‘ಇವತ್ತು ಶನಿವಾರ, ಮಾರ್ನೆ ಕ್ಲಾಸು, ಇಸ್ಕೂಲ್ ಬುಟ್ಟೆಟ್ಗೆ ಗದ್ದೆತಾಕೇ ಬಂದ್ಬುಡಿ’ ಎಂದು ಅವ್ವ ಬೆಳಗ್ಗೆ ಹೇಳಿದ್ದ ಮಾತನ್ನು ನೆನಪಿಸಿಕೊಂಡ ರಾಜ ಪುಳಕಿತನಾಗಿದ್ದ. ಶಾಲೆ ಬಿಟ್ಟೊಡನೆಯೇ ಓಡೋಡಿ ಬಂದ ಅವನು, ಮನೆಯ ಹೊರಗಿನ ಗುಡ್ಲಿನಲ್ಲಿ ಬ್ಯಾಗು ನೇತು ಹಾಕಿದ. ಪಕ್ಕದ ಊರಿನ ಮಾಧ್ಯಮಿಕ ಶಾಲೆಗೆ ಹೋಗಿದ್ದ ಅಣ್ಣಂದಿರು ಬರಲು ತಡವಾಗುತ್ತದೆಂಬುದು ಅವನಿಗೆ ತಿಳಿದಿತ್ತು.

ಈವತ್ತು ಮಜವೇ ಮಜಾ! ಅವ್ವ ಹೇಳಿದ ಸಣ್ಣಮಟ್ಟ ಕೆಲಸ ಮಾಡಿಕೊಟ್ಟು, ನಂತರ ಗದ್ದೆ ಬಯಲಿನ ತುಂಬಾ ಕುಣಿಯಬಹುದು, ಹಳ್ಳದಲ್ಲಿ ಏಡಿ ಹಿಡಿಯುತ್ತ ಗದ್ದೆಯ ಕೊಲ್ಲಿಯಲ್ಲಿ ಕೋರೆ ಮೀನು, ಸಸಲು ಬೇಟೆಯಾಡುತ್ತಾ ಮಜವಾಗಿ ಕಾಲ ಕಳೆಯಬಹುದು ಎಂದುಕೊಳ್ಳುತ್ತ, ಬಿದಿರು ಕೋಲಿನ ತುದಿಗೆ ಮರದ ಒಂಟಿಚಕ್ರ ಅಳವಡಿಸಿದ್ದ ತನ್ನ ಗಾಡಿಯನ್ನು ತಳ್ಳುತ್ತ, ಡರ್ ಎಂದು ಬಾಯಲ್ಲಿ ಸದ್ದು ಹೊರಡಿಸುತ್ತಾ ಉಲ್ಲಾಸದಿಂದ ಗದ್ದೆ ತಲಪಿದ.

ಆದರೆ ತನಗೆ ಇಷ್ಟವಾಗದ ಬೇರೊಂದು ಕೆಲಸ ನಿಗದಿಯಾಗಿರುತ್ತದೆಂದು ಅವನಿಗೆ ಹೇಗೆ ಅರಿವಾಗಬೇಕು? ಕೊಲ್ಲಿಯಂಚಿನ ಜೀರಕೆ ಮರದ ನೆರಳಲ್ಲಿ ಮೌನವಾಗಿ ಮಣ್ಣು, ಕೆರೆಯುತ್ತಾ ಕುಳಿತಿದ್ದ ಅವನ ಇಬ್ಬರು ತಂಗಿಯರು ಆಟಕ್ಕೆ ಅಣ್ಣ ಸಿಕ್ಕಿದನು ಎಂದುಕೊಳ್ಳುತ್ತಾ, ಖುಷಿಯಾಗಿ ಅವನೆಡೆಗೆ ಓಡಿಬಂದರು. ಗಾಡಿಯನ್ನು ಅವನ ಕೈಯಿಂದ ಕಿತ್ತುಕೊಂಡು, ನೂಕುತ್ತಾ ನೀರಿನಲ್ಲಿ ಪುಣುಪುಣನೆ ಸರಿದಾಡುವ ಸಸಲು ಮೀನುಗಳನ್ನು ಅವನಿಗೆ ತೋರಿಸಲೆಂದು ಅವನನ್ನು ಕೊಲ್ಲಿಯೆಡೆಗೆ ಕೈಹಿಡಿದು ಎಳೆಯ ತೊಡಗಿದರು.

‘ರಾಜ, ನೀನು ಅವರ ಜೊತೆ ಆಡ್ತಾ ಕೂರ್ಬೇಡ. ಈವತ್ತು ನೀನೇ ತ್ವಾಟಕ್ಕೆ ಹೋಗಿ, ಗುಡ್ಲು ಮುಂದೆ ಬೆಂಕಿ ಹಾಕಿ ಬರ್ಬೇಕು. ನಾವೆಲ್ಲಾ ಇಲ್ಲಿ ಕೂತ್ಕಂಡ್ರೆ ಅಲ್ಲಿ ಕಪಿ, ಕಾಟಿ ಎಲ್ಲಾ ತ್ವಾಟಕ್ಕೆ ನುಗ್ಗಿ ಲೂಟಿ ಮಾಡಿ ಹೋಗಿ ಬುಟ್ರೆ ಏನ್ ಮಾಡದು? ಅವ್ವನ ಮಾತು ಕೇಳಿ ಆಟದ ಹುರುಪಿನಲ್ಲಿದ್ದ ರಾಜನ ಉತ್ಸಾಹವೆಲ್ಲಾ ಒಮ್ಮೆಲ್ಲೇ ಜರ್ರನೇ ಇಳಿದು ಹೋಯಿತು.

ಅಳಗ ನಾಯಿ

‘ಇಲ್ಲ, ಇಲ್ಲ ನನಗೆ ಆ ಕಾಡುತ್ವಾಟಕ್ಕೆ ಒಬ್ನೇ ಹೋಗಕೆ ಹೆದರಿಕೆ ಆಗುತ್ತೇ. ಅಣ್ದೀರು ಬಂದ್ ಮೇಲೆ ಯಾರನಾದ್ರೂ ಕಳ್ಸು’ ಎಂದು ರಾಜ ತಪ್ಪಿಸಿಕೊಳ್ಳಲು ಯತ್ನಿಸಿದ. “ಎಂತಾ ಹೆದ್ರಿಕೆನಾ ನಿಂಗೆ? ಅಲ್ಲೇನು ಹಗಲೊತ್ತೇ ದಯ್ಯ ಕುಣಿತಿರ್ತವಾ? ಇವತ್ತು ಅಣ್ದೀರು ನಾವೆಲ್ಲಾ ಸೇರಿ ಮ್ಯಾಲ ತಿಪ್ಪೆಯಿಂದ ಗೊಬ್ರಹೊತ್ತು ಹಾಕ್ತೀವಿ. ನೀನೇ ಹೋಗಿ ಬಾ.. ನೋಡು, ನಿನಗೇ ಅಂತಲೇ ರೊಟ್ಟಿ ಮುರ್ದು, ತುಪ್ಪ ಜೇನು ಬೆರ್ಸಿ ತಂದಿನಿ’ ಎಂದು ಸಣ್ಣ ಗಂಟೊಂದನ್ನು ಅವನೆಡೆಗೆ ಚಾಚುತ್ತಾ ಪುಸಲಾಯಿಸಿದಳು.

ಆ ಗಂಟನಿಂದ ಹೊರಹೊಮ್ಮಿದ ಪರಿಮಳ ಅವನ ಬಾಯಲ್ಲಿ ನೀರೂರಿಸಿತಾದರೂ ಮುಂದಿನ ಪಯಣದ ವಿಚಾರಹಿತವೆನಿಸಲಿಲ್ಲ. ಅದರಿಂದ ಹೇಗೆ ಪಾರಾಗುವುದು ಎಂದು ಯೋಚಿಸುವಷ್ಟರಲ್ಲೇ, ಅವ್ವ ರೊಟ್ಟಿಯ ಸಣ್ಣ ಗಂಟನ್ನು ಅವನ ಚೆಡ್ಡಿ ಜೇಬಿಗೆ ತುರುಕಿ, ಅಂಗಿ ಜೇಬಿಗೆ ಬೆಂಕಿ ಪಟ್ಟಣಿಟ್ಟು ಕೈಗೆ ಒಂದು ಮಂಡಹತ್ತಿ ಕೊಡುತ್ತಾ, ʻಹುಂ ಹೋಗು ಹೋಗು, ನೀನೇನೂ ಇಡೀ ತ್ವಾಟಾ ಎಲ್ಲಾ ತಿರುಗಾಡ್ಬೇಕಾ? ಸೀದಾ ಬೆಂಕಿ ಹಾಕ ಮಾಮೂಲಿ ಜಾಗಕ್ಕೆ ಹೋಗು… ಉರ್ದು ಉಳ್ದೀರೋ ಹಳೇ ಸೌದೆ ಕೊಳ್ಳು ಎಲ್ಲಾ ಇರ್ತಾವೆ… ಅವನ್ನೇ ನೂಕಿ ಸರಿಮಾಡಿ, ಅಷ್ಟು ತರಗು ಒಣಹುಲ್ಲು ಸಣ್ಣಕಡ್ಡಿ ಪುಳ್ಳೇ ಹಾಕಿ ಬೆಂಕಿ ಕಡ್ಡಿಗೀರು… ಹತ್ತಿಗಳ್ಳುತ್ತೆ… ಆ ಮೇಲೆ ಒಂದೆರ್ಡ್‌ ಸಲ ಜೋರಾಗಿ ಕೂಗ್‌ ಹಾಕು ಕಾಡ್‌ ಪ್ರಾಣಿಗಳಿಗೆ ಮನುಷ್ರು ಇರದು ಗೊತ್ತಾದರೆ ದೂರ ಹೋತವೆ. ನೀನ್‌ ನಿನ್‌ ಪಾಡಿಗೆ ಇತ್ಲಗಿ ಬಾʼ ಅವ್ವ ಹೇಳುತ್ತಲೇ ಹೋದಳು. ರಾಜನಿಗೆ ತಪ್ಪಿಕೊಳ್ಳಲು ಯಾವುದೇ ದಾರಿ ಇರಲಿಲ್ಲ.

ಕಳೆದ ಭಾನುವಾರ ಮನೆಯವರೆಲ್ಲಾ ತೋಟದ ಕೆಲಸಕ್ಕೆ ಹೊರಟಿದ್ದಾಗ, ರಾಜ ಉಲ್ಲಾಸದಿಂದ ಕುಣಿದು ಕುಪ್ಪಳಿಸುತ್ತಾ ತಾನೇ ಎಲ್ಲರಿಗಿಂತ ಮುಂದಾಗಿ ಗದ್ದೆ ಆಚೆಯ ಮಲ್ಟಿ ಎರುತ್ತಿದ್ದುದನ್ನು ಕಂಡಿದ್ದ ಅವ್ವ, ಇಂದು ಮಗ ಯಾಂತ್ರಿಕವಾಗಿ ತನ್ನ ಗಾಡಿ ನೂಕುತ್ತಾ ಏರುದಾರಿಯಲ್ಲಿ ಗುಡ್ಡದ ಕಡೆ ಹೋಗುವುದನ್ನೇ ಕೆಲಕಾಲ ನೋಡುತ್ತಾ ನಿಂತಿದ್ದಳು.

ಹಗ್ರಾಣದ ಕತೆಗಳು ಭಾಗ 2: ಆಡು ಆಸ್ಪತ್ರೆಯಲ್ಲಿ ಆಡ್ಮಿಟ್ಟಾಯ್ತು!

ಎಂದಿನಂತೆ ಗುಡ್ಡದ ಓಲೆಯ ಚೊಟ್ಟೆ ಹಣ್ಣಿನ ಮೆಣೆಗಳಾಗಲೀ, ಈಚಲು ಹಣ್ಣಿನ ಗುತ್ತಿಗಳಾಗಲಿ, ಅಬ್ಬಲು ಹಣ್ಣಿನ ಮರಗಳಾಗಲೀ ಹುಲುಗೂರು ಹಣ್ಣಿನ ಮೆಣೆಗಳಾಗಲೀ ಅವನನ್ನು ಸೆಳೆಯಲಿಲ್ಲ. ಮನಸಲ್ಲಿ ಯಾವುದೇ ಮಧುರ ಭಾವನೆ ಹೊಂದಿರದ ರಾಜ, ಗುಡ್ಡದೋರೆಯ ಎರಡು ಮೈಲಿ ದಾರಿ ಕ್ರಮಿಸಿ, ಕಾಡು ತೋಟ ಪ್ರವೇಶಿಸುವ ಬೇಲಿಯಂಚಿನ ಉಣಗಲು ತಲಪಿದ. ಕೈಯಲ್ಲಿನ ಗಾಡಿಯನ್ನು ಬೇಲಿ ಗೊರಗಿಸಿ ಕ್ಷಣ ಕಾಲ ನಿಂತ. ಮುಂದೆ ಕ್ರಮಿಸಬೇಕಾದ ದಟ್ಟ ಅರಣ್ಯದೊಳಗೆ ಅಲ್ಲಿಂದಲೇ ಕಣ್ಣು ಹಾಯಿಸಿದ.  ಕಾಡೊಳಗೆ ಎಲ್ಲೆಡೆ ಹರಡಿದ ಕಬ್ಬುಗತ್ತಲೆ ಕಂಡು ಅವನ ಮನ ಕ್ಷಣ ಬೆಚ್ಚಿತು, ಈ ಕಾಡನ್ನು ಕಾಯುವ ದಯ್ಯ ಇಲ್ಲೇ ಎಲ್ಲೋ ಹತ್ತಿರದಲ್ಲೇ ಸುಳಿದಾಡುತ್ತಿರಬಹುದೆಂದು ಆನಿಸಿ ಭಯದಿಂದ ಮೈ ಬೆವರಿತು. ‘ಇಲ್ಲಿಂದಲೇ ಹಿಂತಿರುಗಿ ಓಡಿ ಹೋದರೆ ಹೇಗೆ?’ ರಾಜ ಯೋಚಿಸಿದ.

ಆದೆಲ್ಲಿ ಸಾಧ್ಯ? ನಾಳೆ ಅಪ್ಪ ಬಂದಾಗ ಬೆಂಕಿ ಹಾಕಿಲ್ಲದ್ದು ಗೊತ್ತಾಗಿ ನನ್ನ ಚಮಡ ಸುಲಿಯದೆ ಬಿಟ್ಟಾನೇ? ಮೇಲಾಗಿ ಕಾಡು ಪ್ರಾಣಿಗಳು ತೋಟ ಲೂಟಿ ಮಾಡಿದ್ದರಂತೂ ನನಗೆ ಉಳಿಗಾಲವಿದೆಯೆ? ಮರುಯೋಚಿಸಿದ ರಾಜನಿಗೆ ಕಾಡೊಳಗೆ ಇಳಿದು, ಗುಡಿಸಿಲಿನ ಮುಂಭಾಗದಲ್ಲಿ ಬೆಂಕಿ ಹಾಕಿ ಬರದೇ ನಿರ್ವಾಹವೇ ಇಲ್ಲವೆನಿಸಿತು. ಕ್ಷಣ ನಿಂತು ಮನಸ್ಸಿಗೆ ಧೈರ್ಯ ತಂದುಕೊಂಡ, ಅಲ್ಲಿಯೇ ಬಿದ್ದಿದ್ದ ದರಗು, ಒಣಹುಲ್ಲು, ಸಣ್ಣ ಸಣ್ಣ ಕಡ್ಡಿ ಪುಳ್ಳೆ ಬಾಚಿ ತಬ್ಬಿಕೊಂಡು ಕಾಡೊಳಗಿನ ದಾರಿಯಲ್ಲಿ ಧಡಧಡ ನೆಗೆಯುತ್ತಾ ಓಡತೊಡಗಿದ.

ಅವ್ವನೊಂದಿಗೆ ಬಂದಾಗ ಅಪ್ಯಾಯಮಾನವೆನಿಸುತ್ತಿದ್ದ ಕಾಡು, ಭಯದಿಂದ ಪ್ರಕ್ಷುಬ್ದನಾಗಿದ್ದ ಅವನ ಮನಸ್ಸಿಗೆ ಭಯಾನಕವಾಗಿ ಕಾಣತೊಡಗಿತು. ಅಣ್ಣಂದಿರೊಂದಿಗೆ ಧುಮ್ಮಿಕ್ಕುವ ನೀರಿಗೆ ತಲೆಯೊಡ್ಡಿ, ಮೀಯುವ ಮಜಾ ಅನುಭವಿಸುತ್ತಿದ್ದ ಅಬ್ಬಿ ಕೆಲವೇ ಮೀಟರುಗಳ ದೂರದಲ್ಲಿ ಭೋರ್ಗರೆದು ಅಬ್ಬರಿಸುತ್ತಿರುವಂತೆ ಕೇಳಿಸುತ್ತಿತ್ತು. ಉರಿದು ಆರಿ ಹೋಗಿದ್ದ ಕೊರಡುಗಳನ್ನು ಅವಸರ ಅವಸರವಾಗಿ ಒಂದಡೆ ನೂಕಿ, ಕಡ್ಡಿ ಪುಳ್ಳೆ, ದರಗು ಹಾಗೂ ಒಣಹುಲ್ಲನ್ನು ಅವುಗಳ ಬಳಿ ಹಾಕಿ ಕಡ್ಡಿ ಗೀರಿ ಹಿಡಿದ.

ಗಂಟೆಗೊಂದು ಬಾರಿ ಕೂಗುವ ಕುಟುರನ ಹಕ್ಕಿಗಳು ಕೂಗತೊಡಗಿದವು. ಗಿಣಿವಿಂಡುಗಳು ಮರದಿಂದ ಮರಕ್ಕೆ ಹಾರಿ ಕುಳಿತವು. ಹಸಿರು ಪಾರಿವಾಳದಂತಹ ಕಾಡಿನ ಕಕ್ಕಲುಗಳು, ಮರಗಳ ಮೇಲೆ ಗುಂಪು ಗುಂಪಾಗಿ ಕುಳಿತು ಸದ್ದು ಮಾಡತೊಡಗಿದವು. ಉದ್ದ ಬಾಲದ ಕಾಜಾಣಗಳು ಕಣ್ಣೆದುರಿಗೇ ಬಂದು ಕೊಂಬೆಯ ಮೇಲೆ ಕುಳಿತವು. ಇದ್ಯಾವುದರ ಆನಂದವನ್ನು ಸವಿಯುವ ಮನಸ್ಥಿತಿ ಇಂದು ರಾಜನಿಗಿರಲಿಲ್ಲ.

ಕಾಡೊಳಗೆ ಸಣ್ಣಗೆ ಗಾಳಿ ಸುಳಿಯುತ್ತಿತ್ತು. ಅದುವರೆಗೂ ಗುಡಿಸಲ ಕಡೆ ದೃಷ್ಟಿ ಹರಿಸಲು ಧೈರ್ಯ ಸಾಲದಾಗಿದ್ದ ರಾಜ, ವಾರೆಗಣ್ಣಿನಲ್ಲಿ ಅತ್ತ ದೃಷ್ಟಿ ಹಾಯಿಸಿದ. ಅದರೊಳಗೆ ಏನೋ ನೆರಳು ಸರಿದಾಡಿ ದಂತೆ ಭಾಸವಾಯಿತು. ದಯ್ಯ ಅದರೊಳಗೇನಾದರೂ, ಅಡಗಿ ಕುಳಿತಿರಬಹುದೇ? ಯಾರಿಗೆ ಗೊತ್ತು ಈ ಗೊಂಡಾರಣ್ಯದೊಳಗೆ ದಯ್ಯಯಾವ ರೂಪದಲ್ಲಿ ಬರುವುದೋ! ಸುಳಿಯುತ್ತಿದ್ದ ಗಾಳಿ ನಿಂತಿತು. ಮಲೆತು ತೊನೆಯುತ್ತಿದ್ದ ಕಾಡು ಒಮ್ಮೆಲೇ ಮಲೆತು ನಿಂತಂತೆ ಕಂಡಿತು. ಎದುರಿಗೆ ಸನಿಹದಲ್ಲೇ ಇದ್ದ ಬೃಹದಾಕಾರದ ಬೊಬ್ಬಿ ಮರಕ್ಕೆ ಕಣ್ಣು ಬಾಯಿ ಮೂಡಿ ರಾಕ್ಷಸಾಕಾರ ತಾಳುತ್ತಿರುವಂತೆ ಭಾಸವಾಗತೊಡಗಿತು. ಹೊಳೆಯಾಚೆ ದೂರದಲ್ಲಿ ಎಲ್ಲೋ ಮುರಕುಟಿಕವೊಂದು ಒಣ ಬೈನೆ ದಬ್ಬಲಿಗೆ ತನ್ನ ಬಲಿಷ್ಠ ಕೊಕ್ಕಿನಿಂದ ಎಡೆಬಿಡದ ರಭಸವಾಗಿ ಕುಟುಕುತ್ತಿದ್ದು ರಾಜನ ಕಿವಿಗೆ ವಿಕಾರವಾಗಿ ಅಪ್ಪಳಿಸತೊಡಗಿತು. ಏರಿಕೊಳ್ಳುತ್ತಿದ್ದ ಬೆಂಕಿಯಿಂದ ಎದ್ದು ಬರುತ್ತಿದ್ದ ಹೊಗೆ ರಾಜನ ಮೂಗಿಗೆ ನುಗ್ಗಿ ಉಸಿರು ಕಟ್ಟಿದಂತೆನಿಸತೊಡಗಿತು. ಬೆಂಕಿ ಹತ್ತಿಕೊಂಡಿರುವುದು ಖಾತ್ರಿಯಾಯಿತು. ಇನ್ನು ಕೂಗು ಹಾಕಲು ಹೇಳಿದ್ದರಲ್ಲ, ಉಸಿರು ಹೊರಟರೆ ತಾನೇ ಕೂಗಿನ ಮಾತು!

ಆ ಭಯಾನಕವಾದ ವಾತಾವರಣದಿಂದ ಪಾರಾಗಿ ಬಚಾವಾದರೆ ಸಾಕು, ಎಂದುಕೊಳ್ಳುತ್ತಾ ಕೆಮ್ಮುತ್ತಲೇ ಬಂದ ದಾರಿಯಲ್ಲೇ ಓಡಿ, ಬೇಲಿಯಂಚು ತಲುಪಿ, ಉಣಗಲಿನ ಮೇಲೆ ಹಾರಿ ನೆಗೆದು ಆಚೆಯ ಬಯಲಿನ ಬೆಳಕಿಗೆ ಕುಕ್ಕರಿಸಿಕೊಂಡ. ಆಗ ಅವನ ಮನಸ್ಸಿಗೆ ನಿರಾಳವೆನಿಸಿತು. ಹಾಗೆಯೇ ಕುಳಿತು ದೀರ್ಘವಾಗಿ ಉಸಿರೆಳೆದುಕೊಳ್ಳತೊಡಗಿದ. ಹೊಟ್ಟೆ ಚುರುಗುಡುತ್ತಿತ್ತು. ರೊಟ್ಟಿಯ ನೆನಪಾಯಿತು. ಜೇಬಿನಿಂದ ಹೊರತೆಗೆದ. ಅವನ ಸುತ್ತ ಅದರ ಪರಿಮಳ ಹರಡಿಕೊಳ್ಳತೊಡಗಿತು, ಆದರೆ ಅವನಿಗೇಕೋ ಅಲ್ಲಿಯೇ ಕುಳಿತು ತಿನ್ನಬೇಕೆನಿಸಲಿಲ್ಲ.

ಹೀಗೆಯೇ ಕಾಡಿನಂಚಿನಲ್ಲಿ ಉದ್ದಕ್ಕೂ ಹಬ್ಬಿರುವ ಬೆಟ್ಟದ ತುದಿಯಲ್ಲಿ ಸ್ವಲ್ಪ ದೂರ ನಡೆದ ನಂತರ ಯಾವುದಾದರೂ ಮುರದ ನೆರಳಲ್ಲಿ ಕುಳಿತು ಸಾವಕಾಶವಾಗಿ ಅದರ ಮಜಾ  ಸವಿಯಬೇಕೆನಿಸಿತು. ಕತ್ತಿಯನ್ನು ಎಡ ಕಂಕುಳಲ್ಲಿ ಇರುಕಿಕೊಂಡು, ರೊಟ್ಟಿಯ ಗಂಟನ್ನು ಹಾಗೆಯೇ ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಗಾಡಿ ನೂಕುತ್ತಾ ಬೆಟ್ಟದೋರೆಯಲ್ಲಿ ಸ್ವಲ್ಪ ದೂರ ತನ್ನದೇ ಲಹರಿಯಲ್ಲಿ ನಡೆದಿದ್ದ. ಕೆಳಗಿನ ಕಾಡೊಳಗೆ ದರಗಿನ ಸದ್ದಾದಂತಾಯಿತು. ಆತ್ತ ದೃಷ್ಟಿ ಹರಿಸಿದ. ಕಾಡೊಳಗಿಂದ ಬಯಲಿಗೆ ಏನೋ ನೆಗೆದಂತಾಯಿತು. ಮತ್ತೆ ಮನ ಬೆಚ್ಚಿದಂತೆನಿಸಿತು. ಕಾಡಿನ ದಯ್ಯ ಏನಾದರೂ ಹಿಂಬಾಲಿಸಿ ಬಂದಿತೇ? ಎಂದುಕೊಳ್ಳುತ್ತಾ ಕ್ಷಣ ಹೆಜ್ಜೆ ತಡೆದು ಅತ್ತಲೇ ಗಮನಿಸಿದ.

ತನ್ನ ಎದೆ ಮಟ್ಟದಷ್ಟು ಎತ್ತರವಿರುವ ಮಿರಿ ಮಿರಿ ಹೊಳೆಯುವ ಮೈ ಬಣ್ಣದ ಅಳಗ ನಾಯಿ! ಅಚ್ಚಕಪ್ಪು ಬಣ್ಣದ ಮೈಯ ಮಧ್ಯೆ ಅಲ್ಲಲ್ಲಿ ಅಂಗೈಯಗಲದ ಬಿಳಿಯ ಮಚ್ಚೆ! ಆ ತರದ ನಾಯಿಯನ್ನು ಅವನು ಕಂಡಿರಲೇ ಇಲ್ಲ. ತನ್ನೆದುರಿಗೇ ತುಸುದೂರದಲ್ಲಿ ನಿಂತಿದ್ದ ಅವನನ್ನು, ಅದು ದುರುಗುಟ್ಟಿಕೊಂಡು ನೋಡಿತು. ಅದರ ಕೆಂಡದುಂಡೆಯಂತ ಕೆಂಪು ಕಣ್ಣುಗಳು ಗರ ಗರ ತಿರುಗುತ್ತಿರುವಂತೆನಿಸಿತು. ʻಇದ್ಯಾಕೋ ಇಲ್ಲಿ ನಿಲ್ಲುವುದು ಸರಿಯಲ್ಲ’ ಎನಿಸಿ ಹೆಜ್ಜೆ ಚುರುಕುಗೊಳಿಸಿದ. ಅದೂ ನಿಧಾನಕ್ಕೆ ಅವನನ್ನೇ ಹಿಂಬಾಲಿಸುವಂತೆ ನಡೆಯತೊಡಗಿತು.

ಸ್ವಲ್ಪ ದೂರ ನಡೆದವನು ಮತ್ತೆ ಧೈರ್ಯ ತಂದುಕೊಂಡು ಹಿಂತಿರುಗಿ ನೋಡಿದ. ಅದೂ ಬರುತ್ತಲೇ ಇದೆ. ತನ್ನ ಗೇಣುದ್ದದ್ದ, ತೆಳುವಾದ ನಾಲಿಗೆಯನ್ನು ಹೊರಚಾಚಿಕೊಂಡು ಜೊಲ್ಲು ಸುರಿಸುತ್ತಾ ಇದೆ. ಅದರ ಕೆಳದವಡೆಯ ಕೋರೆ ಹಲ್ಲುಗಳನ್ನು ಕಂಡು ಬೆಚ್ಚಿದ… ಇದು ದಯ್ಯವಾಗಿರಲಾರದು… ಯಾರೋ ಕಾಡು ಬೇಟೆಗೋ, ಮೀನು ಬೇಟೆಗೋ ಬಂದವರಿಂದ ತಪ್ಪಿಸಿಕೊಂಡ ನಿಜವಾದ ನಾಯಿಯೇ ಇರಬಹುದೇ ಎಂದು ಮನಸ್ಸಿಗೆ ಧೈರ್ಯ ತಂದುಕೊಳ್ಳಲೆತ್ನಿಸುತ್ತಾ, ಹೇಗಾದರೂ ಸರಿ ಇದರಿಂದ ಪಾರಾಗಿ ತನ್ನ ಪಾಡಿಗೆ ತಾನು ಹೋಗಿ ಬಿಡಬೇಕು ಎಂದುಕೊಂಡು ಓಡು ನಡಿಗೆಯಲ್ಲಿ ಸಾಗತೊಡಗಿದ.

ಅಳಗ ನಾಯಿ

ಆ ನಾಯಿಯೇನಾದರೂ ಇನ್ನು ಹಿಂಬಾಲಿಸುತ್ತಲೇ ಇರಬಹುದೇ ಎಂಬ ಗುಮಾನಿಯಾಯಿತು. ನಡೆಯುತ್ತಲೇ ವಾರೆಗಣ್ಣಿನಲ್ಲಿ ಹಿಂದಕ್ಕೆ ನೋಡಿದ. ಆ ಅಳಗ ನಾಯಿಯೂ ಕೂಡಾ ಇವನಷ್ಟೇ ವೇಗದಲ್ಲಿ ಹಿಂಬಾಲಿಸುತ್ತಿದೆ. ಅವನಿಗೆ ಅದರ ನಡವಳಿಕೆಯ ಬಗ್ಗೆ ಸಂಶಯ ಹೆಚ್ಚಾಗ ತೊಡಗಿತು. ಇದು ಕಾಡು ದಯ್ಯವಲ್ಲದಿದ್ದರೆ ನನ್ನನ್ನೇಕೆ ಹೀಗೆ ಹಿಂಬಾಲಿಸುತ್ತಿದೆ? ಇದರಿಂದ ಹೇಗಾದರೂ ಪಾರಾಗಲೇಬೇಕು ಎಂದು ಗಟ್ಟಿ ಮನಸ್ಸು ಮಾಡಿ ಜೋರಾಗಿ ಓಡತೊಡಗಿದ. ಒಂದು ಮರ ಎದುರಾಯಿತು. ಕೈಯಲ್ಲಿದ್ದ ಕತ್ತಿ ಹಾಗೂ ಗಾಡಿಯನ್ನು ಅಲ್ಲೇ ಎಸೆದು, ಬಿರಬಿರನೆ ಆ ಮರ ಏರತೊಡಗಿದ ರೊಟ್ಟಿಯ ಗಂಟು ಕೈಯಲ್ಲಿ ಇತ್ತು. ನಾಲ್ಕಾಳು ಎತ್ತರ ಏರಿ, ಕೊಂಬೆಯ ದಟ್ಟ ಸೊಪ್ಪಿನ ಮಧ್ಯೆ ಅಡಗಿ ಕುಳಿತುಕೊಂಡ.

ಏದುಸಿರು ಒಂದು ಹದಕ್ಕೆ ಬಂದಂತಾಯಿತು ಜೋರಾಗಿ ಉಸಿರೆಳೆದುಕೊಳ್ಳುತ್ತಾ, ಆ ಅಳಗ ನಾಯಿ ಎತ್ತ ಹೋಯಿತು ಎಂದು ಕೆಳಗೆ ದಿಣ್ಣೆಯ ಕಡೆ ನೋಡಿದ. ಅಯ್ಯೋ! ಏನಾಶ್ಚರ್ಯ! ಅದೂ ಕೂಡಾ ಮರದ ಕಡೆಗೇ ಬರುತ್ತಿದೆ. ಮರದ ಬುಡಕ್ಕೇ ಬಂದು ಬಿಟ್ಟಿತು… ಅಲ್ಲಿ ಬಿದ್ದಿದ್ದ ಕತ್ತಿಯನ್ನೊಮ್ಮೆ, ಗಾಡಿಯನ್ನೊಮ್ಮೆ ಮೂಸಿ ನೋಡಿತು. ನಂತರ ಮರದ ಬೊಡ್ಡೆಯನ್ನೊಮ್ಮೆ ಮೂಸಿ, ನಂತರ ಮರದ ಮೇಲಕ್ಕೆ ನೋಡತೊಡಗಿತು. ಇನ್ನೇನು ಅದು ಅಲ್ಲಿಂದ ಎತ್ತಲಾದರೂ ತನ್ನ ದಾರಿ ಹಿಡಿದು ಹೋಗಬಹುದೆಂದು ನೋಡತೊಡಗಿದ. ಇಲ್ಲ, ಅದು ಅಲ್ಲಿಂದ ಹೋಗುವ ಯಾವ ಸೂಚನೆಯೇನೂ ಕಾಣಲಿಲ್ಲ. ನೆಲವನ್ನೊಮ್ಮೆ ಬಲಗಾಲಿಂದ ಕೆರೆಯಿತು. ಹಾಗೆಯೇ ನೆಲದ ಮೇಲೆ ಕುಳಿತು, ಮೂತಿಯನ್ನು ಮುಂಚಾಚಿ ಮುಂಗಾಲುಗಳನ್ನು ಆರಾಮವಾಗಿ ನೀಡಿದಾಗಿ ನೀಡಿತು. ಸ್ವಲ್ಪ ಹೊತ್ತಿನಲ್ಲಿ ಹಾಗೆಯೇ ನಿದ್ದೆ ಹೋಯಿತು.

ರಾಜನಿಗೆ ಗಾಬರಿ ಹೆಚ್ಚತೊಡಗಿತು. ಈ ಪ್ರಾಣಿ ತನ್ನನ್ನು ಬಿಟ್ಟು ಹೋಗಲಾರದು ತನ್ನನ್ನು ಸತಾಯಿಸಿಸಲೆಂದೇ ಕಾಡೊಳಗಿಂದ ಹಿಂಬಾಲಿಸಿ ಬಂದಿದೆ. ಇನ್ನು ಎಷ್ಟು ಹೊತ್ತು ಈ ಮರದ ಸೊಪ್ಪೊಳಗೆ ಅಡಗಿ ಕೂರುವುದು? ಅದೂ ಸಹ ʻನೀನು ಕೆಳಕ್ಕಿಳಿಯದ ಹೊರತು ನಾನು ಇಲ್ಲಿಂದ ಹೋಗಲಾರೆʼ ಎಂದು ಪಟ್ಟುಹಿಡಿದಂತೆ ಮಲಗಿ ಬಿಟ್ಟದೆ. ಕತ್ತಲಾದರೆ ಆಗ ಕೆಳಗೆ ಕಾಯುತ್ತಿರುವ ಅದರದೇ ಮೇಲುಗೈಯಾಗುವುದಿಲ್ಲವೇ? ಮಧ್ಯಾಹ್ನ ಮೀರಿದೆ, ಹೀಗೆಯೇ ಕುಳಿತು ಇಲ್ಲಿಯೇ ಈಗೇನು ಮಾಡುವುದು? ಈ ಕಷ್ಟದಿಂದ ಪಾರಾಗುವ ಪರಿಯಂತು? ಎಂದು ಯೋಚಿಸುತ್ತಾ ಕುಳಿತ. ಹಾಗೆಯೇ ಅರ್ಧ ಗಂಟೆ ಕಳೆಯಿತು. ಮರದ ಬುಡದ ಕಡೆ ಕಣ್ಣು ಹಾಯಿಸಿದ. ಆ ಅಳಗ ನಾಯಿ ಅಲ್ಲಿಯೇ ನೀಳವಾಗಿ ಮೈ ಚಾಚಿ ಮಲಗಿಬಿಟ್ಟಿದೆ.

ಹೀಗೆ ನಾನು ಹೆದರಿ ಅಡಗಿ ಕುಳಿತರೆ ಆಗದು, ಅದನ್ನೊಮ್ಮೆ ನಾನು ಏಕೆ ಹೆದರಿಸಿ ನೋಡಬಾರದು ಎನಿಸಿತು ರಾಜನಿಗೆ. ಧೈರ್ಯ ತಂದುಕೊಂಡ. ಏನನ್ನಾದರೂ ಅದರ ಮೇಲೆ ಜೋರಾಗಿ ಎಸೆದರೆ ಹೆದರಿ ಓಡುತ್ತದೆ. ಯೋಚಿಸುತ್ತಾ ಕುಳಿತಲ್ಲೇ ಯಾವುದಾದರೂ ವಸ್ತುವಿಗಾಗಿ ಹುಡುಕಾಡಿದ. ಕೈಯಲ್ಲಿ ರೊಟ್ಟಿಯ ಗಂಟು ಮಾತ್ರ ಇತ್ತು. ಅದನ್ನು ಎಸೆಯುವ ಮನಸ್ಸಾಗಲಿಲ್ಲ. ಹಾಗೆಯೇ ಕಣ್ಣಾಡಿಸಿದ. ಮೊಳದುದ್ದುದ ಒಣ ಕಟ್ಟಿಗೆಯೊಂದು ಕೊಂಬೆಗೆ ಸಿಲುಕಿಕೊಂಡಿತ್ತು. ಮೆಲ್ಲಗೆ ಕೈಗೆ ತೆಗೆದುಕೊಂಡು, ಗುರಿಯಿಟ್ಟು ಕೆಳಗೆ ಮಲಗಿದ್ದ ಅಳಗ ನಾಯಿಯ ಮೇಲೆ ಜೋರಾಗಿ ಎಸೆದ.

ಗಾಢ ನಿದ್ದೆಯಲ್ಲಿದ್ದ ಅದರ ಬೆನ್ನ ಮೇಲೆ ಏನೋ ಜೋರಾಗಿ ಅಪ್ಪಳಿಸಿದ್ದರಿಂದ, ಅದಕ್ಕೆ ನಿದ್ದೆಗೇಡಾಯಿತು. ದಿಗ್‌ಭ್ರಮೆಗೊಳಗಾದ ಆ ಅಳಗ ನಾಯಿ ʻಕಂಯ್ಯಯ್ಯೋ, ಕಂಯಯ್ಯೋ’ ಎಂದು ಕಿರುಚುತ್ತಾ ತಾನು ಬಂದ ದಾರಿಯಲ್ಲೇ ನಾಗಲೋಟದಲ್ಲಿ ಓಡತೊಡಗಿತು. ರಾಜನ ಮುಖದಲ್ಲಿ ಮಂದಹಾಸ ಮೂಡಿತು. ಅಲ್ಲಿಯೇ ಕುಳಿತು ರೊಟ್ಟಿಯ ಗಂಟು ಬಿಚ್ಚತೊಡಗಿದ.

Leave a Reply

Your email address will not be published. Required fields are marked *