ಮನುಸ್ಮೃತಿಯು ಭಾರತವನ್ನು ವಿಶ್ವ ಗುರುವನ್ನಾಗಿಸುತ್ತದೆಯೆ? ಇದರ ಮೇಲೆ ಪ್ರಾಜೆಕ್ಟ್‌ ಮಾಡುವುದಕ್ಕೆ ನಿರ್ಧರಿಸಿರುವುದರ ಹಿಂದಿರುವ ಹುನ್ನಾರಗಳೇನು? ಇದರಲಿಂದ ಆಗಲಿರುವ ಅಪಾಯಗಳೇನು ಎಂಬದರ ಕುರಿತು ನೋಡೋಣ ಚರ್ಚಿಸೋಣ ಬನ್ನಿ…

ಮಾನ್ಯ ಪ್ರಧಾನಿಗಳು, ಭಾರತವು ವಿಶ್ವಗುರು ಆಗಲಿದೆ ಎಂದು ಅಧಿಕಾರಕ್ಕೆ ಬಂದಾಗಿನಿಂದಲೂ, ಅವಕಾಶ ಸಿಕ್ಕಾಗೆಲ್ಲಾ ಭಾಷಣ ಮಾಡುತ್ತಾ ಬರುತಿದ್ದಾರೆ. ಆದರೆ ಅವರ ನಡೆ ಮತ್ತು ಸರ್ಕಾರದ ನೀತಿಗಳು ಮಾತ್ರ ಅದರ ತದ್ವಿರುದ್ಧವಾಗಿವೆ; ಅದು ಆರ್ಥಿಕ ಕ್ಷೇತ್ರದಲ್ಲಿರಬಹುದು, ವಿದೇಶಾಂಗ ನೀತಿಯಾಗಿರಬಹುದು ಅಥವಾ ಆಂತರಿಕ ವಿಷಯಗಳಿಗೆ ಸಂಬಂಧಿಸಿದಂತೆ ಇರಬಹುದು! ಇತ್ತೀಚಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯವು ಒಂದು ಪ್ರಾಜೆಕ್ಟ್ ಗೆ ಪ್ರಾಜೆಕ್ಟ್ ಫೆಲೋ ಹುದ್ದೆಗೆ ಜಾಹಿರಾತು ನೀಡಿದೆ. ಆ ಪ್ರಾಜೆಕ್ಟ್ ನ ಶೀರ್ಷಿಕೆ “Applicability of Manuusmrithi in Indian Society” (ಭಾರತದ ಸಮಾಜದಲ್ಲಿ ಮನುಸ್ಮೃತಿಯ ಅನ್ವಯಿಸುವಿಕೆ) ಎಂಬುದಾಗಿದೆ.

ಭಾರತದ ಸಂವಿಧಾನವು ಜಾತಿಯತೆ, ಅಸ್ಪೃಶ್ಯತೆ ಮತ್ತು ಮಹಿಳಾ ಶೋಷಣೆಯನ್ನು ನಿಷೇಧಿಸಿದೆ; ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಇವುಗಳನ್ನು ಪಾಲಿಸಿದರೆ ಅಥವಾ ಪ್ರೋತ್ಸಾಹಿಸಿದರೆ ಅದು ಅಪರಾಧವಾಗುತ್ತದೆ. ಹಾಗಾಗಿ ಅವರ ಮೇಲೆ ಕಾನೂನು ಕ್ರಮವನ್ನು ಜರುಗಿಸಬಹುದು. ಆದರೆ ಇಲ್ಲಿ ಒಂದು ವಿಶ್ವವಿದ್ಯಾಲಯವು ಮುಕ್ತವಾಗಿ ಜಾತಿಯತೆ, ಅಸ್ಪೃಶ್ಯತೆ ಮತ್ತು ಮಹಿಳಾ ಶೋಷಣೆಯನ್ನು ಮತ್ತು ಮಹಿಳಾ ವಿರೋಧಿ ಧೋರಣೆಯನ್ನು ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವ ದೇಶದ್ರೋಹಿ ಮತ್ತು ಮಾನವ ವಿರೋಧಿ ಗ್ರಂಥವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ತೀರ್ಮಾನ ನೋಡಿದರೆ, ನಮ್ಮ ದೇಶ‌ ಎತ್ತ ಸಾಗುತ್ತಿದೆ ಎಂಬ ಅನುಮಾನವು ಮೂಡುತ್ತದೆ. ಇಂತಹ ನಿಲುವು ಮತ್ತು ತೀರ್ಮಾನಗಳು ನಮ್ಮ ದೇಶವನ್ನು ಹೇಗೆ ವಿಶ್ವಗುರು ಮಾಡಬಲ್ಲವು ಎಂಬ ಪ್ರಶ್ನೆಗಳು ಮೂಡುತ್ತವೆ. ಜೊತೆಗೆ ಜ್ಞಾನ ಕೇಂದ್ರಗಳಾಗಬೇಕಿದ್ದ ವಿಶ್ವವಿದ್ಯಾಲಯಗಳು ಹೇಗೆ ದೇಶದ್ರೋಹಿ ಹಾಗು ಅಜ್ಞಾನ ಕೇಂದ್ರಗಳಾಗಿ ಪರಿವರ್ತನೆ ಗೊಳ್ಳುತ್ತಿವೆ ಹಾಗು ಸರ್ಕಾರಗಳು ಈ ರೀತಿಯ ಅವಿವೇಕಿ ಮತ್ತು ದೇಶದ್ರೋಹಿ ನಡೆಗಳನ್ನು ನೋಡಿ ಸಮ್ಮತಿ ಸೂಚಿಸುವಂತೆ ಮೌನವಾಗಿವೆ ಎಂದು ಆತಂಕವಾಗುತ್ತದೆ !

ಇಷ್ಟು ನೇರವಾಗಿ ಇವರು ಸಂವಿಧಾನ ವಿರೋಧಿ ತೀರ್ಮಾನಗಳನ್ನು ತೆಗೆದುಕೊಂಡು ಭಾರತದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತಿದ್ದಾರೆ. ಜೊತೆಗೆ ಇವರು ಜಾತಿ ಭಯೋತ್ಪಾದನೆಯನ್ನು ಕೇವಲ ನಮ್ಮ ದೇಶದಲ್ಲಿ ಮಾತ್ರ ಮಾಡುತ್ತಿಲ್ಲ. ಬದಲಾಗಿ ಇವರು ಎಲ್ಲೆಲ್ಲಿ ಹೋಗಿತ್ತಾರೋ‌, ಅಲ್ಲೆಲ್ಲಾ ತಮ್ಮ ಜೊತೆಗೆ ಜಾತಿ ರೋಗವನ್ನು ತೆಗೆದುಕೊಂಡು ಹೋಗಿ ಜಾತಿ ಭಯೋತ್ಪಾದನೆಯನ್ನು ಅಂತರಾಷ್ಟ್ರೀಯ ಸಮಸ್ಯೆಯನ್ನಾಗಿಸುತಿದ್ದಾರೆ. ತೀರಾ ಇತ್ತೀಚೆಗೆ ಅಮೇರಿಕಾದ ಸಿಯಾಟಲ್‌ ನಗರವು ಜಾತಿ ಪಕ್ಷಪಾತದ ವಿರುದ್ದ ನಿರ್ಣಯವನ್ನು ಮಂಡಿಸಿ ಇವರ ಮಾನವನ್ನು ಹರಾಜಾಕಿದೆ. ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ ಹಾಗೆ “ಇವರು ಜಗತ್ತಿನ ಬೇರೆ ದೇಶಗಳಲ್ಲಿ ಹೋಗಿ ನೆಲಸಿದರೆ ಜಾತಿಯು ಅಂತರಾಷ್ಟ್ರೀಯ ಸಮಸ್ಯೆಯನ್ನಾಗಿಸುತ್ತಾರೆ” ಎಂಬ ಭವಿಷ್ಯ ವಾಣಿಯು ಸತ್ಯವಾಗಿದೆ.

-ಹರಿರಾಮ್. ಎ
ವಕೀಲರು

Leave a Reply

Your email address will not be published. Required fields are marked *