ಬಹಳಷ್ಟು ಜನರಿಗೆ ಗೊತ್ತಿರದ ವಿಷಯವೇನೆಂದರೆ ವಿನಾಯಕ ದಾಮೋದರ್ ಸಾವರ್ಕರ್ ಅವರು ನಾಸ್ತಿಕರಾಗಿದ್ದರು. ನಾಸ್ತಿಕರೊಬ್ಬರು ಹೇಗೆ ಹಿಂದುತ್ವದ ಪ್ರತಿಪಾದಕರಾದರು ಎಂಬುದು ಪ್ರಶ್ನೆ. ಕೆಲವರು ಸನಾತನ ಹಿಂದೂ ಧರ್ಮದಲ್ಲಿ ನಾಸ್ತಿಕತೆಗೂ ಅವಕಾಶವಿತ್ತು ಅಂತಹುದರಲ್ಲಿ ಸಾವರ್ಕರ್ ಅವರು ನಾಸ್ತಿಕಾಗಿದ್ದರೂ ಹಿಂದುತ್ವದ ಪ್ರತಿಪಾದಕರಾಗಿದ್ದು ಆಶ್ಚರ್ಯವೇನಿದೆ ಎಂದು ಹೇಳಬಹುದು. ಖಂಡಿತಾ ಇವರ ಮಾತು ಸತ್ಯ. ಈ ಮಾತು ಒಪ್ಪುವವರು ಇಂದು ನಾಸ್ತಿಕರನ್ನು ಹಿಂದೂ ಧರ್ಮದ ವಿರೋಧಿಗಳಂತೆ ಕಾಣುವುದು ತಪ್ಪೇ ಆಗುತ್ತದೆ ಎಂದು ಒಪ್ಪಬೇಕಾಗುತ್ತದೆ. ಜನಸಾಮಾನ್ಯ ಹಿಂದೂಗಳಿಗೆ ನಾಸ್ತಿಕನಾದರೂ, ಆಸ್ತಿಕನಾದರೂ ಒಂದೇ. ಆದರೆ ಸಂಘಪರಿವಾರದ ಹಿಂದುತ್ವದ ಪ್ರತಿಪಾದಕರಿಗೆ ಇದು ಸಾಧ್ಯವಿಲ್ಲ. ಏಕೆಂದರೆ ಇಂದು ಹಿಂದುತ್ವ ಎಂದರೆ ಹಿಂದೂ ದೇವರುಗಳ ಮೇಲೆ ಗೌರವ, ಭಕ್ತಿ ಇರಲೇಬೇಕೆಂಬ ಕಟ್ಟಳೆಯಿದೆ. ಹೀಗಿರುವಾಗ ನಾಸ್ತಿಕ ಸಾವರ್ಕರ್ ಅವರನ್ನು ಹಿಂದುತ್ವದ ಪ್ರತಿಪಾದಕ ಎಂದು ಒಪ್ಪಿದ್ದು ಏಕೆ ಮತ್ತು ನಾಸ್ತಿಕರಾಗಿದ್ದ ಸಾವರ್ಕರ್ ಹಿಂದುತ್ವ ಪ್ರತಿಪಾದಕರಾಗಿದ್ದು ಹೇಗೆ ಎಂಬುದನ್ನು ಸ್ವಲ್ಪ ಆಳವಾಗಿ ತಿಳಿಯಬೇಕಾದರೆ ಕೆಲವು ಹೋಲಿಕೆಗಳು ಅಗತ್ಯ.

1. ಭಗತ್ ಸಿಂಗ್ ಮತ್ತು ಸಾವರ್ಕರ್ ನಡುವಿನ ವೈರುದ್ಯಗಳೇನು?

ಭಗತ್ ಸಿಂಗ್ ಬಗ್ಗೆ ಬಹುಶಃ ಎಲ್ಲರಿಗೂ ತಿಳಿದಿದೆ. ಅವರು ತನ್ನ 23ನೇ ವಯಸ್ಸಿಗೇ ಬ್ರಿಟೀಷರ ವಿರುದ್ದದ ಹೋರಾಟದಲ್ಲಿ ನೇಣುಗಂಬ ಹತ್ತಿದವರು. ಆದರೆ ಯಾವುದೇ ಕಾರಣಕ್ಕೂ ಬ್ರಿಟೀಷರಿಗೆ ಬಗ್ಗಲಿಲ್ಲ. ವಿ.ಡಿ.ಸಾವರ್ಕರ್ ರವರ ಬ್ರಿಟೀಷರ ವಿರುದ್ದದ ಹೋರಾಟದ ಪ್ರತಿಫಲವಾಗಿ ಅಂಡಮಾನ್ ಜೈಲಿಗೆ ಹಾಕಲಾಗಿತ್ತು. ಅಲ್ಲಿ ನಡೆದ ಘಟನೆಯನ್ನು ಅವರ ಅನುಯಾಯಿ ಮತ್ತು ಸಹ ಖೈದಿಯಾಗಿದ್ದ ತ್ರಿಲೋಕನಾಥ್ ಚಕ್ರವರ್ತಿಯವರು ತಮ್ಮ ಆತ್ಮಕಥನದಲ್ಲಿ ಸಾವರ್ಕರ್ ಬಗ್ಗೆ ಹೀಗೆ ಹೇಳುತ್ತಾರೆ, “ಅಂಡಮಾನ್ ಜೈಲಿನಲ್ಲಿ ಕೈದಿಗಳನ್ನು ತುಂಬಾ ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದರು. ಇದರ ವಿರುದ್ದ ಸಾವರ್ಕರ್ ಅವರು ತಮ್ಮ ಅನುಯಾಯಿಗಳಿಗೆ ಉಪವಾಸ ಸತ್ಯಾಗ್ರಹ ಮಾಡುವಂತೆ ಹೇಳುತ್ತಾರೆ. ಅವರು ಹೇಳಿದಂತೆ ನಾವುಗಳು ಉಪವಾಸ ಸತ್ಯಾಗ್ರಹವನ್ನು ಕೂಡಾ ಮಾಡುತ್ತೇವೆ. ಆದರೆ ಈ ಉಪವಾಸ ಸತ್ಯಾಗ್ರಹದಲ್ಲಿ ಸಾವರ್ಕರ್ ಭಾಗವಹಿಸುವುದೇ ಇಲ್ಲ. ಈ ಕುರಿತು ಸಾವರ್ಕರ್ ರವರನ್ನು ನಾನು ನೇರವಾಗಿ ವಿರೋಧಿಸಿದೆ.”

ಸಾವರ್ಕರ್ ಅವರು ಎಷ್ಟು ಪ್ರಾಮಾಣಿಕರೆಂದರೆ, ಈ ಘಟನೆಯನ್ನು ಸ್ವತಃ ಅವರೇ “My Years in Andamans” ಆತ್ಮಕಥೆಯಲ್ಲಿ ಹೇಳುತ್ತಾರೆ. ಅಷ್ಟೇ ಅಲ್ಲದೇ ಬ್ರಿಟೀಷರಿಗೆ ಕ್ಷಮಾಪಣೆ ಕೋರುತ್ತಾ “ನಾನು ಬ್ರಿಟೀಷ್ ಆಡಳಿತಕ್ಕೆ ವಿಧೇಯನಾಗಿರುತ್ತೇನೆ ಮತ್ತು ಸ್ವತಂತ್ರ ಚಳುವಳಿಯಲ್ಲಾಗಲಿ ರಾಜಕಾರಣದಲ್ಲಾಗಲಿ ಭಾಗವಹಿಸುವುದಿಲ್ಲ. ದಯವಿಟ್ಟು ನನ್ನನ್ನು ಬಿಡುಗಡೆ ಮಾಡಿ” ಎಂದು ಪತ್ರ ಬರೆಯುತ್ತಾರೆ. ಸಾವರ್ಕರ್ ರವರು ಬ್ರಿಟೀಷರ ವಿರುದ್ದ ಹೋರಾಡಿದ ತನ್ನ ಒಳಗಿನ ಸ್ವತಂತ್ರ ಹೋರಾಟಗಾರನನ್ನು ಇಲ್ಲಿ ಬಲಿಕೊಡುತ್ತಾರೆ. ಬಹುಶಃ ಜೈಲು ಶಿಕ್ಷೆಗೆ ತನ್ನತನವನ್ನು ಕಳೆದುಕೊಂಡ ಒಬ್ಬ ಹೋರಾಟಗಾರನನ್ನು ವೀರ ಎನ್ನುತ್ತಾರೋ, ಧೀರ ಎನ್ನುತ್ತಾರೋ ಓದುಗರಿಗೆ ಬಿಟ್ಟದ್ದು. 23ರ ಹರಯದ ಹುಡುಗ ಒಂದು ಕಡೆ ಪ್ರಾಣತ್ಯಾಗ ಮಾಡುತ್ತಾನೆ, ಮತ್ತೊಬ್ಬರು ಕ್ಷಮಾಪಣೆ ಕೇಳಿ ಪತ್ರ ಬರೆಯುತ್ತಾರೆ. ಈ ಇಬ್ಬರಲ್ಲಿ ದೇಶಭಕ್ತ ಯಾರು? ವೀರ ಯಾರು ಎಂದು ಯೋಚಿಸಿ.

2. ಸಂಘಪರಿವಾರಕ್ಕೆ ಸಾವರ್ಕರ್ ಏಕೆ ಆದರ್ಶವಾದರು?

ಒಂದು ವಿಷಯ ನಿಮಗೆಲ್ಲರಿಗೂ ತಿಳಿದಿರಲಿ. ಸಾವರ್ಕರ್ ಕ್ಷಮಾಪಣಾ ಪತ್ರ ಬರೆದು ಹೊರಗೆ ಬಂದಿದ್ದಾರೆ ಎಂದು ಅಂದಿನ ಜನಸಾಮಾನ್ಯರಿಗೆ ಅಷ್ಟಾಗಿ ಪ್ರಚಾರ ಆಗಿರಲಿಲ್ಲ. ಏಕೆಂದರೆ ಅಷ್ಟು ಪ್ರಚಲಿತ ವ್ಯಕ್ತಿಯಾಗಿ ಸಾವರ್ಕರ್ ರೂಪುಗೊಂಡಿರಲಿಲ್ಲ. ಗಾಂಧಿಯ ಹತ್ಯೆಯ ನಂತರವಷ್ಟೇ ಸಾವರ್ಕರ ಬಗ್ಗೆ ಹೆಚ್ಚು ಪ್ರಚಾರವಾಯಿತು. ತದನಂತರ ಸ್ವತಂತ್ರ ಭಾರತದಲ್ಲಿ ಪಾರ್ಲಿಮೆಂಟಿನಲ್ಲಿ ಗಾಂಧಿಯ ಪಟದ ಪಕ್ಕದಲ್ಲಿ ಸಾವರ್ಕರ್ ಪಟ ಇಟ್ಟಾಗ ಚರ್ಚೆಗೆ ಬಂದಿತ್ತು. ಈ ಕುರಿತು ಇನ್ನೊಮ್ಮೆ ಮಾತನಾಡೋಣ. ಈಗ ಸಾವರ್ಕರ್ ಸಂಘಪರಿವಾರಕ್ಕೆ ಹೇಗೆ ಆದರ್ಶವಾದ ಎಂಬುದು ವಿಷಯ.

ಗಾಂಧಿ ಹತ್ಯೆಯ ಆರೋಪಿತನಾಗಿ ಕೋರ್ಟಿನಲ್ಲಿ ಕುಳಿತಿರುವ ಸಾವರ್ಕರ್.‌ ಮುಂದಿರುವ ವ್ಯಕ್ತಿ ನಾಥೂರಾಮ ಗೋಡ್ಸೆ

1857ರ ಸಿಪಾಯಿ ದಂಗೆಯು ಮೊದಲ ಸ್ವತಂತ್ರ ಚಳುವಳಿಯೆಂದು ಕರೆದ ಸಾವರ್ಕರ್ ರವರು ಅಂದು ಸ್ವತಂತ್ರ ಗಳಿಸಬೇಕಾದರೆ ಎಲ್ಲಾ ಧರ್ಮ, ಜಾತಿಗಳು ಒಂದಾಗಬೇಕು ಎಂದು ಹೇಳಿದ್ದರಲ್ಲಿ ಅನುಮಾನವೇ ಇಲ್ಲ. ಆದರೆ ಅಂಡಮಾನ್ ಜೈಲಿನಿಂದ ಬಿಡುಗಡೆಯಾದ ನಂತರ ಅವರ ನಿಲುವೇ ಬದಲಾಗಿತ್ತು. ಇತ್ತ ಸ್ವತಂತ್ರ ಚಳುವಳಿಯಲ್ಲಿ ಭಾಗವಹಿಸುವಂತಿಲ್ಲ, ರಾಜಕಾರಣದಲ್ಲಿರುವಂತಿಲ್ಲ, ಬ್ರಿಟೀಷರ ವಿರುದ್ದವಂತೂ ಮಾತನಾಡುವ ಹಾಗಿಲ್ಲ. ಆಗ ಆತ ಆಯ್ದುಕೊಂಡ ಮಾರ್ಗ ಹಿಂದೂ ಮೂಲಭೂತವಾದ. ನಾಸ್ತಿಕನಾಗಿ ದೇವರಿಲ್ಲ ಎಂಬ ಅಂಶಗಳ ಮೇಲೆ ಭಾಷಣಗಳನ್ನೇ ಮಾಡಿದ್ದಾರೆ. ಅದು ಕೂಡ ಹಿಂದೂ ಮಹಾಸಭಾದ ಅಧ್ಯಕ್ಷನಾಗಿರಬೇಕಾದರೆ. ಆದರೆ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಹುಟ್ಟುಹಾಕಲು ಆತನು ಆಯ್ದುಕೊಂಡಿದ್ದು ಹಿಂದೂ ಪವಿತ್ರ ಸ್ಥಳಗಳನ್ನು. ಹಿಂದೂ ಪವಿತ್ರ ಸ್ಥಳಗಳು ಈ ದೇಶದಲ್ಲಿವೆ ಹಾಗಾಗಿ ಈ ದೇಶ ಹಿಂದೂಗಳದ್ದು. ಮುಸಲ್ಮಾನರು, ಕ್ರೈಸ್ತರು ಹೊರಗಿನವರು ಎಂಬುದು. ಸಂಘಪರಿವಾರದ ಆಶಯ ಕೂಡ ಹಿಂದೂ ರಾಷ್ಟ್ರ. ಹೀಗಿರಬೇಕಾದರೆ ಹಿಂದೂ ರಾಷ್ಟ್ರ ಕಲ್ಪನೆ ಆಸ್ತಿಕನಿಗಿಂತಲೂ ನಾಸ್ತಿಕನಾದ ಸಾವರ್ಕರ್ ಪ್ರತಿಪಾದಿಸುತ್ತಿರಬೇಕಾದರೆ ಆತ ಸಂಘಪರಿವಾರಕ್ಕೆ ಆದರ್ಶನೇ ಆಗುತ್ತಾರಲ್ಲವೇ?

ಜನಾ ನಾಗಪ್ಪ ಅವರ ಈ ಲೇಖನವನ್ನೂ ಓದಿ: ಡಾ. ಅಂಬೇಡ್ಕರರನ್ನು ಹೊಗಳುವುದು ಧರ್ಮನಿಂದನೆಗೆ ಸಮ – ವಿ.ಡಿ. ಸಾವರ್ಕರ್

3. ಸಾವರ್ಕರ್ ಹಿಂದೂ ಮಹಾಸಭಾದ 20, 24, 25ನೇ ಅಧಿವೇಶನಗಳಲ್ಲಿ ಹೇಳಿದ್ದೇನು?

ಬಹಳಷ್ಟು ಜನರಿಗೆ ಗೊತ್ತಿರದ ವಿಷಯವೇನೆಂದರೆ ಸಾವರ್ಕರ್ ಬಗ್ಗೆ ಸಂಘಪರಿವಾರ ಹೇಳುವ ಕಥೆಯಷ್ಟೇ ಗೊತ್ತಿದೆ. ಆದರೆ ತಾವೇ ಸ್ವತಃ ಈ ಕುರಿತು ಹುಡಕದೇ ಇರುವುದು ದುರಂತ. ಈ ಕುರಿತು ಸಾರಾಂಶವನ್ನು ಅಷ್ಟೇ ನಾನು ಹೇಳುತ್ತೇನೆ. ಸತ್ಯವನ್ನು ನೀವೇ ಪರೀಕ್ಷಿಸಿ ನೋಡಿ.

  1. ಬ್ರಿಟೀಷರಿಂದ ಬಿಡುಗಡೆಯಾದ ನಂತರ ಸ್ವತಂತ್ರ ಭಾರತವು ನೇಪಾಳದ ಹಿಂದೂ ರಾಜನ ಅಡಿಯಲ್ಲಿ ಬಂದರೆ ಭಾರತಕ್ಕೆ ಭವಿಷ್ಯವಿದೆ.
  2. ಸುಭಾಷ್ ಚಂದ್ರ ಬೋಸ್ ಅವರು “ಆಜಾದ್ ಹಿಂದ್ ಫೌಜ್” ಕಟ್ಟಿ ಬ್ರಿಟೀಷರ ವಿರುದ್ದ ಯುದ್ದಕ್ಕೆ ನಿಂತಾಗ, “ಹಿಂದೂ ಮಹಾ ಸಭಾದ ಪದಾಧಿಕಾರಿಗಳು ಬ್ರಿಟೀಷರಿಗೆ ಬೆಂಬಲಿಸಿ ಹಿಂದೂಗಳು ಸೈನ್ಯಕ್ಕೆ ಸೇರಬೇಕು” ಎಂದು ಹೇಳುತ್ತಾರೆ.
  3. ಸ್ವತಂತ್ರ ಭಾರತದ ಸಂವಿಧಾನ “ಮನುಸ್ಮೃತಿ” ಆಗಬೇಕು. ಈ ಉದ್ದೇಶವೇ ಮಹಿಳೆಯರು, ದಲಿತರು, ಶೂದ್ರರ ಹಕ್ಕುಗಳ ವಿಷಯದಲ್ಲಿ ಮನುವಿನ ನಿಲುವು ಸಾವರ್ಕರ್ ನಿಲುವು ಒಂದೇ ಎಂಬುದು.
  4. ಸ್ವತಂತ್ರ ಭಾರತದಲ್ಲಿ ಪ್ರಾಂತ್ಯವಾರುಗಳಾಗಿ (Hindu Kings State) ವಿಭನೆಯಾಗಲಿ. ಭಾರತ “ತುಕಡೆ ತುಕಡೆ” ಆಗಲು ಒಪ್ಪಿಗೆ ಇದ್ದಂತೆ.

ಹೀಗೆ ಸಾವರ್ಕರ್ ಅವರ ಸೇವೆಗೆ ಭಾರತ ಎಂದೂ ಚಿರ ಋಣಿಯಾಗಿದೆ. ಸಾವರ್ಕರ್ ಅವರ ಬಗ್ಗೆ ಮಾತನಾಡುವವರು ಸತ್ಯವನ್ನಷ್ಟೇ ಮಾತನಾಡಲಿ. ಗಾಂಧಿ ಮತ್ತು ಇತರ ಹೋರಾಟಗಾರರ ಬಗ್ಗೆ ವಿಭೇಧಗಳಿದ್ದರೂ ಅವರು ತಮ್ಮ ನಿಲುವುಗಳನ್ನು ತಪ್ಪಿದ್ದರೂ ನೇರವಾಗಿ ಹೇಳಿದ್ದಾರೆ. ಆದರೆ ಇಂದು ಸಾವರ್ಕರ್ ರವರನ್ನು ವೀರ ಸಾವರ್ಕರ್ ಮಾಡಲು ಹೊರಟವರು ತಾವು ಇತಿಹಾಸ ಓದಿ. ನಮ್ಮ ದೇಶದಲ್ಲಿ ಎಷ್ಟೋ ವೀರಾಧಿ ವೀರರಿಗೆ ವೀರ ಎಂದು ನಾಮಾಕರಣ ಮಾಡಿಲ್ಲ. ಏಕೆಂದರೆ ಅವರ ಹೋರಾಟವೇ ವೀರತ್ವದಿಂದ ಇತ್ತು.‌ ಹಾಗಾಗಿ ಅವರಿಗೆ ವೀರ ಎಂಬ surname ಅಗತ್ಯವಿಲ್ಲ.
ಜೈ ಭೀಮ್

ನಮ್ಮ ವಾಟ್ಸಾಪ್‌ ಚಾನೆಲ್‌ ಸೇರಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *