‘ಬಿಗ್ ಕನ್ನಡ’ ಕ್ಕಾಗಿ ಪ್ರಕಾಶ್ ಮಂಟೇದ ಅವರು ಬರೆದ ಲೇಖನದಲ್ಲಿ ತಾವು ಕಂಡದ್ದನ್ನು ಬರೆದುಕೊಂಡಿದ್ದಾರೆ. ಅವರು ಬರೆದುಕೊಂಡಿರುವ ಕೆಲವಾರು ಸಂಗತಿಗಳು ಅವರ ಊರಿಗಷ್ಟೇ ಸೀಮಿತವಲ್ಲ ಎಂಬುದು ಸ್ಪಷ್ಟ. ಏಕೆಂದರೆ, ಪ್ರಕಾಶ್ ಮಂಟೇದ ಅವರು ಬರೆದುಕೊಂಡಂತೆ ಕಂಡ ಅನುಭವವನ್ನು ಬಹುಪಾಲು ಎಲ್ಲ ಊರುಗಳಲ್ಲಿಯೂ ಕಾಣಬಹುದಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ನನ್ನ ಊರಲ್ಲಿ ನಾನು ಕಂಡ ಕೆಲ ಅನುಭವಗಳನ್ನು ಹಂಚಿಕೊಳ್ಳುವುದು ಸೂಕ್ತವೆನಿಸುತ್ತದೆ.

ನನ್ನ ಊರು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು, ಪಿ.ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ‘ಕಡೇಹುಡೆ’ ಗ್ರಾಮ. ಇದು ಕರ್ನಾಟಕದ ಸೆರಗು, ಆಂಧ್ರಕ್ಕೆ ಚಾಚಿಕೊಂಡಿರುವಂತ ಗಡಿ ಪ್ರದೇಶದ ಊರು. ಇಲ್ಲಿ ಏಳನೇ ತರಗತಿವರೆಗೆ ಶಾಲೆಯಿದ್ದು. ಲಿಂಗಾಯತ, ಒಕ್ಕಲಿಗ, ಕುರುಬ, ಅಗಸ, ಉಪ್ಪಾರ, ಗೊಲ್ಲ, ನಾಯಕ, ಭೋವಿ ಹಾಗೂ ಮಾದಿಗ ಸಮುದಾಯದವರು ವಾಸಿಸುತ್ತಿದ್ದಾರೆ. ಈ ಶಾಲೆಯಲ್ಲಿ ಈ ಎಲ್ಲಾ ಜಾತಿಯ ಮಕ್ಕಳು ಕಲಿಯುತ್ತಾರೆ. ಜನಸಂಖ್ಯೆಯಲ್ಲಿ ಮಾದಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು ನಂತರ ಸ್ಥಾನದಲ್ಲಿ ಭೋವಿಗಳು, ನಾಯಕರು ಹಾಗೂ ಇತರೆ ಸಮುದಾಯದವರಿದ್ದಾರೆ. ಶಾಲೆಯಲ್ಲಿಯೂ ಮಾದಿಗರ ಮಕ್ಕಳು ಮತ್ತು ಭೋವಿಗಳ ಮಕ್ಕಳೇ ಹೆಚ್ಚಿನವರಾಗಿ ಕಲಿಯುತ್ತಿದ್ದಾರೆ.
ಅಸ್ಪೃಶ್ಯತೆ ಎಂಬುದು ಭಾರತದ ನೆಲದಲ್ಲಿ ಹಾಸುಹೊದ್ದು ಮಲಗಿರುವ ಕೆಟ್ಟ ಪದ್ಧತಿ. ಇದಕ್ಕೆ ನನ್ನ ಹಳ್ಳಿಯೇನು ಹೊರತಾದುದಲ್ಲ. ಊರಲ್ಲಿ ಮಾದಿಗರನ್ನು ನೋಡುವ ಜಾತಿ ದೃಷ್ಟಿ ಎಲ್ಲ ಜಾತಿಯವರಿಗೂ ಸಮಾನವಾಗಿಯೇ ಹಂಚಿಕೆಯಾದುದಾಗಿತ್ತು. ಉತ್ಸವ, ಜಾತ್ರೆ, ಊರಿನ ಅದಾವುದೇ ಆಚರಣೆಯಾಗಿರಲಿ ನಮಗೆ ನಿಗದಿಯಾದ ಸ್ಥಾನಮಾನದಲ್ಲಷ್ಟೇ ತೊಡಗಿಸಿಕೊಳ್ಳುವುದು ವಾಡಿಕೆಯಾಗಿತ್ತು. ಅದು ದೇವಸ್ಥಾನದಲ್ಲಿನ ಪೂಜೆಯಾಗಿರಬಹುದು ಆರತಿ, ಮೆರವಣಿಗೆ, ನೀರನ್ನು ಹೊತ್ತು ತರುವುದು ಹೀಗೆ ಎಲ್ಲದರಲ್ಲಿಯೂ ಮಾದಿಗರು ಪ್ರತ್ಯೇಕವೆಂಬುದು ನಮಗಾರಿಗೂ ಅರಿವಿಗೆ ಬರದೆ ಒಪ್ಪಿಕೊಂಡು ಬಂದದ್ದು ರೂಢಿಗತವಾಗಿತ್ತು.

ಮಾದಿಗರು ಎಲ್ಲಾ ಜಾತಿಯವರೊಟ್ಟಿಗೂ ಭಯ-ಭಕ್ತಿಯಿಂದಲೇ ನಡೆದುಕೊಂಡು ಬಂದವರಾಗಿದ್ದರು. ಮತ್ತು ನಮಗೆ ಊರ ದೇವಸ್ಥಾನ ಹಾಗೂ ಊರಿನ ಯಾರ ಮನೆಗಳಿಗೂ ಪ್ರವೇಶವಿರುತ್ತಿರಲಿಲ್ಲ. ನಮ್ಮನ್ನು ಅಸ್ಪೃಶ್ಯರನ್ನಾಗಿ ಕಾಣುತ್ತಿದ್ದ ಬಗೆಯಲ್ಲಿ ಯಾವ ಜಾತಿಯವರಿಂದಲೂ ವಿನಾಯಿತಿಯೇನು ಇರಲಿಲ್ಲ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿಯವರಾದ ಭೋವಿಯವರಿಂದಲೂ ಕೂಡ ಕಠಿಣವಾದುದಾಗಿತ್ತು. ಅದು ಇತರೆ ಎಲ್ಲ ಜಾತಿಗಳಿಗಿಂತಲೂ ಒಂದು ಕೈ ಮಿಗಿಲೆಂಬಂತೆ ಭೋವಿ ಜನಾಂಗಕ್ಕೂ ಮಾದಿಗರಿಗೂ ಕಟ್ಟುಪಾಡಾಗಿತ್ತು. ಇತರೆ ಎಲ್ಲ ಜಾತಿಯ ಮನೆಗಳಿಗೂ ಅಂದರೆ ಅವರ ಮನೆಯ ಹೊಸ್ತಿಲದವರೆಗೂ ಪ್ರವೇಶವಿದ್ದಿತು.(ಹಜಾರದ ಕೆಳಗೆ ಅವರು ಚಪ್ಪಲಿ ಬಿಡುವ ಜಾಗದಲ್ಲಿ ಹೊಸ್ತಿಲವರೆಗೂ ಆತು ಕುಳಿತು ನಾವೆಲ್ಲ ಮಾದಿಗರುಡುಗರು ಟಿ.ವಿ ನೋಡುತ್ತಿದ್ದೆವು) ಆದರೆ, ಭೋವಿ ಜನಾಂಗದ ಕೇರಿಯಲ್ಲಿ ಸ್ವಲ್ಪ ದೂರದವರೆಗು ಮಾತ್ರ ಪ್ರವೇಶವಿತ್ತು. ಅದು ಸಾರ್ವಜನಿಕ ಜಗ್ಗುವ ಬೋರ್ವೆಲ್ ಇದ್ದಿದ್ರಿಂದ ಮಾತ್ರ, ಅದರ ಮುಂದಕ್ಕೆ ಪ್ರವೇಶವಿರಲಿಲ್ಲ. ನನ್ನ ಅನುಭವದಲ್ಲಿ, ನಾನು ಶಾಲೆಯಲ್ಲಿ ಓದುವಾಗ ನಮ್ಮ ಶಾಲೆಯಲ್ಲಿ ಜಯಂತಿಗಳನ್ನು ಆಚರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳು ಊರ ತುಂಬ ಮೆರವಣಿಗೆಯನ್ನು ಹೋಗಬೇಕಾಗಿತ್ತು. ಮೆರವಣಿಗೆ ಭೋವಿ ಕಾಲೋನಿಗೆ ಬಂದಾಗ ಕಾಲೋನಿಯ ಕೇಂದ್ರ ಭಾಗದಲ್ಲಿ ದೇವಸ್ಥಾನವನ್ನು ಸುತ್ತಿ ಬರಬೇಕಾಗಿತ್ತು. ಆಗ ಮಾದಿಗ ಸಮುದಾಯದ ವಿದ್ಯಾರ್ಥಿಗಳಾದ ನಾವು, ಯಾರೂ ಕೂಡ ನಮ್ಮನ್ನು ತಡೆದು ನಿಲ್ಲಿಸದೆಯೂ ಹಿಂದೆ ಸರಿದು ನಿಂತುಕೊಳ್ಳಬೇಕಾಗಿತ್ತು. ಮೆರವಣಿಗೆಯ ಸಾಲು ದೇವಸ್ಥಾನ ಸುತ್ತಿ ಬಂದ ನಂತರ ನಾವು ಸಾಲನ್ನು ಸೇರಿಕೊಳ್ಳುತ್ತಿದ್ದೆವು. ಹೀಗೆ ಭೋವಿ ಕಾಲೋನಿಯ ದೇವಸ್ಥಾನದ ಸಮೀಪ ಹೋಗುವುದು ಅಘೋಷಿತವಾಗಿ ನಿಷೇಧವಿತ್ತು.

ಜೀತದ ಕೂಲಿಗಷ್ಟೇ ಸೀಮಿತರಾಗಿ ಬದುಕುತ್ತಿದ್ದ ನಮ್ಮವರು, ಒಂದು ಹಂತದಲ್ಲಿ ಜೀತದಿಂದ ಮುಕ್ತಿ ಪಡೆದು ಕೂಲಿಯೇ ಮೇಲಾಗಿ ತಮ್ಮ ಬದುಕಿನ ಕ್ರಮದಲ್ಲಿ ತಾವು ಹೊಂದಿದ್ದ ಭಯಭಕ್ತಿಯಲ್ಲಿಯೂ ಕೊಂಚ ಬದಲಾವಣೆಯನ್ನು ತಂದುಕೊಂಡಿದ್ದರು. ಹೀಗಿದ್ದು ಅಸ್ಪೃಶ್ಯರ ಬದಲಾವಣೆಯನ್ನು ಊರಲ್ಲಿ ಹೇಗೆ ಸಹಿಸಿಯಾರು! ಜಾತ್ರೆ ಉತ್ಸವಗಳಲ್ಲಿ ನಮ್ಮನ್ನು ಸಹಿಸದೆ ಕಾಲು ತುಳಿದು ಜಗಳಕ್ಕೆ ಬರುವ ಹಾಗೆ ಬರುತ್ತಿದ್ದರು. ಸಣ್ಣ ಸಣ್ಣ ಸಂಘರ್ಷಗಳು ನಡೆಯುತ್ತಾ ಬಂದು ಇದು ಸಾಮಾನ್ಯವೆಂಬಂತಾಯಿತು. ಮಾದಿಗರು ಮತ್ತು ಭೋವಿಗಳ ನಡುವಿನ ಸಂಘರ್ಷವೂ ಕೂಡ ಭಿನ್ನವಾದದ್ದೇನಲ್ಲ. ಸ್ವಲ್ಪ ಹೆಚ್ಚೇ ಎಂಬಂತೆ, ಮಾದಿಗರ ಮನೆಗಳು ಭೋವಿಯವರ ಜಮೀನಿಗೆ ಹೊಂದಿಕೊಂಡು ಇದ್ದದ್ದು ಅವರಿಗೆ ಸರಿ ಕಾಣದೆ ಮಾದಿಗರ ಮೇಲೆ ಜಗಳವು ಸಾಮಾನ್ಯವಾಗಿತ್ತು.

ನಾನು ಬಾಲ್ಯದಲ್ಲಿದ್ದಾಗ ನಡೆದದ್ದೊಂದು ಘಟನೆ ಏನೆಂದರೆ, ಮಾದಿಗರ ಹೆಂಗಸೊಬ್ಬಳೊಂದಿಗೆ ಭೋವಿಯ ವ್ಯಕ್ತಿಯೊಬ್ಬನ ಜತೆಗೆ ಅಕ್ರಮ ಸಂಬಂಧ ಹೊಂದಿದ್ದನೆಂಬ ಸುದ್ದಿ. ಇದರ ಪರಿಣಾಮವೆಂಬಂತೆ ತುಂಬಾ ಭೀಕರವಾದ ಅವಘಡವೊಂದು ನಡೆದಿತ್ತು. ಈ ಸಂಬಂಧ ಆ ವ್ಯಕ್ತಿಯ ಮನೆಯವರಿಗು ಬಂಧು ಬಾಂಧವರೆಲ್ಲರಿಗು ತಿಳಿದು ಗುಟ್ಟೇನುಯಿಲ್ಲ ಎಂಬಂತಾಯಿತು. ಒಂದು ದಿನ ರಾತ್ರಿ ಷಡ್ಯಂತ್ರದಿಂದಾಗಿ ಮಾದಿಗರ ಆ ಹೆಂಗಸಿನ ಗುಡಿಸಲಿಗೆ ಬೆಂಕಿ ಬಿದ್ದಿತು. ಈ ಸಂದರ್ಭದಲ್ಲಿ ಗುಡಿಸಲಿನಲ್ಲಿದ್ದ ಆ ಹೆಂಗಸು ಹೇಗೋ ಪಾರಾದಳು. ಆದರೆ, ಆಕೆ ಸಾಕಿಕೊಂಡಿದ್ದ ಮೇಕೆಗಳು ಮಾತ್ರ ಬೆಂಕಿಯಲ್ಲಿ ಗುಡಿಸಲಿನೊಟ್ಟಿಗೆ ಸುಟ್ಟು ಹೋಗಿದ್ದವು. ಬೆಂಕಿಯ ಕೆನ್ನಾಲಿಗೆ ಇತರೆ ಮನೆಗಳಿಗೂ ಚಾಚಿ, ದನ ಕರುಗಳಿಗೂ ಗಾಯಗಳಾಗಿದ್ದವು. ರಾತ್ರೋ ರಾತ್ರಿ ಬಿದ್ದ ಬೆಂಕಿಯಿಂದಾಗಿ ನಿದ್ದೆಯಲ್ಲಿದ್ದ ಜನ ಗಾಬರಿಗೊಂಡು ಸಿಕ್ಕ ಸಿಕ್ಕ ಕಡೆಯಿಂದ ನೀರು ತಂದು ತಂದು ಸುರಿದರು. ಅಷ್ಟೊತ್ತಿಗೆ ಗುಡಿಸಲು ಸುಟ್ಟುಹೋಗಿತ್ತು. ಗಾಬರಿಗೊಂಡ ಮಕ್ಕಳು ನಿಂತು ನೋಡುತ್ತಿದ್ದರು. ಬೆಂಕಿ ಇಟ್ಟವರ ಬಗ್ಗೆ ದೊಡ್ಡ ಸಂಶಯವಿದ್ದರೂ ಅವರನ್ನು ಯಾರು ಪ್ರಶ್ನೆ ಮಾಡುವ ಧೈರ್ಯವನ್ನು ಮಾಡಲಿಲ್ಲ. ಮತ್ತು ಊರಲ್ಲಿ ಈ ಘಟನೆ ಯಾರಿಗೂ ಮುಖ್ಯವಾಗಲಿಲ್ಲ. ಈ ಘಟನೆ ನಂತರ ಹೆಂಗಸು ಊರು ಬಿಡಬೇಕಾಯಿತು ಅವಳೊಟ್ಟಿಗೆ ಘಟನೆಯು ಮಾಸಿಹೋಯಿತು.

ಮತ್ತೊಂದು, ಇತ್ತೀಚೆಗೆ ಅಂದರೆ 8-10 ವರ್ಷಗಳ ಹಿಂದೆ ಮಾದಿಗರ ಹುಡುಗ ಮತ್ತು ಭೋವಿಯ ಹುಡುಗನೊಬ್ಬನು ಯಾವುದೋ ವೈಯಕ್ತಿಕ ವಿಚಾರಕ್ಕೆ ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ವಿಷಯ ಭೋವಿ ಕಾಲೋನಿಯ ಜನರಿಗೆ ತಿಳಿದು ಭೋವಿ ಕಾಲೋನಿ ತುಂಬ ದೊಡ್ಡ ಗುಲ್ಲೆದ್ದುಹೋಯಿತು. ಅಕ್ಷರಸಹ ಭೋವಿ ಕಾಲೋನಿಯ ಬಹುಪಾಲು ಎಲ್ಲ ತುಂಡ ತುಂಡ ಹುಡುಗರು ಮಾದಿಗರ ಹಟ್ಟಿಯ ಮೇಲೆ ದಾಳಿ ಮಾಡಿದರು. ಹೊಡೆದಾಡಿಕೊಂಡಿದ್ದ ಮಾದಿಗರ ಹುಡುಗನನ್ನು ಭಯದಿಂದ ಮನೆಯಲ್ಲಿ ಬಚ್ಚಿಟ್ಟು ಮನೆಗೆ ಬೀಗ ಹಾಕಲಾಯಿತು. ಇದಾವುದನ್ನು ಲೆಕ್ಕಿಸದೆ ಮನೆಯ ಮೇಲೆಲ್ಲಾ ಹತ್ತಿ ಮಾಡು, ಗವಾಕ್ಷಿ, ವಾರ್ಜಪ್ಪರಕ್ಕೆ ಹಾಕಿದ್ದ ಗರಿಯನ್ನೆಲ್ಲ ಕಿತ್ತು ಹಾಕಿ ಮಾದಿಗರ ಹಟ್ಟಿ ತುಂಬೆಲ್ಲ ಹೋಡಾಡಿ ಭಯವನ್ನು ಉಂಟು ಮಾಡಿದ್ದರು. ಆ ದಾಳಿ ಭಯಾನಕವಾಗಿತ್ತು. ದಾಳಿ ಮಾಡಿದ ಆ ಸಂದರ್ಭದಲ್ಲಿ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಆಡಿದ ಮಾತು ನನಗಿನ್ನೂ ಕಣ್ಣಿಗೆ ಕಟ್ಟಿದ ಹಾಗೆ ಕಿವಿಯಲ್ಲಿ ಗುಯ್ಗುಗುಡುವ ಹಾಗೆ ಈಗಲೂ ಇದೆ. ಅದೇನೆಂದರೆ “ಮಾದಿಗರ ಸೂಳೆ ಮಕ್ಕಳನ್ನು ಸದೆ ಬಡಿಯಬೇಕು” ಎಂದ ಮಾತು…

ಕೊನೆಯದಾಗಿ, ಯಾವುದೇ ಒಂದು ಸಮುದಾಯವನ್ನು ಅವಹೇಳನ ಮಾಡುವ ಉದ್ದೇಶ ಯಾರಿಗೂ ಇಲ್ಲ. ಹಾಗೆ, ಜಾತಿ ವ್ಯವಸ್ಥೆಯಿಂದಾಗಿ ಒಂದು ಕಾಲಘಟ್ಟದಲ್ಲಿ ತಂದೊಡ್ಡಿದ ನೋವು ಅವಮಾನಗಳನ್ನು ಕಂಡು ಬರೆಯುವುದು ಅಭಿವ್ಯಕ್ತಿಯ ನೆಲೆಯಲ್ಲಿ ತಪ್ಪೇನು!?

Leave a Reply

Your email address will not be published. Required fields are marked *