ಎಲ್ಲಿಂದ ಎಲ್ಲಿಗೆ ಹೋದರೂ ಒಂದಲ್ಲ ಒಂದು ಕಡೆ ಹೈವೇ ಕಾಮಗಾರಿ ನಡೆಯುತ್ತಿದೆ. ಕಣ್ಣರಳಿಸಿ ದೊಡ್ಡ ದನಿಯಲ್ಲಿ ನಮ್ಮೂರಿಗೆ ಹೈವೇ ರೋಡ್ ಆಗ್ತಿದೆ, ಬೈ ಪಾಸ್ ಆಗ್ತಿದೆ, ಮೇಲು ಸೇತುವೆ ಆಗ್ತಿದೆ,ಕೆಳ ಸೇತುವೆ, ಸುರಂಗ ಆಗ್ತಿದೆ ಅಂತೆಲ್ಲ ಲೋಕಾರೂಡಿ ಮಾತುಗಳ ನಡು ನಡುವೆ ವ್ಯಕ್ತವಾಗುತ್ತಿದೆ ಮಾಮೂಲಿ ಮಂದಿ ಮಾತುಗಳಲ್ಲಿ.
ಮುಂದಿನ 50 ವರ್ಷದಲ್ಲಿ ಇದು ನಮ್ಮ ಮೇಲೆ ಬೀರುವ ಪರಿಣಾಮದ ಬಗ್ಗೆ ಅಂದಾಜಿಸೋಣ.
ಮೊದಲಿಗೆ ಈ ರೋಡ್ಗಳನ್ನು ಎಚ್ಚರಿಕೆ ಇಂದ ವೇಗವಾಗಿ ಹೋಗಬೇಕು ಎಂದು ಕಟ್ಟಿರುವುದರಿಂದ ಬೈಕ್, ಸೈಕಲ್, ಆಟೋ, ಎತ್ತಿನ ಗಾಡಿ, ವಿದ್ಯುತ್ ವಾಹನಗಳು, ಓಡಾಡಲು ಅವಕಾಶ ಇರುವುದಿಲ್ಲ ಇದ್ದರು ಆ ವೇಗಕ್ಕೆ ಬೆದರಿಕೆ ಉಂಟಾಗಿ ಅಪಘಾತ ಉಂಟಾಗಿ ಅವರೆ ಬರುವುದಿಲ್ಲ.
ಈ ರೋಡ್ಗಳಲ್ಲಿ ಓಡಾಡಲು ವೇಗವಾದ ವೈಯಕ್ತಿಕ ಕಾರ್ ತೆಗೆದುಕೊಳ್ಳುವುದು ಪ್ರತಿಯೊಬ್ಬರಿಗೂ ಅನಿವಾರ್ಯ ಆಗಲಿದೆ. ಆ ರೀತಿ ಕೊಂಡುಕೊಳ್ಳುವ ಶಕ್ತಿ ಕೆಲವರಿಗೆ ಮಾತ್ರ ಸಾಧ್ಯ ಇರೋದು ಹಲವರು ಇವೆಲ್ಲ ನೋಡಿಕೊಂಡು ತಮ್ಮ ಪರಿಸ್ಥಿತಿ ನೆನೆದು ಜಿಗುಪ್ಸೆಯಲ್ಲಿ ಬದುಕಬೇಕು ಇಲ್ಲ ಉಳ್ಳವರ
ಅಡಿಯಾಳಾಗಿ ಈ ರೋಡು ಕಾರು ಎಲ್ಲಾ ಒಂದು ಸಲವೋ ಎರಡು ಸಲವೋ ಅನುಭವಿಸಬೇಕು ಅಷ್ಟೇ. ಜೀವನದಲ್ಲಿ ಒಂದು ಭಾರಿ ವಿಮಾನದಲ್ಲಿ ಹೋಗಬೇಕು ಎಂಬ ಆಸೆಯಂತೆ ಈ ರೋಡಲ್ಲಿ ಸ್ಪೀಡ್ ಕಾರಲ್ಲಿ ಓಡಾಡೋದು ಹಲವು ಜನರಿಗೆ ಈಡೇರದ ಬಯಕೆ ಆಗುತ್ತದೆ.
ಈ ಹೈವೇಗಳ ಕಟ್ಟಲು ವ್ಯಯಿಸುವ ಸಮಯ ಹಣ ನೆಲ ಕಾಡು ನಾಶ ಎಲ್ಲವನ್ನೂ ರೈಲ್ವೇ ಕಾಮಗಾರಿ ಗೆ ಹೋಲಿಸಿದರೆ ದೊಡ್ಡ ಮಟ್ಟದಲ್ಲಿ ಹೆಚ್ಚು ಖರ್ಚಾಗುತ್ತಿದೆ. ರೈಲ್ವೇ ಕಾಮಗಾರಿ ವಿಸ್ತರಿಸುವುದರಿಂದ ಎಲ್ಲರಿಗೂ ಅನುಕೂಲ ಮತ್ತು ಅತೀ ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರಿಗೆ ಉಪಯೋಗ.
ಇದು ಗೊತ್ತಿಲ್ಲವೇ ಸರ್ಕಾರದವರಿಗೆ? ಖಂಡಿತ ಗೊತ್ತು ಆದರೂ ಏಕೆ ಮಾಡುತ್ತಿಲ್ಲ ಎಂದರೆ ರೈಲ್ವೇ ಕಾಮಗಾರಿ ನಡೆಸಿದರೆ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಬಂಡವಾಳಶಾಹಿಗಳಿಗೆ ವೈಯಕ್ತಿಕವಾಗಿ ಸಿಗುವ ಕಮಿಷನ್ನು ಬಹಳ ಕಡಿಮೆ ಹೈವೇ ಕಾಮಗಾರಿಗಳ ಮಾಡಿದರೆ ಸಿಗುವ ಕಮಿಷನ್ಗಿಂತ.
ಹೈವೇ ಕಾಮಗಾರಿ ನಡೆಯುವಾಗಲು ಕಮಿಷನ್ನು ಅದು ಮುಗಿದಮೇಲು ಟೋಲ್, ಕಾರ್ ಕಂಪನಿ, ಪೆಟ್ರೋಲ್ ದಂಧೆಯಿಂದಲೂ ಕಮಿಷನ್ ಸಿಗುತ್ತದೆ ಅದು ದೊಡ್ಡ ಗಂಟೇ ರೈಲ್ವೇ ಕಾಮಗಾರಿಯಲ್ಲಿ ಸಿಗುವ ಕಮಿಷನ್ಗೆ ಹೋಲಿಸಿದರೆ.
1947ರಲ್ಲಿ ಪ್ರಜಾಪ್ರಭುತ್ವ ಬಂದ ನಂತರ ಕನ್ನಡ ನುಡಿಯೆ ಗಡಿಯಾಗಿ ಬೇಕು ಎಂದು ಏಕೀಕರಣ ಚಳುವಳಿ ನಡೆಸಿ ಕನ್ನಡ ದೇಶದ ಬದಲು 1956 ರಲ್ಲಿ ಭಾರತ ಒಕ್ಕೂಟದ ಅಡಿಯಾಳಾದ ರಾಜ್ಯ ಪಡೆದು ಅಷ್ಟಕ್ಕೇ ಸುಮ್ಮನಾಗಿ ‘ಕನ್ನಡ ನಾಡು ನುಡಿ ಮತ್ತು ಸಮಾನತೆ’ ಕಟ್ಟುವುದ ಬಿಟ್ಟು ಜಾತಿವಾರು ಬೇಡಿಕೆಗಳು ಇಲ್ಲ ಅದು ಇದನ್ನು ಪ್ರತಿಭಟಿಸುವುದರಲ್ಲೆ ಬದುಕು ಕಳೆದುಕೊಂಡು ಬಂದಿರುವ ನಮ್ಮ ಹಿರಿಯ ಪೀಳಿಗೆಯ ಚಾಳಿಯನ್ನು ಮೀರಬೇಕಿದೆ ನಮ್ಮ ಪೀಳಿಗೆ ಆದರು.
ಒಂದು ನಾಡು ಕಟ್ಟುವುದೆಂದರೆ ಆ ನಾಡಿನಲ್ಲಿರುವ ಮಾಮೂಲಿ ಮಂದಿ ಕೂಡ ನೆಮ್ಮದಿಯಾಗಿ ಆನಂದವಾಗಿ ಕೈಗೆಟುಕುವ ದರದಲ್ಲಿ ಓಡಾಡಲು ಅವಕಾಶ ಇರಬೇಕು.ಆ ಅವಕಾಶ ಸಿಗೋದು ರೈಲು ನಾಗರೀಕತೆ ಇಂದಲೆ ವಿನಃ ಹೈವೇ ನಾಗರೀಕತೆ ಇಂದಲ್ಲ. ಹೈವೇ ನಾಗರೀಕತೆ ಇಂದ ಸಿಗುತ್ತೆ ಆದರೆ ಹೆಚ್ಚು ತಲೆ ಎಣಿಕೆ ಇರುವ ಮಾಮೂಲಿ ಮಂದಿಗಲ್ಲ ಕಡಿಮೆ ತಲೆ ಎಣಿಕೆ ಇರುವ ಅನುಕೂಲಸ್ಥರಿಗೆ ಮಾತ್ರ.
ಪ್ರತಿ ಜಿಲ್ಲಾ ಕೇಂದ್ರದಿಂದ ನಾಲ್ಕು ಹಳಿಗಳ ಮಾರ್ಗವನ್ನು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಾಗಿ ಪಕ್ಕದ ಜಿಲ್ಲಾ ಕೇಂದ್ರಕ್ಕೆ ಮುಟ್ಟುವಂತೆ ನಿರ್ಮಿಸಿ, ಎರಡು ಹಳಿಗಳ ಮೇಲೆ ಎಕ್ಸಪ್ರೆಸ್ ರೈಲುಗಳನ್ನು ಮತ್ತೆರೆಡು ಹಳಿಗಳ ಮೇಲೆ ಎರಡು ಕಿ ಮೀ ಗೆ ಒಂದರಂತೆ ನಿಲ್ಲುವ ತಾಣ ಮಾಡಿದರೆ ಬಹುತೇಕ ಕನ್ನಡ ನಾಡು ಸರಾಗವಾಗಿ ಸಂಚರಿಸುವಂತಾಗುತ್ತದೆ ಮತ್ತು ನಮ್ಮಂತ ಮಾಮೂಲಿ ಮಂದಿ ಕೂಡ ನೆಮ್ಮದಿಯಾಗಿ ಆನಂದವಾಗಿ ಕೈಗೆಟುಕುವ ದರದಲ್ಲಿ ಓಡಾಡ ಬಹುದು, ನಾವು ಮಾತ್ರವಲ್ಲ ಅನುಕೂಲಸ್ಥರು ಓಡಾಡಬಹುದು.
ಪ್ರತಿ ವ್ಯಕ್ತಿಯು ಸರಾಸರಿ ತಿಂಗಳಿಗೆ 2-3 ಸಾವಿರ ವ್ಯಯ್ಯಿಸುತ್ತಿದ್ದಾರೆ ಸಂಚರಿಸಲು ಇದರ ಬಹುತೇಕ ಪಾಲು ಕೆಲವೇ ಕೆಲವು ವ್ಯಕ್ತಿಗಳಿಗೆ ತಲುಪುತ್ತಿದೆ ಇದರಿಂದ ಅವರು ಮಾತ್ರ ಐಷಾರಾಮಿ ಬದುಕು ನಡೆಸುತ್ತಿದ್ದಾರೆ ಮಾಮೂಲಿ ಮಂದಿ ಆದ ನಾವು ಟೋಲ್ ಕಟ್ಟಲು, ಪೆಟ್ರೋಲ್ ಡೀಸೆಲ್ ಹಾಕಿಸಲು, ಬಸ್ ಪಾಸ್ ಕೊಳ್ಳಲು, ಟಿಕೆಟ್ ಕೊಳ್ಳಲು ತಿಣುಕಾಡುತ್ತಿದ್ದೇವೆ.
ಆದುದ್ದರಿಂದ ‘ಕನ್ನಡ ನಾಡು ನುಡಿ ಮತ್ತು ಸಮಾನತೆ ‘ ಏಳಿಗೆ ಕಾಣಬೇಕು ಎನ್ನುವವರು ‘ರೈಲು ನಾಗರೀಕತೆ ಬೇಕು, ಹೈವೇ ನಾಗರೀಕತೆ ಸಾಕು’ ಎಂಬ ಅರಿವು ಮೂಡಿಸಿ, ಗುಂಪು ಕಟ್ಟಿ ಸರ್ಕಾರಗಳ ಮೇಲೆ ಒತ್ತಡ ತರಬೇಕಿದೆ.
ಅಬಿ, ದ್ರಾವಿಡ ಕನ್ನಡಿಗರು.