ಫಾರೆಸ್ಟ್ ಗಾರ್ಡ್ ಮತ್ತು ಪೊಲೀಸರು ಮಾಸ್ತಿ ಎಂಬ ಆದಿವಾಸಿ ಜೇನುಕುರುಬ ಹುಡುಗನನ್ನು ಬೈಕ್ನಲ್ಲಿ ಅಟ್ಟಾಡಿಸಿ ಕೊಂದ ಭಯಾನಕ ಘಟನೆಯನ್ನು ಖ್ಯಾತ ವಕೀಲರೂ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷರೂ ಆದ ಡಾ. ಸಿ.ಎಸ್. ದ್ವಾರಕಾನಾಥ್ ಹೀಗೆ ಬಿಚ್ಚಿಡುತ್ತಾರೆ.
ಹೆಚ್.ಡಿ.ಕೋಟೆಯ ಜೇನುಕುರುಬರ ನಾಯಕ ವಡ್ಡರಗುಡಿ ಚಿಕ್ಕಣ್ಣ ಒಂದಷ್ಟು ಆದಿವಾಸಿ ಜೇನುಕುರುಬರೊಂದಿಗೆ ನಮ್ಮ ಆಫೀಸಿಗೆ ಬಂದರು. ಆ ಗುಂಪಿನಲ್ಲಿ ಒಂದಷ್ಟು ಮಂದಿ ಹೆಂಗಸರೂ ಇದ್ದರು. ಒಂದು ಬಿಸ್ಲರಿ ಬಾಟಲಿಯಲ್ಲಿ ನನಗೆ ‘ಜೇನುತುಪ್ಪ ಲಾಯರ್ ಫೀಸ್’ ತಂದಿದ್ದರು..!
“ನೋಡಿ ಸರ್ ಮೊನ್ನೆ ನಮ್ಮ ಮಾಸ್ತಿಯನ್ನು ಫಾರೆಸ್ಟ್ ಗಾರ್ಡ್ನವರು ಮತ್ತು ಪೋಲೀಸರು ಸೇರಿ ಮೋಟಾರು ಬೈಕ್ ನಲ್ಲಿ ಅಟ್ಟಾಡಿಸಿ ಕೊಂದುಬಿಟ್ಟರು..” ಎಂದ ಚಿಕ್ಕಣ್ಣ. ಈಚೆಗೆ ತಾನೇ ಫಾರೆಸ್ಟ್ ನವರು ಇದೇ ಕಾಡಿನ ಆದಿವಾಸಿ ಜೇನುಕುರುಬ ಕರಿಯಪ್ಪನನ್ನು ಕೊಂದ ಕೇಸ್ ಅನ್ನು ನಿರ್ವಹಿಸುತಿದ್ದ ನನಗೆ ತೀರಾ ಬೇಸರ ಮತ್ತು ನೋವಾಯಿತು. ಅವರನ್ನು ಕೂರಿಸಿ, ಟೀ ತರಿಸಿ, ನಿಧಾನಕ್ಕೆ ಬೆಂಗಳೂರಿನ ನನ್ನ ಆಫೀಸಿನ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡಿ ವಿವರಗಳನ್ನು ಕೇಳತೊಡಗಿದೆ…
ಈ ಕೊಲೆ ಆಗಿರುವುದು ಏಪ್ರಿಲ್ ತಿಂಗಳಿನಲ್ಲಿ, ನಾನು ಮತ್ತು ನಮ್ಮ “ಸಾಮಾಜಿಕ ನ್ಯಾಯ” ತಂಡ ಚುನಾವಣೆಗೆಂದು ಹೆಚ್.ಡಿ.ಕೋಟೆಯ ಈ ಜೇನುಕುರುಬರ ಹಾಡಿಗೆ ಹೋಗಿದ್ದಾಗಲೇ ಈ ವಿಷಯ ಅಲ್ಪಸ್ವಲ್ಪ ನನ್ನ ಕಿವಿಗೆ ಬಿದ್ದಿತ್ತು. ಚುನಾವಣಾ ಗಡಿಬಿಡಿಯಲ್ಲಿ ಸರಿಯಾಗಿ ಕೇಳಿಸಿಕೊಂಡಿರಲಿಲ್ಲ. ಏಪ್ರಿಲ್ 23 ರಂದು ಜೇನುಕುರುಬರ ರವಿ, ಶಿವರಾಜು, ಮಂಜು, ಬಸವರಾಜು ಮತ್ತು ಮಾಸ್ತಿ ಎಂಬ ಹುಡುಗರು ಸೇರಿ ಹಳೇ ಮಾಸ್ತಮ್ಮನ ದೇವಸ್ಥಾನ, ಹಳೇ ಮೈಸೂರು – ಮಾನಂದವಾಡಿ ರಸ್ತೆಯ ಬಳಿ ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯುತಿದ್ದರು. ಇವರಲ್ಲಿ ಮಾಸ್ತಿಗೆ ಈಜು ಬರುತ್ತಿರಲಿಲ್ಲ ಆದ್ದರಿಂದ ಅವನು ದಡದ ಮೇಲೆ ಕುಂತಿದ್ದ.
ಇದ್ದಕ್ಕಿದ್ದಂತೆ ಮಹೇಶ್ ಗೌಡ ಎಂಬ ಫಾರೆಸ್ ಗಾರ್ಡ್ ಮತ್ತು ಪೋಲಿಸ್ ಮಾಹಿತಿದಾರ ತನ್ನ ಬೈಕ್ ನಲ್ಲಿ ಒಬ್ಬ ಪೋಲಿಸನನ್ನು ಕೂರಿಸಿಕೊಂಡು ಮಾಸ್ತಿ ಕಡೆಗೆ ನುಗ್ಗಿದ. ಈ ಹಿಂದೆ ಮಹೇಶ್ ಗೌಡನಿಂದ ಸಾಕಷ್ಟು ಹಿಂಸೆ ಅನುಭವಿಸಿದ್ದ ಮಾಸ್ತಿ ಎದ್ದು ಬಿದ್ದು ಓಡ ತೊಡಗಿದ. ಮಹೇಶ್ ಗೌಡ ಬೈಕ್ ನಲ್ಲಿ ಮಾಸ್ತಿಯನ್ನು ಚೇಸ್ ಮಾಡತೊಡಗಿದ. ಮಾಸ್ತಿ ಓಡುತ್ತಾ ಓಡುತ್ತಾ ನೆಲಕ್ಕೆ ಬಿದ್ದವನು ಏಳಲೇ ಇಲ್ಲ! ಮಾಸ್ತಿ ಹೆಣವನ್ನು ಅಲ್ಲೇ ಬಿಟ್ಟು ಮಹೇಶ್ ಗೌಡ ಪೋಲಿಸನೊಂದಿಗೆ ಹೊರಟು ಹೋದ.
ಹಿನ್ನೀರಲ್ಲಿ ಮೀನು ಹಿಡಿಯಲು ಬಂದಿದ್ದ ಹುಡುಗರು ಹಾಡಿಗೆ ಹೋಗಿ ವಿಷಯ ತಿಳಿಸಿದರು. ಇಡೀ ಹಾಡಿಯವರೆಲ್ಲಾ ಗೋಳಾಡುತ್ತಾ ಕಾಡಿಗೆ ಬಂದು ಮಾಸ್ತಿಯ ಹೆಣದ ಸುತ್ತಾ ಸೇರಿ ತಲೆಚಚ್ಚಿಕೊಂಡು ಅಳತೊಡಗಿದರು. ಪೋಲಿಸ್ ಮಹಜರ್ ಮಾಡಬೇಕಿದ್ದರಿಂದ ಹೆಣವನ್ನು ಮುಟ್ಟಲಿಲ್ಲ. ಇಡೀ ರಾತ್ರಿ ಹಾಡಿಯವರೆಲ್ಲಾ ಕಾಡಲ್ಲೇ ಕಾದು ಹೆಣದ ಬಳಿ ಕುಳಿತರೂ ಪೋಲಿಸರು ಬರಲಿಲ್ಲ! ಮಹೇಶ್ ಗೌಡ ಆದಿವಾಸಿಗಳಿಗೆ ಕಂಟಕನಾಗಿದ್ದ, ಇವನ ಅಮಾನುಷ ಹಿಂಸೆ ಆದಿವಾಸಿಗಳಿಗೆ ಸಹಿಸಲಸಾಧ್ಯವಾಗಿತ್ತು! ಮಾರನೇದಿನ ಪೋಲೀಸರು ಮಾಸ್ತಿ ಶವದ ಬಳಿ ಬರುವಷ್ಟರಲ್ಲಿ ಸೂರ್ಯ ನೆತ್ತಿಗೇರಿದ್ದ. ಆಕ್ರೋಶಗೊಂಡ ಆದಿವಾಸಿ ಮಹಿಳೆಯರು ಫಾರೆಸ್ಟ್ ಗಾರ್ಡ್ ಮಹೇಶ್ ಗೌಡ ಮತ್ತು ಪೋಲೀಸರನ್ನು ಶಪಿಸಿದರು. ನಂತರ ಹೆಣ ತೆಗೆದು ಪೋಸ್ಟ್ ಮಾರ್ಟಂ ಆದಮೇಲೆ 23 ವರ್ಷ ವಯಸ್ಸಿನ ಮಾಸ್ತಿಯನ್ನು ದಫನ್ ಮಾಡಿದರು. ಇದಾದ ನಂತರ ಮಾಸ್ತಿಯ ಅಕ್ಕ ಜಾನಕಿ ಅಂತರಸಂತೆ ಪೋಲಿಸ್ ಠಾಣೆಯಲ್ಲಿ ಫಾರೆಸ್ಟ್ ಗಾರ್ಡ್ ಮತ್ತು ಪೋಲಿಸ್ ಮೇಲೆ ದೂರು ನೀಡಿದಳು. ದೂರನ್ನು ಹರಿದು ಬಿಸಾಕಿದ ಪೋಲೀಸರು ಮಾಸ್ತಿ ಸಾವನ್ನು “ಅಸಹಜ ಸಾವು” ಎಂದು ದಾಖಲಿಸಿಕೊಂಡು ಕೇಸನ್ನು ಮುಗಿಸಿದರು!
ದುರಂತವೆಂದರೆ ಮಾಸ್ತಿ ಸಾವಿನ ಸಂಧರ್ಭದಲ್ಲಿ ಗಾರ್ಡ್ ಮತ್ತು ಪೋಲಿಸ್ ನವನನ್ನು ಹೊಟ್ಟೆ ಉರಿದು ನಿಂದಿಸಿದ ಆದಿವಾಸಿ ಹೆಣ್ಣು ಮಕ್ಕಳ ಮೇಲೆ “ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿದ್ದಾರೆಂದು” ಸುಳ್ಳು ಸುಳ್ಳೇ ಆರೋಪಿಸಿ ಆ ಹೆಣ್ಣುಮಕ್ಕಳ ಮೇಲೆ FIR ಹಾಕಿ, ಬಂಧಿಸಲು ಹುಡುಕಾಡುತಿದ್ದಾರೆ! ಈಗ ಜೇನುಕುರುಬರ ಹೆಣ್ಣು ಮಕ್ಕಳು ಜಾಮೀನು ಪಡೆದು ಕೋರ್ಟ್ ಸುತ್ತುತಿದ್ದಾರೆ!
ಕಳೆದ ಆರು ತಿಂಗಳ ಹಿಂದೆ ಕರಿಯಪ್ಪ ಎಂಬ ಆದಿವಾಸಿಯನ್ನು ಫಾರೆಸ್ಟ್ ಅಧಿಕಾರಿಗಳು ಕೊಂದು, ಹೆಣವನ್ನು ಕಾಡಲ್ಲಿ ಎಸೆದಿದ್ದರು. ಈ ವಿಷಯದಲ್ಲೂ ಪೋಲೀಸರು ತಪ್ಪಿತಸ್ತ ಫಾರೆಸ್ಟ್ ಅಧಿಕಾರಿಗಳ ಮೇಲೆ ದೂರು ದಾಖಲಿಸಿಕೊಂಡಿರಲಿಲ್ಲ. ಇದು ನನ್ನ ಗಮನಕ್ಕೆ ಬಂದ ನಂತರ 17 ಮಂದಿ ಫಾರೆಸ್ಟ್ ನವರ ಮೇಲೆ FIR ದಾಖಲಿಸಿದ್ದೆ.
ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಹತ್ತೊಂಬತ್ತು ಮಂದಿ ಮುಗ್ದ ಆದಿವಾಸಿಗಳನ್ನು ಫಾರೆಸ್ಟ್ ನವರು ಕೊಂದಿದ್ದಾರೆ! ಅತ್ಯಂತ ಅಸಂಘಟಿತರು, ಅಸಹಾಯಕರು, ದುರ್ಬಲರೂ ಆದ ಆದಿವಾಸಿಗಳು ತಮ್ಮ ಮೇಲೆ ನಡೆವ ರೇಪ್, ಮರ್ಡರ್, ಪೋಲೀಸ್ ಮತ್ತು ಫಾರೆಸ್ಟ್ ನವರ ಅಟ್ಟಹಾಸಗಳನ್ನು ಸಹಿಸಿಕೊಂಡೇ ಹೋಗುತಿದ್ದರು. ಈಗ ಆ ಆದಿವಾಸಿಗಳ ಬೆನ್ನಿಗೆ ನಮ್ಮ “ಅಲೆಮಾರಿ ಬುಡಕಟ್ಟು ಮಹಾಸಭಾ” ಇದೆ. ಈ ಕೇಸನ್ನು ಕೂಡ ಮಹಾಸಭ ನಿರ್ವಹಿಸುತ್ತದೆ.