ಸಮಾಜ ಬದಲಾವಣೆ, ಕ್ರಾಂತಿಗಾಗಿ ಹಾಡು ಎಂಬ ಹಿನ್ನಲೆಯಲ್ಲಿ ಕಲೆ, ಸಾಹಿತ್ಯ ಹಾಗೂ ಸಿನಿಮಾ ಜಗತ್ತನ್ನು ನಾವು ನೋಡಲು ಶುರುಮಾಡಿದ್ದ ದಿನಗಳವು. ಅದರ ಜೊತೆ ತೆಳುವಾದ ಪುರುಷ ವಿರೋಧೀ ಸ್ತ್ರೀವಾದದ ಅಲೋಚನೆಗಳು ಹರಡಿಕೊಂಡಿದ್ದವು ಕೂಡ. ಮತ್ತೆ ದಲಿತ, ಬಂಡಾಯದ ಸಾಹಿತ್ಯ ಚಳವಳಿಯ ಕಲೆಗಾಗಿ ಕಲೆಯಲ್ಲ, ಕಲೆ ಸಾಮಾಜಿಕ ಬದಲಾವಣೆಗಾಗಿ ದನಿಯಾಗಬೇಕೆಂಬ ವಿಚಾರಗಳನ್ನು ನಂಬಿ ಮೈದುಂಬಿಕೊಂಡಿದ್ದ ಏಜಿನ ಕಾಲವದು. ಈ ತರದ ನನ್ನ ಸಾಹಿತ್ಯಕ ಮತ್ತು ಸಾಮಾಜಿಕ ವೀವ್ಸ್‌ಗಳ ನಂಬಿಕೆ ಹಾಗೂ ಅಂಡರ್ ಸ್ಡಾಡಿಂಗ್ನಲ್ಲಿ ನಾನು ಕ್ಲಾಸಿಕ್ ಅಂಬೋ ಸಾಹಿತ್ಯದ ಕೃತಿಗಳ್ನ ಓದ್ತಿರ್ಲಿಲ್ಲ. ರೋಡ್ ಟು ಲಿಟರೇಚರ್‌ಗೆ ಶರಣಾಗಿದ್ದೆ. ಅಲ್ಲದೆ ನನ್ನ ತಲೇಲಿ ಗದ್ದರ್ ಕುಳಿತಿದ್ದರು. ಹಂಗಾಗಿ ರೋಮಾಂಟಿಕ್ಕಾದ ಕವಿತೆ, ಕತೆ ಕಾದಂಬರಿಗಳ್ನ ಶುದ್ಧ ಸಾಹಿತ್ಯ ಅಂತ ನಾನು ಓದ್ತಾನೂ ಇರ್‍ಲಿಲ್ಲ. ಅಶುದ್ಧ ಕಾವ್ಯ ಹಾಗೂ ಸಾಹಿತ್ಯದ ಹುಚ್ಚು ತೀವ್ರವಾಗಿತ್ತು. ಎಲ್ಲವೂ ಕೊನೆಗಿಲ್ಲಿಗೆ ಎಂಬ ಫರ್ಮಾನು ಹೊರಡಿಸಿಬಿಟ್ಟಿದ್ದೆ ಕೂಡ.
ಆ ಹೊತ್ತಲ್ಲಿ ಪ್ರೇಮಗೀಮ ಎಂಬ ವಯೋಸಹಜ ಆಸೆಗಳು, ಬಯಕೆಗಳು ಏಳುವಂತಿದ್ದರೂ, ನಾನಿದ್ದ ಸ್ಥಿತಿ, ಮತ್ತೆ ನನ್ನಂಥವರನ್ನು ಯಾರು ಮೂಸುತ್ತಾರೆಂಬ ಕೀಳರಿಮೆಯಲ್ಲಿ ಇವು ಗೌಣವಾಗಿದ್ದರೂ ಕೂಡ, ಕತೆ, ಕಾದಂಬರಿ ಹಾಗೂ ಕವಿತೆಗಳಲ್ಲಿನ ಹೆಣ್ಣು ಗಂಡಿನ ಪ್ರಣಯ, ಲೈಂಗಿಕತೆ ಕುರಿತ ಸನ್ನಿವೇಶಗಳನ್ನು ಓದಿ ಒಳಗೊಳಗೆ ಸ್ಖಲಿಸಿಕೊಳ್ಳುವ ಮನೋತಿಮಿರು ಇದ್ದೇ ಇತ್ತು. ಆದರೂ ಇವುಗಳ ಆಚೆಗೆ ಸಾಹಿತ್ಯ, ವೈಚಾರಿಕತೆ ಹಾಗೂ ಕ್ರಾಂತಿಯ ಭ್ರಾಂತಿಯೊಳಗೆ ಇವು ಭೌತ್ತಿಕವಾಗಿ ನಮಗೆ ಸಾಧ್ಯವಾಗ್ತಿರಲಿಲ್ಲ. ಆದರೆ ಗುಂಪ್ನಲ್ಲಿ ಮಾತ್ರ ಗುಟ್ಟಾಗಿ ಲೈಂಗಿಕತೆ ಕುರಿತು ಮಾತಾಡಿಕೊಳ್ಳುವುದು ಇದ್ದೆ ಇತ್ತು. ಎಷ್ಟೇ ಆಗಲೀ ನನ್ನಂಥವರು ಇಂಡಿಯಾದ ಗಂಡಸರೇ ಅಲ್ಲವೆ? ಮುಕ್ತ ಲೈಂಗಿಕ ಸ್ವಚ್ಛಾಂಧಾಬಿವ್ಯಕ್ತಿ ಸಾಧ್ಯತೆಗಳ ಕೆಮಿಸ್ಟ್ರಿಯ ಪರಿವೇ ಇಲ್ಲದ ನಮ್ಮಂಥವರಲ್ಲಿ ಮುಕ್ತ ಪ್ರಣಯ, ಪ್ರೇಮ ಹಾಗೂ ಪೊದೆ ಸೀನುಗಳ ಪ್ರಸಂಗಗಳು ಎಲ್ಲಿಂದ ಬರಬೇಕು. ಮೇಲಾಗಿ ಜಾತಿ, ಬಣ್ಣ, ಆಕೃತಿಯ ಅಳತೆ, ಮಾನದಂಡಗಳ ಎದುರು ನನ್ನಂಥವರ ಆಸೆ, ಭಾವನೆ, ವಾಸನಾ ಪ್ರವೃತ್ತಿಗಳು ಗುಪ್ತವಾಗಿ ಸಾಹಿತ್ಯ ಕೃತಿಗಳಲ್ಲಿಯ ಸನ್ನಿವೇಶಗಳ ಲೈಂಗಿಕತೆ, ಪ್ರಣಯಗಳ ಕಲ್ಪನೆಗಳಲ್ಲಿಯೇ ಕರಗಿಹೋಗ್ತಿದ್ದವು.
ಜೊತೆಗೆ ಪ್ರೇಮವೂ ಕ್ರಾಂತಿಯೇ ಆಗಬೇಕೆಂಬ ಹಂಬಲಗಳಿದ್ದರೂ, ಆಗ ಈ ತರದಲ್ಲಿ ಯಾವ ಸನ್ನಿವೇಶಗಳು ಒದಗಿಬರಲಿಲ್ಲ. ಒಣಗಿದ ಅಳ್ಕೋಲಿನಂತಿದ್ದ ನನ್ನನ್ನು ಯಾವ ಹುಡ್ಗೀನು ಮೂಸಿ ನೋಡುವುದಿಲ್ಲ ಎಂದೇ ತೀರ್ಮಾನಿಸಿಬಿಟ್ಟಿದ್ದೆ. ಈ ಕಾರಣದಿಂದಲೇನೋ ನನ್ನ ಗಮನ ಸಾಹಿತ್ಯದ ಓದು, ಹಾಡು ಹಾಗೂ ನನ್ನ ವೈಚಾರಿಕ ಗೀಳುಗಳತ್ತಲೇ ಇರುತ್ತಿತ್ತು. ಮತ್ತೂ ಏನಂದರೆ, ಹಿಂಗೆ ಎಲ್ಲಾದರೂ ಹೊರಗೆ ಶಿಬಿರ, ಕಾರ್ಯಕ್ರಮ ಅಂತ ಹೋದ್ರೂ, ಹುಡ್ಗೀರ್ ಜೊತೆ ನನ್ಗೆ ಮಿಂಗಲ್ ಆಗಲು ಬರ್‍ತಿಲಿಲ್ಲ ಅನ್ಸುತ್ತೆ. ನನ್ನ ಹಳ್ಳಿ ಕಮಂಗಿತನದ ನಾಚ್ಕೆ ಸ್ವಭಾವವೂ ನಾನು ಓಪನ್ ಆಗಿ ಹುಡ್ಗೀರ ಬಳಿ ಮಾತಾಡಿ, ಕ್ಲೋಸಾಗದಂತೆ ಮಾಡ್ತಿತ್ತು. ಅಥವಾ ಹುಡ್ಗೀರ್‍ಗೆ ನನ್ನಂಥವರು ಅಟ್ರಾಕ್ ಆಗ್ತಿರಲಿಲ್ಲವೇನೊ. ಅಥವಾ ಆ ಹುಡ್ಗೀರ್ ನೋಡಿ ಅಯ್ಯೋ ಇವೆಲ್ಲ ನಮ್ಮಂಥವ್ರ ನೋಡ್ತವ ಅಂತ ಅನ್ಕೊಂಡು ಸುಮ್ಮನಾಗ್ತಿದ್ದೆ. ಆದ್ದರಿಂದಲೇನೊ ಇವನ್ನು ಬಿಟ್ಟು ಇವುಗಳ್ಗೆ ಪ್ಯಾರಾಲಲ್ಲಾಗಿ ಚರ್ಚೆ, ಓದು ಇವುಗಳಲ್ಲಿ ಬ್ಯುಸಿ ಆಗ್ಬಿಡ್ತಿದ್ದೆ.
ಇಂಥದ್ರು ನಡ್ವೆ ನಮ್ಮ ಕೆಲವ್ರು ಹುಡ್ಗೀರ್‍ನ ಪಟಾಯ್ಸೋದು, ಅದಕ್ಕೆ ಏನೇನೋ ಸರ್ಕಸ್ ಮಾಡೋದು, ಗಿಲೀಟ್ ಮಾಡಿದ್ರೂ ನನಗೆ ಅವು ಒಂಚೂರು ಗೊತ್ತಾಗ್ತನೆ ಇರ್‍ಲಿಲ್ಲ. ನಾನು ಅಂತಹ ಪೆಂಗನ ತರ ಟೂಬ್ಲೈಟಾಗಿದ್ದೆ. ನನ್ನ ಹಾಗೆ ಹಾಡದ, ವಿಚಾರ ಮಾಡದೆ ಅದೆಂಗೆ ಇವ್ರು ಈ ವಿಚಾರಗಳಲ್ಲಿ ನಿಸ್ಸೀಮರಾದ್ರು? ಆಗ ಹಳೆ ಸಂವಾದದ ಆಫೀಸಲ್ಲಿ ಈ ತರದವು ತುಂಬಾ ನಡ್ದಿದ್ದೊ ಅಂತ ಕೊನೆಗೆ ಯಾರೋ ಹೇಳ್ದಾಗ ಹೌದಾ ಎಂದು ನಾನು ಏನೂ ತೋಚದವನಂತಾಗಿಬಿಡುತ್ತಿದ್ದೆ. ಈಂಗಿದ್ದ ನಾನು ದೊಡ್ಡ ಗುಂಪಿನ ನಡುವೆ ತುಂಬ ಸಲ ಒತ್ತಾಯ ಮಾಡಿಸ್ಕೊಂಡು ಹಾಡ್ ಹೇಳ್ತಿದ್ದೆ, ಆಮೇಲೆ ಗುಂಪು ಚರ್ಚೇಲಿ ಏನಾದರೂ ಅಭಿಪ್ರಾಯ ಹೇಳಲು ನಿಂತರೆ, ಮೆತ್ತಗಿನ ದನೀಲಿ ಉದ್ದುದ್ದು ಗೋಜಲು ಗೋಜಲಾಗಿ ಕಾಮ, ಫುಲ್ಸ್ಟಾಪ್ ಇಲ್ದಂಗೆ ಎಮೋಷನಲಿ ಮಾತಾಡ್ಬಿಟ್ತಿದ್ದೆ. ಈಗ ನಾನು ಮಾಸ್ತರಿಕೆಯ ಗತ್ತಲ್ಲಿ ನನ್ನ ವಿದ್ಯಾರ್ಥಿಗಳ ಮುಂದೆ ನಿಂತರೂ, ನನ್ನ ತರಗತೀಲಿ ಹಳ್ಳಿ ಹುಡ್ಗರು ಸಹ ಅಂದಿನ ನನ್ನ ಹಾಗೆ ಮಾತಾಡೋದ್ನ ನೋಡಿ ನನ್ನ ಆ ಕುಬ್ಜತೆಯ ಕೆಮಿಸ್ಟ್ರಿ ದಿನಗಳು ನೆನಪಾಗ್ತವೆ. ಆಗ ನನ್ನ ಮೇಷ್ಟ್ರುಗತ್ತು ಕೃತಕವಷ್ಟೇ ಅಲ್ಲ ಅಸಹ್ಯಕರವಾಗಿಯೂ ಕಾಣುತ್ತದೆ.
ಜನತಾ ರಾಜ್ಯ ಎಂಬ ನಕ್ಸಲ್ ಚಳವಳಿ ಕುರಿತ ಕನ್ನಡ ಅನುವಾದ ಕೃತಿ ಓದಿದ್ದೆ. ಈ ಕಾದಂಬರಿಯ ನಾಯಕ ತನ್ನ ಸಿದ್ಧಾಂತಕ್ಕಾಗಿ ಹೋರಾಟವನ್ನು ತ್ಯಾಗವೆಂದು ಭಾವಿಸಿ, ಹಿಂಸೆಯನ್ನು ಸಮರ್ಥಿಸುತ್ತಿದ್ದರೆ, ಮತ್ತೊಂದೆಡೆ, ಆತನ ಪ್ರೇಯಸಿ ಇದೆಲ್ಲ ಬಿಟ್ಟು ಓಡಿ ಹೋಗೋಣ ಬಾ ಎಂದು ಹಿಂಸೆಯ ವಿರುದ್ಧ ರೋಸಿ ಹೋಗಿ ನಾಯಕನನ್ನು ಪರಿ ಪರಿಯಾಗಿ ಅಂಗಲಾಚುತ್ತಾಳೆ. ಆದರೆ ಆತ ಒಪ್ಪುವುದಿಲ್ಲ. ತನ್ನ ಹೋರಾಟಕ್ಕೆಲ್ಲ ತಾತ್ವಿಕ ಆದರ್ಶಗಳ ಸಮರ್ಥನೆ ನೀಡಿ, ಕೊನೆಗೆ ಆತ ತನ್ನ ಹೆಣ್ಣನ್ನು ಸ್ವಾರ್ಥಿ ಹಾಗೂ ಪಲಾಯನವಾದಿಯಂತೆ ನೋಡಿ, ಈ ಕ್ರಾಂತಿಕಾರಿಯೂ ಮಾಮೂಲಿ ಗಂಡಸರಂತೆ ಪ್ರತಿಕ್ರಿಯೆ ನೀಡುತ್ತಾನೆ. ಪ್ರೇಮವನ್ನು ಸಿನಿಕ್ಕಾಗಿ ನೋಡುವ ಕಾದಂಬರಿಯ ಆ ಕ್ರಾಂತಿಕಾರಿ ಆತ್ಮಹತ್ಯೆಯ ದಾರಿ ಆಯ್ದುಕೊಂಡಂತೆಯೇ ಎಂಬ ಅನುಮಾನಗಳು ನನ್ನ ಸಾಹಿತ್ಯದ ಓದಿನ ಕಾರಣದಿಂದಲೋ, ಏನೋ ಮನಸ್ಸಿನ ಅಜ್ಞಾತದ ಮೂಲೆಯಲ್ಲಿ ಚಿಗುರೊಡೆಯುತ್ತಿದ್ದವು.
ಅದೂ ಅಲ್ಲದೆ ಈ ನವೋದಯದವರ ಕಾದಂಬರಿ ಓದಿದರೆ ಆದರ್ಶ, ನೈತಿಕಬದ್ಧತೆ ಹಾಗೂ ಸಮಾಜ ಸುಧಾರಣೆಯ ನಾಯಕನ ಗೀಳು ಹತ್ತುತ್ತಿದ್ದವು. ಕುವೆಂಪುರವರ ಹೂವಯ್ಯನಂತಹ ನಾಯಕನಂತಹ ವ್ಯಕ್ತಿತ್ವದ ಗೀಳುಗಳು ಹುಟ್ಟಿಕೊಳ್ಳುತ್ತಿದ್ದವು. ಆದರೆ ಚೋಮನದುಡಿ ಇನ್ನೊಂದು ತರದ ದಲಿತ ಲೋಕವನ್ನು ತೆರೆದಿಟ್ಟಿತ್ತು. ಆದರೆ ಈ ನವ್ಯ ಕಾದಂಬರಿಗಳನ್ನು ಓದಿದರೆ ಏನೋ ಒಂತರ ಮುಲುಮುಲು, ಲೈಂಗಿಕ ಸೆಳೆತ ಹಾಗೂ ಮನುಷ್ಯರ ರಿಯಲ್ ಮ್ಯಾನರಿಸ್ಮನ ಸಿನಿಕತನ, ಎಸ್ಕೇಫಿಸಮ್ನ ಅನಾರ್ಕಿಸಮ್ ಅನಾವರಣಗಳಿಂದಾಗಿ ಇಷ್ಟ ಆಗ್ತಿದ್ದೊ. ಅದರಲ್ಲೂ ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಚಂದ್ರಶೇಖರ ಕಂಬಾರ ಹಾಗೂ ಅಗ್ರಹಾರ ಕೃಷ್ಣಮೂರ್ತಿ, ಈತರದ ಲೇಖಕರ ಕಾದಂಬರಿಗಳು ಒಂತರದ ವ್ಯಕ್ತಿ ವಿಶಿಷ್ಠತೆಯ ಅಲೋಚನೆಗಳ ಜೊತೆಗೆ ಲೈಂಗಿಕ ತುಮುಲಗಳನ್ನೂ ಎಬ್ಬಿಸುತ್ತಿದ್ದವು. ಅದರಲ್ಲೂ ಸಿಂಗಾರವ್ವ ಮತ್ತು ಅರಮನೆ ಕಾದಂಬರಿಯಲ್ಲಿ ದೊರಸಾನಿ ಸಿಂಗಾರವ್ವ ತನ್ನ ಜೀತದಾಳನ್ನು “ನನ್ನ ಹೊಲೆಯ, ನನ್ನ ಹೊಲೆಯ” ಅಂತ ಆತನನ್ನು ಬರಸೆಳೆದು ಅಪ್ಪಿಕೊಳ್ಳುವ ಸನ್ನಿವೇಶಗಳು ನನ್ನ ಗಂಟಲನ್ನು ಒಣಗಿಸಿ, ಗಂಗಾಧರ ಚಿತ್ತಾಲರು ತಮ್ಮ ಕಾಮಸೂತ್ರ ಪದ್ಯದಲ್ಲಿ ಹೇಳಿದಂತೆ ಯೋನಿಮುಖ ತೋರಿ ಒಳನೀರು ಕಡೆಯುತ್ತಿದೆ ಎನ್ನುವಂತೆ ಮಾಡುತ್ತಿದ್ದವು. ನಾನಂತು ಆ ಸನ್ನಿವೇಶಗಳು ಮತ್ತೆ ಮತ್ತೆ ಓದಿದ್ದಿದೆ.
ಕಾಮ ತೀವ್ರವಾದ ಪ್ರೇಮವಾಗಿ ಸಂಕರತೆಯನ್ನು ತರುವ ಕ್ರಾಂತಿಯ ಧಾತುವಾಗುತ್ತದೆ ಎಂಬ ತಿಳಿವನ್ನು ಕಂಬಾರರು ಚೆನ್ನಾಗಿ ಹೇಳಿದ್ದಾರೆ ಅನ್ನಿಸಿತು. ಅಲ್ಲದೆಯೇ ಗಂಡುಹೆಣ್ಣಿನ ಕಾಮ ಸಮಾಜದ ಉಲ್ಲಂಘನೆಗೆ ಚಾಲಕ ಶಕ್ತಿ ಎಂಬ ಪಾಸಿಟೀವ್ ನಂಬಿಕೆ ಹುಟ್ಟಿತು. ಕಾಮದ ಹಿಂದಿನ ಸೋಷಿಯಲ್ ಕೆಮಿಸ್ಟ್ರಿಯ ಸಮಾಜ ಬಚ್ಚಿಟ್ಟ ಅಸಲೀಮುಖಗಳ ಅನಾವರಣ ಈ ಕಾದಂಬರಿಗಳನ್ನು ಮತ್ತಷ್ಟು ನಿಕಟವಾಗಿ ಓದುವಂತೆ ಮಾಡಿತು. ಅಲ್ಲದೆ ಲಂಕೇಶರ ಅಕ್ಕ ಕಾದಂಬರಿಯ ಸ್ಲಮ್ನ ಕ್ಯಾತ ಮತ್ತು ಆತನ ಅಕ್ಕ, ಇವರನ್ನು ಸುತ್ತುವರೆದ ವಲ್ಗರ್ ಸಮಾಜದ ಅನೂಹ್ಯ ಚಿತ್ರಗಳ ಜೊತೆಗೆ ಈ ಕಾದಂಬರಿಯ ಓಪನೆಸ್ ಸನ್ನಿವೇಶಗಳು ನಮ್ಮ ಸುತ್ತಣವನ್ನು ಟಚ್ ಮಾಡುತ್ತಿದ್ದವು. ಉಳ್ಳವರ ಕಾಮಕೇಳಿಗಳು, ಇಂಡಿಯಾ ಬಚ್ಚಿಟ್ಟ ಕಾಮಾಟೀಪುರಗಳ ತೆರೆಗಳ ಅನಾವರಣ ಈ ಕಾದಂಬರಿಯಲ್ಲಿ ಆಗುತ್ತದೆ. ಲೈಂಗಿಕ ಸಂಬಂಧಗಳ ರಾಜಕಾರಣ, ನಮ್ಮ ಬಾನಗಡಿಗಳ ಗುಪ್ತ ಪರದೆ ಸರಿಸಿ ನಮ್ಮ ಸಮಾಜವೇ ಕಣ್ಮುಂದೆ ಬಂದಂತೆ ಶಾಕ್ ಎಬ್ಬಿಸುತ್ತಿದ್ದ ಕಾರಣಕ್ಕೆ ಈ ಕಾದಂಬರಿಗಳು ಆಕರ್ಷವಾಗಿ ಕಂಡಿದ್ದವು. ಈ ಶಾಕ್ ಕಾಮದ ಬಗೆಗಿನ ವಿಜೃಂಭಣೆಯಾಗಿರದೆ, ಸಮಾಜದ ಮರೆಯಲ್ಲಿ ಅವಿತ ಬಲಿಪಶುಗಳ ಲೋಕವನ್ನು ತೋರುತ್ತಿತ್ತು. ಅಲ್ಲದೆ ನಮ್ಮ ಬದುಕಿನ ಹಾರ್ಡ್ ರಿಯಾಲಿಟಿಗಳನ್ನು ಸೂಕ್ಷ್ಮವಾಗಿ ಹೇಳುವ ಕಾರಣಕ್ಕಾಗಿ ನನಗೆ ಇವು ತುಂಬಾ ಇಷ್ಟವಾಗುತ್ತಿದ್ದವು. ಅದರ ಜೊತೆಗೆ ಲಂಕೇಶರು ಅನುವಾದಿಸಿದ ಬೋದಿಲೇರ್ ಕವಿತೆಗಳ ಆಕರ್ಷಣೆ ಜೋರಾಗಿಯೇ ಇತ್ತು. ಇವುಗಳ ಜೊತೆಗೆ ದೋಪ್ಡಿ ಮತ್ತು ಇತರ ಕತೆಗಳು, ರುಡಾಲಿ, ಅಲ್ಬರ್ಟ ಕಮೂನ ಔಟ್ ಸೈಡರ್ ಅಲ್ಲದೆ, ಕನ್ನಡದ ಕುಸುಮಬಾಲೆ, ಬುಗುರಿ, ಮೇಷ್ಟ್ರು ಸಿದ್ಧಲಿಂಗಯ್ಯನವರ ಕವಿತೆಗಳು, ಅಕವಿ, ಅಕಾವ್ಯದ ನೆರುಡನ ಕವಿತೆಗಳು, ಆಫ್ರಿಕನ್ ನಿಗ್ರಿಟ್ಯೂಡ್ನ ಬ್ಲಾಕ್ ಕವಿತೆಗಳಲ್ಲದೆ, ಡಿ.ಆರ್.ನಾಗರಾಜರ ವಿಸ್ಮೃತಿಯ ಕಲ್ಪನೆಯ ವಿಚಾರಗಳು ನನ್ನನ್ನು ಜಟಿಲ ಅಲೋಚನೆಗಳಿಗೆ ದೂಡಿದರೂ, ಈ ಮನುಷ್ಯರು ಸಾಂಧ್ರವಾದ ಜೀವಿಗಳು ಎಂಬ ಅನಿಸಿಕೆಗಳು ನನ್ನಲ್ಲಿ ಮೂಡುವಂತೆ ಮಾಡುತ್ತಿದ್ದವು.
ಮತ್ತೆ ಪೊಲಿಟಿಕಲಿ ಅಂತೇಳುವ ಯಾವುದ್ದನ್ನೇ ಆಗಲಿ ನನಗೆ ನಿರ್ಣಯಿಸಲು ಬರುತ್ತಿರಲಿಲ್ಲ. ಈಗಲೂ ನನಗೆ ಈ ವಿಚಾರದಲ್ಲಿ ಖಡಕ್ಕಾದ ನಿಲುವಿಲ್ಲ. ಇದು ನನ್ನ ದೌರ್ಬಲ್ಯವೋ, ಅಥವಾ ನನ್ನ ಶಕ್ತಿಯೋ ಅಂತ ಹೇಗೆ ಹೇಳುವುದೊ ನನಗೆ ಗೊತ್ತಿಲ್ಲ. ಅಲ್ಲಮನ ನಿರ್ಣಯವನ್ನರಿಯದ ಮನ ದುಗುಡವನ್ನಾಹಾರಗೊಂಡಿತಲ್ಲ ಎಂಬ ವಚನ ಕೇಳಿಸಿಕೊಂಡು ನಾನು ತುಂಬ ಸಲ ಹೆದರಿದ್ದಿದೆ. ನನ್ನ ಬಗ್ಗೆ ನಾನೇ ಅವಲೋಕನ ಮಾಡಿಕೊಂಡದ್ದಿದೆ. ಬಲು ಸಿಡುಕಿನ ಆತುರ ಸ್ವಭಾವದ ನಾನು ಯಾಕೆ ಒಳಗೆ ಮೆತ್ತಗಿರುವೆ ಎಂಬ ನನ್ನ ಒಳ ವಿಕ್ಷಿಪ್ತತೆ ಬಗ್ಗೆ ನಾನೇ ಬೇಸರ ಪಟ್ಟುಕೊಂಡಿದ್ದಿದೆ. ನನಗೆ ಮೆದುಳು ಸಣ್ಣದಿದೆಯೇ ಅಥವಾ ಅದು ಇದೆಯೋ, ಇಲ್ಲವೋ ಎಂದೂ ಹುಚ್ಚು ಹುಚ್ಚಾಗಿ ನಾನೇ ಮಾತಾಡಿಕೊಂಡದಿದೆ. ಇದು ಜಾಣನಾಗದವರ ನನ್ನಂಥವನ ವಿಕ್ಷಿಪ್ತತೆ ಇರ್‍ಬೌದೆ.
ಇದನ್ನೂ ಓದಿ : ಅರಿವೇ ಕಂಡಾಯ – 8: ಆಫ್ರಿಕನ್ ಕಾದಂಬರಿಯೂ, ಫ್ರೆಂಚ್ ಬ್ರಾಂಡಿಯೂ…
ಆಗ ಯಾವುದೇ ಕಾವ್ಯದ ರೂಪಕಗಳನ್ನಾದರೂ ಸಾಮಾಜಿಕ ಆಕ್ರೋಶದ ಕಣ್ಣಲ್ಲಿಯೇ ನೋಡುವ ಅಭ್ಯಾಸವಾಗಿತ್ತು ನನಗೆ. ಆಮೇಲೆ ರೂಪಕಗಳೇ ನಿಜವಾದ ಹೋರಾಟ ಭಾಷೆ ಹಾಗೂ ನುಡಿಗಟ್ಟನ್ನು ನೀಡುತ್ತವೆ ಎಂಬ ಹೊಸ ಓದುವಿಗೆ ಒಳಗಾದೆ ಎಂದೆನಿಸುತ್ತದೆ. ಯಾವುದೇ ವ್ಯಕ್ತಿಯ ಭಿನ್ನ ಅಲೋಚನೆಯನ್ನು, ವ್ಯಕ್ತಿ ವಿಶಿಷ್ಠತೆಯನ್ನು ಸಮೂಹದ ಕಾರಣದ ನೆಪವೊಡ್ಡಿ ತಿರಸ್ಕಾರ ಮಾಡುವುದು ಕ್ರಾಂತಿಕಾರಕರ ಅಸೂಕ್ಷ್ಮತೆ ಎಂದು ನನಗೆ ಆಮೇಲೆ ಅರಿವಾಯ್ತು. ಕೆಲವೊಮ್ಮೆ ಯಾವುದೇ ವ್ಯಕ್ತಿಯ ಕಳವಳಗಳನ್ನು ತೀರಾ ಸಿದ್ಧಾಂತದ ಕಣ್ಣಲ್ಲಿ ನೋಡಿ, ಶೀಘ್ರಸ್ಖಲನದ ರೀತಿ ಆ ಮನುಷ್ಯನನ್ನು ನಿರಾಕರಿಸುವುದು ನಮ್ಮ ದಾರ್ಷ್ಟ್ಯ ಹಾಗೂ ವೈಚಾರಿಕ ಮಲಬದ್ಧತೆ ಅಂತ ನನಗೆ ತುಂಬ ಸಲ ಅನ್ನಿಸಿದೆ. ಈ ತರದ ಸಣ್ಣಸಣ್ಣ ನನ್ನ ಗುಮಾನಿಗಳು ನಮಗೆ ತಿಳಿದಿರುವ ಸಿಂಪಲ್ ರಾಜಕೀಯ ಚಿಂತನೆಗಳಿಂದ ಎಲ್ಲವನ್ನೂ ರೌಂಡಫ್ ಮಾಡುವ ಅಪಾಯಗಳಿಂದ ಪಾರು ಮಾಡಿವೆ. ಮುಕ್ತ ಮನಸ್ಸಿನ ಮೂಲಕ ವ್ಯಕ್ತಿ ಸಮಾಜದ ನಾನಾ ಮಜಲುಗಳನ್ನು ಅರ್ಥಮಾಡಿಕೊಳ್ಳುವುದೂ ಸಹ ಮುಖ್ಯವೇ ಎಂದು ಲಂಕೇಶರು ಹೇಳಿರುವುದು ಈ ಕಾರಣದಿಂದ್ಲೆ ಅಂತ ಅನ್ಸುತ್ತೆ.
ಇಷ್ಟಾದರೂ ನಾನು ಜನತಾ ರಾಜ್ಯ ಕಾದಂಬರಿ, ಲೆನಿನ್ ರೆಡ್ ಬುಕ್ ಓದಿ ನಾನೂ ಹೋರಾಟಕ್ಕೆ ಕಾಡಿಗೆ ಹೋಗುವ ಉಮೇದಿನಲ್ಲಿ ಮಾತಾಡುತ್ತಿದ್ದೆ. ಈ ತರದ ವಿಚಾರಗಳಿಂದ ಉಬ್ಬಿಕೊಬ್ಬಿ ಆದರ್ಶಗಳಿಗೆ ಬಲಿಯಾಗುವ ಅಮಾಯಕತನವೂ ಸಹ ನೆಗೆಟಿವ್ ಆದ ಕ್ರಾಂತಿಕಾರಕತನಕ್ಕೆ ವ್ಯಕ್ತಿಗಳನ್ನು ಬಲಿಗೊಡುತ್ತದೆ. ಈ ಸತ್ಯ ಆಮೇಲೆ ಗೊತ್ತಾಗುತ್ತಾ ಬಂತು. ಲಂಕೇಶರ ಕ್ರಾಂತಿ ಬಂತು ಕ್ರಾಂತಿ ಬಂತು ನಾಟಕದಲ್ಲಿನ ಅಮಾಯಕ ಹುಡುಗ ಬಲಿಯಾಗುವ ಹಾಗೆ. ರಾಜಕೀಯ ಸಂಘರ್ಷದ ಹಿಂಸಾತ್ಮಕ ಹೋರಾಟಗಳಿಂದ ಬಡವರ ಮಕ್ಳನ್ನು ಬಾವಿಗೆ ತಳ್ಳಬಹುದಷ್ಟೆ. ಆದ್ದರಿಂದ ಈ ಸನ್ನಿವೇಶಗಳಿಗೆ ಬಡವರ ಮಕ್ಕಳನ್ನು ನೂಕುವ ಯಾವುದೇ ರಾಜಕೀಯ ಸಿದ್ಧಾಂತ ಹಾಗೂ ಎಂತಹುದೇ ತ್ಯಾಗದ ಹೋರಾಟವೂ ಸಹ ಅನಗತ್ಯ ಎನ್ನಲಾರಂಭಿಸಿತು. ಒಂದು ಹಂತದಲ್ಲಿ ರಂಗಭೂಮಿ ಒಡನಾಟ ಈ ತರದ ಒಳಿಸುಳಿಗಳ ಮರ್ಮ ತಿಳ್ಕೊಳ್ಳುವ ದಾರಿ ಹಾಕಿಕೊಟ್ತು. ಅಲ್ಲದೆ ಹಿಂಸೆಯ ಆಳ ಅಗಲಗಳ ಆವರಣಗಳನ್ನು ತಿಳಿಯೋದ್ಕೆ ನನ್ನ ಓದು, ನಾಟಕ, ತಿರುಗಾಟ ಎಲ್ಲವೂ ನಾನು ನನ್ನದೇ ದನೀಲಿ ಮಾತಾಡುವಂತೆ ಒಂದು ಡೀಪ್ ಇನ್ಫ್ಲುಯೆನ್ಸ್ ಮಾಡ್ದೊ ಅನ್ಸುತ್ತೆ.
[…] ಅರಿವೇ ಕಂಡಾಯ – 9 : ನಿರ್ಣಯವನ್ನರಿಯದ ಮನ…… […]