“ಅಯ್ಯೋ, ಬಿಡಿ ಆ ಇಂದಿರಾ ಗಾಂಧಿಯೇ ದುಷ್ಟರ ಗುಂಡಿಗೆ ಬಲಿಯಾದರು. ನಮ್ಮೊಂಥೋರ್‍ದು ಏನ ಮಹಾ? ಹೆದರಿಕೊಂಡು ಒಳ್ಳೆದು ಮಾಡ್ದೆ ಇರೋದಿಕ್ಕಾಗುತ್ತಾ? ಏನೋ ಈ ಊರ್‍ಗೆ, ಪಂಚಾಯ್ತಿಗೆ ಒಳ್ಳೇದು ಆದರೆ ಸಾಕು. ಯಾರ್ ಜೊತೆಗಿಲ್ದೆ ಹೋದರೂ ನನಗೇನು, ಎಲ್ರು ಒಂದು ದಿನ ಸಾಯೋದೆ” ಎಂದು ದಿಟ್ಟವಾಗಿ ಮಲೆನಾಡಿನ ಮೂಲೆಯಲ್ಲಿ ಮಹಿಳೆ ಮಾತಾಡುವುದು ಎಂದರೇನು. ಅದೂ ಅನಕ್ಷರಸ್ಥ ದಲಿತ ಮಹಿಳೆ. ದಲಿತ ಮಹಿಳಾ ಮೀಸಲಾತಿ ಕೋಟಾದಿಂದ ಗ್ರಾಮಪಂಚಾಯ್ತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಯಶೋಧಮ್ಮನಂಥವರು ಎಲ್ಲ ಸದಸ್ಯರುಗಳನ್ನು ಎದುರು ಹಾಕಿಕೊಂಡು ಸಾರಾಯಿ ನಿಷೇಧ ಮಾಡುವುದರ ಬಗ್ಗೆ ದೃಢವಾಗಿ ನಿಂತಿದ್ದರು. ಆಗ ನಾವು ಅಣ್ಣ ಹಜಾರೆ ಬಗ್ಗೆ ಕೂಡ ನಾಟ್ಕ ಮಾಡ್ತಿದ್ದೊ. ಆದರೆ ಯಶೋಧಮ್ಮನಂತಹ ಅನಕ್ಷರಸ್ಥ ಮಹಿಳೆಯ ಲೋಕ ಕಾಳಜಿ, ವಿವೇಚನೆಯ ಬದ್ಧತೆ, ಆತ್ಮಸ್ತೈರ್ಯದ ಎದುರು ದೂರದ ಅಣ್ಣಾ ಹಜಾರೆ ಮಂಕಾಗಿ ಹೋದರು. ನಮ್ಮ ಸುತ್ತಲೇ ಕಾಣದ ಹಾಗೆ ಇರುವ ಈ ವ್ಯಕ್ತಿತ್ವಗಳು ನಿಜಕ್ಕೂ ಅಸಂಪ್ರದಾಯಿಕವಾದ ರಾಜಕೀಯ ಹೋರಾಟಗಾರರು ಹಾಗೂ ಸಾಮಾಜಿಕ ಕೇಡಿನ ವಿರುದ್ಧವಾಗಿ ನಿಲ್ಲುವ ಅಚಲ ಚೇತನಗಳೇ ಆಗಿರುತ್ತಾರೆ.
ವಾಸ್ತವದಲ್ಲಿ ಮಹಿಳಾ ಪಂಚಾಯ್ತಿ ಅಧ್ಯಕ್ಷರು ನಾಮಾಕವಸ್ಥೆಗೆ ಮಾತ್ರ, ಅವರ ಅಧ್ಯಕ್ಷತನದ ಅಧಿಕಾರವನ್ನು ಅವರ ಗಂಡದಿರು ಚಲಾಯಿಸುವ ಸನ್ನಿವೇಶಗಳೇ ಈ ಹೊತ್ತಿಗೂ ಗ್ರಾಮಪಂಚಾಯ್ತಿಗಳಲ್ಲಿ ಕಾಣಬಹದು. ಇದು ಮೇಲ್ಜಾತಿಯ ಹೆಂಗಸರಲ್ಲಿ ಅಧಿಕವಾಗಿರುತ್ತದೆ. ಪಂಚಾಯ್ತಿ ವ್ಯವಸ್ಥೆ ತಳಮಟ್ಟದಿಂದ ಹದಗೆಡಲು ಇದೂ ಕಾರಣ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದಲಿತ ಮಹಿಳಾ ಅಧ್ಯಕ್ಷೆ ಯಶೋಧಮ್ಮ ಕಾಣುತ್ತಿದ್ದರು. ಪ್ರಜಾಪ್ರಭುತ್ವದ ಸೆಲೆ ಹಾಗೂ ಗ್ರಾಮಪಂಚಾಯ್ತಿಯ ಅಧಿಕಾರವೆಲ್ಲವೂ ದಮನಿತರ ಹಿನ್ನಲೆಯಿಂದಲೇ ಅಸಲಿಯಾಗಿ ಸಾಕಾರಗೊಳ್ಳುತ್ತದೆ. ಆ ಬದ್ಧತೆ ಯಶೋಧಮ್ಮನಂತಹ ಅಧೋಲೋಕದ ಮಹಿಳೆಗೆ ತಾನು ಎದುರಿಸಿದ ಕಷ್ಟ ಹಾಗೂ ಜಾತಿ ಶೋಷಣೆಯ ಅವಮಾನದಿಂದಾಗಿ ಎಚ್ಚೆತ್ತು ಬಂದ ನೈತಿಕತೆಯಿಂದ ದಕ್ಕಿರುತ್ತದೆ. ಸಾಮಾಜಿಕ ಕೇಡನ್ನು ಎದುರಾಗುವ ಬಗೆಯಿದೆಯಲ್ಲ, ಇದು ಈ ಸಮಾಜದ ಕಟ್ಟಕಡೆ ದಲಿತ, ಮಹಿಳೆ ಮಾತ್ರರಿಂದಲೇ ಜೈವಿಕವಾಗಿ ಗರಿಗೆದರುತ್ತದೆ ಎಂದು ದೃಢವಾಗಿ ಹೇಳಲು ಅಂಜಿಕೆಯೇನಿಲ್ಲ.
ತೀರ್ಥಹಳ್ಳಿ ಜಗತ್ತು ಹಸಿರಾಗಿ ಹೊರಗೆ ರಮಣೀಯವಾಗಿ ಕಾಣುವ ಬಗೆಯೇ ಬೇರೆ. ಸಾಮಾಜಿಕವಾಗಿ ಅಲ್ಲಿನ ಮನುಷ್ಯ ಜಗತ್ತಿನ ವ್ಯವಸ್ಥೆಯಾಗಿ ಒಳಗೆ ಇರುವುದೇ ಬೇರೆ. ಎಂತಹ ಸುಜಲಾಂ, ಸುಫಲಾಂ ಇದ್ದರೇನು? ದೀನ ದಲಿತರು, ಹಿಂದುಳಿದವರ ಪಾಲಿಗೆ ಮಲೆನಾಡು ನರಕವೇ ಆಗಿದೆ. ಜಾತಿ ಮತ್ತು ಫ್ಯೂಢಲ್ ಸಮಾಜದ ಪ್ರವೃತ್ತಿಗಳು ಇಲ್ಲಿಯೂ ಉಳ್ಳವರನ್ನು ಮಾತ್ರ ಕೊಬ್ಬಿಸಿವೆ. ಈ ಮೃಗೀಯ ವ್ಯವಸ್ಥೆಯ ನಡುವೆ ಪ್ರಕೃತಿ ಸೊಬಗಿಗೆ ರಮ್ಯಕ ಭಾವದಿಂದ ತೇಲುವ ಮನಸ್ಸುಗಳಿಗೆ ಇಲ್ಲಿನ ಸಾಮಾಜಿಕ ಸತ್ಯಗಳು ಅಪಥ್ಯವಾಗಬಹುದೇನೊ. ಮೇಲಾಗಿ ಇವು ನಮ್ಮ ಅತಿಶಯದ ಸಾಮಾಜಿಕ ಆಕ್ರೋಶಗಳಲ್ಲ. ಬದಲಾಗಿ ಸುಮಾರು ಎಪ್ಪತ್ತಕ್ಕೂ ಅಧಿಕ ತೀರ್ಥಹಳ್ಳಿಯ ಹಳ್ಳಿ ಹಳ್ಳಿಗಳನ್ನು ಕಂಡ ಪ್ರತ್ಯಕ್ಷ ಸಾಮಾಜಿಕ ಸತ್ಯ ಮತ್ತು ಅನುಭವ.
ಈ ಸಮಾಜದ ಪಟ್ಟಭದ್ರರ ನಡುವೆ ಯಶೋಧಮ್ಮ ಎಂಬ ದಲಿತ ಮಹಿಳೆ ನಮಗೆ “ಅರೆ! ಇದೆಲ್ಲವೂ ಸಾಧ್ಯವೇ?” ಎಂಬ ಸೋಜಿಗ ಮೂಡಿಸಿದ್ದರು. ಗಟ್ಟಿಗಿತ್ತಿ ಯಶೋಧಮ್ಮನ ಬದ್ಧತೆ ಹಾಗೂ ಎದೆಗಾರಿಕೆಗೆ ನಾವು ನಿಬ್ಬೆರಗಾದದ್ದಂತು ಸತ್ಯ. ತಮ್ಮ ಪಾಡಿಗೆ ತಮ್ಮ ದುಡಿಮೆ, ದಾರೀಲಿ ತಲೆ ಎತ್ತದೆ ನಡೆಯುವ ಕೂಲಿಕಾರರು, ಆ ಫ್ಯೂಡಲ್ ಜಗತ್ತಿನ ನಡುವೆ ಕೇವಲ ದುಡಿವ ಯಂತ್ರದಂತಾಗಿ ಹೋಗಿದ್ದಾರೆ. ಇದು ಈ ಹೊತ್ತಿಗೂ ಸತ್ಯವೇ ಆಗಿದೆ. ಕಲಾವಿದರನ್ನು ಭೇಟಿ ಮಾಡುತ್ತಿದ್ದ ನಾವು ದಲಿತ ಕೇರಿಗಳು, ದುಡಿವ ಜನಗಳ ಕೇರಿಗಳನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಯಾರಿಗೂ ಹೇಳಲಾಗದ ಬಡತನ ಮತ್ತು ಅಸಹಾಯಕತೆಯ ನಡುವೆಯೂ ಕಳೆಗುಂದದ ಆ ಜನರ ಜೀವನ ಪ್ರೀತಿಯ ಮಂದಹಾಸ ಮಾತ್ರ ಈಗಲೂ ನಮ್ಮನ್ನು ಆಕರ್ಷಿಸುತ್ತದೆ. ಈ ಬಡವರ ಲೋಕದ ನಗುವಿನ ಶಕ್ತಿಯ ನಿಗೂಢತೆ ಮತ್ತವರ ಆಂತರ್ಯವನ್ನು ನಮ್ಮ ಶಬ್ದಗಳು ವಿವರಿಸಲಾರವೇನೊ. ಯಶೋಧಮ್ಮ ಇಂತಹ ಲೋಕದಿಂದ ಬಂದ ಮಹಿಳೆಯಾಗಿದ್ದರು. ರೆಬಲ್ ಆಗಿ ಮಾತನಾಡುತ್ತಿದ್ದ ಈ ಯಶೋಧಮ್ಮ, ದಲಿತ ಸಮುದಾಯದ ದಿಟ್ಟ ಹೆಣ್ಣುಮಗಳು. ಈ ರೆಬಲ್ತನಕ್ಕೆ ಬದುಕಿನ ಕಸುವು ಮತ್ತು ಸಮಾಜದ ಕಾಳಜಿಗಳ ಜೈವಿಕತೆ ಇತ್ತು. ಇಂತಹ ಐರನ್ ಲೋಕಲ್ ಮಹಿಳೆಯನ್ನು ನಾವು ಜನಾಧಿಕಾರ ಜನಾಂದೋಲನ ಜಾಥ ಮಾಡುವ ಸಂದರ್ಭದಲ್ಲಿ ಕಂಡಿದ್ದು ನಮಗೊಂದು ವಿಶೇಷ ಅನುಭವ. ಸುಮಾರು ಐವತ್ತರ ಆಸುಪಾಸಿನ ಈ ದಲಿತ ಮಹಿಳೆ, ತನಗೆ ದೊರೆತ ಮೀಸಲಾತಿಯಿಂದ ಪಂಚಾಯ್ತಿ ಅಧ್ಯಕ್ಷೆ ಆಗಿದ್ದರು. ಎಸ್ಸಿ ಎಸ್ಟಿ ಮತ್ತು ಹಿಂದುಳಿದ ಜನಗಳ ಸ್ಥಳೀಯ ಪಂಚಾಯ್ತಿಗಳಲ್ಲಿನ ಹಕ್ಕು ಮತ್ತು ರಾಜಕೀಯ ಪ್ರಾತಿನಿಧ್ಯದ ವಿಚಾರಗಳನ್ನು ನಾಟಕ ಮಾಡುತ್ತಿದ್ದ ನಾವು, ನಮ್ಮದೇ ನಾಟಕದ ಪಾತ್ರವೊಂದನ್ನು ಜೀವಂತವಾಗಿ ಕಂಡ ರೋಮಾಂಚನ ಅನುಭವಿಸಿದ್ದೆವು. ಜನಾಧಿಕಾರ ಜನ ದನಿಯಾಗಿ ದಕ್ಕಲಿ, ಸಿಕ್ಕದ ಶತ ಶತಮಾನದ ಸಮಪಾಲು ಎಂಬುದರ ಮೂರ್ತರೂಪ ಇವರೇನಾ ಎಂದೂ ನಾವು ಸಂಭ್ರಮಿಸಿದ್ದೆವು.
ಜಾತಿ ಮತ್ತು ಹೆಣ್ಣು ಎಂಬ ಸಾಮಾಜಿಕ ಪ್ರತ್ಯೇಕತೆಯ ಕಾರಣಕ್ಕೆ ಯಶೋಧಮ್ಮನಂಥವರಿಗೆ ಮೀಸಲಾತಿಯಿಂದ ಪಂಚಾಯ್ತಿ ಅಧ್ಯಕ್ಷೆ ಸ್ಥಾನ ಸಿಕ್ಕಿತ್ತು. ತುಂಬಾ ಕರಾಳವಾದ ಜಾತಿ ವ್ಯವಸ್ಥೆಯ ಮಲೆನಾಡಿನಲ್ಲಿ, ಮೀಸಲಾತಿ ಪರಿಣಾಮದಿಂದ ದಲಿತ ಮತ್ತು ಹಿಂದುಳಿದ ಸಮುದಾಯಗಳು ಪ್ರಾತಿನಿಧ್ಯ ಹೊಂದಬಹುದು ಎಂಬ ನಾಟಕವನ್ನೂ ಸಹ ನಾವು ಪ್ರದರ್ಶಿಸುತ್ತಿದ್ದೆವು. ಊರಿನ ಪ್ರಬಲ ಕುಳಗಳ ನಡುವೆ ಸಾಮಾನ್ಯರಲ್ಲಿಯೇ ಅತಿ ಸಾಮಾನ್ಯ ಬಡವರು ನಮ್ಮ ನಾಟಕಗಳನ್ನು ಪಿಳಿ ಪಿಳಿ ಕಣ್ಣುಬಿಟ್ಟುಕೊಂಡು ನೋಡುತ್ತಿದ್ದರು. ಕನ್ನಡ ಪ್ರಖ್ಯಾತ ಲೇಖಕ ಯು.ಆರ್. ಅನಂತಮೂರ್ತಿಯವರ ಊರಲ್ಲಿ ನಮಗೆ ನಾಟಕ ಮಾಡಲು ಅವಕಾಶವನ್ನೇ ಮಾಡಿಕೊಡದ ಅಲ್ಲಿನ ಮೇಲ್ಜಾತಿಯ ಪುಢಾರಿಗಳ ಆರ್‍ಭಟಗಳ ನಡುವೆಯೂ ನಾವು ನಾಟಕವನ್ನು ಮಾಡಿಯೇ ತೀರಿದ್ದೆವು. ಜನ ದೂರದಲ್ಲಿ ಮನೆ ಕಿಟಕಿಬಳಿ ನಿಂತು ನಮ್ಮ ಹಾಡು ಮತ್ತು ವಿಚಾರಗಳನ್ನು ಕೇಳಿದ್ದರು. ಈ ಸುದ್ದಿ ಬೆಳಿಗ್ಗೆ ನಮ್ಮ ಕಿವಿಗೂ ಬಿದ್ದು, ನಾವು ಜಗತ್ತನ್ನು ಗೆದ್ದ ಖುಷಿಯಲ್ಲಿ ತೇಲಿಹೋಗಿದ್ದೆವು. ಜನಾಧಿಕಾರದ ವಿಚಾರಗಳನ್ನು ನಾವು ಹೇಗಾದರೂ ಜನರಿಗೆ ತಿಳಿಸಲೇಬೇಕು. ಜನರಲ್ಲಿ ಪ್ರಜಾಪ್ರಭುತ್ವದ ಜೀವಸೆಲೆ ಎಬ್ಬಿಸಬೇಕು ಎನ್ನುವ ಹಾಗೆ ಸಿ. ಬಸವಲಿಂಗಯ್ಯನವರು ಮನದಟ್ಟು ಮಾಡಿದ್ದರು.
ಮಲೆನಾಡಿನ ನಾಮಧಾರಿ ಒಕ್ಕಲಿಗ ಹುಡುಗರ ರಾಮಭಜನೆಯ ನೆಪದಲ್ಲಿ ಕೋಮುವಾದಿಗಳಾಗಿ ಬದಲಾಗಿದ್ದುದು, ಎಲ್ಲಿಯ ಕುವೆಂಪು, ಎಲ್ಲಿಯ ಈ ಮಲೆನಾಡು ಎನ್ನುವ ಹತಾಶೆಗೂ ನಮ್ಮನ್ನು ದೂಡಿತ್ತು. ಒಂದು ಸಂಜೆ ಆಗತಾನೆ ನಾಟಕ ಶುರು ಮಾಡಿದ್ದೆವು. ನೀರ್ ಸಾಬ್ ಎಂದೇ ಕರ್ನಾಟಕದ ಮನೆಮಾತಾಗಿದ್ದ ನಜೀರ್ ಸಾಬ್ ರವರ ಬಗ್ಗೆ ಮೇಷ್ಟು ಕೆ.ವೈ.ಎನ್ ಅವರು ರಚಿಸಿದ್ದ ʻಸಾವಿರ ಸಲಾಂ ಸಲಾಂ ನೀರು ಸಾಬು ನಜೀರು ಸಾಬುʼ ಎಂಬ ಹಾಡಾಡಿ, ಅವರ ಬಗ್ಗೆ ಮಾತಾಡುತ್ತಿದ್ದಾಗ, ಇದ್ದಕಿದ್ದಂತೆ ಸ್ಥಳೀಯ ಭಜರಂಗದ ಸಂಘಟನೆಯ ಹುಡುಗರು ಆಕ್ಷೇಪಣೆ ವ್ಯಕ್ತಪಡಿಸಿ ಕ್ಷಣ ಆತಂಕವನ್ನುಂಟು ಮಾಡಿದ್ದರು. ಮತ್ತೆ ಸಾಬರ ಬಗ್ಗೆ ಈ ತರ ವಿಚಾರ ಮತ್ತು ಹಾಡನ್ನು ಹಾಡಬೇಡಿ ಎಂದು ತಾಕೀತು ಮಾಡಿ, ಬೇರೆಯದ್ದಲ್ಲ ಸರಿ ಇದೆ ಸಾಬರ ಬಗ್ಗೆ ಏಕೆ ಹಾಡ್ತೀರ? ಎಂದು ಧಮ್ಕಿ ಹಾಕಿದ್ದರು. ಇಂತಹ ಮಲೆನಾಡಿನ ಕರಾಳ ಮುಖಗಳ ನಡುವೆ ತಾನಾಯಿತು ತನ್ನ ಬದುಕಾಯಿತು ಎನ್ನುವಂತಿದ್ದ ಅಲ್ಲಿನ ದಲಿತರು, ಕೂಲಿಕಾರರು ನಾಟಕಗಳು ಮುಗಿದ ಮೇಲೆ ನಮ್ಮನ್ನು ತುಂಬು ಪ್ರೀತಿ, ಅಭಿಮಾನದಿಂದ ಮಾತಾಡಿಸುತ್ತಿದ್ದರು. ಇದು ನಮಗೆ ಮತ್ತೆ ಮತ್ತೆ ನಾಟಕ ಮಾಡಲು ಪ್ರೇರಣೆಯಾಗುತ್ತಿದ್ದವು. ಆದ್ದರಿಂದಲೇನೋ ನಾವು ಕೂಲಿಕಾರರನ್ನು ಗೌರವಿಸಲು ಸಾಂಕೇತಿಕವಾಗಿ ಅವರನ್ನು ಪ್ರತಿನಿಧಿಸಬೇಕೆಂದು ತೀರ್ಮಾನಿಸಿ, ಅಡಿಕೆ ಕೂಯ್ಲು ಮಾಡುವವರು ತಲೆಗೆ ಧರಿಸುವ ಅಡಿಕೆ ಟೋಪಿಗಳನ್ನು ನಾವೂ ಕೂಡ ಅವರಂತೆಯೇ ಧರಿಸಿ ನಾಟಕ ಆರಂಭಿಸುತ್ತಿದ್ದೆವು. ಮತ್ತೆ ನಾವು ಜಾಥ ಮಾಡಬೇಕಾಗಿರುವುದು ಇಂತಹ ಜನರಿಗಲ್ಲವೇ ಎಂದು ಸಮಧಾನ ಪಟ್ಟುಕೊಂಡು, ಯಾವುದೇ ಅಡ್ಡಿಗಳನ್ನು ಲೆಕ್ಕಿಸದೆ ನಾಟಕವನ್ನು ಮಾಡಿಯೇ ತೀರುತ್ತಿದ್ದೆವು.
ಜನ ಸಾಮಾನ್ಯರಿಗೆ ತಮ್ಮ ಶಕ್ತಿ ಅರಿವು ಹಾಗೂ ಇವರುಗಳು ಸ್ಥಳೀಯವಾಗಿ ಹೊಂದಲೇಬೇಕಾದ ರಾಜಕೀಯ ಪ್ರಜ್ಞೆಯ ಜಾಗೃತಿ ತೀರಾ ಅಗತ್ಯವಿರುವ ಸಮಾಜ ನಮ್ಮದು. ಇಂತಹ ಸಾಮಾನ್ಯಲೋಕದಿಂದ ಪುಟಿದೆದ್ದ ಯಶೋಧಮ್ಮನಂಥವರು ಕುವೆಂಪು ಅವರು ಹೇಳಿದಂತೆ ಯಾರೂ ಅರಿಯದ ಧೀರರೇ ಆಗಿದ್ದರು. ಶ್ರೀ ಸಾಮಾನ್ಯನೇ ಭಗವದ್ ಮಾನ್ಯಂ ಎಂಬ ಕುವೆಂಪುರವರ ವಿಚಾರಕ್ಕೆ ರಾಜಕೀಯ ಶಕ್ತಿ ಹಾಗೂ ವಾಸ್ತವದ ಅಂಗೀಕಾರ ದೊರೆಯಬೇಕು. ಇಲ್ಲವಾದರೆ ಈ ವಿಚಾರಗಳು ಕೇವಲ ಕವಿಸಮಯದ ಆದರ್ಶವಾಗಿಯೇ ಉಳಿದುಬಿಡುತ್ತವಷ್ಟೆ.
ಆರಗ, ಮೇಗರಹಳ್ಳಿ, ಭಾರತೀಪುರ, ಮೇಳಿಗೆ, ಕೋಣಂದೂರು ಮುಂತಾದ ತೀರ್ಥಹಳ್ಳಿಯ ಊರುಗಳಲ್ಲಿ ನಮಗಾದ ಅನುಭವವೇ ಬೇರೆ. ನಾನು ಕುವೆಂಪು ಕಾದಂಬರಿಗಳನ್ನು ಓದಿ ಅದರ ಹ್ಯಾಂಗ್ ಓವರನಲ್ಲಿದ್ದೆ. ಕಾದಂಬರಿಯ ಸ್ಥಳ, ಪಾತ್ರಗಳು ಇಲ್ಲಿ ಇರಬಹುದೇ ಎಂದುಕೊಂಡೆ ಓಡಾಡುತ್ತಿದ್ದೆ. ಅದರಲ್ಲೂ ಮದುಮಗಳ ಗುತ್ತಿ ಎಲ್ಲಿ ಕೂತು ಹೋಗಿರಬಹುದು ಎಂದೂ ತಡಕಾಡುತ್ತಿದ್ದೆ. ಆದರೆ ನನ್ನ ಸಾಹಿತ್ಯಕ ರೋಮಾಂಚನದ ಆಚೆಗೂ, ಮಲೆನಾಡು ವಾಸ್ತವದಲ್ಲಿ ಸಾಮಾನ್ಯರು, ದಲಿತರು, ಕೂಲಿಗಳಿಗೆ ನಿತ್ಯ ನರಕದ ಕೊಂಪೆಯಾಗಿತ್ತು ಎಂಬುದಂತೂ ಅಂದಿಗೆ ನನ್ನ ಅರಿವಿಗೆ ಬಂತು. ನಮ್ಮ ಸಾಹಿತ್ಯವು ವಾಸ್ತವವಾದಿ ನೆಲೆಗಟ್ಟಿಗೆ ಏಕೆ ಚಲಿಸಲಿಲ್ಲ ಎಂಬ ಗುಮಾನಿಗಳು ನನ್ನನ್ನು ಮುಕ್ಕುತ್ತಿದ್ದವು. ಈ ಕಾರಣದಿಂದಲೋ ಏನೋ ದಲಿತ ಚಳವಳಿಯ ಬಿ.ಕೃಷ್ಣಪ್ಪನವರು ಕುವೆಂಪುರವರ ಕಾದಂಬರಿಗಳಲ್ಲಿ ದಲಿತ ಪಾತ್ರ ಚಿತ್ರಣ ಎಂಬ ವಾಸ್ತವದಿ ವಿಮರ್ಶೆಯ ಲೇಖನ ಬರೆದಿದ್ದು.
ಅರಿವೇ ಕಂಡಾಯ ಭಾಗ – 3 ಓದಿ : ಹಿರೀಕರ ಧೂಪದ ಬಟ್ಟಲ ಸಾಂಬ್ರಾಣಿಯ ಘಮಲಲ್ಲಿ ಮಿಂದೇಳುತ್ತಾ ಶಕ್ತಿ ಪಡೆಯೋಣ
ಈ ಪ್ರಕೃತಿ ವೈವಿಧ್ಯತೆಯನ್ನು ಇಟ್ಕೊಂಡು ರಮಣೀಯವಾಗಿ ರೋಮಾಂಚನಗೊಳ್ಳುವ ನಗರದವರಿಗೆ ಈ ಸಮಾಜದ ಸಾಮಾಜಿಕ ಸಂಕೀರ್ಣತೆಗಳ ಅರಿವಿಲ್ಲ. ಅದರಲ್ಲೂ ಬೀದಿ ನಾಟಕ ಪ್ರದರ್ಶನದ ನೆಪದಲ್ಲಿ ನಾವು ಕಂಡ ಸಾಮಾಜಿಕ ಚಿತ್ರಣ, ಮಲೆನಾಡಿನ ಬಗೆಗಿನ ನಮ್ಮ ಸಾಹಿತ್ಯಕ ಭ್ರಮೆಗಳನ್ನು ಒಡೆದುಹಾಕಿತ್ತು. ಈಗ ಭಾರತ ಬದಲಾಗಿದೆ ಎಂದೂ ಬೊಗಳೆ ಬಿಡುವವರು ಪ್ರತ್ಯಕ್ಷವಾಗಿ ಹಳ್ಳಿಗಳ ನಿಜಸ್ಥಿತಿ ಕಂಡರೆ ಖಂಡಿತ ತಮ್ಮ ಅಭಿಪ್ರಾಯ ಬದಲಾಯಿಸಿಕೊಳ್ಳುತ್ತಾರೆ. ಏಕೆಂದರೆ, ಈ ಮೇಲ್ಜಾತಿಗಳ ಕರುಬುವಿಕೆ, ಅಸೂಯೆ ಹಾಗೂ ಅಸಹನೆಗಳು ಈಗಲೂ ಹಳ್ಳಿಗಳನ್ನು ಜಾತಿ ಪ್ರಾಬಲ್ಯ ಹಾಗೂ ಓಟು ಬ್ಯಾಂಕಿನ ಕೊಂಪೆಯಾಗಿಸಿಬಿಟ್ಟಿವೆ. ಅದರಲ್ಲಿಯೂ ಮಲೆನಾಡಿನ ಏನೂ ಇಲ್ಲದವರ ಸ್ಥಿತಿಯಂತು ತೀರಾ ಬರ್ಬರವಾಗಿದೆ.
ತೀರ್ಥಹಳ್ಳಿಯ ಸುಮಾರು ಎಪ್ಪತ್ತು ಹಳ್ಳಿಗಳನ್ನು ಸುತ್ತಿದ್ದೆವು. ಜಾತಿ, ಫ್ಯೂಡಲ್ತನ ಹಾಗೂ ಕೋಮುವಾದದ ಕರಾಳ ಮುಖಗಳನ್ನು ಕಣ್ಣಾರೆ ಕಂಡು, ನಾವು ಇದೆನಾ ಮಲೆನಾಡು ಎಂದು ನಿಟ್ಟುಸಿರು ಬಿಟ್ಟು, ಅಯ್ಯೋ ನಮ್ಮ ಬಯಲು ಸೀಮೆಯೇ ವಾಸಿ ಎಂದುಕೊಂಡಿದ್ದೆವು. ಪ್ರಜಾಪ್ರಭುತ್ವದ ತಳಮಟ್ಟಕ್ಕಿಳಿಯಬೇಕು. ಇದರ ತಾಯಿಬೇರು ಹಳ್ಳಿಗಳು ಎಂಬ ವಿಚಾರಗಳಿಂದ ಪ್ರೇರಣೆಗೊಂಡರೂ, ನಾವು ವಾಸ್ತವದಲ್ಲಿ ಕಂಡ ಮಲೆನಾಡಿನ ಮುಖಗಳೇ ಬೇರೆಯಾಗಿದ್ದವು. ನಾನಂತೂ ಗಾಂಧೀ ಹಾಗೂ ಗಾಂಧೀವಾದಿಗಳನ್ನು ತುಂಬ ಬೈದುಕೊಂಡದ್ದಿದೆ. ಇವರಿಗೆ ಸಮಾಜದ ವಾಸ್ತವ ಗೊತ್ತಿಲ್ಲವೆಂದು, ಮತ್ತೆ ನಮ್ಮ ಜಾಥಾದ ನಿರ್ದೇಶಕರಾಗಿದ್ದ ಸಿ.ಬಸವಲಿಂಗಯ್ಯನವರ ಗಾಂಧಿ ವಿಚಾರಗಳನ್ನು ಸಹ ಒಳಗೊಳಗೆ ಆಕ್ಷೇಪಿಸಿದ್ದು ಇದೆ. ಆದರೂ ಇಂತಹ ಹತಾಶೆಗಳ ನಡುವೆಯೂ ಯಶೋಧಮ್ಮನಂಥವರು ಸಣ್ಣ ಭರವಸೆಯಾಗಿ ಕಾಣಿಸುತ್ತಿದ್ದರು. ಜನಾಧಿಕಾರದ ಗುಬ್ಬಿಯ ಗೂಡಿಗೆ ಒಣ ಹುಲ್ಲಿನ ದಳ ದಳವೂ ಬೇಕು ಎಂಬುದರ ರೂಪಕವಾಗಿ ಯಶೋಧಮ್ಮ ನಮಗೆ ಅಂದು ಕಾಣಿಸಿದ್ದರು.
ಇಂದಿರಾ ಗಾಂಧೀಯ ಬಗ್ಗೆ ತಳಮಟ್ಟದ ಜನಗಳಲ್ಲಿ ಈ ಹೊತ್ತಿಗೂ ಬಹಳ ದೊಡ್ಡ ನಂಬಿಕೆ ಮತ್ತು ವಿಶ್ವಾಸವಿದೆ. ತುರ್ತುಪರಿಸ್ಥಿತಿಯ ಬಗ್ಗೆ ಎಡಪಂಥೀಯರು ಹಾಗೂ ಪ್ರಗತಿಪರರು ಏನೇ ಅಂದರೂ ಇಂದಿರಾ ಗಾಂಧೀ ಬಡಬಗ್ಗರು ಹಾಗೂ ದಲಿತ , ಹಿಂದುಳಿದ ಜನಗಳಿಗೆ ಶಕ್ತಿ ನೀಡಿದ್ದರು ಎಂಬ ಅಭಿಪ್ರಾಯವನ್ನು ನಾವು ತಲಪರಿಗೆಗೆ ಮಾಡಿದ್ದ ಅಡಿಯೋ ಸಂದರ್ಶನವೊಂದರಲ್ಲಿ ಕೇಳಿದ್ದೆ. ದಲಿತ ಹಿರಿಯ ಅಧಿಕಾರಿಯಾಗಿದ್ದ ಗಂಗಹನುಮಯ್ಯನವರು ಈ ಮಾತುಗಳನ್ನಾಡಿದ್ದರು. ಇಂದಿರಾ ಗಾಂಧೀ ಬಡವರ ನಗುವಿನ ಶಕ್ತಿಯಾಗಿದ್ದರು ಎಂಬುದರ ದ್ಯೋತಕವಾಗಿಯೇ ಯಶೋಧಮ್ಮನಂಥವರು ಈ ಸಮಾಜದಲ್ಲಿ ಕಾಣಿಸಿಕೊಂಡದ್ದುಂಟು.
ಸಾಹಿತ್ಯಕವಾಗಿ ತೆಳು ಸಾಮಾಜಿಕ ಹಾಗೂ ಬೌದ್ಧಿಕತೆಯ ಲೋಲುಪತೆಯ ಅಮಲಲ್ಲಿರುವ ಸಾಹಿತಿಗಳಿಗೂ ಈ ಸಮಾಜದ ತಳಮಟ್ಟದ ಅರಿವು ಬಂದಿಲ್ಲ. ಯಶೋಧಮ್ಮನಂತಹ ದಲಿತ ಮಹಿಳೆ ಹಾಗೂ ಕಣ್ಣಾರೆ ಕಂಡ ಮಲೆನಾಡಿನ ಕೆಳಜಾತಿಗಳ ದುಸ್ಥಿತಿಯು ನಮ್ಮ ನೋಟಕ್ಕೆ ಹಾಗೂ ಇನ್ನೂ ದಕ್ಕಬೇಕಾದ ಸೂಕ್ಷ್ಮತೆ ಹಾಗೂ ಜಾಗರೂಕತೆಯ ಅಗತ್ಯವನ್ನು ಮನಗಾಣಿಸಿತು. ಗಿಳಿಪಾಠದ ನಮ್ಮ ಕ್ರಾಂತೀವಿಚಾರಗಳು ತೀರ್ಥಹಳ್ಳಿಯ ದಲಿತರು, ಕೂಲಿಕಾರರ ಎದುರು ತುಂಬಾ ಪೇಲವವಾಗಿ ಕಾಣುತ್ತಿದ್ದವು. ಅಲ್ಲದೆ ನಮ್ಮ ರಮ್ಯ ಸಾಹಿತ್ಯಕ ಕವಿ ಸಮಯಗಳು, ಕಾದಂಬರಿಗಳ ಬಗ್ಗೆ ಎದ್ದ ಗುಮಾನಿಯಿಂದ ಇವೆಲ್ಲ ಆಗ ರಸಸಾಹಿತ್ಯವೆಂದೂ ತೀರ್ಮಾನಿಸಿದ್ದುಂಟು. ಮಲೆನಾಡಿನ ಹಸಿರಿಗೂ ಕಾಣದ ಅಧೋಲೋಕವನ್ನು ತೀರ್ಥಹಳ್ಳಿಯ ಪ್ಯೂಢಲ್ ಸಮಾಜ ಬಚ್ಚಿಟ್ಟಿತ್ತು.
ಇದರಿಂದಾಗಿ ನಮಗಾದ ಆ ಹೊತ್ತಿನ ನಿರಾಶೆಯಲ್ಲಿಯೇ ನಾನು ಮತ್ತೆ ರವಿಬಾಗಿ ಅಂದು ಸಂವಾದ ಪತ್ರಿಕೆಗೆ ಕುವೆಂಪು ಮಲೆನಾಡಿನಲ್ಲಿ ಜಾತಿ ಕ್ರೌರ್ಯ ಎಂದೇನೋ ಲೇಖನವನ್ನು ಬರೆದಿದ್ದೊ. ಅದು ಪ್ರಕಟಗೊಂಡು ನಮ್ಮ ವಿಚಾರಗಳಿಗೆ ಹಿರಿಯ ಗಾಂಧೀವಾದಿ ಹೆಚ್.ಎಸ್. ದೊರೆಸ್ವಾಮಿ ಅವರು ಆಕ್ಷೇಪಣೆ ಕೂಡಾ ವ್ಯಕ್ತಪಡಿಸಿದ್ದರು. ಏನೇ ಆದರೂ ಜನಾಧಿಕಾರದ ಪದವನ್ನು ಬಹಳ ಉಮೇದಿನಲ್ಲಿ ಹಾಡುತ್ತಿದ್ದೆವು. ತೀರಾ ಖಟ್ಟರ್ ಕ್ರಾಂತಿಕಾರಿಗಳ ಆವೇಶದಲ್ಲಿ ನಮ್ಮೊಳಗೆ ವೈಚಾರಿಕತೆ ಮೊಳಕೆಯೊಡೆಯುತ್ತಿತ್ತು. ಜನಾಧಿಕಾರ ಜನಾಂದೋಲನದ ಭಾಗವಾಗಿ ಬೀದಿ ಬೀದಿಯಲ್ಲಿ ʻಜನಾಧಿಕಾರ ಜನಾಧಿಕಾರ ಸಾವಿರ ಕೈಗಳ ಚಿತ್ತಾರʼವೆಂದು ಗಟ್ಟಿಯಾಗಿ ಹಾಡುತ್ತ, ಬೀದಿ ನಾಟಕ ಮಾಡುತ್ತಾ, ತೀರ್‍ಥಹಳ್ಳಿಯ ಎಲ್ಲ ಹಳ್ಳಿಗಳಲ್ಲೂ ಕಲಾವಿದರಾಗಿ ತಿರುಗಾಡಿದ್ದೊ. ಆಗ ಕಲಾವಿದರ ಭೇಟಿಯಾಗುವುದು, ಮತ್ತೆ ಯಶೋಧಮ್ಮನಂತಹ ಆತ್ಮಸ್ಥೈರ್ಯದ ಮನಸ್ಸುಗಳನ್ನು ಕಂಡು ಕಣ್ಣಾರೆ ಪುಳಕಗೊಳ್ಳುತ್ತಾ, ತೇಜಸ್ವಿಯವರ ಚಿದಂಬರ ರಹಸ್ಯದ ಯುವಕರ ರೀತಿ ಕ್ರಾಂತಿ ಆಗಲೇಬೇಕು ಎಂದೂ ನಮ್ಮ ತಂಡದ ನಾಯಕ ನಾ. ಸಂಪತ್ ಕುಮಾರ್, ರವಿಬಾಗಿ, ಗೋವಿಂದರಾಜ್ ಬೈಚಗುಪ್ಪೆ, ವೆಂಕಟಾಚಲ ಶಾಂತಮಾವ ಹಾಗೂ ನಾನೂ ಕ್ರಾಂತಿಕಾರಿಗಳ ಹಾಗೆಯೇ ಭ್ರಮಿಸಿ ಪುಳಕಗೊಳ್ಳುತ್ತಿದ್ದೆವು. ಯಶೋಧಮ್ಮನಂಥವರ ಭೇಟಿ ನಮಗೆ ನಮ್ಮದೇ ಜೀವನದ ಸನ್ನಿವೇಶಗಳಲ್ಲಿ ಹೀಗೆ ಈತರದ ರೆಬಲ್ಗಳು ಇರುತ್ತಾರಲ್ಲ ಎಂದು ಅಚ್ಚರಿ ಮೂಡಿಸಿತ್ತು. ಹ್ಞಾ ಮೂಡಿಸಲೇ ಬೇಕು. ಏಕೆಂದರೆ ಇವರೇ ತಾನೇ ಜನಾಧಿಕಾರದ ಗುಬ್ಬಿಗೂಡು ಕಟ್ಟುವವರು. ಈಗಲೂ ಆ ನೆನಪು, ಯಶೋಧಮ್ಮ, ತೀರ್ಥಹಳ್ಳಿಯ ಕೂಲಿಕಾರರು, ದಲಿತ ಕೇರಿಗಳು ನನ್ನ ಸ್ಮೃತಿಪಟಲದಲ್ಲಿ ಜನಾಧಿಕಾರದ ಗುಬ್ಬಿಗೂಡಿನ ಕನಸಾಗಿ ಮೂಡುತ್ತಲೇ ಇವೆ.
[…] ಪ್ರಕಾಶ್ ಮಂಟೇದ ಅವರ “ಅರಿವೇ ಕಂಡಾಯ” ಭಾಗ – 4 : ಯಶೋಧಮ್ಮ ಎಂಬ ಜನಾಧಿಕಾರದ ಗುಬ್ಬಿಗೂಡು […]