ಮರ್ಯಾದೆ ಹತ್ಯೆಯಂತೆ! ಅಸಲಿಗೆ ಇವುಗಳನ್ನು ಅಮಾನವೀಯ ಹತ್ಯೆಗಳು, ಅವಮಾನದ ಹತ್ಯೆಗಳು ಎಂದು ಕರೆಯಬೇಕು. ಗ್ರೀಕ್ ಮತ್ತು ರೋಮ್ ಸಾಮ್ರಾಜ್ಯಗಳಲ್ಲಿದ್ದ ಸೇಕ್ರೇಡ್ ಕಿಲ್ಲಿಂಗ್ ಅಂದರೆ, ಪವಿತ್ರತೆಗಾಗಿ ಹತ್ಯೆ ಎಂಬುದು ಸಹಜವಾಗಿತ್ತು. ಯಾವಾಗ ಆರ್ಯನ್ನರು ಜಗತ್ತಿನ ವಿವಿಧ ಭಾಗಗಳಿಗೆ ಕಾಲಿಟ್ಟರೂ ಅಲ್ಲೆಲ್ಲಾ ಹಾನರ್ ಕಿಲ್ಲಿಂಗ್ ಅನ್ನೋದ ಸಹಜವಾಗಿಬಿಟ್ಟಿದೆ. ಜಗತ್ತಿನ ಅತ್ಯಂತ ದೊಡ್ಡ ರಾಷ್ಟ್ರವೆಂದು ಹೇಳಿಕೊಳ್ಳುವ ಅಮೆರಿಕದಲ್ಲೂ ಈ ಹಾನರ್ ಕಿಲ್ಲಿಂಗ್ ನಡೆಯುತ್ತಿದೆ. ಅಲ್ಲಿನ ಪ್ರತಿಷ್ಟಿತ ಕುಟುಂಬಗಳು, ಪ್ರತಿಷ್ಟಿತಶೀಲ ಕುಟುಂಬಗಳು ಹೆಣ್ಣು ಮಕ್ಕಳನ್ನು ತಮ್ಮ ಕುಲಗೌರವದ ಸಂಕೇತವೆಂದು ಇಂದಿಗೂ ಭಾವಿಸುತ್ತಾರೆ. ಈ ಕಾರಣದಿಂದ ಅಲ್ಲಿನ ಹೆಣ್ಣುಮಕ್ಕಳು ಜಗತ್ತಿನ ಎದುರಿಗೆ ಆಧುನಿಕರಂತೆ ಕಂಡರೂ, ಒಳಗೊಳಗೆ ಈ ಶ್ರೇಷ್ಟತೆಯ ಕುಲುಮೆಯಲ್ಲಿ ಬೇಯುತ್ತಿರುವುದು ಸತ್ಯ!
ಈ ಆರ್ಯರು, ಅವರ ಮನಸ್ಥಿತಿ ಯಾವಾಗ ಇಂಡಿಯಾಗೆ ಕಾಲಿಟ್ಟಿತೋ, ಅಲ್ಲಿನ ರೋಗವನ್ನು ಇಲ್ಲಿಗೂ ಹೊತ್ತುತಂದರು. ಇಲ್ಲಿ ಸಹಜವಾಗಿ ಬದುಕುತ್ತಿದ್ದ ಸಮುದಾಯಗಳ ನಡುವೆ ಜಾತಿಶ್ರೇಷ್ಟತೆಯ ಹುಸಿ ಭ್ರಮೆಯನ್ನು ಮೂಡಿಸಿ, ಸಮುದಾಯದ ಹೆಸರನ್ನು ಜಾತಿಗೆ ಅಂಟಿಸಿ, ಒಂದು ಸಮುದಾಯ ಕಂಡರೆ ಮತ್ತೊಂದು ಸಮುದಾಯಕ್ಕೆ ಆಗದಂತೆ ಮಾಡಿಬಿಟ್ಟರು. ಅದರ ಪರಿಣಾಮವನ್ನು ಭಾರತ ಸಾವಿರಾರು ವರ್ಷಗಳಿಂದ ಅನುಭವಿಸುತ್ತಾ ಬಂದಿದೆ.
ಇದರ ಮುಂದುವರೆದ ಭಾಗವೇ ಇತ್ತೀಚೆಗೆ ಹೆಚ್ಚಾಗಿರುವ Honor Killing ಅಥವಾ ಮರ್ಯಾದೆ ಹತ್ಯೆ! ಅಲ್ರೀ ಮರ್ಯಾದೆ ಹೆಸರಲ್ಲಿ ಮನುಷ್ಯರನ್ನು ಕೊಲ್ಲುವುದನ್ನು ಮರ್ಯಾದೆ ಹತ್ಯೆ ಎಂದು ಶರಾ ಬರೆಯುವವರಿಗೆ ತಲೆ ಕೆಟ್ಟಿದೆಯಾ? ಅಥವಾ ಬೇಕಂತಲೇ ಇಂಥ ಪದಗಳನ್ನು ಹುಟ್ಟುಹಾಕಿ, ಅಂಥ ಹತ್ಯೆಗಳು ಸರಿಯೆಂದು ಸಮಾಜದ ಆತ್ಮಕ್ಕೆ ತುಂಬುತ್ತಿದ್ದಾರ? ಬಹುಶಃ ನಾನು ಊಹಿಸಿದ ಎರಡನೇ ಅಂಶವೇ ಸರಿಯೆನಿಸುತ್ತದೆ. ಸತಿ ಪದ್ಧತಿ, ದೇವದಾಸಿ ಪದ್ದತಿ ಮುಂತಾದ ಹೀನಪದ್ಧತಿಗಳನ್ನು ಹುಟ್ಟುಹಾಕಿದವರೇ ಇಂದು ಮರ್ಯಾದೆ ಹತ್ಯೆ ಎಂಬ ಪದವನ್ನು ಕಾಯಿನ್ ಮಾಡಿದ್ದಾರೆ. ತಳ ಸಮುದಾಯದ ಹುಡುಗನೋ, ಹುಡುಗಿಯನ್ನೋ ಪ್ರೀತಿಸಿದರು ಎಂಬ ಕಾರಣಕ್ಕೆ ತನ್ನ ಹೊಟ್ಟೆಯಲ್ಲಿ ಜನಿಸಿದ ಮಕ್ಕಳನ್ನೇ ಕೊಲ್ಲುತ್ತಾರೆಂದರೆ, ಈ ಹೀನಾಯ ಕೊಲೆಯನ್ನು ಮರ್ಯಾದೆ ಹತ್ಯೆ ಅನ್ನಲಾಗುತ್ತದೆ ಎಂದರೆ, ಆ ಮರ್ಯಾದೆ ಹತ್ಯೆ ಅನ್ನುವ ಪದವನ್ನೇ ಇಲ್ಲಿನ ಮೇನ್ಸ್ಟ್ರೀಮ್ ಮಾಧ್ಯಮಗಳನ್ನು ಬಳಸಿಕೊಂಡು ಸುದ್ದಿ ಮಾಡುತ್ತಿವೆಯೆಂದರೆ, ನಮ್ಮ ಸಮಾಜದ ಮನಸ್ಥಿತಿ ಅದೆಷ್ಟು ಹದಗೆಟ್ಟಿಲ್ಲ?
ನಾವು ಒಪ್ಪಲಿ, ಬಿಡಲಿ ಇಂಥದ್ದೊಂದು ಮನಸ್ಥಿತಿ, ಇದೇ ಮನಸ್ಥಿತಿಯನ್ನು ಒಪ್ಪಿಕೊಂಡು ಹೋಗುವ ಸಮಾಜ ಸೃಷ್ಠಿಯಾಗಿರುವುದಂತೂ ನಿಜ. ಯಾಕೆಂದರೆ ಪಾಳೆಗಾರಿಕೆ ಪದ್ಧತಿ, ಉಳಿಗಮಾನ್ಯ ವ್ಯವಸ್ಥೆಗಳು ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಮರ್ಯಾದೆ ಹತ್ಯೆಗಳು ಸ್ಪಷ್ಟವಾದ ಸಾಕ್ಷಿಯಾಗಿ ನಿಂತಿದೆ. ಕುಟುಂಬದ ಮರ್ಯಾದೆಯ ಹೆಸರಿನಲ್ಲಿ ಜಾತಿಯನ್ನು ಕಾಪಾಡಿಕೊಳ್ಳಲು, ಜಾತಿ ಶ್ರೇಷ್ಟತೆಯ ವ್ಯಸನವನ್ನು ಇನ್ನಷ್ಟು ಪೋಷಿಸಲೆಂದು ಸ್ವಂತ ಮಕ್ಕಳನ್ನು ಉಸಿರುಗಟ್ಟಿಸಿ ಕೊಲ್ಲುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಜಾತಿ ಹೆಸರಿನಲ್ಲಿ ಈ ಹತ್ಯೆಗಳು ನಿರಂತರವಾಗಿ ನಡೆಯುತ್ತಲೆ ಬಂದಿವೆ. ಇಂದು ಈ ಹತ್ಯೆಗಳು ಹೊಸ ರೂಪ ಪಡೆದುಕೊಂಡು ಮರ್ಯಾದೆ ಹತ್ಯೆ ಎಂಬ ಹೆಸರಿನಲ್ಲಿ ಯಾವುದೇ ಎಗ್ಗಿಲ್ಲದೆ, ನಿಂತುಬಿಟ್ಟಿದೆ ಅಷ್ಟೇ. ಇದಕ್ಕೆ ಬಲಿಯಾಗುತ್ತಿರುವುದು ಮೇಲ್ವರ್ಗದವರೆಂದು ಅಥವಾ ಮೇಲ್ಜಾತಿಗಳೆಂದು ಕರೆಸಿಕೊಳ್ಳುವ ಸಮುದಾಯದ ಹೆಣ್ಣು ಮಕ್ಕಳು ಎಂಬುದು ಆತಂಕಕಾರಿ ವಿಷಯ. ಯಾಕೆಂದರೆ, ಈ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಗಂಡು ಕನಿಷ್ಟ ಪ್ರತಿಭಟಿಸಬಲ್ಲ. ಆದರೆ ಹೆಣ್ಣು? ಆಕೆಗೆ ಪ್ರತಿಭಟಿಸುವ ಸ್ವಾತಂತ್ರ್ಯ ದಕ್ಕಿದೆ? ದಕ್ಕಿದ್ದರೂ ಅದು ಎಷ್ಟರ ಮಟ್ಟಿಗೆ ದಕ್ಕಿದೆ ಎಂಬುದನ್ನು ಈ ಹತ್ಯೆಗಳು ಸಾರಿ ಸಾರಿ ಹೇಳುತ್ತವೆ.
ಉತ್ತರಭಾರತ ಮರ್ಯಾದೆಗೇಡು ಹತ್ಯೆಗಳು
ಈ ಮೊದಲು ಉತ್ತರ ಭಾರತದಲ್ಲಿ ಈ ಮರ್ಯಾದಾಗೇಡು ಹತ್ಯೆಗಳು ಹೆಚ್ಚಾಗಿ ನಡೆಯುತ್ತಿರುವುದು ವರದಿಯಾಗುತ್ತಿದ್ದವು. ಗುಜರಾತ್, ಉತ್ತರಪ್ರದೇಶ, ಪಂಜಾಬ್, ಬಿಹಾರ, ಹರಿಯಾಣದಂಥ ರಾಜ್ಯಗಳಲ್ಲಿ ಈಗಲೂ ಹೆಚ್ಚಾಗುತ್ತಲಿವೆ ಎಂದು ರಾಷ್ಟೀಯ ಮಟ್ಟದಲ್ಲಿ ಅಪರಾಧಗಳನ್ನು ಸಂಗ್ರಹಿಸುವ, ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ (NCRB) ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ಆತಂಕಕಾರಿ ದಾಖಲೆಗಳ ವರದಿ ನೀಡಿದೆ. ಕಳೆದ ಐದು ವರ್ಷಗಳಲ್ಲಿ 50ಕ್ಕೂ ಹೆಚ್ಚು ಮರ್ಯಾದೆ ಹತ್ಯೆ ಪ್ರಕರಣಗಳು ಮೇಲೆ ಉಲ್ಲೇಖಿಸಿದ ಐದು ರಾಜ್ಯಗಳಿಂದಲೇ ವರದಿಯಾಗಿವೆಯೆಂದರೆ, ಇಡೀ ದೇಶದ ಪರಿಸ್ಥಿತಿಯೇನು? ಪ್ರತಿ ಹದಿನಾರು ನಿಮಿಷಕ್ಕೊಮ್ಮೆ ದಲಿತರ ಕೊಲೆ, ಅತ್ಯಾಚಾರ, ದೌರ್ಜನ್ಯ ವರದಿಯಾಗುತ್ತದೆ ಎಂದು ಇದೇ ಸಂಸ್ಥೆ ತಿಳಿಸುತ್ತದೆ. ಇನ್ನು ಇಡೀ ವ್ಯವಸ್ಥೆಯೊಳಗೆ ವರದಿಯಾಗದ ಪ್ರಕರಣಗಳು, ಆಡಳಿತಶಾಹಿ ಮತ್ತು ಅಧಿಕಾರಶಾಹಿ ಶಾಮೀಲಿನ ಕಾರಣದಿಂದ ಪತ್ತೆಯಾಗದೆ ಇರುವ, ಪತ್ತೆಯಾದರೂ ಪ್ರಕರಣ ದಾಖಲಾಗದೇ ಇರುವ ಪ್ರಕರಣಗಳೇ ಹೆಚ್ಚೆಂದು ಸ್ಥಳೀಯ ಜನಪರ ಹೋರಾಟಗಾರರು ಹಲವಾರು ಬಾರಿ ಹೇಳುತ್ತಲೇ ಇರುತ್ತಾರೆ. ಈ ಮರ್ಯಾದೆಗೇಡು ಹತ್ಯೆ ಪ್ರಕರಣಗಳಲ್ಲಿ ಹೆಚ್ಚಾಗಿ ಮೇಲ್ಜಜಾತಿಗಳ ಮಧ್ಯಮವರ್ಗದ ಶ್ರೀಮಂತರು ಹಣವಂತರೇ ಆಗಿದ್ದಾರೆ. ಇವೆರೆಲ್ಲರು ಕೇವಲ ತಮ್ಮ ಧರ್ಮದ ಪ್ರತಿಷ್ಠತೆ, ಜಾತಿಯ ದರ್ಪದ ಕಾರಣಕ್ಕೆ ಕೊಂದಿರುವುದಾಗಿ ಹೆಮ್ಮಯಿಂದ ಹೇಳಿಕೆಗಳನ್ನು ನೀಡುತ್ತಿರುವುದು ದೇಶವೆ ತಲೆ ತಗ್ಗಿಸುವಂತಾಗಿದೆ.
ಇದನ್ನೂ ಓದಿ: ಜಾತಿಮೀರಿದ ಕ್ರಿಕೆಟ್ ತಂಡವೂ, ಬೀಫ್ ಕಬಾಬು
ಕರ್ನಾಟಕದಲ್ಲಿ ಮರ್ಯಾದೆಗೇಡು ಹತ್ಯೆಗಳು
ಈ ಮರ್ಯಾದೆಗೇಡಿನ ಹತ್ಯೆಗಳು ದಕ್ಷಿಣ ಭಾರತಕ್ಕೂ ಕಾಲಿಟ್ಟು ಬಹಳ ವರ್ಷಗಳೇ ಕಳೆದವು. ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಇದು ತಾಂಡವವಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ತುಮಕೂರು, ಕೋಲಾರ, ಮಂಡ್ಯ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿಯೂ ಹರಡಿಕೊಂಡು, ಕಳೆದ ಮೂರು ವರ್ಷಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಮಕ್ಕಳು ಮರ್ಯಾದೆಗೇಡು ಹತ್ಯೆಗಳಿಗೆ ಬಲಿಯಾಗಿದ್ದಾರೆ. ಇಲ್ಲೂ ಕೂಡಾ ಬೆಳಕಿಗೆ ಬಾರದೆ ಇರುವ ಪ್ರಕರಣಗಳು ಕೂಡ ಹೆಚ್ಚು. ಕಳೆದ ಮೂರೇ ತಿಂಗಳಲ್ಲಿ ಕೋಲಾರ ಜಿಲ್ಲೆಯೊಂದರಲ್ಲೇ ಮೂರು ಮರ್ಯಾದೆಗೇಡು ಹತ್ಯೆಗಳಾಗಿವೆ. ಈ ಮೂರು ಪ್ರಕರಣಗಳಲ್ಲೂ ಸ್ವಂತ ತಂದೆ ಮತ್ತು ಕುಟುಂಬದವರು ಸೇರಿ ಹತ್ಯೆಗೈದಿರುತ್ತಾರೆ.
ಒಂದು ಪ್ರಕರಣದಲ್ಲಿ ಅನ್ಯಜಾತಿ ಹುಡುಗನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ತನ್ನ ಮಗಳನ್ನು ನಿರ್ದಯವಾಗಿ ಉಸಿರುಗಟ್ಟಿಸಿ ಕೊಂದರೆ, ಮತೊಂದು ಪ್ರಕರಣ ಕೋಲಾರದ ಬಂಗಾರಪೇಟೆ ಬೋಡಗುರ್ಗಿ ಗ್ರಾಮದಲ್ಲಿ, ಕೆಳ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಸ್ವತಃ ತಂದೆಯೇ ಮಗಳ ಕುತ್ತುಗೆ ಹಿಸುಕಿ ಹತ್ಯೆ ಮಾಡಿರುವ ಘಟನೆ ನಡೆಯಿತು. ತಾನು ಪ್ರೀತಿಸಿದ ಹುಡುಗಿ ಮೃತಪಟ್ಟಿದ್ದಾಳೆ ಅನ್ನೋ ವಿಷಯ ತಿಳಿಯುತ್ತಿದ್ದಂತೆ ದಲಿತ ಹುಡುಗ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡುಬಿಟ್ಟ. ಇದರ ಬೆನ್ನಿಗೇ ಕೆಲವು ವಾರಗಳ ಹಿಂದೆ ಬೆಂಗಳೂರಿನಲ್ಲಿ ಅನ್ಯ ಜಾತಿಯ ಹುಡುಗನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೆ ಮಗಳನ್ನು ಮಚ್ಚಿನಿಂದ ಹೊಡೆದು ಕೊಂದಿರುವ ಕ್ರೂರ ಅಮಾನವೀಯ ಘಟನೆ ನೆಡೆದಿದೆ!
ಮರ್ಯಾದೆಗೇಡು ಹತ್ಯೆಗಳಿಗಿಲ್ಲವ ಕಾನೂನು?
ಜಾತಿವಿನಾಶವಾಗಬೇಕಾದರೆ, ಹೆಚ್ಚು ಹೆಚ್ಚು ಅಂತರ್ಜಾತಿಯ ಮದುವೆಗಳು ಆಗಬೇಕು ಎನ್ನುತ್ತಾರೆ. ಆದರೆ, ಈ ವಿಷಮಸ್ಥಿತಿಯಲ್ಲಿ ಈ ರೀತಿಯ ಮದುವೆಗಳು ಅರೆಂಜ್ ಮ್ಯಾರೇಜ್ ಆಗಲು ಸಾಧ್ಯವೇ? ಎದೆಯಲ್ಲಿ ಒಲವು ಮೂಡಿಬಿಟ್ಟರೆ ಸಾಕು, ಜಾತಿಗೀತಿ ಆಚೆಗೆ ಎಂಬ ತಿಳಿವು ಇರುವುದು ಪ್ರೇಮಕ್ಕೆ ಮಾತ್ರ. ಈ ಪ್ರೇಮದ ಕಾರಣದಿಂದ ಅಲ್ಲಲ್ಲಿ ಅಂತರ್ಜಾತಿ ಮದುವೆಗಳು ಪ್ರಜ್ಞಾವಂತ ಜಾತ್ಯಾತೀತರ ಸಮ್ಮುಖದಲ್ಲಿ, ಪೊಲೀಸರ ರಕ್ಷಣೆಯಲ್ಲಿ ಜರುಗುತ್ತವೆ. ಎಲ್ಲೋ ಕೆಲವು ಕಡೆಗೆ ಮಕ್ಕಳಮೇಲಿನ ಪ್ರೀತಿಯ ಕಾರಣದಿಂದ ಇಂಥ ಮದುವೆಗಳಿಗೆ ಉಭಯ ಪೋಷಕರೂ ಒಪ್ಪಿಗೆ ಸೂಚಿಸುವ ಅಪರೂಪದ ಘಟನೆಗಳೂ ನಮ್ಮ ಸಮಾಜದಲ್ಲಿ ನಡೆದಿವೆ. ಆದರೆ, ಆತಂಕ ಹುಟ್ಟಿಸುತ್ತಿರುವುದು ಮರ್ಯಾದೆ ಹಾಳಾಗಿಬಿಡುತ್ತದೆ ಎಂದೋ, ಜಾತಿಗೆಡುತ್ತದೆ ಎಂದೋ ತನ್ನ ಮಕ್ಕಳನ್ನೇ ಕೊಂದುಬಿಡುತ್ತಾರಲ್ಲ; ಈ ವಿಷಯದಲ್ಲಿ.
ಕಳೆದ 20 ವರ್ಷಗಳಲ್ಲಿ ಮರ್ಯಾದೆ ಹತ್ಯೆಗಳು ಹೆಚ್ಚುತ್ತಿದ್ದಂತೆ ಕಾನೂನು ಹೋರಾಟಗಳೂ ಹೆಚ್ಚಾದವು. ಈ ಹತ್ಯೆಗಳ ಬಗ್ಗೆ ಸುಪ್ರೀಂ ಕೋರ್ಟ್ 2010ರಲ್ಲಿ ಹೀಗೆ ಅಭಿಪ್ರಾಯಪಟ್ಟಿದೆ. “ಮರ್ಯಾದೆ ಹತ್ಯೆಗಳು ಕೇವಲ ಹತ್ಯೆಗಳಲ್ಲ. ಅದೊಂದು ವ್ಯವಸ್ಥಿತ ಸಂಚು ಮತ್ತು ಕೌಟುಂಬಿಕ ಖ್ಯಾತಿ, ಗೌರವ, ಕುಲವನ್ನು ಮರುಸ್ಥಾಪಿಸುವ ಮೂಲಕ ತಮ್ಮ ಜಾತಿಯನ್ನು ಶುದ್ದವಾಗಿ ಕಾಪಿಡುವ ಹೀನ ಕೃತ್ಯವಾಗಿದೆ. ಇದನ್ನು ಕೊಲೆಗಾರರು ಹೆಮ್ಮೆಯಿಂದ, ಘನೆತೆಯಿಂದ ಹೇಳಿಕೊಂಡು ತಪ್ಪೊಪ್ಪಿಕೊಂಡ ಉದಾಹರಣೆಗಳಿವೆ. ಇದು ವಿಷಾದನೀಯ ಸಂಗತಿ” ಎಂದು ಸುಪ್ರೀಂ ಕೋರ್ಟ್ ಬೇಸರಪಟ್ಟಿತು.
ಆದರೆ, ಪ್ರಸ್ತುತದ್ಲಲಿ ಈ ಯಾವುದೇ ಪ್ರಬಲವವಾದ ನಿರ್ದಿಷ್ಟವಾದ ಕಾನೂನು ಇಲ್ಲದಾಗಿದೆ. ಮರ್ಯಾದೆ ಹತ್ಯೆಗಳಿಗೆ ಸಂಬಂಧಿಸಿದ ಪ್ರಸ್ತುತದಲ್ಲಿ ಚಾಲ್ತಿಯಲ್ಲಿರುವ ಭಾರತೀಯ ದಂಡ ಸಂಹಿತೆ, 1860 (“IPC”) ನಲ್ಲಿ ವಿವರಿಸಿರುವ ಸಾಮಾನ್ಯ ದಂಡದ ನಿಬಂಧನೆಗಳ ಅಡಿಯಲ್ಲಿ ಬರುತ್ತವೆ. ಈ ನಿಬಂಧನೆಗಳು ಸೆಕ್ಷನ್ 107–11 (ಕೊಲೆಗೆ ಕುಮ್ಮಕ್ಕು), ವಿಭಾಗ 120A ಮತ್ತು 120B (ಅಪರಾಧದ ಪಿತೂರಿ), ವಿಭಾಗಗಳು 299–304 (ಕೊಲೆ ಮತ್ತು ನರಹತ್ಯೆ), ಮತ್ತು ವಿಭಾಗಗಳು 307-308 (ಕೊಲೆಯ ಯತ್ನ ಮತ್ತು ತಪ್ಪಿತಸ್ಥ ನರಹತ್ಯೆ) ಸೇರಿವೆ. ಇದರ ಹೊರತಾಗಿ, ಮರ್ಯಾದಾ ಹತ್ಯೆಯ ಪ್ರಕರಣಗಳನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ, 1989ರ ಅಡಿಯಲ್ಲಿ ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ನಡೆದ ದೌರ್ಜನ್ಯಗಳಿಗೆ ಒಳಪಡಿಸಬಹುದಾಗಿದೆ. ಆದರೆ ಪ್ರಥಮ ವರ್ತಮಾನ ವರದಿ (FIR) ದಾಖಲಿಸುವ ಸಮಯಲ್ಲಿ, ಹಲವಾರು ಕಡೆಗಳಲ್ಲಿ ಈ ಕಾಯ್ದೆಯನ್ನು ಬೇಕೆಂದೇ ಉಲ್ಲೇಖಿಸುವುದಿಲ್ಲ. ಈ ಹತ್ಯೆಗಳಿಗೆ ಪ್ರಬಲ ಕಾನೂನು ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯದ ಆಳುವ ವರ್ಗಗಳು ಹಿಂದೇಟು ಹಾಕಿತ್ತಿರುವುದು ಮತ್ತು ಜಾತಿ ಪೋಷಿತವಾಗಿ ನಡೆದುಕೊಳ್ಳುತ್ತಿರುವುದು ಇಂತಹ ಹತ್ಯೆಗಳು ನಡೆಯಲು ಪರೋಕ್ಷ ಕಾರಣ ಎನ್ನಬಹುದಾಗಿದೆ.
- ರಮೇಶ್ ಹಾಸನ್
೯೭೩೧೫೫೧೪೧೨