ಮಲೆನಾಡು ಜನಪರ ಹೋರಾಟ ಸಮಿತಿಯಿಂದ ಟಿ.ಹೆಚ್. ಲವಕುಮಾರ್ ಅವರಿಗೆ ಸಕಲೇಶ್ವರ ಹೊಂಗ್ಡ ಹಳ್ಳ ಗುಂಡ್ಯ ಬಳಿ ಅಣೆಕಟ್ಟುವ ಯೋಜನೆಯಾಗ್ತಿದೆ. ಇದರಿಂದ ಅಪಾರ ಕಾಡು ಮುಳುಗಡೆಯಾಗ್ತದೆ. ಆದ್ದರಿಂದ ಈ ಭಾಗದ ನೆಲ, ಜಲ ರಕ್ಷಣೆ ಮಾಡಿಕೊಳ್ಳುವಂತೆಯೂ, ಅಲ್ಲದೆ ಈ ಯೋಜನೆ ವಿರೋಧಿಸುವಂತೆ ಉದ್ಧೇಶಿತ ಯೋಜನೆಗೆ ವಿರುದ್ಧವಾಗಿ ಜನರಲ್ಲಿ ಅರಿವು ಬಿತ್ತಲು ಸಾಂಸ್ಕೃತಿಕ ಜಾಥ ಮಾಡಿಕೊಡಿ ಎಂಬ ಆಹ್ವಾನ ಬಂದಿತು.
ನಾನು ಈ ಮೊದಲು ಅಭಿವೃದ್ಧಿ ಹಾಗೂ ಜಾಗತೀಕರಣದ ಅಪಾಯಗಳ ಬಗ್ಗೆ ಓದಿದ್ದೆ. ಇವುಗಳ ಪರಿಣಾಮದ ಬಗ್ಗೆ ಸೂಕ್ಷ್ಮವಾಗಿ ಗಮನಿಸೋದ್ದನ್ನು ಕೂಡ ಕಲ್ತಿದ್ದೆ. ಅಲ್ಲದೆ, ನರ್ಮದಾ ಬಚಾವ್ ಅಂದೋಲನ ಪರಿಣಾಮ, ಅಣೆಕಟ್ಟಿಂದ ಆಗುವ ವಿನಾಶವನ್ನು ಕಣ್ಣಾರೆ ಕಂಡಿದ್ದೆ. ಮತ್ತೆ ಮುಳುಗಡೆ ಎಂಬುದರ ನರಕ ಹಾಗೂ ನಿರ್ನಾಮದ ಪರಿಚಯವಾಗಿತ್ತು. ಕೃಷಿ ನಾಶ, ಬುಡಕಟ್ಟು ಜನರು, ಕಾಡಿನ ಮುಳಗಡೆ, ಒಕ್ಕಲಿಬ್ಬಿಸುವ ಸರ್ಕಾರಗಳ ನಿರ್ದಯಿ ಯೋಜನೆಗಳು ಹೇಗೆ ಬಡಬಗ್ಗರನ್ನು ಅದೃಶ್ಯ ಜನಾಂಗಗಳನ್ನಾಗಿಸಿ, ಅಜ್ಞಾತಕ್ಕೆ ನೂಕುತ್ತಿವೆ ಎಂಬುದ್ದನ್ನು ಅರ್ಥಮಾಡಿಕೊಳ್ತಿದ್ದ ದಿನಗಳು ಅವು. ಆಳುವ ಸರ್ಕಾರಗಳು ಸ್ವತಂತ್ರ ಭಾರತದಲ್ಲಿ ಹೇಗೆ ಜನ ವಿರೋಧೀ ಆಗ್ತವೆ ಎಂಬ ಬಗ್ಗೆ ಅಭಿವೃದ್ಧಿ ವಿಮರ್ಶೆ, ಈ ಕುರಿತ ವರ್ತಮಾನದ ಹೋರಾಟಗಳು, ಜನವಿರೋಧೀ ಬೃಹತ್ ಯೋಜನೆಗಳು ಸೃಷ್ಟಿಸುವ ವಿನಾಶದ ಬಗ್ಗೆ ಕೇಳಿ, ನೋಡಿದ್ದೂ ಅಲ್ಲದೆ ಈ ಬಗ್ಗೆ ಪುಸ್ತಕಗಳನ್ನು ಓದ್ತಿದ್ದೆ. ಅಲ್ಲದೆ ಡಿ.ಆರ್. ನಾಗರಾಜ್ ಅವರ ಅಭಿವೃದ್ಧಿ ಎಂದರೆ ನಿರ್ಮಾಣ ಮತ್ತು ನಿರ್ನಾಮ ಅನ್ನೋದು ನನ್ನ ತಲೆನಾ ಕೊರಿತಿತ್ತು ಬಿಡ್ದೆ.
ಸಂವಾದದಲ್ಲಿ ದ್ವೀಪ ಪಿಚ್ಚರ್ ನೋಡಿ, ನಮ್ಮದೇ ಕರ್ನಾಟಕದ ಜನ, ನೆಲ, ಅವರ ನೆನಪು, ಮುಳುಗಡೆ, ಬದುಕಿನ ಎತ್ತಂಗಡಿ ಇವೆಲ್ಲವೂ ಎಷ್ಟೊಂದು ಹಿಂಸೆಯಿಂದ ಕೂಡಿರ್ತವೆ ಎಂಬ ಬಗ್ಗೆ ತುಂಬಾ ಡೀಪಾಗಿ ಆರ್ಥ ಮಾಡಿಕೊಳ್ಳಲು ಶುರುಮಾಡಿದ್ದೆವು. ನರ್ಮದಾ ನದಿಗೆ ಕಟ್ಟಿರುವ ಅಣೆಕಟ್ಟುಗಳಿಂದ ಆದ ಜನರ ಬದುಕು, ಕಾಡು ಮುಳುಗಡೆ, ಹೊಲ ಮನೆಗಳು ಮುಳುಗಿದ್ದ ದೃಶ್ಯಗಳು, ನೀರಲ್ಲಿ ತೇಲ್ತಿದ್ದ ಅನಾಥ ಶವ ಎಲ್ಲವನ್ನು ಪ್ರತ್ಯಕ್ಷ ಕಂಡು ಬೆಚ್ಚಿಬಿದ್ದಿದೆ. ಮೇಧಾಪಾಟ್ಕರ್ ಅವರ ಖಡಕ್ ಆದ ಪ್ರಶ್ನೆಗಳು, ಜನ ವಿರೋಧೀ ಸರ್ಕಾರಗಳ ಬಗೆಗಿನ ಅವರ ತೀವ್ರ ಮಾತುಗಳು, ಚಳವಳಿಗಾರರ ತೀವ್ರತೆ ಎಲ್ಲವನ್ನು ಕಂಡು, ಕಿವಿಯಾರೆ ಕೇಳಿದ್ದಿದೆ. ಈಗಲೂ ಆ ನೆನಪುಗಳು ಕಾಡ್ತವೆ. ಅಲ್ಲಿನ ಬುಡಕಟ್ಟು ಅಧೋಗತಿ, ನಿರ್‍ಗತಿಕತನ, ಮನೆಮಠ ಎಲ್ಲ ಕಳೆದು ತಬ್ಬಲಿಗಳಾದ ಆ ಜನರ ನಿಟ್ಟುಸಿರು, ಅಸಹಾಯಕತೆ, ಹಾಗೆ ಅವರ ಕಣ್ಣೊಳಗೆ ಉರಿವ ಸಂಕಟ, ಜಲಸತ್ಯಾಗ್ರಹ ಇವೆಲ್ಲವೂ ನಮ್ಮದೇ ಸಮಾಜದ ಸ್ವಾತಂತ್ರೋತ್ತರ ಸ್ಥಿತಿಗತಿಗಳೆಂದು ಅರ್ಥವಾಗತೋಡಗಿದವು. ಈ ಸನ್ನಿವೇಶಗಳು, ಅದರ ಸುತ್ತಣ ಚರ್ಚೆಗಳು ನನಗೆ ಈ ಸಂವೇದನೆಗೆ ರೂಟಾಕಿ ಕೊಟ್ಟವು. ನಾನು ಈ ಹಿಂದೆ ಕುಶಾಲನಗರದ ಕರ್ನಾಟಕದ ಬುಡಕಟ್ಟುಗಳ ಸಮಾವೇಶಕ್ಕೂ ಹೋಗಿದ್ದು ನೆನಪಿದೆ. ಅಲ್ಲಿ ಲೋಕಲ್ ಬುಡಕಟ್ಟಿನ ಜನಗಳ ಸಂಕಷ್ಟಗಳನ್ನು ಕಣ್ಣಾರೆ ಕಂಡು ಕೇಳಿದ್ದಿತ್ತು. ಬುಡಕಟ್ಟು, ಜಾನಪದ ಇವೆಲ್ಲವನ್ನು ಪೊಲಿಟಿಕಲಿ, ಕಲ್ಚರಲಿ ಬೇರೆ ಒಂದು ಅಂಡರ್ ಸ್ಡಾಡಿಂಗಿಗೆ ಬರಲು ಕಾರಣವಾದವು.
ನಾನು ಎಂ.ಎ.ನಲ್ಲಿ ಜಾನಪದವನ್ನು ತೆಗೆದುಕೊಂಡಿದ್ದರೂ, ಮತ್ತೆ ನಮ್ಮೂರ ಬಳಿ ಜಾನಪದಲೋಕ ಇದ್ದರೂ ನನಗದೇನೋ ಇವು ಇಷ್ಟ ಆಗ್ತಿರಲಿಲ್ಲ. ಆದರೆ ನರ್ಮದಾ ಬಚಾವ್ ಅಂದೋಲನ, ಕುಶಾಲನಗರದ ಬುಡಕಟು ಸಮ್ಮೇಳನ, ಗುಂಡ್ಯ ಜಲವಿದ್ಯುತ್ ವಿರೋಧಿ ಜಾಥಾ, ದೊಡ್ಡಬಳ್ಳಾಪುರದ ಗೋಗೋ ಫ್ಯಾಕ್ಟರಿ ಲಾಕೌಟ್, ನಮ್ಮ ಬಿಡದಿ ಬಳಿ ಆದ ಕೈಗಾರಿಕ ವಸಾಹತುಗಳ ಪರಿಣಾಮ ಕಣ್ಣಾರೆ ಕಂಡಿದ್ದ ನನಗೆ, ಈ ಎಲ್ಲವುಗಳಿಂದಾಗಿ ಸಾಮಾಜಿಕವಾಗಿ ಅಭಿವೃದ್ಧಿ ಕುರಿತು ನನ್ನ ಅಲೋಚನೆಗಳು ಬದಲಾಗುವಂತೆ ಮಾಡಿದ್ದವು.
ಅಲ್ಲದೆ ಪ್ರಗತಿಯ ವಿಮರ್ಶೆ, ಜಾಗತೀಕರಣ ವಿರೋಧೀ ಚಿಂತನೆಗಳನ್ನು ತುಂಬಾ ಓದುತ್ತಿದ್ದೆ. ಈ ವಿಚಾರದಲ್ಲಿ ಡಿ.ಆರ್ ನಾಗರಾಜ್, ಶಿವವಿಶ್ವನಾಥ್ ಕನ್ನಡ ಅನುವಾದದ ಬರಹಗಳು, ರೈತಸಂಘದ ವಿಚಾರಗಳು, ಲಂಕೇಶರ ಆಧುನಿಕ ಮನುಷ್ಯರ ಭಗ್ನತೆ ಕುರಿತ ಅಲ್ಲಲ್ಲಿ ಓದಿದ್ದುದರ ಜೊತೆಗೆ ಕಣ್ಣೆದುರಿನ ಸನ್ನಿವೇಶಗಳ ಪ್ರಭಾವ ನನ್ನನ್ನು ಕೇವಲ ಯಾರದೋ ವಿಚಾರಗಳನ್ನು ಹರಿಕತೆ ತರ ಕೇಳಿ ಅವರ ಬಾಲಬುಡಕರನ್ನಾಗಿಸದೆ, ನಾನು ಸ್ವತಂತ್ರವಾಗಿ ಈ ಬಗ್ಗೆ ಯೋಚಿಸುವಂತೆ ಮಾಡಿದ್ದವು. ಇವು ಕೇವಲ ಬೌದ್ಧಿಕವಾಗಿ ಮಾತ್ರ ಇರದೆ ನನ್ನ ಸಂವೇದನೆಯ ತೀವ್ರತೆಯೂ ಆಗಿ ಬದಲಾಗಿದ್ದವು. ಅದರಲ್ಲೂ ಕೋಟಿಗನಾಹಳ್ಳಿ ರಾಮಯ್ಯನವರ ಸಂತಿ ಬಂತ ಸಂತಿ ಹಾಡು, ಅದರಲ್ಲಿ ನೆಲ ಮಾರು, ಜಲ ಮಾರು ನೆನಪಿನ ಹುತ್ತ ಮಾರು ಎಂಬ ಸಾಲುಗಳು ನನ್ನನ್ನು ಅಭಿವೃದ್ಧಿ ಕುರಿತು ಬೇರೆ ತರ ಯೋಚನೆ ಮಾಡುವಂತೆ ಮಾಡಿದ್ದವು. ಕೆಲವರು ನನ್ನನ್ನ ಭಾವುಕ, ಸಾಹಿತ್ಯ ಓದ್ಕೊಂಡು ಹಾಳಾಗವ್ನೆ, ಇವ್ನಿಗೆ ತನ್ನ ದಲಿತ ಮೂಲನೆ ಗೊತ್ತಿಲ್ಲ ಅಂತ ನನ್ನನ್ನ, ನನ್ನ ವಿಚಾರಗಳನ್ನು ನೆಗ್ಲೆಕ್ಟ್ ಮಾಡೋರು. ಆದರೆ ನಾನು ಇವುಗಳಿಗೆ ಕಿವಿಗೊಡದೆ ನನ್ನದೆ ಲಹರಿಯಲ್ಲಿ ಮುಳುಗಿ ಬಿಡುತ್ತಿದ್ದೆ. ಬೀದಿ ನಾಟ್ಕ, ಹಾಡು ಹಾಗೆ ನನಗೆ ಎದೆಗಿಳಿದು ನನ್ನನ್ನು ಎಜುಕೇಟ್ ಮಾಡಿದ್ದವು.
ಇಂದಿಗೂ ನಮ್ಮ ವಿಶ್ವವಿದ್ಯಾಲಯಗಳು ಈ ಕಾಡು, ಬುಡಕಟ್ಟು, ಅಭಿವೃದ್ಧಿ ಬಗ್ಗೆ ಚಿಂತಿಸುವ ಇನ್‌ಅರ್ಗಾನಿಕ್ಕಾದ ಜ್ಞಾನ, ತಿಳಿವಳಿಕೆಗಳ ಬಗ್ಗೆ ಬೇಸರವಾಗುತ್ತವೆ. ಶಿಕ್ಷಣ ಹಾಗೂ ಜೀವನದ ನಡುವೆ ನಂಟು ಏರ್ಪಡದ ನಮ್ಮ ವಿಶ್ವವಿದ್ಯಾಲಯಗಳ ಜ್ಞಾನವ್ಯವಸ್ಥೆ ಬಗ್ಗೆ ಹೇಗೆ ಮಾತಾಡುವುದು. ಹೀಗಾಗಿ ಜ್ಞಾನಮೀಮಾಂಸೆಯ ರಾಜಕಾರಣ ಅಂತೆಲ್ಲ ಕಂಡ ಪುಸ್ತಕಗಳನ್ನು ಕಷ್ಟಪಟ್ಟು ಓದಿ ಅರಗಿಸಿಕೊಳ್ತಿದ್ದೆ. ಈ ಬಗ್ಗೆ ಗೂಗಿಯ ಡಿ.ಕಲೋನೈಸಿಂಗ್ ಥಿಯರಿ ಬಗ್ಗೆ ಓದಿದ್ದೆ ಕೂಡ. ಎಂದೋ ಒಮ್ಮೆ ಜೇಪಿ ಸರ್(ಬಂಜಗೆರೆ ಜಯಪ್ರಕಾಶ್) ಕಾವ್ಯ ಕುರಿತು ಮಾತಾಡುವಾಗ, ʻನಿಮ್ಮ ತರಡುಗಳನ್ನು ವಿಶ್ವವಿದ್ಯಾಲಯದ ದಪ್ಪ ದಪ್ಪ ಪುಸ್ತಕಗಳಿಂದ ಜಜ್ಜಿಹಾಕಲಾಗಿದೆʼ ಎಂದೇಳುತ್ತಿದ್ದರು. ಇದನ್ನು ನಿರ್ಬಿಜೀಕರಣ ಅಥವಾ ಬೀಜ ಹೊಡ್ದಾಕೋದು ಅಂತ ತಮಾಷೆ ಮಾಡಿದ್ರೂ, ಈ ಬಗ್ಗೆ ಗಂಭೀರವಾಗಿ ಓದ್ತಿದ್ದೆ. ಮತ್ತೆ ನಮ್ಮ ವಿಶ್ವವಿದ್ಯಾಲಯಗಳು ಹಿಂಗೂ ಇರ್ತವ ಅನ್ಕೊಂಡು ಇದನ್ನು ಸ್ಥಾಪಿತ ಜ್ಞಾನ ಅಂತ ಪರಿಭಾಷೇಲಿ ಮಾತಾಡೋಕ್ಕು ಗುಂಪಲ್ಲಿ ಮರಿ ಇಂಟಲೆಕ್ಚುಯಲ್ಸ್ ತರ ಚರ್ಚೆನೂ ಮಾಡ್ತಿದ್ದೊ.
ಇಂತಹ ಅಮೂರ್ತ ಚಿಂತನೆ, ಅಲೋಚನೆಗಳ ನಡುವೆ ನಾವೇ ನೇರವಾಗಿ ನೆಲ, ಜಲ ಜನಪರವಾಗಿ ಜಾಥ ಮಾಡುವ ಅವಕಾಶ ಪಡ್ಕೊಂಡೊ. ಇದೂ ಇನ್ನೂ ಒಂತರ ನಾವೇ ಸ್ವಯಂ ಜಾಥಾ ಮಾಡುವ ಉಮೇದನ್ನು ತಂದುಕೊಟ್ಟಿತ್ತು. ನಮ್ಮ ತಂಡ ಸಕಲೇಶಪುರದ ಹೊಂಗಡಹಳ್ಳದ ಬಳಿ ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಕಟ್ಟುವ ಅಣೆಕಟ್ಟು ಯೋಜನೆ ವಿರೋಧಿಸಿ ಜನಜಾಗೃತಿಗಾಗಿ ನಾವು ಬೀದಿ ನಾಟ್ಕ, ಹಾಡು, ಭಾಷಣ ಮಾಡಿದ್ದೆವು. ಲವಕುಮಾರ್ ಅವರ ನೇತೃತ್ವದಲ್ಲಿ ಆ ಗುಂಡ್ಯದ ಬಳಿ ಅಣೆಕಟ್ಟು ನಿರ್ಮಾಣ, ಅಭಿವೃದ್ಧಿ ಹೆಸರಲ್ಲಿ ನಡೆಯುವ ವಿನಾಶದ ಬಗ್ಗೆ ಜಾಥಾ ಮಾಡಿದ್ದೀವಿ. ಜನರಿಗೆ, ನಾನು ಆರಂಭದಲ್ಲಿ ಅಡವಿ ತಾಯಿಗೆ ವಂದನೆ ಎಂಬ ಹಾಡೇಳ್ತಿದ್ದೆ. ಲವಕುಮಾರ್ ಅವರು ನಾಟ್ಕ ಮಾಡ್ಸಿ ಜನರೆದುರು, ಭಾಷಣ ಮಾಡೋರು. ಜನ ನಿಂತ್ಕೊಂಡ್ ನೋಡೋರು. ನಮಗೆ ಒಂದೊಂದ್ಸಲ ಈ ಜನ ಏನೂ ಇವ್ರೂರಲ್ಲಿ ಇದೆಲ್ಲ ಆಗ್ತಿರೋದು ಹಿಂಗೆ ನಿಂತ್ಕೊಂಡ್ ನೋಡ್ತಾರಲ್ಲ ಅಂತ ಕೋಪಾನು ನನನ್ನೊಳಗೆ ಬರ್ತಿತ್ತು. ಹಂಗೇನೆ ಈ ಇಂಡಿಯಾದ ಜನರನ್ನು ಈ ವಿಚಾರದಲ್ಲಿ ಹೆಂಗಪ್ಪ ಎಜುಕೇಟ್ ಮಾಡೋದು ಅನ್ಸೋದು. ಅಥವಾ ನಾವು ನಮ್ಮ ಗೀಳು, ವ್ಯಸನಗಳಿಗಾಗಿ ಬಂದಿದ್ದೀವ ಅಂತಾನೂ ಅನ್ಸೋದು. ಮತ್ತೆ ಅಲ್ಲಿ ಎಲ್ಲ ಜೋರಾಗಿ ಗದ್ದೆ, ಅಡ್ಕೆ ಬೆಳೆಯೋ ರೈತರು, ಇವ್ರನ್ನು ನೋಡಿದ್ರೆ ಇವರಾರೋ ಶ್ರೀಮಂತರು ಇವರ ಬಳಿ ಬಂದು ನಾವೇನು ನಾಟ್ಕ ಮಾಡೋದಿಕ್ಕಾಗುತ್ತೆ ಅಂತ ನಿರಾಶೆ ಕಾಡೋದು.
ಮತ್ತೆ ಒಂದು ವಾರ ನಾಟ್ಕ ಮಾಡ್ದೊ. ಅಲ್ಲಿ ಆರೆಸ್ಸೆಸ್ ನವರು ಇದ್ದಾರೆಂದು ಗೊತ್ತಿತ್ತು. ಏನ್ ಮಾಡೋದು ನೆಲ, ಜಲದ ಪ್ರಶ್ನೆ. ಈಗ ಸೈದ್ಧಾಂತಿಕ ವಿಚಾರಗಳಿಗೆ ಸಂಘರ್ಷ ಮಾಡೋದು ಬೇಕಿರಲಿಲ್ಲ ಅಂತ ಅನ್ಸಿತ್ತು. ಮತ್ತೆ ಇವ್ರಾಕೆ ನಾಟ್ಕ ಮಾಡಬಾರದು. ನಾವ್ಯಾಕೆ ಬಯಲು ಸೀಮೆಯಿಂದ ಬಂದು ಇವ್ರಿಗೆ ನಾಟ್ಕ ಮಾಡ್ಬೇಕು ಅಂತ ಪ್ರಶ್ನೆಗಳು ಏಳ್ತಿದ್ದೊ. ನಾನು ಆ ಕ್ಷಣವೇ ಸಿನಿಕ್ಕಾಗಿ ʻಅದ್ಕೆ ಈ ಪರಿಸರ ಹೋರಾಟಗಳು ದಿಕ್ಕುತಪ್ತವೆ’ ಅಂತ ಒಳಗೊಳಗೆ ಬೈಯ್ಕೊಳ್ತಿದ್ದೆ. ಎಲ್ಲವೂ ನಮ್ಮ ಸಿದ್ಧಾಂತಕ್ಕೆ ಜಯ ಆಗಬೇಕು ಅನ್ನೋದು ಏಕೆ. ಇಂತಹ ಸಂದರ್ಭಗಳಲ್ಲಿಯೇ ನಾವು ಇತರೆ ಮಗ್ಗಲುಗಳಿಗೆ ಹೊರಳಬೇಕು ಅನ್ನೋದ್ದರ ಬಗ್ಗೆ ಯೋಚಿಸಬೇಕಾಗುತ್ತೇನೊ. ಮತ್ತೆ ನಾವು ನಾಟ್ಕ ಮಾಡೋ ಊರುಗಳಲ್ಲಿ ಆನೆಗಳು ಬಂದು ಬೆಳೆ ನಾಶ ಮಾಡಿದ್ದವು. ಜನ ಕಾಡು ಪ್ರಾಣಿಗಳ ಬಗ್ಗೆ ಒಂತರ ಕೊಲ್ಲೋ ತರಾನೆ ಮಾತಾಡೋರು. ನನಗೆ ಈ ಕಾಡು, ಈ ಜನ, ಈ ಪ್ರಾಣಿಗಳ ಸ್ಥಿತಿ ನೋಡಿ ಏನೇಳ್ಬೇಕು ಅಂತ ಗೊತ್ತಾಗ್ತಿರ್ಲಿಲ್ಲ.
ಈ ಜೀವಪರ ಅನ್ನೋದ್ದನ್ನು ನಾವೇ ನಮ್ಮ ಸಂವೇದನೆ ಹಾಗೂ ಪ್ರಜ್ಞೆಯಿಂದ ಕಂಡ್ಕೊಳೋದು ಹೆಚ್ಚು ಆರ್ಗಾನಿಕ್ಕಾಗಿರುತ್ತೆ ಅನ್ಸುತ್ತೆ. ನಾವು ಆಫ್ರಿಕನ್ ಬುಡಕಟ್ಟು ಜನರ ಹಾಡುಗಳನ್ನು ಸಕಲೇಶಪುರದ ಹೊಂಗ್ಡಳ್ಳದಲ್ಲಿ ಹಾಡುವಾಗ, ಇದು ಇವರಿಗೆ ಅರಿವಾಗುತ್ತಾ ಅಂತ ಅನುಮಾನ ಕಾಡೋದು. ಇಲ್ಲಿನ ರೈತರು ಜೋರಾಗಿದ್ದಾರೆ. ಮತ್ತೆ ಇವ್ರಿಗೆ ತುಂಬಾ ಎಕ್ರೆ ಜಮೀನಿದೆ. ಕಾಡ್ ಕಡ್ಕೊಂಡ್ ಒತ್ರಿಸ್ಕೊಂಡಿರ್ತರೆ ಹಾಗಾಗಿ ಇದನ್ನು ರಕ್ಷಣೆ ಮಾಡ್ಕೋಳ್ಳೋಕೆ ಇವ್ರು ಈ ಮಲೆನಾಡಿನ ಹೋರಾಟಗಾರರ ಜೊತೆ ಸೇರಿದ್ದಾರೆ ಅಂತ ಅನ್ಸೋದು. ಈ ತರ ಥರಾವರಿ ಅನುಮಾನಗಳ ನಡುವೆ ನಾನು ಹಾಡೇಳ್ತಿದ್ದೆ. ಲವಕುಮಾರ್ ನಾಟ್ಕ ಮಾಡ್ಸೋರು. ಆದರೆ ಇದೆಲ್ಲ ಬಿಟ್ಟು ಸುಮ್ಮನೆ ನನ್ನಷ್ಟಕ್ಕೆ ನಾನೇ ಆ ಕಾಡು, ಆ ಜನ, ಆ ಮುಗಿಲುಗಳನ್ನು ನೋಡ್ದಾಗ ಹಾವು ಮಾನವ ಕೂಡಿ ಬಾಳುವ ಅಡವಿ ತಾಯಿಯ ಅಂದವ ನೋಡು, ರೇಲ ರೇಲ ಎಂದು ಗದ್ಧರ್ ರವರ ಹಾಡನ್ನು ಯಾಕೋ ಜೀವಿಸಬೇಕು ಅಂತ ಅನ್ನಿಸ್ತಿತ್ತು. ಏಕೆಂದರೆ, ನಾನು ನಮ್ಮ ಬಯಲು ಸೀಮೆಯ ಕುರುಚಲು ಕಾಡಿನ ನಡುವೆಯೇ ಬಂದೋನು. ಸೌದೆ ಸೊಪ್ಪು, ಆಡು ಕುರಿ ಮೇಯ್ಸಿಕೊಂಡು. ಮತ್ತೆ ಯಾಕೋ ಊರು, ಜನ ಇವುಗಳ ಬಗ್ಗೆ ಬೌದ್ಧಿಕವಾಗಿ ಮಾತಾಡ್ತ ನನ್ನ ನೆಲದ ನಂಟಸ್ಥಿಕೆಯಿಂದ ದೂರ ಆಗ್ತ ಇದ್ದೀನಿ ಅಂತಾ ಅನ್ಸೋದು. ಇದೊಂತರ ಡಿಫೆಮಿಲಿಯರೈಸಿಂಗ್ ಅಥವಾ ಓದಿ ತನ್ನವರಿಗೆ ತಾನು ಅಪರಿಚಿತನಾಗುವ ನರಕ ಅನ್ಸುತ್ತೆ.
ಜಾಥಾದ ಕೊನೆ ದಿನ ಸಮಾವೇಶ. ಅಲ್ಲಿಗೆ ಅಲ್ಲಿನ ಶಾಸಕರು ಬಂದಿದ್ರು. ಜನಾಭಿಪ್ರಾಯ ಕೇಳುವ ಸಮಾವೇಶ ಅದಾಗಿತ್ತು. ವಿಪರ್ಯಾಸ ಅಂದ್ರೆ, ಒಳಗೊಳಗೆ ಈ ಯೋಜನೆ ಹಾಗೆ ಆಗುತ್ತೆ ನೀವು ಏನೇ ಮಾಡಿದರೂ ಎಂದು ಶಾಸಕರೇ ಮಾತಾಡಿದ್ದನ್ನು ನಾವು ಕೇಳಿಸ್ಕೊಂಡೆವು. ಒಂದು ಕಡೆ ಜನರ ಆಕ್ರೋಶ, ಮತ್ತೊಂದು ಕಡೆ ಜನರು ಅರ್ಧ ಇದನ್ನು ಒಪ್ಕೊಂಡಿದ್ದಾರೆ ಅನ್ನೋ ತರ ಸಿಚುಯೇಷನ್ ಇತ್ತು. ಈ ಸುದ್ದಿ ಕೇಳಿ ಅಯ್ಯೋ ನಾವು ಮಾಡಿದ ಜಾಥ ಇಷ್ಟೆನಾ ಅಂತ ಕ್ಷಣ ಅಸಮಾಧಾನ, ಬೇಸರ ಕೂಡ ಆಗಿತ್ತು. ನಾನು ಯಾವ ಹಾಡಾಡಿದ್ರೇನು.
ಸಮಾವೇಶ ನಡೀತಿತ್ತು. ನಾನು ಹೊರಗಡೆ ಇದ್ದೆ. ಯಾರೋ ಬಂದು ನನ್ನನ್ನಾ ನೀನು ಯಾವೂರು ಏನ್ ಮಾಡ್ತಿದ್ದೀಯ, ಇಲ್ಲಿಗೆ ಏತಕ್ಕೆ ಬಂದ್ದೀಯ ಅಂತೆಲ್ಲ ಕೇಳ್ತಿದ್ರು. ನನಗೆ ಇವ್ರು ಗೂಢಚಾರಿಕೆ ಮಾಡೋ ಪೋಲಿಸ್ ಅಂತ ಗೊತ್ತಾಗ್ಲೆ ಇಲ್ಲ. ಆತ ಮಫ್ತಿಲಿದ್ದ. ನಾನು ಎಲ್ಲ ಊರು, ಏನು ಎತ್ತ ನಿಜ ಹೇಳ್ಬಿಟ್ಟಿದ್ದೆ. ಆಮೇಲೆ ಅಯ್ಯೋ ಮಾರಾಯ ಅವ್ರು ಪೋಲಿಸು. ನಿನ್ನ ನಕ್ಸಲೈಟ್ ಅಂತ ಈಡ್ಕೊಂಡೋದ್ರೆ ಏನ್ಮಾಡ್ತಿದ್ದೆ ಅಂದ್ರು. ನನಗೋ ಜೀವ ಇಳ್ದಿ ಹೋದಂತ ಅನುಭವಾಯಿತು. ಆಮೇಲೆ ಅಯ್ಯೋ ಏನಾಗುತ್ತೋ ಹೋಗ್ಲಿ ಬಿಡು ಅತ್ತಗೆ ಅಂತ ಅದನ್ನು ಮರ್ತಿಬುಟ್ಟೆ.
ಸಂಜೆ ಅಲ್ಲಿನ ಸ್ಥಳೀಯರಿಂದ ಬಾಡು, ಒಳ್ಳೆ ಊಟ ಅರೇಂಜ್ ಮಾಡಿದ್ರು. ನಾವು ಜಾಥಾವನ್ನು ಉಚಿತವಾಗಿ ಮಾಡಿದ್ದೊ. ಇದು ನಮ್ಮ ಹೊಣೆಗಾರಿಕೆ ಅಂತ ಜೀವಿಸಿದ್ದೊ. ಎಲ್ಲ ಜೊತಗೂಡಿ ಊಟ ಮಾಡುವ ಮೊದಲೇ, ಅಲ್ಲಿನ ಲೋಕಲ್ ಮಿತ್ರರು, ಬೈನೆ ಹೆಂಡ ಆಯ್ತೆ ಕುಡಿತೀರ ಅಂದ್ರು. ನಮಗೆ ಅಯಾಸ ಆಗಿತ್ತು. ಮತ್ತೆ ಜಾಥಾ ಮುಗಿತು. ಸಣ್ಣ ರಿಲಾಕ್ಸ್ ಕೂಡ ಬೇಕಿತ್ತು. ಬೈನೆ ಹೆಂಡ ಕುಡ್ದೊ. ಸ್ವಲ್ಪ ಮತ್ತು, ನಶೆ ಏರಿತ್ತು. ಲವಕುಮಾರ್ ಅಲ್ಲಿನ ಸ್ಥಳೀಯರ ಮುಖ್ಯಸ್ಥರಿಗೆ ನನ್ನನಾ ತೋರ್‍ಸಿ, ಇವ್ನು ಒಂದ್ ಹಾಡಾಡ್ತನೆ. ಅದನ್ನು ನೀವು ಕೇಳಿ ಅಂತ. ಅಪ್ಪಿ ಆ ತನುವಿನೊಳಗೆ ಹಾಡಪ್ಪಿ ಅಂದ್ರು. ಉದಯ್ ಸೋಸ್ಲೆ ಕೂಡ ಊನಪ್ಪಿ ಹಾಡು. ನಾನು ಸ್ವಲ್ಪ ಬೈನೆ ತಕೊಂಡಿದ್ದೆ.
ನಮ್ಮ ವಾಟ್ಸಾಪ್ ಚಾನಲ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಏನೋ ಹಗುರತೆಗೋ, ಅಯಾಸಕ್ಕೋ, ಅಥವಾ ಹಾಡೋದು ಕೂಡ ನಶೆ ಅನ್ಕೊಂಡು ನಾನು ಹಾಡಿದೆ. ಬೆಂಕಿ ಉರಿತಿತ್ತು. ನಾನು ಕಾಡಿನ ನಿಶಬ್ದವಾದ ಆ ಹೊತ್ತಲ್ಲಿ ʻತನುವಿನೊಳಗೆ ಅನು ದಿನವಿದ್ದು, ಎನ್ನ ಮನಕ್ಕೊಂದು ಮಾತ ಹೇಳದೆ ಹೋದೆ ಹಂಸಾ..ʼ ಎಂದೇ ಮೈಮರೆತು ಹಾಡ್ತಿದ್ದೆ. ಲವಕುಮಾರ್ ಮತ್ತೆ ಉದಯ್ ಸೋಸಲೆ ಮೈದುಂಬಿ ಹಂಸಾ ಅಂತ ರೀಪೀಟ್ ಮಾಡೋರು. ಒಂತರ ಆ ಘಳಿಗೆ ಎಲ್ಲ ಖಾಲಿ ಮಾಡಿಕೊಂಡ ಸ್ಥಿತಿಯಂತಿತ್ತು. ನಾವು ಕೊನೆಗೆ ಕತ್ತಾಲೆ ಬೆಳದಿಂಗಳೊಳಗೆ ಕತ್ತಾಲೆ ಬೆಳದಿಂಗಳೊಳಗ.. ಅಂತ ಕೊನೆಗೆ ಹೈ ಪಿಚ್ನಲ್ಲಿ ಅಲಾಪ ತೆಗೆದಿದ್ದೆವು.