ನಟ ದೇವರಾಜ್ ಬಗ್ಗೆ ಬರೆಯುವ ಹೊತ್ತಿದು. ನಿನ್ನೆಯಷ್ಟೇ ಅವರ 63ನೇ ಜನ್ಮದಿನ. ನೀವೆಲ್ಲ ಬಲ್ಲಂತೆ ದೇವರಾಜ್ ತಮ್ಮದೇ ವಿಶಿಷ್ಟ ರೀತಿಯ ಧ್ವನಿ, ಅಭಿನಯದಿಂದ ಕನ್ನಡಿಗರನ್ನು ಸೆಳೆದವರು. ನಮ್ಮ ಅತ್ಯುತ್ತಮ ನಟರಲ್ಲಿ ಒಬ್ಬರಾದ ಇವರು 1960ರ ಸೆಪ್ಟೆಂಬರ್ 20ರಂದು ಬೆಂಗಳೂರಿನ ಲಿಂಗರಾಜಪುರಂನಲ್ಲಿ ಜನಿಸಿದರು.

ತಂದೆ ರಾಮಚಂದ್ರಪ್ಪ ಐಟಿಸಿ ಕಾರ್ಖಾನೆಯ ಉದ್ಯೋಗಿ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ದೇವರಾಜ್ ಅವರನ್ನು ಸಾಕಿ ಬೆಳೆಸಿದ್ದು ತಾಯಿ ಕೃಷ್ಣಮ್ಮ. ಆರ್ಥಿಕ ಬವಣೆಯನ್ನು ನೀಗಿಸುವ ಉದ್ದೇಶದಿಂದ ತಮ್ಮ ಒಂಭತ್ತನೇ ವಯಸ್ಸಿಗೆ ಹೆಚ್ಎಂಟಿ ಕಾರ್ಖಾನೆಯಲ್ಲಿ ಉದ್ಯೋಗ ಆರಂಭಿಸಿದ ದೇವರಾಜ್ ಅವನರಿಗೆ ಬಾಲ್ಯದಿಂದಲೇ ಅಭಿನಯದತ್ತ ಆಸಕ್ತಿ ಇತ್ತು. ಸಹೋದ್ಯೋಗಿ ಗೋವಿಂದರಾಜು ಸಲಹೆಯಂತೆ ದೇವರಾಜ್ ಆರಂಭದ ಹಂತದಲ್ಲಿ ‘ಲಲಿತಕಲಾ ಸಂಘ’ವನ್ನು ಸೇರಿಕೊಂಡು ಕ್ರಮೇಣ ರವೀಂದ್ರ ಕಲಾಕ್ಷೇತ್ರದತ್ತ ಧಾವಿಸಿ ಬಿ.ಜಯಶ್ರೀ ಅವರ ಸ್ಪಂದನ ಮತ್ತು ಶಂಕರ್ ನಾಗ್ ಅವರ ಸಂಕೇತ್ ತಂಡಗಳಲ್ಲಿ ಪಳಗುತ್ತಾ ಸಾಗಿ ತಮ್ಮೊಳಗಿನ ಕಲಾವಿದನನ್ನು ಹುರಿಗೊಳಿಸುತ್ತಾ ಸಾಗಿದರು. ಜೊತೆಗೆ ದತ್ತಣ್ಣ, ಮುಖ್ಯಮಂತ್ರಿ ಚಂದ್ರು, ಸುಂದರ್ ರಾಜ್, ರಾಜಾರಾಮ್, ಲೋಕೇಶ್, ನಾಗಾಭರಣ ಮುಂತಾದವರ ಒಡನಾಟದಲ್ಲಿ ನಟನೆಯ ಸೂಕ್ಷ್ಮತೆಗಳನ್ನು ಅರಿಯುತ್ತಾ ಪಕ್ವಗೊಳ್ಳುತ್ತಾ ಹೋದರು.

‘ತ್ರಿಶೂಲ’ ಅವರು ಅಭಿನಯಿಸಿದ ಚೊಚ್ಚಲ ಚಿತ್ರವಾದರೂ ಅನಂತರ ಅಭಿನಯಿಸಿದ ‘ಕೂಗು’, ‘ದಂಗೆ’ ಚಿತ್ರಗಳೂ ಬಿಡುಗಡೆಯಾಗದ ಕಾರಣ ’27 ಮಾವಳ್ಳಿ ಸರ್ಕಲ್’ ದೇವರಾಜ್ ಪೋಷಕಪಾತ್ರದಲ್ಲಿ ಅಭಿನಯಿಸಿದ ಮೊದಲ ಸಿನಿಮಾ ಎನಿಸಿತು. ಆ ಸಿನಿಮಾ ತೆರೆ ಕಂಡದ್ದು 1986ರಲ್ಲಿ. ಉಮಾಶ್ರೀ, ಕಲ್ಪನಾ ರೆಡ್ಡಿ ಮುಂತಾದವರು ನಟಿಸಿದ್ದ ಆ ಚಿತ್ರದ ನಿರ್ದೇಶಕ ಟಿ.ಎನ್. ನರಸಿಂಹನ್. ಹೀಗೆ ಶುರುವಾದ ಅಭಿಯಾನ 1987ರಲ್ಲಿ ಬಿಡುಗಡೆಯಾದ ಸುರೇಶ ಹೆಬ್ಳಿಕರ್ ನಿರ್ದೇಶನದ ‘ಆಗಂತುಕ’ ಚಿತ್ರ ದೇವರಾಜ್ ಅವರ ವೃತ್ತಿ ಬದುಕಿಗೆ ಹೊಸ ತಿರುವು ನೀಡಿತು. ಆ ಚಿತ್ರದ ಪೋಷಕ ಪಾತ್ರದ ಅಭಿನಯಕ್ಕಾಗಿ ದೇವರಾಜ್ ಆ ವರ್ಷದ ಅತ್ಯುತ್ತಮ ಪೋಷಕನಟ ರಾಜ್ಯಪ್ರಶಸ್ತಿಯನ್ನು ಗಳಿಸಿದರು.

ಅಲ್ಲಿಂದಾಚೆಗೆ ದ್ವಾರಕೀಶ್, ಕೆ.ವಿರಾಜು, ಪಿ.ನಂಜುಂಡಪ್ಪ, ರೇಣುಕಾಶರ್ಮ, ಎ.ಟಿ.ರಘು, ಹೆಚ್.ಆರ್.ಭಾರ್ಗವ, ಪಿ.ವಾಸು, ಸುನಿಲ್ ಕುಮಾರ್ ದೇಸಾಯಿ, ದಿನೇಶ್ ಬಾಬು… ಮುಂತಾದ ನಿರ್ದೇಶಕರ ಚಿತ್ರಗಳ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತ, ತಮ್ಮ ವಿಶಿಷ್ಟ ಮ್ಯಾನರಿಸಂ, ಬಾಡಿ ಲಾಂಗ್ವೇಜ್, ಧ್ವನಿ, ಭಯ ಹುಟ್ಟಿಸುವ ಕಣ್ಣುಗಳ ಮೂಲಕ ಖಳನಟರ ಕೊರತೆ ನೀಗಿಸುತ್ತ ಸಾಗಿದ ದೇವರಾಜ್ 1990ರಲ್ಲಿ ಬಿಡುಗಡೆಯಾದ ‘ಹತ್ಯಾಕಾಂಡ’ ಚಿತ್ರದ ಮೂಲಕ ನಾಯಕನಟನಾಗಿ ಕಾಣಿಸಿಕೊಂಡರು. ಮರುವರ್ಷವೇ ‘ವೀರಪ್ಪನ್’ ಚಿತ್ರದ ಖಡಕ್ ಅಭಿನಯಕ್ಕಾಗಿ ‘ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ’ಯನ್ನು ಗಳಿಸಿದರು. ಅಭಿಮಾನಿಗಳು ದೇವರಾಜ್ ಗುರುತಿಸುವುದು ʼಹುಲಿಯಾʼ ಚಿತ್ರದ ರೆಬಲ್‌ ಪಾತ್ರದ ಮೂಲಕ. ಹೀಗೆ ಕನ್ನಡ, ತಮಿಳು, ತೆಲುಗು ಭಾಷೆಗಳ ಸರಿಸುಮಾರು ಇನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ಬಗೆಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡ ದೇವರಾಜ್ ತಮ್ಮದೇ ಛಾಪು ಮೂಡಿಸಿ ಡೈನಾಮಿಕ್ ಸ್ಟಾರ್ ಎಂದು ಪ್ರಸಿದ್ಧಿ ಪಡೆದದ್ದನ್ನು ಇಲ್ಲಿ ದಾಖಲಿಸಬಹುದು. ರಾಜ್ಯೋತ್ಸವ ಪ್ರಶಸ್ತಿ ಕೂಡ ಇವರಿಗೆ ಬಂದಿರುವುದು ಪ್ರಶಂಶನೀಯ.

ಇನ್ನು ದೇವರಾಜ್ ಅವರ ವೈಯಕ್ತಿಕ ಜೀವದ ಬಗ್ಗೆ ಹೇಳುವುದಾದರೆ ಅಭಿನೇತ್ರಿ ಚಂದ್ರಲೇಖಾ ಇವರ ಮಡದಿ. ಪ್ರಜ್ವಲ್ ಹಾಗು ಪ್ರಣಮ್ ಇವರ ಪುತ್ರರು. ಪ್ರಜ್ವಲ್ ದೇವರಾಜ್ ಈಗಾಗಲೇ ಪ್ರಸಿದ್ಧ ನಟ ಎನ್ನುವುದು ತಮಗೆಲ್ಲ ತಿಳಿದಿದೆ. ಇಷ್ಟಕ್ಕೂ ವ್ಯಕ್ತಿತ್ವವೇ ಬೇರೆ, ಇಮೇಜೇ ಬೇರೆ ಎಂದು ಹೇಳುವ ದೇವರಾಜ್ ಪಾತ್ರಗಳಲ್ಲಿ ಮಾತ್ರ ಖಳನಾಗಿ ಕಾಣಿಸಿಕೊಂಡರೂ ನಿಜ ಜೀವನದಲ್ಲಿ ಸರಳ ಹಾಗೂ ಕೋಮಲ ಸ್ವಭಾವದ ವ್ಯಕ್ತಿ ಎನ್ನುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಅವರಿಗೆ ಪ್ರಶಸ್ತಿ ತಂದು ಕೊಟ್ಟ ‘ವೀರಪ್ಪನ್’ ಚಿತ್ರದಲ್ಲಿ ನಟಿಸುವಂತೆ ಅವಕಾಶ ಬಂದಾಗ ಮೊದಮೊದಲಿಗೆ ಮನೆಯವರು ಆ ಪಾತ್ರವನ್ನು ಮಾಡುವುದು ಬೇಡ ಎಂಬುದಾಗಿ, ಸಮಸ್ಯೆಗಳು ಎದುರಾಗಬಹುದು ಎಂಬುದಾಗಿ ಹೇಳಿದರೂ ಒಲ್ಲದ ಮನಸ್ಸಿನಿಂದಲೇ ಆ ಪಾತ್ರವನ್ನು ಒಪ್ಪಿಕೊಂಡಿದ್ದಾಗಿ ದೇವರಾಜ್ ಹೇಳುತ್ತಾರೆ. ಹಾಗೆಯೇ ನಿಜ ಜೀವನದಲ್ಲಿ ಇರುವ ಜೀವಂತ ವ್ಯಕ್ತಿಯ ಪಾತ್ರವನ್ನು ನಿಭಾಯಿಸುವುದು ನಿಜಕ್ಕೂ ಸವಾಲಿನ ಕೆಲಸ ಅಂತಲೂ ಆ ಪಾತ್ರವನ್ನು ನಿರ್ವಹಿಸಿದ್ದರ ಕುರಿತು ದೇವರಾಜ್ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಅಷ್ಟು ಮಾತ್ರವಲ್ಲದೆ ಆ ಚಿತ್ರೀಕರಣದ ಸಂದರ್ಭದಲ್ಲಿ ತಮ್ಮ ಹೆಂಡತಿ ಮತ್ತು ಆರು ವರ್ಷದ ಮಗ ಪ್ರಜ್ವಲ್ ಬರೋಬ್ಬರಿ ಮೂವತ್ತು ದಿನಗಳ ಕಾಲ ದೇವರಾಜ್ ಜೊತೆ ಕಾಡಿನಲ್ಲಿ ಇದ್ದದ್ದನ್ನು ಅವರೇ ಸ್ಮರಿಸಿಕೊಳ್ಳುತ್ತಾರೆ.

ಅದೇ ರೀತಿ “ನಮ್ಮ ನಮ್ಮ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಾ ಹೋಗಬೇಕು. ಕನಸುಗಳ ಗೋಪುರ ಕಟ್ಟಬಾರದು, ಸದಾ ಕಲಿಯುತ್ತ ಮುನ್ನಡೆಯಬೇಕು, ನಾವು ನಮ್ಮನ್ನು ಬೇರೊಬ್ಬ ನಟನೊಂದಿಗೆ, ವ್ಯಕ್ತಿಯೊಂದಿಗೆ ಹೋಲಿಸಿಕೊಳ್ಳಬಾರದು… ನಮ್ಮ ಪಾಡಿಗೆ ನಮ್ಮ ಕೆಲಸದಲ್ಲಿ ನಿರತರಾಗಬೇಕು, ನಮಗೆ ಸಿಗಬೇಕಾದ್ದು ಖಂಡಿತ ಸಿಗುತ್ತದೆ” ಎನ್ನುವ ದೇವರಾಜ್ ಸೈಲೆಂಟ್ ವಿಲ್ಲನ್ ನಿಂದ ಸೈಕೋ ವಿಲ್ಲನ್ ತನಕ ಬೇರೆ ಬೇರೆ ಪತ್ರಗಳನ್ನು ಮಾಡುತ್ತ ಸಾಗಿ ಕೊಲೆಗಾರನಾಗಿ, ಅತ್ಯಾಚಾರಿಯಾಗಿ, ಅಪಹರಣಕಾರನಾಗಿ ಹಾಗೆಯೇ ದಕ್ಷ ಪೊಲೀಸ್ ಅಧಿಕಾರಿಯಾಗಿ ಭಿನ್ನ ಭಿನ್ನ ಪಾತ್ರಗಳಲ್ಲಿ ತೊಡಗಿಸಿಕೊಂಡು ಇವರು ಬೆಳೆದ ಪರಿ ನಿಜಕ್ಕೂ ಪ್ರಶಂಸನೀಯ.

Leave a Reply

Your email address will not be published. Required fields are marked *