‘ಕಂಬಳ’ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ ಎಂಬ ‘ಆರೋಪ’ ಇದೆ. ನನ್ನ ಪ್ರಕಾರ ಇದು ಜಾನಪದವೂ ಅಲ್ಲ, ಕ್ರೀಡೆಯೂ ಅಲ್ಲ.. ಮುಗ್ದ ಪ್ರಾಣಿಗಳನ್ನು ಹಿಂಸಿಸಿ ಹಣ ಮಾಡುವ ಜೂಜಿನ ಆಟ ಅಷ್ಟೇ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸಿ ಆನಂದ ಪಡುವವರು ಶ್ರೀಮಂತರು, ಹಣವಂತರು ಅಥವಾ ಬಲಿಷ್ಟ ಜಾತಿಯವರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಣಗಳನ್ನು ಅತ್ಯಂತ ದಷ್ಟಪುಷ್ಟವಾಗಿ ಬೆಳೆಸಲು ಅನ್ನಕ್ಕೇ ಗತಿಯಿಲ್ಲದ ಇಲ್ಲಿನ ಕಡುಬಡವರಾದ ಕೊರಗ, ಮನ್ಸ, ಮಲೆಕುಡಿಯ, ಕುಣಬಿ, ಬಿಲ್ಲವ, ಮೊಗವೀರ ಜಾತಿಗಳವರಿಗೆ ಸಾಧ್ಯವೇ ಇಲ್ಲ.

ಎಂದೂ ಯಾವುದೇ ಆಟಗಳ ಬಗ್ಗೆ ಆಸಕ್ತಿ ತೋರದ ಸಂಘಪರಿವಾರಕ್ಕೆ ಈ ಕಂಬಳ ಅನ್ನುವ ಆಟ ಆಕರ್ಷಕವೆನಿಸಿರುವುದು ಇದು ಶ್ರೀಮಂತರ, ಮೇಲ್ಜಾತಿಗಳ ಆಟ ಎಂಬ ಕಾರಣಕ್ಕೇ ಎಂಬುದು ಗಮನಾರ್ಹ ಮತ್ತು ದಕ್ಷಿಣ ಕನ್ನಡದಲ್ಲಿ ಬಿಜೆಪಿ, ಲೋಕಸಭಾ ಚುನಾವಣೆಗೆ ಸಜ್ಜಾಗಲು ಇದೊಂದು ಸಾಂದರ್ಭಿಕ ‘ಜನಪ್ರಿಯ’ ತಂತ್ರ ಕೂಡ.

ಅಸ್ಪೃಶ್ಯರಿಗೇ ಅಸ್ಪೃಶ್ಯರಾದ ಆದಿವಾಸಿ ಕೊರಗ ಸಮುದಾಯದ ಸುಂದರ್ ಬಳಿ ಒಮ್ಮೆ ಕಂಬಳದ ಬಗ್ಗೆ ಮಾತನಾಡುತಿದ್ದೆ. “ಎಂತ ಕಂಬಳ ಸಾರ್.. ಕೋಣಗಳನ್ನು ಓಡಿಸುವ ಗದ್ದೆಯನ್ನು ಹಸನಾಗಿ ಹದ ಮಾಡಿದ ನಂತರ ಕೋಣಗಳನ್ನು ಓಡಿಸುವ ಮುಂಚೆ ನಮ್ಮ ಕೊರಗರನ್ನು ಓಡಿಸುತ್ತಿದ್ದರು.. ಆ ಹದ ಮಾಡಿದ ಗದ್ದೆಯಲ್ಲಿ ಕಲ್ಲು, ಮುಳ್ಳು, ಗಾಜಿನ ಚೂರುಗಳಿದ್ದರೆ ಅವು ಮೊದಲು ನಮ್ಮ ಕಾಲಿಗೆ ಚುಚ್ಚುತ್ತಿದ್ದವು.. ಆ ಕಲ್ಲು ಮುಳ್ಳುಗಳನ್ನು ನಮ್ಮ ಮೂಲಕ ಆರಸಿ, ಹುಡುಕಿ ತೆಗೆದುಹಾಕಿ, ಗದ್ದೆಯನ್ನು ಶುದ್ದೀಕರಿಸಿದ ನಂತರ ತಮ್ಮ ಬೆಲೆಬಾಳುವ ಕೋಣಗಳನ್ನು ಓಡಿಸುತ್ತಿದ್ದರು..! ಕೊರಗರಾದ ನಮಗಿಂತಲೂ ಆ ಕೋಣಗಳೇ ಇವರ ಪಾಲಿಗೆ ಶ್ರೇಷ್ಠ..!!” ಎಂದ. ನಾನು ಆ ‘ಮನುಷ್ಯರ’ ಆ ಅಮಾನುಷ ನಡುವಳಿಕೆಯನ್ನು ಕೇಳಿ ನಡುಗಿಹೋದೆ!

ಇಂತಹ ಹಿನ್ನೆಲೆಯ ಕಂಬಳ ಈಗ ಬೆಂಗಳೂರಿಗೂ ಬಂದಿದೆ, ಸಂಘಪರಿವಾರ ಕೃಪಾಪೋಷಿತ ಈ ‘ಸ್ಪರ್ದೆಗೆ’ ನಮ್ಮ ತೆರಿಗೆ ಹಣದಲ್ಲಿ ಒಂದು ಕೋಟಿಯನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ದಾರಾಳವಾಗಿ ನೀಡಿ ಪ್ರೋತ್ಸಾಹಿಸಿದೆ..!!

Leave a Reply

Your email address will not be published. Required fields are marked *