ಬದುಕಿನ ಕಾಲು ದಾರಿಗಳಲ್ಲಿ ಸಾಗಿ ಬಂದವರ ಪ್ರಪಂಚದ ಕಾವ್ಯ ಮತ್ತು ಆಚರಣಾ ಲೋಕದ ಪ್ರತಿಮೆ ಈ ಕಂಡಾಯ. ಇದು ಈ ಕಾಲುದಾರಿ ಜನರ ಅರಿವೂ ಹೌದು, ಇವರ ಕಂಡ ವಿಶ್ವಪ್ರಜ್ಞೆಯ ಮಹೋನ್ನತವಾದ ಕುರುಹು ಸಹ ಆಗಿದೆ. ಇದು ನನ್ನಂಥವರಿಗೆ ಸದಾ ಸೋಜಿಗ. ಊರ ದಾರಿಗಳಲ್ಲಿ ಅಡ್ಡಾಡುತ್ತಿದ್ದ ಆ ಎಳೆವಯಸ್ಸಿನ ಕಿವಿಗೆ ಈ ಕಂಡಾಯ ಶಬ್ದ ಬಿದ್ದರೂ ಇದರ ಅರ್ಥ ನನಗ್ಯಾಕೆ ಎಂದು ತಲೆಕೆಡಿಸಿಕೊಳ್ಳದ ಏಜದು. ಆದರೆ ಅದೊಂತರ ಬೆಂಬಿಡದ ಶ್ರುತಿಯ ರೂಪವಾಗಿ ಮತ್ತೆ ಕನೆಕ್ಟ್ ಆದ ಬಗೆ ಇದೆಯಲ್ಲ, ಇದು ಒಂಥರ ಹೇಳಲಾಗದ ರೋಮಾಂಚನ. ನಾನು ಬೆಳೆದಂತೆಲ್ಲ, ಏನೋ ಒಂಥರದ ನನ್ನದೇ ಅರಿವು ನನ್ನೊಳಗೆ ಮೈಪಡೆದಂತೆಲ್ಲ ಈ ಕಂಡಾಯ ಮತ್ತು ಇದನ್ನು ಹೊತ್ತವರ ದಾರಿಗುಂಟ ಸಾಗಬೇಕೆನಿಸುತ್ತದೆ. ಯಾಕೋ ಈ ಬಗ್ಗೆ ಕಲಿತ ಜ್ಞಾನ ಮತ್ತು ಬೌದ್ಧಿಕ ಪ್ರವೃತ್ತಿಗಳ ವಿಶ್ಲೇಷಣಾ ಪರಿಭಾಷೆಯಲ್ಲಿ ಮಾತಾಡಲು ಮುಜುಗರವಾಗುತ್ತದೆ. ಏಕೆಂದರೆ ಇದು ನನ್ನ ಅಲ್ಲಮ ಹೇಳಿದಂತೆ ಒತ್ತಿ ಹಣ್ಣ ಮಾಡುವ ಬಗೆಯದ್ದಲ್ಲ.
ಅಕ್ಷರವನ್ನು ನಾವು ಮುಟ್ಟಿದಾಗ, ಅದು ನಮ್ಮಂಥವರನ್ನು ಮುಟ್ಟಿದಾಗ ಹುಟ್ಟುವ ಸಂವೇದನೆ ಮತ್ತು ಪ್ರಜ್ಞೆ ಬಗ್ಗೆ ಈಗಾಗಲೇ ನಮ್ಮ ಹಿರೀಕರೂ ಶಾನೆ ಹೇಳಿಹೋಗಿದ್ದಾರೆ. ಈ ಬಗ್ಗೆ ಸಾಮಾಜಿಕ ಆಕ್ರೋಶದ ನುಡಿಗಟ್ಟಲ್ಲಿನ್ನಾಗಲೀ ಅಥವಾ ಆ ಮೊದಲ ಸ್ಪರ್ಶದ ತಲ್ಲಣದ ಆವೇಗದಲ್ಲಾಗಲೀ ಮಾತಾಡಿದರೆ ಈಗ ಕೃತಕವೆನಿಸುತ್ತದೆ. ಈಗ ಈ ಬಗ್ಗೆ ಮತ್ತೆ ಮತ್ತೆ ಮಾತಾಡುವ ಅಗತ್ಯವಿಲ್ಲವಾದರೂ, ಆದರೂ ಈ ಅಕ್ಷರಕ್ಕೆ ನಮ್ಮಂತಹ ಜನಗಳ ಸ್ಪರ್ಶದಿಂದಾಗಿಯೂ ಇದಕೂ ಅಂತಃಕರಣ ದೊರಕಿ ಅದೂ ಒಳಗೊಳಗೆ ಪುಳಕಗೊಂಡಿರಬಹದು. ಮತ್ತೆ ಈ ಅಕ್ಷರ ನನ್ನಂಥವರಿಗೆ ಕೊಡುವ ಅರಿವು, ಅಂತಃಕರಣಗಳ ವಿಚಾರಗಳು ಕೇವಲ ಶೈಕ್ಷಣಿಕವಾಗಿಲಾರವೆಂಬುದು ನಿರ್ವಿವಾದಿತ ಸತ್ಯ. ಈ ಕಾರಣಕ್ಕಾಗಿಯೇನೋ ಬಾಬಾ ಸಾಹೇಬರು ಶಿಕ್ಷಣವೆಂಬುದು ಹುಲಿಯ ಹಾಲು ಎಂದು ಕರೆದಿರುವುದು.
ಕಂಡಾಯವು ಅನಾದಿಯಲ್ಲಿ ದನಿಯಿಲ್ಲದ ಜನಕೆ ಲೋಕ ಕಟ್ಟಿಕೊಟ್ಟಿದೆ. ಆದ್ದರಿಂದಲೇ ಈ ಕಂಡಾಯವು ದನಿಯಿಲ್ಲದ ಜನಗಳ ನಾಲಗೆಯ ಮೇಲೆ ಪದವಾಗಿದೆ. ಈ ಪರಿಗೆ ಚರಿತ್ರೆಯ ವ್ಯಾಖ್ಯಾನಕಾರರು ಏನೆನ್ನುತ್ತಾರೋ? ಚಿಕ್ಕಲ್ಲೂರ ಜಾತ್ರೆಗೆ ಕುರುಬನಕಟ್ಟೆಯಿಂದ ಎರಡು ಕಂಡಾಯಗಳು ಮೊದಲು ಬರಬೇಕು. ಅವು ಬಂದರೆ ಮಾತ್ರ ಜಾತ್ರೆ ಆರಂಭವಾಗುತ್ತದೆ. ಈ ಹೊತ್ತಿಗೆ ಜಾತಿ ಕಾರಣಕ್ಕೆ ಇವುಗಳು ಏನೇ ಆಗಿದ್ದರೂ ಇಂತಹ ನಡೆಗೆ ಕಾರಣವನ್ನು ಚರಿತ್ರೆಯ ಎದೆಸೀಳೀ ಹುಡುಕಿದರೆ ಅಲ್ಲೊಂದು ಕ್ರಾಂತಿಯೇ ಸಂಭವಿಸಿರಬಹುದು. ನಮ್ಮಜ್ಜಿ ನನಗೆ ನಾವು ಧರೆಗೆ ದೊಡ್ಡೋರು ಎಂದು ಹೇಳುತ್ತಿದ್ದಳು. ಹಾಗೆಂದರೇನು ಎಂದು ತಿಳಿಯುವ ಕುತೂಹಲವಿಟ್ಟುಕೊಳ್ಳುವಾಗಲೇ ಇತ್ತ ಹೊರಗಡೆ ದೊಡ್ಡೋರು ಎಂದರೆ ಹೊಲೆಯರು ಎಂಬ ಕುಹಕವೂ ಜಾತ್ಯಾಂದರಿಂದ ವ್ಯಕ್ತವಾಗುತ್ತಿತ್ತು. ಕಂಡಾಯ ಮೇಲಾದವರನ್ನು ಕೀಳಾಗಿಸಿತು. ಕೀಳಾದವರನ್ನು ಪರಂಜ್ಯೋತಿಯ ಜನರನ್ನಾಗಿಸಿತು. ಈ ಅರಿವು ಮೈಮನ ಸೋಂಕಿದಾಗ ನನ್ನಲ್ಲಿ ಹುಟ್ಟಿದ ಆಶ್ವರ್ಯ ಹಾಗೂ ಅನುಮಾನಗಳು, ಪ್ರಶ್ನೆಗಳು ಈಗಲೂ ಕಾಡುತ್ತವೆ. ಮತ್ತೆ ಇವು ನಮ್ಮದೇ ಗತದ ಭೂತವನ್ನರಸಬೇಕು ಎಂದು ಒತ್ತಾಯಿಸುತ್ತವೆ.
ಈ ವಿಮೋಚನೆ ಎಂಬ ಅರ್ಥವನ್ನು ತುಂಬಾ ಕಿರಿದುಗೊಳಿಸಿರುವ ನಮ್ಮ ಯಾವ ರಾಜಕೀಯ ಚಿಂತನೆಗಳ ಗೊಡವೆ ಇಲ್ಲದೆ ತಮ್ಮದೊಂದು ಲೋಕ ಕಲ್ಪನೆಯ ಕನಸ್ಸಿಟ್ಟುಕೊಂಡು ನಡೆಯುತ್ತಿರುವ ಈ ಅಜ್ಞಾತ ಜನರ ಅರಿವು ಈ ಕಂಡಾಯ ಎಂದು ಸುಮ್ಮನಾಗಲಿಕ್ಕಾಗದು. ಇದು ಆದಿ ಅನಾದಿಯಿಂದಲೂ ನನ್ನಯ್ಯಂದಿರು ನಾವು ಮನುಷ್ಯರು ಎಂದು, ನಿರ್ದಯಿ ಜಾತ್ಯಾಂಧರ ಎದೆಗೊದ್ದು ಹೇಳುವ ಪದ ಪದಕವೂ ಹೌದು, ಚರಿತ್ರೆಯ ಕುರುಹೂ ಹೌದು. ಬರಿಗಾಲಿಗೆ ಮೆಟ್ಟೊಲೆವ ಕೈಂಕರ್ಯವನ್ನು ಹೊತ್ತಿಕೊಂಡ ಜನರು ಇಡೀ ಮಾನವಪರಂಪರೆಯನ್ನು ಕಾಯುವ ಈ ಪರಿಗೆ ಕಾಳಿದಾಸನೋ, ನಾವೋ ನೀವೋ ಉತ್ತರಿಸಲೇಬೇಕಾಗುತ್ತದೆಯಲ್ಲವೆ? ಇದರ ಪ್ರತೀಕವಾಗಿಯೇ ಕಂಡಾಯ ಮೆರೆಯುತ್ತದೆ. ಈ ಕಂಡಾಯವು ಮೂರ್ತವೂ ಹೌದು ಅಮೂರ್ತವೂ ಹೌದು. ಈ ಎರಡೂ ಪದರುಗಳಲ್ಲಿಯೂ ಈ ಕಂಡಾಯ ತಿಪ್ಪೆ ಮೇಲಕ್ಕಸ್ಸಿ ಮಡುಗಿದರೂ ಉರಿಯುವಂತಹ ಪರಂಜ್ಯೋತಿಯೂ ಆಗಿ ಬೆಳಗುತ್ತದೆ.
ಪ್ರಕಾಶ್ ಮಂಟೇದ ಅವರ ಮಾದಾರ ಚನ್ನಯ್ಯ ಸ್ವಾಮೀಜಿಯೂ, ಮತ್ತವರ ಮೇಲುಜಾತಿಗಳ ಪಾದ ಪೂಜೆಯೂ… ಲೇಖನವನ್ನೂ ಓದಿ.
ಹಾದಿ ಬೀದಿ ತಿರುಗುವ ಆ ಚುಂಚನ ಗಿರಿಯ ಜೋಗಿಯ ಬಾಯಲ್ಲಿ ಭೈರವನನ್ನು ಹೆಚ್ಚು ಒಕ್ಕಲು ಕೊಡಪ್ಪ ಎಂದು ಭೈರವನನ್ನು ಕೇಳಿಕೊಳ್ಳುವ ಮಾತು ಬರುತ್ತದೆ. ಹಬ್ಬ ಹರಿದಿನಗಳಲ್ಲಿ ರೂಢಿಯಂತೆ ಜೋಗಿಯಾಗಿದ್ದ ಅಪ್ಪ ಭಿಕ್ಷೆಗೆ ಮನೆ ಮನೆಗೋಗಿ ಸಿಂಗ್ನಾದ ಊದಿ ಹೀಗೇಳುವಾಗ ಇದೇನು ಬೇಡುವ ಅಗತ್ಯವೇನಿದೆ ಎಂದು ಅನ್ನಿಸಿದ್ದರೂ ಈಗ ಭಿಕ್ಷೆ, ತಳಭಿಕ್ಷೆ, ಕಬ್ಬೀಣದ ಭಿಕ್ಷೆ ಎಂಬ ನೀಲಗಾರರ ಕಲ್ಪನೆಗಳು ಹೊಸ ಲೋಕಸಂವಾದ ಹುಟ್ಟು ಹಾಕುತ್ತವೆ ಹಾಗೂ ಈ ಲೋಕದ ನಂಟನ್ನು ಯಾವ ಶಂಕ್ರಚಾರಿಗೂ ಕಮ್ಮಿ ಇಲ್ಲದಂತೆ ದಾರ್ಶನಿಕಗೊಳಿಸುತ್ತವೆ. ಈ ಬಗ್ಗೆ ಕಣ್ಣು ತೆರೆದು ಬಾಬಾ ಸಾಹೇಬರನ್ನು ಓದುತ್ತಾ ಹೋದಂತೆಲ್ಲ ಹೆಚ್ಚು ರ್ಯಾಷಿನಲ್ ಆದರೂ, ಈಗ ಈ ಕಂಡಾಯ, ಸಿಂಗ್ನಾದ ಎಲ್ಲವೂ ನಮಗೆ ಈ ಕಾಲಕ್ಕೆ ವಿಮೋಚನೆಯ ಅಕ್ಷರಗಳಂತೆಯೇ ಗೋಚರವಾಗುತ್ತಿವೆ. ಕಂಡಾಯವೂ ಮೌಖಿಕ ಲೋಕದ ಬುದ್ದತ್ವದ ಅನೌಪಚಾರಿಕ ನೆಲೆ ಎನಿಸಿದೆ. ಏನೇ ಆದರೂ ಕಾಲಾಂತರದಲ್ಲಿಯೂ ಪದ ನಿಲ್ಲಿಸದ ಈ ನೀಲಗಾರರನ್ನು ಸರಿಯಾದ ದಿಟ್ಟಿ ಮಡುಗಿ ನೋಡಿದಾಗ ನಾಥರು, ಸಿದ್ದರೂ, ತಾಂತ್ರಿಕರು, ಶಾಕ್ತರು ಇವರೆಲ್ಲರೂ ಹಾಗೂ ಮತ್ತಿವರ ವೇಷಗಳ ಹಿಂದಿನ ತತ್ವಗಳಡಿಯಲ್ಲಿ ಚರಿತ್ರೆಯ ನಮ್ಮದೇ ಅರಿವು ಹಾಸು ಮಲಗಿದೆ ಎಂಬುದು ಅರಿವಿಗೆ ಬರುತ್ತಾ ಹೋಗುತ್ತದೆ.
ನನಗೆ ಇತ್ತೀಚೆಗೆ ತುಂಬಾ ಸಲ ಅನ್ನಿಸಿದೆ. ಈ ಅಪ್ಪನ ಕೆಂಪು ಜೋಳಿಗೆ ತ್ರಿಶೂಲ, ಭಿಕ್ಷಾಪಾತ್ರೆ ಎಲ್ಲವೂ ನಮ್ಮದೇ ಲೋಕ ರಚನೆಯ ಕಾವ್ಯದ ಇತಿಹಾಸದ ಅರಿವು ಮತ್ತು ಕುರುಹುಗಳೇ ಆಗಿವೆ ಎಂದು. ಹಾಗಾಗಿ ಒಂದು ಕಾಲದಲ್ಲಿ ನನಗೆ ಅಜ್ಞಾತರಂತೆ ಕಾಣುತ್ತಿದ್ದ ಈ ನಮ್ಮ ಜೋಗಿಗಳು, ನೀಲಗಾರರು, ಗುಡ್ಡರು, ದಾಸಯ್ಯಗಳನ್ನು ಕಂಡರೆ ಅಮೂರ್ತವಾದ ಸಂಬಂಧದ ಬಳ್ಳಿ ಚಿಗುರೊಡೆದುಬಿಡುತ್ತದೆ. ಅಕ್ಷರ ದಕ್ಕದಿದ್ದಾಗಲೂ ಜನ ಬದುಕುಳಿಯುವ ದುರಂತಗಳ ನೋವು, ಅವಮಾನಗಳ ಆಚೆಗೆ ʻಸೋಲಿಸಬೇಡ ಗೆಲಿಸಯ್ಯʼ ಎಂಬ ಮಾದಪ್ಪನ ಗುಡ್ಡರ ಪದಗಳು ಕೊಟ್ಟಿರುವ ವಿಶ್ವಾಸವು ಸಹ ದೊಡ್ಡ ಅರಿವಿನ ಚರಿತ್ರೆಯೇ ಆಗುತ್ತದೆ. ಈ ಬಗೆಯ ಮನವರಿಕೆಗಳ ಜೊತೆಗೆ ಹೊಸ ಕಾಲದ ಬದುಕಿನ ಶ್ರುತಿ ಹದಗೊಳಿಸಿಕೊಳ್ಳುವ ಹಂಬಲ ಮತ್ತು ಧೈರ್ಯಗಳನ್ನು ಒಡಮೂಡಿಸುವ ಚೇತನಧಾರೆಯು ಕತ್ತಲೊಡಲಿಂದಲೇ ಬೆಳಕು ಉದಯಿಸುವಂತೆ ಮಾಡುತ್ತದೆ.
ನನಗೆ ನಮ್ಮವ್ವನ ಅವ್ವ ನಂಜಮ್ಮನ ಕಣ್ಣುಗಳನ್ನು ನೋಡುತ್ತಿದ್ದರೆ ಏನೋ ಅವಳು ಯಾವುದೋ ಲೋಕವನ್ನು ಬಚ್ಚಿಟ್ಟುಕೊಂಡಿರುವಂತೆ ಕಾಣುತ್ತಿದ್ದವು. ನಾವು ಪಡೆದ ಶೈಕ್ಷಣಿಕ ಜ್ಞಾನ, ಬದುಕು ಮತ್ತೆಲ್ಲಿಗೋ ಕರೆದೊಯ್ದಾಗ ಕ್ಷಣ ನಿಂತು ಸ್ಮೃತಿಯೊಡಲಲ್ಲಿ ತೇಲಿದಾಗ ತೀರಾ ಒಬ್ಬಂಟೀತನದ ಕೊಂಪೆಯತ್ತ ಸಾಗುವ ಅವೇಗಗಳನ್ನು ನೂಕಿ ನಾವು ಮತ್ತದೇ ಊರ ದಾರಿಗಳತ್ತ ನೋಡಬೇಕೆನಿಸುತ್ತದೆ. ಅಕ್ಷರಲೋಕದ ತೀರದ ನಂಟಿನ ಹೆಜ್ಜೆ ಗುರುತಲ್ಲಿ ಮಾಸಿ ಹೋದಂತೆ ಕಂಡರೂ ಈ ನೆನಪು ನಮ್ಮದೇ ಜನ ಲೋಕದ ಕರುಳಬಳ್ಳಿ ವಾಸನೆ ಕವಿತೆಯಾಗಿ ಮೈಕಟ್ಟಿದರೂ, ಇದರಾಚೆಗೆ ಬಾಬಾ ಸಾಹೇಬ ಎಂಬ ನಮ್ಮ ದಿನಕರನ ಬೆಳಕು ನೆರಳುಗಳಲ್ಲಿ ಲೋಕಸಂವಾದ ಹೊಸ ಹುಟ್ಟು ಮೈಪಡೆಯುತ್ತದೆ. ಆಗ ʻಸಿದ್ದಯ್ಯ ಸ್ವಾಮಿ ಬನ್ನಿʼ ಎಂದು ಎಲ್ಲರನ್ನು ಕರೆದು ಕುಣಿಯಬೇಕೆನಿಸುತ್ತದೆ.
ನಮ್ಮ ಶೈಕ್ಷಣಿಕತೆ ಕೊಡುವ ವಿಚಾರ ಮತ್ತು ಮನುಷ್ಯ ಘನತೆಯ ಸಾಧ್ಯತೆಗಳು ಮೂಲಭೂತವಾಗಿ ಇನ್ನೂ ಇಮ್ಮಡಿಯಾಗದ ಸಂದರ್ಭದಲ್ಲಿ ನಾವಿದ್ದೇವೆ. ಜ್ಞಾನವು ಭೌತಿಕ ಬಲವಾಗುತ್ತಲೇ ನಮ್ಮೊಳಗೆ ಬೌದ್ಧಿಕತೆಯ ತೀವ್ರ ಹಂಬಲಗಳನ್ನೆಬ್ಬಿಸಬೇಕು. ಬಾಬಾ ಸಾಹೇಬರು ಹೊಸ ಜನಾಂಗದ ಹುಟ್ಟನ್ನು ಶಿಕ್ಷಣದಿಂದ ಆಶಿಸಿದ್ದರು. ಆದರೀಗ ಶಿಕ್ಷಣ ಜಡಮಂದಿಯನ್ನು, ಸ್ವಾರ್ಥಿಗಳನ್ನು, ಸುಖಲೋಲುಪತೆಯ ಅತಿ ವಾಸನೆಯ ಮಂದಿಗಳನ್ನು ತಯಾರಿಸುವ ಕಾರ್ಖಾನೆಯಾಗಿದೆ. ಈಗ ನಮ್ಮೆದುರು ಇರುವ ಮನುಷ್ಯತ್ವ ಹಾಗೂ ಮಾನುಷತನದ ಕಲ್ಪನೆ ಎಷ್ಟು ಕಿರಿದಾಗಿದೆ ಎಂದು ಆತಂಕವಾಗುತ್ತದೆ. ನಮ್ಮ ಮಾದೇಶ್ವರನ ಕಾವ್ಯದಲ್ಲಿ ಮಾದಪ್ಪನ ಹೂ ತರುವ ಪ್ರಸಂಗ ಬರುತ್ತದೆ. ಆತನ ಎದುರು ಕ್ರಿಮಿಕೀಟಗಳು ಕಾಣಿಸಿಕೊಂಡಾಗ ಅವುಗಳನ್ನು ಉದ್ದೇಶಿಸಿ ಅಪ್ಪ ʻಜೀವಗಳ ನೀವು ಹುಲುಮಾನವರ ಕಣ್ಣಿಗೆ ಕಾಣಿಸಬೇಡ್ರಪ್ಪ. ಅವ್ರು ನಿಮ್ಮನ್ನಾ ನಾಸ್ನ ಮಾಡ್ತಾರೆ ಕಣ್ಡ್ರಪ್ಪʼ ಅನ್ನೋ ಈ ಸನ್ನಿವೇಶವನ್ನು ತಂದಿರುವ ಮೌಖಿಕ ಲೋಕದ ಆ ಕವಿ ಮನಸ್ಸು ಏನನ್ನು ಧ್ಯಾನಿಸಿತ್ತು ಎಂದಾಗ, ನನಗೆ ಚಿಕ್ಕಲ್ಲೂರ ಜಾತ್ರೆ ನೆನಪಾಗುತ್ತದೆ. ಆ ಮನೆ, ಈ ಮನೆ ಎಲ್ಲರ ಮನೆಯ ಕಂಡಾಯಗಳು ಏಕವಾಗಿ ಮೆರೆವ ಪರಿಯಲ್ಲಿಯೇ ಸಕಲ ಜೀವಿಗಳ ತತ್ವಪ್ರತೀಕವಾಗಿ ಕಂಡಾಯ ಬೆಳಗುತ್ತದೆ. ಇದು ಯಾಕೆ ನಮ್ಮ ಅರಿವಿಗೆ ಬರುತ್ತಿಲ್ಲ ಎಂಬುದೇ ನಮ್ಮ ಈ ಹೊತ್ತಿನ ವಿಪರ್ಯಾಸ.
- ಪ್ರಕಾಶ್ ಮಂಟೇದ
ಕವಿ, ಲೇಖಕ, ಹಾಡುಗಾರರಾದ ಡಾ. ಪ್ರಕಾಶ್ ಮಂಟೇದ ದೊಡ್ಡಬಳ್ಳಾಪುರದ ಪ್ರಥಮದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅರಿವಿನ ಕಂಡಾಯದ ಬಗ್ಗೆ ಕುತೂಹಲವಿದೆ. ಕಂಡಾಯವೆಂದರೆ ಏನೆಂದು ಬಹಳ ಜನರನ್ನು ಕೇಳಿದೆ, ನಿಘಂಟು ಹಲವು ನೋಡಿದೆ, ತಿಳಿಯಲಿಲ್ಲ. ಚಿಕ್ಕಲ್ಲೂರು ಜಾತ್ರೆಯನ್ನು ನೋಡಿ ಬೆರಗಿನಲ್ಲಿ ಕಳೆದು ಹೋದದ್ದು ನಿಜ. ಆದರೆ ಕಂಡಾಯ ಮಾತ್ರ ಅರ್ಥವಾಗಲಿಲ್ಲ. ಕಂಡೆಯ ಅನ್ನುವ ಹತ್ತಿರದ ಪದವೊಂದು ಮಾತ್ರ ಸಿಕ್ಕಿತು, ಅದಕ್ಕೆ ಕಿರುಕತ್ತಿ ಎಂಬ ಅರ್ಥವಿದೆ. ನಾನು ಕಂಡ ಕಂಡಾಯಕ್ಕೂ ಈ ಅರ್ಥಕ್ಕೂ ಹೋಲಿಕೆ ಹೇಗೆ? ಧರೆಗೆ ದೊಡ್ವವರು ಎಷ್ಟು ದೊಡ್ಡವರೆಂದರೆ ಕಲ್ಯಾಣದಲ್ಲಿ ನಡೆಯುವ ಮೋಸವನ್ನೂ ಪತ್ತೆ ಹಚ್ಚಿದವರು. ಕಬ್ಬಿಣದ ಭಿಕ್ಷೆ ಬೇಡುವ ವಿವರ ಆಚಾರಿಗಳ ವಿವರ ಇದೆಯಲ್ಲ ಅವನ್ನು ನೋಡಿದರೆ ಕರ್ನಾಟಕದ ಸೀಮೆಯಲ್ಲಿ ಕುಲುಮೆಯನ್ನು ಬಳಸಿ ಆಯುಧಗಳನ್ನು ತಯಾರು ಮಾಡಲು ಆರಂಭಿಸಿದ ಕಾಲದ ಕಥೆ ಇಲ್ಲಿ ಅಡಗಿರಬಹುದು ಅನಿಸುತ್ತದೆ. ಧರೆಗೆ ದೊಡ್ವವರು ಮತ್ತು ಅವರ ಸಮುದಾಯ ಪಡೆದ ಕಸುಬಿನ ಜ್ಞಾನದ ಸೂಚನೆ ಇದೆಯೋ? ಜಗತ್ತಿನ ಇತಿಹಾಸದಲ್ಲಿ ಶೂ ಮೇಕರ್ಗಳು ಸದಾ ಕ್ರಾಂತಿಯ ಮುಂಚೂಣಿಯಲ್ಲಿದ್ದರು ಎಂದು ಯೂರೋಪಿನ ಚರಿತ್ರೆ ಗಮನಿಸಿ eric hobswam ಅದ್ಭುತ ಲೇಖನ ಬರೆದಿದ್ದಾನೆ. ಕನ್ನಡ ನೆಲದಲ್ಲೂ ಆಯುಧ ತಯಾರಿಕೆಯಲ್ಲಿ ಧರೆಗೆ ದೊಡ್ಡವರ ಸಮುದಾಯದ ಪಾತ್ರ ಇತ್ತು ಅನ್ನುವುದನ್ನು ಕಂಡಾಯ ಹೇಳುತ್ತಿರಬಹುದೋ ಏನೋ. ಅಥವಾ ಕುಶಲಕರ್ಮಿಗಳು ಮತ್ತು ತಳಸಮುದಾಯಗಳ ಹೆಣಿಗೆಯ ಕಥೆಯನ್ನು ಹೇಳುತ್ತಿದೆಯೋ? ನಮ್ಮ ಸಾಹಿತ್ಯ ಚರಿತ್ರೆಗಳೂ ಸಮಾಜ ಶಾಸ್ತ್ರಜ್ಞರೂ ಇಂಥ ವಿಚಾರಗಳ ಬಗ್ಗೆ ಗಮನ ಹರಿಸಿದ್ದು ಕಾಣೆ. ನಿಮ್ಮ ಬರಹಗಳನ್ನು ಕುತೂಹಲದಿಂದ ಓಡುತ್ತಿರುವೆ. ಥ್ಯಾಂಕ್ಸ್.
ಮೌಖಿಕ ಧಾರೆಯಲ್ಲಿ ಜನರು ಕಟ್ಟಿದ ಪರ್ಯಾಯಗಳನ್ನು ನಾವು ಹೊಸತಾಗಿ ಕಟ್ಟಿಕೊಳ್ಳಬೇಕಿದೆ. ಜಾನಪದ ಅಧ್ಯಯನಕ್ಕೆ ಆರಂಭಕ್ಕೆ ಪ್ರವೇಶ ಪಡೆದ ಮೇಲುಜಾತಿಯ ಸಂಶೋಧಕರು ಜನತೆಯ ಪರ್ಯಾಯದ ಕಡೆ ಗಮನಹರಿಸಲಿಲ್ಲ. ಎಲ್ಲವನ್ನೂ ರಮ್ಯವಾಗಿ ವರ್ಣಿಸಿ ಕೈತೊಳೆದುಕೊಂಡಂತಿದೆ. ಇದು ಇವರ ಕಾಲದ ಮಿತಿಯೂ ಇರಬಹುದು. ಈಗ ದಮನಿಯ ಸಮುದಾಯಗಳಿಂದ ಬಂದ ಯುವ ಸಮುದಾಯವೇ ಹೊಸ ಬಗೆಯ ಅಧ್ಯಯನ ವಿಶ್ಲೇಚಣೆಯನ್ನು ಶುರು ಮಾಡಬೇಕು. ಪ್ರಿಯ ಮಂಟೇದಾ, ಈ ಕಾಲಂ ನಲ್ಲಿ ಅಂತಹ ಸುಳಿವುಗಳನ್ನು ಹುಡುಕು. ಒಳಿತಾಗಲಿ
-ಅರುಣ್ ಜೋಳದಕೂಡ್ಲಿಗಿ
ಕಂಡದ್ದು ಹೇಳು ಕಂಡಾಯದ ಮುಂದೆ…
[…] ಇದನ್ನೂ ಓದಿ: ಅರಿವೆ ಕಂಡಾಯ ಮೊದಲ ಭಾಗ: ಧರೆಗೆ ದೊಡ್ಡವರ ಕಂ… […]