ಬಾಲ್ಯದಲ್ಲಿ ಕಾದಂಬರಿಗಳನ್ನು ಓದಲು ತಾಯಿಯಿಂದ ಅನುಮತಿ ದೊರೆಯದೆ, ತಮ್ಮ ಮದುವೆಯವರೆಗೆ ಕಾದಂಬರಿಯನ್ನೇ ಓದದಿದ್ದ, ತಮ್ಮ ನಲವತ್ತನೆ ವಯಸ್ಸಿನವರೆಗೆ ಕಾದಂಬರಿಗಳನ್ನು ಪ್ರಕಟಿಸದಿದ್ದ ಕಾದಂಬರಿಕಾರ್ತಿಯೊಬ್ಬರು, ನಂತರದ ದಿನಗಳಲ್ಲಿ ಕಾದಂಬರಿ ದಿ ಏಜ್ ಆಫ್ ಇನೋಸೆನ್ಸ್ ಗಾಗಿ ಪುಲಿಟ್ಚರ್ ಪ್ರಶಸ್ತಿ ಪಡೆದ ಮೊಟ್ಟಮೊದಲ ಮಹಿಳೆಯಾಗುವುದು ಹಾಗು ಮೂರು ಸಲ ನೋಬೆಲ್ ಪ್ರಶಸ್ತಿಗಾಗಿ ನಾಮನಿರ್ದೇಶನಗೊಳ್ಳುವುದು ಸುಲಭದ ಮಾತಲ್ಲ. ಅಂತಹ ಅಸಾಧ್ಯವನ್ನು ಸಾಧ್ಯವಾಗಿಸಿದ್ದು ಅಮೇರಿಕಾದ ಅತ್ಯುತ್ತಮ ಫಿಕ್ಷನ್ ಬರೆಹಗಾರ್ತಿ ಎಂಬ ಕಿರೀಟವನ್ನು ಈಗಲೂ ತಮ್ಮ ತಲೆಯ ಮೇಲೆ ಹೊತ್ತುಕೊಂಡಿರುವ ಎಡಿತ್ ವಾರ್ಟನ್ ಅಥವಾ ಎಡಿತ್ ನ್ಯೂಬೋಲ್ಡ್ ಜೋನ್ಸ್ .
ಬಾಲ್ಯದಲ್ಲಿ ಬರೆದ ಕವಿತೆ, ಲೇಖನಗಳಿಗಾಗಿ ತಾಯಿಯಿಂದಲೇ ಕಟು ವಿಮರ್ಶೆಗೆ ಒಳಗಾಗಿ, ಹಲವಾರು ವರ್ಷ ಬರವಣಿಗೆಯಿಂದಲೇ ದೂರ ಉಳಿದವರು ಇವರು. ಮೇಲ್ವರ್ಗದ ಹಾಗೂ ಮೇಲ್ಮಧ್ಯಮ ವರ್ಗದ ನೈತಿಕ ನಡವಳಿಕೆ ಹಾಗೂ ಜೀವನವನ್ನು ವಾಸ್ತವಿಕ ಅಂಶಗಳಿಂದ ನಿಖರವಾಗಿ ಜೋಡಿಸಿಕೊಟ್ಟವರು. ತಮ್ಮ ಸರಳವಾದ ಹಾಗೂ ವಿವರಣಾತ್ಮಕವಾದ ಬರಹಗಳಿಂದ ಆಪಾರವಾದ ಜನಮನ್ನಣೆಯನ್ನು ಗಳಿಸಿದ್ದ ಅವರು ರಿಯಾಲಿಸಮ್ ಸಾಹಿತ್ಯ ಚಳುವಳಿಗೆ ಸೇರಿದವರು. ಇವರ ಪ್ರೇತದ ಕಥೆಗಳಂತೂ ಓದುಗರನ್ನು ಕಟ್ಟಿ ಹಾಕಿದ್ದವು. ಇವರು ಕೇವಲ ಬರಹಗಾರರಾಗಷ್ಟೇ ಹೆಸರು ಮಾಡಿದ್ದಲ್ಲ. ಒಳ್ಳೆಯ ವಿನ್ಯಾಸಕಾರರಾಗಿ, ಒಳಾಂಗಣ ವಿನ್ಯಾಸಕಿಯಾಗಿ, ಒಂದನೇ ಮಹಾಯುದ್ಧದ ಸಂದರ್ಭದಲ್ಲಿ ಫ್ರಾನ್ಸ್ ನ ಮಹಿಳಾ ನಿರಾಶ್ರಿತರಿಗೆ ಪುನರ್ವಸತಿ ಹಾಗೂ ಜೀವನ ನಿರ್ವಹಣೆಗಾಗಿ ಹಗಲು ರಾತ್ರಿ ಶ್ರಮಿಸಿದ ಸಾಮಾಜಿಕ ಹೋರಾಟಗಾರ್ತಿಯಾಗಿ ಇಂದಿಗೂ ಜನಮಾನಸದಲ್ಲಿರುವ ಅಪರೂಪದ ಬರಹಗಾರ್ತಿ ಎಡಿತ್.
1862 ಜನವರಿ 24 ರಂದು ಎಡಿತ್ ನ್ಯೂಬೋಲ್ಡ್ ಜೋನ್ಸ್ ಜಾರ್ಜ್ ಫ್ರೆಡೆರಿಕ್ ಜೋನ್ಸ್ ಮತ್ತು ಲುಕ್ರೆಟಿಯಾ ಸ್ಟೀವನ್ಸ್ ರೈನ್ಲ್ಯಾಂಡರ್ ದಂಪತಿಗಳಿಗೆ ನ್ಯೂಯಾರ್ಕ್ ನಗರದ 14 ವೆಸ್ಟ್ ಟ್ವೆಂಟಿ-ಮೂರನೆಯ ಬೀದಿಯಲ್ಲಿರುವ ಬ್ರೌನ್ಸ್ಟೋನ್ನಲ್ಲಿ ಜನಿಸಿದರು. ಸ್ನೇಹಿತರು ಮತ್ತು ಕುಟುಂಬದವರಿಂದ “ಪುಸ್ಸಿ ಜೋನ್ಸ್” ಎಂದು ಕರೆಯಿಸಿಕೊಳ್ಳುತ್ತಿದ್ದ ಇವರಿಗೆ, ಫ್ರೆಡ್ರಿಕ್ ರೈನ್ಲ್ಯಾಂಡರ್ ಮತ್ತು ಹೆನ್ರಿ ಎಡ್ವರ್ಡ್ ಎನ್ನುವ ಇಬ್ಬರು ಹಿರಿಯ ಸಹೋದರರಿದ್ದರು. ಎಡಿತ್ ಏಪ್ರಿಲ್ 20, 1862ರ ಈಸ್ಟರ್ ಭಾನುವಾರದಂದು ಗ್ರೇಸ್ ಚರ್ಚ್ನಲ್ಲಿ ದೀಕ್ಷಾಸ್ನಾನ ಪಡೆದರು.
ಎಡಿತ್ ರವರ ತಂದೆಯ ಕುಟುಂಬ, ಜೋನೆಸಸ್, ರಿಯಲ್ ಎಸ್ಟೇಟ್ನಲ್ಲಿ ಹಣವನ್ನು ಗಳಿಸಿದ ಅತ್ಯಂತ ಶ್ರೀಮಂತ ಮತ್ತು ಸಾಮಾಜಿಕವಾಗಿ ಪ್ರಮುಖವಾದ ಕುಟುಂಬವಾಗಿತ್ತು. “ಜೋನೆಸೆಸ್ ಜೊತೆ ಇಟ್ಟುಕೊಳ್ಳುವುದು” ಎಂಬ ಮಾತು ಆಕೆಯ ತಂದೆಯ ಕುಟುಂಬವನ್ನು ಉಲ್ಲೇಖಿಸುತ್ತದೆ ಎಂದು ಹೇಳಲಾಗುತ್ತದೆ. ಅವರು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಹಿಂದಿನ ಡಚ್ ಸರ್ಕಾರದಿಂದ ಭೂಮಿ ಅನುದಾನವನ್ನು ಪಡೆದಿದ್ದರು.
ಎಡಿತ್ ರವರು ಅಮೇರಿಕಾದ ಅಂತರ್ಯುದ್ಧದ ಸಮಯದಲ್ಲಿ ಜನಿಸಿದರು. ಆದರೆ ಎಡಿತ್ ತಮ್ಮ ಕೌಟುಂಬಿಕ ಜೀವನವನ್ನು ವಿವರಿಸುವಾಗ ಎಲ್ಲಿಯೂ ಆ ಕುರಿತು ಹೇಳಿಕೊಳ್ಳುವುದಿಲ್ಲ. 1866 ರಿಂದ 1872 ರವರೆಗೆ ಜೋನ್ಸ್ ಕುಟುಂಬವು ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಸ್ಪೇನ್ಗೆ ಭೇಟಿ ನೀಡಿತು. ತಮ್ಮ ಪ್ರಯಾಣದ ಸಮಯದಲ್ಲಿ ಯುವ ಎಡಿತ್ ಫ್ರೆಂಚ್ , ಜರ್ಮನ್ ಮತ್ತು ಇಟಾಲಿಯನ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವುದನ್ನು ಕಲಿತುಕೊಂಡಿದ್ದು ಮುಂದೆ ಅವರ ಸಾಹಿತ್ಯಿಕ ಜೀವನದಲ್ಲಿ ಒಳ್ಳೆಯ ಪರಿಣಾಮ ಬೀರಿತು. ಕುಟುಂಬವು ಬ್ಲ್ಯಾಕ್ ಫಾರೆಸ್ಟ್ನಲ್ಲಿ ಸ್ಪಾದಲ್ಲಿದ್ದಾಗ ಅಂದರೆ ತಮ್ಮ ಒಂಬತ್ತನೆಯ ವಯಸ್ಸಿನಲ್ಲಿ ಟೈಫಾಯಿಡ್ ಜ್ವರದಿಂದ ಬಳಲಿದ್ದ ಎಡಿತ್ ಸತ್ತೇ ಹೋಗಬಹುದು ಎಂದು ಅವರ ಕುಟುಂಬದವರು ತಿಳಿದಿದ್ದರಾದರೂ, ಅವರ ಗಟ್ಟಿಯಾದ ಮಾನಸಿಕ ಶಕ್ತಿಯಿಂದ ಬದುಕುಳಿದರು. ಕುಟುಂಬವು ಯುರೋಪ್ನಲ್ಲಿದ್ದಾಗ, ಅವರು ಅಲ್ಲಿನ ಬೋಧಕರು ಮತ್ತು ಆಡಳಿತಗಾರರಿಂದ ಶಿಕ್ಷಣ ಪಡೆದರು. ಆ ಸಮಯದಲ್ಲಿ ಯುವತಿಯರಿಗೆ ಫ್ಯಾಷನ್ ಮತ್ತು ಶಿಷ್ಟಾಚಾರದ ಮಾನದಂಡಗಳು ಅತ್ಯವಶ್ಯ ಎಂದು ಭಾವಿಸಲಾಗಿತ್ತು. ಆದರೆ ಎಡಿತ್ ಅದನ್ನು ತಿರಸ್ಕರಿಸಿದರು. ಈ ಫ್ಯಾಷನ್ಗಳು ಬಾಹ್ಯಾಡಂಭರ ಹಾಗೂ ಮೇಲ್ನೋಟಕ್ಕೆ ಉತ್ತಮ ಎನ್ನಿಸಿದರೂ, ಅದು ಪುರುಷ ದಬ್ಬಾಳಿಕೆಯ ಸಂಕೇತವೆಂದು ಪರಿಗಣಿಸಿದರು. ಎಡಿತ್ ತಾವು ಪಡೆದಿದ್ದಕ್ಕಿಂತ ಹೆಚ್ಚಿನ ಶಿಕ್ಷಣವನ್ನು ಪಡೆಯಬೇಕಿತ್ತೆಂದು ಸದಾ ಹಂಬಲಿಸುತ್ತಿದ್ದರು. ಆದ್ದರಿಂದ ತಮ್ಮ ತಂದೆಯ ಗ್ರಂಥಾಲಯದಿಂದ ಮತ್ತು ತಂದೆಯ ಸ್ನೇಹಿತರ ಗ್ರಂಥಾಲಯಗಳಿಂದ ಪುಸ್ತಕಗಳನ್ನು ತಂದು ಓದುತ್ತಿದ್ದರು. ಆದರೆ ಮದುವೆಯಾಗುವವರೆಗೂ ಕಾದಂಬರಿಗಳನ್ನು ಓದುವುದನ್ನು ಅವರ ತಾಯಿ ನಿಷೇಧಿಸಿದ್ದರು. ಹಾಗೂ ಎಡಿತ್ ಈ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದರು.
ವಾರ್ಟನ್ ಬಾಲ್ಯದಿಂದಲೂ ಕಥೆಗಳನ್ನು ಬರೆದು ಹೇಳುತ್ತಿದ್ದರು. ನಾಲ್ಕು ಅಥವಾ ಐದು ವರ್ಷದವರಿದ್ದಾಗ ಅವರ ಕುಟುಂಬವು ಯುರೋಪ್ಗೆ ಸ್ಥಳಾಂತರಗೊಂಡಾಗಲೇ “ಮೇಕಿಂಗ್” ಎಂದು ಕರೆಯುವ ರೂಢಿ ಮಾಡಿಕೊಂಡಿದ್ದರು. ಚಿಕ್ಕ ಹುಡುಗಿಯಾಗಿದ್ದಾಗಲೇ ಕವನ ಮತ್ತು ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. 11ನೇ ವಯಸ್ಸಿನಲ್ಲಿ ಮೊದಲ ಕಾದಂಬರಿಯನ್ನು ಬರೆಯಲು ಪ್ರಯತ್ನಿಸಿದರಾದರೂ ಅವರ ತಾಯಿಯ ಕಟುವಾದ ಟೀಕೆಯು ಅವರ ಕಾದಂಬರಿ ಬರೆಯುವ ಮಹತ್ವಾಕಾಂಕ್ಷೆಯನ್ನು ಮೊಟಕುಗೊಳಿಸಿತು. ಹೀಗಾಗಿ ಅವರು ಕಾವ್ಯದ ಕಡೆಗೆ ಹೊರಳಿದರು. ಹೆನ್ರಿಕ್ ಕಾರ್ಲ್ ಬ್ರಗ್ಷ್ನ “ವಾಸ್ ಡೈ ಸ್ಟೀನ್ ಎರ್ಜಾಹ್ಲೆನ್” (“ವಾಟ್ ದಿ ಸ್ಟೋನ್ಸ್ ಟೆಲ್”) ಜರ್ಮನ್ ಕವಿತೆಯ ಅನುವಾದದ ಅವರ ಮೊದಲ ಕೃತಿ ಪ್ರಕಟಗೊಂಡಾಗ ಅವರಿಗೆ ಕೇವಲ 15 ವರ್ಷ ವಯಸ್ಸಾಗಿತ್ತು. ಈ ಪುಸ್ತಕದ ರಾಯಧನವಾಗಿ ಅವರಿಗೆ $50 ದೊರಕಿತು. ಆದರೆ ಅಂದಿನ ಸಮಾಜ ಮಹಿಳೆಗೆ ಬರವಣಿಗೆ ಸರಿಯಾದ ಉದ್ಯೋಗವೆಂದು ಪರಿಗಣಿಸದ ಕಾರಣ, ಅವರ ಹೆಸರು ಆ ಪುಸ್ತಕದ ಮುದ್ರಣದಲ್ಲಿ ಕಾಣಿಸಿಕೊಳ್ಳುವುದು ಅವರ ಕುಟುಂಬಕ್ಕೆ ಇಷ್ಟವಿರಲಿಲ್ಲ. ಇದರಿಂದಾಗಿ ಮಹಿಳಾ ಶಿಕ್ಷಣವನ್ನು ಬೆಂಬಲಿಸಿದ ರಾಲ್ಫ್ ವಾಲ್ಡೋ ಎಮರ್ಸನ್ ಅವರ ಸೋದರಸಂಬಂಧಿ ಇ ಎ ವಾಶ್ಬರ್ನ್ ಎಂಬ ಸ್ನೇಹಿತನ ತಂದೆಯ ಹೆಸರಿನಲ್ಲಿ ಕವಿತೆಯನ್ನು ಪ್ರಕಟಿಸಲಾಯಿತು.
1877ರಲ್ಲಿ, ತಮ್ಮ 15ನೇ ವಯಸ್ಸಿನಲ್ಲಿ ರಹಸ್ಯವಾಗಿ ‘ಫಾಸ್ಟ್ ಅಂಡ್ ಲೂಸ್’ ಎಂಬ ಕಾದಂಬರಿಯನ್ನು ಬರೆದರಾದರೂ ಅದನ್ನು ಪ್ರಕಟಿಸುವ ಪ್ರಯತ್ನಕ್ಕೆ ಕೈ ಹಾಕಲಿಲ್ಲ. 1878ರಲ್ಲಿ ಅವರ ತಂದೆ ಎರಡು ಡಜನ್ ಮೂಲ ಕವನಗಳ ಸಂಗ್ರಹವನ್ನು ಮತ್ತು ಐದು ಭಾಷಾಂತರಗಳಾದ ಕವನಗಳ ಸಂಗ್ರಹಗಳನ್ನು ಖಾಸಗಿಯಾಗಿ ಪ್ರಕಟಿಸಲು ವ್ಯವಸ್ಥೆ ಮಾಡಿದರು. 1879ರಲ್ಲಿ ನ್ಯೂಯಾರ್ಕ್ ವರ್ಲ್ಡ್ ಎಂಬ ಕಾವ್ಯನಾಮದ ಅಡಿಯಲ್ಲಿ ಒಂದು ಕವಿತೆಯನ್ನು ಪ್ರಕಟಿಸಿದರು. 1880ರಲ್ಲಿ ಪ್ರಮುಖ ಸಾಹಿತ್ಯ ಪತ್ರಿಕೆಯಾದ ಅಟ್ಲಾಂಟಿಕ್ ಮಾಸಿಕದಲ್ಲಿ ಅನಾಮಧೇಯವಾಗಿ ಐದು ಕವನಗಳನ್ನು ಪ್ರಕಟಿಸಿದರು. ಈ ಆರಂಭಿಕ ಯಶಸ್ಸಿನ ಹೊರತಾಗಿಯೂ ಕುಟುಂಬ ಅಥವಾ ಸಾಮಾಜಿಕ ವಲಯದಿಂದ ಅವರಿಗೆ ಯಾವುದೇ ಉತ್ತೇಜನವಾಗಲಿ, ಪ್ರೋತ್ಸಾಹವಾಗಲಿ ದೊರೆಯಲಿಲ್ಲ. ಆದರೆ ಇದಕ್ಕೆಲ್ಲ ಎದೆಗುಂದದ ಎಡಿತ್ ತಮ್ಮ ಬರವಣಿಗೆಯನ್ನು ಮುಂದುವರೆಸಿದರಾದರೂ 1889ರ ಅಕ್ಟೋಬರ್ ನಲ್ಲಿ ಸ್ಕ್ರಿಬ್ನರ್ಸ್ ಮ್ಯಾಗಜೀನ್ನಲ್ಲಿ “ದಿ ಲಾಸ್ಟ್ ಗಿಯುಸ್ಟಿನಿಯಾನಿ” ಎಂಬ ಕವಿತೆ ಪ್ರಕಟವಾಗುವವರೆಗೆ ಸುಮಾರು ಒಂಬತ್ತು ವರ್ಷಗಳ ಕಾಲ ಏನನ್ನೂ ಪ್ರಕಟಿಸಲಿಲ್ಲ.
1880 ಮತ್ತು 1890ರ ನಡುವಿನ ಆ ಕಾಲವನ್ನು ನ್ಯೂಯಾರ್ಕ್ನ ಮೇಲ್ವರ್ಗದ ಸಾಮಾಜಿಕ ಆಚರಣೆಗಳಲ್ಲಿ ಭಾಗವಹಿಸಲು ಬರವಣಿಗೆಯನ್ನು ಬದಿಗಿಟ್ಟರು. ತಮ್ಮ ಸುತ್ತಲಿನ ಸಾಮಾಜಿಕ ಬದಲಾವಣೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಎಡಿತ್ ಅದನ್ನು ನಂತರ ತಮ್ಮ ಬರವಣಿಗೆಯಲ್ಲಿ ಸಮರ್ಥವಾಗಿ ಬಳಸಿಕೊಂಡರು. ಇದೇ ಸಮಯದಲ್ಲಿ ನ್ಯೂ ಹ್ಯಾಂಪ್ಶೈರ್ನ ಶ್ರೀಮಂತ ಹೊಟೇಲ್ ಉದ್ಯಮಿ ಮತ್ತು ರಿಯಲ್ ಎಸ್ಟೇಟ್ ಹೂಡಿಕೆದಾರರಾದ ಪರನ್ ಸ್ಟೀವನ್ಸ್ ಅವರ ಮಗ ಹೆನ್ರಿ ಲೇಡೆನ್ ಸ್ಟೀವನ್ಸ್ ಅವರೊಂದಿಗೆ ಪ್ರೇಮ ಮತ್ತು ಪ್ರಣಯ ಪ್ರಾರಂಭವಾಯಿತಾದರೂ ಜೋನ್ಸ್ ಕುಟುಂಬ ಸ್ಟೀವನ್ಸ್ ರನ್ನು ಒಪ್ಪಿಕೊಳ್ಳಲಿಲ್ಲ.
ತಂದೆಯ ಆರೋಗ್ಯಕ್ಕಾಗಿ 1881ರಲ್ಲಿ ಜೋನ್ಸ್ ಕುಟುಂಬವು ಯುರೋಪ್ ಗೆ ಪ್ರಯಾಣ ಬೆಳೆಸಿತು. ಆದರೆ ಅವರ ತಂದೆ ಜಾರ್ಜ್ ಫ್ರೆಡೆರಿಕ್ ಜೋನ್ಸ್ 1882ರಲ್ಲಿ ಕೇನ್ಸ್ನಲ್ಲಿ ಪಾರ್ಶ್ವವಾಯುವಿನ ಆಘಾತದಿಂದಾಗಿ ಮರಣಹೊಂದಿದರು. ಸ್ಟೀವನ್ಸ್ ಈ ಸಮಯದಲ್ಲಿ ಯುರೋಪ್ನಲ್ಲಿ ಜೋನ್ಸ್ ಕುಟುಂಬದೊಂದಿಗೆ ನೈತಿಕ ಬೆಂಬಲವಾಗಿ ನಿಂತರು. ತಾಯಿಯೊಂದಿಗೆ ಯುನೈಟೆಡ್ ಸ್ಟೇಟ್ಸ್ಗೆ ಹಿಂದಿರುಗಿದ ನಂತರ, ಎಡಿತ್ ಸ್ಟೀವನ್ಸ್ನೊಂದಿಗೆ ತಮ್ಮ ಪ್ರಣಯವನ್ನು ಮುಂದುವರೆಸಿ, ಆಗಸ್ಟ್ 1882ರಲ್ಲಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರಾದರೂ ಆ ಸಂಬಂಧವು ಹಠಾತ್ತಾಗಿ ಕೊನೆಗೊಂಡಿತು. ಇದರಿಂದ ಮನನೊಂದ ಅವರ ತಾಯಿ ಲುಕ್ರೆಟಿಯಾ ಸ್ಟೀವನ್ಸ್ ರೈನ್ಲ್ಯಾಂಡರ್ ಜೋನ್ಸ್, 1883ರಲ್ಲಿ ಪ್ಯಾರಿಸ್ಗೆ ಹಿಂತಿರುಗಿದರು ಮತ್ತು 1901ರಲ್ಲಿ ಅವರು ಸಾಯುವವರೆಗೂ ಅಲ್ಲಿಯೇ ವಾಸಿಸುತ್ತಿದ್ದರು .
ಏಪ್ರಿಲ್ 29, 1885 ರಂದು ತಮ್ಮ 23ನೇ ವಯಸ್ಸಿನಲ್ಲಿ, ವಾರ್ಟನ್ ಮ್ಯಾನ್ಹ್ಯಾಟನ್ನಲ್ಲಿರುವ ಟ್ರಿನಿಟಿ ಚಾಪೆಲ್ ಕಾಂಪ್ಲೆಕ್ಸ್ನಲ್ಲಿ ತಮಗಿಂತ 12 ವರ್ಷ ಹಿರಿಯರಾಗಿದ್ದ ಎಡ್ವರ್ಡ್ ರಾಬಿನ್ಸ್ (ಟೆಡ್ಡಿ) ವಾರ್ಟನ್ ಅವರನ್ನು ವಿವಾಹವಾದರು. ಬೋಸ್ಟನ್ ಕುಟುಂಬದವರಾದ ಅವರು ಸಾಮಾಜಿಕವಾಗಿ ಮೇಲ್ವರ್ಗದವರಾಗಿದ್ದ ಕ್ರೀಡಾಪಟು ಮತ್ತು ಸಂಭಾವಿತ ವ್ಯಕ್ತಿಯಾಗಿದ್ದರು. ಎಡಿತ್ ಜೋನ್ಸ್ ಮದುವೆಯ ನಂತರ ಎಡಿತ್ ವಾರ್ಟನ್ ಆದರು. ನ್ಯೂಪೋರ್ಟ್ನಲ್ಲಿರುವ ಪೆನ್ಕ್ರೈಗ್ ಕಾಟೇಜ್ನಲ್ಲಿ ತಮ್ಮ ದಾಂಪತ್ಯ ಜೀವನವನ್ನು ಪ್ರಾರಂಭಿಸಿದರು.
ಅವರ ಪತಿ ಎಡ್ವರ್ಡ್ ವಾರ್ಟನ್ ರವರಿಗೆ ಪ್ರಯಾಣವು ಅತ್ಯಂತ ಪ್ರೀತಿಯ ಕೆಲಸವಾಗಿತ್ತು. ಹಲವು ವರ್ಷಗಳ ಕಾಲ ಪ್ರತಿ ವರ್ಷ ಕನಿಷ್ಠ ನಾಲ್ಕು ತಿಂಗಳುಗಳನ್ನು ವಿದೇಶದಲ್ಲಿ, ಮುಖ್ಯವಾಗಿ ಇಟಲಿಯಲ್ಲಿ ಕಳೆಯುತ್ತಿದ್ದರು. ಈ ಪ್ರಯಾಣಗಳಲ್ಲಿ ಅವರ ಸ್ನೇಹಿತ ಎಗರ್ಟನ್ ವಿನ್ಥ್ರೋಪ್ ಕೂಡ ಅವರೊಂದಿಗೆ ಇರುತ್ತಿದ್ದರು. 1888ರಲ್ಲಿ, ವಾರ್ಟನ್ಸ್ ದಂಪತಿಗಳು ಮತ್ತು ಅವರ ಸ್ನೇಹಿತ ಜೇಮ್ಸ್ ವ್ಯಾನ್ ಅಲೆನ್ ಏಜಿಯನ್ ದ್ವೀಪಗಳ ಮೂಲಕ ನೌಕಾಯಾನ ಮಾಡಿದರು. ಆಗ ಎಡಿತ್ ರವರಿಗೆ 26 ವರ್ಷ. ಈ ಪ್ರವಾಸವು ವಾರ್ಟನ್ಸ್ಗೆ $10,000 ವೆಚ್ಚವಾಯಿತು ಮತ್ತು ನಾಲ್ಕು ತಿಂಗಳ ಕಾಲ ನಡೆಯಿತು. ಎಡಿತ್ ಈ ಪ್ರವಾಸದ ಸಮಯದಲ್ಲಿ ಪ್ರಯಾಣದ ಜರ್ನಲ್ ಅನ್ನು ಇಟ್ಟುಕೊಂಡಿದ್ದರು. ಅದರಲ್ಲಿ ಪ್ರವಾಸದ ಚಿಕ್ಕ ಚಿಕ್ಕ ವಿಷಯಗಳನ್ನೂ ದಾಖಲಿಸಿಕೊಂಡಿದ್ದರು ಆದರೆ ನಂತರ ಅದು ಕಳೆದುಹೋಗಿದೆ ಎಂದು ಭಾವಿಸಿ ಸುಮ್ಮನಾಗಿಬಿಟ್ಟಿದ್ದರು. ಆದರೆ ನಂತರ ಅದನ್ನು ದಿ ಕ್ರೂಸ್ ಆಫ್ ದಿ ವನಾಡಿಸ್ ಎಂದು ಪ್ರಕಟಿಸಲಾಯಿತು. ಇದನ್ನು ಅವರ ಆರಂಭಿಕ ಪ್ರವಾಸ ಬರಹವೆಂದು ಪರಿಗಣಿಸಲಾಗಿದೆ. ತಮ್ಮ ಜೀವನದ ಅವಧಿಯಲ್ಲಿ ಅಟ್ಲಾಂಟಿಕ್ ಅನ್ನು 60 ಬಾರಿ ದಾಟಿದ ದಾಖಲೆ ಹೊಂದಿರುವ ಎಡಿತ್ ರಿಗೆ ಯುರೋಪ್ನಲ್ಲಿ ಇಟಲಿ, ಫ್ರಾನ್ಸ್ ಮತ್ತು ಇಂಗ್ಲೆಂಡ್. ನೆಚ್ಚಿನ ಸ್ಥಳಗಳಾಗಿದ್ದವು. ಮೊರಾಕೊದ ಪಯಣವೂ ಎಡಿತ್ ರವರ ನೆಚ್ಚಿನ ಪ್ರವಾಸದ ಪಟ್ಟಿಯಲ್ಲಿತ್ತು. ನಂತರ ತಮ್ಮ ಪ್ರಯಾಣದ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದರು. ಇವು ಇಟಾಲಿಯನ್ ಪ್ರವಾಸದ ಹಿನ್ನೆಲೆಯನ್ನಿಟ್ಟುಕೊಂಡು ಬರೆದ ಮತ್ತು ಫ್ರಾನ್ಸ್ ನ ಮೋಟಾರ್-ಫ್ಲೈಟ್ ಕುರಿತಾಗಿ ವಿವರಿಸಿದ ಪುಸ್ತಕಗಳಾಗಿದ್ದು ಮಹತ್ವದ ಮಾಹಿತಿಗಳನ್ನು ಒದಗಿಸುತ್ತವೆ.
1893ರಲ್ಲಿ ನ್ಯೂಪೋರ್ಟ್ನ ಇನ್ನೊಂದು ಬದಿಯಲ್ಲಿ ಲ್ಯಾಂಡ್ಸ್ ಎಂಡ್ ಎಂಬ ಹೆಸರಿನ ಮನೆಯನ್ನು $80,000ಕ್ಕೆ ಖರೀದಿಸಿ ಅದರಲ್ಲಿ ವಾಸಿಸಲಾರಂಭಿಸಿದರು. ಓಗ್ಡೆನ್ ಕಾಡ್ಮನ್ ಎಂಬ ಒಳಾಂಗಣ ವಿನ್ಯಾಸಕಾರನ ಸಹಾಯ ಪಡೆದು ಲ್ಯಾಂಡ್ಸ್ ಎಂಡ್ ಅನ್ನು ಅಲಂಕರಿಸಿದರು. 1897ರಲ್ಲಿ, ಎಡಿತ್ ವಾರ್ಟನ್ ರೋಡ್ ಐಲೆಂಡ್ನ ನ್ಯೂಪೋರ್ಟ್ನಲ್ಲಿ ‘ಲ್ಯಾಂಡ್ಸ್ ಎಂಡ್’ ಅನ್ನು ರೋಡ್ ಐಲೆಂಡ್ನ ಗವರ್ನರ್ ಆದ ಮಾಜಿ ಯುಎಸ್ ಓಪನ್ ಟೆನಿಸ್ ಚಾಂಪಿಯನ್ಶಿಪ್ ನ ರನ್ನರ್-ಅಪ್ ಆಗಿದ್ದ ರಾಬರ್ಟ್ ಲಿವಿಂಗ್ಸ್ಟನ್ ಬೀಕ್ಮ್ಯಾನ್ ಅವರಿಂದ ಖರೀದಿಸಿದರು. $80,000 ಪಾವತಿಸಿ ಖರೀದಿಸಿದ ಮನೆಯ ಮುಂಭಾಗವನ್ನು ಬದಲಾಯಿಸಲು, ಒಳಾಂಗಣವನ್ನು ಅಲಂಕರಿಸಲು ಮತ್ತು ಮನೆಯ ಮುಂದಿನ ಗಾರ್ಡನ್ ನನ್ನು ಅಂದಗೊಳಿಸಲು ಸಾವಿರಾರು ಡಾಲರ್ ಗಳನ್ನು ಖರ್ಚು ಮಾಡಿದರು. ಅದೇ ವರ್ಷ ನ್ಯೂಯಾರ್ಕ್ನಲ್ಲಿ 884 ಪಾರ್ಕ್ ಅವೆನ್ಯೂವನ್ನು ಖರೀದಿಸಿದರು.
1886 ಮತ್ತು 1897ರ ನಡುವೆ ಫೆಬ್ರುವರಿಯಿಂದ ಜೂನ್ವರೆಗಿನ ಅವಧಿಯಲ್ಲಿ ಸಾಗರೋತ್ತರ ಪ್ರಯಾಣ ಮಾಡಿದರು. ಈ ಪಯಣದಲ್ಲಿ ಹೆಚ್ಚಾಗಿ ಇಟಲಿಗೆ ಭೇಟಿ ನೀಡುತ್ತಿದ್ದರು. ಮದುವೆಯ ನಂತರ, ಮೂರು ಆಸಕ್ತಿಗಳು ಎಡಿತ್ ರವರ ಜೀವನದಲ್ಲಿ ಪ್ರಾಬಲ್ಯ ಸಾಧಿಸಿದವು: ಅಮೇರಿಕನ್ ಮನೆಗಳು, ಬರವಣಿಗೆ ಮತ್ತು ಇಟಲಿ. 1880ರ ದಶಕದ ಅಂತ್ಯದಿಂದ 1902 ರವರೆಗೆ, ಟೆಡ್ಡಿ ವಾರ್ಟನ್ ದೀರ್ಘಕಾಲದ ಖಿನ್ನತೆಯಿಂದ ಬಳಲುತ್ತಿದ್ದರು. ಹೀಗಾಗಿ ದಂಪತಿಗಳು ತಮ್ಮ ಈ ಪ್ರಯಾಣದ ಹವ್ಯಾಸವನ್ನು ನಿಲ್ಲಿಸಿದರು. ಆ ಸಮಯದಲ್ಲಿ ಟೆಡ್ಡಿ ವಾರ್ಟನ್ ಹೆಚ್ಚು ಹೆಚ್ಚು ಖಿನ್ನತೆಗೆ ಜಾರಿದರೆಂದು ಹೇಳಲಾಗಿದೆ. ಮ್ಯಾಸಚೂಸೆಟ್ಸ್ನ ಲೆನಾಕ್ಸ್ನಲ್ಲಿರುವ ತಮ್ಮ ಎಸ್ಟೇಟ್ ದಿ ಮೌಂಟ್ನಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ ಸ್ವತಃ ಎಡಿತ್ ಆಸ್ತಮಾ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು ಎಂದ ಅವರ ಜೀವನ ಚರಿತ್ರೆಕಾರರು ಅಭಿಪ್ರಾಯ ಪಟ್ಟಿದ್ದಾರೆ.
1908ರಲ್ಲಿ, ಟೆಡ್ಡಿ ವಾರ್ಟನ್ ಅವರ ಮಾನಸಿಕ ಸ್ಥಿತಿಯನ್ನು ಗುಣಪಡಿಸಲಾಗದು ಎಂದು ವೈದ್ಯರು ಹೇಳಿದಾಗ, ಎಡಿತ್ ತೀವ್ರ ನೋವನ್ನು ಅನುಭವಿಸಿದರಾದರೂ ಆ ಸಂದರ್ಭದಲ್ಲಿ ಲೇಖಕ ಮತ್ತು ಟೈಮ್ಸ್ ಆಫ್ ಲಂಡನ್ನ ವಿದೇಶಿ ವರದಿಗಾರನಾಗಿದ್ದ ಮಾರ್ಟನ್ ಫುಲ್ಲರ್ಟನ್ ರವರೊಂದಿಗೆ ಸಂಬಂಧವನ್ನಿಟ್ಟುಕೊಂಡಿದ್ದರು. ಫುಲ್ಲರ್ಟನ್ ರವರ ಬೌದ್ಧಿಕತೆ ಎಡಿತ್ ರವರನ್ನು ಆಕರ್ಶಿಸಿತ್ತು. ಫುಲ್ಲರ್ಟನ್ ರವರು ತಮ್ಮ ಬೌದ್ಧಿಕ ಪಾಲುದಾರರಾಗಬಹುದು ಎಂಬ ಆಶಾವಾದ ಅವರಲ್ಲಿತ್ತು. ಕಡೆಗೆ 1913ರಲ್ಲಿ ಅಂದರೆ, ಮದುವೆಯಾಗಿ 28 ವರ್ಷಗಳ ನಂತರ ಎಡ್ವರ್ಡ್ ವಾರ್ಟನ್ಗೆ ವಿಚ್ಛೇದನ ನೀಡಿದರು. ಆ ಸಮಯದಲ್ಲಿ ಅವರು ನೈಸರ್ಗಿಕವಾದಿ ಬರಹಗಾರರ ಕೂಟದಿಂದ ಕಟುವಾದ ಸಾಹಿತ್ಯ ವಿಮರ್ಶೆಗೆ ಒಳಗಾಗಿದ್ದರು.
ಕಾದಂಬರಿಗಳ ಜೊತೆಗೆ ಎಡಿತ್ ಕನಿಷ್ಠ 85 ಸಣ್ಣ ಕಥೆಗಳನ್ನು ಬರೆದಿದ್ದಾರೆ. ಗಾರ್ಡನ್ ಡಿಸೈನರ್, ಇಂಟೀರಿಯರ್ ಡಿಸೈನರ್ ಮತ್ತು ಒಳ್ಳೆಯ ಪಾಕಶಾಸ್ತ್ರಜ್ಞೆ ಎಂದೆಲ್ಲ ಹೆಸರು ಗಳಿಸಿದ್ದ ಎಡಿತ್, ತಮ್ಮ ಮೊದಲ ಪ್ರಮುಖ ಪ್ರಕಟಿತ ಕೃತಿ, ‘ದಿ ಡೆಕೊರೇಶನ್ ಆಫ್ ಹೌಸ್ಸ್’ (1897) ಸೇರಿದಂತೆ ಹಲವಾರು ವಿನ್ಯಾಸ ಪುಸ್ತಕಗಳನ್ನು ಬರೆದರು. ಅವರ ಇನ್ನೊಂದು ‘ಹೌಸ್ ಆಂಡ್ ಗಾರ್ಡನ್’ ಪುಸ್ತಕದಲ್ಲಿ ಇಟಾಲಿಯನ್ ವಿಲ್ಲಾಗಳು ಮತ್ತು ಅಲ್ಲಿನ ಗಾರ್ಡನ್ ಗಳ ಬಗ್ಗೆ ವಿವರಿಸಲಾಗಿದ್ದು ಇದು 1904ರಲ್ಲಿ ಪ್ರಕಟವಾಯಿತು.
1902ರಲ್ಲಿ ವಾರ್ಟನ್ ಮ್ಯಾಸಚೂಸೆಟ್ಸ್ನ ಲೆನಾಕ್ಸ್ನಲ್ಲಿರುವ ತಮ್ಮ ಎಸ್ಟೇಟ್ ‘ದಿ ಮೌಂಟ್’ ಅನ್ನು ವಿನ್ಯಾಸಗೊಳಿಸಿದರು, ಇದು ಅವರ ವಿನ್ಯಾಸ ತತ್ವಗಳ ಉದಾಹರಣೆಯಾಗಿ ಇಂದಿಗೂ ಉಳಿದುಕೊಂಡಿದೆ. ಅಲ್ಲಿ ತಮ್ಮ ಹಲವಾರು ಕಾದಂಬರಿಗಳನ್ನು ಬರೆದರು, ಅದರಲ್ಲಿ ‘ದಿ ಹೌಸ್ ಆಫ್ ಮಿರ್ತ್’ (1905), ಹಳೆಯ ನ್ಯೂಯಾರ್ಕ್ನಲ್ಲಿನ ಜೀವನದ ಅನೇಕ ವೃತ್ತಾಂತಗಳಲ್ಲಿ ಮೊದಲನೆಯದು. ದಿ ಮೌಂಟ್ನಲ್ಲಿ ತಮ್ಮ ಆತ್ಮೀಯ ಸ್ನೇಹಿತ ಕಾದಂಬರಿಕಾರ ಹೆನ್ರಿ ಜೇಮ್ಸ್ ಸೇರಿದಂತೆ ಅಮೇರಿಕನ್ ಸಾಹಿತ್ಯಿಕ ಸಮಾಜದ ಮೇಲ್ವರ್ಗದ ಸಾಹಿತಿಗಳನ್ನು ಕರೆಯಿಸಿ ಪಾರ್ಟಿ ಆಯೋಜಿಸುತ್ತಿದ್ದರು. ತಮ್ಮ ಸ್ನೇಹಿತ ಎಗರ್ಟನ್ ವಿಂತ್ರಾಪ್ ಜೊತೆ 1911ರವರೆಗೆ ಪ್ರತಿ ವರ್ಷ ಯುರೋಪ್ ನಲ್ಲಿ ಅನೇಕ ತಿಂಗಳುಗಳನ್ನು ಕಳೆದರೂ ಮೌಂಟ್ ಅವಳ ಪ್ರಾಥಮಿಕ ನಿವಾಸವಾಗಿತ್ತು. ಅಲ್ಲಿ ವಾಸಿಸುತ್ತಿರುವಾಗ ಮತ್ತು ವಿದೇಶಕ್ಕೆ ಪ್ರಯಾಣಿಸುವಾಗ, ಮನೆಯನ್ನು ಚಂದವಾಗಿ ನೋಡಿಕೊಳ್ಳಲು ಸ್ಥಳೀಯರನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ವಿವಾಹ ವಿಚ್ಛೇದನವಾದಾಗ ಫ್ರಾನ್ಸ್ಗೆ ಶಾಶ್ವತವಾಗಿ ತೆರಳಲು ನಿರ್ಧರಿಸಿ ಪ್ಯಾರಿಸ್ನ 53 ರೂ ಡಿ ವಾರೆನ್ನೆಯಲ್ಲಿ ಜಾರ್ಜ್ ವಾಷಿಂಗ್ಟನ್ ವಾಂಡರ್ಬಿಲ್ಟ್ II ಗೆ ಸೇರಿದ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು.
ಒಂದನೆ ವಿಶ್ವ ಸಮರ ಪ್ರಾರಂಭವಾದಾಗ ಅನೇಕರು ಪ್ಯಾರಿಸ್ನಿಂದ ಪಲಾಯನ ಮಾಡಿದರೂ, ಎಡಿತ್ ರೂ ಡಿ ವಾರೆನ್ನೆಯಲ್ಲಿರುವ ತಮ್ಮ ಪ್ಯಾರಿಸ್ ಅಪಾರ್ಟ್ಮೆಂಟ್ ನಲ್ಲಿಯೇ ಉಳಿದುಕೊಂಡರು. ನಾಲ್ಕು ವರ್ಷಗಳ ಕಾಲ ನಡೆದ ಫ್ರೆಂಚ್ ಯುದ್ಧದ ಲ್ಲಿ ಫ್ರಾನ್ಸ್ ನ ದಣಿವರಿಯದ ಉತ್ಕಟ ಬೆಂಬಲಿಗರಾಗಿದ್ದರು. ಆಗಸ್ಟ್ 1914ರಂದು ನಿರುದ್ಯೋಗಿ ಮಹಿಳೆಯರಿಗೆ ಕೆಲಸ ಮಾಡಲು ವ್ಯವಸ್ಥೆ ಮಾಡಿಕೊಟ್ಟರು. ನಿರುದ್ಯೋಗಿ ನಿರಾಶ್ರಿತ ಮಹಿಳೆಯರಿಗೆ ಆಹಾರ ಮತ್ತು ದಿನಕ್ಕೆ ಒಂದು ಫ್ರಾಂಕ್ ನೀಡಲಾಯಿತು. 30 ಮಹಿಳೆಯರೊಂದಿಗೆ ಪ್ರಾರಂಭವಾದದ್ದು ಬಹುಬೇಗ 60ಕ್ಕೇರಿತು. ಅವರ ಹೊಲಿಗೆ ವ್ಯಾಪಾರವು ಅಭಿವೃದ್ಧಿ ಹೊಂದಲು ಪ್ರಾರಂಭಿಸಿತ್ತು. 1914ರ ಶರತ್ಕಾಲದಲ್ಲಿ ಜರ್ಮನ್ನರು ಬೆಲ್ಜಿಯಂ ಮೇಲೆ ಆಕ್ರಮಣ ಮಾಡಿದಾಗ ಪ್ಯಾರಿಸ್ ಬೆಲ್ಜಿಯನ್ ನಿರಾಶ್ರಿತರಿಂದ ತುಂಬಿತ್ತು, ಎಡಿತ್ ನಿರಾಶ್ರಿತರಿಗಾಗಿ ಅಮೇರಿಕನ್ ಹಾಸ್ಟೆಲ್ಗಳನ್ನು ಸ್ಥಾಪಿಸಲು ಸಹಾಯ ಮಾಡಿದರು, ಅದು ನಿರಾಶ್ರಿತರಿಗೆ ಆಶ್ರಯ, ಊಟ ಮತ್ತು ಬಟ್ಟೆಗಳನ್ನು ಪಡೆಯಲು ಸಹಾಯ ಮಾಡುತ್ತಿತ್ತು. ಇದು ಸುಮಾರು 900 ಬೆಲ್ಜಿಯನ್ ನಿರಾಶ್ರಿತರಿಗೆ ಆಶ್ರಯ ನೀಡಿತು.
ಎಡಿತ್ ಫ್ರೆಂಚ್ ಸರ್ಕಾರದಲ್ಲಿನ ತಮ್ಮ ಪ್ರಭಾವಿ ಸಂಪರ್ಕಗಳ ನೆರವಿನಿಂದ ಹಾಗೂ ತಮ್ಮ ದೀರ್ಘಕಾಲದ ಸ್ನೇಹಿತ ವಾಲ್ಟರ್ ಬೆರ್ರಿ ಜೊತೆ (ಆಗ ಪ್ಯಾರಿಸ್ನಲ್ಲಿನ ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರು), ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಫೆಬ್ರವರಿ ಮತ್ತು ಆಗಸ್ಟ್ 1915ರ ನಡುವೆ ಐದು ಪ್ರಯಾಣಗಳನ್ನು ಮಾಡಿದರು. ಪ್ರಯಾಣಿಸಿದ ಫ್ರಾನ್ಸ್ನಲ್ಲಿರುವ ಕೆಲವು ವಿದೇಶಿಯರಲ್ಲಿ ಮೊದಲಿಗರು. ಈ ಪ್ರಯಾಣವನ್ನು ಎಡಿತ್ ಲೇಖನಗಳ ಸರಣಿಯಲ್ಲಿ ವಿವರಿಸಿದರು, ಇದನ್ನು ಮೊದಲು ಸ್ಕ್ರಿಬ್ನರ್ ಮ್ಯಾಗಜೀನ್ನಲ್ಲಿ ಪ್ರಕಟಿಸಲಾಯಿತು. ನಂತರ ಇದು ಫೈಟಿಂಗ್ ಫ್ರಾನ್ಸ್: ಫ್ರಂ ಡಂಕರ್ಕ್ ಟು ಬೆಲ್ಫೋರ್ಟ್ ಎಂದು ಅಮೆರಿಕದ ಬೆಸ್ಟ್ ಸೆಲ್ಲರ್ ಪುಸ್ತಕವಾಗಿ ಪ್ರಸಿದ್ಧಿ ಪಡೆಯಿತು. ಕಾರಿನಲ್ಲಿ ಪ್ರಯಾಣಿಸುವಾಗ ಎಡಿತ್ ಮತ್ತು ಬೆರ್ರಿ ಯುದ್ಧದ ವಲಯದೊಳಗಿಂದಲೇ ಪಯಣಿಸುತ್ತಿದ್ದರು. ಒಂದರ ನಂತರ ಒಂದರಂತೆ ನಾಶವಾದ ಫ್ರೆಂಚ್ ಹಳ್ಳಿಗಳನ್ನು ವೀಕ್ಷಿಸಿದರು. ಫಿರಂಗಿಯ ಗುಂಡಿಗೆ ಅನತಿ ದೂರದಲ್ಲಿದ್ದು ಯುದ್ಧದ ಪರಿಣಾಮಗಳನ್ನು ಗಮನಿಸುತ್ತಿದ್ದರು. “ಬಂದೂಕುಗಳ ನಿರಂತರವಾದ ಶಬ್ದದಿಂದ ಎಚ್ಚರವಾಯಿತು. ನಾವು ಬೀದಿಗೆ ಹೋದಾಗ, ರಾತ್ರೋರಾತ್ರಿ, ಹೊಸ ಸೈನ್ಯವು ನೆಲದಿಂದ ಹೊರಬಂದಂತೆ ತೋರುತ್ತಿದೆ”. ಎಂದು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಯುದ್ಧದುದ್ದಕ್ಕೂ ನಿರಾಶ್ರಿತರು, ಗಾಯಗೊಂಡವರು, ನಿರುದ್ಯೋಗಿಗಳು ಮತ್ತು ಸ್ಥಳಾಂತರಗೊಂಡವರಿಗಾಗಿ ಪ್ರಯತ್ನ ದಣಿವರಿಯಿಲ್ಲದೆ ಕೆಲಸ ಮಾಡಿದರು. “ತನ್ನ ದತ್ತು ಪಡೆದ ದೇಶದ ಪರವಾಗಿ ದುಡಿದ ದಣಿವರಿಯದ ವೀರ ಕೆಲಸಗಾರ್ತಿ” ಎಂದು 1916 ಏಪ್ರಿಲ್ 18, ರಂದು, ಫ್ರಾನ್ಸ್ನ ಆಗಿನ ಅಧ್ಯಕ್ಷರಾದ ರೇಮಂಡ್ ಪೊಯಿನ್ಕೇರ್ ರವರು ಯುದ್ಧದ ಪ್ರಯತ್ನಕ್ಕೆ ಎಡಿತ ರವರ ಸಮರ್ಪಣೆಯನ್ನು ಗುರುತಿಸಿ, ದೇಶದ ಅತ್ಯುನ್ನತ ಪ್ರಶಸ್ತಿಯಾದ ಲೆಜನ್ ಆಫ್ ಆನರ್ ಚೆವಲಿಯರ್ ಆಗಿ ನೇಮಿಸಿದರು. ನಿರುದ್ಯೋಗಿ ಫ್ರೆಂಚ್ ಮಹಿಳೆಯರಿಗೆ ಕೆಲಸದ ಕೊಠಡಿಗಳನ್ನು ಸ್ಥಾಪಿಸುವುದು, ಸಂಗೀತಗಾರರಿಗೆ ಕೆಲಸವನ್ನು ಒದಗಿಸಲು ಸಂಗೀತ ಕಚೇರಿಗಳನ್ನು ಆಯೋಜಿಸುವುದು, ಯುದ್ಧದ ಪ್ರಯತ್ನಕ್ಕಾಗಿ ಹತ್ತು ಸಾವಿರ ಡಾಲರ್ಗಳನ್ನು ಸಂಗ್ರಹಿಸುವುದು ಮತ್ತು ಕ್ಷಯರೋಗ ಆಸ್ಪತ್ರೆಗಳನ್ನು ತೆರೆಯುವುದು ಎಡಿತ್ ರವರು ಮಾಡಿದ ಪರಿಹಾರ ಕಾರ್ಯಗಳು. 1915ರಲ್ಲಿ ಎಡಿತ್ ಚಾರಿಟಿ ಲಾಭದ ಸಂಪುಟ ‘ದಿ ಬುಕ್ ಆಫ್ ದಿ ಹೋಮ್ಲೆಸ್’ ಕೃತಿಯನ್ನು ಸಂಪಾದಿಸಿದರು. ಇದು ಹೆನ್ರಿ ಜೇಮ್ಸ್ , ಜೋಸೆಫ್ ಕಾನ್ರಾಡ್ , ವಿಲಿಯಂ ಡೀನ್ ಹೋವೆಲ್ಸ್ , ಅನ್ನಾ ಡಿ ನೊಯಿಲ್ಸ್ , ಜೀನ್ ಕಾಕ್ಟೋ ಮತ್ತು ವಾಲ್ಟರ್ ಗೇ ಸೇರಿದಂತೆ ಅನೇಕ ಪ್ರಮುಖ ಸಮಕಾಲೀನ ಯುರೋಪಿಯನ್ ಮತ್ತು ಅಮೇರಿಕನ್ ಕಲಾವಿದರ ಪ್ರಬಂಧಗಳು, ಕಲೆ, ಕವನ ಮತ್ತು ಸಂಗೀತದ ಸ್ಕೋರ್ಗಳನ್ನು ಒಳಗೊಂಡಿತ್ತು .
1916ರಲ್ಲಿ ಎಡಿತ್ ರವರ ಜನಪ್ರಿಯ ಪ್ರಣಯ ಕಾದಂಬರಿ ‘ಸಮ್ಮರ್’ ಪ್ರಕಟವಾಯಿತು. 1918ರಲ್ಲಿ ಯುದ್ಧ ಕಾದಂಬರಿ ‘ದಿ ಮಾರ್ನೆ’, 1919ರಲ್ಲಿ ‘ಎ ಸನ್ ಅಟ್ ದಿ ಫ್ರಂಟ್ (ಇದು 1923ರಲ್ಲಿ ಪ್ರಕಟವಾಯಿತು) ಮುಂತಾದ ಪುಸ್ತಕಗಳನ್ನು ಬರೆದರು. ಯುದ್ಧವು ಕೊನೆಗೊಂಡಾಗ ಸ್ನೇಹಿತನ ಅಪಾರ್ಟ್ಮೆಂಟ್ ನ ಬಾಲ್ಕನಿಯಿಂದ ವಿಕ್ಟರಿ ಪೆರೇಡ್ ಅನ್ನು ವೀಕ್ಷಿಸಿದರು. ಪ್ಯಾರಿಸ್ನ ಉತ್ತರಕ್ಕೆ 10 mi (16 km) ದೂರದಲ್ಲಿ ಸೇಂಟ್-ಬ್ರೈಸ್-ಸೌಸ್-ಫೋರೆಟ್ ಎನ್ನುವಲ್ಲಿ ಏಳು ಎಕರೆ ಭೂಮಿ ಮತ್ತು 18ನೇ ಶತಮಾನದ ಮನೆಯನ್ನು ಖರೀದಿಸಿ ಅದನ್ನು ‘ಪಾವಿಲ್ಲನ್ ಕೊಲೊಂಬೆ’ ಎಂದು ಕರೆದು ತನ್ನ ಜೀವನದುದ್ದಕ್ಕೂ ಬೇಸಿಗೆಯಲ್ಲಿ ಅಲ್ಲಿಯೇ ಉಳಿಯುತ್ತಿದ್ದ ಎಡಿತ್ ಚಳಿಗಾಲವನ್ನು ಫ್ರೆಂಚ್ ರಿವೇರಿಯಾದ ಹೈರೆಸ್ನಲ್ಲಿರುವ ಸೈಂಟ್ ಕ್ಲೇರ್ ಡು ವಿಯುಕ್ಸ್ ನಲ್ಲಿ ಕಳೆಯುತ್ತಿದ್ದರು. ಫ್ರೆಂಚ್ ಸಾಮ್ರಾಜ್ಯಶಾಹಿಯ ಬದ್ಧ ಬೆಂಬಲಿಗರಾಗಿದ್ದ ಎಡಿತ್ ತಮ್ಮನ್ನು ತಾವು “ಕ್ರೋಧೋನ್ಮತ್ತ ಸಾಮ್ರಾಜ್ಯಶಾಹಿ” ಎಂದು ಬಣ್ಣಿಸಿಕೊಂಡರು. ಯುದ್ಧವು ಅವರ ರಾಜಕೀಯ ದೃಷ್ಟಿಕೋನಗಳನ್ನು ಗಟ್ಟಿಗೊಳಿಸಿತ್ತು. ಯುದ್ಧದ ನಂತರ ರೆಸಿಡೆಂಟ್ ಜನರಲ್ ಹಬರ್ಟ್ ಲ್ಯೌಟಿಯ ಅತಿಥಿಯಾಗಿ ಮೊರಾಕೊಗೆ ಪ್ರಯಾಣ ಬೆಳೆಸಿದ ಎಡಿತ್ ನಂತರ ಫ್ರೆಂಚ್ ಆಡಳಿತ, ಲ್ಯೌಟೆ ಮತ್ತು ವಿಶೇಷವಾಗಿ ಅವನ ಹೆಂಡತಿಯ ಹೊಗಳಿಕೆಯಿಂದ ತುಂಬಿದ ‘ಇನ್ ಮೊರಾಕೊ’ ಎನ್ನುವ ಪುಸ್ತಕವನ್ನು ಬರೆದರು. ನಂತರದ ವರ್ಷಗಳಲ್ಲಿ ಹೈರೆಸ್ ಮತ್ತು ಪ್ರೊವೆನ್ಸ್ ನಡುವೆ ಓಡಾಡುತ್ತ ಕಾಲಕಳೆದರು. 1920ರಲ್ಲಿ ‘ದಿ ಏಜ್ ಆಫ್ ಇನೋಸೆನ್ಸ್’ ಕೃತಿಯನ್ನು ಬರೆದರು. 1923ರಲ್ಲಿ ಯೇಲ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆಯಲು ಒಮ್ಮೆ ಮಾತ್ರ ಯುನೈಟೆಡ್ ಸ್ಟೇಟ್ಸ್ ಗೆ ಮರಳಿದ್ದ ಎಡಿತ್ ನಂತರ ಅಮೇರಿಕಾಕ್ಕೆ ಹೋಗಲಿಲ್ಲ.
‘ದಿ ಏಜ್ ಆಫ್ ಇನೋಸೆನ್ಸ್’ ಕಾದಂಬರಿಯು 1921ರ ಪುಲಿಟ್ಜೆರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಎಡಿತ್ ವಾರ್ಟನ್. ಸಾಹಿತ್ಯ ವಿಮರ್ಶಕ ಸ್ಟುವರ್ಟ್ ಪ್ರ್ಯಾಟ್ ಶೆರ್ಮನ್, ಸಾಹಿತ್ಯ ಪ್ರಾಧ್ಯಾಪಕ ರಾಬರ್ಟ್ ಮೋರ್ಸ್ ಲೊವೆಟ್ ಮತ್ತು ಕಾದಂಬರಿಕಾರ ಹ್ಯಾಮ್ಲಿನ್ ಗಾರ್ಲ್ಯಾಂಡ್ ಈ ಮೂವರು ತೀರ್ಪುಗಾರರು ಸಿಂಕ್ಲೇರ್ ಲೆವಿಸ್ ರವರ ವಿಡಂಬನಾತ್ಮಕ ಶೈಲಿಗಾಗಿ ಮತ ಹಾಕಿದ್ದರೂ ಕೊಲಂಬಿಯಾ ವಿಶ್ವವಿದ್ಯಾಲಯದ ಸಲಹಾ ಮಂಡಳಿಯ ಕನ್ಸರ್ವೇಟಿವ್ ವಿಶ್ವವಿದ್ಯಾಲಯದ ಅಧ್ಯಕ್ಷ ನಿಕೋಲಸ್ ಮುರ್ರೆ ಬಟ್ಲರ್ ಈ ಮೂವರು ತೀರ್ಪುಗಾರರ ನಿರ್ಧಾರವನ್ನು ರದ್ದುಗೊಳಿಸಿ ದಿ ಏಜ್ ಆಫ್ ಇನೋಸೆನ್ಸ್ ಆ ವರ್ಷದ ಅತ್ಯುತ್ತಮ ಕೃತಿ ಎಂದು ತೀರ್ಮಾನಿಸಿ ಪ್ರಶಸ್ತಿಯನ್ನು ನೀಡಿದರು. ಎಡಿತ್ ರವರು 1927, 1928, ಮತ್ತು 1930ರಲ್ಲಿ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದು ಗಮನಾರ್ಹ.
ಎಡಿತ್ ವಾರ್ಟನ್ ತಮ್ಮ ಕಾಲದ ಅನೇಕ ಪ್ರಮುಖ ಬುದ್ಧಿಜೀವಿಗಳಿಗೆ ಆಪ್ತ ಸ್ನೇಹಿತರಾಗಿದ್ದರು. ಹೆನ್ರಿ ಜೇಮ್ಸ್, ಸಿಂಕ್ಲೇರ್ ಲೆವಿಸ್ , ಜೀನ್ ಕಾಕ್ಟೊ ಮತ್ತು ಆಂಡ್ರೆ ಗಿಡ್ ಅವರೆಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಇವರ ಅತಿಥಿಗಳಾಗಿದ್ದರು. ಥಿಯೋಡರ್ ರೂಸ್ವೆಲ್ಟ್, ಬರ್ನಾರ್ಡ್ ಬೆರೆನ್ಸನ್ ಮತ್ತು ಕೆನ್ನೆತ್ ಕ್ಲಾರ್ಕ್ ಸಹ ಇವರ ಒಳ್ಳೆಯ ಸ್ನೇಹಿತರು. ಅದರಲ್ಲೂ ಮುಖ್ಯವಾಗಿ ಎಫ್. ಸ್ಕಾಟ್ ಫಿಟ್ಜ್ಗೆರಾಲ್ಡ್ ರವರೊಂದಿಗಿನ ಭೇಟಿಯು ವಿಶೇಷವಾಗಿ ಗಮನಾರ್ಹವಾಗಿದೆ. ಇದನ್ನು ಅವರ ಪತ್ರಗಳನ್ನು ಸಂಪಾದಿಸಿದ ಸಂಪಾದಕರು “ಅಮೆರಿಕನ್ ಸಾಹಿತ್ಯಿಕ ವಲಯದ ವಿಫಲವಾದ ಮುಖಾಮುಖಿಗಳಲ್ಲಿ ಒಂದು” ಎಂದು ವಿವರಿಸಿದ್ದಾರೆ. ಎಡಿತ್ ಫ್ರೆಂಚ್, ಇಟಾಲಿಯನ್ ಮತ್ತು ಜರ್ಮನ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಅನೇಕ ಪುಸ್ತಕಗಳು ಫ್ರೆಂಚ್ ಮತ್ತು ಇಂಗ್ಲಿಷ್ ಎರಡರಲ್ಲೂ ಪ್ರಕಟವಾಗಿವೆ.
1934ರಲ್ಲಿ ಎಡಿತ್ ವಾರ್ಟನ್ ರವರ ಆತ್ಮಚರಿತ್ರೆ ‘ಎ ಬ್ಯಾಕ್ವರ್ಡ್ ಗ್ಲಾನ್ಸ್’ ಅನ್ನು ಪ್ರಕಟಿಸಲಾಯಿತು. ಇದರ ಕುರಿತು ಜುಡಿತ್ ಇ. ಫನ್ಸ್ಟನ್ ಅಮೇರಿಕನ್ ನ್ಯಾಷನಲ್ ಬಯೋಗ್ರಫಿಯಲ್ಲಿ ‘ಎ ಬ್ಯಾಕ್ವರ್ಡ್ ಗ್ಲಾನ್ಸ್ನಲ್ಲಿ ಹೆಚ್ಚು ಗಮನಾರ್ಹವಾದ ಸಂಗತಿಯೆಂದರೆ, ಅದು ಏನು ಹೇಳುವುದಿಲ್ಲ: ಲುಕ್ರೆಟಿಯಾ ಜೋನ್ಸ್ [ಎಡಿತ್ ತಾಯಿ] ಅವರ ಟೀಕೆ, ಟೆಡ್ಡಿಯೊಂದಿಗಿನ ತೊಂದರೆಗಳು ಮತ್ತು ಮಾರ್ಟನ್ ಫುಲ್ಲರ್ಟನ್ನೊಂದಿಗಿನ ಬೆಳಕಿಗೆ ಬರದ ಅವರ ಸಂಬಂಧ, ಮುಂತಾದವುಗಳನ್ನು ಹಸ್ತಪ್ರತಿ ಗ್ರಂಥಾಲಯದಲ್ಲಿ ಠೇವಣಿ ಇಡಲಾಗಿದೆ’ ಎಂದಿದ್ದಾರೆ.
ಜೂನ್ 1, 1937 ರಂದು, ವಾರ್ಟನ್ ಆಗ್ಡೆನ್ ಕಾಡ್ಮನ್ನೊಂದಿಗೆ ತಮ್ಮ ಫ್ರೆಂಚ್ ದೇಶದ ಮನೆಯಲ್ಲಿ ‘ದಿ ಡೆಕೊರೇಶನ್ ಆಫ್ ಹೌಸ್’ನ ಪರಿಷ್ಕೃರಣೆ ಮಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದರು. ಆಗಸ್ಟ್ 11, 1937 ರಂದು, ಸೇಂಟ್ -ಬ್ರೈಸ್-ಸೌಸ್-ಫೋರೆಟ್ನಲ್ಲಿರುವ ರೂ ಡಿ ಮಾಂಟ್ಮೊರೆನ್ಸಿಯ ಅವರ 18 ನೇ ಶತಮಾನದ ಮನೆಯಾದ ‘ಲೆ ಪಾವಿಲ್ಲನ್ ಕೊಲೊಂಬೆ’ಯಲ್ಲಿ ಸಂಜೆ 5:30ಕ್ಕೆ ನಿಧನರಾದರು, ಅವರ ಜೊತೆ ಆಗ ಅವರ ಆತ್ಮೀಯ ಸ್ನೇಹಿತೆ ಶ್ರೀಮತಿ ರಾಯಲ್ ಟೈಲರ್ ಇದ್ದರು.
ಒಂದು ಆಳವಾದ ದುಃಖ
ಒಂದು ಆಳವಾದ ದುಃಖವಿದೆ,
ಅದು ನನ್ನ ಹೃದಯದ ಆಪ್ತ ಸಹಚರ,
ಅದು ಅಗಲುವುದಿಲ್ಲ ನನ್ನಿಂದ
ನನ್ನ ದಿನಗಳು ಕಳೆದು ಹೋಗುವವರೆಗೂ
ಹೆಜ್ಜೆಯಿಡುತ್ತದೆ ನನ್ನ ಪಕ್ಕದಲ್ಲಿ
ಹಗಲಿನಲ್ಲೂ ರಾತ್ರಿಯಲ್ಲೂ ನೆರಳಿನಂತೆ
ಜೊತೆಗೆ ಪಡೆಯುತ್ತದೆ ನನ್ನೆಲ್ಲಾ
ಅದೃಷ್ಟದಲ್ಲಿ ಸಮಾನ ಪಾಲನ್ನು
ಹೆದರುತ್ತಿದ್ದೆ ಮೊದಲಿಗೆ ಅದನ್ನು
ಮತ್ತೆ ಮತ್ತೆ ಕಂಡಾಗಲೆಲ್ಲ
ಭಯವಾಗುತ್ತಿತ್ತು ಅದು ಸದಾ
ನನ್ನ ಹಾಸಿಗೆಯ ಮೇಲೆ ಬಾಗಿದ್ದನ್ನು ಕಂಡು
ಕೊನೆಗೊಂಡಿತು ಭಯ ನಿಧಾನವಾಗಿ
ಯಾವಾಗಲೂ ಜೊತೆಗಿರುವುದರಿಂದ
ಒಂದು ತಂಪಾದ ರಾತ್ರಿ ಅಚ್ಚರಿಯೆನಿಸುವಂತೆ
ಅದರ ಸಖ್ಯ ಬೆಚ್ಚಗೆನಿಸಿ ಅಳು ಬಂದಿತು
ಅಂದಿನಿಂದ ಪ್ರಯಾಣಿಸತೊಡಗಿದೆವು
ನಾವಿಬ್ಬರೂ ಕೈಯ್ಯಲ್ಲಿ ಕೈ ಹಿಡಿದು,
ಇಗೋ, ಈಗ ನನ್ನ
ಮಾರ್ಗದರ್ಶಕನಾಗಿಬಿಟ್ಟಿದೆ ಈ ದುಃಖ
ಹೆದರಿಕೆ ಹುಟ್ಟಿಸಿ ಕಂಗೆಡಿಸುವ
ಅನೇಕ ಹೊಸ ಜಾಗಗಳಲ್ಲಿ
ಯಾರ ಮಾತು ಹೊಸತನದಿಂದ ಕೂಡಿದ್ದರೂ
ಅರ್ಥವಾಗದಂತಿರುತ್ತದೆಯೋ ಅಂಥವರಿಗಾಗಿ ಇದೋ
ಸುಳಿಗಾಳಿಯಿಂದ ಕೂಡಿದ
ನನ್ನ ಅನಂತ ದುಃಖದ ಮರುಳುಗಾಡಿನಿಂದ
ದೈವಿಕ ಸುಗಂಧ ಹಾಗೂ ಕೆಂಪು ಚಿನ್ನದ ಶ್ರದ್ಧಾಂಜಲಿ
ಎಂದು ಕವನ ಬರೆಯುತ್ತಿದ್ದ ಎಡಿತ್ ಸದಾ ನೋವನ್ನು ಎದೆಯಲ್ಲಿಟ್ಟುಕೊಂಡೇ ನಡೆದವರು. ಹಲವಾರು ಹವ್ಯಾಸಗಳನ್ನು ರೂಢಿಸಿಕೊಂಡು ಸದಾ ಒಂದಿಲ್ಲಾ ಒಂದು ಕೆಲಸದಲ್ಲಿ ನಿರತರಾಗಿರುತ್ತಿದ್ದ ಎಡಿತ್ ವಾರ್ಟನ್ ಹಲವಾರು ಮೊದಲುಗಳಿಗಾಗಿ ಆಂಗ್ಲ ಸಾಹಿತ್ಯ ಪ್ರೇಮಿಗಳ ಮನದಲ್ಲಿ ಸದಾ ಹಸಿರಾಗಿರುತ್ತಾರೆ.
[…] ಇದನ್ನೂ ಓದಿ: ಎಡಿತ್ ಎಂಬ ಪರಂಪರೆಯಿಂದ ಹೊರಚಾಚಿದ ಕೊಂಬೆ […]