ದಲಿತರು ಎರಡು ರೀತಿಯ ಹಲ್ಲೆ ಮತ್ತು ಹಿಂಸೆ ಹಾಗೂ ದೌರ್ಜನ್ಯಗಳಿಗೆ ಒಳಗಾಗುತ್ತಾರೆಂದು ಡಿ.ಆರ್.ನಾಗರಾಜ್ ಅವರು ಗುರುತಿಸಿದ್ದಾರೆ. ಮೊದಲನೆಯದು ಸಾಂಪ್ರದಾಯಿಕವಾಗಿ ಹಳ್ಳಿಯ ನ್ಯಾಯದಡಿ ಜರುಗುವಂತದ್ದಾದರೆ, ಎರಡನೆಯದು ಅಸ್ಪೃಶ್ಯ ತಾನು ಕಲಿತು, ಪ್ರಜ್ಞಾವಂತನಾಗಿ ತನ್ನ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಪಡೆಯಲು ಹೊರಟಾಗ ಹುಟ್ಟುವ ಹಲ್ಲೆ ಮತ್ತು ಹಿಂಸೆ. ದಲಿತರ ಮೇಲಿನ ಸಾಂಪ್ರದಾಯಿಕ ಹಾಗೂ ಆಧುನಿಕ ಅಸಹನೆ ಇದೆಯಲ್ಲ ಇದು ಕೋತಿ, ನಾಯಿ, ನರಿಗಳನ್ನು ಬೇಕಾದರೆ ಅಪ್ಪಿಕೊಳ್ಳುತ್ತದೆ, ಆದರೆ ದಲಿತರನ್ನು ಮಾತ್ರ ಎಂದೂ ಸಹಿಸಲಾರದ ಅಮಾನುಷತೆಯನ್ನು ಪ್ರಕಟಿಸುತ್ತದೆಂಬುದೇ ವಿಚಿತ್ರ. ಇದು ಈ ಜಾತಿ ಸಮಾಜದ ವಿಲಕ್ಷಣ ಮ್ಯಾನರ್ಸ್‌!

ಸಿದ್ದಲಿಂಗಯ್ಯ, ಬೂಸಾ ಚಳುವಳಿ

ಮೇಷ್ಟ್ರು ಕವಿ ಸಿದ್ಧಲಿಂಗಯ್ಯನವರ ʻಅಲ್ಲೆ ಕುಂತಾವ್ರೆʼ ಎನ್ನುವ ಕವಿತೆ, ದಲಿತ ಮತ್ತು ದಲಿತೇತರ ಜಗತ್ತುಗಳು ಇದ್ದಲ್ಲಿಯೇ ಕೂತಿವೆ ಎಂಬುದ್ದನ್ನು ಈಗಲೂ ಕೂಗಿ ಕೂಗಿ ಹೇಳಿದಂತೆ ನನಗೆ ಭಾಸವಾಗುತ್ತಿದೆ. ದಲಿತರ ಜ್ಞಾನ, ಎಚ್ಚರ ಹಾಗೂ ವೈಚಾರಿಕ ಅಭಿವ್ಯಕ್ತಿ ಹೊಸತನವನ್ನು ಅಸಹನೆ ಹಾಗೂ ಆತಂಕದಿಂದ ನೋಡುವ ಜಾತಿ ಸಮಾಜದ ವೈಚಾರಿಕ ಹಾಗೂ ಬೌದ್ಧಿಕ ಹೇಡಿತನ ಇದೆಯಲ್ಲ, ಇದನ್ನು ಆಧುನಿಕ ಮನಸ್ಸಶಾಸ್ತ್ರಜ್ಞರು ಕೂಡ ತಿಳಿಯಲು ಅಶಕ್ತರಾಗುತ್ತಾರೆ. ದಲಿತರ ಸ್ವಾಭಿಮಾನದ ಉರಿಯಂತಿದ್ದ ಬಸವಲಿಂಗಪ್ಪನವರ ವೈಚಾರಿಕತೆ, ರಾಜಕೀಯ ಪ್ರಬುದ್ಧತೆ ಹಾಗೂ ಸಾಮಾಜಿಕ ಕಾಳಜಿಗಳನ್ನು ಈ ಸಮಾಜ ಅಂದು ಅವರ ಅಹಂಕಾರ ಹಾಗೂ ಪ್ರಚಾರಪ್ರಿಯತೆ ಎಂದೇ ಅಸಹನೆಯ ಪೂರ್ವಗ್ರಹದಲ್ಲಿ ನೋಡಿತ್ತು. ಜಾತಿ ಬಿಲಗಳ ಸಮಾಜದ ಕ್ರೌರ್ಯ ಹಾಗೂ ಮೇಲು ಜಾತಿಗಳ ಕ್ಲೀಬತ್ವದ ಮುಸುಕು ಮರೆಯ ಸಂಕುಚಿತತೆಯ ವರ್ತನೆಗಳನ್ನು ಅರಿತಿದ್ದ ಬಿ. ಬಸವಲಿಂಗಪ್ಪನವರು ಅಂಬೇಡ್ಕರ್ ಅವರ ಆಧುನಿಕತೆಯನ್ನೇ ನೆಚ್ಚಿದ್ದರು. ಹೀಗಾಗಿ ದಲಿತರ ಬಾಡಿ ಲಾಂಗ್ವೇಜ್‌ನ ಕುಬ್ಜತೆಗಳನ್ನು ಕಂಡರೆ ಅವರು ಉರಿದು, “ಏಯ್ ಹೋಗಿ, ಸ್ವಾಭಿಮಾನದಿಂದ ಸ್ವತಂತ್ರವಾಗಿ ತಲೆ ಎತ್ತಿ ಬದುಕಿ” ಎಂದೇ ಗದರಿ ಹೇಳುತ್ತಿದ್ದರು. ದಲಿತರ ಬಾಡಿ ಲಾಂಗ್ವೇಜ್ ಹಾಗೂ ವ್ಯಕ್ತಿತ್ವಕ್ಕೆ ಹೊಸ ಮಿಂಚಿನ ಸ್ಪರ್ಶ ಆಗಬೇಕೆಂಬ ಅವರ ವಿಚಾರ ಹಾಗೂ ಹಂಬಲಗಳು ಕೇವಲ ದಲಿತರಷ್ಟೇ ಅಲ್ಲ, ಈ ಶೋಷಿತ ಸಮುದಾಯಗಳ ಜನರ ಕಾಸ್ಟ್ ಕೆಮಿಸ್ಟ್ರಿಯ ಪ್ರಭಾವ ಮತ್ತು ಪರಿಣಾಮಗಳನ್ನು ಮೀರಿ ಬದುಕುವ ಸ್ವಾಭಿಮಾನದ ಇಂಗಿತವನ್ನೇ ಒತ್ತಿ ಹೇಳುತ್ತಿದ್ದವು.

ಈ ಹೊತ್ತಿಗೂ ಊರುಗಳಲ್ಲಿ ಈ ಜೋಯ್ಸ, ಪಟೇಲ, ಶಾನ್ಬೋಗ ಅಂತ ಹೆಸ್ರು ಕೇಳಿದ ತಕ್ಷಣವೇ ದಲಿತರು ಹಾಗೂ ಹಿಂದುಳಿದವರು ಬಾಡಿ ಮ್ಯಾನರ್‍ಸ್ ಹಾಗೂ ದನಿಯು ತೀರಾ ಅಧೀನತೆ ಹಾಗೂ ಕುಬ್ಜತೆಗೆ ಒಳಗಾಗಿ ಬಿಡುತ್ತದೆ. ಇದನ್ನು ನಮ್ಮ ನಡುವಿನ ಅಪರೂಪದ ಕ್ಯಾಸ್ಟ್ ಕೆಮಿಸ್ಟ್ರಿಯ ಚಿಂತಕರಾದ ಡಾ. ಸಿ.ಜಿ. ಲಕ್ಷ್ಮೀಪತಿಯವರು ತುಂಬಾ ಚೆನ್ನಾಗಿ ಬಿಡಿಸಿ ವಿಶ್ಲೇಷಿಸಿದ್ದಾರೆ. ಇವರ ಕ್ಯಾಸ್ಟ್ ಕೆಮಿಸ್ಟ್ರಿ ಕೃತಿ ಈ ವಿಚಾರದಲ್ಲಿ ತುಂಬಾ ಅಪರೂಪದ ಹೊಳಹುಗಳನ್ನು ನೀಡುತ್ತದೆನ್ನಬಹುದು. ಹಾಗಾಗಿ ಬಿ.ಬಸವಲಿಂಗಪ್ಪನವರು ವೈಚಾರಿಕತೆ ಮೂಲಕ ಈ ಹೀನ ಕುಬ್ಜತೆಯನ್ನು ಬದಲಾಯಿಸದ ದೇವರು, ಧರ್ಮಗಳನ್ನು ಒತ್ತಿ ಹೇಳುವ ಕನ್ನಡ ಸಾಹಿತ್ಯವೂ ಬೂಸಾ ಅಲ್ಲವೇ ಎಂದೂ ಭಾಷಣ ಮಾಡಿದ್ದರು. ಅವರ ಮಾತಿನ ಹಿಂದಿನ ವಿವೇಕ ಹಾಗೂ ಜ್ಞಾನವನ್ನು ಅರಿಯದ ಜಾತಿ ಸಮಾಜದ ರೋಗಗ್ರಸ್ಥ ಮನಸ್ಸುಗಳು ಹಾಗೂ ಅವರ ಕಡುವಿರೋಧಿಗಳು ಅವರ ವಿರುದ್ಧ ಕನ್ನಡ ದ್ವೇಷದ ಮಿಥ್ಯೆ ಸೃಷ್ಟಿ ಮಾಡಿ, ಅವರನ್ನು ಮಂತ್ರಿಮಂಡಲದಿಂದ ಕಿತ್ತುಹಾಕುವಂತಹ ಹೀನ ಪಿತೂರಿ ಮಾಡಿದರು.

ಬೂಸಾ ಚಳುವಳಿ
ಬಿ. ಬಸವಲಿಂಗಪ್ಪ

ಎಪ್ಪತ್ತರದ ದಶಕದ ಆರಂಭದ ಕರ್ನಾಟಕದಲ್ಲಿ ಹೊಸ ಸಂಚಲ ಹುಟ್ಟಿಸಿದ ಬೂಸಾ ಪ್ರಕರಣದಿಂದಾಗಿ ದಲಿತರು ಈ ಎರಡೂ ತೆರನಾದ ಹಿಂಸೆ, ಹಲ್ಲೆಗಳಿಗೆ ಒಳಗಾದರೆಂಬುದನ್ನು ಕಾಣುತ್ತೇವೆ. ಆದರೂ ಈ ಎರಡು ರೀತಿಯ ಹಲ್ಲೆ ಮತ್ತು ಹಿಂಸೆಗಳು ಇಂದಿಗೂ ಜೀವಂತವಾಗಿವೆ ಎಂಬುದೇ ವಿಪರ್ಯಾಸ. ಅದಾಗ್ಯೂ ಜಾತಿ ದೌರ್ಜನ್ಯದ ಈ ಸೂಕ್ಷ್ಮಗಳ ಬಗ್ಗೆ ಯಾವ ಸಮಾಜ ವಿಜ್ಞಾನಿ, ಜ್ಞಾನೋತ್ಪದಕರಿಗೂ ಗೋಚರಿಸುತ್ತಿಲ್ಲವೆಂಬುದು, ಇದರ ನಡುವೆ ನಮ್ಮ ಶಾಲಾ, ಕಾಲೇಜು ಹಾಗೂ ಜ್ಞಾನೋತ್ಪಾದನೆಯ ವಿಶ್ವವಿದ್ಯಾಲಯಗಳ ಮೊಗಸಾಲೆಗಳು ಮತ್ತಷ್ಟು ಜಾತಿಪೀಡಿತವಾಗುತ್ತಿದ್ದು, ಅಸ್ಪೃಶ್ಯ ಲೋಕವು ಮತ್ತಷ್ಟೂ ಕಗ್ಗಂಟು ಹಾಗೂ ಹೊಸ ಅಸ್ಪೃಶ್ಯತೆಯ ಸಮಸ್ಯೆಗಳಿಗೆ ತುತ್ತಾಗುತ್ತಿದೆ ಎಂಬುದು ತಿಳಿಯುತ್ತದೆ. ಆತಂಕಕಾರಿಯಾದ ವಿಚಾರವೆಂದರೆ, ಇಂದಿನ ಕನ್ನಡ ಜಗತ್ತು ತನ್ನ ಸಾಹಿತ್ಯಕ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಜ್ಞಾನ ಹಾಗೂ ಬೌದ್ಧಿಕ ಏರಿಯಾಗಳ ತುಂಬಾ ಮತ್ತೆ ಈ ಬೂಸಾವನ್ನೇ ತುಂಬಿಕೊಳ್ಳುತ್ತಿದೆ ಎಂಬುದು. ಆದರೆ ಅಂದಿನ ಬೂಸಾ ಪ್ರಕರಣದ ಹೊತ್ತಲ್ಲಿ ಉಂಟಾದ, ಎಚ್ಚೆತ್ತ ದಲಿತರ ಮೇಲಿನ ಈ ಹಲ್ಲೆ ಮತ್ತು ಹಿಂಸೆಗಳನ್ನು ನೆನೆದರೆ ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ವಿಪ್ಲವದ ಚರಿತ್ರೆಯ ಕರಾಳ ಮುಖಗಳು ನೆನಪಾಗುತ್ತವೆ.

ಮೊನ್ನೆ ದೊಡ್ಡಬಳ್ಳಾಪುರದಲ್ಲಿ ಹಿಂಗೆ “ಬೂಸಾ ಚಳವಳಿ ನಡೆದು ಐವತ್ತೋರ್ಷ ಆಗಿದೆ, ಅದರ ನೆನಪಿಗಾಗಿ ಏನಾದರೂ ಕಾರ್ಯಕ್ರಮ ಮಾಡಬೇಕಲ್ಲವೇ?” ಎಂದು ಅಪರೂಪಕ್ಕೆ ಸಿಕ್ಕ ಹಿರಿಯರೂ ಹಾಗೂ ಸ್ಥಳೀಯ ಗ್ರಾಮಪಂಚಾಯ್ತಿ ಅಧ್ಯಕ್ಷರೂ ಆಗಿದ್ದ ರಾಜಗೋಪಾಲ್ ವಡ್ಡರಹಳ್ಳಿ ಇವರ ಬಳಿ ಮಾತಾಡುವಾಗ, ನಾನು ನಮ್ಮ ಬಸವಲಿಂಗಪ್ಪನವರು, ಎಂದ ತಕ್ಷಣ ಅವರು “ಬಸವಲಿಂಗಪ್ಪನವರೇ ಸರ್ ಅವ್ರನ್ನ ನಮ್ಮ ತಾತ ನೆನೆಸಿಕೊಳ್ತಾನೆ ಇರೋರು” ಎಂದು, ನಾನು ಕಂಡು ಕೇಳರಿಯದ ಘಟನೆಯನ್ನು ನೆನಪಿಸಿದರು. ಆ ಘಟನೆ ಹೀಗಿದೆ..

ಹೀಗೆ ಬಿ. ಬಸವಲಿಂಗಪ್ಪನವರು ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯದ ಬಳಿ ಯಾವುದೇ ಕಾರ್ಯಕ್ರಮಕ್ಕೆ ಬರುತ್ತಿದ್ದರಂತೆ, ದಾರಿ ಮಧ್ಯೆ ಈ ವಡ್ಡರಹಳ್ಳಿಯ ದಲಿತ ತೋಟಿ, ತಳವಾರರು ಮಿನಿಸ್ಟ್ರು ಬರ್ತಾರೆ ಅಂತ ಕಾಯ್ದುಕೊಂಡು ನಿಂತಿದ್ರಂತೆ. ಆಗ ಒಂದು ಕಾರ್ ಸರ್ರನೆ ಪಾಸ್ ಆಗಿ, ಮತ್ತೆ ಹಂಗೆನೆ ಆ ಕಾರ್ ಹಿಂದಕ್ಕೆ ಬತ್ತಂತೆ. ಅಲ್ಲಿ ನಿಂತಿದ್ದ ಈ ತೋಟಿ ತಳವಾರರನ್ನು ನೋಡಿ, ಕಾರ್ ಒಳಗಿನಿಂದಲೇ, “ಓಯ್ ಯಾರ್ ನೀವು? ಹಿಂಗ್ಯಾಕೆ ದಾರೀಲಿ ನಿಂತಿದ್ದೀರ?” ಅಂತ ಖಡಕ್ ದನಿಯಲ್ಲಿ ಆ ನಿಂತ ಜನಗಳ್ನ ಕೇಳ್ತಂತೆ. ಆಗ ಅಲ್ಲಿದ್ದ ಆ ಗುಂಪು “ಸ್ವಾಮೀ ಯಾರೋ ಮಿನಿಸ್ಟ್ರು ಬರ್ತಾರಂತೆ, ಅದಕ್ಕೆ ನಮ್ಮೂರ ಪಟೇಲರು ನಮ್ಮನ್ನು ಹೀಗೆ ಕಳ್ಸಿದ್ದಾರೆ” ಅಂತ ಅಂದ್ರಂತೆ. ಆ ಕ್ಷಣವೇ ಬಸವಲಿಂಗಪ್ಪನವರು “ನಾನೇ ಆ ಮಿನಿಸ್ಟ್ರು ಅಂತೇಳಿ, ಯಾರ್ರೀ ಆ ಪಟೇಲ?” ಅಂತೇಳಿ, ಡಿ.ಸಿಯವರನ್ನು ಕರೆದು “ಇವ್ರಿಗೆಲ್ಲ ಜಮೀನಿದೆಯೇನ್ರಿ” ಎಂದು ಕೇಳಿದಾಗ, ಆ ಜನರೇ “ಊ ಸ್ವಾಮಿ ಇದೆ” ಅಂದರಂತೆ. “ಮತ್ತೆ ಹೋಗಿ ಈ ವೇಷ, ಈ ದೊಣ್ಣೆನಲ್ಲ ಬಿಸಾಕಿ” ಅಂತೇಳಿ, ಆ ದೊಣ್ಣೇನಲ್ಲ ತಮ್ಮ ಕಾರಿಗೆ ತುಂಬ್ಕೊಂಡು, “ನೋಡೀ ಹೋಗಿ ಹೊಲದಲ್ಲಿ ದುಡಿದು ಯಾವ ಗೌಡ, ಪಟೇಲನ ಹತ್ರಕ್ಕೂ ಹೋಗದೆ ಸ್ವತಂತ್ರವಾಗಿ ಬದುಕಿ” ಅಂತ ಕಾರಲ್ಲಿ ಹೊಂಟೋದ್ರಂತೆ.

ಆ ಘಟನೆಯನ್ನು ರಾಜಗೋಪಾಲ್ ಅವರು ನೆನಪಿಸಿ ನನ್ನ ಮೈಯ್ಮನವೆಲ್ಲ ಆವರಿಸಿದ್ದ ಡಿಸೆಂಬರ್ ಚಳಿ ಹೋಗಿ ಬಿಸಿ ಕಾವತ್ತಿದಂತೆಯೂ, ಬಸವಲಿಂಗಪ್ಪನವರ ಆ ಖದರ್‌ ನೆನೆದು ಮತ್ತಷ್ಟು ಪ್ರೀತಿ ಹಾಗೂ ಅಭಿಮಾನ ಆ ಕ್ಷಣ ಅವರ ಬಗ್ಗೆ ನನ್ನಲ್ಲಿ ಅಂಕುರವಾಯ್ತು. ಅದಲ್ಲದೆ ರಾಜಗೋಪಾಲ್ ಅವರ ತಾತಾ ಅಂದಿನಿಂದ ಸ್ವಾಭಿಮಾನಿಯಾಗಿ ಬದುಕಲು ಆ ಬಸವಲಿಂಗಪ್ಪನವರ ಆ ಸನ್ನಿವೇಶವೇ ಕಾರಣವೇ ಎಂದಾಗ, ಎಂತಹ ಮನಸ್ಸು ಎಂದೂ ಒಳಗೊಳಗೆ ರೋಮಾಂಚಿತನಾದೆ.

ಬೋನ್ಸಾಯ್‌ ಟ್ರೀ
ಬೋನ್ಸಾಯ್‌ ಟ್ರೀ (ಕುಬ್ಜ ಮರ)

ಬಸವಲಿಂಗಪ್ಪನವರ ವ್ಯಕ್ತಿತ್ವವನ್ನು, ಕವಿ ಸಿದ್ಧಲಿಂಗಯ್ಯನವರು ತಮ್ಮ ಪಂಚಮ ನಾಟಕದಲ್ಲಿ ಬರುವ ಸಾಮಾಜಿಕ ಆಕ್ರೋಶದ ದಲಿತ ಮಿಲಿಟೆಂಟ್ ವ್ಯಕ್ತಿತ್ವದ ರೀತಿಯಂತದ್ದೇ ಎಂದು ಸಮೀಕರಿಸಿದರೂ, ಇದರಾಚೆಗೆ ಅವರ ವ್ಯಕ್ತಿತ್ವ ಇದೆ ಎಂಬುದ್ದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ನಮ್ಮಲ್ಲೊಂದು ರೋಗವಿದೆ. ಅದೇನೆಂದರೆ, ನಾವು ನಮ್ಮ ಹಿರೀಕರನ್ನು, ಅವರ ವ್ಯಕ್ತಿತ್ವ ಹಾಗೂ ನಿಲುವುಗಳನ್ನು ನಮಗೆ ಬೇಕಾಗುವ ಹಾಗೆ ಮಿನಿಮೈಸ್ ಮಾಡಿ ಅವರನ್ನು ಈ ಬೋನ್ಸಾಯ್ ಟ್ರೀ ಥರ ಮಾಡಿಬಿಡುತ್ತೇವೆ. ಹಾಗಾಗಿ, ನಾವು ಬಿ. ಬಸವಲಿಂಗಪ್ಪನವರ ವ್ಯಕ್ತಿತ್ವ ಹಾಗೂ ಅವರ ವೈಚಾರಿಕತೆಯನ್ನು ಇನ್ನೂ ಸಂಯಮಿಸಿ ನೋಡುವ ಅಗತ್ಯವಿತ್ತೇನೊ? ಈ ಅಭಿಮಾನದ ಆಚೆಗೂ ಹುಟ್ಟುವ ವಿಚಾರವಂತಿಕೆ, ವಿಮರ್ಶೆಯ ಪ್ರವೃತ್ತಿಗಳು ಮಾತ್ರವೇ ನಾವು ಕಾಣದ ನಮ್ಮ ಹಿರೀಕರ ಮತ್ತೊಂದು ಮಗ್ಗುಲುಗಳ ಪರಿಚಯ ಮಾಡಿಕೊಡಬಲ್ಲವು. ಈ ನಿಟ್ಟಿನಲ್ಲಿ ನಾವು ಅವಲೋಕನದ ದಾರಿಯತ್ತ ಈ ಬೂಸಾ ಐವತ್ತರ ಸಂದರ್ಭದಲ್ಲಿ ಹೊರಳಿಕೊಳ್ಳಬೇಕಾಗಿದೆ.

ದಲಿತರೊಳಗೆಯೇ ಏರ್ಪಟ್ಟ ನಗರ-ಹಳ್ಳಿ, ಅನಕ್ಷರಸ್ಥರು- ಅಕ್ಷರಸ್ಥರು ಎಂಬ ಈ ದ್ವಂದ್ವಗಳೆಂಬ ಸೀಳುವಿಕೆಯಿಂದ ಆದ ದಲಿತ ಜಗತ್ತಿನ ನಿರ್ಮಾಣ ಹಾಗೂ ನಿರ್ನಾಮಗಳ ಕತೆಯನ್ನು ಯಾವ ಕುರಿಯಯ್ಯ ಹಾಗೂ ಅಮಾಸಂದಿರ ಕೈಲಿ ಹೇಳಿಸಬೇಕಾಗುವುದು? ಈಗ ಎಪ್ಪತ್ತರ ದಶಕದ ವೈಭವೀಕರಣ ನಿಲ್ಲುವ ಹೊತ್ತು ಬಂದಿದೆ ಎಂದು ಯೋಚಿಸಬೇಕಿದೆ.

ಒಂದು ಪ್ರಾಮಾಣಿಕ ಆವಲೋಕನ ಹಾಗೂ ವಿಮರ್ಶೆಗೆ ಒಳಗಾಗದ ಉದ್ಧಟತನದಲ್ಲಿ ದಲಿತ ಸಾಹಿತ್ಯ, ಚಳವಳಿ ಹಾಗೂ ದಲಿತ ಬುದ್ಧಿಜೀವಿಗಳು ಹಳೆಯ ರೂಢಿಯ ದಲಿತತ್ವ ಹಾಗೂ ಬಾಬಾ ಸಾಹೇಬರ ಹೆಸರೇಳಿಕೊಂಡು ಲಂಭಿಸುವುದಾದರೂ ಎಲ್ಲಿಗೆ? ಸ್ವಾಭಿಮಾನ, ಶಿಕ್ಷಣ ಹಾಗೂ ಸಂಘಟನೆಯ ಮಾರ್ದನಿ ಕೇವಲ ಹೊರಗಿನ ಜಗತ್ತನ್ನು ಕುಪಿತಗೊಂಡು ನೋಡುವ ವೈಚಾರಿಕ ಆಕ್ರೋಶಾಭಿವ್ಯಕ್ತಿಗೆ ಮಾತ್ರ ಸೀಮಿತಗೊಳಿಸುತ್ತಿದ್ದೇವೆಯೇ? ಇಂತಹ ಏಕತಾನತೆಯ ಆಚೆಗೂ ಬೂಸಾ ಚಳವಳಿ ಹಾಗೂ ಬಸವಲಿಂಗಪ್ಪನವರ ಪ್ರಜ್ಞೆ ಹಾಗೂ ವೈಚಾರಿಕತೆಯ ಸಹನೀಯಗೊಳಿಸುವ ಸಹಯಾನದ ಸಾಧ್ಯತೆಗಳನ್ನು ಕಂಡುಕೊಳ್ಳದೇ ಹೋದದ್ದು ನಮ್ಮ ಬಹುದೊಡ್ಡ ವೈಫಲ್ಯತೆಯಾಗಿದೆ ಎಂಬುದ್ದನ್ನು ಇಂದಿಗೆ ಒಪ್ಪಿಕೊಳ್ಳಬೇಕಿದೆ. ನಾವು ಕಟ್ಟಿಕೊಂಡ ಬೌದ್ಧಿಕ ಹಾಗೂ ವೈಚಾರಿಕ ಪ್ರಜ್ಞೆಯ ಪ್ರತಿಮಾವಳಿಗಳನ್ನು ನಾವೇ ಸ್ವತಃ ಭಂಜಿಸದೆ, ಖಂಡಿತವಾಗಿ ಹೊಸ ಕಾಲದ ಪ್ರಜ್ಞೆ ಹಾಗೂ ಚಲನಶೀಲತೆಯನ್ನು ಹುಟ್ಟುಹಾಕಲಾರೆವು. ಬೌದ್ಧರು ಹೇಳುವ ವಿಕಲ್ಪಗಳಿಂದ ಬಿಡುಗಡೆ ಎಂಬುದು ಇಂತಹ ಸಮಾಜದ ರಚನೆಗಳು, ಕಾಲಕ್ಕೆ ಅನಗತ್ಯವಾಗುವ ಅಪದ್ಧಗಳನ್ನು ಮೀರುವುದೇ ಆಗಿದೆ ಎಂಬುದು. ಅದೇಕೆ ನಾವು ಈ ಬಗೆಗೆ ಕಿವಿಗೊಡುತ್ತಿಲ್ಲವೆಂಬುದೇ ಪರಮಾಶ್ಚರ್ಯ ಹುಟ್ಟಿಸುತ್ತಿದೆ.

ಹಾಗೆಯೇ ಸಹಜವಾಗಿ ದಲಿತರ ಎಚ್ಚರವನ್ನು ಅಸಹನೀಯವಾಗಿ ನೋಡುವ ಬ್ರಾಹ್ಮಣ್ಯ ಹಾಗೂ ಅಬ್ರಾಹ್ಮಣ ಫ್ಯೂಡಲ್ ಜಾತಿಗಳ ಆಂತರ್ಯವನ್ನು ದಲಿತ ಚಳವಳಿ ಹಾಗೂ ಸಾಹಿತ್ಯ ತನ್ನ ಚಾರಿತ್ರಿಕ ಅನಿವಾರ್ಯತೆಯ ಕಾರಣಕ್ಕೆ ತುಚ್ಛೀಕರಿಸಿ, ಸಂಕುಚಿತಗೊಳಿಸಿ ನೋಡಿದ್ದೂ ಸರಿಯೇ ಆಗಿದ್ದರೂ, ಕಾಲಾಂತರದಲ್ಲಿ ಈ ತುಚ್ಛೀಕರಣ ಹಾಗೂ ಸಂಕುಚಿತತೆಗಳನ್ನು ಮೀರಿ ಬೇರೆಯದೇ ಆದ ಭಾಷೆ, ಅಲೋಚನೆ ಹಾಗೂ ಸಂಘಟನಾತ್ಮಕ ವಿಧಿ ವಿಧಾನಗಳ ಹೊಸ ಸಾಂಸ್ಕೃತಿಕ ಅಭಿವ್ಯಕ್ತಿಯತ್ತ ಯೋಚಿಸಬೇಕಿದೆ. ಅಲ್ಲದೆಯೇ ಪ್ರತಿ ತಲೆಮಾರು ಸಹ ತನ್ನೆದುರನ್ನು ದಿಟ್ಟವಾಗಿ ಎದುರಾಗಿಯೇ ತನ್ನ ಕಾಲದ ದಲಿತತ್ವ ಹಾಗೂ ಅಂಬೇಡ್ಕರ್ ಪ್ರಜ್ಞೆಯನ್ನು ಸೃಷ್ಟಿಸಿಕೊಳ್ಳಬೇಕಿದೆ. ಇದು ಬುದ್ಧಗುರು ಪ್ರತಿಬಾರಿಯೂ ಬೊಗಸೆಯಲ್ಲಿ ಎತ್ತಿಕೊಳ್ಳುವ ನೀರು, ಹೊಸ ನದಿಯ ನೀರಾಗಿರುತ್ತದೆ ಎಂಬುದರ ಅರಿವೇ ಆಗುತ್ತದೆ.

ಇವುಗಳ ನಡುವೆ ತುಂಬಾ ಸವಾಲಿನ ವಿಷಯವೆಂದರೆ, ಈಗಿನ ದಲಿತ ಹೊಚ್ಚ ಹೊಸ ತಲೆಮಾರಿಗೆ ಇವ್ಯಾವುದರ ಅರಿವಿಲ್ಲ. ಹಾಸ್ಟಲ್ ವಿದ್ಯಾರ್ಥಿಗಳು, ದಲಿತ ನವ ತರುಣರು ಎರಡು ಧ್ರುವಗಳ ನಡೆವೆ ತೇಲುವ ಜನಾಂಗವಾಗಿ ಬದಲಾಗಿರುವುದು ನಮಗೆ ದೊಡ್ಡ ಅಘಾತ. ಇದೊಂತರ ತ್ರಿಶಂಕುಸ್ಥಿತಿಯ ದಲಿತ ನವಜನಾಂಗ! ಇದರ ಸೃಷ್ಟಿ ಜಾಗತೀಕರಣ ಹಾಗೂ ಹಿಂದೂ ಬಲಪಂಥೀಯ ರಾಷ್ಟ್ರೀಯತೆ ಎಂಬ ದೈತ್ಯ ವಿಶ್ವಾಮಿತ್ರತರ ಆಮಿಷಗಳಿಂದಾಗಿ ಈ ಇಚೀನ ಯಂಗ್ ಜನರೇಷನನ್ನು ಮೋಡಿ ಮಾಡಿಬಿಟ್ಟಿದೆ. ಹಾಗಾಗಿ ಎರಡು ಮೂರು ದಲಿತ ತಲೆಮಾರುಗಳ ನಂತರದ ಅಕ್ಷರಸ್ಥ ದಲಿತರು ದಸಂಸ, ಚಳವಳಿ, ಸಾಹಿತ್ಯ ಹಾಗೂ ಕೇರಿಗಳ ಅನುಭವ ಜಗತ್ತಿಗೆ ಅಪರಿಚಿತರಾಗಿ ಬದಲಾಗಿ ಹೋಗುತ್ತಿದ್ದಾರೆಂಬುದರ ನಷ್ಟವನ್ನು ಹೇಗೆ ತುಂಬಿಕೊಳ್ಳುವುದು ಎಂಬುದು ಈಗ ಬಹಳ ದೊಡ್ಡ ಸವಾಲಾಗಿದೆ.

ಬೂಸಾ ಚಳವಳಿ ಐವತ್ತು ತುಂಬಿದ ಮತ್ತು ಬಸವಲಿಂಗಪ್ಪನವರು ಇಲ್ಲವಾಗಿ ಮೂವತ್ತೊಂದು ವರ್ಷ (26-12-1992) ತುಂಬಿದ ಸಂದರ್ಭದಲ್ಲಿ, ಈ ಹಾಡನ್ನು ಹಾಡುತ್ತಲೇ ಬಸವಲಿಂಗಪ್ಪ ಎಂಬ ಆ ನಮ್ಮ ಹಿರೀ ಚೇತನದ ಕಸುವನ್ನು ರಾಮಯ್ಯನವರ ಹಾಡನಲ್ಲಿಯೇ ಪ್ರಾರ್ಥಿಸಿ, ನೆನಪಿಸಿಕೊಂಡು ನಮ್ಮ ಮೈಮನಕ್ಕೆ ತುಂಬಿಕೊಳ್ಳಬೇಕೆನಿಸುತ್ತಿದೆ.

ಆ ಹಿರಿಯರ ಪಾದಕ್ಕೆ ಶರಣೊ
ಅವರು ಮುಟ್ಟಿದಾ ಮಣ್ಣಿಗೆ ಶರಣೊ
ಶರಣು ಶರಣು ಶರಣಯ್ಯಾ ಶರಣು.

Leave a Reply

Your email address will not be published. Required fields are marked *