ಭಾರತದ ಚುನಾವಣಾ ವ್ಯವಸ್ಥೆ ಇಂದು ಎಷ್ಟು ಭ್ರಷ್ಟವಾಗಿದೆ ಎಂದರೆ ಕೇವಲ 50 ಪೈಸೆಗೆ ತಮ್ಮ ಅಮೂಲ್ಯವಾದ ಕೋಟ್ಯಾನುಕೋಟಿ ಬೆಲೆ ಬಾಳುವ ಪವಿತ್ರವಾದ ಮತವನ್ನು ಮಾರಿಕೊಳ್ಳಲಾಗುತ್ತಿದೆ.
ಹಿಂದೆ ಬರೀ ಭರವಸೆಗಳಿಗೆ ಮಾರುಹೋಗಿ ಮತಚಲಾಯಿಸುತ್ತಿದ್ದ ಮತದಾರರು, ಇಂದು ಕನಿಷ್ಟ ಒಂದು ಸಾವಿರ ರೂಪಾಯಿಗೆ ಮತ ಹಾಕಿ ತಮ್ಮ ಅಭ್ಯರ್ಥಿ ಗೆಲ್ಲಿಸುತ್ತಾರೆ!
ಇದರ ಲೆಕ್ಕ ನೋಡಿ, ವರ್ಷಕ್ಕೆ 365 ದಿನದಂತೆ ಐದು ವರ್ಷಕ್ಕೆ 1825 ದಿನಗಳಿಗೆ ಲೆಕ್ಕಹಾಕಿದರೆ ಕೇವಲ 54 ಪೈಸೆಗೆ ತಮ್ಮ ಮತಗಳನ್ನು ಮಾರಿಕೊಂಡು ಅಭ್ಯರ್ಥಿಗೆ ಐದು ವರ್ಷಗಳ ಅಧಿಕಾರ ನೀಡಿ ಕೋಟ್ಯಾಂತರ ರೂಪಾಯಿ ಕೊಳ್ಳೆಹೊಡೆವ ಅವಕಾಶ ಕೊಟ್ಟು ತಮ್ಮ ಬದುಕಿಗೆ ತಾವೇ ಕೊಳ್ಳಿ ಇಟ್ಟುಕೊಳ್ಳುತ್ತಾರೆ.

ಇಂತಹ ಮತದಾರರಿಂದ ದೇಶ ಅಭಿವೃದ್ದಿಯಾಗಲು ಹೇಗೆ ಸಾಧ್ಯ?

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಅತ್ಯುನ್ನತ ಅಧಿಕಾರವನ್ನು ಸಂವಿಧಾನ ನೀಡಿದೆ, ಆದರೆ ಮತದ ಮೌಲ್ಯ ಅರಿಯದ ಮತದಾರರು ತಮ್ಮನ್ನು ಸಣ್ಣಪುಟ್ಟ ಆಸೆ ಆಮಿಷಗಳಿಗೆ ಮಾರಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಆಶಕ್ಕೆ ದ್ರೋಹಬಗೆದು ಭ್ರಷ್ಟಾಚಾರದ ಆಡಳಿತಕ್ಕೆ ಅನುವು ಮಾಡಿಕೊಡುತ್ತಾ ಜನಪ್ರತಿನಿಧಿಗಳ ಗುಲಾಮರಾಗಿದ್ದಾರೆ. ಹೀಗಿರುವಾಗ ಪ್ರಜೆಗಳು ಅಭಿವೃದ್ದಿಯಾಗುವುದು ಹೇಗೆ? ತಮ್ಮನ್ನೇ ಮಾರಿಕೊಂಡ ಮತದಾರರು ಬೆಲೆಯೇರಿಕೆಯ ಬಿಸಿ ಅನುಭವಿಸುತ್ತಾರೆ, ಭ್ರಷ್ಟ ರಾಜಕಾರಣಿಗಳನ್ನು ತಾವೇ ಸೃಷ್ಟಿಸಿ ಬೀದಿಯಲ್ಲಿ ನಿಂತು ಸರ್ಕಾರ ಭ್ರಷ್ಟವಾಗಿದೆ, ಜನರನ್ನು ಕಡೆಗಣಿಸುತ್ತಿದೆ, ದಿನಬಳಕೆಯ ವಸ್ತುಗಳ ಬೆಲೆ ಏರಿಸುತ್ತಿದೆ, ನೌಕರಿ ನೀಡದೆ ವಂಚಿಸುತ್ತಿದೆ ಇತ್ಯಾದಿ ಆರೋಪಗಳನ್ನು ಕಳೆದ 75 ವರ್ಷಗಳಿಂದಲೂ ಮಾಡುತ್ತಲೇ ಇದ್ದಾರೆ. ರಾಜಕಾರಣಿಗಳು ಬದಲಾದರೆ? ಜನಪರ ಕಲ್ಯಾಣ ಯೋಜನೆಗಳನ್ನು ತಂದರೆ? ಜನರ ಬೇಡಿಕೆಗಳನ್ನು ಈಡೇರಿಸಿದರೆ? ಇಲ್ಲವೇ ಇಲ್ಲ. ಯಾಕೆಂದರೆ, ಮತದಾರರು ಮೊದಲೇ ತಮ್ಮನ್ನು ತಾವು ಬಿಕರಿ ಮಾಡಿಕೊಂಡು ಭ್ರಷ್ಟರಾಗಿದ್ದಾರೆ! ಭ್ರಷ್ಟರಾದ ಮತದಾರರು ನಿಷ್ಟಾವಂತ ಜನಪ್ರತಿನಿಧಿಗಳನ್ನು ಹೇಗೆ ಸೃಷ್ಟಿಸಲು ಸಾಧ್ಯ? ತಾವೇ ಭ್ರಷ್ಟರಾಗಿ ಶುದ್ಧವಾದ ಆಡಳಿತವನ್ನು ಹೇಗೆ ನೀರೀಕ್ಷೆ ಮಾಡುಲು ಸಾಧ್ಯ!?

ಮತದಾರರು ಬದಲಾದರೆ ಮಾತ್ರ ತಮ್ಮ ಹಕ್ಕು ಅಧಿಕಾರಗಳನ್ನು ಜನಪ್ರತಿನಿಧಿಗಳ ಕತ್ತಿನಪಟ್ಟಿ ಹಿಡಿದು ಕೇಳುವ ತಾಕತ್ತನ್ನು ಬೆಳೆಸಿಕೊಳ್ಳಬಹುದು.

ಪ್ರಜಾಪ್ರಭುತ್ವದಲ್ಲಿ ಅತ್ಯಂತ ಎತ್ತರದ ಸ್ಥಾನ ಇರುವುದು ಪ್ರಜೆಗಳಿಗೆ. ಪ್ರಜಾಪ್ರಭುತ್ವ ಎಂದರೇನು? ಪ್ರಜೆಗಳಿಂದ, ಪ್ರಜೆಗಳಿಗಾಗಿ ಇರುವ ಪ್ರಜೆಗಳ ಪ್ರಭುತ್ವ ಎಂದಲ್ಲವೇ? ಅದರರ್ಥ ಗ್ರಾಮ ಪಂಚಾಯ್ತಿ ಸದಸ್ಯನಿಂದ ಹಿಡಿದು ಸಂಸತ್ ಸದಸ್ಯನ ತನಕ ಪ್ರಜೆಗಳ ಓಟಿನಿಂದಲೇ ಗೆಲ್ಲುವ ಜನಪ್ರತಿನಿಧಿಯು ಜನರ ಪ್ರತಿನಿಧಿ. ಜನರ ಆಶೋತ್ತರಗಳನ್ನು ಸಂವಿಧಾನ ಬದ್ದವಾಗಿ ಈಡೇರಿಸುವ ಸಲುವಾಗಿ ಜನರು ತಮ್ಮ ಅನುಕೂಲಕ್ಕಾಗಿ ಆರಿಸಿದ ಪ್ರತಿನಿಧಿ. ಅಂದರೆ ಅವನು ಜನರ ಸೇವಕ.
ಆದರೆ ಇಂದು ಜನಪ್ರತಿನಿಧಿಗಳು ಜನರ ಸೇವಕರಂತಿದ್ದಾರೆಯೇ? ಗೆಲ್ಲುವ ತನಕ ಪ್ರತಿಯೊಬ್ಬರ ಮನೆಬಾಗಿಲಿಗೆ ಬಂದು ಮತಕ್ಕಾಗಿ ಅಂಗಲಾಚಿ ಎಲ್ಲರಿಗೂ ಕೈಮುಗಿದು, ಕಾಲಿಡಿದು ತಮನ್ನು ಗೆಲ್ಲಿಸುವಂತೆಯೂ ತಾನು ತಮ್ಮ ಸೇವಕನಾಗಿ ಕೆಲಸ ಮಾಡುವುದಾಗಿಯೂ ವಾಗ್ದಾನ ಕೊಡುತ್ತಾರೆ. ಆದರೆ ಗೆದ್ದಮೇಲೆ? ರಾಜರಂತೆ ಮೆರೆಯುತ್ತಾರೆ. ಅಥವಾ ತಿರುಬೋಕಿ ಮತದಾರರೇ ಗೆದ್ದವನನ್ನು ರಾಜನಂತೆ ಮೆರೆಸಿ ಅವನೊಳಗೆ ತಾನೊಬ್ಬ ಜನಸೇವಕ ಎಂಬುದನ್ನು ಜನರೇ ಮರೆಸುತ್ತಾರೆ! ಅವನಿಗೆ ಇನ್ನಿಲ್ಲದ ಮರ್ಯಾದೆ ಕೊಟ್ಟು ಅವನ ಮುಂದೆ ಕೈಕಟ್ಟಿ ನಿಲ್ಲುತ್ತಾರೆ. ಅವನನ್ನು ಭೇಟಿಯಾಗುವುದೇ ಮಹಾಸಾಧನೆಯೆಂಬಂತೆ ಕಾಯುತ್ತಾರೆ. ಅವನ ಮುಂದೆ ಕೈಕಟ್ಟಿ ನಡುಬಗ್ಗಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಗೋಗರೆಯುತ್ತಾರೆ. ನನಗೆ ಪರಮಾಧಿಕಾರವಿದೆ ಎಂದು ಭ್ರಮಿಸುವ ಜನಪ್ರತಿನಿಧಿ ತನ್ನನ್ನು ಗೆಲ್ಲಿಸಿದ ಜನರನ್ನು ಗುಲಾಮರಂತೆ ಕಾಣುತ್ತಾನೆ. ಇದು ರೂಢಿಗತವಾಗಿಬಿಟ್ಟಿರುವ ಪದ್ದತಿ ಈಗ. ಇದು ಪ್ರಜಾಪ್ರಭುತ್ವವೇ? ಇದು ಪ್ರಜಾಪ್ರಭುತ್ವದ ಅಣಕ. ಸ್ವತಃ ಪ್ರಜೆಗಳೇ ತಮ್ಮನ್ನು ಗುಲಾಮರ ಸ್ಥಾನದಲ್ಲಿಟ್ಟುಕೊಂಡು ತಮ್ಮ ಸೇವಕನನ್ನು ರಾಜನಾಗಿಸಿಕೊಂಡು ತಮ್ಮ ಅಧಿಕಾರವನ್ನೇ ನಾಶಮಾಡಿಕೊಂಡು ಪ್ರಜಾಪ್ರಭುತ್ವದ ಆಶಯಗಳನ್ನೇ ಕೊಲ್ಲುವ ಕೊಲೆಗಡುಕರೇ ಪ್ರಜೆಗಳಾಗಿದ್ದಾರೆ ಎಂದರೆ ಯಾವುದೇ ಅತಿಶಯೋಕ್ತಿಯಲ್ಲ.

ವಾಸ್ತವವಾಗಿ ಜನರು ಜಾತಿ ಮತ ಬೇಧಗಳಿಗೆ ಅಂಟಿಕೊಳ್ಳದೆ ಒಬ್ಬ ದಕ್ಷ ವ್ಯಕ್ತಿಯನ್ನು ತಮ್ಮ ಸೇವಕನಾಗಿ ಅಥವಾ ತಮಗೆ ಒಳಿತು ಮಾಡಬಹುದಾದ ನಾಯಕನಾಗಿಯೇ ಆಗಿ ಯಾವುದೇ ಭ್ರಷ್ಟಚಾರವಿಲ್ಲದೆ ಆರಿಸಬೇಕು. ಅವನು ಜನರಿಗೆ ಉತ್ತರದಾಯಿತ್ವ ಹೊಂದುತ್ತಾನೆ. ಜನರ ಕಷ್ಟ ಕಾರ್ಪಣ್ಯಗಳಿಗೆ ತಕ್ಷಣ ಸ್ಪಂದಿಸುತ್ತಾನೆ. ಸ್ಪಂದಿಸಬೇಕು. ಅದೇ ಅವನಿಗಿರುವ ಏಕೈಕ ಜವಾಬ್ದಾರಿ. ಜನರ ಬಳಿಗೆ ಅವನೇ ಬರಬೇಕು. ಜನರಿಗೇ ಅವನು ಮರ್ಯಾದೆ ಕೊಡಬೇಕು. ಜನರ ಆಜ್ಞೆಯನ್ನೇ ಪಾಲಿಸಬೇಕು. ಜನರೇ ಅವನಿಗೆ ಹೈಕಮಾಂಡ್.
ಒಂದೊಮ್ಮೆ ಅವನು ಜನರ ಆಶೋತ್ತರಗಳನ್ನು ಈಡೇರಿಸಲು ವಿಫಲನಾದರೆ ಐದು ವರ್ಷದ ನಂತರ ಅವನನ್ನು ಬದಲಿಸಿ ಬೇರೊಬ್ಬನನ್ನು ಆರಿಸಲು ಜನರು ತೀರ್ಮಾನಿಸಬೇಕು. ಅವನೂ ವಿಫಲನಾದರೆ ಮುಂದಿನ ಚುನಾವಣೆಯಲ್ಲಿ ಅವನನ್ನೂ ಸೋಲಿಸಿ ಮನೆಗೆ ಕಳಿಸಬೇಕು… ಇದಕ್ಕಾಗಿಯೇ ಪ್ರತೀ ಐದು ವರ್ಷಕ್ಕೊಮ್ಮೆ ಚುನಾವಣೆಗಳನ್ನು ಇಟ್ಟಿರೋದು. ಹೀಗೆ ಜನರು ದುರ್ಬಲರನ್ನು ಅಥವಾ ಗೆದ್ದ ನಂತರ ತಮ್ಮ ಆಶೋತ್ತರಗಳನ್ನು ಈಡೇರಿಸಲು ವಿಫಲರಾಗುವವರನ್ನು ಬದಲಿಸುವ ಮೂಲಕ ನೀಡುವ ಸಂದೇಶವೇನು? ಸಶಕ್ತ, ಜನನಿಷ್ಟ ವ್ಯಕ್ತಿ ಮಾತ್ರ ಜನಸೇವೆಗೆ ಬರಬೇಕು. ಜನಸೇವೆ ಮಾಡಲು ವಿಫಲನಾದರೆ ತನಗೆ ಉಳಿಗಾಲವಿರುವುದಿಲ್ಲ. ಜನರು ತನ್ನನ್ನು ನಿರ್ಲಕ್ಷಿಸುತ್ತಾರೆ ಎಂಬ ಭಯ ಭಕ್ತಿ ನಿಜಕ್ಕೂ ಜನಪ್ರತಿನಿಧಿಗಳಿಗೆ ತನ್ನನ್ನು ಆರಿಸಿದ ಜನರ ಮೇಲೆ ಉಂಟಾಗುತ್ತದೆ. ಅದರಿಂದ ಮಾತ್ರವೇ ಒಳ್ಳೆಯ ಜನನಾಯಕ ಅಥವಾ ಜನಪ್ರತಿನಿಧಿ ಸೃಷ್ಟಿಯಾಗುತ್ತಾರೆ.
ಇದು ಪ್ರಜಾಪ್ರಭುತ್ವದ ನಿಜವಾದ ಮತ್ತು ಪ್ರಾಯೋಗಿಕವಾಗಿ ಗೆಲ್ಲಬಲ್ಲ ಆಶಯ.

ಆದರೆ ಇಂದೇನಾಗಿದೆ? ಪ್ರಜಾಪ್ರಭುತ್ವದ ಶಕ್ತಿ ಮತ್ತು ಅರ್ಥವೇ ಗೊತ್ತಿಲ್ಲದ ಅಡ್ಡಕಸುಬಿ ಜನರಿಂದಾಗಿ ಪುಡಾರಿಗಳೇ ಜನಪ್ರತಿನಿಧಿಗಳಾಗುತ್ತಿದ್ದಾರೆ. ಜಾತಿ ಧರ್ಮಗಳ ಹೆಸರಲ್ಲಿ ಜನರನ್ನು ಮರುಳು ಮಾಡುತ್ತಾ, ಕುಕ್ಕರು, ನಿಕ್ಕರು, ಚಿತ್ರಾನ್ನ ಉಪ್ಪಿಟ್ಟು ರವಿಕೆ ಮೂಗುತಿ ಹೆಂಡ ಬಾಡೂಟಕ್ಕೇ ಜನಮತವನ್ನು ಕೊಂಡುಕೊಂಡು ರಾಜರಂತೆ ಮೆರೆಯುತ್ತಿದ್ದಾರೆ. ಜನರ ಹೆಸರಲ್ಲಿ, ಅಭಿವೃದ್ದಿಯ ಹೆಸರಲ್ಲಿ ದೇಶದ ಸಂಪತ್ತನ್ನು ಕಳ್ಳ ಜನಪ್ರತಿನಿಧಿಗಳೆಲ್ಲಾ ಸೇರಿ ಕೊಳ್ಳೆಹೊಡೆಯುತ್ತಿದ್ದಾರೆ. ಕಳೆದ 74 ವರ್ಷಗಳಿಂದ ನಡೆಯತ್ತಿರೋದೇ ಹೀಗಲ್ಲವೇ? ಇದನ್ನು ಬದಲಿಸಬೇಕಾದವರು ಯಾರು? ಎಂದು ಜನರನ್ನು ಕೇಳಿ ನೋಡಿ. ಅವರು ಹೇಳುತ್ತಾರೆ “ಇದಕ್ಕೆ ಕಾರಣ ರಾಜಕಾರಣಿಗಳು. ಅವರೇ ಇದನ್ನು ಬದಲಿಸಬೇಕು” ಎಂದು!

Photo by © Louise Gubb/CORBIS SABA/Corbis via Getty Images

ಕುರಿಗಳನ್ನು ಕಾಯಲು ತೋಳವನ್ನು ನೇಮಿಸಿ, ಕುರಿಗಳ ಉಳಿವಿಗೆ ತೋಳವೇ ಏನಾದರು ಮಾರ್ಗ ಹುಡುಕಬೇಕು ಎಂಬಂತಿದೆ ಜನರ ಅಭಿಪ್ರಾಯ. ದಡ್ಡ ಜನರಿಗೆ ಜಾತಿ,ಧರ್ಮ ಮತ್ತು ದೇವರ ಅಮಲೇರಿಸಿ ಅವರನ್ನು ಹೊಡೆದಾಟದಲ್ಲಿ ಇರಿಸಿ ಎಲ್ಲಾ ರಾಜಕಾರಣಿಗಳೂ ದೇಶವನ್ನು ಕೊಳ್ಳೆ ಹೊಡೆಯುತ್ತಿರುವುದನ್ನೇ ಮರೆತಿರುವ ಜನರಿಗೆ ಈ ಅಡ್ಡಕಸುಬಿ ರಾಜಕಾರಣಿಗಳ ಪಕ್ಕೆಲುಬು ಮುರಿದು ಮನೆಯಲ್ಲಿ ಕೂರಿಸುವ ಅಸ್ತ್ರ ತಮ್ಮ ಬಳಿಯಲ್ಲಿರುವುದೇ ತಿಳಿದಿಲ್ಲದಿರುವಾಗ ಏನು ಮಾಡುವುದು?

ತಮಗೆ ದೊರೆತಿರುವ ಮತವು ಒಂದು ಮಹಾ ಅಸ್ತ್ರ ಅದನ್ನು ಬಳಸಿ ನಮ್ಮೆಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದೆಂಬ ಅರಿವೇ ಜನರಿಗೆ ಇಲ್ಲ. ಇಂತಹ ಒಂದು ಮತದ ಹಕ್ಕಿಗಾಗಿ ದಕ್ಷಿಣ ಆಫ್ರಿಕಾದ ಜನರು ಮೂವತ್ತು ವರ್ಷಗಳ ಕಾಲ ಹೋರಾಟ ಮಾಡಿದರು. ತನ್ನ ಜನರಿಗೆ ಮತದಾನದ ಹಕ್ಕು ಕೊಡಿಸುವ ಸಲುವಾಗಿ ನೆಲ್ಸನ್ ಮಂಡೇಲಾ ಮೂವತ್ತು ವರ್ಷಗಳ ಕಾಲ ಜೈಲಲ್ಲಿದ್ದರು.
ಭಾರತೀಯರು ಎಂದಾದರೂ ಈ ಮತಾಸ್ತ್ರಕ್ಕಾಗಿ ಸಣ್ಣ ಹೋರಾಟ ಮಾಡಿರುವ ಇತಿಹಾಸವಿದೆಯೇ? ಇಲ್ಲವೇ ಇಲ್ಲ. ಹೋಗಲಿ ಭಾರತೀಯರಿಗೆ ಮತದಾನದ ಹಕ್ಕು ಹೇಗೆ ಬಂತು? ಯಾರಿಂದ ಬಂತು? ಅದರ ಮೌಲ್ಯವೆಷ್ಟು? ಎಂಬ ಜ್ಞಾನವಾದರೂ ಇದೆಯೇ? ಅದೂ ಇಲ್ಲ. ಆದ್ದರಿಂದಲೇ ಭಾರತೀಯರು ಮತ್ತವನ್ನು ಬಿಡಿಗಾಸಿಗೆ ಮಾರಿಕೊಂಡು ತಮ್ಮನ್ನೇ ಬಿಕರಿ ಮಾಡಿಕೊಳ್ಳುತ್ತಿದ್ದಾರೆ!

ನಿಮಗೆ ತಿಳಿದಿರಲಿ ಬ್ರಿಟೀಷರಿಗಿಂತ ಮೊದಲು ರಾಜಪ್ರಭುತ್ವವಿತ್ತು. ಅಲ್ಲಿ ಜನರಿಗೆ ರಾಜಾಜ್ಞೆಯೇ ಅಂತಿಮ. ರಾಣಿಯ ಹೊಟ್ಟೆಯಲ್ಲಿ ಹುಟ್ಟಿದ ಕುರುಡನೋ, ಕುಂಟನೋ, ಹೆಳವನೊ, ಅಜ್ಞಾನಿಯೋ, ಅನಾಚಾರಿಯೋ ಒಟ್ಟಿನಲ್ಲಿ ಅವನೇ ಮುಂದಿನ ರಾಜ ಅಷ್ಟೆ. ಇದರಲ್ಲಿ ಜನರ ಅಭಿಪ್ರಾಯ ಎಂತದೂ ಇರಲಿಲ್ಲ. ಸ್ವಾತಂತ್ರ್ಯಕ್ಕೂ ಮುನ್ನ ಬ್ರಿಟೀಷರ ಆಳ್ವಿಕೆಯಲ್ಲಿ ಜನರಿಗೆ ತಕ್ಕಮಟ್ಟಿಗೆ ಪ್ರಾತಿನಿದ್ಯ ದೊರೆಯಿತು. ಒಂದು ಶಾಸನಬದ್ದ ಅಧಿಕಾರದಲ್ಲಿ ಜನರಿಗೂ ಪಾಲು ದೊರೆಯಿತು. ಆನಂತರ, ಪ್ರಜಾಪ್ರತಿನಿಧಿ ಸಭೆಗಳು ಜಾರಿಗೆ ಬಂದವು. ಆಗ ಮತದಾನ ಮಾಡುವ ಹಕ್ಕು ಬಂದುದು ಪದವೀಧರರಿಗೆ ಮತ್ತು ಸರ್ಕಾರಕ್ಕೆ ಆಸ್ತಿತೆರಿಗೆ ಕಟ್ಟುತ್ತಿದ್ದವರಿಗೆ ಮಾತ್ರ! ಅಂದರೆ ಆಗಿನ ಕಾಲಕ್ಕೆ ಪದವೀದರರು ಅಥವಾ ಆಸ್ತಿತೆರಿಗೆ ಪಾವತಿದಾರರು ಯಾರಾಗಿದ್ದರು? ಕೇವಲ ಬ್ರಾಹ್ಮಣರಾಗಿದ್ದರು! ಅವರ ಮಾತ್ರವೇ ಶಿಕ್ಷಣ ಪಡೆವ ಆಸ್ತಿ ಹೊಂದುವ ಹಕ್ಕುಳ್ಳವರಾಗಿದ್ದರಿಂದ ಕೇವಲ ಅವರಿಗೆ ಮಾತ್ರವೇ ಮತದಾನದ ಹಕ್ಕಿತ್ತು ಮತ್ತು ಅವರೇ ಜನಪ್ರತಿಧಿಗಳೂ ಆಗಿರುತ್ತಿದ್ದರು.
ಮಾರ್ಲೆ ಮಿಂಟೋ ಸುಧಾರಣೆಗಳನ್ನು ಬ್ರಿಟಿಷರೇ ತಂದವರು. ಇದರಂತೆ ಇತರೆ ಜನಸಮುದಾಯದಿಂದಲೂ ಸರ್ಕಾರ ಒಬ್ಬೊಬ್ವರು ಪ್ರತಿನಿಧಿಗಳನ್ನು ಶಾಸನಸಭೆಗೆ ನೇಮಕ ಮಾಡಿಕೊಳ್ಳುವ ಮನಸು ಮಾಡಿತು. ಆದರೆ ಇದನ್ನೂ ಮೀರಿ ಪ್ರತಿಯೊಬ್ಬ ಪ್ರಜೆಗೂ “ವಯಸ್ಕ ಮತದಾನ” ತರಬೇಕೆಂದು ಭಾರತದಲ್ಲಿ ಆ ಕಾಲಕ್ಕೆ ಅತಿಹೆಚ್ಚು ಪದವಿಗಳಿಸಿದ್ದ ಅಸ್ಪೃಶ್ಯ ಸಮುದಾಯದ ತರುಣನೊಬ್ಬ ಬ್ರಿಟೀಷ್ ಸರ್ಕಾರದ “ಸೈಮನ್ ಕಮೀಷನ್” ಮುಂದೆ ಹಕ್ಕೋತ್ತಾಯ ಪಡಿಸಿದನು! ಈ ತರುಣನ ಹಕ್ಕೊತ್ತಾಯ ನೋಡಿ ಬ್ರಿಟೀಷರು ಬೆರೆಗಾದರೇ, ಭಾರತದ ಅಂದಿನ ಸ್ವಾತಂತ್ರ್ಯ ಹೋರಾಟದ ಮಹಾನಾಯಕರುಗಳು ಬೆಚ್ಚಿಬಿದ್ದರು! ಆದರೆ ಆ ತರುಣನ ಹಕ್ಕೊತ್ತಾಯವನ್ನು ಬ್ರಿಟೀಷರು ಆಧ್ಯತೆಯಾಗಿ ಪರಿಗಣಿಸಿದರು. ಅದಕ್ಕಾಗಿ ಲಂಡನ್ ನಲ್ಲಿ ನಡೆದ ಐತಿಹಾಸಿಕ ದುಂಡುಮೇಜಿನ ಸಭೆಗೆ ಆ ತರುಣನನ್ನೂ ಆಹ್ವಾನಿಸಿದರು. ಅಲ್ಲಿಯೂ ಆ ಪ್ರಖಂಡ ಪಂಡಿತನಾಗಿದ್ದ ತರುಣ ವಯಸ್ಕ ಮತದಾನ ಪದ್ದತಿಯ ಮಹತ್ವವನ್ನು ಎಳೆಎಳೆಯಾಗಿ ಬಿಡಿಸಿಟ್ಟನು. ಆದರೆ ಭಾರತದ ಮಹಾನಾಯಕರು ತಮ್ಮ ಜನರಿಗೆ ಮತದಾನದ ಹಕ್ಕಿನ ಅಗತ್ಯವಿಲ್ಲ. ಅದರಲ್ಲೂ ಕೆಳಜಾತಿಗಳು, ಮಹಿಳೆಯರು ಮತ್ತು ಅನಕ್ಷರಸ್ತರಿಗೆ ಮತದಾನದ ಹಕ್ಕುಕೊಡುವುದೇ ವ್ಯರ್ಥ ಎಂದು ವಾದಿಸಿದರು. ಆದರೆ ನವತರುಣ ಮಾತ್ರ ಅಕ್ಷರಕ್ಕೂ ಜ್ಞಾನಕ್ಕೂ ಸಂಬಂಧವಿಲ್ಲ. ಅನಕ್ಷರಸ್ತರಿಗೂ ಅಗಾಧವಾದ ಜ್ಞಾನವಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಮತವು ಪ್ರಜೆಗಳ ಕೈಲಿರುವ ಪ್ರಬಲ ಅಸ್ತ್ರವಾಗಿದೆ. ಅದರಿಂದ ಮಾತ್ರವೇ ಜನರು ತಮ್ಮ ಹಕ್ಕು ಅಧಿಕಾರದಲ್ಲಿ ಪಾಲುಗೊಳ್ಳಲು ಸಾಧ್ಯ ಎಂದು ತಮ್ಮ ಪ್ರಬುದ್ಧ ವಾದ ಮಂಡಿಸಿದನು. ಈ ತರುಣನ ವಾದಕ್ಕೆ ಮನಸೋತ ಬ್ರಿಟೀಷ್ ಸರ್ಕಾರ “೨೧ ವರ್ಷ ತುಂಬಿದ ಭಾರತದ ಎಲ್ಲಾ ಪ್ರಜೆಗಳಿಗೂ ವಯಸ್ಕ ಮತದಾನ ಪದ್ದತಿ” ಜಾರಿಗೊಳಿಸಿದರು! ಇದು ಮತದಾನವು ಭಾರತೀಯರಿಗೆ ದೊರಕಿದ ಬಗೆ.

ಲಂಡನ್ನಿನ ದುಂಡುಮೇಜಿ ಸಭೆಯಲ್ಲಿ ಬಾಬಾ ಸಾಹೇಬ ಡಾ. ಬಿ.ಆರ್‌.ಅಂಬೇಡ್ಕರ್‌ (ಚಿತ್ರದಲ್ಲಿ ಮೋಹನದಾಸ್‌ ಕರಮಚಂದ್ರ ಗಾಂಧಿಯವರನ್ನೂ ಕಾಣಬಹುದು)

ಭಾರತೀಯರೆಲ್ಲರಿಗೆ ಮತದಾನ ತಂದುಕೊಟ್ಟ ಆ ತರುಣ ಡಾ.ಬಿ.ಆರ್.ಅಂಬೇಡ್ಕರ್ ಎಂಬುದನ್ನು ಇತಿಹಾಸವು ಸಾರಿ ಹೇಳುತ್ತದೆ. ಡಾ.ಅಂಬೇಡ್ಕರ್ ಈ ಮತದಾನದ ಹಕ್ಕು ತಂದುಕೊಟ್ಟು ಹೇಳುತ್ತಾರೆ, “ಈ ಮತ ಎರಡು ಅಲಗಿನ ಖಡ್ಗ. ಇದನ್ನು ಎಚ್ಚರಿಕೆಯಿಂದ ಬಳಸಿ, ನಿಮಗಿರುವ ಎಲ್ಲಾ ಅಸಮಾನತೆಗಳನ್ನು ಕೊನೆಗೊಳಿಸಿಕೊಳ್ಳಿ. ಮತವನ್ನು ನಿಮ್ಮ ತಾಯಿ, ಸೋದರಿ, ಮಡದಿ ಎಂದು ಭಾವಿಸಿ. ಎಂದಿಗೂ ಮಾರಾಟ ಮಾಡಬೇಡಿ. ಈ ಮತದಿಂದಲೇ ನಿಮ್ಮೆಲ್ಲರ ಸಂಕಷ್ಟಗಳನ್ನೂ ಪರಿಹರಿಸಿಕೊಳ್ಳಬಹುದು” ಎಂದು ಕರೆನೀಡಿದರು.

ಆದರೆ ನಾವೇನು ಮಾಡುತ್ತಿದ್ದೇವೆ? ಪುಡಿಗಾಸಿಗೆ ಮಾರಿಕೊಂಡು ನಮ್ಮ ಬದುಕನ್ನೇ ಸರ್ವನಾಶ ಮಾಡಿಕೊಂಡು ಬೀದಿಗೆ ಬಿದ್ದಿದ್ದೇವೆ. ಯಾರಾದರೂ ತಮ್ಮ ತಾಯಿ, ಸೋದರಿ, ಮಡದಿಯನ್ನು ಮಾರಿಕೊಳ್ಳುವಿರೇ!?
ಯೋಚನೆ ಮಾಡಿ… ಇಂತಹ ದುಷ್ಟ ಭ್ರಷ್ಟ ಸರ್ಕಾರಗಳು ಯಾರಿಂದ ಬಂದವು ಎಂಬುದನ್ನು ವಿಶ್ಲೇಷಣೆ ಮಾಡಿಕೊಳ್ಳಿ. ಮುಂದೆ ಏನು ಮಾಡಬಹುದು ನೋಡಿ…
-ಡಾ.ಚಮರಂ
(ಲೇಖಕರು: ಅಂಬೇಡ್ಕರ್ ವಾದಿ ಬಹುಜನ ಚಿಂತಕರು, ಮೈಸೂರು)

Leave a Reply

Your email address will not be published. Required fields are marked *