ದೇಶದ ಉದ್ದಗಲಕ್ಕೂ ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಪ್ರತಿಭಟನೆ ನಡೆಸುತ್ತಿರುವ ಈ ಸಂದರ್ಭದಲ್ಲಿ, ಸ್ವಾತಂತ್ರ್ಯಪೂರ್ವ ಭಾರತದಲ್ಲಿಯೇ ರೈತರ ಮಹಾ ಸಮಾವೇಶವನ್ನು ಸಂಘಟಿಸಿದ್ದು ಬಾಬಾ ಸಾಹೇಬ ಭೀಮ್ ರಾವ್ ಅಂಬೇಡ್ಕರ್ ಎಂಬುದು ಎಷ್ಟೋ ಜನಕ್ಕೆ ಅರಿಯದ ವಿಷಯವಾಗಿದೆ. ಹೌದು, ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಅಸ್ತಿತ್ವದಲಿದ್ದ ʻಖೋತಿ ಪದ್ದತಿʼಯ ನಿರ್ಮೂಲನೆಗಾಗಿ ರೈತರನ್ನು ಸಂಘಟಿಸಿ ಅಸೆಂಬ್ಲಿ ಚಲೋ ಮಾಡಿಸಿದ್ದ ಚಾರಿತ್ರಿಕ ಹಿನ್ನೆಲೆಯ ರೈತ ಹೋರಾಟವು ಅಂಬೇಡ್ಕರ್‌ ಅವರಿಗೆ ಕೃಷಿಕರ ಮೇಲಿದ್ದ ಕಾಳಜಿಯ ಪ್ರತೀಕ.

ಬ್ಯಾರಿಸ್ಟರ್ ಕಾನೂನು ಪದವಿ ಗಳಿಸಿ ಭಾರತಕ್ಕೆ ಹಿಂತಿರುಗಿದ್ದ ಅಂಬೇಡ್ಕರ್, ಬಾಂಬೆ ಕಾಲೇಜಿನಲ್ಲಿ ಪ್ರೊಫೆಸರ್ ವೃತ್ತಿಯನ್ನು ಆರಂಭಿಸಿದರೂ, ಸಾಮಾಜಿಕ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. 1927ರಲ್ಲಿ ಅಸ್ಪೃಶ್ಯರ ನೀರಿನ ಹಕ್ಕುಗಳಿಗಾಗಿ ಮಹಾಡ್ ಚೌಡರ್ ಕೆರೆ ಸತ್ಯಾಗ್ರಹ, 1930ರಲ್ಲಿ ನಾಸಿಕ್‌ನ ಕಾಳಾರಾಮ ಮಂದಿರ ಪ್ರವೇಶ, ಮನುಸ್ಮೃತಿ ಕೃತಿಯ ದಹನ, ರೈತ ಪರವಾದ ‘ಖೋತಿ ಪದ್ದತಿ ನಿರ್ಮೂಲನಾ’ ಹೋರಾಟಗಳನ್ನು ಕಟ್ಟುತ್ತ ದನಿಯಿಲ್ಲದವರ ದನಿಯಾದರು.

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಅದಾಗಲೇ ಚಾಲ್ತಿಯಲಿದ್ದ ಅಮಾನುಷ ಖೋತಿ ಪದ್ದತಿಯ ಮೂಲಕ ಭೂ ಮಾಲಿಕರು ರೈತರ ಮೇಲೆ ನಡೆಸುತಿದ್ದ ಅಮಾನವೀಯ ದೌರ್ಜನ್ಯಗಳನ್ನು ತಿಳಿದ ಅಂಬೇಡ್ಕರ್, 1929ರಲ್ಲಿ ಅಲ್ಲಿನ ರೈತರನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಅನಂತ ಚಿತ್ರೆ ಅವರು ಸ್ಥಾಪಿಸಿದ ಕೊಂಕಣ ಪ್ರಾಂತ ಶೆಟ್ಟರಿ ಸಂಘದ ಜೊತೆಗೂಡಿ, ಹಲವಾರು ರೈತಸಭೆಗಳನ್ನು ಸಂಘಟಿಸಿ ಊಳಿಗಮಾನ್ಯ ಪದ್ಧತಿಯ ನಿರ್ಮೂಲನಾ ಚಳವಳಿಯನ್ನು ರೂಪಿಸಿದರು. ಈ ಖೋತಿ ಪದ್ದತಿಯಿಂದ ಶೋಷಣೆಗೆ ಒಳಗಾಗಿದ್ದ ಕುಣಬಿ, ಮಹಾರ್, ಮರಾಠ, ಚಂಬಾರ್ ಮತ್ತು ಮುಸಲ್ಮಾನರನ್ನು ಸಂಘಟಿಸಿದ ಅಂಬೇಡ್ಕರ್ ಹಳ್ಳಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸರಣಿ ಸಭೆಗಳನ್ನು ನಡೆಸಿದರು. ಭೂ ಮಾಲೀಕರಿಂದ ಇವರನ್ನು ರಕ್ಷಿಸಲು ಸೈನ್ಯಗಳಲ್ಲಿ ನುರಿತ ಮಹಾರ್ ಜನರನ್ನು ರಕ್ಷಣೆ ನೀಡುವಂತೆ ತಮ್ಮ ಸಮುದಾಯಕ್ಕೆ ಕರೆ ನೀಡಿದ್ದರು.

ಏನಿದು ಖೋತಿ ಪದ್ಧತಿ?

ಖೋತ್‌ ಎಂದರೆ ಭೂ ಮಾಲೀಕರು. ಖೋತಿ ಪದ್ದತಿ ಎಂದರೆ ಭೂ ಮಾಲೀಕರು ಗೇಣಿದಾರರಿಂದ ಭೂ ಕಂದಾಯವನ್ನು ಸಂಗ್ರಹಿಸಿ ರಾಜರಿಗೆ ನೀಡುವು ಪದ್ದತಿ. ಅದರಲ್ಲಿನ ಒಂದು ಭಾಗವನ್ನು ಖೋತ್‌ಗಳು ತಮ್ಮಲ್ಲೇ ಉಳಿಸಿಕೊಳ್ಳುತ್ತಿದ್ದರು. ವಸಾಹುತಶಾಹಿ ಕಾಲದಲ್ಲೂ ಇದನ್ನು ಮುಂದುವರೆಸಿದರು. ಬ್ರಿಟೀಶರು ಭೂ ಮಾಲೀಕರನ್ನು ಎದುರು ಹಾಕಿಕೊಳ್ಳದೆ, ಖೋತಿ ಪದ್ದತಿಗೆ ಸಮ್ಮತಿಸಿದ್ದರು. ಖೋತಿ ಪದ್ದತಿಯು ಜೀವ ವಿರೋಧಿ, ರೈತ ವಿರೋಧಿ ಊಳಿಗಮಾನ್ಯ ಪದ್ದತಿಯಾಗಿತ್ತು. ಪ್ರತಿಯೊಬ್ಬ ಜಮೀನ್ದಾರ್ ಖೋತ್ ಸರಾಸರಿ ಒಂದು ಎಕರೆ ಹೊಲಕ್ಕೆ ಒಂದು ಖಂಡಿಯಷ್ಠು ಧಾನ್ಯವನ್ನು ಅಂದರೆ, ರೈತ ಬೆಳೆದ ಬೆಳೆಯ ಅರ್ಧದಷ್ಟು ಭಾಗವನ್ನು ತೆರಿಗೆ ರೂಪದಲ್ಲಿ ಕಿತ್ತುಕೊಳ್ಳುತಿದ್ದರು. ಅದಷ್ಟೇ ಅಲ್ಲದೆ, ವರ್ಷಕ್ಕೆ 60 ದಿನ ಬಿಟ್ಟಿ ಚಾಕರಿಯನ್ನು ರೈತರು ಭೂ ಮಾಲೀಕರ ತೋಟ ಮತ್ತು ಮನೆಗಳಲ್ಲಿ ಮಾಡಬೇಕಿತ್ತು. ಇದಕ್ಕೆ ಯಾವುದೇ ಕೂಲಿಯನ್ನು ಕೇಳುವಂತಿರಲಿಲ್ಲ. ಜಮೀನ್ದಾರರು ನೀಡುತಿದ್ದ ಕರಾರು ಪತ್ರದ ಪ್ರಕಾರ ರೈತನ ಉಳುಮೆಯ ಹಕ್ಕು ಆ ವರ್ಷದ ಬೆಳೆಯ ಕಟಾವಿನವರೆಗೆ ಮಾತ್ರ ಇರುತಿತ್ತು. ಇಂತಹ ಅಮಾನವೀಯ ಪದ್ದತಿಗೆ ಲಕ್ಷಾಂತರ ರೈತರು ಅಕ್ಷರಶಃ ಬಲಿಯಾಗಿದ್ದರು.

ಕೃಷಿಕರ ಸುಧಾರಣೆ ಬಗ್ಗೆ ಅಗಾಧವಾದ ಪಾಂಡಿತ್ಯವಿದ್ದ ಅಂಬೇಡ್ಕರ್ ಇತ್ತ ಕೊಂಕಣ ಪ್ರದೇಶದ ಥಾಣೆ, ರತ್ನಗಿರಿ, ಕೊಲಬಾ ಜಿಲ್ಲೆಗಳಲ್ಲಿ ಸಂಘಟಿಸಿದ್ದ ಸಭೆಗಳಲ್ಲಿ ಪಾಲ್ಗೊಳ್ಳುತಿದ್ದ ರೈತರಿಗೆ ಚೈತನ್ಯದ ಮಾತುಗಳನ್ನು ಹೇಳಿ ತಮ್ಮ ಹಕ್ಕುಗಳಿಗಾಗಿ ಹೋರಾಡುವಂತೆ ಹುರಿದುಂಬಿಸುತಿದ್ದರು. ಬಡತನ ಮತ್ತು ಕೀಳರಿಮೆಯಿಂದ ವಿಮೋಚನೆಗೊಳ್ಳುವ ಪರ್ಯಾಯ ಮಾರ್ಗಗಳನ್ನು ಆಯ್ದುಕೊಳ್ಳುವಂತೆ ಸಲಹೆ ನೀಡುತ್ತಿದ್ದರು. ಭೂ ಮಾಲೀಕರು ರೈತರ ಮೇಲೆ ಸುಳ್ಳು ಮೊಕದೊಮ್ಮೆ ಹಾಕಿದ್ದ ಪೋಲಿಸ್ ಪ್ರಕರಣಗಳನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ರೈತರ ಪರವಾಗಿ ಅಂಬೇಡ್ಕರ್ ವಾದವನ್ನು ಮಂಡಿಸುತ್ತಿದ್ದರು. ಇದೆಲ್ಲವೂ ರೈತರ ಮೇಲೆ ಪ್ರಭಾವ ಬೀರಿ ಅಂಬೇಡ್ಕರ್‌ರವರ ನಾಯಕತ್ವವನ್ನು ಕೊಂಕಣಿ ಪ್ರದೇಶದ ರೈತರು ಒಪ್ಪಿಕೊಂಡಿದ್ದರು. ʻಬಹಿಷ್ಕೃತ ಭಾರತ್ʼ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಬರೆದು ರೈತರಲ್ಲಿ ಭೂ ಕಂದಾಯ ಕಟ್ಟದಂತೆ ಜಾಗೃತಿ ಮೂಡಿಸಿದರು. ವಸಾಹತುಶಾಹಿ ಕಾಲದ ನಂತರ ಗ್ರಾಮೀಣ ಭಾರತದಲ್ಲಿ ಹುಟ್ಟಿಕೊಂಡ ಊಳಿಗಮಾನ್ಯ ಪದ್ದತಿಯಲ್ಲಿ ದಲಿತರು ಹೆಚ್ಚು ಅವಮಾನ, ಶೋಷಣೆ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು. ಅಂಬೇಡ್ಕರ್‌ರವರ ರೈತ ರಾಜಕಾರಣವೂ ಗ್ರಾಮೀಣ ಭಾಗದಲ್ಲಿ ದಲಿತ ಮತ್ತು ಶೂದ್ರ ಕೃಷಿಕರ ಐಕ್ಯತೆ ಸಾಧಿಸುವ ಪ್ರಯತ್ನ ಸಫಲವಾಯಿತು.

ಗೇಣಿದಾರರ ಚಳವಳಿಯ ಕಾವು ಹೇರಿದ್ದಾಗಲೇ ಬಾಂಬೆ ಪ್ರೆಸಿಡೆನ್ಸಿ ಶಾಸನ ಸಭೆಗೆ ಚುನಾವಣೆ ಎದುರಾಯಿತು. 1936ರಲ್ಲಿ ಅಂಬೇಡ್ಕರ್ ಸ್ವತಂತ್ರ ಕಾರ್ಮಿಕ ಪಕ್ಷ ಸ್ಥಾಪಿಸಿ, ಚುನಾವಣೆ ರಂಗಕ್ಕೆ ರೈತ ದಲಿತ ಮತ್ತು ಕಾರ್ಮಿಕ ಪರವಾದ ವಿದ್ಯಾವಂತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ, 1937ರಲ್ಲಿ ನಡೆದ ಬಾಂಬೆ ಪ್ರೆಸಿಡೆನ್ಸಿಯ ಕೇಂದ್ರ ಶಾಸನ ಸಭೆಗೆ ಆಯ್ಕೆಯಾದರು. ಕಾನೂನು ತಜ್ಞರಾಗಿದ್ದ ಅಂಬೇಡ್ಕರ್, ಕಾನೂನುಗಳಿಂದ ರೈತರಿಗೆ ಶಾಶ್ವತ ಪರಿಹಾರ ಒದಗಿಸಲು ಶಾಸನ ಸಭೆಯಲ್ಲಿ 1937 ಸೆಪ್ಟೆಂಬರ್ 17ರಂದು ಖೋತಿ ಪದ್ದತಿ ಸಂಪೂರ್ಣವಾಗಿ ರದ್ದು ಮಾಡಬೇಕು ಎಂಬ ಮಸೂದೆಯನ್ನು ಮಂಡಿಸಿದ್ದರು. ಭಾರತದಾದ್ಯಂತ ಎಲ್ಲಾ ಪ್ರಾಂತೀಯ ಅಸೆಂಬ್ಲಿಗಳಲ್ಲಿ ರೈತ ಜೀತ ಪದ್ದತಿ ನಿರ್ಮೂಲನೆಗಾಗಿ ಮಸೂದೆಯನ್ನು ಮಂಡಿಸಿದ ಮೊಟ್ಟ ಮೊದಲ ನಾಯಕ ಅಂಬೇಡ್ಕರ್ ಎನ್ನಬಹುದು. ಆದರೆ ಈ ಮಸೂದೆಯನ್ನು ಶಾಸನ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಿಲ್ಲ.

ಇದರಿಂದ ಆಕ್ರೋಶಗೊಂಡ ಅಂಬೇಡ್ಕರ್ ರೈತರಿಂದ ಅಸೆಂಬ್ಲಿ ಚಲೋ ಕಾರ್ಯಕ್ರಮವನ್ನು 1938ರಲ್ಲಿ ರೂಪಿಸಿದರು. ಅನಂತರಾವ್ ಚಿತ್ರೆ, ಭಾಯಿ ಚಿತ್ರೆ, ಶಾಮರಾವ್ ಪರುಳೇಕರ್, ಚಂದ್ರಕಾಂತ ಅಧಿಕಾರಿ, ಸುರ್ಬಾನಾನಾ ಟಿಪ್ನೀಸ್, ನಾರಾಯಣ ನಾಗು ಪಾಟೀಲ್, ಶಾಮ್ತಾರಾಮ್ ಪೋಟ್ನೀಸ್, ಚಿಂತಾಮಣ್ ದೇಶಪಾಂಡೆ ಮುಂತಾದ ರೈತ ಕಾರ್ಮಿಕ ನಾಯಕರ ನಾಯಕತ್ವದಲ್ಲಿ ಮೆರವಣಿಗೆಗೆ ರೈತರನ್ನು ಮುಂಬೈಗೆ ಕರೆ ತರಲು ಸಿದ್ದತೆ ನಡೆಯಿತು. ಅಹಮದ್‌ನಗರ, ಕೊಲ್ಹಾಪುರ, ಸತಾರಾ, ಪುಣೆ ಭಾಗಗಳಿಂದ ಸಾವಿರಾರು ರೈತರನ್ನು ಬಾಂಬೆಗೆ ಕರೆಸಿದರು. ದಾಪೋಲಿ, ಖೇಡ್, ಚಿಪ್ಲೂನ್ ಜಯಗಢ್ ಭಾಗದ ರೈತರು ಕಾಲ್ನೆಡಿಗೆಯಲ್ಲಿ ಬಂದರು. ಅಲಿಬಾಗ್, ಪೇಣ್, ಉರಣ್ ಭಾಗದ ರೈತರು ಹಾಯಿ ಹಡಗುಗಳಲ್ಲಿ ಬಂದರು. ಮಹಾಡ್, ಮಾಣ್‌ಗಾಂವ್ ಮತ್ತು ರೋಹ ತಾಲ್ಲೂಕಿನ ರೈತರು ಬಸ್ ಮತ್ತು ಸ್ಟೀಮರ್‌ಗಳಲ್ಲಿ ಪ್ರಯಾಣ ಬೆಳೆಸಿದ್ದರು. ಎಲ್ಲಾ ಭಾಗದ ರೈತರು ಭಾವೂಚಾ ಢಕ್ಕಾದಲ್ಲಿ ಜಮಾಯಿಸಿ ಆಜಾದ್ ಮೈದಾನ ಕಡೆಗೆ ಮೆರವಣಿಗೆಯಲ್ಲಿ ಸಾಗಿದ್ದರು. ಮುಂಬೈನಲ್ಲಿ ನೆಲೆಸಿದ್ದ ಕೊಂಕಣದ ರೈತರು ಮೆರವಣಿಗೆಯಲ್ಲಿ ಭಾಗಿಯಾದರು.

1938 ಜನವರಿ 10ರಂದು ಶಾಸನ ಸಭಾ ಹಾಲ್‌ಗೆ ಪ್ರವೇಶಿಸಿದ ಬೃಹತ್ ರೈತರ ಮೆರವಣಿಗೆ ‘ಖೋತಿ ಪದ್ದತಿ ವಿರೋಧಿ ಮಸೂದೆ’ ಒಪ್ಪಿಕೊಳ್ಳುವಂತೆ ಆಗ್ರಹಿಸಿತು. ರೈತರ ಹೋರಾಟ ಚಿರಾಯುವಾಗಲಿ ಎಂಬ ಘೋಷವಾಕ್ಯ ಎಲ್ಲೆಡೆ ಮೊಳಗಿತ್ತು. ಅಂಬೇಡ್ಕರ್ ನೇತೃತ್ವದಲ್ಲಿ ಸುಮಾರು 25,000ಕ್ಕೂ ಹೆಚ್ಚಿನ ರೈತರನ್ನು ಒಳಗೊಂಡ ಕೊಂಕಣಿ ರೈತರ ಸಾಮೂಹಿಕ ಮೆರವಣಿಗೆ ಸಂಘಟಿಸಿ, ವಿಧೇಯಕ ಒಪ್ಪಿಕೊಳ್ಳುವಂತೆ ‘ಅಸೆಂಬ್ಲಿ ಚಲೋ’ ನಡೆಸಿದ್ದು ಭಾರತದ ಸ್ವಾತಂತ್ರಪೂರ್ವದಲ್ಲಿ ನಡೆದ ಬಹುದೊಡ್ಡ ರೈತ ಚಳವಳಿ. ರೈತರ ಅಹವಾಲು ಸ್ವೀಕರಿಸಿದ ಅಂದಿನ ಪ್ರಧಾನಿ ಬಿ.ಜಿ.ಖೇರ್ ರೈತರ ಶಕ್ತಿಯನ್ನು ಕಂಡು ಬೆಚ್ಚಿದ್ದರು. ತದನಂತರ ರೈತ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ‘ರೈತರು ತಮ್ಮ ಹಕ್ಕುಗಳ ಜಾರಿಗಾಗಿ ಜೈಲು ಸೇರುವುದಕ್ಕೂ ಸಿದ್ದರಿರಬೇಕು, ನಿಮ್ಮೊಡನೆ ನಾನು ಜೈಲುವಾಸ ಅನುಭವಿಸಲು ಸಿದ್ಧʼ ಎಂದಿದ್ದರು. ಮುಂದುವರೆದು, ʻಕೇವಲ ಸಾವಿರ ಸಂಖ್ಯೆಯಲ್ಲಿರುವ ಭೂ ಮಾಲೀಕರ ಪರವಾಗಿರುವ ಸರ್ಕಾರದ ಎದುರಿಗೆ ಲಕ್ಷಾಂತರ ಸಂಖ್ಯೆಯ ರೈತರ ಶಕ್ತಿಯನ್ನು ದಾಖಲಿಸಿದ್ದಿರ. ರೈತರ ವಿಮೋಚನೆಗೆ ಈ ಹೋರಾಟ ಮುನ್ನಡಿ ಬರೆಯುತ್ತದೆ’ ಎಂದರು.

ಅಂಬೇಡ್ಕರ್ ಕೊಂಕಣ ಮೂಲದ ರೈತ ಚಳವಳಿಯ ನಿರ್ವಿವಾದ ಉನ್ನತ ನಾಯಕರಾದರು. 1939ರಲ್ಲಿ ಸರ್ಕಾರವು ಅಸೆಂಬ್ಲಿ ಮತ್ತು ವಿಧಾನ ಪರಿಷತನ್ನು ವಿಸರ್ಜಿಸಿದ ಕಾರಣ ಗೇಣಿದಾರರ ಮಸೂದೆ ಕಾಯ್ದೆಯಾಗಿ ಜಾರಿಯಾಗಲಿಲ್ಲ. ಆದರೆ ಅಂಬೇಡ್ಕರ್ ಅನುಯಾಯಿಗಳು ಮತ್ತು ರೈತ ಕಾರ್ಮಿಕ ನಾಯಕರು ಖೋತಿ ವಿರೋಧಿ ಚಳವಳಿಯನ್ನು ಮುಂದುವರೆಸಿದರು. 1949ರಲ್ಲಿ ಖೋತಿ ಪದ್ದತಿ ನಿರ್ಮಾಲನೆ ಕಾಯ್ದೆಯಾಗಿ ರೈತ ಪರ ಹೋರಾಟಕ್ಕೆ ಜಯ ಲಭಿಸಿತು.
ಗ್ರಾಮೀಣ ಭಾಗದಲ್ಲಿ ರೈತರ ಸಂಘಟನೆಯನ್ನು ಸದೃಢವಾಗಿ ಕಟ್ಟುತ್ತಾ ಅಸಮಾನತೆಯನ್ನು ಹಾಗೂ ದಲಿತರ ಮೇಲಿನ ದೌರ್ಜನ್ಯವನ್ನು ತಡೆಯುವಲ್ಲಿ ಅವರ ಹೋರಾಟ ಯಶಸ್ವಿಯಾಯಿತು. ಭೂಮಿಯನ್ನು ರಾಷ್ಟ್ರೀಕರಣಗೊಳಿಸಿ, ಎಲ್ಲ ಜಾತಿ ಜನಾಂಗದವರಿಗೆ ಭೂಮಿ ಹಂಚಬೇಕು ಮತ್ತು ಸಾಮುದಾಯಿಕ ಕೃಷಿಯನ್ನು ಸರ್ಕಾರದ ಉಸ್ತುವಾರಿಯಲ್ಲಿ ನಡೆಯಬೇಕು ಎಂದು ಆಶಿಸಿದ್ದರು. ನಿಮ್ನ ವರ್ಗಗಳ ಕುಟುಂಬಗಳಿಗೆ ಭೂ ಒಡೆತನದ ಹಕ್ಕು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಿದರು. ಜೀವ ವಿರೋಧಿ ಊಳಿಗಮಾನ್ಯ ವ್ಯವಸ್ಥೆಯ ಖೋತಿ ಪದ್ದತಿ ನಿರ್ಮೂಲನ ಹೋರಾಟವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ದು, ಲಕ್ಷಾಂತರ ರೈತರನ್ನು ವಿಮೋಚನೆಗೊಳಿಸಿದ ಕೀರ್ತಿ ಈ ನೆಲದ ಅನ್ನದಾತರ ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್ ಸಲ್ಲಬೇಕು.

ಭಾರತದಲ್ಲಿ ಸಣ್ಣ ಹಿಡುವಳಿದಾರರ ಸಮಸ್ಯೆಗಳು ಮತ್ತು ಪರಿಹಾರಗಳು

ಡಾ. ಬಿ. ಆರ್. ಅಂಬೇಡ್ಕರ್ ವಿದೇಶದಲ್ಲಿದ್ದಾಗಲೇ 1919ರಲ್ಲಿ ‘ಜರ್ನಲ್ ಆಫ್ ದಿ ಇಂಡಿಯನ್ ಎಕಾನಾಮಿಕ್ಸ್ ಸೊಸೈಟಿ’ಗೆ ಮಂಡಿಸಿದ “ಭಾರತದಲ್ಲಿ ಸಣ್ಣ ಹಿಡುವಳಿಗಳು ಮತ್ತು ಅದರ ಪರಿಹಾರಗಳು” ಎಂಬ ಲೇಖನವು ದೇಶದಲ್ಲಿನ ಸಣ್ಣ ಮತ್ತು ಚದುರಿದ ಹಿಡುವಳಿಗಳಿಂದ ದೇಶದ ಕೃಷಿ ಮತ್ತು ಕೃಷಿಕರ ಮೇಲಾಗುವ ಸಮಸ್ಯೆಗಳು ಮತ್ತು ಪರಿಹಾರಗಳ ಬಗೆಗಿನ ಅಧ್ಯಯನವಾಗಿತ್ತು. ಭಾರತದ ಸಾಮಾಜಿಕ ಮತ್ತು ಆರ್ಥಿಕ ನೀತಿಯಲ್ಲಿರುವ ಅವ್ಯವಸ್ಥೆಯ ಪರಿಣಾಮದಿಂದ ಚಿಕ್ಕ ಹಿಡುವಳಿಗಳು ಮಾರಕ. ಭಾರತವು ಹಿಂದುತ್ವದ ಜಾತಿ ಪದ್ದತಿಯಲ್ಲಿ ಬಂಧಿತಗೊಂಡು ‘ಮನುಸ್ಮೃತಿ’ ಪ್ರಕಾರ ಕೇವಲ ಒಂದು ವರ್ಗಕ್ಕೆ ಮಾತ್ರವೇ ಕೃಷಿ ಭೂಮಿಯನ್ನು ಹೊಂದುವ ಹಕ್ಕನ್ನು ಪಡೆದುಕೊಂಡಿತ್ತು. ಇಂತಹ ಕಟ್ಟುಪಾಡುಗಳಿಂದ ಭಾರತದ ಕೃಷಿ ನರಳುತ್ತಿದ್ದು, ಇದು ಸರಿದೂಗಲು ಸರ್ವರೂ ಸಮಪಾಲು ಗಳಿಸಬೇಕು, ಬಂಡವಾಳ ಮತ್ತು ಶ್ರಮವೂ ಸಮರ್ಪಕ ಬಳಕೆಯಿಂದ ಹಿಡುವಳಿ ಉತ್ಪಾದಕವಾಗುತ್ತದೆ. ಕೃಷಿ ಭೂಮಿ ಮೇಲೆ ಜಾಸ್ತಿ ಒತ್ತಡ ಅವಲಂಬನೆಯಾದಾಗ ಲಾಭಾಂಶ ಕಡಿಮೆಯಾಗುತ್ತದೆ. ಅವಶ್ಯಕತೆಗಿಂತ ಹೆಚ್ಚಿನ ಮತ್ತು ಕೆಲಸವಿಲ್ಲದ ಜನಸಂಖ್ಯೆಯ ಬಹುಭಾಗ ಜನರು ಒಕ್ಕಲುತನದ ಮೇಲೆ ಹೆಚ್ಚಿನ ಒತ್ತಡ ಹೇರಿದ್ದಾರೆ. ನಗರ ಪಟ್ಟಣಗಳಲ್ಲಿ ಕೈಗಾರಿಕೆಗಳು ಅಭಿವೃದ್ಧಿಗೊಂಡರೆ, ಗ್ರಾಮೀಣ ಭಾಗದ ಜನರು ಹೆಚ್ಚು ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ, ಕೃಷಿ ಮೇಲೆ ಇವರ ಅವಲಂಬನೆ ತಗ್ಗಿಸಬಹುದು. ಅಲ್ಲದೆ ಪಟ್ಟಣಗಳಲ್ಲಿ ಕಾರ್ಮಿಕರು ನೆಲೆಸುವುದರಿಂದ ಜಾತಿ ಸಂಕೋಲೆಯಿಂದ ಹೊರ ಬರಲು ಸಾಧ್ಯ ಎಂದು ಅಂಬೇಡ್ಕರ್ ಮನಗಂಡಿದ್ದರು.

ಲೇಬರ್‌ ಪಾರ್ಟಿ ಸದಸ್ಯರ ಜತೆಗೆ ಬಾಬಾ ಸಾಹೇಬ ಅಂಬೇಡ್ಕರ್

ಕೈಗಾರೀಕರಣದ ಪರಿಣಾಮಗಳಿಂದ ಕೃಷಿ ಒತ್ತಡವನ್ನು ಕಡಿಮೆ ಮಾಡಿ, ಬಂಡವಾಳ ಮತ್ತು ಮೂಲ ಸರಕುಗಳ ಹೆಚ್ಚಳದಿಂದ ಹಿಡುವಳಿಗಳ ವಿಸ್ತರಣೆಗೆ ಆರ್ಥಿಕ ಅವಶ್ಯಕತೆಯನ್ನು ಹೆಚ್ಚು ಸೃಷ್ಟಿಸುತ್ತದೆ. ಕೈಗಾರಿಕರಣವು ಭೂಮಿಯ ಮೇಲಿರುವ ಆಸೆಯನ್ನು ನಿವಾರಿಸುವುದರ ಮೂಲಕ ಉಪ ವಿಭಜನೆ ಮತ್ತು ಛಿದ್ರೀಕರಣಕ್ಕೆ ಅವಕಾಶಗಳನ್ನು ಕಡಿಮೆ ಮಾಡುವುದು. ಸಣ್ಣ ಮತ್ತು ಚದುರಿದ ಹಿಡುವಳಿಗಳ ರೋಗದಿಂದ ನಮ್ಮ ಕೃಷಿ ಬಳಲುತ್ತಿದ್ದರೆ, ಅದನ್ನು ನಿವಾರಿಸಲು ಕೈಗಾರಿಕರಣವೇ ಸೂಕ್ತ ಪರಿಹಾರ. ಕೆಲವೇ ಕೆಲವು ಜನರ ಕೈ ವಶವಾಗಿರುವ ಭೂಮಿಯನ್ನು ಸರಕಾರ ವಶಪಡಿಸಿಕೊಂಡು, ದೇಶದ ಎಲ್ಲಾ ರೈತರಿಗೆ ಸಮಾನಾಗಿ ಹಂಚಬೇಕು. ಭಾರತ ಜಾತಿ ಶ್ರೇಣಿಕೃತ ಸಮಾಜವನ್ನು ಅಲುಗಾಡಿಸಲು ಭೂಮಿಯನ್ನು ರಾಷ್ಟ್ರೀಕರಣಗೊಳಿಸಬೇಕು. ಸರ್ಕಾರದ ಅಧೀನಕ್ಕೆ ಭೂಮಿಯು ಒಳಪಟ್ಟರೆ ಎಲ್ಲ ವರ್ಗದ ಜನರಿಗೆ ಭೂಮಿಯನ್ನು ಹಂಚಿಕೆ ಮೂಲಕ ಸಹಕಾರಿ ಬೇಸಾಯ ಪದ್ದತಿಯನ್ನು ಅನುಷ್ಠಾನಗೊಳಿಸಬೇಕು. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ, ಜನರ ಅರ್ಥಿಕ ಸ್ಥಿತಿಗತಿ ಬದಲಾವಣೆಗೊಂಡು ಸಾಮಾಜಿಕ ಪರಿವರ್ತನೆ ಸಾಧ್ಯ ಎಂಬುದು ಅಂಬೇಡ್ಕರ್‌ ಅವರು ನೀಡಿದ ಉತ್ತಮ ಪರಿಹಾರವಾಗಿತ್ತು. ಅಂಬೇಡ್ಕರ್‌ರ ಭೂ ರಾಷ್ಟ್ರೀಕರಣದ ಪರಿಕಲ್ಪನೆಯಲ್ಲಿ ಭೂ ಒಡೆತನದ ಹಕ್ಕುಗಳನ್ನು ತಳ ಸಮುದಾಯದವರಿಗೂ ನೀಡುವುದಾಗಿತ್ತು. ಸಮಾಜದಲ್ಲಿ ಬೇರೂರಿದ್ದ ಊಳಿಗಮಾನ್ಯ ಪದ್ದತಿಯನ್ನು ಹೋಗಲಾಡಿಸುವುದು ಮತ್ತು ಹಳ್ಳಿಗಳಲ್ಲಿ ಆರ್ಥಿಕ ಸಮಾನತೆಯನ್ನು ತಂದು ಎಲ್ಲ ವರ್ಗಗಳ ನಡುವೆ ಸಾಮರಸ್ಯ ಮೂಡಿಸುವ ಆಶಯ ಅಂಬೇಡ್ಕರ್‌ರವರ ಚಿಂತನೆಯಲ್ಲಿತ್ತು.

~ ಕೆ. ಟಿ. ವಿಜಯಕುಮಾರ್
ಸಹಾಯಕ ಪ್ರಾಧ್ಯಾಪಕರು
ಕೃಷಿ ವಿಶ್ವವಿದ್ಯಾನಿಲಯ,
ಬೆಂಗಳೂರು
9986051852

Leave a Reply

Your email address will not be published. Required fields are marked *