ಕುವೆಂಪುರವರನ್ನು ಈಗ ನಮ್ಮ ಹಳೆಯ ನಮ್ಮ ರೂಢಿಯ ಗ್ರಹಿಕೆಗಳಿಂದ ಬಿಡುಗಡೆಗೊಳಿಸಿಕೊಂಡೆ ನೋಡಬೇಕಾಗುತ್ತದೆ. ನನಗಂತೂ ಇವರ ಫಿಕ್ಷನ್ಗಿಂತಲೂ ಇವರ ವೈಚಾರಿಕತೆ, ತತ್ವದರ್ಶನದ ವಿಚಾರಗಳೇ ಸದಾ ಆಕರ್ಷಸುತ್ತಿರುತ್ತವೆ. ಹಂಗೆ ನೋಡುದ್ರೆ, ದಿಟದ ಮಣ್ಣವಾಸನೆಯ ಕನ್ನಡದ ತಳಮಟ್ಟದ ಪ್ರತಿಭಾಶೀಲ ಅಗ್ರಪಂಥೀಯ ಮನಸ್ಸು ಕುವೆಂಪು. ಈ ಮಣ್ಣವಾಸನೆ ಬಗ್ಗೆ ತರಗತಿಗಳಲ್ಲಿ ನವ್ಯದ ಅಡಿಗರನ್ನು ಕುರಿತು ಮಾತಾಡುತ್ತಿದ್ದರೂ ನನಗೆ ಕುವೆಂಪುರವಲ್ಲಿ ಮಾತ್ರ ಈ ನೈಜ ಮಣ್ಣವಾಸನೆ ಗರಿಗೆದರುತ್ತದೆಂದಿನಿಸಿದೆ.
ಯಾಕಂದ್ರೆ, ಕುವೆಂಪುರವರು ಗುರುತಿಸಿದಂತೆ ಭಾರತೀಯ ಸಮಾಜ ಅಮೂರ್ತ ಭ್ರಷ್ಟಚಾರಕ್ಕೆ ಒಳಗಾಗಿದೆ. ಇದು ನಮ್ಮ ಅರಿವಿಗೆ ಬರದ ಕಣ್ಕಟ್ಟಿನಂತೆ ನಿಗೂಢವಾಗಿದೆ. ಮತ್ತೂ ಇದು ಮನುಷ್ಯನ ಸಹಜ ಭಾವನಾ ಜಗತ್ತು, ಬೌದ್ಧಿಕ ಜಗತ್ತಿನ ಕ್ರಿಯಾಶೀಲತೆ ಹಾಗೂ ಸಾಹಸ ಪ್ರವೃತ್ತಿಗಳನ್ನೇ ನೊಣಬ್ಹಾಕಿದೆ. ಆದ್ದರಿಂದಲೇ ಕುವೆಂಪುರವರು ಕೂಡ ತಮ್ಮ ಬರವಣಿಗೆಯ ಅಭಿವ್ಯಕ್ತಿಯನ್ನು ಇಂಗ್ಲೀಷ್ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿ ಕಂಡುಕೊಂಡರೆಂಬುದ್ದನ್ನು ಸ್ವತಃ ತಮ್ಮ ನೆನಪಿನ ದೋಣಿಯಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮ ಸ್ವೋಪಜ್ಙತೆಗೆ ಅವಕಾಶ ನೀಡದ ಕನ್ನಡ ಪ್ರಾಚೀನ ಸಾಹಿತ್ಯ ಮರಳುಗಾಡಿನಂತಿತ್ತು ಎಂದೇ ಖಡಕ್ಕಾಗಿ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ.
ಮುಂದೆ ಎಪ್ಪತ್ತರ ದಶಕದಲ್ಲಿ ದಲಿತ ರಾಜಕೀಯ ಮುತ್ಸದಿ ಬಿ. ಬಸವಲಿಂಗಪ್ಪನವರು ಕನ್ನಡ ಸಾಹಿತ್ಯದಲ್ಲಿ ಬೂಸಾ ಇದೆ ಎಂದರು. ಆದರೆ ದಲಿತರು ಎಂದರೆ, ಎಲ್ಲರಿಗೂ ಸದರವಲ್ಲ! ಅದಕ್ಕೆ ಬಸವಲಿಂಗಪ್ಪನವರನ್ನು ಕನ್ನಡದ್ವೇಷಿಯನ್ನಾಗಿ ಬಿಂಬಿಸಿದ ಈ ಕನ್ನಡ ಸಮಾಜದ ಪ್ರಚ್ಛನ್ನ ಬುದ್ಧಿವಂತರಿಗೆ ಕುವೆಂಪುರವರು ಕನ್ನಡ ಸಾಹಿತ್ಯ ಮರಳುಗಾಡು ಎಂದು ಕೊಟ್ಟ ಗೂಸಾ ಅಂದಿನ ಕನ್ನಡ ಅಭಿಮಾನಿಗಳಿಗೆ ಭಾಸವೇ ಆಗಲಿಲ್ಲವೆಂಬುದೇ ಪರಮಾಶ್ಚರ್ಯ ಹುಟ್ಟಿಸುತ್ತದೆ.
ಅಮೂರ್ತ ಭ್ರಷ್ಟಚಾರವು; ಕುವೆಂಪುರವರ ಮತಿತತ್ವವೂ
ಮನುಷ್ಯರನ್ನು ಬೌದ್ಧಿಕವಾಗಿ ಕರೆಪ್ಟ್ ಮಾಡಿ ಅವರ ಬುದ್ಧಿ, ಭಾವ ಸ್ವತಂತ್ರ ಪ್ರವೃತ್ತಿಯಿಂದಲೇ ಪರಕೀಯಗೊಳಿಸುವ ಸಂಸ್ಕೃತಿ, ಮತವ್ಯವಸ್ಥೆಯ ಈ ಅನಾಚಾರವನ್ನೇ ಕುವೆಂಪುರವರು ಅಮೂರ್ತ ಭ್ರಷ್ಟಚಾರವೆಂದರು. ನಾವು ಇದನ್ನು ಕಲ್ಚರಲ್ ಕರೆಫ್ಸನ್ ಎಂದೂ ಭಾವಾಂತರಿಸಿಕೊಳ್ಳಬಹದು. ಈ ಭ್ರಷ್ಟಚಾರವು ವ್ಯಕ್ತಿ, ಸಮಾಜವನ್ನು ಸೀಳಿ ಹಾಕುತ್ತದೆ. ಹಾಗೆಯೇ ವ್ಯಕ್ತಿಯ ಸ್ವ-ವ್ಯಕ್ತಿತ್ವದ ಅನಾವರಣವೇ ಸಾಧ್ಯವಾಗದ ಹಾಗೆ ವ್ಯಕ್ತಿಯನ್ನು ಒಂದು ಅಮೂರ್ತ ವ್ಯವಸ್ಥೆಗೆ ಅಧೀನವಾಗಿಸುತ್ತದೆ. ಜೊತೆಗೆ ಇದು ವ್ಯಕ್ತಿ ಮನಸ್ಸನ್ನೇ ಹಾಳು ಮಾಡಿಬಿಡುತ್ತದೆ. ಇಂತಹ ಅಸಹ್ಯದಿಂದ ವ್ಯಕ್ತಿ ವಿಮೋಚನೆಗೊಳ್ಳಲು ವಿಚಾರ ಕ್ರಾಂತಿಗೆ ಆಹ್ವಾನ ನೀಡಿ, ಎಲ್ಲರೂ ನಿರಂಕುಶಮತಿಗಳಾಗಿ ಎಂದೂ ಕರೆ ನೀಡುತ್ತಾರೆ. ಹಾಗಾಗಿ ಹೊಸ ಮನುಷ್ಯ ಪ್ರಜ್ಞೆ ನಿರ್ಮಾಣ ಮಾಡಲು ಕುವೆಂಪು ಮತಕ್ಕಿಂತಲೂ ಮತಿಮುಖ್ಯ ಎಂಬ ವೈಚಾರಿಕತೆಯನ್ನು ಪ್ರಚುರಪಡಿಸುತ್ತಾರೆ. ಆದರೆ ಕುವೆಂಪುರವರ ಈ ಚಿಂತನೆ ಹಾಗೂ ತಾತ್ವಿಕತೆಯಿಂದ ದೂರವಾದ ನಾವು ಅವರನ್ನು ಒಣ ರಮ್ಯವಾದಿ ಸಾಹಿತ್ಯಕ ಪ್ರವರ, ಒಣ ಅಮೂರ್ತ ಆಧ್ಯಾತ್ಮ ಹಾಗೂ ಬರೀ ಬ್ರಾಹ್ಮಣ ವಿರೋಧಕ್ಕೆ ಗುರಿಪಡಿಸಿ ಅವರನ್ನು ಒಮ್ಮುಖಗೊಳಿಸಿಬಿಟ್ಟಿದ್ದೇವೆ.
ಸನಾತನ ವ್ಯವಸ್ಥೆಯು ತನ್ನ ಜಾತಿ, ಲಿಂಗ, ವರ್ಗದ ಶ್ರೇಷ್ಠತೆ ಹಾಗೂ ಪ್ರತ್ಯೇಕತೆಯ ಮೇಲೆ ವ್ಯಕ್ತಿಯ ದೇಹ ಮತ್ತೂ ಮನಸ್ಸು ಎಂದೇ ಜೀವದ ಸಮಗ್ರತೆಯನ್ನೆ ಛಿಧ್ರಮಾಡಿಬಿಟ್ಟಿದೆ. ಮನುಷ್ಯನ ಛಿಧ್ರೀಕರಣದ ವಿರುದ್ಧ ಕುವೆಂಪು ವೈಚಾರಿಕತೆಯ ಪ್ರಹಾರವಿದೆ. ಹಾಗೂ ಈ ಛಿಧ್ರತೆಯನ್ನು ಎದುರಾದ ಕುವೆಂಪುರವರು ಒಟ್ಟಾರೆ ಸಂಸ್ಕೃತಿ, ರಾಜಕಾರಣದ ಪರಿಭಾಷೆಯ ವಿಮರ್ಶೆಯನ್ನು ಮೊದಲಿಗೆ ಆಧುನಿಕವಾಗಿ ಸಾಧ್ಯವಾಗಿಸಿ, ಇಂಡುವಿಜುವಲಿ ವ್ಯಕ್ತಿಯ ಮತಿತತ್ವ ಮೂಲಕ ಸ್ಟ್ರಾಂಗ್ ಮಾಡಲು ಬಯಸುತ್ತಾರೆ. ಏಕೆಂದರೆ ವ್ಯಕ್ತಿ ತನ್ನ ಆತ್ಮವಂಚನೆಯನ್ನು ಗುರುತಿಸಲಾಗದ ಮಟ್ಟಿಗೆ ಪ್ರಜ್ಞಾಹೀನ ಪಶುವನ್ನಾಗಿಸಿದ ಈ ವ್ಯವಸ್ಥೆಯನ್ನು ಕುವೆಂಪುರವರು ʼಓ ನನ್ನ ಚೇತನ ಆಗು ನೀ ಅನಿಕೇತನʼ ಎಂದು ಮನುಷ್ಯನನ್ನು ಉನ್ನತಮಟ್ಟಕ್ಕೆ ಚಲಿಸುವ ತತ್ವವನ್ನು ಸೃಷ್ಟಿಸುತ್ತಾರೆ.
ವ್ಯವಸ್ಥೆಯ ಬಲಿಪಶು ವ್ಯಕ್ತಿ. ಇಂತಹ ಬಲಿಪಶುತನವನ್ನೇ ಕುವೆಂಪುರವರು ತಮ್ಮ ಸಾಹಿತ್ಯ ಮತ್ತು ವೈಚಾರಿಕತೆಗಳ ಮೂಲಕ ಎದುರಾದದ್ದು. ಈ ಕಾರಣದಿಂದಲೇನೊ ಇವರು ತಮ್ಮನ್ನು ಸಾಹಿತಿ ಎಂಬುದ್ದಕ್ಕಿಂತಲೂ ತತ್ವಜ್ಞಾನಿ ಎಂದೇ ಕರೆದುಕೊಳ್ಳುತ್ತಾರೆ ಎಂಬುದ್ದನ್ನು ನಾವು ಅಷ್ಟಾಗಿ ಗಮನಿಸಿಲ್ಲ. ಅದೂ ಅಲ್ಲದೆ ಈ ವ್ಯವಸ್ಥೆಯ ಅಮೂರ್ತ ಭ್ರಷ್ಟಚಾರವನ್ನು ಸರಿಪಡಿಸದೆ, ಇಲ್ಲಿ ಏನೂ ಸ್ಪಷ್ಟವಾಗಿ ವ್ಯಕ್ತಿಗಾಗಲೀ, ಸಮಾಜಕ್ಕಾಗಲೀ ಸಾಧ್ಯವಾಗದು ಎಂಬ ಸತ್ಯದ ಖಚಿತತೆ ಇವರಿಗಿತ್ತು. ಇದನ್ನು ನಮ್ಮ ಶೂದ್ರ ಬರಹಗಾರರಾಗಲೀ, ಪ್ರಗತಿಪರರಾಗಲಿ ಸ್ಪಷ್ಟವಾಗಿ ಅರಿಯದೇ ಹೋದದ್ದು ದೊಡ್ಡ ವೈಫಲ್ಯತೆ.
ಕುವೆಂಪುರವರ ಸಾಹಿತ್ಯ ಹಾಗೂ ವೈಚಾರಿಕತೆಯನ್ನು ಕೇವಲ ರಮ್ಯವಾದವೆಂದೋ, ಶೂದ್ರತ್ವದ ಸಾಮಾಜಿಕತೆಗೆ ಮಾತ್ರ ಸೀಮಿತಗೊಂಡವೆಂದೋ ಫಿಕ್ಸ್ ಮಾಡುವ ನಮ್ಮ ಹಳೆಯ ಚಾಳಿಗಳ ಆಚೆಗೂ ನಾವಿಂದು ಓದುವ, ತಿಳಿಯುವ ಅಗತ್ಯವಿದೆ. ಕುವೆಂಪುರವರು ʻಕಡಲಿನಾಳಕೂ ಮಿಗಿಲು ಮನಸಿನಾಳ, ತುಹಿನಗಿರಿಯದು ಹಿರಿದು ತುಹಿನ ಗಿರಿಗೂ ಮಿಗಿಲೂ ಮನುಜನೆದೆಯುʼ ಎಂಬ ತಮ್ಮ ಕಾವ್ಯತತ್ವದ ಮೂಲಕ ತಮ್ಮ ಕಾಲಕ್ಕೆ ಅಗತ್ಯವಾದ ಮಾನವತೆಯನ್ನು ಉದ್ಧೀಪನಗೊಳಿಸುತ್ತಿದ್ದಾರೆ. ನಾವು ಇದನ್ನು ಸರಳ ಆಧುನಿಕ ಮಾನವತವಾದದ ಪ್ರಭಾವಕ್ಕೆ ಸೀಮಿತಗೊಳಿಸಬಾರದು. ಇವರು ಸ್ಥಳೀಯತೆ ಮೇಲೆ ಹೊಸ ಮಾನಪಪ್ರಜ್ಞೆ ಕಟ್ಟುವ ಅರಿವನ್ನು ಬಿತ್ತಿದವರು. ಹಾಗಾಗಿ ಇವರು ಹೊಸ ಬಾಳಿನ ಗೀತೆಯ ಹರಿಕಾರರೂ ಹೌದು.
ಇದನ್ನೂ ಓದಿ: ಬೂಸಾ ಚಳುವಳಿಗೆ 50 ಹಾಗೂ ಜಾತಿ ಸಮಾಜದ ವಿಲಕ್ಷಣ ಮ್ಯಾನರ್ಸ್!
ಆಧುನಿಕ ಶಿಕ್ಷಣವು ಬಾಬಾ ಸಾಹೇಬರು ಹೇಳಿದಂತೆ, ಶಿಕ್ಷಣವು ಹೊಸ ಜನಾಂಗವನ್ನು ಸೃಷ್ಟಿಸಬೇಕಾಗುತ್ತದೆ. ಕುವೆಂಪುರವರು ಪರೋಕ್ಷವಾಗಿ ಇಂತಹುದೇ ವಿಚಾರಗಳನ್ನು ವ್ಯಕ್ತಿಯೊಳಗೆ ಮೊಳೆಯುವುದ್ದನ್ನೇ ಮೌನ ಕ್ರಾಂತಿಯೆಂದೇ ವ್ಯಾಖ್ಯಾನಿಸುತ್ತಾರೆ. ಇದು ಶೈಕ್ಷಣಿಕವಾಗಿ ಹೊಸ ಮೌಲ್ಯ ಹಾಗೂ ಜನಾಂಗ ಸೃಷ್ಟಿಗೆ ಕಾರಣವಾಗುತ್ತದೆ. ಎದೆಯ ದನಿ ತತ್ವವನ್ನು ನಾವು ಸಾಮಾಜಿಕ ಪ್ರಜ್ಞೆ ಎಂದೇ ಅರ್ಥ ಮಾಡಿಕೊಳ್ಳದೆ ಒಣ ವ್ಯಕ್ತಿವಾದಿಯ ನಿಲುವುಗಳಲ್ಲಿ ಲಂಬಿಸಬಾರದು. ಈ ವಿಚಾರದಲ್ಲಿ ಕುವೆಂಪುರವರ ಮರು ಓದಿನ, ಶೋಧನೆಯ ಅಗತ್ಯವಿದೆ. ಆಶ್ಚರ್ಯವೆಂದರೆ, ಕರ್ನಾಟಕದ ಮಟ್ಟದಲ್ಲಿ ಜಾತಿ ಎಂಬ ಅಮೂರ್ತ ವಂಚನಾ ಸಂಸ್ಥೆಯ ವಿರುದ್ಧ ಕುವೆಂಪುರವರು ಮಾತಾಡಿದರೆ, ಅಖಿಲ ಭಾರತೀಯ ಮಟ್ಟದಲ್ಲಿ ಬಾಬಾ ಸಾಹೇಬರು, ಜಾತಿ ಹಾಗೂ ಬ್ರಾಹಣ ಸಂಸ್ಥೆಗಳ ವಿರುದ್ಧ ಪ್ರತಿಕ್ರಾಂತಿಯ ಚರಿತ್ರೆ ಹಾಗೂ ಪ್ರತಿಭಟನೆಯ ಪರಂಪರೆಯನ್ನು ಸೃಷ್ಟಿಸಿದರೆಂಬುದ್ದನ್ನು ನಾವು ಬಹಳ ಸೂಕ್ಷ್ಮವಾಗಿ ಗಮನಿಸಬೇಕಿದೆ.
ಹಾಗೆ ನೋಡಿದರೆ, ಕನ್ನಡದ ಆಧುನಿಕ ಪ್ರತಿಭಟನಾ ಸಾಹಿತ್ಯ ಕುವೆಂಪುರವರಿಂದಲೇ ಶುರುವಾಗುತ್ತದೆನ್ನುವುದು. ಮತ್ತೆ ನಾವು ಸಾಮಾಜಿಕ ಕೇಡಿನ ಸಂಸ್ಥೆಗಳ ವಿರುದ್ದದ ಸಂಘರ್ಷದ ಜ್ಞಾನ ಮತ್ತು ಅಲೋಚನಾ ಶಕ್ತಿಗೆ ಹಲವು ಸಹಯಾನದ ಸಾಧ್ಯತೆಗಳನ್ನು ಕ್ರೋಢೀಕರಿಸಿಕೊಳ್ಳಬೇಕಾಗಿದೆ. ಬರೀ ನಮ್ಮ ಕೋಳಿಯಿಂದಲೇ ಬೆಳಕಾಗುತ್ತದೆ ಎಂಬ ಹುಂಬತನವನ್ನು ಬಿಟ್ಟು ನಾವು ಇಂದು ಸಮಾಜದ ಬದಲಾವಣೆಯ ಹಲ ಬಗೆಯ ಜ್ಞಾನವಲಯಗಳು ಮತ್ತು ವಿವೇಕವನ್ನು ಬಹುಮುಖಿಯಾಗಿ ಸಂಕಲನಗೊಳಿಸಬೇಕಾಗುತ್ತದೆ. ಆದ್ದರಿಂದಲೇ ಇಂದು, ಸ್ಥಳೀಯ ಬರಹಗಾರರ ಜೊತೆ ಅಖಿಲಭಾರತೀಯ ಮಟ್ಟದ ಚೇತನಗಳನ್ನು ಬ್ಲೆಂಡ್ ಮಾಡಿಕೊಂಡು ಇಡೀಯಾದ ಸಮಾಜ ಪರಿವರ್ತನೆಯ ತತ್ವಗಳನ್ನು ಒಡಮೂಡಿಸಬೇಕಿದೆ. ಆದರೆ ನಮ್ಮಲ್ಲಿ ಈ ವಿಚಾರದಲ್ಲಿ ತುಂಬಾ ನಿರಾಶದಾಯಕ ಸನ್ನಿವೇಶಗಳೇ ಅಧಿಕವಾಗಿವೆ ಎಂಬುದು. ಏಕೆಂದರೆ, ಎಲ್ಲರಿಗೂ ಅವರವರೆ ಸಿದ್ಧಾಂತ, ವಿಚಾರಗಳೇ ಆತ್ಯಂತಿಕ ಎಂಬ ವಿಚಿತ್ರ ಗೀಳು ಹುಟ್ಟಿಕೊಂಡಿದೆ ಇಂದು. ಇದು ಯಾವಾಗ ವಾಸಿಯಾಗುತ್ತೊ.
ಈ ಸಮಾಜ ವ್ಯಕ್ತಿಚೇತನವನ್ನು ನಿರ್ಬಂಧಿಸುತ್ತಲೇ ಇರುತ್ತದೆ. ಈ ವಿಚಾರದಲ್ಲಿ ವ್ಯಕ್ತಿಚೈತನ್ಯವನ್ನೇ ಭ್ರಷ್ಟಗೊಳಿಸಿರುವ ಭಾರತದ ಸನಾತನ ಸಂಸ್ಥೆಯ ಅವಿಚಾರ ಹಾಗೂ ನಿರ್ದಯತೆಗಳನ್ನು ಕುವೆಂಪು ಸುಮ್ಮನಿರೆ ಅದು ಶಾಸ್ತ್ರಸಮ್ಮತವೇ ಎಂದೂ ಪ್ರಶ್ನಿಸಿದರು. ಶರಣರ ನಂತರ ಚಾರಿತ್ರಿಕವಾಗಿ ಆಧುನಿಕ ಸಾಹಿತ್ಯದಲ್ಲಿ ಮೊದಲಿಗೆ ವ್ಯಕ್ತಿಚೇತನವಾದದ ಸಾಮಾಜಿಕ ಗ್ರಹಿಕೆ ಸೃಷ್ಟಿಸಿದರು. ಅದೂ ಅಲ್ಲದೆಯೇ ಇದು ಕೇವಲ ಮೇಲುಮಟ್ಟದ ಬ್ರಾಹ್ಮಣವಾದದ ವಿಮರ್ಶೆ ಮತ್ತೂ ಟೀಕೆಗೆ ಮಾತ್ರ ಸೀಮಿತವಾಗದ ಇವರ ವ್ಯಕ್ತಿಚೇತನವಾದದ ವಿಚಾರಗಳು ಎಲ್ಲ ಜನವರ್ಗದ ಸಾಮಾಜಿಕ ಭಿತ್ತಿಯ ಒಳಗು ಮುಖಾಮುಖಿಯನ್ನು ಸೃಷ್ಟಿಸುತ್ತವೆ ಎಂಬುದು. ಯಾವ ಅಬ್ರಾಹಣ ಭೂಮಾಲೀಕರ ದರ್ಪ, ಅಮಾನುಷ ನಡವಳಿಕೆಗಳ ವಿರುದ್ಧದ ಫ್ಯೂಡಲ್ ಅಸಹನಾ ಪ್ರವೃತ್ತಿಗಳ ವಿರುದ್ಧವೂ ಕುವೆಂಪುರವರ ವಿಚಾರಗಳು ಸ್ಪೋಟಗೊಂಡವು ಎಂಬುದ್ದನ್ನು ನಾವು ಮರೆಯಬಾರದು. ಒಟ್ಟಾರೆ ಇವರು ವ್ಯಕ್ತಿ ಮತ್ತೂ ಸಮಾಜದ ಎಲ್ಲ ತರದ ಕ್ಲೀಬತ್ವದ ವಿರುದ್ಧವೂ ತಣ್ಣಗೆ ಗುಡುಗಿದರು.
ಸಾರ್ವಕನಿಕವಾಗಿ ಈ ಸಮಾಜದ ಒಬ್ಬ ವ್ಯಕ್ತಿ ತನ್ನ ನೈತಿಕತೆ ಮೇಲೆ ತನ್ನೆದುರು ನಡೆಯುವ ಅನ್ಯಾಯ ಮತ್ತು ಕ್ರೌರ್ಯವನ್ನು ತನ್ನ ಆಂತರ್ಯದ ಮೂಲಕ ಖಂಡಿಸುವ, ದನಿ ಎತ್ತುವ ಪ್ರವೃತ್ತಿಗಳ ಮನೋಧರ್ಮವನ್ನು ಪ್ರಕಟಿಸಲಾರ. ಜಾತಿ ಹೀಗೆ ವ್ಯಕ್ತಿಯನ್ನು ನಿಷ್ಕ್ರಿಯಗೊಳಿಸುತ್ತದೆ ಎಂದೇ ಬಾಬಾ ಸಾಹೇಬ ಅಂಬೇಡ್ಕರರ ಅಭಿಪ್ರಾಯ. ಕುವೆಂಪು ಇಂತಹ ವ್ಯಕ್ತಿವಿಮುಖತೆಯ ಫಲಾಯನವಾದ ಹಾಗೂ ಮುಖಹೀನತೆ ಬಗ್ಗೆಯೇ ಮಾತಾಡಿದರೆಂಬುದ್ದನ್ನು ಅರಿಯಬೇಕಿದೆ. ವ್ಯಕ್ತಿಯ ಸ್ವಜ್ಞಾನ ಹಾಗೂ ಸಂವೇದನೆಯ ಧೈರ್ಯವನ್ನೇ ಹತ್ತಿಕ್ಕುವ ಈ ಸಮಾಜದ ಅಮೂರ್ತ ಭ್ರಷ್ಟಚಾರದ ಸಂಸ್ಥೆಗಳ ವಿರುದ್ಧ ಕುವೆಂಪು ತಮ್ಮ ಸಾಹಿತ್ಯ ಹಾಗೂ ವೈಚಾರಿಕತೆಯನ್ನು ಸೃಷ್ಟಿಸಿದರು. ಕೊನೆಗೆ ತಾನು ಹಿಂದೂವೇ ಅಲ್ಲವೆಂದೂ ಈ ಸನಾತನಿಗಳ ವಿರುದ್ಧ ತಮ್ಮ ಸ್ಪಷ್ಟ ನಿಲುವನ್ನು ಸ್ಫೋಟಿಸಿದ್ದರು ಕೂಡ. ಆದರೆ ಈ ವಿಚಾರದಲ್ಲಿ ಕುವೆಂಪು ಅಭಿಮಾನಿಗಳು ಮುಂದಡಿ ಇಡಲಿಲ್ಲವೆಂಬುದು. ಮಿಗಿಲಾಗಿ ಎಪ್ಪತ್ತರ ದಶಕದಲ್ಲಿ ಹುಟ್ಟಿದ ದಲಿತ ಚಳವಳಿ ಮತ್ತೂ ಸಾಹಿತ್ಯ ಈ ಎದೆಯ ದನಿಯ ತತ್ವವನ್ನು ತನ್ನ ತಾತ್ವಿಕತೆ ಹಾಗೂ ವೈಚಾರಿಕ ಭಿತ್ತಿಯನ್ನಾಗಿಸಿಕೊಂಡಿತು. ಆದರೆ ಆ ನಂತರ ಯಾವ ಶೂದ್ರ ಸಾಹಿತಿಗಳು, ಪ್ರಗತಿಪರರಾಗಲಿ ಈ ವಿಚಾರಗಳನ್ನು ಗಣನೀಯವಾಗಿ ಬೆಂಬಲಿಸಲಿಲ್ಲವೆಂಬುದು.
ಶೂದ್ರ ಬರಹಗಾರರು ಬ್ರಾಹ್ಮಣ್ಯದ ವಿರುದ್ಧ ಕುವೆಂಪುರವರ ವೈಚಾರಿಕತೆಯನ್ನು ಟೂಲಾಗಿ ಬಳಸಿದರೆ ಹೊರತು, ಜೈವಿಕವಾಗಿ ಕುವೆಂಪುರವರ ಸಾಮಾಜಿಕ ಚಿಂತನೆ ಹಾಗೂ ವೈಚಾರಿಕತೆಯನ್ನು ಒಳಗೊಳ್ಳಲು ಮುಂದಾಗಲಿಲ್ಲ. ಕೆಲವರು ಸರ್ವೋದಯದ ಸಮಾಜವಾದಿತನದ ವ್ಯಕ್ತಿವಾದೀತನದ ಧೀಮಾಕುಗಳ ಅತಿಗಳಲ್ಲಿ ಟೇಬಲ್ವಾದಿಗಳಾದರೆ ಹೊರತು, ಶೂದ್ರಶಕ್ತಿಯನ್ನು ಹೊಸ ಕಾಲದ ಸಾಮಾಜಿಕ ಪ್ರಜ್ಞೆಯಡಿ ಸಾರ್ವಜನಿಕವಾಗಿ ಸ್ಫೋಟಗೊಳಿಸುವಲ್ಲಿ ವಿಫಲರಾದರೆನ್ನುವುದು. ಕುವೆಂಪುರವರು ಕರ್ನಾಟಕತ್ವವನ್ನು ತಮ್ಮ ಹೃದಯ ಶಿವನ ಕಲ್ಪನೆಯಲ್ಲಿ ದಾರ್ಶನಿಕಗೊಳಿಸಿದರು. ಆದರೆ ಇದು ಶೂದ್ರ ಬರಹಗಾರರಿಗೆ ಗೋಚರವಾಗದೆ ತಮ್ಮ ಅರೆಬರೆಯ ಸಮಾಜವಾದಿ ಗ್ರಹಿಕೆ ಹಾಗೂ ಸಾಹಿತ್ಯಕ ಗೀಳುಗಳಿಗೆ ಕುವೆಂಪುರವರನ್ನು ಸ್ಥಗಿತಗೊಳಿಸಿಕೊಂಡರೆಂಬುದು. ವಿಶ್ವಮಾನವ ಒಕ್ಕಲಿಗರು ಎಂಬ ರಾಜಕೀಯ ಐಡೆಂಟಿಯೊಳಗೆ ಕುವೆಂಪುರವರ ವಿಶ್ವಮಾನವತೆಯನ್ನು ಪರಿಹಾಸ್ಯಗೈದ ಶೂದ್ರಬರಹಗಾರರ ಅಸೂಕ್ಷ್ಮತೆ ಹಾಗೂ ಜಾತಿ ಐಡೆಂಟಿಟಿಗೆ ಕುವೆಂಪು ಸಾಹಿತ್ಯವನ್ನು ಮಿತಗೊಳಿಸಕೊಂಡಿರುವ ಅದೆಷ್ಟೋ ಸಾಹಿತ್ಯಕ ಗುಂಪುಗಳು ಇದ್ದರೂ, ಇವು ಸಾಮಾಜಿಕವಾಗಿ ಕುವೆಂಪು ವೈಚಾರಿಕತೆ ಹಾಗೂ ಚಿಂತನೆಯನ್ನು ಎದುರುಗೊಳ್ಳದೆ ಕೇವಲ ಗುಂಪುರಾಜಕಾರಣದ ವಹಿವಾಟಿನಲ್ಲಿ ಕುವೆಂಪುರವರನ್ನು ಮಿನಿಮೈಸ್ ಮಾಡಿಕೊಳ್ಳುತ್ತಿವೆ. ಜೊತೆಗೆ ಕುವೆಂಪುರವರ ವಿಶ್ವಮಾನವತೆಯನ್ನು ಸರಳ ಪ್ರಕೃತಿವಾದದ ಆಧ್ಯಾತ್ಮದ ಅಮೂರ್ತಕ್ಕೆ ಬಲಿಕೊಡುತ್ತಿರುವ ಈ ವರ್ಗ ಇದಕ್ಕೆ ಬದಲಾಗಿ ವಿಶ್ವಮಾನವತೆಯನ್ನು ಸಾಮಾಜಿಕ ಅಸಮಾನತೆಯ ಜ್ಞಾನ ಹಾಗೂ ತರ್ಕದ ದೈನಂದಿನತೆಗೆ ಎದುರಾಗಲಿಲ್ಲ ಹಾಗೆ ಎದುರಾಗುವ ಬದುಕಿನ ರಿಯಾಲಿಟಿ ಮೇಲೆ ಕುವೆಂಪು ವಿಚಾರಗಳನ್ನು ಬೆಸುಗೆ ಹಾಕಲು ಮುಂದಾಗುತ್ತಿಲ್ಲವೆಂಬುದು. ಇಂದಿನ ಕುವೆಂಪು ಅಭಿಮಾನಿಗಳು ಕುವೆಂಪುರವರ ನಿರಂಕುಶತ್ವ, ಸರ್ವೋದಯ, ಮಂತ್ರಮಾಂಗಲ್ಯ, ವಿಶ್ವಮಾನವತೆ ಇವುಗಳನ್ನು ಹೊಣೆಗಾರಿಕೆಯಿಂದ ಸಮಾಜೀಕರಣ ಮಾಡುವಲ್ಲಿ ಮನಸ್ಸೇ ಮಾಡಲು ಆಸಕ್ತಿಯೇ ತೋರುತ್ತಿಲ್ಲವೆನ್ನಬಹುದು.
ಮತ್ತೆ ನಮ್ಮ ತೇಜಸ್ವಿಯವರು ಸ್ಪಷ್ಟವಾಗಿ ಹೇಳಿದಂತೆ ಬ್ರಾಹ್ಮಣವಾದ ಹಾಗೂ ಫ್ಯೂಡಲ್ ಜಾತಿ ಮನುಷ್ಯ ವಿರೋಧೀ ಸಾಮಾಜಿಕ ಪ್ರವೃತ್ತಿಗಳಿಂದ ಹೊರ ಬರುವ ಸಾಹಿತ್ಯ ಹಾಗೂ ಸಾಮಾಜಿಕ ಜಿಜ್ಞಾಸೆಯ ಸಾಧ್ಯತೆಗಳನ್ನು ನಾವುಗಳು ಸ್ಪಷ್ಟವಾಗಿ ಮನಗಾಣತ್ತಿಲ್ಲವೆಂಬುದ್ದನ್ನು ಒಪ್ಪಿಕೊಳ್ಳಲೇಬೇಕು. ಪ್ರಬಲವಾಗಿ ಹಿಂದೂ ಸನಾತನ ಮೌಲ್ಯಗಳಲ್ಲದೆ, ಅಬ್ರಾಹ್ಮಣ ಜಾತಿಕುಳಗಳ ವಿರುದ್ಧವೂ ವ್ಯಕ್ತಿ ಬಂಡೇಳುವ ತಲೆಮಾರನ್ನು ಸಹ ಈ ವರ್ಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಕೂಡ. ಹಾಗೆ ನೋಡಿದರೆ ಹಿ.ಶಿ. ರಾಮಚಂದ್ರಗೌಡರವರು ಹೇಳಿದಂತೆ ದಲಿತ ಸಾಹಿತ್ಯ ಹಾಗೂ ಚಳವಳಿಯಷ್ಟು ಬೌದ್ಧಿಕವಾಗಿ ಪ್ರಖರವಾಗಿ ಚಿಂತಿಸಿದಂತೆ ಶೂದ್ರ ಹಿನ್ನಲೆಯ ಇತ್ತೀಚಿನ ಬರಹಗಾರರಾಗಲೀ, ಸಮಾಜವಾದೀಗಳು ಎಂಬುವವರಾಗಲಿ ಚಿಂತಿಸಲಿಲ್ಲ ಎಂದೇ ಅಭಿಪ್ರಾಯಪಟ್ಟಿದ್ದರು. ನಾವು ಈವರೆಗೂ ಇಡೀಯಾಗಿ ಈ ನೆಲದಿಂದಲೇ ಕುವೆಂಪು ಸೃಜಿಸಿದ ಸರ್ವೋದಯವನ್ನು ಮನಗಾಣುತ್ತಿಲ್ಲ. ಅಲ್ಲದೆ ಎಡಪಂಥೀಯರು ಕನ್ನಡದ ಸಾಹಿತ್ಯದ ಕುವೆಂಪುರವರನ್ನು ತಮ್ಮ ವಿಚಾರಗಳಿಗೆ ರಾಜಕೀಯವಾಗಿ ಸಂಯೋಜಿಸಿಕೊಂಡರೇ ಹೊರತು, ಕುವೆಂಪುರವರ ಸಾಹಿತ್ಯ ಹಾಗೂ ವೈಚಾರಿಕತೆಯನ್ನು ತಮ್ಮ ಸಿದ್ಧಾಂತ ಹಾಗೂ ಮೂಲ ಪ್ರಣಾಳಿಕೆಗಳ ಜೊತೆ ಜೈವಿಕವಾಗಿ ಕಸಿಗೊಳಿಸಿಕೊಳ್ಳಲಿಲ್ಲ. ಕೆಲವರಿಗೆ ಇದು ಉಡಾಫೆಯಂತೆ ಕಂಡರೂ. ಇಂಥವರು ನಿಜ ಸತ್ಯದ ಕಠೋರ ಮುಖಗಳನ್ನು ಎದುರಾಗಿಯೇ ಒಳವಿಮರ್ಶೆಗೆ ನಿಲ್ಲಲ್ಲು ಧೈರ್ಯವನ್ನು ಖಂಡಿತ ತೋರಲಾರರು.
ಹಾಗೂ ರೈತಸಂಘ ಕೂಡ ತೆಳುವಾದ ಗಾಂಧೀ ತತ್ವಗಳಲ್ಲಿಯೇ ವಿಜೃಂಭಿಸಿತೆ ಹೊರತು, ಇದರಾಚೆಗೆ ಕುವೆಂಪುರವರ ನಿರಂಕುಶತತ್ವ ಹಾಗೂ ಫ್ಯೂಡಲ್ ಜಾತಿಗಳ ವಿರುದ್ಧದ ವಿಚಾರಗಳನ್ನು ವ್ಯಾಪಕಗೊಳಿಸುವಲ್ಲಿ ಮನಸ್ಸು ಮಾಡಲಿಲ್ಲ ಕೂಡ. ಕುವೆಂಪು ಮನುಷ್ಯ ಆರ್ಥಿಕತೆಯಿಂದ ಹಂದಿಯಂತೆ ಕೊಬ್ಬುವುದ್ದನ್ನು ವಿರೋಧಿಸುತ್ತಾರೆ. ಉತ್ಪತ್ತಿ, ಉತ್ಪತ್ತಿ, ಉತ್ಪತ್ತಿ ಮತ್ತೆ ಉತ್ಪತ್ತಿ ಎಂಬ ಕುವೆಂಪುರವರ ಕಾವ್ಯದ ಉದ್ಗಾರ ಮೇಲುಮಟ್ಟದ ಸಮಾಜವಾದದ ಅತಿಗಳ ವಿರುದ್ಧ ಅಸೂಕ್ಷ್ಮತೆಗಳನ್ನೂ ಸೂಚಿಸುತ್ತಿದೆ. ಈ ವಿಮರ್ಶೆ ರೈತ ಚಳವಳಿಗೂ ಕೂಡ ಅನ್ವಯವಾಗುತ್ತದೆಂಬುದು. ಅವರ ಸೋವಿಯತೆ ರಷ್ಯಾ ಮತ್ತು ಕೋಗಿಲೆ ಕಾವ್ಯತ್ವವು ಇಂತಹ ಸಮಾಜವಾದಿ ಆರ್ಥಿಕತೆಯ ರಾಜಕೀಯ ಚಿಂತನೆಯ ಮಿತಿಗಳನ್ನು ಗುರುತಿಸುವಲ್ಲಿ ಮೂಡಿದೆ ಎನ್ನಬಹುದು. ಒಂದು ಗೊತ್ತಾದ ಸಮಾಜ ವಿಮರ್ಶೆಯ ಆಚೆಗೂ ಕುವೆಂಪು ಕಂಡುಕೊಂಡ ಸರ್ವೋದಯವನ್ನು ನಾವು ಮನಗಾಣದೆ ಕೇವಲ ನಮ್ಮ ಸಾಹಿತ್ಯದ ಪ್ರವರಗಳಲ್ಲಿ ಲಂಬಿಸಿದವಷ್ಟೆ ಎಂಬುದ್ದನ್ನು ಈಗ ಒಪ್ಪಿಕೊಳ್ಳಲೇಬೇಕಿದೆ. ಹಾಗಾಗಿ ಈಗ ಕುವೆಂಪುರವರನ್ನು ಹೆಚ್ಚು ಸಾಮಾಜಿಕವಾಗಿ, ರಾಜಕೀಯವಾಗಿ ಚರ್ಚಿಸಬೇಕಿದೆ.
ಪ್ರೊ. ಎಂ.ಡಿ ನಂಜುಂಡಸ್ವಾಮಿಯವರು ಫ್ಯೂಡಲ್ ಜಾತಿಗಳ ಫೆಡಸುತನ ಹಾಗೂ ಕ್ಲೀಬತ್ವದ ಬಗ್ಗೆ ಮಾತಾಡುತ್ತಲೇ, ರೈತಸಂಘದ ಮುಂದಾಳುಗಳು ತಮ್ಮ ಈ ಬಗೆಯ ಗ್ರಾಮೀಣ ಪೆಡಸುತನವನ್ನು ಮೀರಿದ ಸಮಾಜವಾದೀವ್ಯಕ್ತಿತ್ವದ ದೀಕ್ಷೆ ಹೊಂದಬೇಕೆಂದೂ ಸೂಚಿಸಿರುತ್ತಾರೆ. ಆದರೆ ಈ ವಿಚಾರಗಳು ಗೌಣಗೊಂಡು ರೈತಸಂಘವು ಕೂಡ ಹಳ್ಳಿಯ ಗಾಂಧೀತತ್ವದ ಮೇಲೆ ಗಮನ ಹರಿಸಿತೆ ಹೊರತು, ಕುವೆಂಪು ಹೇಳಿದ ನಿರಂಕುಶತ್ವ ಹಾಗೂ ಸರ್ವೋದಯ ತತ್ವವನ್ನು ಸಮಾಜದ ತಳಬುಡಕ್ಕೆ ಕಸಿ ಮಾಡುವಲ್ಲಿ ಮನಸ್ಸು ಮಾಡಲಿಲ್ಲ. ನೇಗಿಲ ಗೆರೆಯೇ ತೋರುವುದೆಮಗೆ ಮುಕ್ತಿಯ ಮಾರ್ಗವನ್ನು ಎಂಬುದ್ದನ್ನು ಕೇವಲ ಬ್ರಾಹ್ಮಣ್ಯದ ಹಾಗೂ ಜಾಗತೀಕರಣದ ವಿರುದ್ಧದ ಪ್ರತಿರೋಧಧ ಟೂಲಾಗಿ ಬಳಸಲಾಗುತ್ತಿದೆಯೇ ಹೊರತು, ಕುವೆಂಪುರವರ ಸಾಮಾಜಿಕ ಚಿಂತನೆ ಹಾಗೂ ವಿಮರ್ಶೆಯ ಆಳ ಅಗಲಗಳನ್ನು ಗಮನಿಸಲಾಗುತ್ತಿಲ್ಲವೇಕೆ, ಎಂದು ಈಗ ಇನ್ನಾದರೂ ಅವಲೋಕನ ಮಾಡಿಕೊಳ್ಳುತ್ತೇವೆಯೇ.
ಯಾವ ಮತದವನೂ ಅಲ್ಲ; ಎಲ್ಲ ಮತದವನು ನಾನು: ಕುವೆಂಪು
ಭಾರತದಂತಹ ಜಾತಿ ಸಮಾಜದಲ್ಲಿ ಈ ಬಗೆಯ ವಿಚಾರಗಳು ಅತ್ಯಂತ ಕ್ರಾಂತೀಕಾರಕವಾಗಿವೆಯಾದರೂ, ಕುವೆಂಪು ಇವುಗಳನ್ನು ರಾಜಕೀಯ ಸಂಘರ್ಷದ ಪರಿಭಾಷೆಯಲ್ಲಿ ರೂಪಿಸದೆ, ತಮ್ಮ ಪ್ರತಿಮಾತ್ಮಕವಾದ ಹಾದಿಯಲ್ಲಿ ಸೃಜಿಸತೊಡಗಿದರೆಂಬುದ್ದನ್ನು ಸಹ ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕಿದೆ. ಬಹುಶಃ ಡಿ. ಆರ್ ನಾಗರಾಜ್ ರವರು ಮಾತ್ರ ಕುವೆಂಪುರವರನ್ನು ಅಬ್ರಾಹ್ಮಣ ಅದ್ವೈತವಾದಿ ಎಂದೂ ಕುವೆಂಪು ತತ್ವಜ್ಞಾನವು ಎಷ್ಟು ಸಾಮಾಜಿಕವಾಗಿ ಮುಖ್ಯವಾಗುತ್ತದೆಂದೇ ವಿಮರ್ಶೆಗೆ ಒಳಪಡಿಸುತ್ತಾರೆ. ಈ ಚೇತನವಾದದ ತತ್ವವು ಈಗಾಗಲೇ ಕೆಳಜಾತಿಗಳ ಸಿದ್ಧ ಸಾಧಕರ ಭಕ್ತಿ ಪರಂಪರೆಯೊಳಗೂ ದಟ್ಟವಾಗಿದೆ ಎಂಬುದು. ಇದು ಕೇವಲ ಆಧ್ಯಾತ್ಮಕಿ ಬೋಧೆಯ ರೀತಿಯಲ್ಲಿ ಕುವೆಂಪುರವರಲ್ಲಿ ವ್ಯಕ್ತವಾಗದೆ, ಸಾಮಾಜಿಕ ಪ್ರಜ್ಞೆಯ ಅತ್ಯುನ್ನತ ಪ್ರತಿಮಾ ಲೋಕವಾಗಿ ಇವರ ಸೃಜನಶೀಲತೆಯಲ್ಲಿ ಪ್ರಕಟವಾಗಿದೆ ಎಂಬುದು. ಹೀಗೆ ಹಲವು ಅನುಭವಗಳ ಸಹಚರ್ಯ ಕುವೆಂಪು ರವರ ಸಾಹಿತ್ಯ ಹಾಗೂ ತತ್ವಚಿಂತನೆಗೆ ಇದೆ ಎಂಬುದ್ದನ್ನು ನಾವು ಮರೆತಂತಿದೆ.
ಜಾತಿಭ್ರಾಂತಿ, ಮತಭ್ರಾಂತಿ ಹಾಗೂ ಫ್ಯೂಢಲ್ ಪ್ರತಿಷ್ಠೆಯ ಭ್ರಾಂತಿಗಳ ಸಮಾಜ ನಮ್ಮದು. ಕರ್ನಾಟಕವನ್ನು ಈ ದುಷ್ಟಕೂಟಗಳು ಆವರಿಸಿಕೊಳ್ಳುತ್ತಿವೆ. ಅದರಲ್ಲೂ ಕುವೆಂಪುರವರು ಎತ್ತಿ ಹಿಡಿದ ಕರ್ನಾಟಕ ತತ್ವವನ್ನು ಹಿಂದುತ್ವವು ಹಾಗೂ ಫ್ಯೂಡಲ್ ಜಾತಿಗಳ ರಾಜಕಾರಣವು ನೊಣಬಿ ಹಾಕುತ್ತಿವೆ. ಈ ವಿಚಾರದಲ್ಲಿ ಶೂದ್ರ ಪ್ರಜ್ಞೆ ಹಾಗೂ ವಿಶ್ವಮಾನವತೆಯನ್ನು ಕನ್ನಡ ಸಮಾಜದ ಜಾತ್ಯತೀತ ಪರಂಪರೆ ಎಂದೇ ಅರಿಯದೆ ಕುವೆಂಪುರವರನ್ನು ನೆನೆಯುತ್ತಾ ಹೋದರೆ, ಹಿಂದೆ ಕುವೆಂಪು ಹೇಳಿದಂತೆ ಬರೀ ಸಾಹಿತ್ಯಕ ಹಾಗೂ ವಿಮರ್ಶಾತ್ಮಕ ವಿಚಾರಗಳಿಗೆ ಅವರನ್ನು ಸೀಮಿತಗೊಳೀಸಿದಂತೆ ಎಂಬುದ್ದನ್ನು ನಾವು ಅರಿತು, ನಮ್ಮ ಕರ್ನಾಟಕದ ಕಲ್ಚರಲ್ ರಾಜಕಾರಣ ಹಾಗೂ ಜಾತ್ಯತೀತ ಪರಂಪರೆಯ ಸ್ಥಳೀಯ ಮನೋಧರ್ಮಗಳ ಮೇಲೆ ಕುವೆಂಪುರವರನ್ನು ಮತ್ತೆ ಮರು ಓದುವ, ತಿಳಿಯುವ ಹೊಸ ಜಾಯಮಾನವನ್ನು ಸೃಷ್ಟಿಸಬೇಕಿದೆ. ಆಗ ಮಾತ್ರ ನಮ್ಮ ನಿರಂಕುಶ ಮುನಿಗೆ ನಾವು ನಿಜವಾದ ಗೌರವ ತೋರಲು ಸಾಧ್ಯವಾಗುತ್ತದೆ.
ಕುವೆಂಪು ಗತಿಸಿ ಅನೇಕ ವರ್ಷಗಳಾದರೂ, ಅವರು ಕೊಟ್ಟ ನಿರಂಕುಶಮತಿ, ಸವೋದಯದಂತಹ ಸಮಾಜದಂತಹ ಕಲ್ಪನೆಗಳು ಹಾಗೂ ಮನುಷ್ಯರನ್ನು ಚಿಕಿತ್ಸಕ ದೃಷ್ಟಿಯಿಂದ ಬದುಕಲು ಪ್ರೇರಣೆಯಾಗುವ ಹೊಸ ಯುಗಮಾನದ ಚೇತನತತ್ವವನ್ನು ಈ ತಲೆಮಾರಿಗೆ ಹೇಗೆ ಕಸಿಗೊಳಿಸಬಹದು ಎಂಬುದರತ್ತ ನಮ್ಮ ಚಿತ್ತ ಹೊರಳಬೇಕಿದೆ. ನಮ್ಮ ಜೀವನಸಂಸರ್ಗದ ಜೈವಿಕತೆಯೊತಿಯೊಂದಿಗೆ ಜೀವಿಸುವ ನವಮಾನವರ ಸೃಷ್ಟಿಸುವಲ್ಲಿ ಕುವೆಂಪುರವರ ಪುನರ್ ಮನನ ಇಂದಿಗೆ ತೀರಾ ಅಗತ್ಯವಾಗಿದೆ. ಸಾಮಾಜಿಕವಾಗಿ ಜಾತಿ ಶ್ರೇಣೀಕರಣದ ಅವರ್ಣ ಶೂದ್ರಮೂಲದಿಂದ ಬಂದ ಈ ಕವಿಚೇತನವು ಸಾರಸಗಟಾಗಿ ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ ಹೇಳ ಹೆಸರಿಲ್ಲದ ಜನವರ್ಗಗಳನ್ನು ತನ್ನ ಸಾಹಿತ್ಯ ಹಾಗೂ ವೈಚಾರಿಕತೆಯೊಳಗೆ ಪ್ರತಿಮೀಕರಿಸಿದ ದ್ರಷ್ಟಾರ ಮನಸ್ಸಾಗಿದೆ.