ಅನಾದಿ ಕಾಲದಿಂದಲೂ ಬದುಕು ಭಾವನೆಗಳೊಂದಿಗೇ ನಂಟು ಹೊಂದಿ ಜೀವನವನ್ನು ಮುನ್ನಡೆಸಿಕೊಂಡು ಬರುತ್ತಿದೆ. ಕಾಲಕಾಲಕ್ಕೆ ಬದಲಾದ ಮನೋಭಾವಕ್ಕೆ ತಕ್ಕಂತೆ ವೈಚಾರಿಕತೆಯ ಪರಿಭಾಷೆಯೂ ಕೂಡಾ ರೂಪಗಳನ್ನು ಬದಲಿಸುತ್ತಾ ಸಾಗಿ ಬಂದಿದೆ. ಮನುಷ್ಯನೆಂಬ ಈ ಜೀವಿಯೂ ಇತರೆ ಜೀವಿಗಳಿಗಿಂತ ತುಸು ಹೆಚ್ಚೇ ಬುದ್ಧಿ ಮತ್ತು ಆಲೋಚನಾಕ್ರಮಗಳನ್ನು ಹೊಂದಿ ತಾನು ಪ್ರಾಣಿಯಾದರೂ ಪ್ರಾಣಿಯಲ್ಲ ಎಂಬ ತತ್ವವನ್ನು ಪ್ರತಿಪಾದಿಸಿ ತನಗೇ ತಾನೇ ಅರ್ಪಣೆ ಮಾಡಿಕೊಳ್ಳಲಾಗಿದೆ.
ಆಚಾರ ವಿಚಾರಗಳಿಗೆ ಚೌಕಟ್ಟನ್ನು ನಿರ್ಮಿಸಿಕೊಂಡು ಕಟ್ಟುನಿಟ್ಟಿನ ಪಾಲನೆಗಾಗಿ ತನ್ನನ್ನು ತಾನು ಒಗ್ಗಿಸಿಕೊಂಡು ತನ್ನದೇ ಸಾಮ್ರಾಜ್ಯ ನಿರ್ಮಿಸಿಕೊಂಡ, ಆದರೆ ಈ ಚೌಕಟ್ಟು ಕೇವಲ ಒಂದೇ ಪ್ರದೇಶಕ್ಕೆ ಸೀಮಿತವಾಯ್ತೇ ವಿನಃ ಇಡೀ ಜಗತ್ತಿನ ಮಾನವಸಂಕುಲವನ್ನು ಒಳಗೊಳ್ಳುವಲ್ಲಿ ವಿಫಲವಾಯಿತು. ತನ್ನಂತೆ ಇರುವ ತನ್ನ ಚೌಕಟ್ಟಿನ ಆಚೆಯ ಮಾನವರನ್ನು ತುಚ್ವವಾಗಿ ಕಾಣಲಾಯ್ತು, ತನ್ನ ಪರಿಧಿಯಲ್ಲಿ ಇಲ್ಲದ ಆಚಾರವನ್ನು ಅಸ್ಪೃಶ್ಯತೆಯ ಗೆರೆಯನ್ನು ಹಾಕಿ ದೂರವಿಡಲಾಯಿತು. ಮಾನವನೆಂಬ ಈ ಸಂಘಜೀವಿ ಸಮಾಜ ಜೀವಿಯಾಗುವಲ್ಲಿ ಎಡವಿದ, ತನ್ನೊಳಗಿನ ಈರ್ಷಾಸೂಯೆಗಳಿಂದಾಗಿ ರಕ್ಕಸತನದ ಪರಮಾವಧಿಯನ್ನು ಈ ಸಮಾಜದ ಮೇಲೆ ಹೇರಿದ.
ಕಾಲ ಬದಲಾಗಲಿಲ್ಲ ಆದರೆ ಮನುಷ್ಯನ ಆಲೋಚನಾ ಕ್ರಮ ಬದಲಾಗುತ್ತಾ ಹೋಯಿತು. ತಾನು ಗೆಲ್ಲಲೇಬೇಕು ತನ್ನ ಮಾತೇ ಶಾಸನವಾಗಬೇಕು ತಾನು ಈ ಸಮಾಜವನ್ನು ಶಾಸಿಸುತ್ತಾ ಎಲ್ಲರ ತಲೆಯ ಮೇಲೆ ನಡೆಯಬೇಕು ಎಂಬ ಉಮೇದಿಗೆ ಬಿದ್ದು ತನ್ನಂತೆ ಇರುವ ಮನುಷ್ಯರನ್ನು ಪ್ರಾಣಿಗಳಂತೆ ಅಥವಾ ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಿಕೊಂಡಂತಹ ನಿದರ್ಶನಗಳು ಇತಿಹಾಸದಲ್ಲಿ ದಾಖಲಾಗಿವೆ. ಕಾಲ ಚಕ್ರ ಉರುಳುತ್ತಾ ಉರುಳುತ್ತಾ ಮನುಷ್ಯನೊಳಗಿನ ವಿಕೃತಗಳಿಗೆ ನಾನಾ ಮುಖಗಳು ಹಾಗೂ ರೂಪಗಳು ಮೂಡಿದವು.
ಇಡೀ ಸಮಾಜದ ಅಳಿವು ಮತ್ತು ಉಳಿವು ಯಾವುದೋ ಒಂದು ಸಮುದಾಯದ ಸೂಚನೆಯನ್ನು ಅನುಸರಿಸಿ ನಿರ್ಧರಿಸುವಂತಾಯಿತು. ಹಲವು ತೆರನಾದಂತಹ ಕಷ್ಟ ಕೋಟಲೆಗಳನ್ನು ಆ ಒಂದು ಸಮುದಾಯದ ಹೊರತುಪಡಿಸಿ ಉಳಿದೆಲ್ಲ ಸಮಾಜಕ್ಕೆ ಹಂಚಲಾಯಿತು. ಭೌತಿಕ ಕಾಯದ ದಂಡನೆಗಿಂತ ಮಾನಸಿಕ ದಂಡನೆಯು ಬರ ಬರುತ್ತಾ ಪೀಡನೆಯಾಯ್ತು. ಬಾಯಿಸತ್ತ ಜನ ಬಾಯಿ ಮುಚ್ಚಿಕೊಂಡೇ ಮಣ್ಣಾದರೂ ಆ ಮಣ್ಣಿನೊಳಗಿನಿಂದ ತಲೆ ತಲಾಂತರದವರೆಗೂ ಪ್ರತಿಭಟನೆಯ ಬೆಳೆ ನೀಡುತ್ತಲೇ ಇದ್ದಾರೆ.
ಜಗತ್ತು ಎಷ್ಟೇ ಆಧುನಿಕವಾದರೂ ನಾಗರೀಕತೆ ಬೆಳೆದರೂ ನಗರೀಕರಣವಾದರೂ ಈ ಅನಾದಿ ಕಾಲದ ಜಾಢ್ಯ ಬೆಂಬಿಡದೇ ಪ್ರತೀ ಚಳಿಗಾಲಕ್ಕೆ ಎದಿರಾಗುವ ಕೆಮ್ಮಿನಂತೆ ಮರುಕಳಿಸುತ್ತಲೇ ಇರುತ್ತದೆ. ಈ ಆಧುನಿಕ ಜಗತ್ತು ತನ್ನ ವ್ಯಾಪ್ತಿಯೊಳಗಿನ ಭೂಪ್ರದೇಶದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಆಡಳಿತಾತ್ಮಕ ದೃಷ್ಟಿಯಿಂದ ತನ್ನದೇ ಆದಂತಹ ಸಂವಿಧಾನವನ್ನು ರಚಿಸಿಕೊಂಡಿವೆ. ಆದರೆ ಜನರಿಂದ ಜನರಿಗಾಗಿ ಜನರಿಗೋಸ್ಕರ ಸಮರ್ಪಿಸಿಕೊಂಡಂತಹ ಪವಿತ್ರ ಹಾಗೂ ಶಕ್ತಿಯುತವಾದಂತಹ ಸಂವಿಧಾನವನ್ನು ತನ್ನ ಕಾಲ ಕೆಳಗೆ ವಸಗುವ ಮಾತು ಅದೇ ಸಂವಿಧಾನ ಪ್ರದತ್ತ ಮಾಡಿರುವಂತಹ ವಾಕ್ ಸ್ವಾತಂತ್ರ್ಯ ಅಥವಾ ಮಾತನಾಡುವ ಸ್ವಾತಂತ್ರ್ಯವನ್ನು ಬಳಸಿಕೊಂಡೇ ಮಾತನಾಡುತ್ತಾರೆ ಎಂದರೆ, ಈ ನಾಗರೀಕ ಮನುಷ್ಯರ ಅನಾಗರೀಕ ನಡವಳಿಕೆ, ಈ ಶುದ್ಧ ವ್ಯಕ್ತಿಗಳ ಅಶುದ್ಧ ವ್ಯಕ್ತಿತ್ವ ಬಚ್ಚಿಟ್ಟುಕೊಂಡಿರುವ ಮುಖವಾಡದಿಂದಾಚೆಗೆ ಚಿಮ್ಮಿ ಸಮಾಜದ ಮಡಿಯನ್ನು ಮೈಲಿಗೆ ಮಾಡುವ ಇಂತಹ ಹುನ್ನಾರಗಳನ್ನು ಸಭ್ಯ ಸಮಾಜವೆಂದು ಸಹಿಸಬಹುದೇ?
ಸಮಾಜವೆಂಬುದು ಪ್ರಕೃತಿಯಂತೆ ನಿಗೂಢ ನಮ್ಮ ಕಣ್ಣಿಗೆ ಕಂಡ ಸನ್ನಿವೇಶಗಳೆಲ್ಲಾ ಸತ್ಯವಾಗಿರಲಾರವು. ಅದಕ್ಕೆ ಹಿರಿಯರು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂದರು. ಈಗ ಸತ್ಯವಾಗಿ ಕಂಡದ್ದು ಮರುಕ್ಷಣ ಮಿಥ್ಯವಾಗಬಹುದು, ಇಂದು ಕಿರೀಟ ತೊಟ್ಟ ಶಿರವು ನಾಳೆ ಕೇಶಮುಂಡನಕ್ಕೊಳಗಾಗಿ ವಿಕಾರವಾಗಬಹುದು. ವಿವೇಚನೆ -ವಿವೇಕ-ಸಂಯಮ ಮತ್ತು ಆಲೋಚನೆ ಇಲ್ಲದ ವ್ಯಕ್ತಿಯನ್ನು ಎಂತಹ ಉಚ್ಚ ಸ್ಥಾನದಲ್ಲಿಟ್ಟರೂ ನಾಲಗೆ ಹಿಡಿತವಿಲ್ಲದ ಮೇಲೆ ಆ ಸ್ಥಾನವು ವ್ಯರ್ಥವೇ ಸರಿ.
“ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ ” ಎಂಬಂತಹ ವಿಚಾರಧಾರೆಯನ್ನು ಪುರಂದರ ದಾಸರು ಈ ಸಮಾಜಕ್ಕೆ ನೀಡಿದ್ದಾರೆ.ಅದನ್ನು ಪಾಲಿಸಿ ಸಮಾಜಕ್ಕೆ ಮಾದರಿಯಾಗಬೇಕಾದವರು ನಾಲಗೆಯನ್ನು ಹೋದಂತೆ ಬಿಟ್ಟರೆ ನಿಯಂತ್ರಣಾ ಕ್ರಮಗಳ ಕುರಿತು ಈ ಸಮಾಜ ಆಲೋಚಿಸಬೇಕಿದೆ. ಸುಳ್ಳುಗಳನ್ನೇ ಸತ್ಯವೆಂದ ನಂಬಿಸುವ ಈ ಜನರಿಗೆ ತಾವು ಪಡೆದ ಗದ್ದುಗೆ ಅಧಿಕಾರ ಮತ್ತು ಜಾತಿ ಸಮುದಾಯಗಳೇ ಕಿವಿಗಳು , ಕುಳಿತ ಗದ್ದುಗೆಗಳೇ ವೇದಿಕೆಗಳಾಗಿವೆ. ಸಮಾಜದ ಬೆವರಿನ ಫಲ ಉಣ್ಣುವ ಗದ್ದುಗೆಗಳು ಅಧಿಕಾರದ ಕುರ್ಚಿಗಳು ಸಮಾಜದ ಸೌಹಾರ್ದತೆಯ ಪರದೆಯನ್ನು ಛಿದ್ರಛಿದ್ರಗೊಳಿಸಿ ಹರಿದು ಸಿಂಬಳ ವರೆಸುವ ವಸ್ತ್ರವಾಗಿಸಿಕೊಂಡಿದ್ದಾರೆ.
ಮತ್ತದೇ ಬಾಯಿಸತ್ತ ಬಡವರು ಮಣ್ಣಲ್ಲಿ ಮಣ್ಣಾಗುವರು ಆದರೆ ಪ್ರತಿಭಟನೆಯ ರೋಷಾವೇಶಗಳಿಲ್ಲ ಕಾರಣ ಮಣ್ಣಾಗುವ ಮೊದಲೇ ನಿರ್ವೀರ್ಯರನ್ನಾಗಿ ಮಾಡಲಾಗುತ್ತದೆ. ಏಕಾಂಗಿತನದ ಭಯ ಭೀತಿಯಲ್ಲಿ ಜೀವನ ಮಾಡುವಂತೆ ರೂಪುರೇಷೆಗಳನ್ನು ರೂಪಿಸಿ ಬಿಗಿಗೊಳಿಸಿ ಮಿಸುಕಾಡದಂತೆ ಕೊಲ್ಲಲಾಗುತ್ತದೆ ಹಾಗಾಗಿ ಚಳವಳಿ ಹೋರಾಟ ಪ್ರತಿಭಟನೆ ಕೇವಲ ಬ್ಯಾನರ್ ಫೋಟೋ ಕೇಸರಿಬಾತ್ ಗಳಿಗೆ ಸೀಮಿತವಾಗುತ್ತವೆ. ಅಸಂಖ್ಯಾತ ಜೀವಿಗಳು ಈ ಸಮಾಜದಲ್ಲಿ ಬದುಕುವಂತೆ ಕೆರೆಯ ಅಂಗಳದಲ್ಲೂ ಸಹ ಅನೇಕಾನೇಕ ಸೂಕ್ಷ್ಮಾತಿ ಸೂಕ್ಷ್ಮಜೀವಿಗಳಿಂದಾ ಮೊದಲ್ಗೊಂಡು ದೈತ್ಯ ಪ್ರಾಣಿಗಳವರೆಗೂ ಬದುಕುತ್ತವೆ. ಆದರೆ ಯಾವುದೇ ಶಾಸನವಿಲ್ಲ ಶಾಸಿಸುವ ಶಾಸಕನಿಲ್ಲ ಹಾಗಾಗಿ ಅಲ್ಲಿ ಗದ್ದಲವಿಲ್ಲ ಗೋಳಾಟವಿಲ್ಲ ಹೋರಾಟವಿಲ್ಲ ಪ್ರತಿಭಟನೆಯೆಂಬುದು ಗೊತ್ತೇ ಇಲ್ಲ. ಪ್ರಶಾಂತ ಜೀವನದಲ್ಲಿ ನೆಮ್ಮದಿಯ ಬದುಕನ್ನು ಬಾಳಿ ನಿಶ್ಯಬ್ಧವಾಗಿ ಪ್ರಕೃತಿಯಲ್ಲಿ ಲೀನವಾಗುವ ಜಗತ್ತು ನಮಗೇಕೆ ಮಾದರಿಯಾಲಿಲ್ಲ.
ಕೆರೆಯ ಅಂಗಳದಲ್ಲಿ ಒಂದು ಜೀವರಾಶಿ ಮೇಯುತ್ತಿದ್ದರೆ ಅದರ ಸುತ್ತಾ ಕೊಕ್ಕರೆಗಳು ಕಾಗೆಗಳು ಸಂಬಾರ ಕಾಗೆಗಳು ಇನ್ನೂ ಮುಂತಾದ ಪಕ್ಷಿಗಳು ರಾಸುಗಳು ಮೇಯುವಾಗ ಮೇಲೆದ್ದು ಜಿಗಿಯುವ ಕೀಟಗಳನ್ನು ಹಿಡಿದು ತಿನ್ನುತ್ತಿದ್ದವು, ತನ್ನ ಸುತ್ತಾ ನೆರೆದವರನ್ನು ಕಂಡು ಸಂಭ್ರಮದಿಂದ ರಾಸುಗಳು ಕಿವಿಯಗಲಿಸಿ ನಗುತ್ತಿದ್ದವು ಅವುಗಳೆಂದೂ ಅಸೂಯೆ ಪಡಲಿಲ್ಲ ತನ್ನಂತೆ ಇರುವ ರಾಸುಗಳನ್ನು ಕರೆದು ಸಭೆ ಮಾಡಲಿಲ್ಲ. ತನ್ನ ಸುತ್ತಾ ನೆರೆದ ಪಕ್ಷಿ ಸಂಕುಲದ ವಿರುದ್ಧ ಹುನ್ನಾರಗಳನ್ನು ಮಾಡಿ ಅವುಗಳ ಆಹಾರವನ್ನು ಕಸಿಯಲಿಲ್ಲ, ಅವುಗಳ ಹಕ್ಕನ್ನು ಮೊಟಕುಗೊಳಿಸಿ ಮೀಸಲಾತಿಯ ಬೊಬ್ಬೆ ಹೊಡೆಯಲಿಲ್ಲ. ಜಾತಿ ಸಮಾವೇಶ ಮಾಡಿ ಕೆರೆಯ ಆಡಳಿತಕ್ಕೊಬ್ಬ ಮುಖ್ಯಸ್ಥನನ್ನು ನೇಮಿಸುವ ದುಷ್ಟ ಚಿಂತನೆಯನ್ನು ಮಾಡಲಿಲ್ಲ , ತನ್ನ ಹೊಟ್ಟೆ ತುಂಬುವಷ್ಟು ತಿಂದು ಇತರರಿಗೂ ತಿನ್ನಿಸಿ ಉದಾರತನ ಮೆರೆದ ರಾಸುಗಳು ಮಾನವತೆ ಮತ್ತು ಮಮಕಾರದ ಪ್ರತಿನಿಧಿಗಳೆನಿಸಿತು ಬಹುಶಃ ಕರುಳಿರುವ ಜೀವದಲ್ಲಿ ಇತರರ ಆನಂದ ಕಂಡು ಕರುಬುವ ಗುಣ ಇರಲಾರದೇನೋ!?
ಕ್ರಿಮಿ ಕೀಟಗಳನ್ನು ತಿನ್ನುತ್ತಾ ನಮ್ಮ ಕಿವಿಯ ಹತ್ತಿರ ಬರುತ್ತಿದ್ದ ಪಕ್ಷಿಗಳ ನಡಿಗೆಯ ಸಪ್ಪಳ ಸ್ಪಷ್ಟವಾಗಿ ಕೇಳುತ್ತಿತ್ತು ಆ ನಡಿಗೆಯಲ್ಲಿ ಬದುಕಿಗಾಗಿ ಜೀವನ ಅರಸುವ ಗಾಂಭೀರ್ಯವಿತ್ತೇ ಹೊರತು ಅಡ್ಡ ಬಂದವರ ತುಳಿದು ಮುನ್ನಡೆಯುವ ಗಡಿಬಿಡಿ ಇರಲಿಲ್ಲ.
ಪ್ರಕೃತಿಯನ್ನು ಆರಾಧಿಸುತ್ತಾ ಬಂದ ಈ ಮಾನವನೇಕೆ ಪ್ರಕೃತಿಯಲ್ಲಿ ಬೆರೆಯಲಿಲ್ಲ , ಪ್ರಕೃತಿಯ ಭಾಷೆಯನ್ನೇಕೆ ಕಲಿಯಲಿಲ್ಲ. ಸಣ್ಣತನಗಳ ಸಮಾಧಿಯಲ್ಲಿ ಜೀವಂತ ನಲುಗುವ ಮಾನವನ ಹುಚ್ಚಾಟಗಳಿಗೆ ಕೊನೆಯೇ ಇಲ್ಲವೇ? ನಾಲ್ಕುಜನ ಚಪ್ಪಾಳೆ ತಟ್ಟುವವರು ಮುಂದೆ ಇದ್ದಾರೆಂದರೆ ಸಾಕು ಎತ್ತರದಲ್ಲಿ ಕುಳಿತ ತಾನು ದೇವಲೋಕದಿಂದ ಇಳಿದವನೆಂಬ ಭ್ರಮೆಯಲ್ಲಿ ತೇಲಾಡುತ್ತಾ ಓತಪ್ರೋತ ನಡವಳಿಕೆಯ ಜನರಿಗೆ ಮದ್ದಿಲ್ಲವೇ. ಜನರೇಕೆ ಇಷ್ಡು ಸಂಕುಚಿತ ಮನದವರಾದರು ಜನರೇಕೆ ಇಷ್ಟು ವಿವೇಕಹೀನರಾದರು ವಿವೇಚನಾರಹಿತರಾದರು.
ಈ ಸಮಾಜವು ವಿದ್ಯಾವಂತರನ್ನು ಸೃಷ್ಟಿಸಿತೇ ಹೊರತು ವಿಚಾರವಂತರನ್ನು ಸೃಷ್ಟಿಸಲಿಲ್ಲ. ಕೆಲಸಗಾರರನ್ನು ನಿರ್ಮಾಣ ಮಾಡುತ್ತಿದೆಯೇ ಹೊರತು ಕಸುಬುದಾರರನ್ನು ನಿರ್ಮಿಸಲಿಲ್ಲ. ಆಕಾಶದಲ್ಲಿನ ನಕ್ಷತ್ರಗಳಂತೆ ಈ ಭೂಮಿಯ ಮೇಲೆ ಶಾಲಾ ಕಾಲೇಜುಗಳಿವೆ ಆದರೆ ವಿದ್ಯಾವಂತರಿಲ್ಲ.
ಈ ಸಮಾಜದ ಚಿಕಿತ್ಸೆಗೆ ಒಂದೊಳ್ಳೆಯ ಬಿಗಿಯಾದ ನಿಯಂತ್ರಣವನ್ನು ತರಬಲ್ಲ ಶಕ್ತಿ ಈ ಮಣ್ಣಿಗಿದೆ ಮಣ್ಣೊಳಗೆ ಮಣ್ಣಾದ ಚೇತನಗಳಿಗಿದೆ . ಆ ಚೇತನಗಳು ಭುಗಿಲೆದ್ದು ಬಂದು ಭೋರೆಂದು ದುಷ್ಟ ಸಮುದಾಯಗಳ ಹೆಡೆಮುರಿ ಕಟ್ಟಿ ಸಮಾನತೆಯ ನ್ಯಾಯದಾನ ಮಾಡುವ ಗಳಿಗೆ ಬರುವುದೇ!?? ಆಶಿಸೋಣ ಆಶಯವೇ ಆತ್ಮವಿಶ್ವಾಸ ಮತ್ತು ಮುಂದಾಲೋಚನೆಯ ಚೌಕಟ್ಟು.
ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
9844673976