ಇವರ ಹೆಸರು ಆಂಜಿನಪ್ಪ ಸುತ್ಪಾಡಿ. ಇವರು ಮೂಗಿನ ಮೂಲಕ ಶೆಹನಾಯಿ ವಾದ್ಯವನ್ನು ನುಡಿಸುತ್ತಾರೆ. ಇಡೀ ಅಲೆಮಾರಿ ಸಮುದಾಯಗಳಲ್ಲಿ ಮೂಗಿನಿಂದ ಶೆಹನಾಯಿ ನುಡಿಸುವ ಏಕೈಕ ಕಲಾವಿದರು ಎಂದು ಹೆಸರುವಾಸಿಯಾಗಿದ್ದಾರೆ. ಶೆಹನಾಯಿ ವಾದ್ಯ ತನ್ನದೇ ಆದ ಪಾರಂಪರಿಕ ಇತಿಹಾಸವನ್ನು ಹೊಂದಿದೆ. ಸನಾದಿ ಅಪ್ಪಣ್ಣ ಸಿನೆಮಾದಲ್ಲಿ ಡಾ.ರಾಜಕುಮಾರ್ ಅವರು ಇದೇ ತರಹದ ಶೆಹನಾಯಿ ನುಡಿಸುವವರ ಪಾತ್ರಕ್ಕೆ ಜೀವ ತುಂಬಿದ್ದರು.
ಶೆಹನಾಯಿ ನುಡಿಸುವುದು ವೀಣೆ, ತಂಬೂರಿ, ಪಿಯಾನೋ, ಹಾರ್ಮೋನಿಯಂ, ಕೀಬೋರ್ಡ್ ನುಡಿಸುವಷ್ಟು ಸುಲಬದ್ದಲ್ಲ. ಇದಕ್ಕೆ ಕಠಿಣ ಪರಿಶ್ರಮ ಮತ್ತು ಏಕಾಗ್ರತೆ ಬೇಕು. ಬಾಯಿಯ ಮೂಲಕ ಮೂರು ತರಹದ ವಾದ್ಯಗಳನ್ನು ಒಮ್ಮೆಲೇ ನುಡಿಸುತ್ತಾರೆ. ಈ ರೀತಿಯ ಪಾರಂಪರಿಕ ಕಲೆಗಳು ನಶಿಸಿಹೋಗದಂತೆ ತಡೆಯಲು ಅವುಗಳಿಗೆ ಆದ್ಯತೆ ಕೊಡಬೇಕು.
ಈ ದೇಶದ ಮೂಲನಿವಾಸಿಗಳ ಪ್ರತಿಭೆಗೆ ಆದ್ಯತೆ ಸಿಕ್ಕಿದ್ದರೆ ಪ್ರಾಯಶಃ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಇಂಥಹ ಕಲೆಗಳಿಗೆ ಮಾನ್ಯತೆ ಸಿಗುತ್ತಿತ್ತು ಮತ್ತು ಪ್ರೋತ್ಸಾಹವೂ ದೊರಕುತ್ತಿತ್ತು.. ಆದರೆ ಎಲ್ಲಿಂದಲೋ ವಲಸೆ ಬಂದವರು ಈ ದೇಶದಲ್ಲಿ ಶ್ರೇಣೀಕೃತ ವ್ಯವಸ್ಥೆಯನ್ನು ಭದ್ರಗೊಳಿಸಿ ಈ ದೇಶದ ಮೂಲನಿವಾಸಿಗಳನ್ನು ಒಂದೊಂದು ಜಾತಿಗೆ ಕಟ್ಟಿಹಾಕಿ ಅವರ ಪ್ರತಿಭೆಗಳಿಗೆ ಆದ್ಯತೆ ಸಿಗದ ಹಾಗೆ ನೋಡಿಕೊಂಡರು. ಬಡತನ ಅಶಿಕ್ಷತೆ ಅಸ್ಪೃಶ್ಯತೆ ಅಸಮಾನತೆಗಳಿಂದ ಬಳಲಿದ್ದ ಈ ಸಮುದಾಯಗಳು ಸಾಮಾಜಿಕ ಕಳಂಕವನ್ನು ಹೊರಬೇಕಾಯಿತು.
ಈ ದೇಶದ ಮೂಲನಿವಾಸಿಗಳಲ್ಲಿ ಕಾಣಸಿಗುವ ಇಂಥಹ ಕಲೆಗಳಿಗೆ ಪ್ರೋತ್ಸಾಹ ಬೇಕಿರಲಿಲ್ಲ, ಬದಲಾಗಿ ಆದ್ಯತೆ ದೊರಕಿದ್ದಿದ್ದರೆ ಸಾಕಿತ್ತು ಇಂಥಹ ವಿದ್ಯೆಯನ್ನು ಹೊಂದಿರುವ ಮೂಲನಿವಾಸಿ ಕಲಾವಿಧರಿಗೆ ತನ್ನದೇ ಆದ ಘನತೆ ಗೌರವ ದೊರಕುತ್ತಿತ್ತು. ಆದರೆ ಈ ದೇಶದ ಮೂಲನಿವಾಸಿಗಳ ಬಳಿ ಇದ್ದ ವಿದ್ಯೆ ಆಗಲಿ ಅಥವಾ ಯಾವುದೇ ಇತರೆ ಕಲೆಗಳಾಗಲಿ ಅವುಗಳಿಗೆ ಮಾನ್ಯತೆ ಮತ್ತು ಆದ್ಯತೆ ಕೊಡದೆ ಅವುಗಳು ಕೇವಲ ಜೀವನೋಪಾಯಕ್ಕಾಗಿ ಬಳಸುವ ಸಾದನಗಳಾಗಿಯೇ ಉಳಿಯುವಂತೆ ಮಾಡಲಾಯಿತು. ದಲಿತ (ಬೇಡ) ಸಮುದಾಯಕ್ಕೆ ಸೇರಿದ ಏಕಲವ್ಯ ಬಿಲ್ವಿದ್ಯೆ ಕಲಿತನೆಂಬ ಕಾರಣಕ್ಕೆ ಅದು ಸನಾತನ ಧರ್ಮಕ್ಕೆ ಅಪಚಾರ ಎನ್ನುವ ನೆಪವೊಡ್ಡಿ ಆತನ ಹೆಬ್ಬೆರಳನ್ನು ಕತ್ತರಿಸಲಾಯಿತು. ಆದರೆ ಕಥೆಯ ಮೂಲಕ ನಮಗೆ ಇವರು ಕಥೆಯ ಮೂಲಕ ಹೇಳಿದ್ದು ‘ದ್ರೋಣಾಚಾರ್ಯನ ಬಳಿ ಬಿಲ್ವಿದ್ಯೆ ಹೇಳಿಕೊಡಿ ಎಂದು ಏಕಲವ್ಯ ಬೇಡಿಕೊಂಡನಂತೆ, ನೀನು ದಲಿತನಾದ ಕಾರಣ ಯಾವುದೇ ವಿದ್ಯೆ ಕಲಿತರೆ ಅದು ಧರ್ಮಕ್ಕೆ ಅಪಚಾರ ಎಂದು ಹೇಳಿದನಂತೆ, ಆ ನಂತರ ದ್ರೋಣಾಚಾರ್ಯನ ಮೂರ್ತಿ ನಿರ್ಮಿಸಿ ಅದರ ಮುಂದೆ ನಿಂತು ಏಕಲವ್ಯ ವಿದ್ಯೆ ಕಲಿತನಂತೆ’. ಸ್ವಲ್ಪ ವೈಜ್ಞಾನಿಕವಾಗಿ ಅಥವಾ ವಾಸ್ತವವಾಗಿ ಅಲೋಚಿಸಿ ನೋಡಿ ಒಂದು ಮೂರ್ತಿಯ ಮುಂದೆ ನಿಂತು ವಿದ್ಯೆ ಕಲಿಯಲು ಸಾಧ್ಯವೇ?
ವಾಸ್ತವದಲ್ಲಿ ಏಕಲವ್ಯ ಬೇಡ ಜನಾಂಗಕ್ಕೆ ಸೇರಿದವನು, ಕಾಡಿನಲ್ಲಿ ಬೇಟೆ ಮಾಡುತ್ತಿದ್ದ ಬೇಡರಿಗೆ ಬಿಲ್ವಿದ್ಯೆ ಪಾರಂಪರಿಕವಾಗಿ ಬಂದಿದ್ದು. ಬಿಲ್ವಿದ್ಯೆಯಲ್ಲಿ ಪಾರಂಗತನಾಗಿದ್ದ ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿದ್ದು ಆತನ ಪ್ರತಿಭೆಯನ್ನು ಕೊಲ್ಲುವುದಕ್ಕೆ.
ಇದೇ ನೆಲದ ಅನೇಕ ಜಾನಪದ, ಲಾವಣಿ, ಕಲೆ ಸಾಹಿತ್ಯಗಳಿಂದ ಎರವಲು ಪಡೆದ ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ ಇವೆಲ್ಲವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ ಆದರೆ ಖ್ಯಾತರ ಪಟ್ಟಿಯಲ್ಲಿ 99% ಎಲ್ಲರೂ ಸವರ್ಣೀಯರೇ ಕಾಣಸಿಗುತ್ತಾರೆ ಮತ್ತು ಅವರು ತಮ್ಮ ಆ ಕಲೆಗಳನ್ನು ಉದ್ಯಮವನ್ನಾಗಿಸಿಕೊಂಡು ಕೋಟ್ಯಾಧಿಪತಿಗಳಾಗಿದ್ದಾರೆ. ವಿಪರ್ಯಾಸವೆಂದರೆ ಎರವಲು ಕೊಟ್ಟವರು ತಮ್ಮ ಕಲೆಗಳಿಗೆ ಆದ್ಯತೆ ಸಿಗದ ಕಾರಣ ಆ ಕಲೆಗಳನ್ನು ಜೀವನೋಪಾಯಕ್ಕಾಗಿ ಬೀದಿ ಬೀದಿ ತಿರುಗಿ ಪ್ರದರ್ಶಿಸುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲ ಇಂಥಹ ವಿಶಿಷ್ಟ ಪ್ರತಿಭೆ ಹೊಂದಿರುವ ಅಂಜಿನಪ್ಪ ಸತ್ಪಾಡಿ ಅವರಿಗೆ ಉಳಿದುಕೊಳ್ಳುವುದಕ್ಕೆ ಒಂದು ಸೂರು ಕೂಡ ಇಲ್ಲ. ಯಾವ ಸರ್ಕಾರಗಳೂ ಇವರ ಇವರ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಿಲ್ಲ ಮತ್ತು ಅಧ್ಯತೆಯನ್ನಂತೂ ನೀಡಿಯೇ ಇಲ್ಲ.
ಬಹುತೇಕ ಎಲ್ಲಾ ಸರ್ಕಾರಗಳು ಇಂಥ ಕಲಾವಿದರನ್ನು ಕಾರ್ಯಕ್ರಮಗಳಿಗೆ ತಡವಾಗಿ ಬರುವ ಅತಿಥಿಗಳಿಗೆ ಸಮಯವನ್ನು ನೀಡುವ ಸಲುವಾಗಿ ಬಳಸಿಕೊಳ್ಳುತ್ತವೆ. ಅಸಲಿಗೆ ಇಂಥ ಕಲಾವಿದರಿಗೆ ಸರಿಯಾದ ಸೂರು ಇರುವುದಿಲ್ಲ; ಜೀವನ ಭದ್ರತೆಗೆಂದು ಯಾವುದೇ ಮಾಸಾಶನ, ಸಂಬಳ ಮುಂತಾದ ಸೌಲಭ್ಯಗಳಿರುವುದಿಲ್ಲ. ರಿಯಾಲಿಟಿ ಶೋಗಳಿಗೆ ಇವರು ಜಡ್ಜ್ ಆಗುವುದಿರಲಿ, ಜ್ಯೂರಿಯಾಗಿಯೂ ಇರುವುದಿಲ್ಲ. ಇವರನ್ನು ಕೇವಲ ಮನರಂಜನೆಗೆ ಬಳಸಿಕೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ. ಇನ್ನಾದರೂ ಜನಪರವೆಂದು ಹೇಳಿಕೊಳ್ಳುವ ಸರ್ಕಾರಗಳು ಇವರಿಗೆ ಸರಿಯಾದ ಪರಿಹಾರ ಕೊಟ್ಟು, ಇಂಥ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲಿ ಎಂಬುದು ನನ್ನ ಕಳಕಳಿ. ನಮಸ್ಕಾರ.