ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ರಾಜಕೀಯ ಲಾಭಕ್ಕೆ ಮಣಿದು ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೋಗುವ ಹೆದ್ದಾರಿಯಲ್ಲಿ ರಾತ್ರಿ ವೇಳೆಯಲ್ಲಿ ಸಂಚಾರ ಮಾಡಲು ಅನುಮತಿ ಕೊಡುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಕಳೆದ ವಯಾನಾಡ್ ಚುನಾಚಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ರಾತ್ರಿ ಸಂಚಾರಕ್ಕೆ ಅನುಮತಿ ಮಾಡಿಕೊಡುವ ಭರವಸೆಯನ್ನು ನೀಡಿದ್ದರು. ಈ ಪ್ರಿಯಾಂಕಾ ಗಾಂಧಿಯವರೂ ಕೂಡಾ ಭರವಸೆ ನೀಡಿದ್ದಾರೆ.ಅದರಂತೆ ಡಿಕೆ ಶಿವಕುಮಾರ್ ಕೂಡಾ ಇದರ ಬಗ್ಗೆ ಪರೀಶೀಲನೆ ನಡೆಸುವುದಾಗಿ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಡಿಕೆಶಿ ನಮ್ಮ ಪ್ರತಿನಿಧಿಗಳು ನನ್ನ ಹತ್ತಿರ ಚರ್ಚೆ ಮಾಡಿದ್ದಾರೆ.2 ಸರ್ಕಾರಗಳ ಜೊತೆ ಚರ್ಚೆ ಮಾಡ್ತೇವೆ.ರಾಜ್ಯದ ಹಿತವನ್ನು, ಜನರ ಹಿತವನ್ನು ಕಾಪಾಡಿಕೊಂಡು ಪರಿಶೀಲನೆ ಮಾಡ್ತೇವೆ ಎಂದಿದ್ದಾರೆ.
ಯದುವೀರ್ ಒಡೆಯರ್ ವಿರೋಧ
ವಯನಾಡ್ ಉಪಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ನಮ್ಮ ರಾಜ್ಯದ ನೈಸರ್ಗಿಕ ಸಂಪತ್ತಾದ ಬಂಡಿಪುರ ಅಭಯಾರಣ್ಯದ ಮಧ್ಯೆ ಹಾದು ಹೋಗುವ ಎನ್‌ಎಚ್ 766 ರ ರಾತ್ರಿ ಪ್ರಯಾಣ ನಿಷೇಧವನ್ನು ತೆಗೆದುಹಾಕುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇತ್ತೀಚೆಗೆ ಕೇರಳದಲ್ಲಿ ನೀಡಿರುವ ಹೇಳಿಕೆಯು ಬೇಜವಾಬ್ದಾರಿ ಮತ್ತು ಖಂಡನೀಯವಾಗಿದೆ.
ಬಂಡೀಪುರದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ವೈವಿಧ್ಯತೆಯು ಅದರೊಳಗೆ ಅಭಿವೃದ್ಧಿ ಹೊಂದುತ್ತಿರುವ ವಿವಿಧ ಪ್ರಭೇದಗಳ ವನ್ಯಜೀವಿಗಳಿಗೆ ಸೇರಿದ ಸಂಪತ್ತು. ಈ ಅಭಯಾರಣ್ಯದ ಮೂಲಕ ರಾತ್ರಿ ಪ್ರಯಾಣಕ್ಕೆ ಅವಕಾಶ ನೀಡುವುದರಿಂದ ವನ್ಯಜೀವಿಗಳಿಗೆ ಅಪಾಯವಿದೆ ಮತ್ತು ಮಾನವ-ವನ್ಯಜೀವಿ ಸಂಘರ್ಷಕ್ಕೆ ಇದು ಎಡೆ ಮಾಡಿಕೊಡುತ್ತದೆ.
ಬೇರೆ ರಾಜ್ಯದಲ್ಲಿನ ಚುನಾವಣಾ ಲಾಭಕ್ಕಾಗಿ ಕರ್ನಾಟಕದ ವನ್ಯಜೀವಿಗಳಿಗೆ ಧಕ್ಕೆ ತರುವುದು ಸಮಂಜಸವಲ್ಲ. ನಮ್ಮ ಸರ್ಕಾರವು ಈ ಪರಿಸರ ವಲಯಗಳ ರಕ್ಷಣೆಯ ನಿಟ್ಟಿನಲ್ಲಿ ಯಾವುದೆ ರಾಜಿ ಮಾಡಿಕೊಳ್ಳದೆ ರಕ್ಷಿಸಬೇಕಾಗಿದೆ ಎಂದು ಮೈಸೂರಿನ ಸಂಸದ ಯದುವೀರ್ ಒಡೆಯರ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.