ಬೀದಿ ನಾಟ್ಕದಿಂದ ಒಂದಷ್ಟು ವಿಚಾರ, ಸಾಹಿತ್ಯದ ಓದು ಮೈಗತ್ತಿತ್ತು. ಇದರ ಪೂರ್ವದಲ್ಲಿ ಊರಿನ ನಾವೊಂದಷ್ಟು ಹುಡುಗ್ರು ಅಂಬೇಡ್ಕರ್ ಜಯಂತಿ, ಸ್ವಾತಂತ್ರ್ಯ ದಿನಾಚರಣೆ ಮಾಡ್ತಿದ್ದೊ. ಒಂದ್ಸಲ ಮಧ್ಯೆ ರಾತ್ರಿ ತ್ರಿವರ್ಣದ ಬಾವ್ಟ ಹಾರ್‍ಸಿದ್ದೊ. ಈ ತರದ ಹಂಬಲಗಳು ನಮ್ಮಲ್ಲಿದ್ದವು. ಊರಿನ ಹಿಂದಿನವರದ ನಂತರದ ನನ್ನ ತಲೆಮಾರಿನಲ್ಲಿ ನಾನು, ಮತ್ತೆ ನನ್ನ ನಂತರದ ತಲೆಮಾರಿನ ಹುಡುಗರು ಒಂತರದಲ್ಲಿ ಢಿಪ್ರೆಂಟಾಗಿದ್ದೆವು. ನಾವು ಜಾತಿಗೀತಿ ನೋಡ್ತಿರ್‍ಲಿಲ್ಲ. ಜೊತೆಗಿದ್ದಾಗ ಉಣ್ಣೋದು, ತಿನ್ನೋದರ ಬಗ್ಗೆ ಜಾತಿ ಅಡ್ಡಿಬರ್‍ತಿಲಿಲ್ಲ. ಆದರೆ ಮನೆಗಳಲ್ಲಿ ಮಾತ್ರ ಈ ತರ ಇರೋದ್ದಕ್ಕೆ ಕಷ್ಟ ಆಗ್ತಿತ್ತು. ಸಾಯಂಕಾಲದ ಹೊತ್ತು ಊರ ಕೆರೆಯಂಗಳದ ಸಂಜೆ ಹೊಂಬಿಸಲಲ್ಲಿ ಮಾತಾಡುವುದು, ಹಾಗೆ ಮಾಡೋಣ, ಹೀಗೆ ಮಾಡೋಣ ಅಂತೆಲ್ಲ ಕನವರಿಸುತ್ತಿದ್ದೆವು. ಊರಿನ ಬಗ್ಗೆ ನಮ್ಮದೇ ಮುಗ್ಧ ಯುಟೋಪಿಯಾದ ಕನಸು, ಹಂಬಲ, ಹಳವಂಡಗಳು ಸಂಜೆಯ ಸೂರ್ಯ ಕಿರಣದಂತೆ ನಮ್ಮನ್ನು ಒಂತರ ಬೆಚ್ಚಗೆ ಹರಡಿಕೊಂಡು ಉದ್ದೀಪಿಸುತ್ತಿದ್ದವು.
ಕ್ರಿಕೆಟ್ ಊರಲ್ಲಿ ಶುರುವಾಯ್ತು. ಇದೊಂತರ ಆ ಕ್ಷಣಕ್ಕೆ ಜಾತಿ ಮೀರಿ ನಾವೆಲ್ಲರೂ ಒಂದೇ ಊರಿನವರು ಎಂಬ ಬಾಂದವ್ಯವನ್ನುಂಟು ಮಾಡುತ್ತಿತ್ತು. ಇದೊಂತರ ನಾವೆಲ್ಲರೂ ಒಟ್ಟಿಗೆ ಆಡುತ್ತಿದ್ದ ಆ ದಿನಗಳು ನಮ್ಮೊಳಗಿನ ರೊಮ್ಯಾಂಟಿಕ್ ಯುಗವಾಗಿಯೇ ಕಂಡಿದ್ದವು. ನಾನು ಒಳ್ಳೆ ಕೊಲ್ಟೆ ಬಾಟ್ಸ್‌ಮನ್ ಹಾಗೂ ಫಾಸ್ಟೆಸ್ಟ್ ಬೌಲರ್ ಆಗಿದ್ದೆ. ಮೊದಲ ಬಾರಿಗೆ ಊರಲ್ಲಿ ಒಂದಾಗಿ, ತಂಡವಾಗಿ ನೆರೆ ಊರಿನ ಜೊತೆ ಆಡಿದ್ದುದು ಒಂತರದ ಅನುಭವ. ಅಲ್ಲಿಂದ ಕ್ರಿಕೆಟ್‌ಗೆ ಅಕ್ಕಪಕ್ಕದ ಊರುಗಳು ಬರ್‍ತಿದ್ವು. ನಾವೆಲ್ಲ ಒಂದು ತಂಡವಾಗಿ ಬೇರೆ ಊರುಗಳ ಜೊತೆ ಬೆಟ್ಸ್ ಕಟ್ಟಕೊಂಡ್ ಆಡ್ತಿದ್ದೊ. ನಾನೇ ಮುಖ್ಯ ಬಾಟ್ಸ್‌ಮನ್ ಅಲ್ಲದೆ, ಇನ್ನೂ ಮೂರ್‍ನಾಲ್ಕು ಜನ ಚೆಂದಾಗಿ ಆಡ್ತಿದ್ದೊ. ಭಾನುವಾರ ಮ್ಯಾಚೋ ಮ್ಯಾಚು. ನನಗೆ ಆಡ್ ಮೇಯಿಸೋದ್ರ ಜೊತೆಗೆ, ಕ್ರಿಕೆಟ್ ಆಡೋದೇ ಮುಖ್ಯವಾಗಿತ್ತು. ಅದಕ್ಕೋಸ್ಕರ ಆಡುಗಳನ್ನು ಬೇಗ ಬಿಟ್ಟು ನರ್ಸರಿಗೆ ನುಗ್ಸಿ, ಮಧ್ಯಾಹ್ಮ ಎರಡರ ಹೊತ್ತಿಗೆ ಹೊಟ್ಟೆ ತುಂಬ್ಸಿ, ಗುರುವಮ್ಮನ ಹಳ್ಳ ಮತ್ತು ಯಂಗಯ್ಯನ ಕೆರೆ (ಈಗ ಈ ಕರೆ ಡಿ.ಸಿ ಆಫಿಸ್ಸಾಗಿದೆ) ತಕೆ ಹೊಡ್ಕೊಂಡ್ ಬಂದ್ಬಿಟ್ಟು ಕ್ರಿಕೆಟ್ ಆಡ್ತಿದ್ದೆ. ಎಷ್ಟೋ ಸಲ ಅವ್ವ ಪೇಟೆಗೋಗಿ ಬರ್ತ ನಾನು ಆಡನ್ನು ಸರಿಯಾಗಿ ಮೇಯ್ಸಿಲ್ಲ ಅಂತ ಕುಡ್ಲನ್ನು ಬೀಸಿ ಎಸ್ದಿದ್ದು ಇದೆ. ನಾನು ಅಲ್ಲಿ ಹೀರೋ ತರ ಇದ್ದಂತವನು ಅವ್ವನಿಗೆ ಹೆದರಿ ಓಡುತ್ತಿದ್ದನ್ನು ಇತರರು ಸುಮ್ಮನೆ ನೋಡಿಕೊಂಡು ನಿಂತಿರುತ್ತಿದ್ದರು.
ಪಕ್ಕದ ಕುಂಬಾಪುರದವರ ಮೇಲೆ ಕ್ರಿಕೆಟ್ನಲ್ಲಿ ನಮ್ಮದೇ ಮೇಲುಗೈ. ಮತ್ತೆ ಗಾರೇ ಕೆಲ್ಸ ಮಾಡ್ಕೊಂಡು ಬಂದು ಬಟ್ವಾಡಿ ತಕೊಂಡ್ ಬೆಟ್ಸ್ ಕಟ್ಟಿ ಹಣ ಗಳಿಸ್ತಿದ್ರು. ನಾನು ಬರೀ ಕ್ರಿಕೆಟ್ಗಾಗಿ ಮಾತ್ರ ಆಡ್ತಿದ್ದೆ. ಮೇಲಾಗಿ ಆಗ ಬಿ.ಎ ಓದ್ತಿದ್ದೆ. ಕಾಲೇಜಿನಲ್ಲಿ ಕ್ರಿಕೆಟ್ ಆಡ್ತಿದ್ದೆ ಕೂಡ. ಹಾಗಾಗಿ ನನಗೆ ಕ್ರಿಕೆಟ್ ಸ್ಪೀಡ್ ಬೋಲಿಂಗ್, ಕೊಲ್ಟೆ ಬಾಟಿಂಗ್ ಚೆನ್ನಾಗಿ ಬರ್‍ತಿತ್ತು. ಹಂಗಾಗಿ ನನ್ನ ನಂಬಿ ಬೆಟ್ಸ್ ಹಾಕೋರು. ಆಮೇಲೆ ಒಂದಿಬ್ರು ಚೆನ್ನಾಗಿ ಬಾಟ್ ಮಾಡೋರು. ಆಡ್ತ ಆಡ್ತ ಕೆಲವ್ರು ಕಲ್ತ್ಕೊಬುಟ್ರು.
ನಾನು ಫೈನಲ್ ಇಯರ್‌ಗೆ ಹೋಗಷ್ಟರೊಳಗೆ ಊರಲ್ಲಿ ಇನ್ನೂ ಕೆಲವು ಹುಡುಗ್ರು ಪಿಯುಸಿ, ಬಿ.ಎ ಮೆಟ್ಲು ಹತ್ತಿದ್ರು. ಹಾಗಾಗಿ ಈ ತಂಡ ಹೊರಗಿನ ಪ್ರಪಂಚಕ್ಕೆ ತೆರೆದುಕೊಂಡು ಒಂಚೂರು ಬೇರೆ ತರ ಲಿಬ್ರಲ್ಲಾಗಿ ಇರ್‍ತಿದ್ದೊ. ನಾನು ಬಿ.ಎ.ಗೆ ಕುವೆಂಪು ಕಾಲೇಜ್ಗೆ ಸೇರಿದ್ದೆ. ಊರಿನ ಇತರರು, ಪಿ.ಯು.ಸಿ ಮತ್ತು ಬಿ.ಎ.ಗೆ ಇಲ್ಲಿಗೆ ಸೇರ್‍ಕೊಂಡಿದ್ರು. ನಮ್ಮೊಳಗೆ ಜಾತಿ ಇರ್‍ತಿಲಿಲ್ಲ. ಎಲ್ಲರೂ ಕೆಲವೊಮ್ಮೆ ಕಾಲೇಜಿಗೆ ಹೊಲ್ಮಾಳದ ಮೇಲೆ ನಡೆದು ಹೋಗ್ತಿದ್ದೊ. ನಾವೆಲ್ಲ ಒಂತರ ಆ ಹೊತ್ತಲ್ಲಿ ಜಾತಿ ಬಗ್ಗೆ ತಲೆ ಕೆಡಿಸ್ಕೊಂಡಿಲಿಲ್ಲ. ಮತ್ತೂ ಅದು ನಮಗೆ ತೊಡಕಾಗಿಯೂ ಕಂಡಿರಲಿಲ್ಲ.
ಮತ್ತೆ ನಾವುಗಳು ಈ ಕನ್ನಡರಾಜ್ಯೋತ್ಸವ, ಸ್ವತಂತ್ರ ದಿನಾಚರಣೆ ಮಾಡ್ತಿದ್ದೊ. ಸ್ಕೂಲ್ ತಾವು ಜನ ಸೇರಿಸ್ತಿದ್ದೊ. ಮತ್ತೆ ಖರ್ಚಿಗಾಗಿ ಕೆಲವರ ಹತ್ರ ಕಾಸ್ ಕಲೆಕ್ಟ್ ಮಾಡ್ತಿದ್ದೊ. ಸಾಂಸ್ಕೃತಿಕ ಕಾರ್ಯಕ್ರಮ ಅಂತ ಮಾಡೋವಿ. ಸಂಜೆ ಹೊತ್ತು ನಾಟ್ಕ, ಏಕಪಾತ್ರಾಭಿನಯ ಇರ್‍ತಿದ್ದವು. ನಾನೇ ಸ್ರ್ಕಿಫ್ಟ್ ಮಾಡೋ ಸಾಹಸ ಮಾಡ್ತಿದ್ದೆ. ನಾವೆಲ್ಲ ಗೆಳೆಯ ರಾಮೂರ್ತಿಯವರ ಕುರಿಕೊಪ್ಲಲ್ಲಿ ಪ್ರಾಕ್ಟೀಸ್ ಮಾಡ್ತಿದ್ದೊ. ಈ ಫಿರಿಯಡ್ನಲ್ಲಿ ಜಾತಿ ಜಗಳ, ಕೆಲವರ ಕಿರಿಕ್ಕುಗಳ ಆಚೆಗೂ ನಾವು ಮುಗ್ಧವಾಗಿ ಆ ವಯಸ್ಸಿನ ತಿಳಿವಳಿಕೆ ಮೇಲೆ ನಮ್ಮದೇ ವಿಶ್ವಾಸವನ್ನು ಹೊಂದಿದ್ದೆವು.
ಇದರ ಮಧ್ಯೆ ಕ್ರಿಕೆಟ್ ನಮ್ಮೆಲ್ಲರನ್ನು ಒಂದೇ ಊರಿನವರೆಂದು ಅಂತ ಒಗ್ಗೂಡಿಸುತ್ತಿತ್ತು. ಜಾತಿ ಕಿರಿಕ್ಕುಗಳು, ಕೆಲವರ ಕಿತಾಪತಿಗಳು ಊರುಗಳಲ್ಲಿ ಸಹಜ ಅಂತ ನಾವೂ ನಂಬಿದ್ದ ದಿನಗಳವು. ಹಾಗಾಗಿ ನಾವೊಂದಷ್ಟು ಹುಡುಗರು ನಮ್ಮ ಪಾಡಿಗೆ ನಾವು ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಆಕ್ಟೀವ್ ಆಗಿ ಇರ್‍ತಿದ್ದೆವು. ಅಪ್ಪ ಅಮ್ಮಂದಿರ ಕೈಲಿ ಬೈಯ್ಸಿಕೊಂಡರೂ, ನಾವು ಊರಲ್ಲಿ ಅದು ಇದು ಮಾಡಲು ಉತ್ಸುಕರಾಗಿರುತ್ತಿದ್ದೆವು. ನಮ್ಮ ತಂದೆ ತಾಯಿಗಳಲ್ಲಿಯೂ ನಮ್ಮ ಬಗ್ಗೆ ಒಂತರದ ವಿಶ್ವಾಸವಿತ್ತು ಕೂಡ.
ಜೀವನದ ಎಲ್ಲ ಸಂದರ್ಭಗಳಲ್ಲಿ ನಾವು ತೀರಾ ಜಾತಿಗಂಟಿಕೊಂಡೆ ಬದುಕಲಾರೆವು. ಮನುಷ್ಯರಂತೆ ಬಾಳಲು ಹೊರಟಾಗ ನಮ್ಮೊಳಗಿನ ಒಳಿತು ಕೆಡಕಿನ ಲೆಕ್ಕಚಾರಗಳು ನಮ್ಮನ್ನು ಜಾತಿಯಾಚೆಗಿನ ಮಾನವತೆ ಬಗ್ಗೆ ಸಾಂದರ್ಭಿಕವಾಗಿಯಾದರೂ ಹಂಬಲಿಸುವಂತೆ ಮಾಡುತ್ತವೆ. ಆದರೆ ಇವುಗಳಿಗೆ ಶೈಕ್ಷಣಿಕವಾದ ವಿಚಾರ, ಅಭಿವ್ಯಕ್ತಿ ವಿನ್ಯಾಸಗಳಿರುವುದಿಲ್ಲವಷ್ಟೆ. ಇಂತಹ ವಿಚಾರ ಹಾಗೂ ಅಲೋಚನೆಗಳ ಜೊತೆ ಶೈಕ್ಷಣಿಕ ಕಲಿಕೆಯ ನಂಟಸ್ಥಿಕೆ ಲಭಿಸಿ, ಇವುಗಳು ಸ್ಪಷ್ಟವಾದ ಸಾಮಾಜಿಕ ಸತ್ಯ ಹಾಗೂ ವೈಚಾರಿಕತೆಯ ರೂಪ ಪಡೆಯುತ್ತವೆ. ನಾನು ಬೀಫ್ ತಿನ್ನುವುದ್ದನ್ನು ಬಿಟ್ಟಿದ್ದೆ. ಮನೇಲಿ ಆಗ ವಾರಕ್ಕೆರಡು ಸಲ ಪೇಟೆಕೋಳಿ, ಮರಿ ಮಟನ್ ತರ್ತಿದ್ದ ಅಪ್ಪ. ಹಾಗಾಗಿ ಮನೇಲಿ ದನಿನ ಬಾಡು ತಿರ್ತಿರಿಲ್ಲ. ಮತ್ತೆ ನಾನಾಗ ಮಟನ್ ತಿನ್ತಿರ್ಲಿಲ್ಲ. ಪೈತ್ಗೆ ಆಯ್ತವೆ ಅಂತ ಹೆದ್ರಿ ಕೋಳಿ ಮಾತ್ರ ತಿಂತಿದ್ದೆ.
ಹೀಗಿರುವಾಗ ಊರ ಕೆಲವು ಕಿರಿಕ್ ಮನಸ್ಸುಗಳಿಂದ ಬಹಿಷ್ಕೃತರಾದಂತಿದ್ದ ನಾವೆಲ್ಲ ಒಂದು ಸಂಜೆ ರಾಮನಗರದ ಸಾಬ್ರು ಕೇರಿಯಿಂದ ಬೀಫ್ ಕಬಾಬ್ ತಂದು ಎಲ್ಲರೂ ತಿನ್ದಿದ್ದೆವು. ಅದು ಕ್ರಿಕೆಟ್ ಆಡೋ ಜಾಗದಲ್ಲಿ ಆ ಜಾತಿ ಈ ಜಾತಿ ಎನ್ನದೇ ಎಲ್ಲರೂ ಹೇಯ್ ತಿನ್ರೊ, ಏನೂ ಆಗಲ್ಲ ಅಂತ ತಿಂದಿದ್ದೊ. ನಾನು, ಮತ್ತೆ ನನ್ನ ಸ್ಪೃಶ್ಯ ಜಾತಿ ಸ್ನೇಹಿತರ ಜೊತೆಗೆ, ಒಕ್ಕಲಿಗ ಸ್ನೇಹಿತನೂ ಕೂಡ ಸೇರಿ ಎಲ್ಲರೂ ಬೀಫ್ ತಿಂದೆವು. ಇದು ನಮ್ಮ ಸ್ನೇಹದ ದ್ಯೋತಕವೆಂಬಂತೆ ಎಲ್ಲರ ಮುಖಗಳಲ್ಲಿ ಆಕ್ಷಣ ಗೆಲುವಿನ ನಗೆ ಹೊಮ್ಮಿಸಿದ್ದೆವು. ಇವೆಲ್ಲ ಒಂತರ ನಮಗೆ ಬಹಳ ದೊಡ್ಡ ನಂಬಿಕೆ ಹಾಗೂ ರೋಮಾಂಚನಕಾರಿಯಾದ ಸನ್ನಿವೇಶಗಳೇ ಆಗಿದ್ದವು. ನನ್ನ ಜೊತೆಗಿದ್ದವರಿಗೆ ಈ ಬೆಳವಣಿಗೆಗಳು ಗೋಚರವಾದವೋ ಇಲ್ಲವೋ, ನನಗಂತು ನನ್ನ ಶೈಕ್ಷಣಿಕ ಜ್ಞಾನ ಮತ್ತು ನನ್ನ ಸಾಮಾಜಿಕತೆ ಮಿಳಿತುಗೊಂಡು, ನನ್ನದೇ ಆದ ಒಂದು ಅಲೋಚನೆ ನನ್ನಲ್ಲಿ ಚಿಗುರುತ್ತಲೇ ಇತ್ತು. ಅದರ ನೆರಳಲ್ಲಿ ನಾನು ನಡೆಯುತ್ತಾ ಹೋದಂತೆಲ್ಲ, ನನ್ನ ವಿಚಾರ, ಸಮಾಜದ ಗ್ರಹಿಕೆಗಳಿಗೆಲ್ಲ ಹೊಸ ಕೈಕಾಲು ಮೂಡಿದವು.
ಹಿರಿಯ ದಲಿತ ಕವಿ ಗೋವಿಂದಯ್ಯನವರು ತಮ್ಮ ಅ ಆ ಮತ್ತು ಎಂಬ ಕವಿತೆಯಲ್ಲಿ ಹೇಳುವಂತೆ,
’ಕತ್ತಲೆ ಬೋರ್ಡಿನ ಮೇಲೆ ಕಲಿತ ಅ ಆ
ಅಕ್ಷರಗಳ ನಡುವೆ ಅವ್ವ ಅಪ್ಪನ ಆಸೆಗಳು ಸಿಕ್ಕಿದವು
ನಮ್ಮೂರ ಕೇರಿ ಸಮಾದಿಗಳು ಸಿಕ್ಕಿದವು
ಅಸ್ಥಿಪಂಜರಗಳ ಪಾತಾಳದಲ್ಲಿ
ಒಂದಿಷ್ಟು ಮಾತುಗಳು ಸಿಕ್ಕಿದವು’
ಅನ್ನುವ ಹಾಗೆ ಅಕ್ಷರ ಸಿಕ್ಕ ನಂತರ ಕಲಿತ ದಲಿತರೊಳಗೆ ಬಹುಶಃ ಈ ಒಳಬೆಳವಣಿಗೆ ಸಹಜವಾಗಿ ಜರುಗುವಂತೆ ನನ್ನೊಳಗೂ ಕಣ್ಬಿಟ್ಟಿತು.
ಇದನ್ನೂ ಓದಿ: ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ ಮತ್ತು ಭೋವಿಗಳ ಅಂದಿನ ಅಟ್ಟಹಾಸವೂ!
ಊರಿನ ಹಿಂದಿನ ತಲೆಮಾರುಗಳ ಕತೆ ಒಂಥರವಿತ್ತು. ನಾನು ಹಿಂದಿನ ಸಂಚಿಕೆಯಲ್ಲಿ ಹಂಚಿಕೊಂಡ ಜಾತಿ ಅನುಭವದ ಲೋಕವೂ, ಮತ್ತೆ ಓಂಪ್ರಥಮವಾಗಿ ಅಂಬೇಡ್ಕರ್ ನನಗೆ ಕಾಣಿಸಿಕೊಂಡದ್ದು ಒಂಥರವಾದರೆ, ನಾವು ಹಂತ ಹಂತವಾಗಿ ಓದುತ್ತಾ ಹೋದಂತೆಲ್ಲ, ಲೋಕದ ಜೊತೆ ಬೆರೆತು ವಿಶಾಲವಾದಂತೆಲ್ಲ, ಒಟ್ಟಾರೆ ನಮ್ಮೊಳಗೆ ಈ ಊರು ಮತ್ತು ಇಲ್ಲಿನ ಸಂಬಂಧಗಳ ಆಚೆಗಿನ ಸಾಧ್ಯತೆಗಳ ಹೊಸ ನಂಟು ನಾವು ಊರಿನ ಇತರರಿಗಿಂತಲೂ ಬೇರೆಯಾಗಿ ಇರುವುದೂ ಇನ್ನೊಂದು ಮಗ್ಗಲೂ ಸಹ ಆಗಿತ್ತು. ಏನೋ ಒಂತರ ಹೊಸ ಸಂಚಾರ, ಸಂಚಲನೆ ನಮ್ಮೊಳಗೆ, ನಡೆದಷ್ಟು ದಾರಿ, ತಿರುಗುವ ಊರೆಲ್ಲವೂ ನಮ್ಮದೇ ಎಂಬಂತಹ ಹೊಸ ಭಾವನೆ, ವಿಚಾರದ ಕಲ್ಪನೆಗಳು ನನ್ನನ್ನು ಹೆಚ್ಚು ಭಾವನಾವಾದಿಯಾಗುವಂತೆಯೂ, ಒಳಿತನ್ನು ಬಿಡದ ಒಂದು ಶ್ರದ್ಧೆಯನ್ನು ಸಹ ನನ್ನೊಳಗೆ ಇಮ್ಮಡಿಗೊಳಿಸಿದವು. ಬಹುಶಃ ಈ ಪ್ರವೃತ್ತಿಗಳು ನನ್ನೊಳಗಿನ ಮನುಷ್ಯನನ್ನು ಕಾಪಿಡುತ್ತಿದ್ದವೆನೊ. ಈ ವಿಚಾರದಲ್ಲಿ ಮನೆಯ ಒಳಗಿನ ಅಪ್ಪ ಅವ್ವನ ದೈವಿಕತೆ, ಅಪ್ಪನ ಹಾರ್‍ಮೋನಿಯಂ ಖಯಾಲಿ, ದೇವರ ಬಗೆಗಿನ ಆತನ ಶ್ರದ್ಧೆ, ಟೇಪ್ರೆಕಾರ್ಡು, ನಾನಾ ಹರಿಕತೆಗಳ ಕಥಾಲೋಕ, ರಾಜ್ಕುಮಾರ್ ಸಿನಿಮಾಗಳನ್ನು ಕ್ಯಾಸೆಟ್ಟಿನಲ್ಲಿ ಕೇಳುವ ಆತನ ಸದಭಿರುಚಿ, ಜೊತೆಗೆ ಅವ್ವನ ಜೀವನದ ಅಚ್ಚುಕಟ್ಟುತನ ಎಲ್ಲದರ ಒಟ್ಟು ಮೊತ್ತ ನಾನು ಹೀಗಿರಲು ಕಾರಣವೇನೊ. ರಾಮನಗರದಲ್ಲಿ ಹಿಂದೂ ಮುಸ್ಲೀಮ್ ಗಲಾಟೆಯಾಗುವರೆಗೂ ಅಪ್ಪವ್ವಂದಿರ ದೇವರುಗಳು, ದೆವ್ವಗಳು, ಸಂತರು, ಸಿದ್ಧರು ನನ್ನನ್ನು ತುಂಬಾ ಆವರಿಸಿಕೊಂಡು ಸದಾ ಒಳಿತಿಗಾಗಿ ಹಲುಬುವಂತೆ ಮೆತ್ತಾಗಿಸಿದ್ದವು.
ನಿಜಕ್ಕೂ ನನ್ನ ಸೋದರಮಾವಂದಿರ ನಾಟ್ಕದ ಖಯ್ಯಾಲಿ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿಯೇ ತೀರಬೇಕು. ಅದರಲ್ಲೂ ಅವ್ವನ ಮೊದಲ ತಮ್ಮ ಬೆಟ್ಮಾವ. ಈತನ ದುಡಿಮೆ, ಈತನ ಶ್ರದ್ಧೆಯನ್ನ ನೋಡಿದ್ದರೆ ಬಹುಶಃ ಈ ಮಾಯಾಲೋಕದಲ್ಲಿ ಆತ ಹುಟ್ಟಬಾರದಿತ್ತು ಎನಿಸುತ್ತದೆ. ಹಾಗಿದ್ದವ ನಮ್ಮ ಬೆಟ್ಮಾವ(ಬೆಟ್ಟಪ್ಪ). ಅಪ್ಪ ಮನೆಗೆ ಬಾರದೆ ಇದ್ದ ದಿನಗಳಲ್ಲಿ ಅನ್ನ ಉಣ್ಣಲು ನಾನು, ಅಣ್ಣ ಈ ಮಾವನ ಮನೆಗೆ ಹೋಗುತ್ತಿದ್ದೊ. ಆತ ಎಂಥವ ಎಂದರೆ, ತನ್ನ ಅಕ್ಕನ ಮಕ್ಕಳ ಬಗ್ಗೆ ಎಲ್ಲಿಲ್ಲದ ಅಕ್ಕರೆ ಹೊಂದಿದ್ದವ. ಈ ಮಾವ ಪೇಟೆ ಬೀದೀಲಿ ಮೂಟೆ ಹೊರುವ ಕಾಯಕ ಜೀವಿ. ಈತನ ನಿಯ್ಯತ್ತಿಗೆ ಸರಿಸಾಟಿ ಯಾರೂ ಇಲ್ಲ. ಇಂತಹ ಬೆವರಜೀವಿ ಮಾವ ಬೆಟ್ಟಯ್ಯ. ನನ್ನನ್ನ ಒಂದೊಂದ್ಸಲ ಮಾವ ಸ್ನಾನ ಮಾಡುವಾಗ ಬೆನ್ನ ತಿಕ್ಕೋಕೆ ಕರೆತಿದ್ದ. ಆತನ ಬೆನ್ನು ಗಡಸಾಗಿ ಬರೆ ಬರೆಯಾಗಿ ನನ್ನ ಕೈಗೆ ಸಿಕ್ತಿತ್ತು. ಅಂತ ಕಠಿಣ ದುಡಿಮೆಗಾರ ಮಾವ ಆವ. ನಾನು, ನಮ್ಮಣ್ಣ ಸಂಜೆ ಏಳಕ್ಕೆ ಆತನ ಮನೆಗೋಗ್ತಿದ್ವಿ. ಆತ ತಿಂಡಿ ತರ್ರ್‍ಇದ್ದ. ಬಾಳೆಹಣ್ಣು, ಬೋಂಡ, ಕಳ್ಳೆಪುರಿ ಈ ತರ ತರೋನು. ತನ್ನ ಮಕ್ಕಳ ಜೊತೆಗೆ ನಮಗೂ ಸಮ್ನಾಗಿ ಹಂಚುತ್ತಿದ್ದ. ಈತ ಬಹಳ ಸಾಧು. ಕರುಬಿಲ್ಲದ ಜೀವಿ ಮಾವ. ಆದರೆ ನಮ್ಮತ್ತೆ ಜಯ್ಯಕ್ಕನಿಗೆ ಮಾತ್ರ ಬೈಯ್ದಾಕ್ ಬಿಡ್ತಿದ್ದ. ಈತ ಅಪ್ಪ ಹಾರ್‍ಮೊನಿ ಬಾರಿಸ್ತ ಹಾಡಾಡ್ತಿದ್ರೆ, ಬಂದ್ಬಿಟ್ಟು ಅಪ್ಪನಿಗೆ ಕಂಪನಿ ಕೋಡೋನು. ನಾನು ಹಾರ್‍ಮೊನಿ ಒತ್ತಿ ಒತ್ತಿ ಸುಸ್ತಾಗಿದ್ದೆ. ಅವ್ವ ಆಹ ಇವ್ನೊಬ್ಬ ಬಾಕಿ ಇದ್ದ ಅಂತ ಅಂದರೂ ಬೆಟ್ಮಾವ ’ಮಾವೋ ನನ್ಗೊಂದ್ ಹಾಡ್ ಬಾರ್‍ಸು ಎಂನ್ತಿದ್ದ’. ಈ ಮಾವ ರಾಜ್ಕುಮಾರ್ ಹಾಡಾಡ್ತಿದ್ದ. ನಮ್ಮ ಸಂಸಾರ ಆನಂದ ಸಾಗರ ಅಂತ. ಈ ಮಾವ ಮುಂದೆ ನಾನು ಬೀದಿ ನಾಟ್ಕದ ಹಾಡನ್ನು ಹೇಳ್ತಿದ್ನಲ್ಲ, ಜಣ ಜಣ ಕಾಂಚಾಣದಲ್ಲಿ ಎಲ್ಲ ಮಾಯಾ ನಾಳೆ ನಾವು ಮಾಯಾ ಅಂತ. ಇದನ್ನೇ ಸ್ವಲ್ಪ ತಕೊಂಡು ತನ್ನದೇ ಧಾಟೀಲಿ ಮಚ್ಚಿ ಎಲ್ಲ ಮಾಯಾ ನಾಳೆ ನಾವು ಮಾಯ ಅಂತ ಹಾಡ್ತಿದ್ದ.
ಏನೋ ಇವೆಲ್ಲ ನಾನು ಮನುಷ್ಯನಂತಿರಲು ಕಾರಣವಾದವೇನೊ. ಮುಂದೆ ನಾವು ಗೆಳೆಯರು ಕೆಲವು ಊರಿನವರನ್ನು ಎದುರು ಹಾಕಿಕೊಂಡೆವು. ಅದೂ ಅಂಬೇಡ್ಕರ್ ಜಯಂತಿ ಕಾರಣಕ್ಕೆ. ಆಗ ಇದು ಜಾತಿ ಜಗಳದ ಸ್ವರೂಪ ಪಡೆಯದಿದ್ದರೂ, ನಮ್ಮನ್ನು ಜನ ವಿಚಿತ್ರವಾಗಿ ನೋಡ್ತಿದ್ರು. ಈ ಘಟನೆಯಾದ ಮೇಲೆ ದಿನ ದಿನೆ ನಾವೊಂದಷ್ಟು ಮನೆಗಳು ಮಾತ್ರ ಒಂದೂ ಎಂಬಂತೆ, ಉಳಿದವರು ಇನ್ನೊಂದು ಗುಂಪು ಎಂಬ ಇಬ್ಭಗೆಯ ಭಾವನೆ ಊರಲ್ಲಿ ದಟ್ಟವಾದ ಅನುಭವವಾಯಿತು. ಆದರೆ ಈ ಸನ್ನಿವೇಶ ನಾವು ಗೆಳೆಯರು ಒಟ್ಟಾಗಿರಲು ಕಾರಣವಾಗಿತ್ತು. ಆಗ ಬೆಂಗ್ಳೂರಿಂದ ಸಂವಾದ ಆಫೀಸನ್ನು ನಾವೇ ಇಲ್ಲಿ ಒಂದು ಶಾಖೆ ತೆಗೆಯಲು ಒತ್ತಾಯ ಮಾಡಿ, ಓಪನ್ ಮಾಡ್ಸಿದ್ದೆವು. ಅಂದಿನ ಲೂಸಿಕುಮಾರ್, ಲವಕುಮಾರ್, ಅನಿತಾ ಮೇಡಂ ನಮಗೇನೋ ಬೇರೆ ತರದಲ್ಲಿ ಕಂಡಿದ್ದರು. ರಾಮನಗರದಲ್ಲಿ ನಾವೇ ಒಂದು ಕಡೆ ಮನೆ ನೋಡಿ ಆಫೀಸು ತೆಗೆಸಿದೆವು. ಓರಿಯೆಂಟೇಷನ್ ಅಂತ ಒಂದು ಮೂರ್‍ನಾಲ್ಕು ದಿನಗಳು ನಮಗೆ ಬೆಂಗ್ಳೂರಿನ ದೊಡ್ಡಗುಬ್ಬಿ ಬಳಿ ಶಿಬಿರ ಆಯ್ತು. ಅಲ್ಲಿ ವಿಚಿತ್ರವಾಗಿ ಮಾತಾಡುವ ಡೊಮ್ನಿಕ್ ಸಿಕ್ಕರು. (ಇಂದಿನ ಉತ್ತರ ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟರ್ ಇವರು) ಅದರಲ್ಲೂ ಇದಕ್ಕೂ ಮೊದಲು ಲವಕುಮಾರ್ ಒಂತರ ವಿಚಿತ್ರ ವ್ಯಕ್ತಿತ್ವದವರ ಹಾಗೆ ಆಕರ್ಷಣೆ ಉಂಟುಮಾಡಿದ್ದರು. ನಾನಾಗ ಎಂ.ಎ. ಮುಗಿಸಿದ್ದೆ. ನನ್ನ ಜೊತೆಗಿದ್ದವರು ಪದವಿ ಓದುತ್ತಿದ್ದರು. ಸಂವಾದ ನಮ್ಮೆಲ್ಲರ ಯೋಚನೆ, ವಿಚಾರಗಳಿಗೆ ದೊಡ್ಡ ವೇದಿಕೆಯಾಯಿತು.
ಈ ಓರಿಯೆಂಟೇಷನ್ ಕಾರ್ಯಕ್ರಮ ಮುಗಿಸಿ ನಮ್ಮನ್ನು ದೊಡ್ಡಬಳ್ಳಾಪುರಕ್ಕೆ ಕರೆದೊಯ್ದರು. ಅಲ್ಲಿ ಸಂಜೆ ಟೌನ್ ಹಾಲ್ನಲ್ಲಿ ದೊಡ್ಡಮಟ್ಟದಲ್ಲಿ ಜನಸೇರಿದ್ದರು. ಅಲ್ಲಿ ಗ್ರೀನ್ ಪೀಸ್ ವತಿಯಿಂದ ಹಿರೋಶಿಮಾ ಮತ್ತು ನಾಗಸಾಕಿಗಳ ಮೇಲೆ ಆದ ಅಣುಬಾಂಬ್ ದಾಳಿ ಕುರಿತ ಸಾಕ್ಷ್ಯಚಿತ್ರ ಹಾಕಿದ್ರು. ನಾನು ಅದನ್ನು ನೋಡಿ ತುಂಬಾ ಎಕ್ಷೈಟಾಗಿ ಮಾತಾಡಿದ್ದೆ. ಮತ್ತೆ ಅಲ್ಲಿ ಜನಾರ್ಧನ್ ಕೆಸರಗದ್ದೆ, ಹುಲಿಕುಂಟೆ ಮೂರ್ತಿ, ನಂದಾ, ರಾಮಕೃಷ್ಣ ಹಾಗೂ ಗದ್ದರ್ ಅವರಂತೆಯೇ ಮೈಮರೆತು ಹಾಡುವ ಡಿ.ಎಮ್ಶಿ ಶಿವು ಇವರೆಲ್ಲರನ್ನ್ಲು ಮೊದಲ ಬಾರಿ ನೋಡಿದೆವು. ಆ ದಿನಗಳ ಈ ಎಲ್ಲ ಘಟನೆಗಳು ನಾವು ಎಲ್ಲಿದ್ದೇವೆ ಎನ್ನುವ ಹಾಗೆ ನಮ್ಮನ್ನು ವಿಸ್ಮಯಗೊಳಿಸಿದ್ದವು.
ಮಾರನೇ ದಿನ ಪ್ರತಿಭಟನೆ. ಟೌನ್ ಹಾಲ್ ಬಳಿ ಜನವೋ ಜನ. ಅಲ್ಲಿ ಮಂಜುನಾಥ್ ಅದ್ದೆಯವರನ್ನು ಮೊದಲ ಸಲ ಕಂಡೆನು. ಬೃಹತ್ ಜಾಥಾ ಮತ್ತು ಪ್ರತಿಭಟನೆ ಗೋಗೋ ಫ್ಯಾಕ್ಟ್ರಿ ವಿರುದ್ದ ಇದೆ ಎಂದು ಗೊತ್ತಾಯ್ತು. ನಾನು ಎಚ್ಚರದಲ್ಲಿ ಭಾಗವಹಿಸಿದ ಮೊದಲ ಜಾಥಾ ಮತ್ತು ಪ್ರತಿಭಟನೆ ಇದು. ಈ ಹಿಂದೆ ಎಂ.ಎ ಮಾಡುವಾಗ ಯೂನಿವರ್‍ಸಿಟಿಯಲ್ಲಿ ಎರ್ರಮ್ಮನ ಬೆತ್ತಲೆ ಪ್ರಕರಣದ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದು ಬಿಟ್ಟರೆ, ಸ್ವಲ್ಪ ಜ್ಞಾನ ಎಚ್ಚರದ ಕಣ್ಣಲ್ಲಿ ನಾನು ಭಾಗವಹಿಸಿದ ಜಾಥ ಮತ್ತು ಪ್ರತಿಭಟನೆ ಇದು. ವಿಷದ ನೀರನ್ನು ರೈತರ ಹೊಲಕ್ಕೆ ಬಾಶೆಟ್ಟಿಹಳ್ಳಿಯ ಈ ಕಾರ್ಖಾನೆ ಬಿಡುತ್ತಿದೆ ಎಂಬ ವಿಚಾರಗಳು ಭಾಷಣದಲ್ಲಿ ನಮಗೆ ಗೊತ್ತಾದವು. ನಾವು ತಲೆಗೆ ಹಳದಿ ಬಣ್ಣದ ಪಟ್ಟಿ ಕಟ್ಟಿಕೊಂಡು ಗೋ ಗೋ ಫ್ಯಾಕ್ಟ್ರಿಗೆ ಎಂದು ಗೋ ಗೋ ಎಂದು ಲಾಕ್ವೌಟಿಗಾಗಿ ಜೋರಾಗಿ ಕೂಗುತ್ತಿದ್ದೆವು. ನಾವುಗಳು ಆ ಪ್ರತಿಭಟನೆಯೊಳಗೆ ಕಳೆದೇ ಹೋಗಿದ್ದೊ. ಮಾರನೆ ದಿನ ಊರಿಗೆ ಪಡುವರಹಳ್ಳಿ ಪಾಂಡವರು ಸಿನಿಮಾದ ಹುಡುಗರಂತೆ ಹಳದಿ ಪಟ್ಟಿಕೊಂಡೇ ಬಂದಿದ್ದೆವು. ಊರ ಜನ ನಮ್ಮನ್ನು ವಿಚಿತ್ರಗಣ್ಣು ಬಿಟ್ಟು ನೋಡಿಯೂ ನೋಡದವರಂತೆ ಇದ್ದರು.
ನಮ್ಮ ವಾಟ್ಸಾಪ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮೊದಲಬಾರಿಗೆ ನಾವೆಲ್ಲ ‘ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು’ ಎಂಬ ಹಾಡನ್ನು ಸಂವಾದದಲ್ಲಿ ಕೇಳಿ ವಿಸ್ಮಯಗೊಂಡೆವು. ಊರಲ್ಲಿ ಅಂಬೇಡ್ಕರ್ ಜಯಂತಿ ಮಾಡಿ ಕೆಲವು ಪುಂಢರ ಕಿರಿಕ್ಕುಗಳಿಂದಾಗಿ ಈಡೀ ಊರೇ ನಮ್ಮ ವಿರುದ್ಧ ನಿಂತಂತಿದ್ದ ಆ ಹೊತ್ತಲ್ಲಿ, ನಾವು ಸಂವಾದದಲ್ಲಿ ಒಗ್ಗೂಡಿ ಈ ಹಾಡನ್ನು ಒಂದು ಬಗೆಯ ಭಾವತೀವ್ರತೆಯಲ್ಲಿ ನಾವೆಲ್ಲರೂ ಹಾಡುತ್ತಿದ್ದೆವು. ಅದರಲ್ಲೂ ಕೋಟಿಗಾನಹಳ್ಳಿ ರಾಮಯ್ಯನವರ ಹಾಡು ಸೂರು ಸೂರಿನ ದೀಪ ಆರಿ ಆಕಾಶದ ಚುಕ್ಕಿ ಅನ್ನೋ ಹಾಡಲಿ ನನ್ನನ್ನೇ ಜೀತಗಾರ ಹುಡುಗನನ್ನಾಗಿಸಿದ್ದರು. ನನಗೆ ಊರಲ್ಲಿ ಕಳೆದು ಹೋದ ನನ್ನ ಬಾಬಾ ಸಾಹೇಬರ ವಿಚಾರ, ಮತ್ತೆ ನನ್ನ ಸಾಮಾಜಿಕ ಐಡೆಂಟಿಯ ಗುರುತುಗಳು ಇಲ್ಲಿ ಪ್ರಬಲವಾಗತೊಡಗಿದವು.
ಊರು ತನ್ನ ಪಾಡಿಗೆ ತಾನು ಇರುತ್ತಿತ್ತು. ನಾವು ನಮ್ಮ ಪಾಡಿಗೆ ರಾಮನಗರದ ಟೌನ್ನ ಸಂವಾದದಲ್ಲಿ ಓದು, ಕಾರ್ಯಕ್ರಮ, ಜಾಥಾ, ಎಕ್ಸೋಷರ್‍ಗಳಲ್ಲಿ ಪಾಲ್ಗೊಂಡು ಒಂತರ ಹೊಸದಾದ ಜ್ಞಾನ ತಿಳುವಳಿಕೆಗಳ ರೋಮಾಂಚನದಲ್ಲಿರುತ್ತಿದ್ದೆವು. ಒಟ್ಟಾರೆ ನಮ್ಮೊಳಗೆ ಒಕ್ಕೊರಲಲ್ಲಿ ಹಾಡುವ ಹಾಡು ಹುಟ್ಟಿತು. ಅದರಲ್ಲೂ ಸಾಲು ಮರದ ನೆರಳಿಂದ ಸಾಗಿ ಬರುತ್ತಿದೆ ಹಾಡು, ಜಾಗತೀಕರಣದ ವಿರುದ್ಧವಾಗಿ ಎಲ್ಲ ಮಾಯ ಹಾಡು ಹೀಗೆ ನಮಗೆ ಅರಿವಿಲ್ಲದೆಯೇ ನಾವೊಂದು ಸಾಂಸ್ಕೃತಿಕ ಗುಂಪಾಗಿ ಕೂಡ ಟಿಸಿಲೊಡೆಯುತ್ತಿದ್ದವು. ಒಂತರ ನಾವು ಊರ ನಂಟಿನಾಚೆಗೆ ಲೋಕದ ಜೊತೆ ವಿಚಾರ ಮಾಡುವ, ಸಂವಾದಿಸುವ, ಹಾಡುವ, ಚರ್ಚೆಗಿಳಿಯುವ ಹುಡುಗರಾಗಿ ಬದಲಾಗಿಬಿಟ್ಟಿದ್ದೊ. ಆಗ ನಮ್ಮೆದೆಯಲ್ಲಿ ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು ಕನಸ ಕಟ್ಟುತ್ತೇವ ಎಂಬ ಹಾಡಷ್ಟೇ ಹರಿಯುತ್ತಿತ್ತು ಎಂಬುದ್ದನ್ನು ಇಂದಿನ ನೆನೆದರೆ ಈಗ ವಿಷಾದ ಮಿಶ್ರಿತ ಖುಷಿಯಾಗುತ್ತದೆ. ಅದೇರೀತಿ ಅಂದಿನ ನಮ್ಮ ಜಾತಿ ಮೀರಿದ ಕ್ರಿಕೆಟ್ ತಂಡ ಮತ್ತು ಬೀಫ್ ಕಬಾಬ್ ಕಣ್ಣೆದುರಿಗೆ ಬರುತ್ತದೆ.
[…] ಇದನ್ನೂ ಓದಿ: ಜಾತಿಮೀರಿದ ಕ್ರಿಕೆಟ್ ತಂಡವೂ, ಬೀಫ್ ಕಬಾಬು […]
[…] […]