ಕೆಲವು ವರ್ಷಗಳ ಹಿಂದೆ “The man who could have prevent partition” ಎಂಬ ಪುಸ್ತಕ ಬಿಡುಗಡೆಯಾಯಿತು. ಅದರಲ್ಲಿ ಸಾವರ್ಕರ್ ಒಬ್ಬ ಸಮಾಜ ಸುಧಾರಕನಂತೆ, ಅಸ್ಪೃಶ್ಯರ ಉದ್ದಾರಕನಂತೆ ತೋರಿಸಿದ್ದಾರೆ ಮತ್ತು ಭಾರತದ ವಿಭಜನೆಯನ್ನು ತಡೆಯುವಷ್ಟರ ಮಟ್ಟಿಗಿನ ಕಾಳಜಿ ಇತ್ತು, ಅಷ್ಟೇ ಅಲ್ಲದೆ ಅಂಬೇಡ್ಕರ್ ಮತ್ತು ಸಾವರ್ಕರ್ ರವರ ದೃಷ್ಟಿಕೋನ ಒಂದೇ ಎಂಬಂತೆ ಇದೆ ಎಂದು ತಿಳಿಯಿತು. ನಾನಂತೂ ಆ ಪುಸ್ತಕ ಓದಿಲ್ಲ. ಆದರೆ ಆ ಪುಸ್ತಕದ ಬಗ್ಗೆ ಮಾತನಾಡಿದವರ ನಿಲುವುಗಳು ಹೀಗಿದ್ದವು. ಅದೇನೆ ಇರಲಿ ಅದು ಅವರ ದೃಷ್ಟಿಕೋನಗಳಲ್ಲಿ ಹಾಗೆ ಎಂದು ಭಾವಿಸೋಣ. ಆದರೆ ಮತಾಂತರ ಕಾಯಿದೆ ವಿಷಯವಾಗಿ ಬಂದಾಗ ಅದರಲ್ಲೂ ಮುಖ್ಯವಾಗಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಬೌದ್ದ ಧಮ್ಮಕ್ಕೆ ಮತಾಂತರವಾದಾಗ ಇದೇ ಸಾವರ್ಕರ್ ರವರ ಪ್ರತಿಕ್ರಿಯೆ ಹೇಗಿತ್ತು ಎಂಬುದರ ಮೇಲೆ ನಾವು ಸಾವರ್ಕರ್ ರವರನ್ನು ಹೇಗೆ ನೋಡಬೇಕು ಎಂದು ತಿಳಿಯಬಹುದು.
ಬಾಬಾಸಾಹೇಬ್ ಅಂಬೇಡ್ಕರ್ ರವರು 1956 ಅಕ್ಟೋಬರ್ 14ರಂದು ಹಿಂದೂ ಧರ್ಮವನ್ನು ತೊರೆದು ಬೌದ್ದ ಧಮ್ಮವನ್ನು ಸ್ವೀಕಾರ ಮಾಡುತ್ತಾರೆ. ಇದಾದ ಕೆಲವೇ ದಿನಗಳ ನಂತರ ಅಕ್ಟೋಬರ್ 30, 1956 ರಂದು ವಿ.ಡಿ.ಸಾವರ್ಕರ್ ರವರು ಕೇಸರಿ ಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ (ಬಾಲಗಂಗಾಧರನಾಥ್ ತಿಲಕ್ ರವರು ಆರಂಭಿಸಿದ ಪತ್ರಿಕೆ) ಬಾಬಾಸಾಹೇಬರ ವಿರುದ್ದ ಒಂದು ಲೇಖನವನ್ನು ಬರೆಯುತ್ತಾರೆ. ಪ್ರೊ. ಗೋದೇಶ್ವರ್ ರವರು ಇದನ್ನು ತಮ್ಮ ಪುಸ್ತಕ “ಭರತ ರಾಷ್ಟ್ರ ವಿರುದ್ದ್ ಹಿಂದೂ ರಾಷ್ಟ್ರ” ಪುಸ್ತಕದಲ್ಲಿ ದಾಖಲಿಸಿದ್ದಾರೆ. ಆ ಲೇಖನದ ಪ್ರಮುಖ ಅಂಶಗಳನ್ನಷ್ಟೇ ನಿಮಗೆ ತಿಳಿಸುತ್ತೇನೆ.
“ಡಾ. ಅಂಬೇಡ್ಕರ್ ಎಷ್ಟೋ ದೃಢವಾಗಿ ನಿಂತು ಸನಾತನ ಧರ್ಮವನ್ನು ಬುಡಸಮೇತ ಕಿತ್ತು ಪ್ರಪಂಚದಲ್ಲಿ ಉತ್ತಮ ಧರ್ಮವೆಂಬ ಬೌದ್ದ ಧರ್ಮವನ್ನು ಸ್ಥಾಪಿಸಲು ಪ್ರಯತ್ನಪಟ್ಟರೂ ಸಾಧ್ಯವಿಲ್ಲ. ಅವರ ಅಳಲು ಮಾತ್ರ ಉಳಿಯುವುದೇ ವಿನಃ ಸನಾತನ ಧರ್ಮಕ್ಕೆ ಯಾವ ಅಪಾಯವೂ ಇಲ್ಲ. ಸ್ವತಃ ಬುದ್ದನೇ ನಲವತ್ತು ವರ್ಷಗಳು ಬೌದ್ದ ಧರ್ಮವನ್ನು ಪ್ರಚಾರ ಮಾಡಿದರೂ, ಸನಾತನ ಧರ್ಮವನ್ನು ನಾಶ ಮಾಡಲು ಆಗಲಿಲ್ಲ. ಸಾಮ್ರಾಟ ಅಶೋಕ ತನ್ನೆಲ್ಲಾ ಶಕ್ತಿಯನ್ನು ಬಳಸಿದರೂ, ಸನಾತನ ಧರ್ಮವನ್ನು ಬುಡಸಮೇತ ಕೀಳಲು ಆಗಲಿಲ್ಲ. ಇನ್ನು ಡಾ.ಅಂಬೇಡ್ಕರ್ ಮಾತ್ರ ಏನು ಮಾಡಲು ಸಾಧ್ಯ”.
“ಹಾಗೆ ಡಾ.ಅಂಬೇಡ್ಕರ್ ನಿಜವಾಗಿಯೂ ಹಿಂದೂ ಸಮಾಜಕ್ಕೆ ಹೊಡೆತ ಕೊಡಬೇಕೆಂದಿದ್ದರೆ ಅವರು ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಹೋಗಬಹುದಿತ್ತು. ಆದರೆ ಹಾಗೆ ಮಾಡಲು ಅವರಿಗೆ ಧೈರ್ಯವಿಲ್ಲ. ಆದರೆ ಕೆಲವರು ಸದ್ಯ ಅಂಬೇಡ್ಕರ್ ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರವಾಗದಿದ್ದದ್ದು ಹಿಂದೂ ಸಮಾಜಕ್ಕೆ ಒಳಿತಾಯಿತು ಎಂದು ಭಾವಿಸುವವರಿದ್ದಾರೆ. ಮತ್ತು ಈ ಕುರಿತು ಅಂಬೇಡ್ಕರ್ ರನ್ನು ಹೊಗಳುತ್ತಾರೆ. ವಾಸ್ತವ ಏನೆಂದರೆ ಅಂಬೇಡ್ಕರ್ ಎಂತಹಾ ಸ್ಥಿತಿಯಲ್ಲಿದ್ದರೆಂದರೆ ಅವರಿಗೆ ಬೌದ್ದ ಧರ್ಮ ಬಿಟ್ಟರೆ ಬೇರೆ ಆಯ್ಕೆಯೇ ಇರಲಿಲ್ಲ. ಹಾಗಾಗಿಯಷ್ಟೇ ಅವರು ಬೌದ್ದ ಧರ್ಮವನ್ನು ಉದ್ದಾರ ಮಾಡಲು ಸೇರಿಕೊಂಡರು. ಹೀಗಿರಬೇಕಾದರೆ ಇಂತಹಾ ವ್ಯಕ್ತಿಯನ್ನು (ಅಂಬೇಡ್ಕರ್) ಹಿಂದೂಗಳು ತಾನೆ ಏಕೆ ಹೊಗಳಬೇಕು. ಇಂತಹಾ ವ್ಯಕ್ತಿಯನ್ನು ಹೊಗಳುವುದು ಧರ್ಮನಿಂದನೆಗೆ ಸಮ!”.
“ದೇವರು ಅವರಿಗೆ (ಡಾ.ಅಂಬೇಡ್ಕರ್) ಒಳ್ಳೆ ಆಯಸ್ಸು ನೀಡಲಿ. ಆದರೆ ನಾವ್ಯಾರೂ ಶಾಶ್ವತರಲ್ಲ. ಮುಂದೆ ಡಾ. ಅಂಬೇಡ್ಕರ್ ಸತ್ತರೆ ಅವರು ಹಿಂದೂ ಆಗಿಯೇ ಸಾಯುತ್ತಾರೆ. ಏಕೆಂದರೆ ಬೌದ್ದ ಧರ್ಮವೂ ಕೂಡಾ ಹಿಂದೂ ಪರಿದಿಯ ಒಳಗೆ ಇರುವ ವೈದಿಕೇತರ ಧರ್ಮ. ಅಂಬೇಡ್ಕರ್ ಶಪಥ ಮಾಡಿದ್ದರಲ್ಲವೇ “ನಾನು ಹಿಂದುವಾಗಿ ಸಾಯುವುದಿಲ್ಲ” ಎಂದು. ಈ ಶಪಥ ಕೇವಲ ಜಂಭ ಕೊಚ್ಚಿಕೊಂಡಂತೆಯಷ್ಟೆ. ಬೌದ್ದ ಧರ್ಮಕ್ಕೆ ಹೋಗಿ ಅವರು ಸಾಧಿಸಿದ್ದಾದರೂ ಏನೆಂದರೆ, ವೈದಿಕ ಧರ್ಮವನ್ನು ತೊರೆದು ಹಿಂದೂ ಪರಿದಿಯ ಒಳಗೇ ಇರುವ ವೈದಿಕೇತರ ಗುಂಪನ್ನು ಸ್ವೀಕರಿಸಿದ್ದಷ್ಟೆ. ಅದನ್ನು ಧರ್ಮವೆಂದು ಹೇಳಿದರೂ ಅದು ಹಿಂದೂ ಧರ್ಮದ ಒಳಗೇ ಇರುವಂತದ್ದು.”
ಇನ್ನು ಬಾಬಾಸಾಹೇಬರ ಜೊತೆಗೆ ಬೌದ್ದ ಧಮ್ಮ ಸ್ವೀಕರಿಸಿದ ಅಸ್ಪೃಶ್ಯ ಸಮುದಾಯಗಳ ಬಗ್ಗೆ ಸಾವರ್ಕರ್ ಹೀಗೆ ಹೇಳುತ್ತಾರೆ. “ಈ ಅಸ್ಪೃಶ್ಯ ಮಹಾರ್ ಜನರು ನಾಗಪುರಕ್ಕೆ ಹೋಗಿ ಬೌದ್ದ ಧರ್ಮ ಸ್ವೀಕರಿಸಿ ವಾಪಸ್ಸು ಅವರ ಹಳ್ಳಿಗಳಿಗೆ ಹೋಗುತ್ತಾರೆ. ಅಲ್ಲಿ ಸನಾತನ ಹಿಂದೂ ಬಹುಸಂಖ್ಯಾತರು ಇವರು ಬೌದ್ದ ಧರ್ಮ ಸ್ವೀಕರಿಸಿದ್ದಾರೆಂಬ ಕಾರಣಕ್ಕೆ ಇವರನ್ನು ಸವರ್ಣೀಯರನ್ನಾಗಿ ಸ್ವೀಕರಿಸುತ್ತಾರೆಯೇ? ಇದು ಅಸಾಧ್ಯ. ಇನ್ನು ಕೆಲವು ಬುದ್ದಿಸ್ಟ್ ಮಹಾರರು ‘ನಾವು ಬೌದ್ದ ಧರ್ಮಕ್ಕೆ ಸೇರಿದ್ದೀವಿ. ನಾವು ದೇವರನ್ನು ನಂಬುವುದಿಲ್ಲ. ನಾವು ಇನ್ನುಮುಂದೆ ಹಿಂದೂಗಳಲ್ಲ. ಹಾಗಾಗಿ ನಮಗೂ ಇತರರಂತೆ ಒಂದೇ ಬಾವಿಯಲ್ಲಿ ನೀರು ತೆಗೆದುಕೊಳ್ಳಲು ಬಿಡಿ ಎಂದರೆ ಸವರ್ಣೀಯರು ಬಿಡುತ್ತಾರೆಯೇ?. ಆದರೆ ಇದಕ್ಕೆ ಬದಲಾಗಿ ಅಸ್ಪೃಶ್ಯ ಸಮುದಾಯಗಳ ಮೇಲೆ ಸವರ್ಣೀಯರಿಗಿದ್ದ ಸ್ವಲ್ಪ ಮೃದು ಧೋರಣೆಯೂ ಮಾಯವಾಗಿ ಹಿಂದೂ ಸಹೋದರತ್ವವೂ ನಾಶವಾಗುತ್ತದೆ. ಹಾಗೂ ಬೌದ್ದ ಧರ್ಮಕ್ಕೆ ಹೋದ ಅಸ್ಪೃಶ್ಯರನ್ನು ಬೇರೆಯವರಂತೆ outcaste ನಂತೆ ನೋಡುತ್ತಾರೆ. ಹೋಗಲಿ ಬೌದ್ದ ಧರ್ಮಕ್ಕೆ ಹೋದ ತಕ್ಷಣ ಈ ಅಸ್ಪೃಶ್ಯರ ಗುಡಿಸಲುಗಳು ಬಂಗಲೆಗಳಾಗಿ, ತಿನ್ನುತ್ತಿದ್ದ ಗಂಜಿಯು ಪರಮಾನ್ನವಾಗಿ ಬದಲಾಗಿ ಬಿಡುತ್ತದೆಯೇ? “. ಹೀಗೆ ಬೌದ್ದ ಮತಕ್ಕೆ ಸೇರಿಕೊಂಡ ಅಸ್ಪೃಶ್ಯರ ಬಗ್ಗೆ ಸಾವರ್ಕರ್ ಎಷ್ಟು ಅಸಡ್ಡೆಯಿಂದ ಹೇಳುತ್ತಾರೆಂದರೆ, ಇದು ಸ್ಪಷ್ಟವಾಗಿ “ಬೌದ್ದ ಧಮ್ಮಕ್ಕೆ ಹೋದರೂ ಅಸ್ಪೃಶ್ಯರನ್ನು ಅಸ್ಪೃಶ್ಯರಾಗಿಯೇ ಕಾಣಬೇಕು” ಎಂಬ ಸಂದೇಶ ಕೊಟ್ಟಂತಿದೆ.
ಜನಾ ನಾಗಪ್ಪ ಅವರ ಈ ಲೇಖನವನ್ನೂ ಓದಿ: ಮರಿಜ್ಹಪಿ ಹತ್ಯಾಕಾಂಡಕ್ಕೆ 46 ವರ್ಷ! – ಸ್ವಾವಲಂಬಿ, ಸ್ವಾಭಿಮಾನಿ ದಲಿತರ ಮಾರಣಹೋಮಕ್ಕೆ ಮುನ್ನುಡಿ ಬರೆದ ಕಮ್ಯುನಿಸಂ!
ಬೌದ್ದ ಧಮ್ಮ, ಬುದ್ದ, ಅಶೋಕ, ಬೃಹದ್ರಥ ಮೌರ್ಯರ ಬಗ್ಗೆ ವಿ.ಡಿ.ಸಾವರ್ಕರ್ ರವರ ನಿಲುವು ಎಂತಹುದು ಎಂದು ಸ್ವತಃ ಅವರೇ ಬರೆದಿರುವ ಪುಸ್ತಕ “six greatest epochs of Indian history” ದಲ್ಲಿ ಒಬ್ಬ RSS ವ್ಯಕ್ತಿ ಹೇಗೆ ತನ್ನಲ್ಲಿರುವ ಕೋಮುವಾದವನ್ನು ಸಮರ್ಥಿಸಬಹುದು ಎಂದು ತೋರಿಸಿದ್ದಾರೆ. ಈ ಪುಸ್ತಕದಲ್ಲಿ ಸಾವರ್ಕರ್ ನೇರವಾಗಿ ಬುದ್ದರ ಬೋಧನೆಗಳೇ ʻAnti- Nationalʼ ಎಂದು ಕರೆಯುತ್ತಾರೆ.
ಏಕೆಂದರೆ ಬುದ್ದನ ಬೋಧನೆಗಳು ವೈದಿಕರ ಆಚರಣೆಯಾದ ಪ್ರಾಣಿಬಲಿಯನ್ನು ಒಪ್ಪುವುದಿಲ್ಲ, ಹಾಗೇ ವೇದಗಳನ್ನು ಒಪ್ಪುವುದಿಲ್ಲ, ಹೋಮಹವನಗಳನ್ನು ಒಪ್ಪುವುದಿಲ್ಲ, ಬುದ್ದನಿಗೆ ಜಾತಿ ಮತ್ತು ಜನಾಂಗಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಅಹಿಂಸಾವಾದವನ್ನು ಪ್ರತಿಪಾದಿಸುತ್ತಾನೆ. ಇದು ವೈದಿಕರ ಆಗ್ರಹಕ್ಕೆ ಮತ್ತು ಹೊಟ್ಟೆಪಾಡಿಗೆ ಕತ್ತರಿ ಏಟು ಬಿದ್ದಂತೆ. ಹಾಗಾಗಿ ಬುದ್ದ ರಾಷ್ಟ್ರ ವಿರೋಧಿಯಂತೆ. ಇದು ಸಾವರ್ಕರ್ ಅವರ ವೈದಿಕ ರಾಷ್ಟ್ರೀಯವಾದದ ನಿಲುವು.
ಮುಂದುವರೆದು ಸಾಮ್ರಾಟ್ ಅಶೋಕ ಚಕ್ರವರ್ತಿಯ ಬಗ್ಗೆ ಹೀಗೆ ಹೇಳುತ್ತಾರೆ. ಅಶೋಕ ಬೌದ್ದ ಧರ್ಮ ಸ್ವೀಕಾರ ಮಾಡಿದ ನಂತರದ ಭಾಗ ಸಾವರ್ಕರ್ ರವರಿಗೆ ಏಕೋ ಇಷ್ಟವಾಗಲೇ ಇಲ್ಲ. ಆ ಸಂದರ್ಭವನ್ನು ಕುರಿತು “ಅಶೋಕ ಬೌದ್ದ ಧರ್ಮವನ್ನು impose ಅಂದರೆ ಹೇರಿಕೆ ಮಾಡಿದ್ದರು. ಅಲ್ಲದೇ ವೈದಿಕರ ಪ್ರಾಣಿ ಬಲಿ ನಿಷೇಧ ಮಾಡಿದರು, ಬೇಟೆ ಆಡುವುದನ್ನೂ ನಿಷೇಧ ಮಾಡಿದರು. ಬಲಿ ಮತ್ತು ಬೇಟೆ ವೈದಿಕರ ಹಕ್ಕು ಅದನ್ನು ನಿಷೇಧ ಮಾಡುವುದು ವೈದಿಕರನ್ನು ಕೆರಳಿಸಿದಂತೆ. ಅಷ್ಟೇ ಅಲ್ಲದೇ ಬೌದ್ದ ವಿಹಾರಗಳು ಕೂಡಾ ವೈದಿಕ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದರು.” ಎಂದು ಹೇಳುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಸಾವರ್ಕರ್ ವೈದಿಕ ವಿರೋಧಿ ಚಟುವಟಿಕೆಯನ್ನು ತಿರುಚಿ “ರಾಷ್ಟ್ರ ವಿರೋಧಿ ಚಟುವಟಿಕೆಯನ್ನು ಮಾಡುತ್ತಿದ್ದರು” ಎಂದು ಹೇಳುತ್ತಾರೆ.
ಬಿಗ್ ಕನ್ನಡದ ವಾಟ್ಸಾಪ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಹಳ ಮುಖ್ಯವಾಗಿ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ರವರ ಕೊಲೆಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಆದರೆ ಇದನ್ನು ಸಮರ್ಥಿಸುತ್ತಿರುವ ಇಂದಿನ ಕೋಮುವ್ಯಾಧಿಗಳಿಗೆ ಪ್ರೇರಣೆಯು ಎಲ್ಲಿದೆ ನೋಡಿ. “ಚಾಣಕ್ಯನು ದೇಶದ ರಕ್ಷಣೆಗಾಗಿ ಸಾಮ್ರಾಟ್ ಮಾಹಾಪದ್ಮ ನಂದ (ನಂದ ವಂಶ) ನನ್ನು ಚಂದ್ರಗುಪ್ತನಿಂದ ಕೊಲ್ಲಿಸಿದನು. ಹಾಗೇ ಅಶೋಕನ ಮೊಮ್ಮಗ ಬೃಹದ್ರತ ಮೌರ್ಯನನ್ನು ಪುಷ್ಯಮಿತ್ರನು ಶುಂಗನು ದೇಶ ರಕ್ಷಣೆಗಾಗಿ ತಲೆ ಕಡಿದನು. ಇದು ಪುಷ್ಯಮಿತ್ರ ಮಾಡಲೇಬೇಕಾದ ರಾಷ್ಟೀಯ ಕರ್ತವ್ಯ (just a National Duty)” ಎಂದು ಸಾವರ್ಕರ್ ಅಭಿಪ್ರಾಯ ಹೇಳುತ್ತಾರೆ. ಇದೇ ಕರ್ತವ್ಯವನ್ನು ಪಾಪ ಗಾಂಧೀಜಿಯನ್ನು ಗೋಡ್ಸೆ ಕೈಯಿಂದ ಕೊಲೆ ಮಾಡಿಸಿರಬೇಕು ಅಲ್ವೇ?. Wow ಒಬ್ಬ ವೈದಿಕ ಮಾಡಿದ ಕೊಲೆಯನ್ನು national duty ಎಂದು ಹೇಳಿದ ಸಾವರ್ಕರ್ ರವರಿಗೆ ಇನ್ನೂ “ಭಾರತ ರತ್ನ ” ಸಿಗಲೇಬೇಕು ಅಲ್ವೇ?.
ಸಾವರ್ಕರ್ ರವರ ಪ್ರಕಾರ ಬುದ್ದನ ಬೋಧನೆಗಳು anti-national, ಅಶೋಕ anti-national, ಬಾಬಾಸಾಹೇಬ್ ಅಂಬೇಡ್ಕರರನ್ನು ಹೊಗಳುವುದಂತೂ ಧರ್ಮನಿಂದನೆಯೇ ಆಗುತ್ತದಂತೆ. ಈಗ ಯೋಚಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೂ ಮತ್ತು ವಿ.ಡಿ. ಸಾವರ್ಕರ್ ರವರಿಗೂ ಎಲ್ಲಿಯ ಹೋಲಿಕೆ? ಬುದ್ದ ಮತ್ತು ಆತನ ಧಮ್ಮ ಎಂದು ಭಾರತದಲ್ಲಿ ಪುನಃ ಬೋಧಿ ವೃಕ್ಷಕ್ಕೆ ನೀರೆರೆದ ಬಾಬಾಸಾಹಾಬರಿಗೂ, ಬುದ್ದನ ಬೋಧನೆಗಳೇ ರಾಷ್ಟ್ರ ವಿರೋಧಿ ಎನ್ನುವ ಸಾವರ್ಕರ್ ಗೂ ಎಲ್ಲಿಯ ಹೋಲಿಕೆ ಯೋಚಿಸಿ. ವಿಮೋಚಕನಿಗೂ ವಿನಾಶಕನಿಗೂ ಇರುವಷ್ಟು ಅಂತರವಿದೆ. ಹಾಗಾಗಿ ಸಾವರ್ಕರ್ ವೈದಿಕರ ನಾಯಕ ಮಾತ್ರ. ಬಹುಶಃ ಒಂದು ವಾಕ್ಯವನ್ನು ಸಾವರ್ಕರ್ ರವರಿಗೆ ಮೀಸಲಿಡಬಹುದು “The man who is just like pushyamithra”.
ಜೈ ಭೀಮ್
- ಜನಾ ನಾಗಪ್ಪ
31 ಡಿಸೆಂಬರ್ 2021ರಲ್ಲಿ ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದ್ದ ಲೇಖನ