ಈದ್ ಮಿಲಾದನ್ನು ಪ್ರವಾದಿ ಮುಹಮ್ಮದರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ. ಸುಮಾರು 1500 ವರ್ಷಗಳ ಹಿಂದೆ ಅರೇಬಿಯಾದಲ್ಲಿ ಹುಟ್ಟಿ, ಜಗತ್ತಿನಾದ್ಯಂತ ಕ್ರಾಂತಿಕಾರಿ ಆಂದೋಲನವನ್ನೇ ಶುರು ಮಾಡಿದ ಪೈಗಂಬರ್ ಮುಹಮ್ಮದರು, ಸುಮಾರು 200 ಕೋಟಿಗೂ ಹೆಚ್ಚು ಜನರ ಹೃದಯದಲ್ಲಿ ಅಜರಾಮರರಾಗಿದ್ದಾರೆ.
ಬಹುಶಃ ವ್ಯಕ್ತಿಗತವಾಗಿ ಆಚರಿಸುವ ಹಬ್ಬಗಳಲ್ಲಿ ಪೈಗಂಬರ್ ಮುಹಮ್ಮದರ ಜನ್ಮದಿನವೇ ದೊಡ್ಡ ಹಬ್ಬವಾಗಿ ಗುರುತಿಸಿಕೊಳ್ಳುತ್ತದೆ. ಏಕೆಂದರೆ ಪೈಗಂಬರ್ ಮುಹಮ್ಮದರ ಹೆಸರು ಪ್ರತಿಧ್ವನಿಸದ ಒಂದೇ ಒಂದು ದೇಶ, ಒಂದೇ ಒಂದು ರಾಜ್ಯ, ಒಂದೇ ಒಂದು ಪ್ರಾಂತ್ಯ ಈ ಜಗತ್ತಿನಲ್ಲಿ ಇಲ್ಲ. ಜಗತ್ತಿನಾದ್ಯಂತ ದಿನದ ಇಪ್ಪತ್ನಾಲ್ಕು ಘಂಟೆಯೂ ಪ್ರವಾದಿ ಮುಹಮ್ಮದರ ಹೆಸರು ಅಂತರಿಕ್ಷದಲ್ಲಿ ಮೊಳಗುತ್ತಲೇ ಇರುತ್ತದೆ. ಇಸ್ಲಾಮಿನ ಅನುಯಾಯಿಗಳು ಇರುವಲ್ಲೆಲ್ಲಾ ಅದು ಉಚ್ಚಸ್ವರದಲ್ಲಿ ಕೇಳಿಸುತ್ತಲೇ ಇರುತ್ತದೆ. ಅಷ್ಟರ ಮಟ್ಟಿಗೆ ಪೈಗಂಬರ್ ಮುಹಮ್ಮದರು ತಮಗೆ ಸಿಕ್ಕಿದ್ದ ಕಡಿಮೆ ಅವಧಿಯಲ್ಲಿಯೇ ಈ ಜಗತ್ತನ್ನು ಪ್ರಭಾವಿಸಿದ್ದಾರೆ.
ಅಕ್ರಮಗಳ ಆಗರವಾಗಿದ್ದ ಮಕ್ಕಾ ನಗರದಲ್ಲಿ ಮಾನವ ಕುಲದ ವಿಮೋಚಕನಾಗಿ ಜನಿಸಿ ಬಂದ ಪೈಗಂಬರ್ ಮುಹಮ್ಮದರ ಜೀವನ ಯಾತ್ರೆ ಸಸಿನವೂ ಆಗಿರಲಿಲ್ಲ, ಸರಾಗವೂ ಆಗಿರಲಿಲ್ಲ, ನಿಷ್ಕಂಟಕವೂ ಆಗಿರಲಿಲ್ಲ. ಅವರು ಮುಳ್ಳಿನ ಕಿರೀಟ ಧರಿಸಿ, ಮುಳ್ಳಿನ ಹಾಸಿಗೆಯ ಮೇಲೆ, ಅಗ್ನಿಜ್ವಾಲೆಯ ನಡುವೆ, ಕೆಂಡದ ಕೊಂಡದ ನಡುವೆ ನಡೆದವರು. ಅಲ್ಲಾಹನ ಪ್ರೀತಿ ಅವರಿಗೆ ಸುಲಭದಲ್ಲಿ ದೊರೆಯಲಿಲ್ಲ. ಪ್ರವಾದಿಗಳೇರಿದ ಆಧ್ಯಾತ್ಮ ಶಿಖರವಾಗಲಿ, ನಿರಾಕಾರ ತತ್ವದ ಸೂಕ್ಷ್ಮಾತಿಸೂಕ್ಷ್ಮ ವಿಚಾರವಾಗಲಿ ಜಡ ಸಂಪ್ರದಾಯದ ಬುದ್ಧಿ ಮಾಂದ್ಯರಿಗೆ ಅಷ್ಟು ಸುಲಭವಾಗಿ ಅರ್ಥವಾಗಲಿಕ್ಕೆ ಸಾಧ್ಯವಾಗಿರಲಿಲ್ಲ. ಆ ಕಾರಣಕ್ಕಾಗಿಯೇ ಜೀವನದುದ್ದಕ್ಕೂ ಮಾನವನ ಐಕ್ಯಕ್ಕಾಗಿ, ಜಗತ್ತಿನ ಲೇಸಿಗಾಗಿ ಸಕಲ ನಿಂದಾಪಮಾನಗಳನ್ನೂ ಸಹಿಸಬೇಕಾಯಿತು. ಸರ್ವ ಸುಖ-ಭೋಗ ವ್ಯಾಮೋಹಗಳನ್ನೂ ತ್ಯಜಿಸಬೇಕಾಯಿತು. ಅವರನುಭವಿಸಿದ ಬೇನೆ-ಬವಣೆಗಳಿಗೆ ಲೆಕ್ಕವಿಲ್ಲ. ದಿನ ಬೆಳಗಾದರೆ ಅವರು ಅಪಾಯದ ಅಂಚಿನಲ್ಲಿರುತ್ತಿದ್ದರು.
ನಾಗರೀಕತೆಯ ಬೆಳಕು ಹರಿಯದ, ಮಾನವೀಯತೆ ನಿದ್ದೆಯಿಂದ ಎಚ್ಚರಗೊಂಡಿರದ, ಅರಾಜಕತೆ ಎಲ್ಲೆಡೆ ವ್ಯಾಪಿಸಿ, ಮನುಷ್ಯ ಮನುಷ್ಯರ ನಡುವೆ ಉಂಟಾಗಿದ್ದ ಒಡಕು, ಜಗಳ, ಯುದ್ಧ, ಕೊಳ್ಳೆ, ದರೋಡೆಗಳ ವ್ಯಾಪಕವಾಗಿದ್ದ, ವ್ಯಭಿಚಾರ, ಶರಾಬು, ಜೂಜಿನಿಂದ ಮೈವೆತ್ತ ಅಜ್ಞಾನ ಕಾಲದ ಸಂಸ್ಕೃತಿ ಉತ್ತುಂಗತೆಯಲ್ಲಿದ್ದ ಅರೇಬಿಯಾದಲ್ಲಿ ಆಧ್ಯಾತ್ಮಿಕ ಪ್ರವಾಹವನ್ನು ಹರಿಸಿ, ಧಾರ್ಮಿಕ ಬೀಜವನ್ನು ಬಿತ್ತಿ, ಉಚ್ಚ ಸಂಸ್ಕೃತಿಯ ಬೆಳಕನ್ನು ಅಲ್ಲಾಹನಿಂದ ಪಡೆದು, ಅದನ್ನು ಜಗತ್ತಿಗೆ ಪಸರಿಸಿದ ಪುಣ್ಯ ಜೀವಿ ಪೈಗಂಬರ್ ಮುಹಮ್ಮದರು! ಇತಿಹಾಸವನ್ನು ನಿರ್ಮಿಸಿದ ಈ ಮಹಾ ಮಾನವ ಈ ನೆಲದ ಮೇಲೆ ಹರಿದಾಡದಿದ್ದರೆ ಜಗತ್ತು ಅಜ್ಞಾನಾಂಧಕಾರದಲ್ಲಿ, ಮೌಢ್ಯ ಮಾಲಿನ್ಯದ ಕೆಸರಿನಲ್ಲಿ, ಅನಾಗರಿಕತೆಯ ಬಸಿರಲ್ಲಿ ತೊಳಲಾಡುತ್ತಿತ್ತೇನೋ? ಪೈಗಂಬರ್ ಮುಹಮ್ಮದರ ದೈವೋನ್ಮಾದ ಅದ್ವೀತಿಯವಾದದ್ದು; ಅದೇ ಅವರ ಬದುಕಿನ ನೆಲೆ-ಬೆಲೆ-ಸೆಲೆಯಾಗುತ್ತದೆ. ಅವರ ಬದುಕನ್ನೆಲ್ಲ ಆವರಿಸಿಕೊಳ್ಳುತ್ತದೆ. ಅಲ್ಲಾಹನ ಇಚ್ಛೆಯ ಅಭಿವ್ಯಕ್ತಿಗೆ ಅವರ ಬದುಕೊಂದು ಮಾಧ್ಯಮವಾಗುತ್ತದೆ. ಆದ್ದರಿಂದಲೇ ಅವರ ನಿತ್ಯ ಜೀವನದಲ್ಲಿ ಸತ್ಯ ನಿಷ್ಠೆ, ಪರಾನುಕಂಪ, ಸ್ಥಿತಪ್ರಜ್ಞೆ, ಪ್ರಾಮಾಣಿಕತೆ, ಸರ್ವಾನುಭವ ಮೊದಲಾದ ಗುಣಗಳು ರಾರಾಜಿಸುತ್ತವೆ. ಅಲ್ಲಾಹನ ಸಂದೇಶವೇ ಅವರ ಅಂತರ್ವಾಣಿಯಾಗಿತ್ತು ಎಂದರೂ ಸಲ್ಲುತ್ತದೆ. ಇತಿಹಾಸ, ಬರೀ ಬೋಧಿಸುವ ಹಲವಾರು ದಾರ್ಶನಿಕರನ್ನು ಕಂಡಿರಬಹುದು. ಆದರೆ ಬದುಕನ್ನೇ ಬೋಧನೆಯನ್ನಾಗಿಸಿದವರಲ್ಲಿ ಪೈಗಂಬರ್ ಮುಹಮ್ಮದರು ಮೊದಲಿಗರು. ನುಡಿದಂತೆ ನಡೆದವರು, ನಾನು ನಡೆದಂತೆ ನೀವೂ ನಡೆಯಿರಿ ಎಂದವರು.
ತಾಯಿಯ ಉದರದಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದ ಪೈಗಂಬರರು, ಎಂಟು ವರ್ಷದವನಿದ್ದಾಗ, ತಾಯಿಯನ್ನೂ ಕಳೆದುಕೊಂಡು ಎರಡನೇ ಬಾರಿ ಅನಾಥರಾಗಿದ್ದರು. ನಂತರ ತಾತ ಅಬ್ದುಲ್ ಮುತ್ತಲೀಬರ ಆಶ್ರಯದಲ್ಲಿ ಬೆಳೆದು, ಅವರಿಂದಲೇ ವ್ಯಾಪಾರದ ಪಟ್ಟುಗಳನ್ನು ಕರಗತ ಮಾಡಿಕೊಂಡು, ತನ್ನ ಪ್ರಾಮಾಣಿಕತೆಯಿಂದಲೇ ಖದೀಜಾರ ಮನ ಗೆದ್ದ ಮುಹಮ್ಮದರು, ತಾವು 25ನೇ ವಯಸ್ಸಿನಲ್ಲಿರುವಾಗ, ಅವರಿಗಿಂತ 15 ವರ್ಷ ಹಿರಿಯಳಾಗಿದ್ದ, ಎರಡೆರಡು ಬಾರಿ ವಿಧವೆಯಾಗಿದ್ದ ಖದೀಜಾರನ್ನು ಮದುವೆಯಾಗಿದ್ದರು.
ಪ್ರವಾದಿ ಮುಹಮ್ಮದರು ಬರೀ ಬರೆದಿಡಲಿಲ್ಲ, ಭಾಷಣಗಳಲ್ಲಿ ಹೇಳಿ ಮುಗಿಸಲಿಲ್ಲ. ಹೇಳುವುದರೊಂದಿಗೆ, ಬರೆಯುವುದರೊಂದಿಗೆ, ಬದುಕಿಯೇ ಸಂದೇಶವನ್ನ ಸಾರಿದ್ದಾರೆ. ಏಕೆಂದರೆ ವಿಧವಾ ವಿವಾಹವನ್ನು ಪ್ರೋತ್ಸಾಹಿಸಿ ಬರೆದ ಸಾವಿರ ಜನ ಸಮಾಜ ಸುಧಾಕರರಿಬಹುದು, ಭಾಷಣ ಮಾಡಿದ ನೂರಾರು ಜನರಿರಬಹುದು. ಆದರೆ ತಾವೇ ಆ ಕೆಲಸವನ್ನು ಮಾಡಿ, ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದು ಪ್ರವಾದಿ ಮುಹಮ್ಮದರು. ಅವರೊಬ್ಬ ಈ ಜಗದ ಶ್ರೇಷ್ಠ ಮಹಿಳಾ ವಿಮೋಚಕ. ಕದ್ದಿದ್ದೂ ನನ್ನ ಮಗಳು ಫಾತಿಮಾಳಾದರೂ ಸರಿಯೇ, ಅವಳ ಕೈ ಕಡಿಯುತ್ತೇನೆ ಎಂದ ಪೈಗಂಬರರು ಈ ಜಗತ್ತು ಕಂಡ ಅತೀ ಶ್ರೇಷ್ಠ ಆಡಳಿತಗಾರ. ತನ್ನ ಪತ್ನಿಯರ ಮನೆಗೆಲಸದಲ್ಲಿ ಎಲ್ಲಾ ಸಹಾಯವನ್ನು ಮಾಡುತ್ತಿದ್ದ ಮುಹಮ್ಮದರು, ಈ ಜಗತ್ತಿನ ಅತ್ಯುತ್ತಮ ಪತಿ. ತನ್ನ ಮಗಳು ಫಾತಿಮಾರನ್ನು ಇಡೀ ಜಗತ್ತಿಗೆ ಮಾದರಿಯಾಗುವಂತೆ ಬೆಳೆಸಿದ ಮುಹಮ್ಮದರು, ಈ ಪ್ರಪಂಚ ಕಂಡ ಒಬ್ಬ ಅತ್ಯುತ್ತಮ ಮಾದರಿ ತಂದೆ. ಅರೇಬಿಯಾದ ಬರಡು ಮರಭೂಮಿಯಲ್ಲಿ, ಬರಡು ಮನಸ್ಸನ್ನು ಹೊಂದಿದ್ದ ಜನರನ್ನು ಸೌಮ್ಯವಾಗಿ ಬದಲಾಯಿಸಿ, ಅವರ ಎದೆಯೊಳಗೆ ಕರುಣೆಯನ್ನು ಬಿತ್ತಿ ಅವರನ್ನು ಮನುಷ್ಯರನ್ನಾಗಿ ಮಾಡಿದ ಮುಹಮ್ಮದರು ಅತ್ಯುತ್ತಮ ಮಾರ್ಗದರ್ಶಕ.
ದೈವೋನ್ಮಾದ ಎನ್ನುವುದು ಪ್ರವಾದಿ ಮುಹಮ್ಮದರಿಗಿರುವ ಮತ್ತೊಂದು ಕಿರೀಟ. ಅದೆಷ್ಟೇ ಕಷ್ಟಗಳು ಎದುರಾದರೂ, ಅವರ ಅಲ್ಲಾಹನ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅಂತಹ ಅತ್ಯುತ್ತಮ ದೇವನ ದಾಸ ಪ್ರವಾದಿ ಮುಹಮ್ಮದರು. ಶತ್ರುಗಳು ಅದೆಷ್ಟೇ ಕುಟಿಲತೆಯಿಂದ ಮುಹಮ್ಮದರನ್ನು ಮುಗಿಸಲು ಹೊಂಚು ಹಾಕಿದರೂ, ಅವರ ಚಿಕ್ಕಪ್ಪನ ಹೊಟ್ಟೆ ಬಗೆದು, ಕರುಳನ್ನು ತಿಂದು ಉಗುಳಿದವರಿಗೂ ಕ್ಷಮೆಯನ್ನು ನೀಡಿದ ಈ ಜಗತ್ತು ಕಂಡ ಅತ್ಯಂತ ಕ್ಷಮಾಶೀಲ ವ್ಯಕ್ತಿ ಪೈಗಂಬರ್ ಮುಹಮ್ಮದರು. ಕರಿಯರನ್ನು ಮುಟ್ಟಿಸಿಕೊಳ್ಳದ ಕಾಲದಲ್ಲಿ, ಬಿಲಾಲ ಎಂಬ ಕರಿಬಣ್ಣದ ಸಂಗಾತಿಯನ್ನು ತಮ್ಮ ಹೆಗಲಮೇಲೊತ್ತು, ಅವರಿಂದಲೇ ಈ ಜಗತ್ತಿನ ಪ್ರಥಮ ಆಜಾನ್ ಕೊಡಿಸಿ, ನಿಂತ ಜಾಗದಲ್ಲಿಯೇ.. “ಕರಿಯನಿಗಿಂತ ಬಿಳಿಯ ಶ್ರೇಷ್ಠನಲ್ಲ, ಬಿಳಿಯನಿಗಿಂತ ಕರಿಯ ಶ್ರೇಷ್ಠನಲ್ಲ. ಅರಬ್ಬನಿಗಿಂತ ಅರಬೇತರ ಶ್ರೇಷ್ಠನಲ್ಲ, ಅರಬೇತರನಿಗಿಂತ ಅರಬ್ಬ ಶ್ರೇಷ್ಠನಲ್ಲ. ಎಲ್ಲಾ ರೀತಿಯ ತಾರತಮ್ಯಗಳನ್ನು ನಾನು ನನ್ನ ಪಾದದಡಿಯಲ್ಲಿ ಹೊಸಕಿ ಹಾಕಿದ್ದೇನೆ” ಎಂದ ಮುಹಮ್ಮದರು ಈ ಜಗತ್ತು ಕಂಡ ಶ್ರೇಷ್ಠ ಸಮಾನತಾವಾದಿ.
ತಮ್ಮ ಬದುಕು ಒಂದು ಸಂದೇಶವಾಗುವಂತೆ ಬದುಕಿದ ಪೈಗಂಬರ್ ಮುಹಮ್ಮದರು, ಜೀವನದ ಎಲ್ಲಾ ರಂಗಗಳಲ್ಲೂ ಯಶಸ್ಸು ಸಾಧಿಸಿದವರು. ತಮ್ಮ ಪ್ರೀತಿಯ ಮಡದಿ ಆಯಿಷಾರ ಮಡಿಲಿನಲ್ಲಿ ಕೊನೆಯುಸಿರೆಳೆದ ಪೈಗಂಬರರು “ಅನಾಥ ಮಕ್ಕಳ ಮುಂದೆ ಸ್ವಂತ ಮಕ್ಕಳನ್ನು ಮುದ್ದಿಸದಿರಿ,
ಊಟ ಮಾಡುವ ಮುನ್ನ ನೆರೆಹೊರೆಯವರಲ್ಲಿ ವಿಚಾರಿಸಿ. ನೆರೆಯವನು ಹಸಿದಿರುವಾಗ ಹೊಟ್ಟೆತುಂಬಾ ತಿನ್ನದಿರಿ. ಕಾರ್ಮಿಕರ ಬೆವರು ಆರುವ ಮುನ್ನವೇ ಅವರ ವೇತನವನ್ನು ಕೊಟ್ಟು ಬಿಡಿ. ವಿಲಾಸೀ ಜೀವನ ನಡೆಸದಿರಿ. ಅಸೂಯೆಯಿಂದ ದೂರವಿರಿ. ಯಾರದ್ದೇ ಕುಟುಂಬ ಸಂಬಂಧವನ್ನು ಮುರಿಯದಿರಿ, ಹಿರಿಯರನ್ನು ಗೌರವಿಸಿ, ಕಿರಿಯರನ್ನು ಪ್ರೀತಿಸಿ. ಒಳಿತಿನ ಪ್ರಚಾರ ಮಾಡಿ, ಕೆಡುಕಿನಿಂದ ಜನರನ್ನು ತಡೆಯಿರಿ. ನಿಮಗೆ ಕೆಡುಕನ್ನು ಬಯಸಿದ ವ್ಯಕ್ತಿಗೂ ಸಹ ನೀವು ಒಳಿತನ್ನೇ ಬಯಸಿ” ಎಂದು ಹೇಳಿ ಈ ಲೋಕ ಕಂಡ ಅತ್ಯಂತ ಸರಳ ಸಜ್ಜನ, ಕ್ರಾಂತಿಕಾರಿ ಸಮಾಜ ಸುಧಾರಕನಾಗಿ ಇತಿಹಾಸದ ಪುಟಗಳಲ್ಲಿ ಅಜರಾಮರರದರು. ಅಂತಹ ಪ್ರವಾದಿ ಮುಹಮ್ಮದರ ತತ್ವಗಳನ್ನು ಪ್ರಸ್ತುತ ಜಗತ್ತು ದಿನನಿತ್ಯದ ಚಟುವಟಿಕೆಗಳಲ್ಲಿ ಪಾಲಿಸುವ ಅಗತ್ಯವಿದೆ. ಯಾವುದೇ ಪೂರ್ವಾಗ್ರಹ ಪೀಡಿತರಾಗದೇ ಮುಹಮ್ಮದರನ್ನು ಅರ್ಥ ಮಾಡಿಕೊಂಡಾಗ ಅವರ ಆಂದೋಲನ, ಶೋಷಿತರ, ದಮನಿತರ, ಮಹಿಳೆಯರ ಪರವಾದ ಆಂದೋಲನ ಎನ್ನವುದು ಗೊತ್ತಾಗುತ್ತದೆ. ಅಂತಹ ಪ್ರವಾದಿ ಮುಹಮ್ಮದರನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.