ಕಳ್ಳತನ ಮಾಡಿದವನ ಕೈ ಕತ್ತರಿಸಬೇಕು! ಕೊಲೆ ಮಾಡಿದವನ ತಲೆ ಕತ್ತರಿಸಬೇಕು! ಸುಳ್ಳು ಹೇಳಿದವನ ನಾಲಿಗೆ ಕತ್ತರಿಸಬೇಕು! ಮೋಸ ಮಾಡಿದವನ ಆಸ್ತಿ ಮುಟ್ಟುಗೋಲಾಕಿ ಕೊಳ್ಳಬೇಕು! ವೈದ್ಯನು ಕರ್ತವ್ಯದಲ್ಲಿ ವಿಫಲನಾದರೆ ರೋಗಿಗೆ ಪರಿಹಾರ ನೀಡಬೇಕು! ಭ್ರಷ್ಟ ಅಧಿಕಾರಿಯ ಆಸ್ತಿಯನ್ನು ವಶಪಡಿಸಿಕೊಳ್ಳಬೇಕು! ಅತ್ಯಾಚಾರ ಮಾಡಿದವನ ಮರ್ಮಾoಗಾವನ್ನು ಕತ್ತರಿಸಿ ಹಾಕಬೇಕು! ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುವ ವ್ಯಾಪಾರಿಯ ಅಂಗಡಿಯನ್ನು ಕಸಿದುಕೊಳ್ಳಬೇಕು! ಈ ತರಹದ ಕಾನೂನುಗನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದರೆ ಅದು ಹೇಗೆ ಅಪರಾಧ ನಡೆಯಲು ಸಾಧ್ಯ!?
ಮೇಲೆ ಹೇಳಿದ ಶಿಕ್ಷೆಗಳೆಲ್ಲ ಒಂದು ಕಾಲದಲ್ಲಿ ಅಸ್ತಿತ್ವದಲ್ಲಿದ್ದವು. ಪ್ರಪಂಚದ ಹಳೆ ನಾಗರೀಕತೆಗಳಲ್ಲಿ ಒಂದಾಗಿರುವ ಮೆಸೊಪೊಟೇಮಿಯಾ ನಾಗರೀಕತೆಯು ಚರಿತ್ರೆಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಕಾರಣ ಬೆಬಿಲೋನಿಯಾದ ರಾಜನಾಗಿದ್ದ ಹಮ್ಮುರಾಬಿಯು ಆಗಿನ ಕಾಲದಲ್ಲಿ ಹೊರಡಿಸಿದ್ದ ಶಾಸನಗಳು ಅಥವಾ ಕಾನೂನುಗಳು. “ಸೇಡಿಗೆ – ಸೇಡು, ಮುಯ್ಯಿಗೆ -ಮುಯ್ಯಿ, ಕಣ್ಣಿಗೆ -ಕಣ್ಣು, ಹಲ್ಲಿಗೆ -ಹಲ್ಲು“ ಎಂಬ ತತ್ವವನ್ನು ಆತನ ಕಾನೂನುಗಳು ಒಳಗೊಂಡಿದ್ದವು. ಮೇಲೆ ಹೇಳಿದ ಶಿಕ್ಷೆಗಳೆಲ್ಲವೂ ಅಸ್ತಿತ್ವದಲ್ಲಿದ್ದವು. ಮಂತ್ರಿಗಳಿಂದ ಹಿಡಿದು ಜನ ಸಾಮಾನ್ಯರವರೆಗೂ ಪ್ರತಿಯೊಬ್ಬರೂ ತಪ್ಪನ್ನು ಮಾಡಲು ಭಯ ಪಡುತ್ತಿದ್ದರು. ಈ ಕಾನೂನುಗಳು ಸಂಪೂರ್ಣ ನ್ಯಾಯ ಒದಗಿಸುವುದು ರಾಜ್ಯದ ಜವಾಬ್ದಾರಿ ಎಂಬ ತತ್ವವನ್ನಾಧರಿಸಿದ್ದವು. ವ್ಯಕ್ತಿಗಳು ಸೇಡು ತೀರಿಸಿಕೊಳ್ಳಲಾಗದು ಆದರೆ ರಾಜ್ಯವು ತನ್ನಿಷ್ಟದಂತೆ ಸೇಡಿನ ತೀರ್ಮಾನ ತೆಗೆದುಕೊಳ್ಳಬಹುದಾಗಿತ್ತು. ಈ ಕಾನೂನುಗಳು ಜನರು ಅಪರಾಧ ಮಾಡದಂತೆ ಭಯ ಹುಟ್ಟಿಸುವ ಉದ್ದೇಶ ಹೊಂದಿದ್ದವು. ಇವುಗಳಲ್ಲಿ ಜೀವನದ ಎಲ್ಲ ವೃತ್ತಿಗಳು ಹಾಗೂ ಅಂಶಗಳಿಗೂ ಸಂಬಂಧಿಸಿದ ಕಲಮುಗಳಿವೆ. ಈ ಕಾನೂನುಗಳು ಸಮಾನತೆಯನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದವು. ಶ್ರೀಮಂತರು ಮತ್ತು ಉಚ್ಚ ಅಧಿಕಾರಿಗಳು ಮಾಡುವ ತಪ್ಪಿಗೆ ಕಠೋರ ಶಿಕ್ಷೆಯಾಗುತ್ತಿತ್ತು. ಬಡವರು ಮತ್ತು ಶ್ರೀಮಂತರ ನಡುವಿನ ಭೇದ- ಭಾವವನ್ನು ಕಡಿಮೆ ಮಾಡುವ ಪ್ರಯತ್ನಗಳಿದ್ದವು. ಹಮ್ಮುರಾಬಿಯು ತನ್ನ ಶಾಸನಗಳಿಂದ ಅಥವಾ ಕಾನೂನುಗಳಿಂದ ಮನುಕುಲದ ಇತಿಹಾಸದಲ್ಲಿ ಅಮರನಾಗಿದ್ದಾನೆ. ಈತನು ತನ್ನ ಕಾಲದಲ್ಲಿ ಚಾಲ್ತಿಯಲ್ಲಿದ್ದ ಎಲ್ಲ ಕಾನೂನುಗಳನ್ನು ಸಂಗ್ರಹಿಸಿ, ವಿಂಗಡಿಸಿ, ಸುಧಾರಿಸಿದನು. ಅಲ್ಲದೇ ಅವುಗಳಿಗೆ ಇನ್ನಷ್ಟು ಕಾನೂನುಗಳನ್ನು ಸೇರಿಸಿ ಒಂದು ಸುಧಾರಿತ ಕಾನೂನು ಸಂಹಿತೆ ಮಾಡಿದನು. ಈತನ ಕಾನೂನು ಸಂಹಿತೆಯಲ್ಲಿ 282 ಬಹು ಮುಖ್ಯ ಕಾನೂನುಗಳಿದ್ದವು. ಈ ಕಾನೂನುಗಳು ವೈಯಕ್ತಿಕ ಆಸ್ತಿ, ವಾಣಿಜ್ಯ -ವ್ಯಾಪಾರ, ಅಪಘಾತಗಳು, ಕಾರ್ಮಿಕರು, ಗುಲಾಮರು, ಮದುವೆ, ವಿವಾಹ ವಿಚ್ಚೇದನ, ಸ್ತ್ರೀ -ಪುರುಷರ ಅಧಿಕಾರಗಳು ಮುಂತಾದ ಜೀವನದ ಎಲ್ಲ ಅಂಶಗಳನ್ನು ಒಳಗೊಂಡಿವೆ. ಈತನ ಶಾಸನವನ್ನು ಒಂದು ಕಪ್ಪು ಶಿಲೆಯ ಮೇಲೆ ಅಂದವಾಗಿ ಕೆತ್ತಲಾಗಿದೆ. ಇದು ಮಾನವನ ಇತಿಹಾಸಕ್ಕೆ ತಿಳಿದಿರುವ ಅತ್ಯಂತ ಪ್ರಾಚೀನ ಲಿಖಿತ ಕಾನೂನುಗಳ ಸಂಗ್ರಹವಾಗಿದೆ.
ಇಂತಹ ಕಾನೂನುಗಳು ಇಂದು ಅವಶ್ಯಕವಾಗಿ ಬೇಕಾಗಿವೆ. ಹಾಗಂತ ಈಗಿನ ಕಾನೂನುಗಳು ಸರಿ ಇಲ್ಲ ಅಂತಲ್ಲ! ಶಿಕ್ಷೆಯ ಪ್ರಮಾಣ, ಕಾನೂನಿನ ಬಗ್ಗೆ ಜನರಿಗಿರುವ ನಂಬಿಕೆ, ಭಯ ಹಾಗೂ ಗೌರವದ ಪ್ರಮಾಣ ಕಡಿಮೆಯಾಗಿದೆ. ಕಾರಣವೇನೆಂದರೆ ಅಪರಾಧಿಗಳಿಗೆ ಆಗುವ ಶಿಕ್ಷೆಯ ಪ್ರಮಾಣ ತೀರಾ ಕಡಿಮೆ. ಹಣವಿದ್ದವನು ನ್ಯಾಯವನ್ನು ಕೊಳ್ಳಬಹುದು, ಅವನು ಏನು ಬೇಕಾದರೂ ಅಪರಾಧ ಮಾಡಿ ತಪ್ಪಿಸಿಕೊಳ್ಳಬಹುದು. ಅಂತವರಿಗೆ ಹೆಚ್ಚು ಮನ್ನಣೆ, ಗೌರವ ಪುರಸ್ಕಾರಗಳು ಕೂಡ! ಅಪರಾಧ ಮಾಡಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ವ್ಯಕ್ತಿಗಳಿಗೆ ಅದ್ದೂರಿಯಾಗಿ ಸ್ವಾಗತ ಮಾಡಿ, ಬರಮಾಡಿಕೊಳ್ಳುವ ಹೀನ ಸಂಸ್ಕೃತಿಯಲ್ಲಿ ಇಂದು ನಾವಿದ್ದೇವೆ!! ತಪ್ಪು ಮಾಡಿದವರಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳುವ ಮಸಲತ್ತು ಸದಾ ನಡೆಯುತ್ತಿವೆ. ಬೇಲಿಯೇ ಎದ್ದು ಹೊಲ ಮೆಯ್ದಂತೆ ಪ್ರಭಾವಿ ವ್ಯಕ್ತಿಗಳಿಗೆ ಎಲ್ಲ ರೀತಿಯಲ್ಲೂ ಸಹಾಯ ಸಹಕಾರ ನೀಡಿ ನಿರಪರಾಧಿ ಎಂದು ಬಿಂಬಿಸುವ ವ್ಯವಸ್ಥೆಯೇ ನಿರ್ಮಾಣವಾಗಿದೆ.
ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಅಕ್ರಮ, ಅನೈತಿಕತೆ, ಕಳ್ಳ ಸಾಗಾಣಿಕೆ, ಭ್ರಷ್ಟಚಾರ ಮುಂತಾದ ಅಪರಾಧಗಳು ಪ್ರತಿ ದಿನವೂ ನಡೆಯುತ್ತಿವೆ. ಆದರೆ ಅವುಗಳಿಗೆಲ್ಲ ಪ್ರತಿದಿನವೂ ಶಿಕ್ಷೆ ಆಗುವುದಿಲ್ಲ! ಎಷ್ಟೋ ಅಪರಾಧಗಳು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಲ್ಲ! ಮತ್ತೆಷ್ಟೋ ಅಪರಾಧಗಳು ಕೋರ್ಟಿಗೆ ಹೋಗಲ್ಲ! ಪ್ರಭಾವಿಗಳು ತಮ್ಮ ಪ್ರಭಾವ ಬೀರಿ ಬೆಳಿಗ್ಗೆ ಹೋಗಿ ಸಾಯಂಕಾಲ ಬರುತ್ತಾರೆ. ಇದು ಈ ವ್ಯವಸ್ಥೆಯಲ್ಲಿ ಒಂದು ಫ್ಯಾಷನ್ ಆಗಿ ಬಿಟ್ಟಿದೆ. “ದೇಶದ ಕಥೆ ಇಷ್ಟೇ ಕಣಮ್ಮೋ, ನೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ, ನ್ಯಾಯದ ಮನೆಗೆ ಈಗ್ಲೂ ಎರಡೆರಡಂತೆ ಬಾಗ್ಲು, ಮುಂದೆ ಹೋಗಿ ಹಿಂದೆ ಬರೋ ದೇಶದ ಕಥೆ ಇಷ್ಟೇ ಕಣಮ್ಮೋ, ನೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ.” ಅನ್ನೋ ಹಾಡಿನ ತರ ಈಗಿನ ಪರಿಸ್ಥಿತಿ ಬಂದು ನಿಂತಿದೆ. ಅದೇನೋ ಈ ವ್ಯವಸ್ಥೆ ಅಂದರೇ ಅಸಡ್ಡೆ, ಅಲಕ್ಷ್ಯ. ಕಾನೂನುಗಳನ್ನು ಪರಿ ಪಾಲಿಸುವುದಕ್ಕಿಂತ ಅವುಗಳನ್ನು ದಿಕ್ಕರಿಸುವಲ್ಲಿ ಮಜಾ ಜಾಸ್ತಿ ಇದೆ ಅನಿಸುತ್ತೆ. ನಮ್ಮ ಸುತ್ತ ಮುತ್ತ ದಿನ ನಿತ್ಯ ಗಮನಿಸಿದಾಗ ಅದಕ್ಕೆ ಪುಷ್ಟಿ ಎಂಬಂತೆ ಕೆಲವು ನಿದರ್ಶನಗಳು ಸಿಗುತ್ತವೆ.
ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಅಂತಾ ಬೋರ್ಡ್ ಇರುತ್ತೆ, ಆದರೆ, ಅಲ್ಲೇ ಮಾಡಿರುತ್ತಾರೆ, NO Parking ಬೋರ್ಡ್ ಹತ್ತಿರವೇ ವಾಹನಗಳನ್ನು ನಿಲ್ಲಿಸಿರುತ್ತಾರೆ. ಇಲ್ಲಿ ಬೀಡಿ ಸಿಗರೇಟ್ ಸೇದಬಾರದು ಅಂದ ಕಡೆಯಲ್ಲಿಯೇ ಹೆಚ್ಚಾಗಿ ಸೇದುತ್ತಾರೆ. ಚಿತ್ರಮಂದಿರಗಲ್ಲಿ, ಹಾಗೂ ಬಸ್ ನಿಲ್ದಾಣಗಳಲ್ಲಿ ಉಗಳಬಾರದು ಎಂಬ ಫಲಕ ಇದ್ದೆ ಇರುತ್ತದೆ. ಆದರೂ ಆ ಸ್ಥಳಗಲ್ಲಿಯೇ ಹೆಚ್ಚಾಗಿ ಉಗುಳುತ್ತಾರೆ. ಟ್ರಾಫಿಕ್ ಸಿಗ್ನಲ್ ರೂಲ್ಸ್ ಫಾಲೋ ಮಾಡಿ ಅಂತಾ ಬೋರ್ಡ್ ಹಾಕಿದ್ರೆ ಅ ಬೋರ್ಡಿನ ಮುಂದೆಯೇ ಸಿಗ್ನಲ್ ಜಂಪ್ ಮಾಡಿ ಹೋಗಿರುತ್ತಾರೆ. ಕುಡಿದು ಚಾಲನೆ ಮಾಡಬೇಡಿ ಎಂಬ ಬರಹಗಳನ್ನು ದಿಕ್ಕರಿಸಿ ಕುಡಿದೆ ವಾಹನ ಓಡಿಸುತ್ತಾರೆ. ಹೆಲ್ಮೆಟ್ ಧರಿಸಿ ಎಂದರೇ ಹೇರ್ ಸ್ಟೈಲ್ ಹಾಳಾಗುತ್ತೆ ಅನ್ನೋ ಜಾಯಮಾನದಲ್ಲಿ ಇದ್ದಾರೆ. ಸೀಟ್ ಬೆಲ್ಟ್ ಹಾಕಿ, ವಾಹನ ಚಾಲನೆ ಮಾಡಿ, ನಿಧಾನವಾಗಿ ಚಲಿಸಿ. ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿ ಎಂದೆಲ್ಲ ಕಾನೂನು ಸಲಹೆಗಳನ್ನು ನೀಡಿದಾಗಿಯೂ ಅದರಂತೆ ಪಾಲನೆ ಮಾಡುವವರ ಸಂಖ್ಯೆ ಎಷ್ಟು? ಪ್ರಸ್ತುತ ಆಗುತ್ತಿರುವ ಅಪಘಾತಗಳಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದರ ಜೊತೆಗೆ ಕುಡಿದು ನಿರ್ಲಕ್ಷದಿಂದ ವಾಹನ ಚಾಲನೆ ಮಾಡಿದವರ ಸಂಖ್ಯೆಯೇ ದೊಡ್ಡದಿದೆ. ಯಾಕೆ ಇವರಿಗೆಲ್ಲ ಕಾನೂನಿನ ಅರಿವಿಲ್ಲವೇ? ಅಥವಾ ಇವೆಲ್ಲಾ ಅಪರಾಧ ಎಂದು ತಿಳಿದಿಲ್ಲವೇ? ಇಂತವರಿಗಾಗಿಯೇ ಹಮ್ಮುರಾಬಿ ಶಾಸನ ಬೇಕಾಗುವುದು.
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿದರೂ ಇನ್ನೂ ಕೆಲವರಿಗೆ ಕಾನೂನಿನ ಅರಿವಿಲ್ಲ. ರಾಜ್ಯ, ರಾಷ್ಟ್ರ, ಸರ್ಕಾರ ಮುಂತಾದವುಗಳ ಅರ್ಥ ಗೊತ್ತಿಲ್ಲ. ಒಂದು ದೇಶವು ವ್ಯವಸ್ಥಿತವಾಗಿ ಆಡಳಿತ ನಡೆಸಲು ಹಾಗೂ ಅಭಿವೃದ್ಧಿ ಹೊಂದಲು ಅಲ್ಲಿನ ಕಾಯ್ದೆ ಕಾನೂನುಗಳು ಬಹಳ ಮುಖ್ಯ. ಆದರೆ ನಮ್ಮಲ್ಲಿ ಎಷ್ಟು ಜನರಿಗೆ ಕಾನೂನಿನ ಅರಿವಿಲ್ಲ. ಮೌಢ್ಯ ನಿಷೇದ ಮಾಡಬೇಕಾದವರು ಮೌಢ್ಯತೆಯಲ್ಲಿಯೇ ಬದುಕಿದರೆ ಕಾಯ್ದೆಗಳಿಗೇನು ಬೆಲೆ? ಅಜ್ಞಾನ, ಅನಕ್ಷರತೆ, ಅಷ್ಟೇ ಅಲ್ಲದೇ ಮತಾಂಧತೆ ಕೂಡ ಕಾಯ್ದೆ ಕಾನೂನುಗಳನ್ನು ಉಲ್ಲಂಘಿಸಲು ಪ್ರೇರೇಪಿಸುತ್ತವೆ. ಕಾನೂನುಗಳನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಬೇಕಾದವರೇ ಕಾನೂನು ಉಲ್ಲಂಘನೆ ಮಾಡಿರುವ ಪ್ರಕರಣಗಳು ಕೂಡ ಸಾಕಷ್ಟಿವೆ. ಪರೀಕ್ಷೆಗಳಲ್ಲಿ ಆಗುವ ನಕಲು, ಪ್ರಶ್ನೆ ಪತ್ರಿಕೆ ಸೋರಿಕೆ, ಕಚೇರಿಗಳಲ್ಲಿ ಲಂಚಗುಳಿತನ, ಬಾಲ್ಯವಿವಾಹ, ವರದಕ್ಷಿಣೆ ಕಿರುಕುಳ, ಜೂಜು, ಮಟ್ಕಾ ದಂಧೆ, ವೇಶ್ಯವಾಟಿಕೆ, ಮರಳು ಮಾಫಿಯ, ಅಕ್ರಮ ಗಣಿಗಾರಿಕೆ, ಆಹಾರ ಕಲಬೆರಕೆ, ದೌರ್ಜನ್ಯ, ಶೋಷಣೆ, ಲಿಂಗ ತಾರತಮ್ಯ, ಅಸ್ಪೃಶ್ಯತೆ ಇವೆಲ್ಲವೂ ಕಾನೂನಿನ ಪ್ರಕಾರ ಅಪರಾಧ. ಆದರೂ ಇವೆಲ್ಲಾ ನಮ್ಮ ಸಮಾಜದಲ್ಲಿ ಇನ್ನೂ ಏಕೆ ಅಸ್ತಿತ್ವದಲ್ಲಿವೆ? ಇವರಿಗೆಲ್ಲ ಕಾನೂನಿನ ಭಯವಿಲ್ಲವೆ?!! ನಿರ್ಭಯ ಹತ್ಯೆ ಪ್ರಕರಣದ ನಂತರ ದೇಶದಲ್ಲಿ ನಡೆದ ಅತ್ಯಾಚಾರಗಳೆಷ್ಟು? ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರಕರಣ ಮಾಸುವ ಮುನ್ನವೇ ಅಂತಹ ಪ್ರಕರಣಗಳು ಮತ್ತೇ ಘಟಿಸಲು ಕಾರಣವೇನು? ಅಪರಾಧಿಗಳಿಗೆ ಶಿಕ್ಷೆಯ ಭಯವಿಲ್ಲ!? ಅಥವಾ ಇದ್ದರೂ ಅಸಡ್ಡೆ! ಈ ಎಲ್ಲ ಅಂಶಗಳನ್ನು ಅವಲೋಕಿಸಿದಾಗ ಈ ದೇಶದ ಕಾನೂನುಗಳನ್ನು ಮೀರುವುದು ಬಹಳ ಸುಲಭವೆಂದು ಹಲವರು ಪರಿಗಣಿಸಿದ್ದಾರೆ ಎನಿಸುತ್ತದೆ. ಇದು ನಿಜವು ಇರಬಹುದು.!
ಆದ್ದರಿಂದ ದೊರೆ ಹಮ್ಮುರಾಬಿ ಶಾಸನ ಜಾರಿಗೆ ತರಬೇಕು. ಕೆಲವೊಂದು ಕಠಿಣ ಕಾನೂನುಗಳನ್ನು ಹಲವು ದೇಶಗಳಲ್ಲಿ ಜಾರಿಗೆ ತಂದಿದ್ದಾರೆ. ಅಲ್ಲಿನ ಅಪರಾಧಗಳು ಕಡಿಮೆ. ಆ ದೇಶಗಳು ಅಭಿವೃದ್ಧಿಯತ್ತ ಸಾಗುತ್ತಿವೆ. ಕೆಲವೊಂದು ಅಭಿವೃದ್ಧಿಯಾಗಿವೆ ಕೂಡ! ಕಠಿಣ ಕಾನೂನುಗಳ ಜೊತೆಗೆ ಅಪರಾಧಿಗಳಿಗೆ ತ್ವರಿತ ಶಿಕ್ಷೆಯ ಪ್ರಮಾಣ ಹೆಚ್ಚಾಗಬೇಕು. ಸಂಚಾರಿ ನ್ಯಾಯ ಪೀಠ ಸ್ಥಾಪಿಸಿ ತ್ವರಿತ ತೀರ್ಪನ್ನು ನೀಡಬೇಕು. ನ್ಯಾಯಕ್ಕಾಗಿ ಜನರು ಹರಸಿ ಬರುವುದಲ್ಲ.! ನ್ಯಾಯಾಲಯವೆ ಜನರ ಬಳಿ ಹೋಗಿ ತೀರ್ಪು ನೀಡಿ ಬರಬೇಕು! ಪೊಲೀಸ್ ವ್ಯವಸ್ಥೆ ರಾಜಕಾರಣಿಗಳ ಸೇವಕರಾಗದೆ ಜನ ಸಾಮಾನ್ಯರ ರಕ್ಷಕರಾಗಬೇಕು. ಸ್ವಜಾನಪಕ್ಷಪಾತ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಜಾರಿಯಾಗಬೇಕು. ಆರಕ್ಷಕರೆಂದರೆ, ನ್ಯಾಯಾಲಯವೆಂದರೇ ಪ್ರತಿಯೊಬ್ಬ ಪ್ರಜೆಗೂ ಒಳ್ಳೆಯ ಅಭಿಪ್ರಾಯ ಮೂಡಬೇಕು. ಹೀಗಾದಾಗ ಮಾತ್ರ ಜನರಿಗೆ ಭದ್ರತೆ ಹಾಗೂ ಭರವಸೆಯ ಭಾವ ಬೆಳೆಯುತ್ತದೆ. ಇಲ್ಲವಾದರೆ ಕಾಯ್ದೆ ಕಾನೂನುಗಳೆಲ್ಲ ಧನಿಕರು ಬಳಸುವ, ಬಡವರಿಗೆ ಎಟುಕದ ಮಾರಾಟದ ಸರಕಾಗುತ್ತವೆ.