ಎಡಿಟರ್‌ ಕಾರ್ನರ್:‌ ವಿ.ಆರ್.ಕಾರ್ಪೆಂಟರ್

ವಿವಾದಗಳು ಅನ್ನೋದು ದರ್ಶನ್ ಅವರನ್ನೇ ಯಾಕೆ ಹುಡುಕಿಕೊಂಡು ಬರ್ತವೆ? ಅಥವಾ ವಿವಾದಗಳು ಆಗಲಿ ಎಂದೇ ದರ್ಶನ್ ಬಯಸುತ್ತಾರ? ಇಂಥ ಅನೇಕ ಪ್ರಶ್ನೆಗಳ ಸುತ್ತಾ ದರ್ಶನ್ ಅವರ ವ್ಯಕ್ತಿತ್ವ ರಾಜ್ಯದಲ್ಲಿ ಅನಾವರಣವಾಗುತ್ತಲಿದೆ.
ರವಿಬೆಳೆಗೆರೆ ವರ್ಸಸ್ ದರ್ಶನ್, ಸುದೀಪ್ ವರ್ಸಸ್ ದರ್ಶನ್, ಜಗ್ಗೇಶ್ ವರ್ಸಸ್ ದರ್ಶನ್, ಯಶ್ ವರ್ಸಸ್ ದರ್ಶನ್, ಮಾರಿಕೊಂಡ ಕನ್ನಡದ ಫ್ಯೂಡಲ್ ಮೀಡಿಯಾ ವರ್ಸಸ್ ದರ್ಶನ್ ಎಂಬ ಅನೇಕ ಎಪಿಸೋಡ್ಗಳಿಗೆ ಇತ್ತೀಚಿನ ಹೊಸ ಸೇರ್ಪಡೆಗಳೆಂದರೆ, ಪುನೀತ್ ವರ್ಸ್ ದರ್ಶನ್ ಮತ್ತು ಫಾರೆಸ್ಟ್ ಡಿಪಾರ್ಟ್ಮೆಂಟ್ ವರ್ಸಸ್ ದರ್ಶನ್… ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ… ಸೋಶಿಯಲ್ ಮಿಡಿಯಾಗಳಲ್ಲಿ ಫ್ಯಾನ್ಸ್ವಾರ್ ಅಂತೂ ಅಬ್ಬರಿಸಿ ಬೊಬ್ಬರಿಯುತ್ತಲಿದೆ.
ಅಸಲಿಗೆ ದರ್ಶನ್ ಇಂಥ ಸಮಸ್ಯೆಗಳನ್ನು ಯಾಕೆ ಮಾಡಿಕೊಳ್ಳುತ್ತಾರೆ? ನೀನಾಸಂನಲ್ಲಿ ಓದಿದ ಪ್ರತಿಭಾವಂತ ನಟ, ಹೆಸರಾಂತ ನಟನ ಮಗನಾಗಿದ್ದರೂ, ಸಾಮಾನ್ಯ ಲೈಟ್ ಬಾಯ್ ಆಗಿ ಕಷ್ಟಪಟ್ಟು ಮುಂದೆ ಬಂದು ದೊಡ್ಡ ಕಟೌಟ್ ಆಗಿ ಬೆಳೆದು ನಿಂತು, ಇಂಥ ಸಮಸ್ಯೆಗಳಿಗೆ ಎದೆಕೊಟ್ಟು ನಿಲ್ಲುವುದು ಸಾಮಾನ್ಯದ ಸಂಗತಿಯಲ್ಲ. ಇಲ್ಲಿ ಎಂಥೆಂತ ಘಟಾನುಘಟಿಗಳಿದ್ದರು, ಇದ್ದಾರೆ ಎಂದರೆ ದರ್ಶನ್ ಥರದ ಮನುವಾದಿಯಲ್ಲದ ಕಲಾವಿದರನ್ನು ತುಳಿಯಲು ಸದಾಕಾಲ ಹಾತೊರೆಯುತ್ತಿರುತ್ತಾರೆ.‌ ಇದು ಕನ್ನಡ ಹೆಮ್ಮೆಯ ಡಾ. ರಾಜ್‌ಕುಮಾರ್‌ ಅವರ ಕಾಲದಿಂದಲೂ ನಡೆದುಕೊಂಡು ಬಂದಿರುವ ವಿಷಯ.

ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್‌ ಮಾಡಿ

ಕುಟುಂಬವೆಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತವೆ. ಹಾಗೆಂದು ಹೆಂಡತಿಯನ್ನು ಅಮಾನುಷವಾಗಿ ತಳಿಸುವುದನ್ನು ಸರಿಯೆಂದು ಒಪ್ಪಿಕೊಳ್ಳಲು ಆಗುವುದಿಲ್ಲ. ಯಾವುದೋ ಕೆಟ್ಟ ಗಳಿಗೆ, ಆಗಿಹೋಯ್ತು… ಅದಕ್ಕಾಗಿ ದರ್ಶನ್ ಜೈಲಿಗೆ ಹೋಗಿ ಬಂದಾಯ್ತು. ಆದರೆ, ʼಏಡ್ಸ್ʼ ಪತ್ರಕರ್ತನೆಂದೇ ಲಂಕೇಶ್ ಅವರಿಂದ ಉಗಿಸಿಕೊಂಡಿದ್ದ ರವಿ ಬೆಳಗೆರೆ ಎಂಬ ಥರ್ಡ್ ರೇಟೇಡ್ ಪತ್ರಕರ್ತ ದರ್ಶನ್ ಅವರ ಬಗ್ಗೆ ಇಲ್ಲಸಲ್ಲದ್ದನ್ನು ತನ್ನ ಕಪ್ಪುಬಿಳುಪು ಪತ್ರಿಕೆಯಲ್ಲಿ ಬರೆದು ಕಾರಿಕೊಂಡಿದ್ದಾಯ್ತು. ಅದಾದ ನಂತರ ದುನಿಯಾ ವಿಜಯ್ ಅವರ ʼಭೀಮಾ ತೀರದ ಹಂತಕರುʼ ಚಿತ್ರದ ಕಥೆಯ ಬಗ್ಗೆ ವಿವಾದವೆದ್ದಾಗ, ದರ್ಶನ್ ನೇರವಾಗಿಯೇ ರವಿಬೆಳೆಗೆರೆ ವಿರುದ್ಧ, ದುನಿಯಾ ವಿಜಯ ಪರವಾಗಿ ದನಿಯೆತ್ತಿದರು ನೋಡಿ, ಅಲ್ಲಿಂದ ಶುರುವಾಯಿತು… ಈ ಮನುವಾದಿ ಪತ್ರಕರ್ತರ ಕಾಟ…
ಯಾವುದೋ ಸಂದರ್ಭದಲ್ಲಿ ದರ್ಶನ್ ಏನೋ ಒಂದು ಆಡಿದ ಮಾತನ್ನು ಸುದೀಪ್ ವಿರುದ್ಧವೋ? ಜಗ್ಗೇಶ್ ವಿರುದ್ಧವೋ? ಯಶ್, ಪುನೀತ್ ರಾಜ್ಕುಮಾರ್ ವಿರುದ್ಧವೋ ಎತ್ತಿಕಟ್ಟಿ, ಶೂದ್ರ ನಟರನ್ನು, ಅವರ ಫ್ಯಾನ್ಸ್ಗಳನ್ನು ಬರೀ ಜಗಳಲ್ಲೇ ಕಾಲ ಕಳೆಯುವಂತೆ ಮಾಡುವ ಹುನ್ನಾರವನ್ನು ಈ ನೆಲ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ, ದರ್ಶನ್ ಅವರ ಬಿಡುಬೀಸು ಹೇಳಿಕೆಗಳನ್ನು ಮೇಲ್ಜಾತಿಯ ಯಾವುದೇ ನಟರ ಮೇಲೆ ಎತ್ತಿಕಟ್ಟದೆ, ಕೇವಲ ಶೂದ್ರ ನಟರ ವಿರುದ್ಧವೇ ಎತ್ತಿಕಟ್ಟಿ ಆಟ ನೋಡುವ ಮನುವಾದಿಗಳ ಕುತಂತ್ರ ಅರ್ಥವಾಗದೇ ಹೋದರೆ, ನಾವು ವಿದ್ಯೆ ಕಲಿತು ವ್ಯರ್ಥ!
ಈ ಶೂದ್ರ ನಟರ ಫ್ಯಾನ್ಸ್ಗಳು ಒಬ್ಬರಿಗೊಬ್ಬರು ಕತ್ತಿಮಸೆಯುತ್ತಾ, ಬೀದಿಯಲ್ಲಿ ರಕ್ತಚೆಲ್ಲಿಕೊಳ್ಳುವಂತೆ ಮಾಡಿದ ಹುನ್ನಾರಗಳು ವಿಫಲವಾಗುತ್ತಾ ಬಂದಂತೆ, ಕಂಗೆಟ್ಟ ಮನುವಾದಿಗಳು ಕಡೆಗೆ ದರ್ಶನ್ ಅವರ ವಿರುದ್ಧ ಮೀಡೀಯ ಬಾಯ್ಕಾಟ್ ಮಾಡುವ ಕೆಳಮಟ್ಟಕ್ಕೆ ಇಳಿದುಬಿಟ್ಟವು. ಬಾಯ್ಕಾಟ್ ಅಥವಾ ಬಹಿಷ್ಕಾರ ಅನ್ನೋದು ಹೀನ ಜಾತಿಪದ್ಧತಿಯ ಒಂದು ವಿಭಾಗ. ತನಗಾಗದವರನ್ನು ಜಾತಿ ಶ್ರೇಣೀಕರಣದಲ್ಲಿ ದೂರವಿಡುವುದು, ಅವರನ್ನು ಬಹಿಷ್ಕಾರ ಹಾಕವುದು ಇಂದಿಗೂ ನಡೆದುಬರುತ್ತಿದೆ ಎಂದರೆ, ಇಂದು ಮನುವಾದ ಎಂಬುದು ಎಷ್ಟು ಗಟ್ಟಿಯಾಗಿದೆ ಎಂಬುದರ ಕುರುಹಾಗಿದೆ.
ದರ್ಶನ್ ಅವರ ಕ್ರಾಂತಿ ಸಿನಿಮಾ ಇಂದು ಬಿಡುಗಡೆಯಾಗಿದೆ. ಕುಸಿಯುತ್ತಿರುವ ಶಾಲೆಯನ್ನು ಉಳಿಸಿಕೊಳ್ಳಲು ಒದ್ದಾಡುವ ವ್ಯಕ್ತಿಯೊಬ್ಬನ ಕಥಾ ಹಂದರ ಇರುವ ಕ್ರಾಂತಿ ಸಿನಿಮಾ, ಜನರ ಮನಸ್ಸಿಗೆ ಇಳಿದುಬಿಟ್ಟರೆ, ಶಿಕ್ಷಣ ಮಾಫಿಯಾಗೆ ದೊಡ್ಡ ಪೆಟ್ಟನ್ನೇ ಕೊಡಬಹುದು. ಹೀಗಿರುವಾಗ, ದರ್ಶನ್ ಅವರನ್ನು ಹೀಗೆ ಅನಗತ್ಯವಾದ ವಿವಾದದಲ್ಲಿ ಸಿಲುಕಿಸುವ ಹುನ್ನಾರದ ಹಿಂದೆ ಈ ಮಾಫಿಯಾಗಳೂ ಕೆಲಸ ಮಾಡಿರಬಹುದು ಎಂದು ಊಹಿಸಬಹುದು. ಯಾಕೆಂದರೆ, ಕಳೆದ ಎರಡು ವರ್ಷಗಳ ಹಿಂದೆ ಯಜಮಾನ ಸಿನಿಮಾ ಮೂಲಕ ಅಡುಗೆ ಎಣ್ಣೆ ಮಾಫಿಯಾ ವಿರುದ್ಧದ ಕಂಟೆಂಟ್ ಇರುವ ಸಿನಿಮಾ ಮಾಡಿ ಜನರ ಗಮನ ಸೆಳೆದಿದ್ದರು. ಅದರ ಪ್ರಚಾರದ ಭಾಷಣದಲ್ಲಿ ಒಮ್ಮೆ ಅಂಬಾನಿಯ ಓಟಿಟಿ ಮಾಫಿಯಾ ವಿರುದ್ಧವೂ ದನಿ ಎತ್ತಿದ್ದರು ದರ್ಶನ್. ಇಂಥ ರೆಬಲ್ ದರ್ಶನ್ ಅವರನ್ನು ಸೈದ್ಧಾಂತಿಕವಾಗಿ, ಪ್ರತಿಭೆಯ ಮೂಲಕ ಗೆಲ್ಲಲು ಸಾಧ್ಯವಾಗದ ಕುತಂತ್ರಿಗಳು ದರ್ಶನ್ ಎಂಬ ಅಪರೂಪದ ಹೀರೋನನ್ನು ವಿಲನ್ ಮಾಡಲು ಹಗಲಿರುಳು ಕುತಂತ್ರದ ಶ್ರಮ ಪಡುತ್ತಿದ್ದಾರೆ!

ಅವರೆಲ್ಲರ ಆತ್ಮಕ್ಕೆ ಆಮೇನ್ ಹೇಳುತ್ತಾ, ಕ್ರಾಂತಿ ಚಿರಾಯುವಾಗಲಿ ಎಂದು ಆಶಿಸೋಣ…

Leave a Reply

Your email address will not be published. Required fields are marked *