೊಲೆಗೆ
ತುತ್ತಾದವನು ಕಂಸ ನಮ್ಮೆದೆಗಳನು ಕುಕ್ಕಿ
ನೋಡಿದರೆ ಕಾಣುವುದು ಮಕ್ಕಳೆಲುಬಿನ ರಾಶಿ !
ಒಂದೊಂದು ಹೃದಯವೂ ಕಂಸಶಿಲೆ
-ಕುವೆಂಪು
೨೦ನೆ ಶತಮಾನದ ಐವತ್ತು, ಅರವತ್ತರ ದಶಕದಲ್ಲಿ ಅಮೇರಿಕಾದ ದಕ್ಷಿಣ ಭಾಗದಿಂದ ವಲಸೆ ಬಂದ ಆಫ್ರೋ ಅಮೇರಿಕನ್ನರು ಕ್ಯಾಲಿಫೋರ್ನಿಯ ಮತ್ತು ಇತರೆ ನಗರಗಳಲ್ಲಿ ತಮ್ಮ ಬದುಕು ಕಟ್ಟಿಕೊಳ್ಳು ಹೆಣಗಾಡುತ್ತಿದ್ದರು. ೧೯೬೨-೬೪ರ ಅವಧಿಯಲ್ಲಿ ಎಲ್.ಎ.ಪಿ.ಡಿಯು ೬೪ ಆಫ್ರೋ ಅಮೇರಿಕನ್‌ರನ್ನು ಹತ್ಯೆ ಮಾಡಿತು. ಅದರಲ್ಲಿಯೂ ೨೭ ಜನರನ್ನು ಅವರ ಬೆನ್ನಿಗೆ ಗುಂಡು ಹಾರಿಸಿ ಕೊಂದಿದ್ದರು. ಕಡೆಗೆ ಒಬ್ಬರು ಮಾತ್ರ ಹತ್ಯೆಯಾಗಿದ್ದಾರೆ ಎಂದು ತೀರ್ಪು ಕೊಡಲಾಯಿತು. ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಆಫ್ರೋ-ಅಮೇರಿಕನ್ ಸಮುದಾಯವು ಬಿಳಿಯರ ದೌರ್ಜನ್ಯದಿಂದ, ಜನಾಂಗೀಯ ನಿಂದನೆಯಿಂದ ಮುಖಾಮುಖಿಯಾಗಲು ೧೫, ಅಕ್ಟೋಬರ್ ೧೯೬೬ರಂದು ಸ್ವರಕ್ಷಣೆಗಾಗಿ ’ಬ್ಲಾಕ್ ಪ್ಯಾಂಥರ್ಸ್ ಪಕ್ಷ’ (ಬಿಪಿಪಿ) ಆಸ್ತಿತ್ವಕ್ಕೆ ಬಂದಿತು. ಕ್ರಮೇಣ ೬೮ ನಗರ, ಪಟ್ಟಣಗಳಲ್ಲಿ ತನ್ನ ಪ್ರಧಾನ ಕಚೇರಿ ತೆರಯುವಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಿತು. ಈ ಪಕ್ಷವು ಕ್ರಾಂತಿಕಾರಿ ಸಿದ್ಧಾಂತ, ಶಿಕ್ಷಣ, ಸಮುದಾಯ ಕಾರ್ಯಕ್ರಮಗಳನ್ನು ಒಳಗೊಂಡ ಹತ್ತು ಅಂಶಗಳ ಕಾರ್ಯಕ್ರಮವನ್ನು ಪ್ರಕಟಿಸಿದರು. ’ರಿಥಿಂಕಿಂಗ್ ಸ್ಕೂಲ್’ ಅಂತರ್ಜಾಲ ಪತ್ರಿಕೆಯ ಸಂಪಾದಕರಾದ ಅಡಮ್ ಸಾಂಚೆಜ್ ಮತ್ತು ಜೆಸ್ಸೆ ಹಗೋಪಿನ್ ’ಪ್ರಸ್ತುತ ಸಂದರ್ಭದಲ್ಲಿ ಜನಾಂಗೀಯ ದ್ವೇಷ, ಪೋಲೀಸ್ ಹಿಂಸೆಯೊಂದಿಗೆ ಸಂಘರ್ಷಕ್ಕಿಳಿಯವ ಚಳುವಳಿಗಳಿಗೆ ಈ ಸಂಘಟನೆಯ ಇತಿಹಾಸದಿಂದ ಕಲಿಯಬೇಕಾದ ಪಾಠಗಳಿವೆ, ಆದರೆ ಪಠ್ಯಪುಸ್ತಕಗಳಲ್ಲಿ ಬ್ಲಾಕ್ ಪ್ಯಾಂಥರ್ ಕುರಿತು ತಪ್ಪಾದ ಮಾಹಿತಿಗಳಿವೆ ಅಥವಾ ಅದನ್ನು ನಿರ್ಲಕ್ಷಿಸಲಾಗಿದೆ’ ಎಂದು ಬರೆಯುತ್ತಾರೆ.
ಬ್ಲಾಕ್ ಪ್ಯಾಂಥರ್ಸ್ ಪಕ್ಷದ ಹತ್ತು ಅಂಶಗಳ ಕಾರ್ಯಕ್ರಮ
- 1. ನಮಗೆ ಸ್ವಾತಂತ್ರ್ಯ ಬೇಕು. ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳುವ ಅಧಿಕಾರ ಬೇಕು
- 2. ನಮ್ಮ ಜನರಿಗೆ ಸಂಪೂರ್ಣ ಉದ್ಯೋಗ ದೊರಕಬೇಕು
- 3. ಬಂಡವಾಳಶಾಹಿಗಳು ನಮ್ಮ ಕಪ್ಪು ಮತ್ತು ಶೋಷಿತ ಜನರ ದರೋಡೆ ಮಾಡುವುದನ್ನು ನಿಲ್ಲಿಸಬೇಕು
- 4. ಗೌರವಯುತವಾಗಿ ಬದುಕಲು ಸುಸಜ್ಜಿತವಾದ ವಸತಿ ಸೌಕರ್ಯ ಬೇಕು
- 5. ಕ್ಷೀಣಸುತ್ತಿರುವ ಅಮೇರಿಕಾ ಸಮಾಜದ ವಾಸ್ತವವನ್ನು ಅರಿಯಲು ಶಿಕ್ಷಣದ ಅಗತ್ಯವಿದೆ. ನಮ್ಮ ನಿಜ ಇತಿಹಾಸವನ್ನು ಪರಿಚಯಿಸುವ ಮತ್ತು ಇಂದಿನ ಸಂದರ್ಭದಲ್ಲಿ ನಮ್ಮ ಪಾತ್ರವನ್ನು ನಿರ್ಧರಿಸುವಂತಹ ಶಿಕ್ಷಣ ಬೇಕು
- 6. ಎಲ್ಲಾ ಕಪ್ಪು ಜನರನ್ನು ಮಿಲಿಟರಿ ಸೇವೆಯಿಂದ ಮುಕ್ತಗೊಳಿಸಬೇಕು
- 7. ಪೋಲಿಸರ ದೌರ್ಜನ್ಯ ಮತ್ತು ಕಪ್ಪು ಜನರ ಹತ್ಯೆಯನ್ನು ಅತಿ ಶೀಘ್ರದಲ್ಲಿ ಕೊನೆಗೊಳಿಸಬೇಕು
- 8. ಒಕ್ಕೂಟ, ರಾಜ್ಯ, ಕೌಂಟಿ ಮತ್ತು ನಗರ ಜೈಲಿನಲ್ಲಿರುವ ಎಲ್ಲಾ ಕಪ್ಪು ಜನರನ್ನು ಬಿಡುಗಡೆಗೊಳಿಸಬೇಕು
- 9. ಕಪ್ಪು ಸಮುದಾಯದವರು ಸದಸ್ಯರಾಗಿರುವ ಜ್ಯೂರಿಯ ಮುಂದೆ ಮಾತ್ರ ಆಫ್ರೋ ಅಮೇರಿಕನ್ ಆರೋಪಿಗಳ ವಿಚಾರಣೆ ನಡೆಸಬೇಕು
- 10. ನಮಗೆ ಭೂಮಿ, ವಸತಿ, ಆಹಾರ, ಶಿಕ್ಷಣ, ಉಡುಪು, ನ್ಯಾಯ, ಶಾಂತಿ ಬೇಕು
ಅರವತ್ತು, ಎಪ್ಪತ್ತರ ದಶಕದಲ್ಲಿ ಬಿಪಿಪಿ ಸಂಘಟನೆಯ ಪ್ರಾಬಲ್ಯ ಮತ್ತು ಪ್ರಭಾವವನ್ನು ಅರಿಯಲು ’ಡೆಂಜಿಲ್ ಡೋವೆಲ್ ಹತ್ಯೆ ಪ್ರಕರಣ’ವನ್ನು ಮರು ಓದಬೇಕು.
೧, ಎಪ್ರಿಲ್ ೧೯೬೭ರಲ್ಲಿ ನಾರ್ತ ರಿಚ್ಮಂಡ್ ಕ್ಯಾಲಿಫೋರ್ನಿಯಾದಲ್ಲಿ ಬಿಲ್ಸ್ ಮದ್ಯದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಆಫ್ರೋ-ಅಮೇರಿಕನ್ ಡೆಂಜಿಲ್ ಮೇಲೆ ಗುಂಡು ಹಾರಿಸಿ ಬಿಳಿಯ ಪೋಲೀಸರು ಹತ್ಯೆ ಮಾಡುತ್ತಾರೆ. ಆದರೆ ಮದ್ಯದ ಅಂಗಡಿಯನ್ನು ಬಾಗಿಲು ಮುರಿದ ಯಾವುದೇ ಕುರುಹುಗಳಿರುವುದಿಲ್ಲ. ಆದರೆ ಪೋಲೀಸರು ’ಡೆಂಜಿಲ್ ತಪ್ಪಿಸಿಕೊಂಡು ಓಡಿ ಹೋಗಿದ್ದು ಮಾತ್ರವಲ್ಲ, ಎರಡು ಬೇಲಿಗಳನ್ನು ಹಾರಿಕೊಂಡು ಹೋದ’ ಎಂದು ಸಮರ್ಥಿಸಿಕೊಂಡರು. ಆದರೆ ಡೆಂಜಿಲ್ ಕಾಲಿನ ನ್ಯೂನ್ಯತೆಯಿಂದಾಗಿ ಕುಂಟುತ್ತಿದ್ದ, ಆತ ಹಾರುವುದಿರಲಿ, ಓಡಲೂ ಸಾಧ್ಯವಿರಲಿಲ್ಲ. ಆತನ ಮೃತ ದೇಹವನ್ನು ಪೋಸ್ಟ್‌ಮಾರ್ಟಂ ಮಾಡಿದ ವೈದ್ಯರು ’ಕೊಲೆಯಾಗುವ ಸಂದರ್ಭದಲ್ಲಿ ಡೆಂಜಿಲ್ ಎರಡು ಕೈಗಳನ್ನು ಮೇಲಕ್ಕೆ ಎತ್ತಿ ಹಿಡಿದಿದ್ದ’ ಎಂದು ವರದಿ ನೀಡಿದರು. ಡೆಂಜಿಲ್‌ನ ತಾಯಿ ’ನನ್ನ ಮಗನನ್ನು ಕೊಲೆ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಬಿಳಿಯರನ್ನು ಒಳಗೊಂಡ ಜ್ಯೂರಿಯು ’ಘೋರ ಅಪರಾಧ ಜರಗುವ ಸಂಭವ ಇರುವುದರಿಂದ ನಿಶ್ಯಸ್ತ್ರನಾಗಿದ್ದ ಡೆಂಜಿಲ್ ಮೇಲೆ ಪೋಲೀಸರು ಗುಂಡು ಹಾರಿಸಿದ್ದು ಸಮರ್ಥನೀಯ ನರಹತ್ಯೆ’ ಎಂದು ತೀರ್ಪು ನೀಡಿತು. ಈ ಅನ್ಯಾಯದ ವಿರುದ್ಧ ವಿರುದ್ಧ ಆಫ್ರೋ-ಅಮೇರಿಕನ್ ಸಮುದಾಯವು ಹೋರಾಟ ನಡೆಸಿತು.
’೧೯೭೦ರಲ್ಲಿ ಬ್ಲಾಕ್ ಪ್ಯಾಂಥರ್ ಸಂಘಟನೆ ತೀವ್ರವಾಗಿದ್ದ ಸಂದರ್ಭದಲ್ಲಿ ಪ್ರತಿ ವಾರ ೧೪,೦೦೦ ಪ್ರತಿಗಳ ಸರ್ಕುಲೇಶನ್ ಇರುವ ಅದೇ ಹೆಸರಿನ ದಿನಪತ್ರಿಕೆಯಲ್ಲಿ ’ಡೆಂಜಿಲ್ ಡೋವೆಲ್ ಯಾಕೆ ಕೊಲೆಯಾದರು’ ಎನ್ನುವ ಶೀರ್ಷಿಕೆ ಇರುವ ಲೇಖನ ಪ್ರಕಟವಾಯಿತು. ಜೊತೆಗೆ ತಾನು ಡೆಂಜಿಲ್ ಕೊಲೆಯ ತನಿಖೆ ಪ್ರಾರಂಬಿಸಿತು, ಸಾಕ್ಷಾಧಾರಗಳನ್ನು ಸಂಗ್ರಹಿಸಿತು, ಪೋಲೀಸರೊಂದಿಗೆ ಸಂಘರ್ಷಕ್ಕಿಳಿದು ಡೆಂಜಿಲ್ ಡೊವೆಲ್‌ಗೆ ನ್ಯಾಯಕ್ಕಾಗಿ ಹೋರಾಟ ಮಾಡಿತು. ಜನಾಂಗೀಯ ದೌರ್ಜನ್ಯಕ್ಕೊಳಗಾದ ಕುಟುಂಬಗಳ ನೆರವಿಗೆ ಧಾವಿಸಿ ಕಾನೂನಿನ ಮೂಲಕ ನ್ಯಾಯ ಒದಗಿಸಲು ಶ್ರಮಿಸಿತು. ಆಫ್ರೋ-ಅಮೇರಿಕನ್ ಸಮುದಾಯದವರಿಗೆ ಉತ್ತಮ ಗುಣಮಟ್ಟದ ವಸತಿ, ಆರೋಗ್ಯ, ಶಿಕ್ಷಣಕ್ಕಾಗಿ ನಿರಂತರವಾಗಿ ಹೋರಾಟ ಮಾಡಿದ ಬ್ಲಾಕ್ ಪ್ಯಾಂಥರ್ಸ್ ಪ್ರತಿಯೊಂದು ಸಂಘಟನೆಗೆ ಒಂದು ಮಾದರಿಯಾಗಿದೆ.
ಎಪ್ಪತ್ತರ ದಶಕದಲ್ಲಿ ನಮ್ಮ ಸಬಲೀಕರಣಕ್ಕೆ ’ಬ್ಲಾಕ್ ಪ್ಯಾಂಥರ್ಸ್ ಪಕ್ಷ’ವು ಸೂಕ್ತ ಸಂಘಟನೆಯಾಗಿದೆ ಎಂದು ಆಫ್ರೋ-ಅಮೇರಿಕನ್ ಸಮುದಾಯ ನಂಬಿದ್ದರು. ಆಗಿನ ಎಫ್‌ಬಿಐ ನಿರ್ದೇಶಕ ಎಡ್ಗರ್ ಹೂವರ್ ’ಅಂತರಿಕ ಭದ್ರತೆಗೆ ಬಿಪಿಪಿ ದೊಡ್ಡ ಬೆದರಿಕೆಯಾಗಿದೆ’ ಎಂದು ಹೇಳಿದ್ದರು. ಇದು ಬಿಪಿಪಿಯ ಶಕ್ತಿಯನ್ನು ತೋರಿಸುತ್ತದೆ. ತಮ್ಮ ಸ್ವರಕ್ಷಣೆಗಾಗಿ ಅಗತ್ಯ ಉಂಟಾದರೆ ಮಾತ್ರ ಹಿಂಸೆಯನ್ನು ಬಳಸುತ್ತಿದ್ದ ಬಿಪಿಪಿಯನ್ನು ಅಲ್ಲಿನ ಮಾಧ್ಯಮಗಳು, ಪಠ್ಯಪುಸ್ತಕಗಳಲ್ಲಿ ’ಮಿಲಿಟೆಂಟ್, ಪ್ರತ್ಯೇಕವಾದಿಗಳು’ ಎಂದು ಅಪಪ್ರಚಾರ ಮಾಡುತ್ತಿದ್ದರು. ಆದರೆ ಬಿಪಿಪಿ ಸಂಘಟನೆಯು ’ವಿಧ್ಯಾರ್ಥಿಗಳ ಅಹಿಂಸಾತ್ಮಕ ಸಮನ್ವಯ ಸಮಿತಿ’ ಜೊತೆಗೆ ಮೈತ್ರಿ ಹೊಂದಿದ್ದರು. ’Lowndes County Freedom Organizationನಿಂದ ತಮ್ಮ ಪಕ್ಷದ ಹೆಸರು ಮತ್ತು ಲಾಂಛನ ಪಡೆದುಕೊಂಡಿದ್ದರು. ಆಗ ಬಿಪಿಪಿಯನ್ನು ಬಿಳಿಯರ ವಿರೋಧಿ ಎಂದು ಮಿಥ್ಯಾರೋಪ ಮಾಡಲಾಗಿತ್ತು. ಆದರೆ ಚಿಕಾಗೋ ವಲಯದ ಪ್ಯಾಂಥರ್ ಮುಖಂಡರಾಗಿದ್ದ ಫ್ರೆಡ್ ಹ್ಯಾಂಪ್ಟನ್ ಅವರು ಪುರಟೋ ರಿಕಾನ್ ಯಂಗ್ ಲಾರ್ಡ್ಸ ಮತ್ತು ಬಡವರು, ದಕ್ಷಿಣ ಪ್ರಾಂತದಿಂದ ವಲಸೆ ಬಂದ ಬಿಳಿಯರ ಯಂಗ್ ಪ್ಯಾಟ್ರಿಯಾಟ್ಸ್ ಜೊತೆಗೆ ರೇನ್‌ಬೋ ಮೈತ್ರಿ ಮಾಡಿಕೊಂಡಿದ್ದರು.
ಈ ಬಡವರಾದ ಬಿಳಿಯರಿಗೆ ತಮ್ಮದೇ ಆದ ಸಮುದಾಯ ಕೇಂದ್ರಗಳನ್ನು ಕಟ್ಟಿಕೊಳ್ಳಲು ಬಿಪಿಪಿ ನೆರವಾಗಿದ್ದರು. ಕ್ಯಾಲಿಫೋರ್ನಿಯಾದಲ್ಲಿ ಬಹುತೇಕ ಬಿಳಿಯರಿರುವ ಶಾಂತಿ ಮತ್ತು ಸ್ವತಂತ್ರ್ಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಬಿಪಿಪಿ ಪತ್ರಿಕೆಯ ಸಂಪಾದಕೀಯದಲ್ಲಿ ಬ್ಲಾಕ್ ಕ್ರಾಂತಿಕಾರಿ ಚಳುವಳಿಯನ್ನು ಬಿಳಿಯರ ಕ್ರಾಂತಿಕಾರಿ ಚಳುವಳಿಯಿಂದ ಪ್ರತ್ಯೇಕಗೊಳಿಸುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ಒಡೆದು ಆಳುವ ನೀತಿಯ ಪ್ರಭುತ್ವದ ಸಂಚಿಗೆ ಬಲಿಯಾಗುತ್ತಿದ್ದೇವೆ’ ಎಂದು ವಿವರಿಸಿದ್ದರು. ಪ್ಯಾಂಥರ್ಸ್ ಹ್ಯೂ ನ್ಯೂಟನ್ ’ನಮ್ಮ ಗುಲಾಮಗಿರಿಯ ಮೇಲೆ ತನ್ನನ್ನು ಕಟ್ಟಿಕೊಂಡು ದೇಶವು ಶ್ರೀಮಂತವಾಗಿದೆ. ಜನಾಂಗೀಯ ದ್ವೇಷ ಮತ್ತು ಬಂಡವಾಳಶಾಹಿ ನಮ್ಮ ದೊಡ್ಡ ಶತೃಗಳು, ಇದನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕು’ ಎಂದು ಹೇಳಿದ್ದರು.
೨೦೧೫ರಲ್ಲಿ ಬಿಡುಗಡೆಯಾದ ಸ್ಟಾನ್ಲಿ ನೆಲ್ಸನ್ ಜ್ಯೂ. ನಿರ್ದೇಶನದ ’‘The Black Panthers: Vanguard of the Revolution ಸಾಕ್ಷ್ಯಚಿತ್ರವು ಐವತ್ತು ವರ್ಷಗಳ ನಂತರ ಆ ಸಂಘಟನೆಯ ಹಾಲಿ ಕಾರ್ಯಕರ್ತರು, ಪತ್ರಕರ್ತರು, ಪೋಲೀಸರು, ಎಫ್‌ಬಿಐ, ಈ ಸಂಘಟನೆಯನ್ನು ತೊರೆದವರು ಮುಂತಾದವರ ಸಂದರ್ಶನವನ್ನು ಒಳಗೊಂಡಿದೆ. ಈ ಸಾಕ್ಷ್ಯಚಿತ್ರವು ಬಿಪಿಪಿ ಬಗೆಗಿರುವ ಎಲ್ಲಾ ಮಿಥ್ಯೆ ಮತ್ತು ಸುಳ್ಳುಗಳನ್ನು ಕುರಿತು ವಿವರಿಸುತ್ತದೆ. ಆದರೆ ಅಡಮ್ ಸಾಂಚೆಜ್ ಮತ್ತು ಜೆಸ್ಸೆ ಹಗೋಪಿನ್ ’ಈ ಸಾಕ್ಷ್ಯಚಿತ್ರವು ಬಿಪಿಪಿಯ ಮಾರ್ಕ್ಸಿಸಂ ಸಿದ್ಧಾಂತವನ್ನು ನಿರ್ಲಕ್ಷಿಸಿದೆ. ಪ್ಯಾಂಥರ್ಸ್ ಚಳುವಳಿಯ ಚಾರಿತ್ರಿಕ ಮಹತ್ವವನ್ನು ದಾಖಲಿಸಿಲ್ಲ, ಬಿಪಿಪಿಯ ರಾಷ್ಟ್ರೀಯ ಕತೆಯನ್ನು ಹೇಳುವ ಭರದಲ್ಲಿ ಸ್ಥಳಿಯ ಕಥನವನ್ನು ಮರೆತಿದ್ದಾರೆ’ ಎಂದು ಬರೆಯುತ್ತಾರೆ. ಆದರೆ ಅಂತರಿಕ ಬಿಕ್ಕಟ್ಟುಗಳು, ಬಾಹ್ಯದಲ್ಲಿ ಎಫ್‌ಬಿಐನ ನಿರಂತರ ದಾಳಿಯ ಕಾರಣದಿಂದ ಎಪ್ಪತ್ತರ ದಶಕದ ಕೊನೆಯ ಭಾಗದಿಂದ ಬ್ಲಾಕ್ ಪ್ಯಾಂಥರ್ಸ್ ಪಕ್ಷದ ಚಟುವಟಿಕೆ ಕ್ಷೀಣಿಸಸತೊಡಗಿತು. ೧೯೮೨ರಲ್ಲಿ ಬಿಪಿಪಿ ತನ್ನ ಸಂಘಟನೆಯನ್ನು ನಿಷ್ಕ್ರಿಕೆಗೊಳಿಸಿತು. ಇದು ಮತ್ತೊಂದು ದೀರ್ಘ ಕತೆ.
ಉಪ ಸಂಹಾರ
ಅಮೇರಿಕದ ಬ್ಲಾಕ್ ಪ್ಯಾಂಥರ್ಸ್ಸ್‌ನಿಂದ ಪ್ರಭಾವಿತರಾಗಿದ್ದ ನಾಮ್‌ದೇವ್ ಢಸಾಳರು ತಮ್ಮ ಗೆಳೆಯರಾದ ರಾಜ ಡಾಳೆ, ಜೆ.ವಿ.ಪವಾರ್ ಅವರ ಜೊತೆಗೂಡಿ ’ದಲಿತ ಪ್ಯಾಂಥರ್ಸ್ಸ್’ ಸ್ಥಾಪಿಸಿದ್ದರು. ಎಪ್ಪತ್ತರ ದಶಕದಲ್ಲಿ ’ದಲಿತ್ ಪ್ಯಾಂಥರ್ಸ್ಸ್’ ಮಹರಾಷ್ಟ್ರದಲ್ಲಿ ಅಂಬೇಡ್ಕರ್‌ವಾದಿಗಳಿಗೆ ವಿಶಾಲವಾದ ಹೋರಾಟದ ಆಡೊಂಬಲವಾಗಿತ್ತು. ಅತ್ಯಂತ ಪ್ರಖರ ವೈಚಾರಿಕ, ಸಮತಾವಾದ, ಎಡಪಂಥೀಯ ಲೇಖಕರು ಮತ್ತು ಚಿಂತಕರ ಪಡೆಯೇ ಅಂದಿನ ದಲಿತ ಪ್ಯಾಂಥರ್ಸ್ ಸಂಘಟನೆಯಲ್ಲಿತ್ತು. ಆದರೆ ಎಲ್ಲಾ ಪ್ರಗತಿಪರ ಹಾಗೂ ಜಾತ್ಯಾತೀತ ಸಂಘಟನೆಗಳಿಗೂ ತಗಲುವ ಜಾಡ್ಯದಂತೆ ಈ ಸಂಘಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದ ರಾಜ ಢಾಳೆ ಹಾಗೂ ನಾಮದೇವ ಢಸಾಳರ ನಡುವಿನ ಈ ವೈಯುಕ್ತಿಕ ಸಿದ್ಧಾಂತಗಳ ಭಿನ್ನತೆ ದಲಿತ ಪ್ಯಾಂಥರ್‍ಸ ಸಂಘಟನೆಯನ್ನೂ ಹ ಬಿಡಲಿಲ್ಲ. ರಾಜ ಢಾಳೆಯವರ ನೇತೃತ್ವದ ಗುಂಪು ಎಡಪಂಥೀಯ ಒಲವುಳ್ಳ ಸೆಕ್ಯುಲರ್ ರಾಜಕಾರಣವನ್ನು ಪುರಸ್ಕರಿಸಲಿಲ್ಲ. ಬದಲಾಗಿ ಅಂಬೇಡ್ಕರ ಪ್ರತಿಪಾದಿಸಿದ ಬುದ್ಧ ಧರ್ಮದ ಮಾರ್ಗದ ಕಡೆಗೆ ತನ್ನ ನಿಲುವನ್ನು ತಳೆದಿತ್ತು. ಇಲ್ಲಿ ಬುದ್ಧನ ಚಿಂತನೆಗಳ ಪ್ರಜ್ನೆಯಲ್ಲಿ ಮುನ್ನಡೆಯಬೇಕೆಂಬುದೇ ರಾಜ ಢಾಳೆಯವರ ಪ್ರಮುಖ ಆಶಯವಾಗಿತ್ತು. ಆದರೆ ನಾಮದೇವ ಢಸಾಳರವರ ನೇತೃತ್ವದ ಗುಂಪು ಮಾರ್ಕ್ಸವಾದದ ನೆಲೆಗಟ್ಟಿನಲ್ಲಿ, ತಮ್ಮ ಎಡಪಂಥೀಯ ಚಿಂತನೆಗಳನ್ನು ನೇರವಾಗಿಯೇ ಪ್ರತಿಪಾದಿಸುತ್ತಾ ಬುದ್ಧನೆಡೆಗಿನ ನಡೆಯನ್ನು ಅಷ್ಟೊಂದು ತೀವ್ರವಾಗಿ ಸಮರ್ಥಿಸಲಿಲ್ಲ. ಇಲ್ಲಿ ಢಸಾಳರು ಮಾರ್ಕ್ಸವಾದಿಗಳ ಮೂಲ ಸಿದ್ಧಾಂತವಾದ ವರ್ಗ ಸಂಘರ್ಷ ಮತ್ತು ಆರ್ಥಿಕ ಆಭಿವೃದ್ಧಿ ಮೂಲಕ ಅಸ್ಪೃಶ್ಯತೆಯ ನಿರ್ನಾಮ ಹಾಗೂ ಜಾತಿವಿನಾಶದ ಕನಸನ್ನು ಕಂಡರು.
ಎಪ್ಪತ್ತರ ದಶಕದಲ್ಲಿ ತಮ್ಮ ಬೆಂಕಿಯುಗಳುವ ಕವಿತೆಗಳನ್ನು ಕುರಿತು ’ಕವಿತೆಗಳು ಬುಲೆಟ್‌ನಂತಿರಬೇಕು, ಅವುಗಳನ್ನು ಸರಿಯಾಗಿ ಗುರಿಯಿಡಬೇಕು,ಅವುಗಳನ್ನು ಸ್ನೇಹಿತರಿಗಾಗಿ ಬಳಸಬೇಕು’ ಎಂದು ಹೇಳಿದ್ದರು. ಅವರ ಮೊದಲ ಕವನ ಸಂಕಲನ ’ಗೋಳಪಿತ’ದ ಮೂಲಕ ಮರಾಠಿ ಸಾಹಿತ್ಯವನ್ನೇ ಬೆಚ್ಚಿಬೀಳಿಸಿದ್ದರು. ಅದರ rawness & intense & unorthodox ಶೈಲಿ ಇಡೀ ಮರಾಠಿ ಸಾಹಿತ್ಯಕ್ಕೆ ನೀಡಿದ ಆ ಮಹಮದ್ ಅಲಿ ಪಂಚ್ ಐತಿಹಾಸಿಕವಾದ್ದು. ತಮ್ಮ ಕವಿತೆಗಳ ಮೂಲಕ ಮೌನವಾಗಿ ಬೇಯುತ್ತಿದ್ದ ದಲಿತರಿಗೆ ಧ್ವನಿಯಾಗಿದ್ದಲ್ಲದೆ ಮಧ್ಯಮವರ್ಗದ ಮರಾಠಿ ಮಾನೂಸ್‌ರನ್ನು ಕಾಮಟೀಪುರದ ಸ್ಲಂನ ಕ್ರೌರ್ಯಕ್ಕೆ, ತಳಸಮುದಾಯಗಳ ದಯನೀಯ ಬುದುಕಿಗೆ, ಹಿಜಡಾಗಳ ನೋವಿಗೆ ಮುಖಾಮುಖಿಯಾಗಿಸಿದ್ದರು ಢಸಾಳ. ಇದು ಅಂಬೇಡ್ಕರವಾದದ ಬುದ್ಧನಡೆಗಿನ ನಡೆಯ ಮೂಲಕ ಜಾತಿವಿನಾಶ ಮತ್ತು ದಲಿತರ ಆತ್ಮಾಭಿಮಾನದ ಕನಸಿಗೆ, ಚಿಂತನೆಗೆ ವ್ಯತಿರಿಕ್ತವಾಗಿತ್ತು. ಕಡೆಗೆ ಢಸಾಳರು ೧೯೭೭ರಲ್ಲಿ ದಲಿತರ ಪರವಾಗಿ ಇಂದಿರಾಗಾಂದಿಯವರನ್ನು ಬೆಂಬಲಿಸುವುದರೊಂದಿಗೆ ದಲಿತ ಪ್ಯಾಂಥರ್‍ಸ ಇಬ್ಭಾಗವಾಯಿತು.
ಆ ದಿನಗಳನ್ನು ಢಸಾಳರ ಅಪ್ತ ಸ್ನೇಹಿತ ದಿಲೀಪ್ ಚಿತ್ರೆ ಅವರಿಂದಲೇ ಕೇಳಬೇಕು. ಕಡೆಗೆ ಢಸಾಳರು ಇಂಡಿಯಾದ ಕಮ್ಯನಿಷ್ಟರ ಕುರಿತಾಗಿಯೂ ತೀವ್ರ ನಿರಾಸೆ ಹೊಂದಿದ್ದರು. ಎಪ್ತತ್ತರ ದಶಕದಲ್ಲಿ ಶಿವಸೇನೆಯ ಪುಂಡಾಟಿಕೆಯ ವಿರುದ್ಧ, ದೌರ್ಜನ್ಯದ ವಿರುದ್ಧ ದಲಿತ್ ಪ್ಯಾಂಥರ್ಸ್ಸನ ಮೂಲಕ ನಿರಂತರವಾಗಿ ಹೋರಾಡಿದ್ದ ಢಸಾಳ ತೊಂಬತ್ತರ ದಶಕದ ಹೊತ್ತಿಗೆ ಶಿವಸೇನೆಯೊಂದಿಗೆ ಗುರುತಿಸಿಕೊಂಡು ಅದರ ಮುಖವಾಣಿ ಸಾಮ್ನ ಪತ್ರಿಕೆಗೆ ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದರು. ಇದು ಅವರ ಅಭಿಮಾನಿಗಳನ್ನು, ಗೆಳೆಯರನ್ನು ಷಾಕ್‌ಗೊಳಿಸಿತ್ತು. ಢಸಾಳರ ಒಟ್ಟಾರೆ ರಾಜಕೀಯ ನಡೆಗಳು ದಯನೀಯವಾಗಿ ಸೋಲುತ್ತಿದ್ದದ್ದು ಅವರ ಆತ್ಮಶಕ್ತಿಯನ್ನೇ ನಾಶಮಾಡಿತ್ತು. Skin yourself ಎಂದು ಬರೆದ ನಾಮದೇವ ಢಸಾಳ ಮತ್ತು ದಲಿತ ಪ್ಯಾಂಥರ್ಸ್ಸ್‌ನ ಇತಿಹಾಸವನ್ನು ಮತ್ತೊಮ್ಮೆ ಹೊಸ ದೃಷ್ಟಿಕೋನದಲ್ಲಿ ಪುನ ಅಧ್ಯಯನ ಮಾಡಬೇಕು.