ಸರ್ವೋದಯ ತತ್ವದ ಬಗ್ಗೆ ಕುವೆಂಪುರವರ ಸಾಹಿತ್ಯ ಮತ್ತು ವೈಚಾರಿಕತೆಯಿಂದ ಪ್ರಭಾವಿತವಾಗುವುದು ನನ್ನಂಥವರಿಗೆ ಸಹಜವೆ. ಹಂಗೆ ನೋಡಿದರೆ, ನನ್ನ ದಲಿತ ಮೂಲವೇ ಈ ಸರ್ವೋದಯದಂತಹ ಹಂಬಲಗಳನ್ನು ಕನವರಿಸುವಂತೆ ಮಾಡುತ್ತದೆ. ಇವು ಜಾತಿ ಸಂಘರ್ಷದ ಆಚೆಗೂ ಸಂವೇದಿಸುತ್ತಿರುತ್ತವೆ. ಆದರೆ ಬರಹಲೋಕವೂ, ಸಾಹಿತ್ಯದ ವಿವಿವಿಧ ಲೋಕದೃಷ್ಟಿಗಳಲ್ಲಿ ಸಿಕ್ಕ ಈ ಬಗೆಯ ವಿಚಾರಗಳು ಬದುಕಿನ ಅನುಭೂತಿಯನ್ನಾಗಿಸಿಕೊಳ್ಳುವಂತೆಯೂ ನನ್ನಂಥವರನ್ನು ಸದಾ ಪ್ರೇರೇಪಿಸುತ್ತಿರುತ್ತವೆ.
ನನ್ನಂಥವರು ತೊಂಬತ್ತರ ದಶಕದ ನಡುಗಾಲದ ಸಾಹಿತ್ಯ, ಚಳವಳಿಯ ವಿಚಾರಗಳ ಬೌದ್ಧಿಕತೆಯಿಂದ ಅಲೋಚನೆಗೆ ಒಳಗಾದವರು. ಆಗ ಕರ್ನಾಟಕದ ಎರಡು ದೊಡ್ಡ ಚಳವಳಿಗಳು ತಮ್ಮ ವರ್ಚಸ್ಸನ್ನು ಕೇವಲ ಪ್ರತಿಭಟನೆ ಹಾಗೂ ಪ್ರತಿಕ್ರಿಯೆಗಳಿಗೆ ಸೀಮಿತಗೊಳಿಸಿಕೊಂಡಿದ್ದವು. ಒಂದು ಚಳವಳಿ ಹತ್ತು ವರ್ಷಗಳಷ್ಟೆ ಸೀಮಿತವೆಂಬಂತಹ ವಿಚಾರಗಳು, ಅಭಿಪ್ರಾಯಗಳು ಹರಿದಾಡುತ್ತಿದ್ದ ಹೊತ್ತಲ್ಲಿ, ನನ್ನಂಥವರು ಈ ಚಳವಳಿಗಳು ರೂಪಿಸಿದ ಅಲೋಚನೆ, ಪ್ರತಿಭಟನೆ ಹಾಗೂ ಇವುಗಳ ಸಾಹಿತ್ಯದಿಂದ ಪ್ರಭಾವಿತರಾಗಿದ್ದೆವು.
ದಲಿತ ಮತ್ತು ರೈತಚಳವಳಿಗಳ ಬಗ್ಗೆ ಸಹಜವಾಗಿ ನಮಗೆ ದಲಿತ ಹಾಗೂ ಬಂಡಾಯದ ಸಾಹಿತ್ಯದ ಓದು, ವೈಚಾರಿಕತೆ ಪ್ರಭಾವದಿಂದ ಅರಿತುಕೊಂಡರೂ, ಇವೆರಡೂ ಚಳವಳಿಗಳು ನಮ್ಮ ಕಾಲಕ್ಕೆ ಗತದ ಹೊಸ್ತಿಲ್ಲನ್ನು ಪ್ರವೇಶಿಸಿದ್ದವು. ಆದರೆ ಈ ಎರಡೂ ಚಳವಳಿಗಳ ಅಲೋಚನೆ, ವೈಚಾರಿಕತೆಯ ಪ್ರಭಾವಳಿಯ ನೆರಳಲ್ಲಿ ನನ್ನಂಥವರು ಸಮಾನತೆ, ಜಾತ್ಯತೀತೆ ಹಾಗೂ ಸರ್ವೋದಯದತ್ತ ಚಿತ್ತ ಹರಡಿಕೊಂಡು ಅಂಬೆಗಾಲಾಕುತ್ತಿದ್ದವು. ಹಂಗಾಗಿ ನನಗೆ ಸುಲಭವಾಗಿ ದಸಂಸ ಬೋರ್ಡು, ರೈತ ಚಳವಳಿಯ ವಿಚಾರಗಳು, ಶೈಕ್ಷಣಿಕವಾದ ಸೆಮಿನಾರ್‌ಗಳು ಹಾಗೂ ನನ್ನ ವ್ಯಕ್ತಿಗತ ಓದುವಿನಿಂದ ಇವುಗಳ ಜೊತೆ ಬೌದ್ಧಿಕವಾಗಿ ಬೆಸುಗೆ ಹಾಕಿಕೊಳ್ಳುವಂತೆ ನನ್ನ ವ್ಯಕ್ತಿತ್ವವನ್ನು ರೂಪಿಸಿದವು. ಬಹುಶಃ ಇದು ನನ್ನ ತಲೆಮಾರಿನವರ ಸಾಹಿತ್ಯ ಹಾಗೂ ವೈಚಾರಿಕ ಪ್ರವೃತ್ತಿಗಳು ಹೀಗೆಯೇ ಪ್ರಕಟವಾಗಿರಬಹುದು. ಆದರೂ ತೀರಾ ಕಟ್ಟಕಡೆಯ ಸಮಾಜದಿಂದ ಬಂದ ನನಗೆ ಸಹಜವಾಗಿಯೇ ದಲಿತ ಸಾಹಿತ್ಯ ಹಾಗೂ ಚಳವಳಿಯೇ ವಿಚಾರಗಳೇ ಪ್ರಧಾನವಾದರೂ, ಇದರ ಹೊರತಾಗಿಯೂ ನನ್ನ ಸಾಹಿತ್ಯ ಸಂವೇದನೆಯು ದಲಿತೇತರ ಸಾಮಾಜಿಕ ಭಿತ್ತಿಗಳನ್ನು ಹಾಗೆ ಹೊರಗಿಡಲು ಅವಕಾಶ ನೀಡುತ್ತಿರಲಿಲ್ಲ. ಹಾಗಾಗಿ ನನ್ನ ಸಂಘರ್ಷದ ಅರಿವು ಮತ್ತು ಮಾನವತೆಯ ಪ್ರಜ್ಞೆಯ ಸಂವೇದನೆಯ ಕ್ಯಾನ್ವಸನ್ನು ಇನ್ನಷ್ಟು ವಿಸ್ತಾರವಾಗಿ ನೋಡುವಂತೆಯೂ ನನ್ನನ್ನು ಇವು ಅಲೋಚನೆಗೆ ಹಚ್ಚುತ್ತಿದ್ದವು.
ರೈತಸಂಘದವರು ಮೇಷ್ಟ್ರು ಕವಿ ಸಿದ್ಧಲಿಂಗಯ್ಯನವರ ಹಾಡನ್ನು ತಮ್ಮ ದನಿಯಲ್ಲಿ ʻಯಾರಿಗೆ ಬಂತು ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯʼವೆಂದು ಹಾಡುತ್ತಿದ್ದುದು, ಹಾಗೆ ʻದಲಿತರು ಬರುವರು ದಾರಿ ಬಿಡಿ ದಲಿತರ ಕೈಗೆ ರಾಜ್ಯಕೊಡಿʼ ಅನ್ನೋದ್ದನ್ನ ರೈತರು ಬರುವರು ದಾರಿ ಬಿಡಿ ರೈತರ ಕೈಗೆ ರಾಜ್ಯ ಕೊಡಿ ಎಂದೂ ಮಾರ್ಧನಿಸುತ್ತಿತ್ತು. ನಿಜಕ್ಕೂ ಇದನ್ನು ಹೀಗೆ ಹೇಳಬಹುದೇನೊ, ದಸಂಸ ಹಾಗೂ ದಲಿತ ಸಾಹಿತ್ಯ ಮತ್ತೂ ಚಳವಳಿ ಹಳ್ಳಿಯ ಜನರಲ್ಲಿ ಒಂದು ಪ್ರತಿಭಟನೆಯ ಭಾಷೆ, ಅನ್ಯಾಯದ ಖಂಡನೆಯ ಮ್ಯಾನರ‍್ಸನ್ನು ಹುಟ್ಟುಹಾಕಿತು. ರೈತಚಳವಳಿ ಇದನ್ನು ಅನುಸರಿಸಿತು ಎಂದು. ದಲಿತರನ್ನು ಹೊರಗಿಟ್ಟ ಸಮಾಜ ದಲಿತರ ವೈಚಾರಿಕತೆ, ರಾಜಕೀಯ ಚಿಂತನೆ ಹಾಗೂ ಪ್ರತಿಭಟನೆಗಳನ್ನು ತನಗರಿವಿಲ್ಲದೆ ಮೈಗೂಡಿಸಿಕೊಂಡಿದೆ ಎಂದರೆ ತಪ್ಪಾಗದು. ದಲಿತರ ಎಚ್ಚರ ಹಾಗೂ ಜಾಗೃತಿಯನ್ನು ಹೊರಗೆ ವಿರೋಧಿಸುವ ದಲಿತೇತರ ಸಮಾಜವು, ತನಗೆ ಅರಿವಿದ್ದೊ ಅಥವಾ ಇಲ್ಲದೆಯೋ ಈ ಸಮುದಾಯವನ್ನು ರಾಜಕೀಯವಾಗಿ, ವೈಚಾರಿಕವಾಗಿ ಅನುಸರಿಸಿದೆ. ಈ ಬಗ್ಗೆ ನಿಯ್ಯತ್ತಿನಿಂದ ಮಾತಾಡುವ ಉಮೇದನ್ನು ಈ ಸಮಾಜ ವ್ಯಕ್ತಪಡಿಸಲು ಹಿಂಜರಿದರೂ, ಈ ಬೆಳವಣಿಗೆಯನ್ನು ತಳ್ಳಿಹಾಕಲಾಗದು. ಹಂಗೆ ನೋಡುದ್ರೆ ದಲಿತ ಚಳವಳಿಯಿಂದ ಪ್ರಭಾವಿತವಾದ ದಲಿತೇತರ ಒಳ್ಳೆಯ ಮನಸ್ಸುಗಳು ನಮ್ಮ ವಿವೇಕ ಹಾಗೂ ವಿಚಾರಗ್ರಹಿಕೆಯನ್ನೂ ಈ ಹೊತ್ತಿಗೂ ತಿದ್ದುತ್ತಿವೆ ಎಂಬುದ್ದನ್ನು ನೆನೆದರೆ ದಲಿ ಚಳವಳಿಯ ಬಗ್ಗೆ ಹೆಮ್ಮೆ ದುಪ್ಪಟ್ಟಾಗುತ್ತೆ.
ದಲಿತರಿಗೆ ವಿರುದ್ಧವಾದ (ಹೀಗೆ ಇರುವ ಗ್ರಹಿಕೆ ಹಾಗೂ ಪೂರ್ವಗ್ರಹಗಳು) ರೈತಜಗತ್ತು ಹೀಗೆ ದಲಿತರ ರೀತಿ ಪ್ರತಿಭಟಿಸುವುದು, ಘೋಷಣೆ ಕೂಗುವುದು ಇವೆಲ್ಲವೂ ನನ್ನಂಥವರಿಗೆ ಇತರೆ ಶೋಷಿತ ಸಮುದಾಯಗಳ ಜೊತೆಗೂ ನಾವು ಇರಬೇಕು ಎನ್ನುವಂತೆ ಭಾಸವಾಗುತ್ತಿದ್ದವು. ಈ ಸಮಾಜದ ಎರಡೂ ವೈರುಧ್ಯಗಳ ಸಾಮಾಜಿಕ ಹಾಗೂ ಆರ್ಥಿಕ ಶೋಷಣೆಯ ಲೋಕಗಳಾದ ದಲಿತ ಹಾಗೂ ರೈತ ಸಂಘಗಳು ಕೊನೆಗೆ ಶೋಷಣೆ ಹಾಗೂ ಸಮಾನತೆಯ ಮೀಟಿಂಗ್ ಪಾಯಿಂಟ್ನಲ್ಲಿ ಒಗ್ಗೂಡುವ ಅಗತ್ಯವನ್ನು ಈ ಕಾಲ ಎದುರು ನೋಡುತ್ತಿತ್ತು. ನನ್ನಂಥವರು ಇಂತಹ ವಿಚಾರಗಳಿಗೆ ತೀರಾ ಭಾವುಕವಾಗಿ ಇವು ಅಪರೂಪದವು ಎಂದೇ ಕಾದುಕುಳಿತು ತದೇಕಚಿತ್ತದಿಂದ ಇವುಗಳನ್ನು ಧ್ಯಾನಿಸುತ್ತಿದ್ದೆವೆಂಬದು.
ಈ ವಿಚಾರದಲ್ಲಿ ನಾನು, ರವಿಬಾಗಿ, ನಾ. ಸಂಪತ್ ಕುಮಾರ್, ಗೋವಿಂದರಾಜು ಬೈಚುಗುಪ್ಪೆ, ರಮೇಶ್ ಪಾಲಸಂದ್ರ ಇನ್ನೂ ಹಲವು ಗೆಳೆಯರು ನಮ್ಮ ನಮ್ಮ ಹಳ್ಳಿಯ ವಿವಿಧ ವಿರೋಧಾಭಾಸಗಳ ನಡುವೆ ಶೋಷಿತರೆಲ್ಲರನ್ನು ಒಗ್ಗೂಡದಂತಿರಿಸಿರುವ ಜಾತಿ, ವರ್ಗ ಹಾಗೂ ಪಕ್ಷರಾಜಕಾರಣದ ವಿವಿಧಮುಖಗಳನ್ನು ಕುರಿತು ಆಳವಾಗಿ ಚರ್ಚಿಸಿ, ಯೋಚಿಸುತ್ತಿದ್ದೆವು. ನನ್ನ ರಿಸರ್ಚನ ಕಾಲದ ದಿನಗಳಲ್ಲಿ ನಮ್ಮ ಈ ಗುಂಪು ಜ್ಞಾನಭಾರತಿ ಕ್ಯಾಂಪಸ್ಸಿನಲ್ಲಿ, ಥಿಯೇಟರ್, ಸೆಮಿನಾರ್ ಗಳಲ್ಲಿ ಭಾಗವಹಿಸಿ ವಿವಿಧ ನಮೂನೆಗಳಲ್ಲಿ ವಿಚಾರ ಮಂಥನ ನಡೆಯುತ್ತಿತ್ತು ಕೂಡ. ಅಂಬೇಡ್ಕರ್, ಲೋಹಿಯಾ ಹಾಗೂ ಗಾಂಧೀ ಈ ಮೂವರ ವಿಚಾರಗಳ ಮೀಟಿಂಗ್ ಜಂಕ್ಷನ್ ಪಾಯಿಂಟ್ ಕಂಡುಕೊಳ್ಳಲು ನಾವೆಲ್ಲರೂ ಪ್ರಯತ್ನಿಸುತ್ತಿದ್ದೆವು. ನಮ್ಮ ಹಂಬಲಗಳಿಗೆ ತೆಳುವಾದ ರಾಜಕೀಯವ ವಿಚಾರ ಹಾಗೂ ವೈಚಾರಿಕತೆಯನ್ನು ಬೇಸಾಗಿಟ್ಟುಕೊಳ್ಳದೆ ನಮ್ಮ ಅನುಭವಲೋಕದ ವೈರುಧ್ಯಗಳ ನಡುವೆಯೇ ನಾವು ಒಗ್ಗೂಡುವ ಸಾಧ್ಯತೆಗಳ ಬಗ್ಗೆ ತೀರಾ ತಲೆಕೆಡಿಸಿಕೊಳ್ಳುತ್ತಿದ್ದವು. ಈ ವಿಚಾರಗಳು ನಮ್ಮ ಗುಂಡುಪಾರ್ಟಿಗಳಲ್ಲಿ ರಂಗೇರುತ್ತಿದ್ದವು. ನಮ್ಮ ಪಿಹೆಚ್ಡಿ ದಿನಗಳ ಹಾಸ್ಟೆಲ್ ರೂಮುಗಳಲ್ಲಿ ನಾವೆಲ್ಲರೂ ಸೇರಿ ಮಾತಾಡಿ, ಹೊರಾಳುತ್ತಿದ್ದ ಸನ್ನಿವೇಶಗಳನ್ನು ನೆನೆದರೆ ಈಗಲೂ ಮೈ ಜುಮ್ ಎನ್ನುತ್ತದೆ.
ಅದರಲ್ಲೂ ತುಮಕೂರಿನ ಪಾಲಸಂದ್ರದ ರಮೇಶಣ್ಣ ನಿಷ್ಠೂರತೆಯು ಕೇವಲ ಈತನ ವೈಚಾರಿಕ ವ್ಯಕ್ತಿ ವೈರಾಗ್ಯಕ್ಕೆ ಸೀಮಿತವಾಗದೆ, ಈತ ತನ್ನೂರನ್ನೇ ಈ ವಿಚಾರಗಳಿಗೆ ಪ್ರಾಯೋಗಿಕ ಕೇಂದ್ರ ಮಾಡಿಕೊಂಡು, ತಾನು ತಿಗಳ ಜಾತಿಗೆ ಸೇರಿದ್ದರೂ, ತನ್ನೂರಿನ ಅಸ್ಪೃಶ್ಯರನ್ನು ಮನೆ, ತೋಟಗಳಲ್ಲಿ ಕರೆಸಿಕೊಂಡು ಮಾನವೀಯ ಸಹಜ ಸಂಬಂಧಗಳು ಏರ್ಪಡುವಂತಹ ಕ್ರಾಂತಿಕಾರಕ ಸ್ವಭಾವದವನಾಗಿದ್ದನು. ಈತನ ಚಟುವಟಿಕೆಗಳ ಕ್ರಿಯಾಸರಣಿ ಹಾಗೂ ಸಾಂಸ್ಕೃತಿಕ ತಿಳಿವಳಿಕೆಗಳನ್ನು ನೆನೆದರೆ ಈತನೆದುರು ನಾವೆಲ್ಲ ಕೇವಲ ಮಾತಿನ ಒಗ್ಗರಣೆ ಸಿದ್ಧರ ಹಾಗೆ ಕಾಣುತ್ತಿದ್ದೆವು. ಈತನ ವೈಚಾರಿಕ ಭೀಷಣತೆಗೆ ಯಾರನ್ನು ಕೇರ್ ಮಾಡದ ತೀವ್ರತೆ ಹಾಗೂ ತೀಕ್ಷಣತೆ ಇತ್ತು. ಹೇಳಿಕೇಳಿ ಥಿಯೇಟರ‍್ನ ಗೀಳುಗಳಲ್ಲಿದ್ದ ರಮೇಶ್ ಪಾಲಸಂದ್ರ ನಮ್ಮ ನಡುವಿನ ಹೊಸ ಕಾಲದ ಸಮಾಜವಾದಿಯಂತೆ ಕಾಣುತ್ತಿದ್ದನು. ಒಳ್ಳೆ ಮರಿ ಎಮ್ಡಿಎನ್ ತರ ಕಾಣಿಸುತ್ತಿದ್ದ ಈತನ ಊರಲ್ಲಿ ಆಗ ದಸಂಸ ಮತ್ತು ರೈತಸಂಘವಾಗಲೀ ಇರಲಿಲ್ಲ. ಇವುಗಳು ನೀಡಬೇಕಾದ ಜ್ಞಾನ ಹಾಗೂ ಎಚ್ಚರವನ್ನು ತನ್ನ ಬದುಕಿನ ಆಚರಣೆ ಮತ್ತೂ ನಡೆನುಡಿಯಲ್ಲಿ ಕಂಡುಕೊಳ್ಳಲು ಈತ ಕೊನೆಗೆ ತನ್ನ ಜಾತಿಮೀರಿಯೇ ಮದುವೆಯಾಗಿ, ಈ ಹೊತ್ತಿಗೂ ಏಕಾಂಗೀಯಾಗಿಯೇ ಬದುಕುತ್ತಿದ್ದಾನೆ. ಆಗಾಗ್ಗೆ ನಾವು ಪಾಲಸಂದ್ರಕ್ಕೆ ಹೋದಾಗ, ಈತ ದಲಿತರು, ಒಬಿಸಿ ಹಾಗೂ ಲಿಂಗಾಯತ ಹುಡುಗರನ್ನು ಸೇರಿಸಿ ಮುಕ್ತವಾಗಿ ಮಾತಾಡುವಂತೆ ಮಾಡುತ್ತಿದ್ದನು. ಆತನ ತೋಟದಲ್ಲಿ ಬೀಫ್ ಹಾಗೂ ಗುಂಡಿನ ವ್ಯವಸ್ಥೆ ನಡುವೆ ನಾವು ರಂಗೇರಿ, ನಾವೇ ನಾಳಿನ ಕ್ರಾಂತಿಕಾರಿಗಳು ಎಂದು ಬೀಗಿನ ಠೀವಿಯಲ್ಲಿ ಆ ಕ್ಷಣ ಮಾತಾಡಿಕೊಳ್ಳುತ್ತಿದ್ದೆವು.
ಹೊಸ ಕಾಲದ ಮಾನವತೆಯ ಮುಖವಾಣಿಗಳಂತೆ ರಮೇಶ್ ಪಾಲಸಂದ್ರ ಅಂಡ್ ಟೀಮ್ ನಮಗೆ ಕಾಣುತ್ತಿತ್ತು. ನಾವು ನಮ್ಮದೇ ಜೀವನದ ವಿರೋಧಾಭಾಸಗಳ ನಡುವೆ ಕನ್ನಡ ಸಾಹಿತ್ಯ ಓದಿಕೊಂಡು ಜಾತಿ ಮೀರಿ ಗ್ರಾಮದ ಕನಸು ಕಾಣುತ್ತಿದ್ದೆವು. ಇದೊಂತರ ರೋಮಾಂಟಿಕ್ಕಾದ ನಮ್ಮದೇ ಯುಟೋಪಿಯಾ, ಆದರ್ಶಗಳ ಸ್ವಪ್ನಲೋಕದಂತೆಯೂ ಕಾಣುತ್ತಿತ್ತು. ಆದರೆ ಈ ತರದ ರೋಮಾಂಟಿಸಮ್ನಗಾದರೂ ಈ ತಲೆಮಾರು ಸಾಹಿತ್ಯ ಓದುವಂತೆಯೂ ನಾವು ಪ್ರೇರಣೆಗಳನ್ನು ಹುಟ್ಟಹಾಕಬೇಕಿದೆ. ಏಕೆಂದರೆ, ಕೆಲವೊಮ್ಮೆ ಇಂತಹ ಸಮಾಜಮುಖಿ ಭ್ರಮೆಗಳು ಕೂಡ ಸತ್ಯದ ಇನ್ನೊಂದು ಮುಖವಾಗಿ ಬೇಕಾಗುತ್ತವೆ ಎಂಬುದ್ದನ್ನು ನಾವು ಅರ್ಥಮಾಡಿಕೊಳ್ಳಬೇಕು. ಹಂಗಾಗಿ ಥಿಯೇಟರ್, ಈ ಸಾಹಿತ್ಯದ ಓದುವಿನ ಸಹವಾಸದ ಕಾರಣಕ್ಕೆ ನಮ್ಮಲ್ಲಿ ಅಧಿಕಾರ ಒಳಹೊರಗುಗಳ್ನು ದಿಟ್ಟಿಸಿ ನೋಡುವ ಅನುಮಾನದ ಪ್ರವೃತ್ತಿಗಳ ಸೂಕ್ಷ್ಮತೆಗಳು ಜಾಗೃತವಾಗುತ್ತಿದ್ದವು.
ನಮ್ಮ ಕನ್ನಡದ ಲಂಕೇಶ್, ತೇಜಸ್ವಿ, ದೇವನೂರು, ಡಿ. ಆರ್ ನಾಗರಾಜ್ ರವರ ವಿಚಾರಗಳಲ್ಲಿ ಗೋಜಲು ಗೋಜಲಾಗಿ ನಾವು ಮಾತಾಡಿಕೊಂಡರೂ, ಒಂದು ನಿಜವಾದ ಜಾತ್ಯತೀತವಾದ ಸಮಾಜಮುಖಿಯಾಗುವ ತೀವ್ರತೆ ನಮ್ಮನ್ನು ನಮ್ಮ ವಿರೋಧಭಾಸಗಳ ನಡುವೆಯೂ ಬಲವಾಗಿ ಮೈದಾಳಿತ್ತೆನ್ನುವುದು. ನಾವು ಎಲ್ಲರ ಸಮಾಜವನ್ನು ಕನವರಿಸುತ್ತಿದ್ದುದಂತೂ ಸತ್ಯ. ಈ ಕಾರಣದಿಂದಲೇ ನಮ್ಮ ಗುಂಪಿಗೆ ಒಂದು ವಿಶಿಷ್ಟವಾದ ಪ್ರಜ್ಞೆಯ ಸೌಂದರ್ಯವನ್ನು ತಂದುಕೊಟ್ಟಿತ್ತು. ಈ ಸನ್ನಿವೇಶಗಳು ಕ್ಯಾಂಪಸ್ನಲ್ಲಿಯೇ ಕಾಲ ಕಳೆಯುವುದಕ್ಕಿಂತಲೂ ನಾವು ನಮ್ಮ ನಮ್ಮ ಊರು ಹಾಗೂ ಗೆಳೆಯರ ನಡುವೆ ಇಂತಹ ವಿಚಾರಗಳನ್ನು ಬಿತ್ತಬೇಕು ಎಂದು ಹಪಹಪಿಸುತ್ತಿದ್ದೆವು.
ಏನೋ ಈ ಬಗೆಯ ಉಮೇದು ನಮ್ಮ ಮುಖಗಳಲ್ಲಿ ಸುಳಿದಾಡುತ್ತಿತ್ತು. ಈ ನಡುವೆ ನಮ್ಮದೇ ಗೀಳುಗಳು, ರಗಳೆಗಳು, ನಿಷ್ಠೂರತೆ ನೆಪದ ನಮ್ಮ ಹುಂಬತನಗಳು ನಮ್ಮನ್ನು ನಾವು ಇರುವುದೇ ಹೀಗೆ ಎಂಬ ಐಸೊಲೇಷನ್ನಿಗೂ ನಮ್ಮನ್ನ ದೂಡಿದ್ದವು. ಈ ವೈಚಾರಿಕತೆಯ ತೀವ್ರತೆ ಕೂಡ ವ್ಯಕ್ತಿವ್ಯಾದಿತನದ ಇಗೋವನ್ನು ತರುತ್ತದೆ. ಜೊತೆಗೆ ಇದು ಕೂಡ ಜನರನ್ನು ನಿರ್ಬೌದ್ಧಿಕರು ಎನ್ನುವ ಹಾಗೆ ನಮ್ಮಲ್ಲೂ ಜನರನ್ನು ಅಸಹನೆಯಿಂದ ನೋಡುವ ವಿಚಿತ್ರ ಬುದ್ಧಿಜೀವಿಯ ಧಿಮಾಕನ್ನು ಸಹ ಸೃಷ್ಟಿಸುತ್ತದೆ ಕೂಡ. ಇದರಿಂದಾಗಿಯೇ ನಾವು ಹೇಳಿದ್ದೆ ಸರಿ ಎಂಬ ಇಗೋಗೂ ನಾವು ಬಲಿಯಾಗಬೇಕಾಗುತ್ತದೆ. ಹಳಬರ ಈ ಬಗೆಯ ವೈಚಾರಿಕತೆಯ ಅಸೂಕ್ಷ್ಮತೆಯಿಂದಲೂ ಒಂದು ಚಳವಳಿ ಅಥವಾ ಸಿದ್ಧಾಂತವೂ ಜನಸಮುದಾಯವನ್ನು ಕಳೆದುಕೊಂಡಿದೆ. ಈ ವಿಚಾರದಲ್ಲಿ ದಲಿತ ಹಾಗೂ ರೈತಸಂಘಗಳು ಒಂದು ಸಾವಯವತನವನ್ನು ಸಾಧಿಸಿವೆಯಾದರೂ, ಎಡಪಂಥೀಯ ಚಳವಳಿಗಳು ಈ ವಿಚಾರದಲ್ಲಿ ಎಚ್ಚರದಲ್ಲಿ ಜನರನ್ನು ಇರಿಸಲು ತೊಡಗಿದ್ದುದು ಒಂದು ದೊಡ್ಡ ಫೈಲೂರ್ ಎಂದೇ ತಿಳಿಯಬೇಕಿದೆ.
ನಮ್ಮ ಮಾನವ ಸ್ವಾತಂತ್ರ್ಯ ಹಾಗೂ ಬದುಕನ್ನು ಕೇವಲ ಬೌದ್ಧಿಕ ತೀವ್ರತೆ ಹಾಗೂ ವೈಚಾರಿಕತೆಯ ಮೇಲೆ ಕನವರಿಸಿರುವ ಕ್ರಾಂತಿಕಾರಿಗಳು ಕೂಡ ಜಡಗೊಂಡವರಂತೆಯೇ ಇರುತ್ತಾರೆ. ಹಾಗೂ ಸಾಮಾನ್ಯ ಮನುಷ್ಯರನ್ನು ನಂಬದ ವಿರಾಗಿಯಂತಾಗುತ್ತಾರೆ ಕೂಡ. ಈ ಮಿತಿ ಮೀರಿಯೇ ಬದುಕಿನ ಸಾಂಧ್ರತೆಯ ಮೇಲೆ ಕ್ರಾಂತಿಯನ್ನು ಅವರವರ ಕಾಲದೇಶಗಳ ಮನೋಧರ್ಮದ ಮೇಲೆ ಏರ್ಪಡುವ ಸೃಜನಶೀಲತೆಯ ಸನ್ನಿವೇಶಗಳು ಮಾತ್ರವೇ ಹೋರಾಟ, ಅಥವಾ ಒಂದು ಚಳವಳಿಯನ್ನು ಹೆಚ್ಚು ಜೈವಿಕಗೊಳಿಸಬಲ್ಲವು. ಆಗ ಮಾತ್ರ ಮಣ್ಣಿನ ವಾಸನೆಯಿಂದ ಯಾವುದೇ ಹೋರಾಟ ಮತ್ತು ಚಳವಳಿ ಪುಟಿದೇಳುತ್ತದೆ. ಹಾಗೆ ನೋಡಿದರೆ, ಲಂಕೇಶ್, ತೇಜಸ್ವಿಯವರ ಬರಹಗಳ ಜಗತ್ತು ಇಂತಹ ಸಾವಯವತನದ ಕ್ರಿಯಾಶೀಲತೆಯ ಜ್ಞಾನ ಹಾಗೂ ಬೌದ್ಧಿಕತೆಯನ್ನು ಒತ್ತಿ ಹೇಳುತ್ತದೆಂಬುದು. ಹೊರಗಿನ ಬೌದ್ಧಿಕತೆ ಹಾಗೂ ವೈಚಾರಿಕ ಕ್ರಾಂತಿಕಾರಿ ಸಾಹಿತ್ಯವನ್ನು ನೆಚ್ಚುವ ಪ್ರಗತಿಪರರು ಈ ವಿಚಾರದಲ್ಲಿ ಆಧುನಿಕ ಕನ್ನಡ ಸಾಹಿತ್ಯವನ್ನು ಅನುಲಕ್ಷಿಸಿಲ್ಲ.
ಹಾಗೆ ನೋಡಿದರೆ, ಲಂಕೇಶ್ ಹಾಗೂ ತೇಜಸ್ವಿಯವರಲ್ಲಿ ಈ ವಿಚಾರದಲ್ಲಿ ಒಂದು ಪರ‍್ಪೆಕ್ಷನ್ ಇತ್ತು ಎಂಬುದ್ದನ್ನು ಇವರಿಬ್ಬರ ಅಭಿಮಾನಿಗಳು ಗಮನಿಸಿಲ್ಲ ಎಂಬುದು ವಿಪರ್ಯಾಸ. ಲಂಕೇಶರು ಆಧುನಿಕ ಮನುಷ್ಯನ ಬಗೆಗೆ ನೀಡುವ ಆಳವಾದ ಸೂಕ್ಷ್ಮತೆಯ ಒಳನೋಟಗಳು ಹಾಗೂ ತೇಜಸ್ವಿಯವರ ಹೊಸ ದಿಗಂತದ ನೋಟಗಳು ನಮ್ಮ ನೆಲದಲ್ಲಿ ಹೊಸ ಶಕೆಯನ್ನೆ ಸೃಷ್ಟಿಸಲು ಕಾರಣವಾಗುತ್ತವೆಂಬುದು. ಮತ್ತೊಂದು ದಿಕ್ಕಿನಿಂದ ಈ ಸಮಾಜದ ಅವನತಿ ಹಾಗೂ ನಿರ್ಮಾಣದ ಸಾಧ್ಯತೆಗಳನ್ನು ಡಿ. ಆರ್ ನಾಗರಾಜ್ ರಾಜಕೀಯವಾಗಿ, ಸಾಂಸ್ಕೃತಿಕ ರಾಜಕಾರಣದ ಚಿಂತನೆ, ಬೌದ್ಧಿಕತೆಯ ನೆಪದಲ್ಲಿ ಅಪರೂಪದ ಮೂಸೆಯಲ್ಲಿ ಸಾಧ್ಯವಾಗಿಸುತ್ತಾರೆಂಬುದು.
ಆದರೂ ಯಪ್ಪಾ ನಾವು ಎಂತಹ ಬಕ್ರಗಳಾಗಿದ್ದೆವು ಎಂದರೆ, ಪ್ರೇಮವನ್ನು ಕೂಡ ಸೈದ್ಧಾಂತಿಕವಾಗಿ ಕಾಣಲು ಹೊರಟಿದ್ದೆವೆಂಬುದು. ಈ ವಿಚಾರದಲ್ಲಿ ನಾನು ಒಂದು ಭಾವಗೀತೆಯನ್ನೂ ಹಾಡುವುದ್ದನ್ನು ಇಷ್ಟಪಡುತ್ತಿರಲಿಲ್ಲ. ಯಾವಾಗಲೂ ಕ್ರಾಂತಿಗೀತೆಗಳನ್ನೇ ಹಾಡುತ್ತಿದ್ದೆನು. ಒಂದು ಚೆಂದದ ಪ್ರೇಮಗೀತೆಯನ್ನೂ ಒಣ ರೋಮಾಂಟಿಕ್ ಪ್ರವರ ಎಂದೂ ಇದು ನಮ್ಮಂಥವರಿಗೆ ಸಾಧ್ಯವಿಲ್ಲ ಎಂದೇ ಬಹಳ ಕಟ್ಟುನಿಟ್ಟಿನಲ್ಲಿದ್ದೆವು. ವಯೋಸಹಜ ಪ್ರೇಮ ಕಾಮದ ವಿಚಾರಗಳನ್ನು ಆದರ್ಶಗಳ ನೆಪದಲ್ಲಿ ಅದುಮಿಕೊಳ್ಳುವ ಆಗಿನ ನಮ್ಮ ಪ್ರವೃತ್ತಿಗಳನ್ನು ಈಗ ನೆನೆದರೆ ಅಯ್ಯೋ ನಾವು ಹೀಗಿದ್ದೆವೆ ಎಂದು ಆಶ್ಚರ್ಯವಾಗುತ್ತದೆ.
ಆಗಾಗ ಮೇಷ್ಟ್ರು ಕೆವೈಎನ್ ʻಅಲ್ರೊ ಅವಿವೇಕಿಗಳಾ, ಪ್ರೇಮವೇ ಕ್ರಾಂತಿಯಲ್ಲವೇನ್ರೋ. ಎಲ್ಲರೂ ಪ್ರೀತಿಯ ಕವನಗಳನ್ನು ಬರೆಯದೆ ಯಾವಾಗಲೂ ಬರೀ ಕ್ರಾಂತಿಯನ್ನೇ ಧ್ಯಾನಿಸಿದರೆ ಹೇಗ್ರೋ?ʼ ಎಂದೇಳುತ್ತಿದ್ದರು. ಅವರ ಮಾತುಗಳು ಈಗ ನಿಜವೆನಿಸಿವೆ. ಪ್ರೇಮವನ್ನು ಸಂಪ್ರದಾಯವಾದಿಗಳ ಹಾಗೆ ವೈಚಾರಿಕರು ನಿರಾಕರಿಸಿದರೆ ಹೇಗೆ. ಪ್ರೇಮವೇ ಕ್ರಾಂತಿಯನ್ನು, ಜಾತಿ, ವರ್ಗ ಮೀರಿದ ಸೊಸೈಟಿಯ ಬಗ್ಗೆ ಸೋಶಿಯಲೈಸ್ ಮಾಡುತ್ತದ್ದಲ್ಲ ಎಂದು ಈಗೀಗ ತುಂಬಾ ಮನದಟ್ಟಾಗಿದೆ. ಹಾಗಾಗಿ ಮೇಷ್ಟ್ರು ಸಿದ್ಧಲಿಂಗಯ್ಯನವರ ಸಿನಿಮಾ ಗೀತೆ ಈಗಲೂ ʻಗೆಳತಿ ಓ ಗೆಳತಿ ಅಪ್ಪಿಕೊ ನನ್ನ ಅಪ್ಪಿಕೋ ಬಾಳೆಲ್ಲ ಎನ್ನ ತಬ್ಬಿಕೋʼ ಎಂಬುದ್ದನ್ನು ನನ್ನಿಷ್ಟದ ಆದರ್ಶ ಪ್ರೇಮಗೀತೆ ಎಂದೇ ಈಗಲೂ ಮತ್ತೆ ಮತ್ತೆ ಕೇಳುತ್ತಿರುತ್ತೇನೆ. ಈ ವಿಚಾರಗಳಲ್ಲಿ ಹೊಸ ಬಗೆಯ ಈ ತರದ ಭಾವನೆ ಹಾಗೂ ವಿಚಾರಗಳನ್ನು ಒಂದೂ ಫ್ಯಾಶನ್ ಎಂಬಂತೆ ನಾವು ಇಂದಿನ ವಿದ್ಯಾರ್ಥಿಗಳ ನಡುವೆ ಹುಟ್ಟಾಕಬೇಕಿದೆ.
ಒಂದು ಮುಕ್ತಮನಸ್ಥಿತಿಯ ವಾತಾವರಣವನ್ನು ಸೃಷ್ಟಿಸುವ ಕೈಂಕರ್ಯವನ್ನು ನಾವು ಈಗ ಕೈಗೆತ್ತುಕೊಳ್ಳಬೇಕಿದೆ. ಬಹುಶಃ ನಮ್ಮ ಕಾಲದ ಪ್ರಾಯದ ಸಾಮಾಜಿಕ ಜೀವನಕ್ಕೂ ಇಂದಿನವರ ಪ್ರಾಯದ ಜೀವನಕ್ಕೂ ಬಹಳ ವ್ಯತ್ಯಾಸಗಳಿವೆ. ಈಗ ನಾವು ಹಠವಾದಿಯಂತೆ ಮಾತಾಡುವುದಕ್ಕಿಂತಲೂ ಮುಕ್ತಮನಸ್ಸಿನವರಾಗಿ ಮಾತಾಡುವ ಮನೋಧರ್ಮ ಹಾಗೂ ತಾಳ್ಮೆಯನ್ನು ರೂಪಿಸಿಕೊಳ್ಳಬೇಕಿದೆ ಎಂಬುದು. ಮೊನ್ನೆ ನಾನು ಭಾಗವಹಿಸಿದ ಒಂದು ಸಭೆಯಲ್ಲಿ ಹೋರಾಟಗಾರರೊಬ್ಬರೂ ಮೇಷ್ಟ್ರುಗಳು ಏನ್ ಮಾಡ್ತಿದ್ದಾರೆಂದು ಹುಂಬತನದಿಂದ ಮಾತಾಡಿದ್ದರು. ಆದರೆ ಇವರಿಗೆ ಗೊತ್ತಿಲ್ಲ ಇಂದಿನ ಯುವಜನತೆಯ ಟ್ರೆಂಡ್ಸ್ ಮೇನಿಯಾ ಹಾಗೂ ಡಿಸ್ಟರ್ಬನ್ಸ್‌ಗಳು. ಸುಮ್ಮನೆ ತಮ್ಮ ಗುಂಪುಗಳಲ್ಲಿ ವೀರಾವೇಶದಲ್ಲಿ ವೈಚಾರಿಕವಾಗಿ ಗುಡುಗುವ ಇಂಥವರಿಗೆ ತಾನು ಮಾತ್ರ ಏನೋ ದಬ್ಬಾಕುತ್ತಿರುವೆ ಉಳಿದವರು ಸುಮ್ಮನಿದ್ದಾರೆಂಬ ವಿಲಕ್ಷಣ ವ್ಯಕ್ತಿವ್ಯಾದಿ ಅಹಂಪ್ರವೃತ್ತಿಗಳಿವೆ ಎಂಬುದು. ಹಾಗಾಗಿ ನಮ್ಮಂತೆ ಇಂದಿನ ಯುವಕರು ಕ್ರಾಂತಿ, ಸೆಮಿನಾರ್, ನೈತಿಕ ಶುಚಿತ್ವ ಇವುಗಳಾವುವು ಅವರ ಕಾಲದ ಎದುರಿಲ್ಲ. ಇದೊಂತರ ಮಾಯಾ ಲೋಕದ ಸನ್ನಿಯ ಕಾಲ. ಈ ಜಾಲದಲ್ಲಿ ಈ ಯುವಜಗತ್ತಿದೆ ಎಂಬುದ್ದನ್ನು ನಾವು ಅರ್ಥಮಾಡಿಕೊಳ್ಳದೆ, ಇದನ್ನರಿಯದೆ ವಾಸ್ತವಕ್ಕೆ ಬೆನ್ನು ತಿರುಗಿಸಿ ಇಂಥವರು ತಮ್ಮ ಒಣ ವೈಚಾರಿಕ ಗೀಳು ಹಾಗೂ ವಾಚಾಳೀತನದಲ್ಲಿಯೇ ಬದಲಾವಣೆಯಾಗುತ್ತದೆ ಎಂಬ ಹುಚ್ಚಿನಲ್ಲಿದ್ದಾರೆ.
ಈ ಮನವರಿಕೆಯಲ್ಲಿಯೇ ಸರ್ವೋದಯವೂ, ದಲಿತ, ರೈತರ ಒಗ್ಗೂಡುವಿಕೆಯ ಕನಸು, ಪರ್ಯಾಯ ರಾಜಕಾರಣದ ವಿಚಾರಗಳ ನಡುವೆ ನಮ್ಮದೇ ವೈಚಾರಿಕತೆಯನ್ನು ರೂಢಿಸಿಕೊಳ್ಳಲು ಹೆಣಗುತ್ತಿದ್ದ ನನ್ನಂಥವರಿಗೆ ಕುವೆಂಪುರವರ ಸರ್ವೋದಯವೂ ನಮ್ಮದೇ ಅಲೋಚನೆ, ಸಂವೇದನೆಯದ್ದು ಎಂಬ ದಟ್ಟ ಭರವಸೆಯನ್ನುಟ್ಟಿಸಿತು. ಖಡ್ಗವಾಗಲಿ ಕಾವ್ಯ ಎಂಬುದರ ಒಟ್ಟು ದನಿ ಶೋಷಿತರೆಲ್ಲರ ಸಾಮಾಜಿಕ ಆಕ್ರೋಶವೆಂದೇ ಅರ್ಥಮಾಡಿಕೊಳ್ಳಬೇಕು ಎಂಬುದ್ದನ್ನು ಮೆಲ್ಲಗೆ ಮನವರಿಕೆ ಮಾಡಿಸಿತು. ಜೊತೆಗೆ ಜಾಗತೀಕರಣ ಹಾಗೂ ಕೋಮುವಾದದ ವಿಪರೀತಗಳು ದಲಿತ ಚಳವಳಿ ಹಾಗೂ ರೈತಚಳವಳಿಗಳ ತಾತ್ವಿಕತೆ ಒಗ್ಗೂಡಿ ವಿರೋಧಿಸುತ್ತವೆ ಎಂಬ ಸ್ಪಷ್ಟತೆ ಒಂದು ಕಾಲದಲ್ಲಿ ಜಾತಿಬಿಲಗಳು ಎಂದು ತಿರಸ್ಕೃತಗೊಂಡ ಹಳ್ಳಿಗಳ ಬಗ್ಗೆ ಬೇರೆಯದೇ ಆದ ಸಂಯಮ ಹಾಗೂ ಸಂವೇದನೆಯ ಸಾಧ್ಯತೆಗಳಿವೆ ಎಂಬ ಭರವಸೆ ಸೃಷ್ಟಿಸುತ್ತವೆ.
ಈ ವಿಚಾರದಲ್ಲಿ ಬಸವಣ್ಣ, ಕುವೆಂಪು, ಲಂಕೇಶ್, ತೇಜಸ್ವಿ, ಡಿ. ಆರ್ ನಾಗರಾಜ್ ಹಾಗೂ ದೇವನೂರರ ವಿಚಾರಗಳು ದಲಿತ ಲೋಕದ ಆಚೆಗೂ ಇರುವ ಶೋಷಣೆ ಹಾಗೂ ನಿರ್ಣಾಮದ ಬಗ್ಗೆ ತಾಳ್ಮೆಯಿಂದ ಬೌದ್ಧಿಕವಾಗಿ, ಸಾಮಾಜಿಕವಾಗಿ ವ್ಯವಹರಿಸುವ ಅಗತ್ಯವನ್ನು ಒತ್ತಿ ಹೇಳುತ್ತವೆ. ಈ ಸೂಚನೆಗಳು ನನ್ನ ಸಾಹಿತ್ಯಕ ಹಾಗೂ ಬದುಕಿನ ಕಣ್ಣೋಟಗಳನ್ನು ಬದಲಿಸಿದವು. ಹಾಗಾಗಿ ನಾನು, ಊರು ಮತ್ತು ಹಳ್ಳಿಗಳ ಬಗೆಗೆ ಒಂದು ಸಣ್ಣ ಯುಟೋಪಿಯಾವನ್ನು ಬೆಳೆಸಿಕೊಂಡೆ. ಈ ಯುಟೋಪಿಯಾದ ಚರಿತ್ರೆಯನ್ನು ನಾವು ನಮ್ಮ ಸಂತರು, ಬೌದ್ಧರು, ಜನಪದರ ಲೋಕದೊಳಗೂ ಮೈವೆತ್ತಿದೆ ಎಂಬುದ್ದನ್ನು ಅರಿತುಕೊಳ್ಳಬೇಕಿದೆ. ಅಲ್ಲದೆ ಇದು ಕಲ್ಯಾಣವೋ ಗೌರಿ ಕಲ್ಯಾಣವೋ ಎಂಬ ಪದದೊಳಗೂ ಈ ಯುಟೋಪಿಯಾವೇ ತುಂಬಿತುಳುಕುತ್ತಿದೆ. ಇತ್ತೀಚಿಗೆ ಗೇಲ್ ಒಮ್ವೆಡ್ತ ರವರ ಸೀಕಿಂಗ್ ಬೇಗಂಪುರ ಓದಿಯೂ ನಾನು ಬೆಚ್ಚಿಬಿದ್ಧಿದ್ದೇನೆ.
ಮೈಸೂರಿನ ದೊಡ್ಡ ಹೊಲಗೇರಿಯೇ ಅಶೋಕಪುರ ಎಂದು ನಾಮಕರಣಗೊಂಡಿರುವುದು ನನ್ನನ್ನು ಚಕಿತಗೊಳಿಸಿದೆ. ನನ್ನ ನೀಲಗಾರರು, ಮಾದಪ್ಪನ ಗುಡ್ಡರೊಳಗೂ ಈ ಬಗೆಯ ಯುಟೋಪಿಯಾವೇ ತುಂಬಿದೆ ಎಂಬುದು. ಬುದ್ಧನ ಮೈತ್ರಿಯೇ ಇಂತಹ ಅನಾದಿಪರಂಪರೆಯಂತಿದ್ದರೂ, ಇದು ಕನ್ನಡದ ಸಾಹಿತ್ಯ ಹಾಗೂ ಚಳವಳಿಗಳ ಅಂದು ಇಂದುಗಳಲ್ಲಿ ಗುಪ್ತವಾಹಿನಿಯಂತೆ ಪ್ರವಹಿಸುತ್ತಿದೆ ಎಂಬುದ್ದನ್ನು ನಾವು ಮನಗಾಣಬೇಕಿದೆ.
ನನ್ನ ವೈಚಾರಿಕತೆ, ಜೀವನ ಗ್ರಹಿಕೆಗಳು ರೂಪುಗೊಳ್ಳುವಲ್ಲಿ ನನ್ನ ಹಲವು ಓಜರ್ಗಳು ಕಾರಣೀಭೂತರು. ಇವರ ಕೊಟ್ಟ ವೈಚಾರಿಕತೆ ಹಾಗೂ ತಿಳಿವಿನಲ್ಲಿ ನಮ್ಮ ಆ ಸರ್ವೋದಯದ ಹಂಬಲಗಳು ವಿಶಾಲವಾದ ಸಾಮಾಜಿಕ ಗ್ರಹಿಕೆ ಹಾಗೂ ತತ್ವವಾಗಿ ನನ್ನೊಳಗೆ ಮೈಪಡೆಯಲು ಕಾರಣವಾಗಿವೆ. ಹಂಗಾಗಿ ಮಂಟೇದನ ಲೋಕಕಟ್ಟುವ ಕಲ್ಪನೆಗಾಗಿ ಸಿದ್ಧಪ್ಪಾಜಿಯನ್ನು ಅಣಿಗೊಳಿಸಿದಂತೆಯೇ ನನ್ನಂಥವರನ್ನು ನನ್ನ ಹಲವಾರು ಘನ ಓಜರ್ ವಿವೇಕ ದೀಕ್ಷೆ ನೀಡಿದ್ದಾರೆ. ಈ ಹಂಬಲಗಳು ಈಗಲೂ ನಾನು ಮನುಷ್ಯನಾಗಿ ಉಳಿಯುವಲ್ಲಿ ಪ್ರೇರಣೆಯಾಗುತ್ತಿವೆ ಈ ಹೊತ್ತಿಗೂ ಕೂಡ. ಇವರೆಲ್ಲರೂ ನನ್ನಂತಹ ತಲೆಮಾರಿಗೆ ಅರಿವಿನ ಕಂಡಾಯವನ್ನು ನೀಡಿದ್ದಾರೆ. ಇದರ ನೆರಳಲ್ಲಿ ನಾನೂ ಕೂಡ ಒಕ್ಕಲಾಗಿ ಸಾಗುತ್ತೇನೆಂಬುದೇ ನನ್ನ ಈ ಹೊತ್ತಿನ ಸರ್ವೋದಯ, ಸಮಾಜವಾದ, ಜಾತ್ಯತೀತೆ ಹಾಗೂ ಜಾತಿ ಇಲ್ಲದೆ ಬೇಗಂಪುರವಾಗಿದೆ.