ಜನವರಿ 26, 1950ರಲ್ಲಿ ಏನಾಯ್ತು? ಅಂದಿನಿಂದ ಸ್ವತಂತ್ರ ಭಾರತವು ಆಡಳಿತದಲ್ಲಿ ತನ್ನದೇ ಸಂವಿಧಾನವನ್ನು ಅಳವಡಿಸಿಕೊಂಡಿತು. ಅಂದರೆ 1949 ನವೆಂಬರ್ 26 ರಲ್ಲಿ ಬಾಬು ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯ ಸಂವಿಧಾನ ರಚನಾ ಸಭೆಯು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ 2 ವರ್ಷ 11 ತಿಂಗಳು, 18 ದಿನಗಳಲ್ಲಿ ರಚನೆಯಾಗಿ ಸಂಸತ್ತಿನಲ್ಲಿ ಹಲವು ಸುತ್ತಿನ ಚರ್ಚೆಗಳಲ್ಲಿ ಸರ್ವಾನುಮತದಿಂದ ಅಂಗೀಕರಿಸಿದ ಬೃಹತ್ ಲಿಖಿತ ಸಂವಿಧಾನವನ್ನು ಒಪ್ಪಿಕೊಂಡ ದಿನ. ಹೀಗಿರುವಾಗ ಪ್ರತೀ ವರ್ಷದ ಜನವರಿ 26ನೇ ದಿನವನ್ನು ಗಣರಾಜ್ಯ ದಿನವೆಂದು ಏಕೆ ಆಚರಿಸಿಕೊಂಡು ಬರಲಾಗುತ್ತಿದೆ? ಅದನ್ನು ಸಂವಿಧಾನ ಜಾರಿಗೊಂಡ ದಿನಾಚರಣೆಯಾಗಿ ತಾನೆ ಆಚರಿಸಬೇಕು? ಏನಿದರ ಮರ್ಮ? ಬನ್ನಿ ಅದರ ಕುರಿತೇ ತಿಳಿಯೋಣ
ಗಣರಾಜ್ಯವೆಂದರೆ ರಾಜ್ಯಗಳ ಪುನರ್ ವಿಂಗಡನೆ. ಅಂದರೆ ಬ್ರಿಟೀಷ್ ಗೌರ್ನಮೆಂಟ್ ತನ್ನ ಆಡಳಿತದಲ್ಲಿ ದೇಶವನ್ನು ಪ್ರಾಂತ್ಯಗಳಾಗಿ ಕೆಲವನ್ನು ವಿಂಗಡಿಸಿತ್ತು. ಕೆಲವು ರಾಜಪ್ರಭುತ್ವಗಳಿದ್ದವು. ಭಾಷಾವಾರು ರಾಜ್ಯಗಳೆಂಬ ವಿಭಜನೆ ಇರಲಿಲ್ಲ. ಉದಾಹರಣೆಗೆ ಮದ್ರಾಸ್ ಪ್ರಾಂತ್ಯ ಎಂದರೆ, ತಮಿಳು, ತೆಲುಗು, ಸ್ವಲ್ಪಕನ್ನಡ, ಸ್ವಲ್ಪ ಮಲಯಾಳಂ ಭಾಷಿಗರೆಲ್ಲರೂ ಇದ್ದರು.
ರಾಜಪ್ರಭುತ್ವದ ಪ್ರಾಂತ್ಯಗಳೆಂದರೆ, ಮೈಸೂರು, ತಿರುವಾಂಕೂರು ಇತ್ಯಾದಿಗಳಿದ್ದವು. ಸ್ವಾತಂತ್ರ್ಯ ಏಕಕಾಲಕ್ಕೆ ಎಲ್ಲವೂ ರಾಜ್ಯಗಳಾಗಿ ಬದಲಾಗಲಿಲ್ಲ. ರಾಜ್ಯಗಳ ಪುನರ್ ವಿಂಗಡೆನೆ ಮಾಡಬೇಕು ಎಂದು ಕೇಂದ್ರ ಸರ್ಕಾರವು ಚರ್ಚೆ ಮಾಡಿ ಅದಕ್ಕಾಗಿ ಧಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುತ್ತದೆ. ಬಾಬಾಸಾಹೇಬರು ರಾಜ್ಯಗಳನ್ನು ಪುನರ್ ವಿಂಗಡಿಸುವಾಗ ಭಾಷಾವಾರು ರಾಜ್ಯಗಳಾಗಿ ವಿಂಗಡಿಸುವಂತೆ ಸರ್ಕಾರ ರಚಿಸಿದ್ದ ಧಾರ್ ಸಮಿತಿಗೆ ತಮ್ಮ ಮನವಿ ನೀಡುತ್ತಾರೆ. ಆದರೆ ಗುಜರಾತಿನ ಕೆ.ಎಂ.ಮುನ್ಷಿ ಮತ್ತಿತರರು ಇದನ್ನು ವಿರೋಧಿಸುತ್ತಾರೆ. ಕೆಲವರು ಜಾತಿ ಆಧಾರದಲ್ಲಿ, ಧರ್ಮದ ಆಧಾರದಲ್ಲಿ ರಾಜ್ಯಗಳನ್ನು ವಿಂಗಡಿಸುವ ಸಲಹೆ ನೀಡುತ್ತಾರೆ. ಆದರೆ ಧಾರ್ ಸಮಿತಿ ಭಾಷೆಗಳ ಆಧಾರದಲ್ಲೇ ರಾಜ್ಯಗಳನ್ನು ಗುರ್ತಿಸುವುದೇ ಸರಿಯಾದ ಕ್ರಮ ಎಂದು ತನ್ನ ವರದಿ ನೀಡುತ್ತದೆ. ಈ ನಡುವೆ, ತೆಲುಗು ರಾಜ್ಯಕ್ಕಾಗಿ ಅಮರಣಾಂತ ಉಪವಾಸ ಕೈಗೊಂಡಿದ್ದ ಹೋರಾಟಗಾರ ಪೊಟ್ಟಿ ಶ್ರೀರಾಮುಲು ಡಿಸೆಂಬರ್ 6, 1952ರಲ್ಲಿ ಮರಣ ಹೊಂದುತ್ತಾರೆ. ಇದರಿಂದ ಜನರು ರೊಚ್ವಿಗೆದ್ದ ಪರಿಣಾಮ ಆಂದ್ರಪ್ರದೇಶ ರಚನೆಗೆ ನೆಹರು ಸರ್ಕಾರ ಒಪ್ಪಿಗೆ ನೀಡುತ್ತದೆ. ಇದು ಇತರೆ ಭಾಷಿಕರೂ ತಮ್ಮ ಪ್ರತ್ಯೇಕ ರಾಜ್ಯಗಳ ಹೋರಾಟವನ್ನು ತೀವ್ರಗೊಳಿಸುತ್ತಾರೆ.
ಭಾಷಾವಾರು ರಾಜ್ಯಗಳ ರಚನೆಯ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ, ಗಡಿಗಳನ್ನು ಗುರ್ತಿಸಿ ಪುನರ್ ವಿಂಗಡನೆ ಮಾಡಲು ಮತ್ತೊಂದು ಸಮಿತಿಯನ್ನು ನೆಹರು ಸರ್ಕಾರ ರಚಿಸುತ್ತದೆ. ಅದುವೇ ಫಜಲ್ ಆಲಿ ಸಮಿತಿ. ಈ ಸಮಿತಿಯಲ್ಲಿ ಫಜಲ್ ಆಲಿ ಅಧ್ಯಕ್ಷತೆಯಲ್ಲಿ ಎಂ.ಪಣಿಕ್ಕರ್, ಎಚ್.ಎನ್.ಕುಂಜ್ರು ಇರುತ್ತಾರೆ. ಇವರು ಅಧ್ಯಯನ ಮಾಡಿದ ತಮ್ಮ ರಿಪೋರ್ಟ್ ಅನ್ನು ಸೆಪ್ಟಂಬರ್ 30, 1955 ರಲ್ಲಿ ಸಲ್ಲಿಸುತ್ತಾರೆ. ಇದುವೇ SRC Report (State reorganization committee report) ಅದರಂತೆ 14 ರಾಜ್ಯಗಳು ಮತ್ತು 6 ಕೇಂದಾಡಳಿತ ಪ್ರದೇಶಗಳಾಗಿ ಭಾಷಾವಾರು ಪ್ರಾಂತ್ಯಗಳನ್ನು ಶಿಫಾರಸು ಮಾಡುತ್ತಾರೆ. ಈ ವರದಿಗೆ ಇನ್ನೊಂದಷ್ಟು ತಿದ್ದುಪಡಿಗಳನ್ನು ಸೇರಿಸಿ ನೆಹರು ನೇತೃತ್ವದ ಸರ್ಕಾರ ನವೆಂಬರ್ 1956 ರಂದು ಭಾಷಾವಾರು ರಾಜ್ಯಗಳನ್ನು ಘೋಷಿಸುತ್ತದೆ. ಇದು ರಾಜ್ಯಗಳ ಪುನರ್ ವಿಂಗಡನೆಯಾದ ದಿನ. ಅಂದರೆ ಇದು “ಗಣರಾಜ್ಯ ದಿನ” ಆಗಬೇಕಿತ್ತಲ್ಲವೇ?
ಯಾಕೆ ಈ ದಿನವು ಚರಿತ್ರೆಯಲ್ಲಿ ಮರೆಯಾಗಿ ಜನವರಿ, 26 ಗಣರಾಜ್ಯ ದಿನವಾಯ್ತು!?
ಇದು ಇತಿಹಾಸದ ಹುನ್ನಾರ. ಜನವರಿ 26ನ್ನು ಸಂವಿಧಾನ ಜಾರಿಯ ದಿನವಾಗಿ ಆಚರಿಸಿದರೆ ಜನರಿಗೆ ಸಂವಿಧಾನದ ವಿಷಯವು ಕಾಲಕ್ರಮೇಣ ತಿಳಿಯುತ್ತದೆ. ಅಂದು ಸಂವಿಧಾನದ ಕುರಿತು ಮಾತಾಡಬೇಕಾಗುತ್ತದೆ. ಸಂವಿಧಾನದ ಕುರಿತು ಮಾತಾಡಿದರೆ ಜನರ ಹಕ್ಕು ಅಧಿಕಾರಗಳ ಕುರಿತು ಮಾತಾಡಬೇಕಾಗುತ್ತದೆ. ಅಲ್ಲಿ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವದ ವಿಷಯಗಳು ಚರ್ಚಿಸಲ್ಪಡುತ್ತವೆ. ಆಗ ಜನರು ತಮ್ಮ ಹಕ್ಕು ಅಧಿಕಾರಗಳ ಕುರಿತು ಜಾಗೃತರಾಗುತ್ತಾರೆ. ಅದರಿಂದ ನಮ್ಮ ಅಧಿಕಾರ ಮತ್ತು ಅಧಿಪತ್ಯಕ್ಕೆ ಧಕ್ಕೆ ಬರುತ್ತದೆ ಎಂಬುದನ್ನು ಆಲೋಚಿಸಿಯೇ ಪಟ್ಟಭದ್ರ ಹಿತಾಸಕ್ತಿಗಳು, ಮನುವಾದಿಗಳು, ಅಧಿಕಾರಶಾಹಿ ಇದನ್ನು ಬಹಳ ವ್ಯವಸ್ಥಿತವಾಗಿ ಮರೆಮಾಚುವ ಹುನ್ನಾರದಿಂದಲೇ ಜನವರಿ 26ನ್ನು ಗಣರಾಜ್ಯ ದಿನವೆಂದು ಆಚರಿಸುತ್ತಾ ದೆಹಲಿಯಲ್ಲಿ ಸುಂದರವಾಗಿ ಪೆರೇಡ್ ಮಾಡಿಸುತ್ತಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮರೆಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಆಗಸ್ಟ್ 15ನೇ ದಿನ ಮತ್ತು ಸ್ವತಂತ್ರ ದೇಶವು ತನ್ನದೇ ಆಡಳಿತದ ಕೀಲಿಕೈ ಸಂವಿಧಾನವನ್ನು ಅಳವಡಿಸಿಕೊಂಡ ಜನವರಿ 26ನೇ ಸಂವಿಧಾನ ದಿನವನ್ನು ರಾಷ್ಟ್ರೀಯ ಹಬ್ಬವಾಗಿ ರಾಷ್ಟ್ರದ ಪ್ರತಿಯೊಬ್ಬರೂ, ಪ್ರತಿಯೊಂದು ಸಂಸ್ಥೆಯೂ ವಿವಿಧ ಚರ್ಚೆ, ವಿಚಾರ ಸಂಕಿರಣ, ಆವಿಷ್ಕಾರಗಳ ಕುರಿತಂತೆ ದಿನವಿಡೀ ಕಾರ್ಯಕ್ರಮ ಹಮ್ಮಿಕೊಂಡು ಜನಸಾಮಾನ್ಯರಲ್ಲಿ ಜಾಗೃತಿ ಉಂಟುಮಾಡಬೇಕಿತ್ತಲ್ಲವೇ? ಹೀಗಾಗಿದ್ದರೆ ಜನಸಾಮಾನ್ಯರೂ ತಮ್ಮ ಸ್ವಾತಂತ್ರ್ಯದ ಮಹತ್ವ, ದೇಶಪ್ರೇಮದ ಮಹತ್ವ, ಸಮಾನತೆ, ಸಹಬಾಳ್ವೆಗಳ ಮಹತ್ವವನ್ನು ಅರಿಯುತ್ತಿದ್ದರು. ನಾಗರೀಕ ಪ್ರಜ್ಞೆ ಜಾಗೃತವಾಗುತ್ತಿತ್ತು.
ಆದರೆ ನಮ್ಮ ದೇಶದಲ್ಲಿ ಏನು ಮಾಡಿದ್ದಾರೆ? ಈ ಎರಡು ಮಹತ್ವದ ದಿನಗಳನ್ನು ರಾಷ್ಟ್ರೀಯ ಹಬ್ಬವೆಂದೇನೋ ಘೋಷಿಸಿದ್ದಾರೆ ಆದರೆ ಅವು ಸಾರ್ವಜನಿಕ ರಜಾದಿನಗಳಾಗಿವೆ! ಶಾಲಾಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ಮಾತ್ರ ಆ ಎರಡೂ ದಿನಗಳಲ್ಲಿ ಗಾಂಧೀಜಿ ಮತ್ತು ನೆಹರು ಫೋಟೊ ಇಟ್ಟು ಬೆಳಗ್ಗೆ ಧ್ವಜಾರೋಹಣ ಮಾಡಿ ಸಿಹಿ ಹಂಚಿ ಒಂಬತ್ತು ಗಂಟೆಗೆಲ್ಲಾ ಹೊರಟುಹೋಗುತ್ತಾರೆ.ಇಲ್ಲಿಯೂ ಜನಗಳ ಭಾಗವಹಿಸುವಿಕೆ ಕಡ್ಡಾಯವೇನಲ್ಲ!
ಇನ್ನುಳಿದಂತೆ ಜನಸಾಮಾನ್ಯರು, ಶ್ರಮಿಕರು, ಅಸಂಘಟಿತ ವಲಯದ ಕಾರ್ಮಿಕರು ಎಂದಿನಂತೆ ತಮಗೂ ಈ ದೇಶದ ಹಬ್ಬಗಳಿಗೂ ಸಂಬಂಧವೇ ಇಲ್ಲದಂತೆ ತಮ್ಮ ಕಾಯಕದಲ್ಲಿ ತೊಡಗಿರುತ್ತಾರೆ. ಸರ್ಕಾರಿ ಮತ್ತು ಖಾಸಗಿ ನೌಕರರು ರಜದ ಮಜಾ ಮಾಡುತ್ತಾರೆ! ಇದು ಈ ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನದ ದುಸ್ಥಿತಿ. ಈ ಕಾರಣದಿಂದಲೇ ನಮ್ಮ ಜನರಿಗೆ ರಾಷ್ಟ್ರದ ಮೇಲೆ ಅಭಿಮಾನ ಮೂಡಿಲ್ಲ ಮತ್ತು ಸಂವಿಧಾನದ ಆಶಯಗಳ ಅರಿವಿಲ್ಲದಂತಾಗಿದೆ.
ಜನಸಾಮಾನ್ಯರಿಗಿರುವ ಈ ಅರಿವಿನ ಕೊರತೆಯೇ ಪುಡಾರಿಗಳ, ರಾಜಕಾರಣಿಗಳ ಶಕ್ತಿಯಾಗಿದೆ. ಹೀಗಾಗಿಯೇ ಜನರು ತಮ್ಮದೇ ಪ್ರತಿನಿಧಿಯ ಗುಲಾಮರಂತೆ ವರ್ತಿಸುತ್ತಾರೆ! ಜನಪ್ರತಿನಿಧಿ ರಾಜನಂತೆ ಮೆರೆಯುತ್ತಾನೆ. ಅಧಿಕಾರಶಾಹಿ, ನ್ಯಾಯಾಂಗ ಇವೆಲ್ಲವೂ ಜನಸಾಮಾನ್ಯರ ಮೇಲೆ ಸವಾರಿ ಮಾಡುತ್ತಿವೆ.
ಒಂದು ನಾಯಿಯನ್ನು ಕೊಲ್ಲಬೇಕೆಂದರೆ ಸರಳ ಮಾರ್ಗವೇನೆಂದರೆ ಅದನ್ನು ಹುಚ್ಚು ನಾಯಿ ಎಂದು ಹೆಸರಿಸಿದರೆ ಸಾಕು ಜನರೇ ಅದನ್ನು ಕೊಲ್ಲುತ್ತಾರೆ ಎಂಬುದೊಂದು ದುಷ್ಟಾಂತವಿದೆ. ಜನರನ್ನು ಅವರ ಹಕ್ಕುಅಧಿಕಾರಗಳ ಅರಿವಿನಿಂದ ದೂರವಿರಿಸಿದರೆ ಕಾಲಕ್ರಮೇಣ ಅವರು ಅವುಗಳನ್ನು ಮರೆತು ನಾವು ಹೇಳುವಷ್ಟನ್ನು ಮಾತ್ರ ನಂಬುತ್ತಾರೆ ಎಂಬ ಹುನ್ನಾರದಲ್ಲಿ ಜನವರಿ 26ರ ಸಂವಿಧಾನ ದಿನದ ಮಹತ್ವವನ್ನು ಮರೆಮಾಚಿ ಗಣರಾಜ್ಯ ದಿನವಾಗಿಸಲಾಯಿತು! ಜನ ಮರುಳೋ ಜಾತ್ರೆ ಮರುಳೋ…! ಜನ ಅಕ್ಷರಶಃ ಮರುಳಾದರು.
ನೆಹರು ತಮ್ಮ ಜನ್ಮದಿನವು ಜನಮಾನಸದಲ್ಲಿ ನೆನಪಿರಲಿ ಎಂದು ತಮ್ಮ ಜನ್ಮದಿನವನ್ನು “ಮಕ್ಕಳ ದಿನಾಚರಣೆ”ಯಾಗಿಸಿದರು! ಮನುವಾದಿಗಳು ಅಕ್ಷರಕ್ರಾಂತಿಯ ಸಾವಿತ್ರಿಭಾಯಿ ಫುಲೆ ಮತ್ತು ಜ್ಯೋತಿಭಾಫುಲೆ ದಂಪತಿಗಳ ನೆನಪಿಗೆ ಶಿಕ್ಷಕರ ದಿನ ಎಂಬುದು ಮುನ್ನಲೆಗೆ ಬಾರದಿರಲಿ ಎಂದು ಮಾಜಿ ರಾಷ್ಟ್ರಪತಿ ರಾಧಾಕೃಷ್ಣನ್ ಜನ್ಮದಿನವನ್ನು “ಶಿಕ್ಷಕರ ದಿನಾಚರಣೆ”ಯಾಗಿಸಿದರು. ಜನ ಏನಾದರು ಪ್ರಶ್ನೆ ಮಾಡಿದ್ರಾ? ಯಾಕೆ ಇವರ ದಿನವನ್ನು ನಾವು ಮಕ್ಕಳ ದಿನ, ಶಿಕ್ಷಕರ ದಿನವೆಂದು ಆಚರಿಸಬೇಕು ಅಂತ? ಇಲ್ಲ ಅವರು ಹೇಳಿದಂತೆಯೇ ನಡೆಯುತ್ತಿದ್ದಾರೆ. ಹೀಗೆ ಸಂವಿಧಾನ ದಿನವೂ ಕೂಡ.
ಆದರೆ 80ರ ದಶಕದಲ್ಲಿ ಭಾರತ ರಾಜಕಾರಣಕ್ಕಿಳಿದ ಭೌತವಿಜ್ಞಾನಿ, ಬಹುಜನ ಚಳವಳಿಯ ತಂದೆ ದಾದಾಸಾಹೇಬ್ ಕಾನ್ಷಿರಾಮ್ ಇದೆಲ್ಲವನ್ನೂ ಪ್ರಶ್ನಿಸಿದರು. ಜನರನ್ನು ಪ್ರಶ್ನಿಸುವಂತೆ ಜಾಗೃತಗೊಳಿಸಿದರು. ಅದರ ಪರಿಣಾಮವಾಗಿ ಬಹುಜನರು ಆಗಿಂದಲೂ “ಜನವರಿ 26ನ್ನು ಸಂವಿಧಾನ ದಿನ”ವೆಂದೇ ಆಚರಿಸುವುದನ್ನು ರೂಢಿಗೆ ತಂದರು. ಸಾವಿತ್ರಿ ಭಾಫುಲೆ- ಜ್ಯೋತಿಭಾಫುಲೆಯವರ ಹೋರಾಟವನ್ನು ಮುನ್ನೆಲೆಗೆ ತಂದರು. ಶಿಕ್ಷಕರ ದಿನಾಚರಣೆಯನ್ನು ಬದಲಿಸಿದರು. ಇದೆಲ್ಲವೂ ಇತಿಹಾಸದ ಪುರನ್ ವ್ಯಾಖ್ಯಾನವಾಗಿದೆ.
ಬಹುಜನರು ಈ ರೀತಿ ಜಾಗೃತವಾದುದರಿಂದಲೇ ಮೋದಿ ನೇತೃತ್ವದ ಸರ್ಕಾರ ಕೊನೆಗೂ ನವೆಂಬರ್ 26ನ್ನು “ಸಂವಿಧಾನ ದಿನ” ಎಂದು ಘೋಷಿಸಿದೆ. ಆದರೆ ನಮಗೆ ಅಷ್ಟೇ ಸಾಕಾಗಲ್ಲ. ಜನವರಿ 26ನ್ನು “ಸಂವಿಧಾನ ಜಾರಿದಿನ”ವಾಗಿ ಆಚರಿಸಬೇಕು.
ದೆಹಲಿಯಲ್ಲಿ ಈಗ ನಡೆಯುವ ಪೆರೇಡ್ ಗಳ ಬದಲು ಅಂದು ಓಪನ್ ಪಾರ್ಲಿಮೆಂಟ್ ಚರ್ಚೆಗಳು ಜನರೆದುರು ನಡೆಯಬೇಕು. ಅಲ್ಲಿ ಆಯಾ ಸರ್ಕಾರದ ಸಾಧನೆಗಳು, ಜನರಿಗೆ ನೀಡಿದ್ದ ವಾಗ್ದಾನಗಳನ್ನು ಈಡೇರಿಸಿರುವ ರಿಪೋರ್ಟ್ ದೇಶಕ್ಕೆ ಲೆಕ್ಕದಂತೆ ಕೊಡಬೇಕು. ಆಯಾ ಸರ್ಕಾರದ ಅವಧಿಯಲ್ಲಿ ಜನಸಾಮಾನ್ಯರ ಮೇಲೆ ನಡೆದ ವಿವಿಧ ರೀತಿಯ ದಾಳಿ- ದೌರ್ಜನ್ಯ-ಕೊಲೆ- ಅತ್ಯಾಚಾರಗಳ ವರದಿ ನೀಡಬೇಕು. ಈ ಅಪರಾಧಗಳಿಗೆ ಸರ್ಕಾರ ತೆಗೆದುಕೊಂಡ ಕಾನೂನು ಕ್ರಮಗಳು ಮತ್ತು ಅವುಗಳನ್ನು ಮುಂದಿನ ದಿನಗಳಲ್ಲಿ ಇಲ್ಲವಾಗಿಸುವ ಶಪಥ ಮಾಡಬೇಕು.
ಅಂದು ದೇಶದೆಲ್ಲಾ ರಾಜ್ಯಗಳೂ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳೂ, ಶಾಲಾಕಾಲೇಜುಗಳೂ ಸಹ ಇಂತಾದ್ದೆ ವಾಗ್ದಾನ, ವರದಿ, ವಿಚಾರಸಂಕಿರಣಗಳನ್ನು ದಿನವಿಡೀ ಏರ್ಪಡಿಸಬೇಕು. ಅದು ನಿಜವಾದ ಆಚರಣೆ ಎಂದರೆ. ಅದು ನಿಜವಾದ ಪ್ರಜಾತಂತ್ರದ ಲಕ್ಷಣ ಎಂಬುದನ್ನು ಜನರು ಆಳುವ ಸರ್ಕಾರಗಳಿಗೆ, ಪ್ರತಿನಿಧಿಗಳಿಗೆ, ಆಡಳಿತಶಾಹಿಗೆ ಒತ್ತಾಯಪೂರ್ವಕವಾಗಿ ಹೇಳಬೇಕಿದೆ.
ಬಾಬಾಸಾಹೇಬರು ಇದನ್ನೇ “ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು” ಎಂದು ಹೇಳಿದ್ದು. ಇತಿಹಾಸವು ತನ್ನಂತಾನೆ ನಿರ್ಮಾಣವಾಗದು. ಅದನ್ನು ನಾವೇ ನಿರ್ಮಿಸಬೇಕು. ಸತ್ಯಕ್ಕಾಗಿ ಸಂಘಟಿತರಾಗೋಣ.
ಜೈಭೀಮ್ ಜೈಭಾರತ್
ಡಾ.ಚಮರಂ
ಲೇಖಕರು ಅಂಬೇಡ್ಕರ್ ವಾದಿ ಚಿಂತಕರು ಮತ್ತು ಸಹಾಯಕ ಪ್ರಾಧ್ಯಾಪಕರು ಕೆ.ಎಸ್.ಒ.ಯು, ಮೈಸೂರು
[…] […]