ಈ ಜಗತ್ತಿನಲ್ಲಿ ಎಲ್ಲವೂ ವಿಸ್ಮಯ ಹಾಗೂ ವಿಶೇಷ. ಪ್ರಾಣಿಗಳ ಜೀವನ ಹಾಗೂ ಕುಟುಂಬ ವ್ಯವಸ್ಥೆ ಹೇಗೋ ನಾ ಕಾಣೆ? ಆದರೆ ಮನುಷ್ಯನ ಜೀವನ ಮಾತ್ರ ಬಹಳ ಮುಖ್ಯ. ಯಾಕೆಂದರೆ ಈ ಪ್ರಪಂಚದಲ್ಲಿ ಮನುಷ್ಯನೇ ಕೇಂದ್ರ ಬಿಂದು ಮನುಷ್ಯನಿಗೆ ಜೀವ ಹಾಗೂ ಜೀವನ ಎರಡೂ ಮುಖ್ಯ. ಜೀವ ಬಿಟ್ಟು ಜೀವನ ಇರಲ್ಲ, ಜೀವನ ಬಿಟ್ಟು ಜೀವ ಇರಲ್ಲ. ಜೀವ ಹಾಗೂ ಜೀವನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಾಕಷ್ಟು ಜನ ಜೀವನ ಅರ್ಥ ಮಾಡಿಕೊಳ್ಳದೆ, ಜೀವ ಬಿಟ್ಟರೆ ಇನ್ನಷ್ಟು ಜನ ಜೀವನವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಜೀವ ಬಿಟ್ಟಿದ್ದಾರೆ. ಅಂತವರ ಜೀವನ ಸಾರ್ಥಕವಾಗಿವೆ. ಪ್ರತಿಯೊಬ್ಬರ ಜೀವನದಲ್ಲಿ ಹುಟ್ಟು ಸಾವುಗಳು ಸಹಜ. ಇವುಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಸಾಯಲೇಬೇಕು. ಕೇವಲ ಮನುಷ್ಯ ಅಷ್ಟೇ ಅಲ್ಲಾ ಭೂಮಿ ಮೇಲಿನ ಪ್ರತಿಯೊಂದು ಜೀವಿಯೂ ಸಾಯಲೇಬೇಕು. ಆದರೆ ಈ ಹುಟ್ಟು ಸಾವುಗಳ ಮಧ್ಯದ ಕಾಲಾವಧಿಯನ್ನು ಹೇಗೆ ಕಳೆದೆವು ಎನ್ನುವುದರ ಮೇಲೆ ಜೀವನದ ಸಾರ್ಥಕತೆ ಅಡಗಿದೆ.

“ಈ ಕಾಲ ಕೆಟ್ಟೋಯ್ತು ಈಗಿನ ಜನ ಹಿಂದೆ ಇದ್ದವರತರ ಇಲ್ಲ. ಎಲ್ಲಿ ನೋಡಿದರು ದ್ವೇಷ, ಅಸೂಯೆ, ಸ್ವಾರ್ಥ, ವಂಚನೆ, ಮೋಸ, ಕೊಲೆ, ಸುಲಿಗೆ ನಡೆಯುತ್ತಿವೆ. ” ಎಂದು ಕಾಲವನ್ನು ನಿಂದಿಸುವ ಜನ ಹೆಜ್ಜೆ ಹೆಜ್ಜೆಗೂ ಇದ್ದಾರೆ. “ಇಂತಹ ಕೆಟ್ಟು ಹೋದ ಕಾಲದಲ್ಲಿ ತಾವು ಯಾಕೆ ಬದುಕಿದ್ದೀರಿ? ಜಾಗ ಖಾಲಿ ಮಾಡಿ ಸ್ವರ್ಗಕ್ಕೆ ಹೋಗಬೇಕು ತಾನೇ..!” ಅಂತಾ ಪ್ರಶ್ನೆ ಮಾಡಿ. ಅವರು ಸದ್ದಿಲ್ಲದೇ ನಿಮ್ಮಿಂದ ಜಾಗ ಖಾಲಿ ಮಾಡಿರುತ್ತಾರೆ. ಈ ಸಮಾಜದಲ್ಲಿ ಒಳ್ಳೆಯದೋ ಕೆಟ್ಟದೋ, ಸಹಿಷ್ಣುತೆಯೋ ಅಸಹಿಷ್ಣುತೆಯೋ ಅದು ಬೇರೆ ವಿಷಯ ಆದರೆ ನಾವು ಇಲ್ಲೇ ಬದುಕಬೇಕು. ಹೆದರಿ ಕಾಡಿನಲ್ಲಿ ಬದುಕುವುದಕ್ಕೆ ಆಗಲ್ಲ. ಕಾಲವನ್ನು ಅಳಿಯುವವರೆಗೊಂದು ಮಾತು ಹೇಳಿದ್ದಾರೆ ಕನ್ನಡದ ಹೆಸರಾಂತ ಸಾಹಿತಿ ಶಿವರಾಮ ಕಾರಂತರು, “ಕಾಲ ಹಿಂದಕ್ಕೆ ಸಾಗುವುದಿಲ್ಲ, ಆದರೆ ಅದರ ಜತೆ ಸಾಗದೆ ಇದ್ದರೆ ನಾವು ನಿಂತಲ್ಲೇ ನಿಲ್ಲಬೇಕಾಗುತ್ತದೆ”. ಕಾಲದ ಜೊತೆಗಿನ ನಮ್ಮ ಪಯಣ ಎಷ್ಟೊಂದು ಮಹತ್ವದ್ದು ಎಂಬುದು ಈ ಮಾತು ತೋರಿಸಿಕೊಡುತ್ತಿದೆ. ಹೌದು, ಕಾಲ ಎನ್ನುವುದು ಯಾವಾಗಲು ಚಲಿಸುತ್ತದೆ. ಅದು ಹರಿಯುವ ನದಿ ಇದ್ದಂತೆ. ಅದರ ಜೊತೆ ಜೊತೆಯಲ್ಲೇ ಸಾಗಿದರೆ ಸಾಗರ ಸಮುದ್ರ ಸೇರಬಹುದು, ಇಲ್ಲವಾದರೆ ಒಂಟಿಯಾಗಿ ನಿಂತಲ್ಲೇ ನಿಲ್ಲಬೇಕಾಗುತ್ತದೆ. ಈ ಕಾಲಕ್ಕೆ ಹೆದರಿ ನಮ್ಮ ಜೀವನದಲ್ಲಿ ಕೂಡ ಯಾವುದೋ ಚಿಂತೆಗಳಿಗೆ, ಸಮಸ್ಯೆಗಳಿಗೆ, ನೋವು ಹತಾಶೆಗಳಿಗೆ ನಾವು ಬಲಿಯಾದರೆ ನಮ್ಮ ಜೀವನವನ್ನು ವ್ಯರ್ಥ ಮಾಡಿಕೊಂಡಂತೆ. ಬಂದ ಸಮಸ್ಯೆಗಳನ್ನು ಹೆದರಿಸಿ ಮುನ್ನುಗ್ಗಬೇಕು. ಜೀವನದಲ್ಲಿ ಏನೇ ಕಷ್ಟ ಬರಲಿ ನೀನಾ ನಾನ? ಎಂಬ ಮನಸ್ಥಿತಿಯಲ್ಲಿ ಸಿಡಿದು ಏಳಬೇಕು. ಆಗ ಬಂದಿರುವ ಕಷ್ಟ ಅಥವಾ ಸಮಸ್ಯೆಗಳು ಸದ್ದಿಲ್ಲದೇ ಜಾಗ ಖಾಲಿ ಮಾಡುತ್ತವೆ. ಅವಕ್ಕೆ ಹೆದರಿದರೆ ನಮ್ಮನ್ನು ಜಾಗ ಖಾಲಿ ಮಾಡಿಸುತ್ತವೆ.

ಜೀವನದಲ್ಲಿ ಸಮಸ್ಯೆಗಳು ಎಲ್ಲರಿಗೂ ಸಹಜ. ಇವು ಒಂತರ ಗಡ್ಡ ಮೀಸೆ ಇದ್ದಂತೆ, ಬೋಳಿಸಿದಷ್ಟು ಮತ್ತೇ ಮತ್ತೇ ಬೆಳೆಯುತ್ತವೆ. ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂದು ಸ್ವಲ್ಪ ಹೊತ್ತು ಕುಂತು ಯೋಚನೆ ಮಾಡಿದರೆ ಸಾಕು ಅರ್ಧ ಸಮಸ್ಯೆ ನಿವಾರಣೆ ಆದಂತೆ. ಆದರೆ ಎಷ್ಟೋ ಜನಗಳಿಗೆ ಅಷ್ಟೊಂದು ವ್ಯವಧಾನ ಇರಲ್ಲ. ನಮ್ಮ ಜೀವನವನ್ನು ಸುಂದರಗೊಳಿಸಲೇ ಎಷ್ಟೋ ಸಮಸ್ಯೆಗಳು ಎದುರಾಗಿರುತ್ತವೆ. ಅವುಗಳನ್ನು ನಾವು ತಪ್ಪಾಗಿ ತಿಳಿದು ಹಿನ್ನಡೆದು ಬಿಡುತ್ತೇವೆ. ಈ ಮನಸ್ಥಿತಿಯಿಂದ ಇನ್ನಷ್ಟು ಸಮಸ್ಯೆಗಳು ಉಲ್ಬಣಿಸಲು ದಾರಿ ಮಾಡಿಕೊಟ್ಟಿರುತ್ತೇವೆ. ಈ ದಿಸೆಯಲ್ಲಿ ಟೋನಿ ರಾಬಿನ್ಸ್ ರವರ ಮಾತು ಸೂಕ್ತವೆನಿಸುತ್ತದೆ. “ಪ್ರತಿ ಸಮಸ್ಯೆಯೂ ನಮಗೆ ಜೀವನದಲ್ಲಿ ಒಂದು ಕೊಡುಗೆ ಇದ್ದಂತೆ, ಏಕೆಂದರೆ ಸಮಸ್ಯೆಗಳಿಲ್ಲದೆ ನಾವು ಬೆಳೆಯಲಾರೆವು” ಎಂಬ ಮಾತು ಎಷ್ಟೊಂದು ಅರ್ಥಗರ್ಭಿತವಲ್ಲವೇ..? ಈ ಸಮಸ್ಯೆಗಳನ್ನು ಎದುರಿಸದೇ ಇರಲು ಕಾರಣ ನಮ್ಮ ಅಜ್ಞಾನ ಅವಿವೇಕ ಹಾಗೂ ಆತ್ಮವಿಶ್ವಾಸದ ಕೊರತೆ. ನಮ್ಮ ಮೇಲೆ ನಮಗೇ ನಂಬಿಕೆ ಇಲ್ಲದಿರುವುದು ಹಾಗೂ ನಿರಾಶವಾದ. ಈ ಭಾವನೆಯನ್ನು ದೂರ ಮಾಡಬೇಕೆಂದರೆ ಜೀವನದಲ್ಲಿ ಏನೇ ಬಂದರೂ ಎದುರಿಸುತ್ತೇನೆ ಎಂಬ ಆಶಾಭಾವನೆ ಹೊಂದಿರಬೇಕು. “ಆಶಾವಾದಿ ಪ್ರತಿಯೊಂದು ಕಠಿಣತೆಯಲ್ಲೂ ಅವಕಾಶವನ್ನು ಹುಡುಕುತ್ತಾನೆ, ಆದರೆ ನಿರಾಶವಾದಿ ಪ್ರತಿಯೊಂದು ಅವಕಾಶದಲ್ಲಿ ಕಠಿಣತೆಯನ್ನು ಕಾಣುತ್ತಾನೆ” ಎಂಬ ವಿನ್ಸ್ಟನ್ ಚರ್ಚಿಲ್ ರವರ ಮಾತು ಜೀವನದಲ್ಲಿ ಒಂದು ಭರವಸೆಯ ಬೆಳಕು ಎಂದೇ ಹೇಳುತ್ತೇನೆ. ಜೀವನದಲ್ಲಿ ಒಂದು ಭರವಸೆ ಇರಬೇಕು ಎಂದರೆ ನಮ್ಮಲ್ಲಿ ಸ್ವಲ್ಪ ಬುದ್ದಿವಂತಿಕೆ ಇರಬೇಕು. ಆ ಬುದ್ದಿವಂತಿಕೆ ಬೆಳೆಯಬೇಕೆಂದರೆ ಲೋಕ ಜ್ಞಾನದ ಬಗ್ಗೆ ತಿಳಿದುಕೊಂಡಿರಬೇಕು. ಒಂದು ಸ್ವತಃ ಅನುಭವಿಸಿ ತಿಳಿದು ಕೊಳ್ಳುವುದು ಅಥವಾ ಪುಸ್ತಕಗಳನ್ನು ಓದಿ ತಿಳಿದುಕೊಳ್ಳುವುದು. ಎಲ್ಲವನ್ನೂ ಅನುಭವಿಸಿ ತಿಳಿದು ಕೊಳ್ಳುವಷ್ಟು ಸಮಯ ನಮಗೆ ಇರುವುದಿಲ್ಲ. ಕೆಲವೊಂದು ಅನುಭವಗಳನ್ನು ಸೋತವರಿಂದಲೂ ಮತ್ತೇ ಕೆಲವು ಅನುಭವಗಳನ್ನು ಗೆದ್ದವರಿಂದಲೂ ತಿಳಿದುಕೊಳ್ಳಬೇಕು. ಕೆಲವು ಸ್ನೇಹಿತರಿಂದ ಜೀವನದಲ್ಲಿ ಒಳ್ಳೆ ಪಾಠಗಳ ಪರಿಚಯವಾಗುತ್ತೆ ಹಾಗೇ ಕೆಟ್ಟ ಪಾಠಗಳ ಪರಿಚಯವೂ ಆಗುತ್ತದೆ. ಎಲ್ಲವನ್ನೂ ಸ್ವೀಕರಿಸಿ ಸಮಚಿತ್ತದಿಂದ ಮುನ್ನಡೆಯಬೇಕು.

“ಇವತ್ತಿನ ನೋವು ನಾಳೆಯ ಶಕ್ತಿಯಾಗಿದೆ. ಇವತ್ತು ಹೆಚ್ಚು ಶ್ರಮಿಸಿದಷ್ಟು ನಾಳೆಗೆ ಮತ್ತಷ್ಟು ಬಲಿಷ್ಠರಾಗುತ್ತೇವೆ.” ಎಂಬ ಮಾತನ್ನು ಸದಾ ನೆನಪಿನಲ್ಲಿಡಬೇಕು. ನಿಮ್ಮ ಜೀವನದಲ್ಲಿ ನೀವು ಏನಾದರೂ ಸಾಧಿಸಬೇಕೆಂದು ಹೊರಟರೆ ಮೊದಲು ನಿಮ್ಮ ಅಂತರಂಗಕ್ಕೊಂದು ಕಿಚ್ಚು ಹೊತ್ತಿಸಿ. ನಾನು ಸಾಧಿಸಿಯೇ ತಿರುತ್ತೇನೆ ಎಂಬ ಕಿಚ್ಚು. ಆ ಕಿಚ್ಚೆ ನಿಮಗೆ ದಾರಿದೀಪವಾಗುತ್ತದೆ. “ನಿಮಗೆ ಸೂರ್ಯನಂತೆ ಮಿಂಚುವ ಆಸೆಯಿದ್ದರೆ, ಮೊದಲು ಸೂರ್ಯನಂತೆ ಉರಿಯುವುದನ್ನು ಕಲಿಯಿರಿ.” ಎಂಬ ಅಬ್ದುಲ್ ಕಲಾಂ ರವರ ಮಾತು ಅಕ್ಷರ ಸತ್ಯ. ಈ ಬದುಕಿನ ಪಯಣದಲ್ಲಿ ನಮ್ಮ ಬದುಕು ಹೇಗೆ ಸಾಗಿತು ಎನ್ನುವುದೇ ಇಲ್ಲಿ ಮಹತ್ತರ ವಿಷಯ. ಎಲ್ಲರೂ ಸಾಧಕರು ಆಗಲು ಸಾಧ್ಯವಿಲ್ಲ ಆದರೆ ಛಲವಿದ್ದರೆ ಆಗಬಹುದು. ಸಾಧಿಸಬೇಕೆಂದರೆ ಮಹಾನ್ ಕೆಲಸಗಳನ್ನೇ ಮಾಡಬೇಕು ಅಂತೇನೂ ಇಲ್ಲ. ನಿಮ್ಮಿಂದ ಮಹಾನ್ ಕೆಲಸಗಳನ್ನು ಮಾಡಲಾಗದಿದ್ದರೆ, ಸಣ್ಣ ಸಣ್ಣ ಕೆಲಸಗಳನ್ನೇ ಮಹಾನ್ ರೀತಿಯಲ್ಲಿ ಮಾಡಿರಿ. ಕೆಲಸಕ್ಕೂ ಮುಂಚೆ ಪ್ರತಿಫಲ ಅಪೇಕ್ಷಿಸಬೇಡಿ. ಮಾಡುವ ಕೆಲಸದಲ್ಲಿ ನಿಮಗೆ ಆನಂದ ಸಿಕ್ಕಿದರೆ ಖಂಡಿತ ಅದರಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ. ಪ್ರತಿಷ್ಠೆಗೋ, ಹೆಸರಿಗೋ, ಹಣಕ್ಕೋ, ಅಥವಾ ಕೀರ್ತಿಗೋ ಯಾವ ಕೆಲಸವನ್ನು ಮಾಡಬೇಡಿ. ಮಾಡುವುದಾದರೆ ನಿಮ್ಮ ಮನಸಿನ ಆನಂದಕ್ಕಾಗಿ ಮಾಡಿ. ನಿಮ್ಮಲ್ಲಿ ನಿಸ್ವಾರ್ಥವಿರಲಿ. ಈ ಸಂದರ್ಭದಲ್ಲಿ ಜಿ ಎಸ್ ಶಿವರುದ್ರಪ್ಪ ನವರ ಕವನ ನೆನಪಾಗುತ್ತಿದೆ. ಹಣತೆ ಹಚ್ಚುತ್ತೇನೆ ನಾನೂ ಈ ಕತ್ತಲನ್ನು ಗೆದ್ದು ನಿಲ್ಲುತ್ತೆನೆಂಬ ಜಿದ್ದಿನಿಂದಲ್ಲ, ಲೆಕ್ಕವೇ ಇರದ ದೀಪಾವಳಿಯ ಹಡಗುಗಳು ಇದರಲ್ಲಿ ಮುಳುಗಿ ಹೋಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಬ್ರಾಂತಿ ನನಗಿಲ್ಲ ” ಎಂಬ ಮಾತು ಎಷ್ಟೊಂದು ಪ್ರಬುದ್ಧತೆಯಿಂದ ಕೂಡಿದೆಯಲ್ಲವೇ..? ನಿಮ್ಮ ಜೀವನ ನಿಮ್ಮ ಕೈಯಲ್ಲಿ. ಹಣತೆ ಹಚ್ಚುತ್ತಿರೋ ಕಿಚ್ಚು ಹಚ್ಚುತ್ತಿರೋ ನಿಮಗೆ ಬಿಟ್ಟ ವಿಷಯ. ಯಾವುದನ್ನೇ ಆಗಲಿ ಮೊದಲು ಪ್ರಾರಂಭಿಸಿ. ಕಾಲ ಚಲಿಸುತ್ತಿದೆ.

ರಂಗಸ್ವಾಮಿ ದೇವರಬೆಟ್ಟ

+91 95355 62281

Leave a Reply

Your email address will not be published. Required fields are marked *