ಎಪ್ಪತ್ತರ ದಶಕ ಅನೇಕ ರೀತಿಯಲ್ಲಿ ವಿಶೇಷವಾದುದು. ಪ್ರಗತಿಶೀಲರ ಬರವಣಿಗೆ ಸೂಕ್ಷ್ಮತೆ ಕಳೆದುಕೊಂಡು ಬಸವಳಿದಂತಿತ್ತು. ಕಾಲ್ಪನಿಕ ವಸ್ತುಗಳ ಸುತ್ತ ಸುತ್ತುತ್ತಾ ಚೈತನ್ಯ ಕಳೆದುಕೊಂಡಿತ್ತು. ರಂಗಭೂಮಿ ಜಾಡಿಗೆ ಬಿದ್ದು ಅವನತ ಸ್ಥಿತಿ ತಲುಪಿತ್ತು. ಲಂಕೇಶ್, ಅನಂತಮೂರ್ತಿ, ತೇಜಸ್ವಿ ಅಂತಹ ಲೇಖಕರು ಕಾಣಿಸಿಕೊಂಡದ್ದು ಆಗಲೇ. ಹೊಸ ಚಿಂತನೆಗಳು ಒಟ್ಟಾರೆ ಬರವಣಿಗೆಯ ದಿಕ್ಕನ್ನೇ ಬದಲಿಸಿದ ನಿರ್ಣಾಯಕ ಘಟ್ಟ ಅದು. ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ ತ್ರೈಮಾಸಿಕ ಪತ್ರಿಕೆಯಾದ ‘ಸಾಕ್ಷಿ’ ಬರವಣಿಗೆಯ ಹೊಸ ಸ್ವರೂಪಕ್ಕೆ ವೇದಿಕೆ ಒದಗಿಸಿತ್ತು.

ಸಾಕ್ಷಿ ಗೋಪಾಲಕೃಷ್ಣ ಅಡಿಗ

‘ಸಾಕ್ಷಿ’ ನಮ್ಮ ಕಾಲೇಜಿಗೂ ಬರುತ್ತಿತ್ತು. ಅನೇಕ ಹೊಸ ಬರಹಗಾರರಿಗೂ ಅಲ್ಲಿ ಸ್ಥಾನವಿತ್ತು. ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ‘ಸಾಕ್ಷಿ’ಯ ಹಿಂದಿನ ದೊಡ್ಡ ಶಕ್ತಿಯಾಗಿದ್ದರು. ಆದರೆ ಅದೆಲ್ಲ ಮುಖ್ಯ ವಿಷಯವಲ್ಲ ಎಂಬಂತೆ ಸುಬ್ಬಣ್ಣ ತನ್ನಷ್ಟಕ್ಕೆ ತಾನು ಪ್ರಿಂಟಿಂಗ್ ಸೇರಿದಂತೆ, ಪತ್ರಿಕೆಯ ಒಟ್ಟಾರೆ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಇದು ನನಗೆ ಕುತೂಹಲ ಹುಟ್ಟಿಸಿತು. ‘ಸಾಕ್ಷಿ’ಯ ಹಳೆಯ ಸಂಚಿಕೆಗಳನ್ನು ಪಡೆದುಕೊಳ್ಳಲು ಸುಬ್ಬಣ್ಣನವರನ್ನು ಭೇಟಿಯಾಗಬೇಕು ಎಂದು ನಿರ್ಧರಿಸಿದೆ.

ಸುಬ್ಬಣ್ಣನವರನ್ನು ಹತ್ತಿರದಿಂದ ನೋಡಿದ್ದು

ಕೆ.ವಿ.ಸುಬ್ಬಣ್ಣ

ಸುಮಾರು 1979ರ ಹೊತ್ತಿಗೆ ಅನಿಸುತ್ತದೆ, ಹೆಗ್ಗೋಡಿನಲ್ಲಿ ಸುಬ್ಬಣ್ಣನವರನ್ನು ನೋಡಿದೆ. ಟೆರಿಲಿನ್ ಪ್ಯಾಂಟು ಮತ್ತು ಖಾದಿ ಜುಬ್ಬವನ್ನು ಧರಿಸಿದ್ದರು. ಕವಳದಿಂದ ಕೆಂಪಾಗಿದ್ದ ತುಟಿಗಳು, ಮಿನುಗು ನಗೆಯನ್ನು ತುಳುಕಿಸುವ ತೀಕ್ಷ್ಣ ಕಣ್ಣಿನ ನೋಟ; ಯಾರಿಗೇ ಆಗಲಿ, ಸುಬ್ಬಣ್ಣನವರನ್ನು ನೋಡಿ ಮೆಚ್ಚದಿರುವುದು ಸಾಧ್ಯವೇ ಇರಲಿಲ್ಲ. ಹಾಗೆ ನೋಡಿದರೆ ನಾನು ಹೆಗ್ಗೋಡಿಗೆ ಹೋದದ್ದು ಸ್ವಲ್ಪ ತಡವಾಗಿಯೇ. ಆಗಲೇ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ನೀಡಿದ ಧನಸಹಾಯದಿಂದ ರಸ್ತೆಯ ತಿರುವಿನಲ್ಲಿ ಶಿವರಾಮ ಕಾರಂತ ರಂಗ ಮಂದಿರ ಎದ್ದು ನಿಂತಿತ್ತು. ಸುಬ್ಬಣ್ಣ ಶುರು ಮಾಡಿದ್ದ ಸಾಂಸ್ಕೃತಿಕ ಚಟುವಟಿಕೆಗಳು ತನ್ನ ತೀವ್ರತೆ ಮತ್ತು ಸರಳತೆಯಿಂದ ಎಲ್ಲರ ಗಮನ ಸೆಳೆದಿತ್ತು. ಕ್ಲಿಷ್ಟ ವಿಷಯಗಳನ್ನು ಇನ್ನಷ್ಟು ಕ್ಲಿಷ್ಟವಾಗಿ ಮಂಡಿಸುತ್ತಿದ್ದ ‘ಸಾಕ್ಷಿ’ ಪತ್ರಿಕೆಯ ಚುಕ್ಕಾಣಿಯನ್ನು ನೆಲದಲ್ಲಿ ನಿಂತು ಯೋಚಿಸುವ ಸುಬ್ಬಣ್ಣ ನಿರ್ವಹಿಸುತ್ತಿದ್ದುದು, ಪಂಡಿತ ವಲಯದಲ್ಲಿ ಕರಗಿಹೋಗುವ ಆಪತ್ತಿನಿಂದ ಪತ್ರಿಕೆಯನ್ನು ಪಾರು ಮಾಡಿತ್ತು ಎಂದು ಈಗ ನನಗೆ ಅನಿಸುತ್ತಿದೆ.

ಅಂದು ಮೊದಲ ಬಾರಿ ಹೆಗ್ಗೋಡಿಗೆ ಹೋಗಿದ್ದೆ ನಾನು. ಅಷ್ಟರಲ್ಲಾಗಲೇ ನಾನು ಸುಬ್ಬಣ್ಣ ಅವರನ್ನು ಒಂದೆರಡು ಬಾರಿ ಕುಂದಾಪುರದಲ್ಲಿಯೇ ಭೇಟಿಯಾಗಿದ್ದೆ. ಮುಖ್ಯವಾಗಿ ಕುಂದಾಪುರದ ಕಾಲೇಜಿನಲ್ಲಿ ನಾವು ಕೆಲವರು ಸ್ನೇಹಿತರು ನಡೆಸಿದ ರಂಗ ತರಬೇತಿ ಶಿಬಿರದ ಉದ್ಘಾಟನೆಗೆ ಅವರನ್ನು ನಾವು ಕರೆದಿದ್ದೆವು. ಸುಬ್ಬಣ್ಣನವರನ್ನು ಯಾವ ಹೊತ್ತಿಗೂ ಭೇಟಿಯಾಗಬಹುದು ಎಂಬ ಸಲಿಗೆಯನ್ನು ಅವರ ಮೊದಲ ಭೇಟಿಯೇ ನಮ್ಮಲ್ಲಿ ಮೂಡಿಸಿತ್ತು. ಕುಂದಾಪುರದ ಸುತ್ತು ಮುತ್ತ ಅಣ್ಣ ಎಂದು ಕರೆಯುವುದು ಜಾತಿ ಭಾಂದವ್ಯದ ಮೇಲೆಯೇ ಎಂಬುದು ನನಗೆ ಯಾವಾಗಲೂ ಕಿರಿಕಿರಿ ಹುಟ್ಟಿಸುವ ವಿಷಯವಾಗಿತ್ತು. ಸುಬ್ಬಣ್ಣವನವರ ಹೆಸರಿನಲ್ಲಿಯೇ ಅಣ್ಣ ಇತ್ತು! ಜಾತಿಬಾಂಧವ್ಯವನ್ನು ಮೀರಿದ ಅಣ್ಣನಾಗಿ ಅವರು ಎಲ್ಲರಿಗೂ ಕಂಡದ್ದು ಹೀಗೆ.

ಸಾಕ್ಷಿಯ ಹಳೆ ಸಂಚಿಕೆಗಳನ್ನು ಪಡೆದುಕೊಂಡದ್ದು

ಬಂದ ವಿಷಯವನ್ನು ಸುಬ್ಬಣ್ಣನವರಿಗೆ ಹೇಳಿದೆ. ‘ಬನ್ನಿ’ ಎಂದು ರಂಗಮಂದಿರದ ಹಿಂದೆ ಕರೆದುಕೊಂಡು ಹೋದರು. ಅದೊಂದು ಗೋಡೌನ್ ಅನಿಸುತ್ತದೆ. ಸುಬ್ಬಣ್ಣ ತಾವಾಗಿ ಆ ಗೋಡೌನ್ನಿನ ದೊಡ್ಡ ಶೆಟರ್ ಅನ್ನು ಎಳೆದರು. ಸುಬ್ಬಣ್ಣನವರ ಸರಳತೆಗೆ ಸಾಕ್ಷಿಯಾದ ಆ ಚಿತ್ರ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

ಸಾಕ್ಷಿ ಸಂಚಿಕೆಗಳು

‘ಸಾಕ್ಷಿ’ಯ ನಾಲ್ಕು ಸಂಚಿಕೆಗಳ ಹಲವು ಕಟ್ಟುಗಳನ್ನು ಅವತ್ತು ಸುಬ್ಬಣ್ಣ ನನಗೆ ನೀಡಿದರು. ಸಂಘಟನೆ ಕಟ್ಟುವ ಮೊದಲ ಪಾಠವನ್ನು ನಾನು ಸುಬ್ಬಣ್ಣನವರಿಂದ ಕಲಿತಿದ್ದು ಹೀಗೆ. ಬಳಿಕ ಕುಂದಾಪುರದಲ್ಲಿ ‘ಜನರಂಗ’ ನಾಟಕ ತಂಡವನ್ನು ಕಟ್ಟಿದೆನಲ್ಲ; ನಾಲ್ಕು ಜನರ ಜೊತೆ ಬೆರೆತು ಕೆಲಸ ಮಾಡಲು ಹಿಂಜರಿಯುತ್ತಿದ್ದ ನಾನು, ನಿರ್ದೇಶನದ ಜೊತೆಗೆ ಸಂಘಟಕನಾಗಿಯೂ ಕೆಲಸ ಮಾಡಬೇಕಾದ ತುರ್ತಿಗೆ ಬಿದ್ದಿದ್ದೆ. ನಾಟಕದ ತಾಲೀಮಿನ ಹೊತ್ತಿನಲ್ಲಿ ಮತ್ತು ಬಳಿಕ ದೊಡ್ಡ ಗಂಟಲಿನಲ್ಲಿ ಸೂಚನೆಗಳನ್ನು ಕೊಡುವುದನ್ನೂ ಕಲಿತಿದ್ದೆ. ಸುಬ್ಬಣ್ಣ ಇವುಗಳನ್ನೆಲ್ಲ ನನಗೆ ಕಲಿಸದೆಯೂ ಕಲಿಸಿದ್ದರು. ಏನೇ ಕೆಲಸವಿದ್ದರೂ ಯಾರಿಗೂ ಕಾಯದೆ ಮುಂದು ನಿಂತು ಮಾಡಬೇಕು ಎಂಬ ಅರಿವು ಕಲಿತು ಬರುವಂಥದ್ದಲ್ಲ.

ಸುಬ್ಬಣ್ಣನವರಿಂದ ಕಲಿಯದೆ ಕಲಿತ ಪಾಠಗಳು

ಸುಬ್ಬಣ್ಣ ಕಲಿಸದೇ ಕಲಿಸಿದವರು ಎಂದೆನಲ್ಲ. ಈ ಮಾತನ್ನು ಸುರೇಶ ಆನಗಳ್ಳಿ ಕೂಡ ಹೇಳುತ್ತಿದ್ದರು. ಪ್ರಥಮ ವರ್ಷದ ರಂಗ ಡಿಪ್ಲೋಮಾ ಕೋರ್ಸಿನ ವಿದ್ಯಾರ್ಥಿಯಾಗಿದ್ದಾಗ, ತರಗತಿಯ ಹೊರಗೆ ಸುಬ್ಬಣ್ಣನವರೊಂದಿಗೆ ಮಾತನಾಡುತ್ತಾ ಕಲಿತಿದ್ದೇ ಹೆಚ್ಚು ಎಂದು. ಸುಬ್ಬಣ್ಣನವರ ಜೊತೆಗಿದ್ದಾಗ ನನಗೂ ಅದೇ ಅನುಭವವಾಗಿದೆ. ನನ್ನನ್ನೂ ಸೇರಿದಂತೆ ಅನೇಕರನ್ನು ಕಲಾ ಪ್ರಪಂಚಕ್ಕೆ ಯಾವ ಪ್ರತಿಫಲದ ಅಪೇಕ್ಷೆಯೋ ಇಲ್ಲದೆ ಒಳಸೆಳೆದುಕೊಂಡವರು ಸುಬ್ಬಣ್ಣ.

ನಾಟಕ ಎಂದರೆ ಬರೆ ತಾಲೀಮು ಅಲ್ಲ. ಜನರ ನಡುವೆ ಬೆರೆತು ಹೋಗುವುದು. ಅವರನ್ನು ತಲುಪುವ ಪ್ರಯತ್ನ ಮಾಡುವುದು. ‘ಕತ್ತಲೆ ದಾರಿ ದೂರ’ದ ಪೋಸ್ಟರುಗಳನ್ನು ನಟ್ಟ ನಡುರಾತ್ರಿಯ ವೇಳೆಗೆ ಊರಿನ ಗೋಡೆಗಳಲ್ಲಿ ಅಂಟಿಸಿದ ನೆನಪು ನನಗೆ ನಿಚ್ಚಳವಾಗಿದೆ. ಆ ನಾಟಕದಲ್ಲಿ ವಾಸು ಪಾತ್ರದಲ್ಲಿ ಸುರೇಶ ಆನಗಳ್ಳಿ ಅಭಿನಯಿಸಿದ್ದರು. ರಾತ್ರಿ ಹೊತ್ತಿನಲ್ಲಿ ನನ್ನ ಜೊತೆಗಿರುತ್ತಿದ್ದರು. ಆಸಕ್ತಿ ಇರುವ ಕೆಲಸ ನಮಗೆ ಎಷ್ಟು ಪ್ರಿಯವಾಗುತ್ತದೆ ಎಂಬುದನ್ನು ಕಂಡುಕೊಂಡ ದಿನಗಳು ಅವು.

ಮುಂದೆ ಸುರೇಶ ಆನಗಳ್ಳಿ ನೀನಾಸಂ ಸೇರಿಕೊಂಡರು. ಅಲ್ಲಿಂದ ಮುಂದೆ ಎನ್.ಎಸ್.ಡಿಗೂ ಹೋದರು. ಆನಗಳ್ಳಿ ನೀನಾಸಂನಲ್ಲಿ ಇದ್ದಾಗ, ರಜೆಯ ವೇಳೆಗೆ ತಂದಿದ್ದ ನಾಟಕದ ಕುರಿತು ಅಮೂಲ್ಯ ಮಾಹಿತಿಗಳನ್ನು ಒಳಗೊಂಡ ಟಿಡಿಆರ್ ನ ಸಂಚಿಕೆಯೊಂದನ್ನು ನನಗೆ ನೀಡಿದ್ದರು. ನಾನು ಅದನ್ನು ಹಾಗೆ ಇಟ್ಟುಕೊಂಡುಬಿಟ್ಟಿದ್ದೆ. ಸುಬ್ಬಣ್ಣ ಅದನ್ನು ನೆನಪಿಸಿ ವಾಪಾಸು ಪಡೆದುಕೊಂಡರು. ಈ ಬಗೆಯ ಕಣ್ಗಾವಲು ಮತ್ತು ಶಿಸ್ತು ನನಗೆ ಅಚ್ಚರಿ ಹುಟ್ಟಿಸಿತು. ಇದರಿಂದಾಗಿಯೇ ಸುಬ್ಬಣ್ಣವರಿಗೆ ಬಹುದೊಡ್ಡ ಸಂಸ್ಥೆಯೊಂದನ್ನು ಕಟ್ಟಲು ಸಾಧ್ಯವಾದದ್ದು. ತಮ್ಮ ಲೈಬ್ರರಿಯಲ್ಲಿರುವ ಪುಸ್ತಕಗಳನ್ನು ಓದಲು ಸುಬ್ಬಣ್ಣ ಯಾವತ್ತೂ ಅನುವು ಮಾಡಿಕೊಡುತ್ತಿದ್ದರು.

ನಾನು ನಾಟಕ ನಿರ್ದೇಶನದ ಮೂಲ ಪಾಠಗಳನ್ನು ಕಲಿತದ್ದೇ ಅಲ್ಲಿ. ಮುಖ್ಯವಾಗಿ ಅವರ ಪುಸ್ತಕ ಸಂಗ್ರಹದಲ್ಲಿ ಇದ್ದ ಡೇವಿಡ್ ವೆಲ್ಕರ್ ನ ‘ಪ್ರಿನ್ಸಿಪಲ್ಸ್ ಆಫ್ ಡೈರೆಕ್ಷನ್’ ಎಂಬ ಪುಸ್ತಕ ಓದಿ. ರಂಗಮಂದಿರದ ಎದುರಿಗಿನ ಕೋಣೆಯಲ್ಲಿ ಕುಳಿತು ಹೊತ್ತುಗೊತ್ತಿನ ಪರಿವೆಯಿಲ್ಲದೆ ನಾನು ಟಿಪ್ಪಣಿ ಮಾಡಿಕೊಳ್ಳುವುದರಲ್ಲಿ ನಿರತನಾಗಿರುತ್ತಿದ್ದೆ. ‘ಸಮಯ ಆಯಿತು, ನಾಳೆ ಮುಂದುವರೆಸಿ’ ಎಂದು ಸ್ವತಃ ಸುಬ್ಬಣ್ಣ ಬಂದು ನನಗೆ ಹೇಳಿದ್ದಿದೆ. ಬೇರೆ ಯಾರ ಹತ್ತಿರವಾದರೂ ಹೇಳಿಸಿದರೆ ನನಗೆ ಮುಜುಗುರ ಆಗುತ್ತಿತ್ತು ಎಂದು ಅವರು ಎಣಿಸಿದ್ದು ಸ್ಪಷ್ಟವಿದೆ. ಅದೆಷ್ಟೋ ಜನರನ್ನು ಅಷ್ಟೊಂದು ಸೂಕ್ಷ್ಮವಾಗಿ ಗಮನಿಸುವ, ಅನುಕೂಲ ಒದಗಿಸುವ ಅನನ್ಯ ಉದಾಹರಣೆಯಾಗಿ ನನಗೆ ಸುಬ್ಬಣ್ಣ ಕಂಡರು.

‘ಕಡಲ ಧ್ಯಾನ’ಕ್ಕೆ ಪ್ರಶಸ್ತಿ ಬಂದ ಸಂದರ್ಭ

ಕಡಲ ಧ್ಯಾನ

ನನ್ನ ಮೊದಲನೆಯ ಕವನ ಸಂಕಲನವಾದ ‘ಕಡಲ ಧ್ಯಾನ’ 2002ರಲ್ಲಿ ಪ್ರಕಟವಾಯಿತು. ಎಂದೂ ಕವನ ಬರೆಯದ ನಾನು, ದಿನಕ್ಕೊಂದರಂತೆ ತುಸು ಗದ್ಯಲಯದ ಐವತ್ತು ಕವನಗಳನ್ನು ಬರೆದಿದ್ದೆ. ಅದು ಅನೇಕರ ಗಮನ ಸೆಳೆದಂತಿತ್ತು. ಒಂದು ದಿವಸ ಕೆ.ವಿ.ಅಕ್ಷರ ಕರೆ ಮಾಡಿ ‘ನಿಮ್ಮ ಸಂಕಲನಕ್ಕೆ ಶಾ. ಬಾಲೂರಾವ್ ಪ್ರತಿಷ್ಠಾನ ನೀಡುವ ಬಿ.ಎಂ.ಶ್ರೀ ಪ್ರಶಸ್ತಿ ಬಂದಿದೆ’ ಎಂದು ಹೇಳಿದರು. ಇದು ಆಶ್ಚರ್ಯದ ಸಂಗತಿಯಾಗಿತ್ತು. ನಾನು ಪುಸ್ತಕವನ್ನೇ ಕಳುಹಿಸಿರಲಿಲ್ಲ. ಅವರಾಗಿ ಹಲವರ ಅಭಿಪ್ರಾಯ ಸಂಗ್ರಹಿಸಿ ಲೇಖಕನ ಮೊದಲ ಸಂಕಲನಕ್ಕೆ ಇದ್ದ ಪ್ರಶಸ್ತಿಯನ್ನು ‘ಕಡಲ ಧ್ಯಾನ’ಕ್ಕೆ ನೀಡಿದ್ದರು.

ಪ್ರಶಸ್ತಿ ಸ್ವೀಕರಿಸಲು ನಾನು ಗೆಳೆಯರ ಜೊತೆಗೂಡಿ ಹೆಗ್ಗೋಡಿಗೆ ಹೋಗಿದ್ದೆ. ರಾಮಕೃಷ್ಣ ಹೇರ್ಳೆಯವರ ಕಾರಿನಲ್ಲಿ. ಶಶಿಧರ ಹೆಮ್ಮಾಡಿ, ಕೂರಾಡಿ ಸೀತಾರಾಮ ಶೆಟ್ಟಿ ಜೊತೆಗಿದ್ದರು. ನೊಯಲ್ ಚುಂಗಿಗುಡ್ಡಿ ಹೆಮ್ಮಾಡಿಯವರೆಗೆ ಬಂದು ನಮ್ಮನ್ನು ಕಳುಹಿಸಿಕೊಟ್ಟಿದ್ದರು. ಆ ಕಾಲದಲ್ಲಿ ನಾವು ಯಾವಾಗಲೂ ಆಗಾಗ ಸೇರುತ್ತಿದ್ದೆವು. ರಾಮಕೃಷ್ಣ ಹೇರ್ಳೆ ಮತ್ತು ಕೂರಾಡಿ ಸೀತಾರಾಮ ಶೆಟ್ಟಿ ನಾನು ನಿರ್ದೇಶಿಸಿದ ಚಾಕ್ ಸರ್ಕಲ್, ತಲೆದಂಡ, ಜನ ಶತ್ರು, ಎಲ್ಲರೂ ನನ್ನ ಮಕ್ಕಳೇ ಮುಂತಾದ ನಾಟಕಗಳಲ್ಲಿ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡವರು. ಶಶಿಧರ ಹೆಮ್ಮಾಡಿ ನಾಟಕದ ಬಳಿಕದ ಚರ್ಚೆ ಮತ್ತು ವಿಶ್ಲೇಷಣೆಯ ಮುಖ್ಯ ಕೇಂದ್ರಬಿಂದುವಾಗಿರುತ್ತಿದ್ದವರು.

ಇದನ್ನೂ ಓದಿ: ಎಡಿತ್‌ ಎಂಬ ಪರಂಪರೆಯಿಂದ ಹೊರಚಾಚಿದ ಕೊಂಬೆ

ನಾನು ನಾಟಕಗಳನ್ನೇನೋ ನಿರ್ದೇಶಿಸುತ್ತಿದ್ದೆ. ಆದರೆ ನನ್ನ ಕವಿತೆಗಳನ್ನು ನಾನೇ ಓದುವುದನ್ನು ಕಲ್ಪಿಸಿಕೊಳ್ಳುವುದೂ ನನ್ನಿಂದ ಸಾಧ್ಯವಿರಲಿಲ್ಲ. ಹೀಗಾಗಿ ಆ ಕೆಲಸವನ್ನು ಹೆಮ್ಮಾಡಿಗೆ ದಾಟಿಸಿ ನಿರಾಳನಾದೆ. ಪ್ರಶಸ್ತಿ ಸಮಾರಂಭದಲ್ಲಿ ಅವರು ‘ಕಡಲ ಧ್ಯಾನ’ದ ನಾಲ್ಕಾರು ಕವನಗಳನ್ನು ಓದಿದರು. ಇದು ಅಂದು ಪ್ರಶಸ್ತಿ ವಿತರಿಸಿದ ಯು. ಆರ್. ಅನಂತಮೂರ್ತಿಯವರಿಗೂ ಸ್ವಲ್ಪ ವಿಚಿತ್ರವಾಗಿ ತೋರಿತು. ಹಾಫ್ ಕೋಟ್ ಹಾಕಿಕೊಂಡು ‘ರಿಂಗ್ ಮಾಸ್ಟರ್’ ನಂತೆ ಕಾಣಿಸುತ್ತಿದ್ದ ನಾನು ಹೀಗೆ ಹಿಂದೆ ಸರಿದು ಕೂತದ್ದು ಅತಿಥಿಯಾಗಿ ಬಂದಿದ್ದ ಜಯಂತ ಕಾಯ್ಕಿಣಿ ಅವರಿಗೂ ಅಷ್ಟೇನೂ ಸರಿ ಕಾಣಲಿಲ್ಲ. ನಮ್ಮ ‘ಗುಂಪುಗಾರಿಕೆ’ ಅವರಿಗೆ ಅಷ್ಟು ಸಮಾಧಾನ ತಂದ ಹಾಗಿರಲಿಲ್ಲ. ‘ಗುಂಪುಗಾರಿಕೆ’ಯಲ್ಲಿಯೂ ಹಲವು ವಿಧಗಳಿವೆ ಅನ್ನೋಣ!

ನನಗೆ ಸ್ಪಷ್ಟವಾಗಿ ನೆನಪಿರುವ ಘಟನೆ ನಡೆದದ್ದು ಸಮಾರಂಭದ ಬಳಿಕವೇ. ಆವರೆಗೂ ಎಲ್ಲವನ್ನು ಗಮನಿಸುತ್ತಿದ್ದರೂ ಕೆ.ವಿ.ಸುಬ್ಬಣ್ಣ ಎಲ್ಲೆಲ್ಲೋ ತಿರುಗಾಡಿಕೊಂಡಿದ್ದರು. ಅದು ಅವರ ವಿಶಿಷ್ಟ ಕ್ರಮ. ಸಮಾರಂಭದ ಬಳಿಕ ಬಂದು ನನ್ನನ್ನು ತಬ್ಬಿಕೊಂಡರು. ನೆರೆದಿದ್ದ ಹಲವರ ನಡುವೆ ಕೆ.ವಿ.ಅಕ್ಷರ ಅವರ ಮಗನೂ ಇದ್ದರು. ‘ಇವರು ಯಾರು ಗೊತ್ತಾಯ್ತಾ’ ಎಂದು ಮೊಮ್ಮಗನನ್ನು ಸುಬ್ಬಣ್ಣ ಕೇಳಿದರು. ‘ನನಗೆ ಗೊತ್ತಿಲ್ಲ’ ಎಂಬುದು ಮೊಮ್ಮಗನ ಉತ್ತರ. ಸುಬ್ಬಣ್ಣ ಕೂಡಲೇ ‘ಬನ್ನಾಡಿ ಗೊತ್ತಿಲ್ವಾ ನಿನಗೆ’ಎಂದು ಒಂದೇಟು ಕೊಡುವವರಂತೆ ಅಭಿನಯಿಸಿದರು. ಅದನ್ನು ನೆನೆದರೆ ಈಗಲೂ ಮನಸ್ಸು ಆರ್ದ್ರವಾಗುತ್ತದೆ.

ಹೆಗ್ಗೋಡಿನ ಚಲನಚಿತ್ರ ಶಿಬಿರ

ಹೆಗ್ಗೋಡು ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿರುವುದು ಹೀಗೆ ನಾನಾ ಕಾರಣಗಳಿಗಾಗಿ ಎಂದು ನನಗೆನಿಸುತ್ತದೆ. ಆರಂಭದ ವರ್ಷಗಳಲ್ಲಿ ಸುಬ್ಬಣ್ಣ ಶುರು ಮಾಡಿದ ಚಲನಚಿತ್ರ ಶಿಬಿರವಂತೂ ಅನೇಕರನ್ನು ಹೆಗ್ಗೋಡಿಗೆ ಆಕರ್ಷಿಸಿತು. ಎರಡನೆಯ ಶಿಬಿರದಿಂದ ಶುರು ಮಾಡಿ ಮುಂದೆ ನಾಲ್ಕಾರು ವರ್ಷ ಎಡೆಬಿಡದೆ ಚಲನಚಿತ್ರಗಳನ್ನು ನೋಡಲು ಹೆಗ್ಗೋಡಿಗೆ ಧಾವಿಸುತ್ತಿದ್ದುದು ನೆನಪಿದೆ.

‘ತನಗೆ ನೋಡಬೇಕಾದ್ದನ್ನು ಕೇಳಬೇಕಾದ್ದನ್ನು ದೂರ ಹೋಗಿ ನೋಡಲು ಕೇಳಲು ಸಾಧ್ಯವಿಲ್ಲದಿರುವುದರಿಂದ ಇಲ್ಲಿಗೇ ಕರೆಸಿಕೊಂಡು ಸ್ನೇಹಿತರ ಒಡಗೂಡಿ ನೋಡುತ್ತೇನೆ, ಕೇಳುತ್ತೇನೆ’ ಎಂಬುದು ಸುಬ್ಬಣ್ಣವನವರು ಆಗಾಗ ಹೇಳುತ್ತಿದ್ದ ಮಾತು. ಈ ಅರ್ಥದಲ್ಲಿ ಅವರು ಒಬ್ಬ ಸಾಮಾನ್ಯ ಸಂಘಟಕ ಆಗಿರಲಿಲ್ಲ. ಅದರ ಹಿಂದೆ ತೀವ್ರವಾದ ಫಾಷನ್ ಇರುವುದನ್ನು ತಮ್ಮ ಚಟುವಟಿಕೆಗಳ ಮೂಲಕವೇ ಅವರು ತೋರಿಸಿದರು. ಅದನ್ನು ನಮಗೂ ದಾಟಿಸಿದರು.

ಹತ್ತು ದಿನಗಳಲ್ಲಿ ಐವತ್ತಕ್ಕೂ ಮಿಕ್ಕಿ ಚಲನಚಿತ್ರಗಳನ್ನು ಅವರು ತೋರಿಸುತ್ತಿದ್ದರು. ಆಸಕ್ತಿ ಇದ್ದವರು ರಾತ್ರಿ ಎರಡು ಗಂಟೆಯವರೆಗೂ ಸಿನಿಮಾ ನೋಡಬಹುದಿತ್ತು. ಅದೂ ಫೆಲಿನಿ ಅಂಥವರ ಗಂಭೀರ ಚಿತ್ರಗಳನ್ನು. ಸತ್ಯಜಿತ್ ರಾಯ್ ಸುಬ್ಬಣ್ಣನವರ ಪ್ರೀತಿಯ ನಿರ್ದೇಶಕರಾಗಿದ್ದರು. ಆದರೆ ಇಲ್ಲಿ ಒಂದು ಸಮಸ್ಯೆ ಕಾಣಿಸಿಕೊಂಡಿತು. ಸತ್ಯಜಿತ್ ರಾಯ್ ಅವರ ‘ಪಥೇರ್ ಪಾಂಚಾಲಿ’ ಚಿತ್ರವನ್ನು ಒಂದೊಂದೂ ಫ್ರೇಮ್ ಸೇರಿದಂತೆ ಬಿಡಿ ಬಿಡಿಯಾಗಿ ವಿಶ್ಲೇಷಿಸಿ ಏಕೆ ರಾಯ್ ಭಾರತದ ಏಕೈಕ ಶ್ರೇಷ್ಠ ಚಿತ್ರ ನಿರ್ದೇಶಕ ಎಂದು ಪ್ರತಿಪಾದಿಸುತ್ತಿದ್ದ ಫೂನಾ ಫಿಲಂ ಇನ್ಸ್ಟಿಟ್ಯೂಟ್ ನ ಸತೀಶ್ ಬಹದ್ದೂರ್ ಅವರ ಕ್ರಮ ಬರಬರುತ್ತ ಅನೇಕರಿಗೆ ರಗಳೆ ಅನಿಸಿತು. ಈ ಬಗ್ಗೆ ಹೇಳಿದರೆ ಸುಬ್ಬಣ್ಣ ‘ಸರಿ, ಸರಿ. ನೋಡೋಣ’ ಎಂದು ಹೇಳುತ್ತಾ ಮುಂದೆ ಸರಿದು ಹೋಗಿ ಬಿಡುತ್ತಿದ್ದರು. ತಕರಾರುಗಳನ್ನು ಸುಬ್ಬಣ್ಣ ತಣ್ಣಗೆ ನಿರ್ವಹಿಸುತ್ತಿದ್ದ ರೀತಿ ಇದು. ಬರ ಬರುತ್ತಾ ಸುಬ್ಬಣ್ಣನವರ ಈ ರೀತಿ ನನಗೆ ಇಷ್ಟವಾಗದೇ ಹೋದದ್ದೂ ಇದೆ.

ರಿತ್ವಿತ್ ಘಟಕ್ ನ ಚಿತ್ರಗಳ ಬಗ್ಗೆ ಹೆಗ್ಗೋಡಿನ ಶಿಬಿರದಲ್ಲಿ ನಾನು ನೋಡಿದ ನೆನಪಿಲ್ಲ. ಎಲ್ಲೋ ಒಂದೆರಡು ಬಾರಿ ತೋರಿಸಿದ್ದಿದೆ ಅನಿಸುತ್ತದೆ. ಘಟಕ್ ರ ‘ಮೇಘ ಢಾಕಾ ತಾರಾ’ದಂತಹ ಸಿನಿಮಾಗಳನ್ನು ಸತೀಶ್ ಬಹದ್ದೂರ್ ಏಕೋ ವಿವರವಾದ ವಿಶ್ಲೇಷಣೆಗೆ ಎತ್ತಿಕೊಳ್ಳುತ್ತಿರಲಿಲ್ಲ. ‘ಪಥೇರ್ ಪಾಂಚಾಲಿ’ಯೇ ಶಿಬಿರದ ಪಠ್ಯಪುಸ್ತಕವಾಗಿತ್ತು. ಇಂತಹ ಸಂದರ್ಭಗಳಲ್ಲಿ ಸುಬ್ಬಣ್ಣ ಅಸಹಾಯಕರಾಗಿದ್ದರೋ ಅಥವಾ ಅದೇ ಅವರ ನಿಲುವಾಗಿತ್ತೋ? ತಾವು ಬರೆದ ‘ಸಮೀಪ ಚಿತ್ರಗಳು ದೂರ ಚಿತ್ರಗಳು’ ಎಂಬ ಪುಸ್ತಕದಲ್ಲಿಯೂ ಸತ್ಯಜಿತ್ ರಾಯ್ ಅವರ ಐದು ಚಿತ್ರಗಳನ್ನು ವಿಶ್ಲೇಷಣೆಗೆ ಎತ್ತಿಕೊಂಡಿದ್ದ ಸುಬ್ಬಣ್ಣನವರಿಗೆ ಘಟಕ್ ಯಾವ ಚಿತ್ರದ ಬಗ್ಗೆಯೂ ಮಾತನಾಡಬೇಕೆಂದು ಯಾಕೆ ಅನಿಸಲಿಲ್ಲ? ನವ್ಯ ಸಾಹಿತ್ಯ ಕೆಲವೇ ಕೆಲವು ಗೊತ್ತಾದ ಲೇಖಕರ ಕೃತಿಗಳ ಬಗ್ಗೆ ಉತ್ಸಾಹ ತೋರಿದ್ದರ ಹಿಂದೆ ಇದ್ದದ್ದು ಇದೇ ಮನೋಭಾವ ಅಲ್ಲವೇ?

ಅವರು ಬಹುವಾಗಿ ಮೆಚ್ಚಿದ್ದ ಚಿತ್ರಗಳನ್ನು ಟೀಕಿಸಿದಾಗ ಥಟ್ಟನೆ ಸಿಟ್ಟುಗೇಳುವ ಸುಬ್ಬಣ್ಣನವರನ್ನೂ ನಾನು ನೋಡಿದ್ದಿದೆ . ಅವರು ಮೆಚ್ಚಿದ್ದ ಅಂತಹ ಒಂದು ಚಿತ್ರ ಕುಮಾರ ಶಹಾನಿ ಅವರ ‘ಮಾಯಾ ದರ್ಪಣ್’. ಚಿತ್ರದ ಪ್ರದರ್ಶನದ ನಂತರ ಒಬ್ಬರೇ ಇದ್ದಾಗ, ‘ಇದರಲ್ಲಿ ಏನಿದೆ? ಶ್ರೇಷ್ಠ ಚಿತ್ರ ಎನಿಸಿಕೊಳ್ಳುವಂಥದ್ದು’ ಎಂದು ನಾನು ಕೇಳಿದೆ. ಸುಬ್ಬಣ್ಣ, ‘ಮೊದಲು ನೋಡುವ ವ್ಯವಧಾನ ಬೆಳಸಿಕೊಳ್ಳಿ’ ಎಂದು ಅಸಹನೆಯಿಂದ ನುಡಿದ ನೆನಪಿದೆ.

ಬಿಗ್‌ ಕನ್ನಡದ ವಾಟ್ಸಾಪ್‌ ಚಾನೆಲ್‌ ಸೇರಲು ಇಲ್ಲಿ ಕ್ಲಿಕ್‌ ಮಾಡಿ

ಪೀಟರ್ ಬ್ರೂಕ್ ಮಹಾಭಾರತ ಪ್ರಸಂಗ

ತಮಗೆ ಪ್ರಿಯವಾದ ಕೃತಿಗಳನ್ನು ಹೀಗೆ ಅವರು ಎಂದೂ ಬಿಟ್ಟು ಕೊಡುತ್ತಿರಲಿಲ್ಲ. ಸಾಹಿತ್ಯದ ಸಂದರ್ಭದಲ್ಲಿಯೂ ಅವರು ಹೀಗೆ ವರ್ತಿಸಿರುವುದು ಇದೆ. ಅದೇ ಪೀಟರ್ ಬ್ರೂಕ್ ನ ‘ಮಹಾಭಾರತ’ ತಿರುಗಾಟ ಹೊರಟಾಗ ನಾಟಕವನ್ನೇ ನೋಡದ ಸುಬ್ಬಣ್ಣ, ‘ಬ್ರೂಕ್ ಮಹಾಶಯನ ಆಧುನಿಕ ಅಶ್ವಮೇಧ’ ಎಂದು ಕಟುವಾಗಿ ಟೀಕಿಸಿ ಹದಿನಾಲ್ಕು ಪುಟಗಳ ಲೇಖನ ಬರೆದರು! ‘ಮಹಾಭಾರತ’ದ ಹೆಸರಿನಲ್ಲಿ ನವವಸಾಹತುಶಾಹಿ ಭಾರತವನ್ನು ಪ್ರವೇಶಿಸಿರುವುದಕ್ಕೆ ಉದಾಹರಣೆಯಾಗಿ ಈ ಪ್ರಯೋಗ ಅವರಿಗೆ ತೋರಿತ್ತು. ಅದು ಹುರುಳಿಲ್ಲದ ವಾದವಾಗಿತ್ತು. ಈ ನಾಟಕದ ವಿಡಿಯೋ ಪ್ರದರ್ಶನಕ್ಕೆ ಬಿದ್ದ ಅಪಾರ ಖರ್ಚಿನ ಬಗ್ಗೆ ಸುಬ್ಬಣ್ಣ ಸಿಟ್ಟುಗೊಂಡಿದ್ದರೆ ಅದರಲ್ಲಿ ಅರ್ಥವಿರುತ್ತಿತ್ತು. ಆದರೆ ಯಾರದೋ ಮಾತನ್ನು ಕೇಳಿ ಅದೊಂದು ಕಳಪೆ ಪ್ರಯೋಗ ಎಂದು ಅವರು ಸಾಧಿಸಲು ಹೊರಟಿದ್ದು ಸಮರ್ಥನೀಯ ವಿಷಯವಾಗಿರಲಿಲ್ಲ.

ಬ್ರೂಕ್ ನ ಮಹಾಭಾರತ ಒಂದು ಅತ್ಯುತ್ತಮ ಪ್ರಯೋಗವಾಗಿತ್ತು. ನಮ್ಮ ಕಲಾ ಮಾಧ್ಯಮಗಳು ಮಹಾಭಾರತದ ಬಗ್ಗೆ ಕಟ್ಟಿಕೊಟ್ಟ ಮಿಥ್ಯೆಯನ್ನು ಒಡೆದು ಹಾಕಿದ ಪ್ರಯೋಗವಾಗಿತ್ತು. ಅಂತಹ ಪ್ರಯೋಗವನ್ನು ಜಗತ್ತಿನಾದ್ಯಂತ ತೋರಿಸಲು ಹೊರಟರೆ ಅದು ಹೇಗೆ ನವವಸಾಹತುಶಾಹಿ ಪಿತೂರಿ ಎನಿಸಿಕೊಳ್ಳುತ್ತದೆ? ತಮಾಷೆ ಎಂದರೆ, ವಾದದ ಅತಿರೇಕದಲ್ಲಿ ಸುಬ್ಬಣ್ಣ ಲಭ್ಯವಿದ್ದ ವಿಡಿಯೋದತ್ತಲೂ ಗಮನ ಹರಿಸದೆ ಬ್ರೂಕ್ ನ ‘ಮಹಾಭಾರತ’ ಮಹತ್ತರ ಪ್ರಯೋಗವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ! ಚೋಪ್ರಾನ ಟಿವಿ ‘ಮಹಾಭಾರತ’, ಶಾಲಾ ಕಾಲೇಜುಗಳಲ್ಲಿ ಹುಡುಗರು ಆಡುವ ಶೇಕ್ಸ್ಪಿಯರ್ ನಾಟಕ ಇವೆಲ್ಲ ಹೇಗೆ ವಿಶ್ವಗಣ್ಯವಾಗುವುದಿಲ್ಲವೋ ಹಾಗೇ ಈ ಪ್ರಯೋಗವೂ ಎಂಬ ಅರ್ಥ ಬರುವ ಮಾತಾಡುತ್ತಾರೆ. ಇಲ್ಲೆಲ್ಲ ನನಗೆ ಸುಬ್ಬಣ್ಣ, ನವ್ಯ ಪರಂಪರೆ ಹುಟ್ಟು ಹಾಕಿದ ಅತಿರೇಕದ ಮತ್ತು ಅತಾರ್ತಿಕ ನಿಲುವುಗಳ ಪ್ರಾತಿನಿಧಿಕ ಉದಾಹರಣೆಯಾಗಿ ತೋರುತ್ತಾರೆ. ಅಷ್ಟೊಂದು ಆಕ್ರೋಶ ತುಂಬಿದ ಲೇಖನವಿದು.

ಮೌನದ ಮೊರೆ ಹೋಗುತ್ತಿದ್ದ ಸುಬ್ಬಣ್ಣ

ಈಗ ತಿರುಗಿ ನೋಡಿದರೆ ಅನಿಸುತ್ತದೆ, ಕೆಲವು ಸಂದರ್ಭಗಳಲ್ಲಿ ಸುಬ್ಬಣ್ಣ ಧೀಮಂತ ನಿಲುವುಗಳನ್ನು ತೆಗೆದುಕೊಂಡಿದ್ದರೆ, ಇನ್ನು ಕೆಲವು ವಿಷಯಗಳಲ್ಲಿ ಮೌನದ ಮೊರೆಹೋಗುತ್ತಿದ್ದರು. ನಿಜವಾಗಿಯೂ ಜಗಳ ಆಡಬೇಕಾದ ಅನೇಕ ಸಂದರ್ಭಗಳಲ್ಲಿ ಮೌನವಾಗಿಬಿಡುತ್ತಿದ್ದರು. ‘ಹೆಗ್ಗೋಡು ಬ್ರಾಹ್ಮಣರ ಅಗ್ರಹಾರವಾಗಿ ಪರಿವರ್ತನೆ ಆಗುತ್ತಿದೆ’ ಎಂಬ ಟೀಕೆಯ ಬಗ್ಗೆ ಅವರು ಕೊನೆವರೆಗೂ ಮಾತನಾಡಿದಂತಿಲ್ಲ. ಅವರ ಕೈ ಮೀರಿದ ಕೆಲವು ಬೆಳವಣಿಗೆಗಳು ಅವರನ್ನು ಕಟ್ಟಿ ಹಾಕಿದ ಹಾಗೆ ತೋರುತ್ತಿತ್ತು.

ಆದರೆ ‘ಹವ್ಯಕ ಸಮ್ಮೇಳನ’ದ ಬಗೆಗೆ ಪ್ರತಿರೋಧ ತೋರಿದ ಸುಬ್ಬಣ್ಣನವರ ಸಣ್ಣ ಟಿಪ್ಪಣಿಯೊಂದು ಇವತ್ತಿಗೂ ನನ್ನ ಮನಸ್ಸಿನಲ್ಲಿ ಉಳಿದಿದೆ. ಯಾವ ಲೇಖಕನೂ ಜಾತಿ ಸಂಘಟನೆಯಲ್ಲಿ ತೊಡಗಬಾರದು ಎಂದು ನೇರವಾಗಿ ಹೇಳಿದ ಬರಹ ಇದು. ಕನ್ನಡದ ಕೆಲವೇ ಮಂದಿ ಬರಹಗಾರರು ಹೀಗೆ ಜಾತಿ ಪ್ರಶ್ನೆಯನ್ನು ಕಣ್ಣಿಗೆ ಕಣ್ಣಿಟ್ಟು ನೋಡಿದ್ದಾರೆ. ಒಂದೇ ಜಾತಿಯ ಮಂದಿ ಒಟ್ಟಾಗುವುದರ ಅಪಾಯದ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಆಗಾಗ ಎಚ್ಚರಿಸಿದ್ದಿದೆ. ಜಾತಿಯ ಬಗ್ಗೆ ಯೋಚಿಸುವ ನೀಚತನ ಜನರಿಗೆ ಅಭ್ಯಾಸವಾಗಿ ಹೋಗಿದೆ ಎಂದು ಲಂಕೇಶ್ ಕಟುವಾಗಿ ಮಾತನಾಡಿದ್ದಿದೆ. ಸಿರಿಗರ ಬಡಿದಿರುವ, ಜಾತಿ ವೇದಿಕೆಯೂ ಸೇರಿದಂತೆ ಹೊಗಳಿ ಉಬ್ಬಿಸುವ ಯಾವುದೇ ವೇದಿಕೆಯಾದರೂ ಸರಿ ಎಂದುಕೊಂಡಿರುವ ಯುವಜನತೆ ಇಂದು ಎಲ್ಲೆಲ್ಲೂ ಕಾಣಿಸಿಕೊಂಡಿರುವಾಗ ಸುಬ್ಬಣ್ಣ, ಲಂಕೇಶ್, ತೇಜಸ್ವಿ ಮಾತುಗಳು ಎಷ್ಟು ಮುಖ್ಯ ಎಂಬುದು ಗೊತ್ತಾಗುತ್ತದೆ.

ನೀನಾಸಂ ಕರ್ನಾಟಕದ ಸಾಂಸ್ಕೃತಿಕ ವಾಗ್ವಾದಗಳ ಭಾಗವಾಗಲಿಲ್ಲ ಏಕೆ?

ನೀನಾಸಂ

ಒಂದು ಸಂಸ್ಥೆ ಹಲವಾರು ವರ್ಷಗಳ ಕಾಲ ನಡೆದುಕೊಂಡು ಹೋದಾಗ ಮತ್ತು ಹೆಚ್ಚು ಕಡಿಮೆ ಒಂದೇ ರೀತಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಾಗ ಜಡವಾಗುವ ಎಲ್ಲ ಸಾಧ್ಯತೆಗಳೂ ಇವೆ. ನವ್ಯದ ಉಚ್ಛ್ರಾಯ ಕಾಲದಲ್ಲಿ ತನ್ನ ಉತ್ತುಂಗವನ್ನು ಕಂಡುಕೊಂಡ ನೀನಾಸಂಗೆ ಕರ್ನಾಟಕದಲ್ಲಿ ಕಾಣಿಸಿಕೊಂಡ ಅನೇಕ ಸಾಂಸ್ಕೃತಿಕ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗದೇ ಹೋಯಿತು. ಸ್ವತ: ಸುಬ್ಬಣ್ಣನವರಿಗೆ ಇದರ ಅರಿವಿತ್ತು ಅನಿಸುತ್ತದೆ.

ಲಂಕೇಶ್‌ರ ಮೊದಲ ಕೃತಿಗಳನ್ನು ಸುಬ್ಬಣ್ಣ ಅಚ್ಚು ಹಾಕಿಸಿದ್ದರು. ಬಳಿಕ ಲಂಕೇಶ್ ತಮ್ಮದೇ ಪ್ರಕಾಶನವನ್ನು ಶುರು ಮಾಡಿದರು. ವೈಯಕ್ತಿಕ ಭಿನ್ನಾಭಿಪ್ರಾಯ ಇರಬಹುದಾದರೂ ಇದೊಂದು ಸಹಜ ಪ್ರಕ್ರಿಯೆಯೇ ಆಗಿತ್ತು. ಆದರೆ ಇದರಿಂದ ಪ್ರಖರವಾಗಿ ನಡೆಯಬಹುದಾದ ಕೆಲವು ವಾಗ್ವಾದಗಳಿಗೆ ಒಂದು ರೀತಿಯ ತಡೆಬಿದ್ದ ಹಾಗಾಯಿತು. ತೇಜಸ್ವಿ ಒಂದೆರಡು ಸಲ ಹೆಗ್ಗೋಡಿಗೆ ಬಂದು ಹೋದರಾದರೂ ಹೆಚ್ಚು ಕಡಿಮೆ ದೂರವೇ ಇದ್ದುದ್ದನ್ನು ನೋಡಿದಾಗ, ಸಂದರ್ಭದ ಸೂಕ್ಷ್ಮ ನಿಭಾಯಿಸುವಿಕೆಯೇ ಸುಬ್ಬಣ್ಣನವರಿಗೆ ಮುಖ್ಯವಾದ ಹಾಗೆ ತೋರುತ್ತದೆ. ಜಗಳದ ಒಂದಿಗೆ ಜೊತೆಗಿರಲು ಅವರಿಗೆ ಸಾಧ್ಯವಿರಲಿಲ್ಲ ಎಂಬುದನ್ನು ಸೂಚಿಸಿದ ಸಂದರ್ಭಗಳು ಇವು.

ಕೊನೆಯವರೆಗೂ ಗೋಪಾಲಕೃಷ್ಣ ಅಡಿಗ ಮತ್ತು ಅನಂತಮೂರ್ತಿ ಜೊತೆ ಅವರು ಒಳ್ಳೆಯ ಸಂಬಂಧ ಹೊಂದಿದ್ದು ಇದನ್ನೇ ಸೂಚಿಸುತ್ತದೆ. ಅಡಿಗ, ಅನಂತಮೂರ್ತಿ ಜೊತೆಗೆ ಅವರಿಗೆ ತಾತ್ವಿಕ ಭಿನ್ನಾಭಿಪ್ರಾಯಗಳು ಇದ್ದಿರಬಹುದಾದರೂ ಅದು ಸಾರ್ವಜನಿಕ ಮಹತ್ವವನ್ನು ಹೊಂದಿರಬಹುದಾಗಿದ್ದರೂ ಯಾವುದನ್ನು ಬಹಿರಂಗವಾಗಿ ತೋರಿಸಿಕೊಳ್ಳದೇ ಅದನ್ನು ನಿಭಾಯಿಸಲು ಸುಬ್ಬಣ್ಣ ಪ್ರಯತ್ನಿಸಿದಂತಿತ್ತು. ಹೇಗೆ ಅವರು ಕೊನೆಯವರೆಗೂ ಜೊತೆಯಾಗಿ ನಡೆದರು ಎಂಬುದೇ ನನ್ನಲ್ಲಿ ಅಚ್ಚರಿ ಹುಟ್ಟಿಸುತ್ತವೆ. ಅಡಿಗರ ಕಾವ್ಯದಲ್ಲಿ ಹಿಂದುತ್ವವಾದ ಢಾಳಾಗಿ ಕಾಣಿಸಿದ್ದರ ಬಗ್ಗೆಯೂ ಅವರು ಪ್ರತಿಕ್ರಿಯಿಸಿದಂತಿಲ್ಲ. ಇದನ್ನೇ ನಾನು ವಾಗ್ವಾದಗಳ ಗೈರುಹಾಜರಿ ಎಂದು ಹೇಳಿದ್ದು. ತನ್ನವರನ್ನು ಬಿಟ್ಟು ಕೊಡಲಾಗದ ಸಂಕಟವನ್ನು ಅವರು ಎದುರಿಸಿರಬಹುದು. ಸುಬ್ಬಣ್ಣನವರ ಶಕ್ತಿ ಮತ್ತು ಮಿತಿಗಳು ನಿಚ್ಚಳವಾಗಿ ಕಾಣಿಸುವುದು ಇಂಥ ಸಂದರ್ಭಗಳಲ್ಲಿಯೇ.

ಎನ್ಎಸ್‌ಡಿ ಮಾದರಿ ನೀನಾಸಂಗೆ ಒಡ್ಡಿದ ಮಿತಿ

NSD

ನೀನಾಸಂ ದೆಹಲಿಯ ಎನ್.ಎಸ್.ಡಿ ಮಾದರಿಯಲ್ಲಿ ತನ್ನ ಚಟುವಟಿಕೆಯನ್ನು ರೂಪಿಸಿದ್ದು ಕಾರ್ಯಕ್ರಮಗಳಿಗೆ ಒಂದು ಸ್ಪಷ್ಟ ರೂಪು ನೀಡಲು ಒದಗಿಬಂದಿದ್ದರೂ ಸಂಸ್ಥೆಯ ಮಿತಿಗೂ ಕಾರಣವಾಗಿತ್ತು. ಕುಂದಾಪುರದಲ್ಲಿ ರಂಗ ಅಧ್ಯಯನ ಕೇಂದ್ರದ ಚಟುವಟಿಕೆಗಳನ್ನು ನಡೆಸುವಾಗ ಆ ಮಾದರಿಯಲ್ಲಿ ಇರಬಹುದಾದ ಸಮಸ್ಯೆಗಳು ನನ್ನ ಅನುಭವಕ್ಕೆ ಬಂದವು. ಕಾಲೇಜಿನ ಪರಿಧಿಯ ಒಳಗೆ ಕೆಲಸ ಮಾಡುವ ಸಂಸ್ಥೆಯಾಗಿ ರಂಗ ಅಧ್ಯಯನ ಕೇಂದ್ರ ತನ್ನನ್ನು ಇನ್ನಷ್ಟು ಮಿತಗೊಳಿಸಿಕೊಂಡು ಕೆಲಸ ಮಾಡಬೇಕಾದ ಒತ್ತಡವೂ ಇತ್ತು. ನೀನಾಸಂಗೆ ಅಂತಹ ಸಮಸ್ಯೆ ಇರಲಿಲ್ಲ. ಆದರೆ ಅದು ಕಂಡುಕೊಂಡ ಮಾದರಿಯಲ್ಲಿ ಇದ್ದ ಸಮಸ್ಯೆ ನೀನಾಸಂನ ಸಮಸ್ಯೆ ಕೂಡ ಆಯಿತು. ಇದು ಪ್ರದರ್ಶನದ ಮಾದರಿ. ವೇದಿಕೆ ಮೂಲಕ ಜನರಿಗೆ ತಾತ್ವಿಕವಾಗಿ ಒಂದಕ್ಕೊಂದು ಸಂಬಂಧವಿಲ್ಲದ ವೈವಿಧ್ಯಮಯ ನಾಟಕಗಳನ್ನು ತೋರಿಸಬೇಕಾದ ಒತ್ತಡದ ಮಾದರಿ. ಕನ್ನಯ್ ಲಾಲ್ ಕಟ್ಟಿದ ರಂಗಭೂಮಿಯ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ. ಚಿಂತನೆಯ ಸಂದರ್ಭದಲ್ಲಿಯೂ ನೀನಾಸಂ ಹುಟ್ಟುಹಾಕಿದ್ದು ಎಕ್ಲೆಟ್ಟಿಕ್ ಮಾದರಿಯನ್ನೇ. ಆದುದರಿಂದಲೇ ಅದೀಗ, ಕಲೆಯ ಬಗ್ಗೆ ನಿಷ್ಠೆ ಹೊಂದಿರುವ ಆದರೆ ಎಲ್ಲ ಬಗೆಯ, ಎಲ್ಲ ಹಿನ್ನೆಲೆಯ, ಎಲ್ಲ ತಾತ್ವಿಕತೆಯ, ಎಲ್ಲ ಮನೋಭಾವದ ಜನರನ್ನು ಒಂದು ಕಡೆ ಸೇರಿಸುವ ವ್ಯವಸ್ಥೆಯಾಗಿಬಿಟ್ಟಿದೆ.

ಸಾಕ್ಷಿ ನಿಂತು ಹೋಯಿತು. ನವ್ಯ ಸಾಹಿತ್ಯ ಚಳುವಳಿ ಸ್ಥಗಿತವಾಯಿತು. ಸುಬ್ಬಣ್ಣ ಮಾತ್ರ ನೀನಾಸಂ ಚಟುವಟಿಕೆಗಳನ್ನು ಚಡಿ ಕಡಿಯದೇ ಮುಂದುವರೆಸಿದರು. ಇದು ನಿಜಕ್ಕೂ ದೊಡ್ಡ ವಿಷಯ. ನೀನಾಸಂ ಒಂದು ವೇದಿಕೆಯಾಗಿ ಪರಿವರ್ತನೆಗೊಂಡಿದ್ದರ ಅರಿವು ಅವರಿಗೆ ಇತ್ತು ಅನಿಸುತ್ತದೆ. ಸಹಜವಾಗಿ ಅಲ್ಲಿ ನಿಶ್ಚಿತ ಮೌಲ್ಯಗಳ ಪ್ರತಿಪಾದನೆ ಸಾಧ್ಯವಾಗುವುದಿಲ್ಲ. ಹೇಳಬೇಕಾದುದನ್ನು ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಸ್ಪಷ್ಟ ಸಾಮಾಜಿಕ, ರಾಜಕೀಯ ನಿಲುವು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತನ್ನದೇ ಆದ ರಂಗ ಮೀಮಾಂಸೆಯನ್ನು ಬೆಳೆಸಲೂ ಸಾಧ್ಯವಾಗುವುದಿಲ್ಲ. ಪ್ರಭುತ್ವದ ಇದಿರು ಪ್ರಶ್ನೆಗಳನ್ನು ಇಡುವುದಂತೂ ನೀನಾಸಂ ಗೆ ಇಂದಿಗೂ ಸಾಧ್ಯವಾಗದೆ ಹೋಗಿದೆ.

ಕೊನೆಯ ಮಾತುಗಳು

ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಮೇಲೆದ್ದು ಬಂದ ಬ್ರಾಹ್ಮಣ್ಯದ ವಿರಾಟ್ ಸ್ವರೂಪವನ್ನು ತಡೆಯಲು ಸುಬ್ಬಣ್ಣನವರಿಂದ ಆಗಲಿಲ್ಲ. ಆ ದಿಕ್ಕಿನಲ್ಲಿ ಸಣ್ಣ ಪ್ರಯತ್ನ ಮಾಡುವುದೂ ಅವರಿಗೆ ಸಾಧ್ಯವಾಗಲಿಲ್ಲ. ವೈಯಕ್ತಿಕವಾಗಿ, ಆಗಾಗ ಸಿಡಿದು ನಿಲ್ಲುತ್ತಾ, ತನ್ನತನದ ಬಿಸಿಯನ್ನು ಕಾಪಾಡಿಕೊಳ್ಳಲು ಅವರು ಕೊನೆಯವರೆಗೂ ಪ್ರಯತ್ನಿಸಿದ್ದನ್ನು ನೋಡುತ್ತೇವೆ. ‘ಶ್ರೇಷ್ಠತೆಯ ವ್ಯಸನ’ದ ಬಗ್ಗೆ ಅವರು ಬರೆದ ಲೇಖನ ಇದಕ್ಕೆ ಒಂದು ಉದಾಹರಣೆ. ತನ್ನ ಮಾತುಕತೆಗಳಿಂದ, ಅಭಿಪ್ರಾಯ ಮಂಡನೆಗಳಿಂದ ಅನೇಕರ ಗಮನ ಸೆಳೆಯುತ್ತಾ ತನ್ನದೇ ಮಿತಿಗಳ ಜೊತೆ ಸೆಣೆಸುತ್ತಾ ಕಟು ಟೀಕೆಗಳ ನಡುವೆಯೂ ಹೊಸದನ್ನು ಕಂಡುಕೊಳ್ಳುವ ಛಲದಿಂದ ಕೆಲಸ ಮಾಡುತ್ತಾ ನಡೆದ ಸುಬ್ಬಣ್ಣನವರ ಧೀಶಕ್ತಿ ಅಚ್ಚರಿ ಹುಟ್ಟಿಸುವಂಥದ್ದು.

One thought on “ವಸಂತ ಬನ್ನಾಡಿ ಕಣ್ಣಿನಲ್ಲಿ ಕೆ.ವಿ.ಸುಬ್ಬಣ್ಣ”
  1. ಒಂದು ಸಣ್ಣ ತಿದ್ದುಪಡಿ, ಪೀಟರ್ ಬ್ರೂಕನ ನಾಟಕ ನೋಡಿ ಅವರು ಬರೆದದ್ದು ಅಲ್ಲ. ವಸಾಹತುಶಾಹಿ ಧೋರಣೆಯ ಬಗ್ಗೆ ಅವರು ಬರೆದಿರುವುದು.
    ಬಿ.ವಿ ಕಾರಂತರಂತರವರೂ ಬ್ರೂಕ್ ಹಿಂದೆ ತಿರುಗಾಡಿದ ಬಗ್ಗೆ ಅವರಿಗೆ ವಿಷಾದ ಮತ್ತು ಆಕ್ರೋಶ ಇತ್ತು.
    ಅದಕ್ಕಾಗಿ ಅವರು ಅವರು ಪ್ರಕಟಿಸಿದ ಸಣ್ಣ ಪುಸ್ತಿಕೆಗೆ “ಪೀಟರ್ ಬ್ರೂಕ್ ನ ಅಶ್ವಮೇಧ ” ಎಂದು ಹೆಸರಿಸಿದರು
    ಹೊರತು ಪೀಟರ್ ಬ್ರೂಕ್ ನ ಮಹಾಭಾರತ ಎನ್ನಲಿಲ್ಲ.
    ಆಗ ಅವರು ನಾಟಕ ನೋಡಿರಲಿಲ್ಲ ನಂತರ ನಾಟಕ ನೋಡಿದರೂ ಬ್ರೂಕ್ ನ ಬಗ್ಗೆ ತಮ್ಮ ಅಭಿಪ್ರಾಯ ಬದಲಿಸಲಿಲ್ಲ.
    ಏನೇ ಇರಲಿ
    ಸುಬ್ಬಣ್ಣ ತಮ್ಮ ಎಲ್ಲ ಮಿತಿಗಳ ನಡುವೆ ಸಾಧಿಸಿದ್ದು ದೊಡ್ಡದು.. ಹೌದು ಕೆಲವು ಸಲ ಆ ಮಿತಿಯನ್ನು ಮೀರುವುದು ಸಾಧ್ಯವಿತ್ತು ಎಂದು ಖಂಡಿತ ನನ್ನ ಅನಿಸಿಕೆ ಯೂ ಹೌದು

    ಆದರೆ ನನ್ನ ಅನಿಸಿಕೆಯಂತೆ ಸುಬ್ಬಣ್ಣನ‌ ಒಳಗೆ ಒಬ್ಬ ರಾಜಕಾರಣಿ ಯೂ ಇದ್ದ ಆತ ರಾಮಕೃಷ್ಣ ಹೆಗಡೆಯಂತವನೂ ಆಗಿದ್ದ ಎಂದೇ ನನ್ಬ ಗುಮಾನಿ..
    ಒಳ್ಳೆಯ ವ್ಯಕ್ತಿ ಚಿತ್ರ ಕೊಟ್ಟಿದ್ದೀರಿ

Leave a Reply

Your email address will not be published. Required fields are marked *