ನಮ್ಮ ಗಂಗಪ್ಪ ತಳವಾರ ಅವರ “ಧಾವತಿ” ಕಾದಂಬರಿಯನ್ನು ಎತ್ತಿಕೊಂಡವನು ಒಂದೇ ಉಸುರಿಗೆ ಓದಿ ಮುಗಿಸಿದೆ! ನಿಜ ಹೇಳಬೇಕೆಂದರೆ ನಾನು ‘ಧಾವತಿ’ ಓದಲೇ ಇಲ್ಲ! ಓದಲಾರಂಭಿಸಿದೆ ಅಷ್ಟೇ.. ನಿಧಾನಕ್ಕೆ ಅದೇ ನನ್ನನ್ನು ಒಳಕ್ಕೆ ಸೆಳೆದುಕೊಂಡು ಬಿಟ್ಟಿತು! ನನಗೆ ಈ ಕಾದಂಬರಿ ಇಷ್ಟೊಂದು ಆಳವಾಗಿ ಸೆಳೆಯಲು ಮತ್ತು ಕಲಕಲು ಕಾರಣ ಅದರಲ್ಲಿನ ನನ್ನ ಪ್ರದೇಶದ ತೆಲುಗು ಮಿಶ್ರಿತ, ದಲಿತಕೇರಿಯ ಆಡುಭಾಷೆಯ ಸೊಗಡು, ಗಾಢವಾಗಿ ತಟ್ಟುವ ಹಟ್ಟಿಯ ಪರಿಸರ ಹಾಗೂ ‘ಧಾವತಿ’ಯ ಬದುಕಿನ ಪಯಣ.

ಗಂಗಪ್ಪ ತಾನೇ ಚಂದ್ರಿಯಲ್ಲಿ ಪರಕಾಯಪ್ರವೇಶ ಪಡೆದು ನನ್ನನ್ನು ಕೈಹಿಡಿದು ಕರೆದೊಯ್ದು, ಎಲ್ಲವನ್ನೂ ಕಣ್ಣಾರೆ ತೋರಿಸಿ ಹೊರಕ್ಕೆ ತಂದು ಬಿಟ್ಟರು! ಆದರೆ ನಾನಿನ್ನೂ ಹೊರಬಂದಿಲ್ಲ! ‘ಧಾವತಿ’ಯ ಗುಂಗಿನಲ್ಲೇ ಇದ್ದೇನೆ.

ನಮ್ಮ ಕೋಲಾರ, ಮಾಲೂರಿನ ಗ್ರಾಮ್ಯ ಭಾಷೆಯನ್ನು ಇಷ್ಟೊಂದು ಪರಿಣಾಮಕಾರಿಯಾಗಿ ಬಳಸಿದ ಮತ್ತೊಬ್ಬ ಲೇಖಕ ನನಗೆ ಕಂಡಿಲ್ಲ! ನಮ್ಮಲ್ಲಿನ ಗ್ರಾಮ್ಯ ಭಾಷೆಯಲ್ಲೂ ‘ಸಭ್ಯ’ ಸಮಾಜದ ಆಡುಭಾಷೆ ಒಂದಾದರೆ ಅದರಲ್ಲೂ ವಿಶೇಷವಾಗಿ ಹಟ್ಟಿಯ ಗ್ರಾಮ್ಯಕ್ಕೆ ತನ್ನದೇ ಆದ ವಿಶೇಷ ಹಸೀತನ ಮತ್ತು ಖದರ್ ಇದ್ದೇ ಇರುತ್ತದೆ. ನಮ್ಮ ಪ್ರದೇಶದ ಈ ಭಾಷೆಯ ಸೊಗಡು ನನಗೆ ಇಷ್ಟೊಂದು ಅಪ್ಯಾಯಮಾನವಾಗಿ ಆವರಿಸಿದಂತೆಯೇ, ಈ ಪರಿಸರದ ಪರಿಚಯವೇ ಇಲ್ಲದವರಿಗೆ ದಕ್ಕುವುದು ಕಡುಕಷ್ಟ!

ಕುಸುಮಬಾಲೆ ಕಾದಂಬರಿಯ ಮುಖಪುಟ

ದೇವನೂರರ ಕುಸುಮಬಾಲೆಯನ್ನು ಓದಲು ಅನೇಕ ಸಲ ಪ್ರಯತ್ನಿಸಿ ಸೋತ ನಾನು ಗಂಗಪ್ಪನ ದಾವತಿಯನ್ನು ಒಂದೇ ಗುಟುಕಿಗೆ ಓದಿ ಮುಗಿಸಲು ಸಾಧ್ಯವಾದದ್ದು ಇಡೀ ಕಾದಂಬರಿ ನನ್ನ ಭಾಷೆಯಲ್ಲಿ ಇದ್ದದ್ದು ಮತ್ತು ಕಥಾಹಂದರ ನನಗೆ ಪರಿಚಯವಿದ್ದ ಪರಿಸರದ್ದು ಎಂಬ ಕಾರಣಕ್ಕಾಗಿ. ನನ್ನ ಜೀವನಕಥನದಲ್ಲಿ ಚಂದ್ರಿಯೂ ನನ್ನ ಕಾಲಘಟ್ಟದಲ್ಲಿ ಬದುಕಿ ಹೋದಳೇನೋ ಎನಿಸಿಬಿಡುತ್ತದೆ. ನಮ್ಮ ಸುತ್ತಲ‌ ಹಟ್ಟಿಗಳಲ್ಲಿ ಚಂದ್ರಿಯಂತೆಯೇ ಜೀವಸಿ, ನನ್ನ ಕಣ್ಣ ಮುಂದೆಯೇ ಮಣ್ಣಲ್ಲಿ ಬದುಕಿ, ಕಡೆಗೆ ಮಣ್ಣಲ್ಲಿ ಮಣ್ಣಾದ ಮುನಿಲಚ್ಮಿ, ಎಲ್ಲಿ, ಲಚ್ಮಕ್ಕ, ಕೆಂಚಿಯಂತಹವರನ್ನು ಹತ್ತಿರದಿಂದ ನೋಡಿದ್ದ ಪಟ್ಟಿಗೆ ಇಂದು ಚಂದ್ರಿಯೂ ಸೇರಿಕೊಂಡಳಷ್ಟೆ..

ಇಡೀ ಕಾದಂಬರಿಯ ಶಕ್ತಿ ಅಡಗಿರೋದೇ ಅದರ ಭಾಷೆಯಲ್ಲಿ.. ಅದನ್ನು ನಿಭಾಯಿಸುವ ತಂತ್ರದಲ್ಲಿ ಮತ್ತು ತಣ್ಣಗೆ ಕತೆ ಕಟ್ಟಿಕೊಡುವ ಶೈಲಿಯಲ್ಲಿ. ಈ ನಮ್ಮ ತೆಲುಗು ಮಿಶ್ರಿತ ಹಟ್ಟಿಯ ಆಡುಭಾಷೆ ದಕ್ಕದೆ ಚಂದ್ರಿಯ ಆತ್ಮವನ್ನು ಮುಟ್ಟಲಾರದೆ ಸೋತ ಮುನ್ನುಡಿ, ಬೆನ್ನುಡಿಗಳನ್ನು ಕಂಡು “ಅಯ್ಯೋ” ಅನಿಸಿತು!

ದ್ವಾರಕಾನಾಥ್ ಅವರ ‘ಬೈಕ್ ಚೇಸ್ ಮಾಡಿ ಸಿನಿಮಾ ಶೈಲಿಯಲ್ಲಿ ಆದಿವಾಸಿಯನ್ನು ಕೊಂದ ಕತೆ..!’ ಎಂಬ ಲೇಖನವನ್ನೂ ಓದಿ.

ಸದಾ ಕೈವಾರ ತಾತಯ್ಯ, ಗಟ್ಟಳ್ಳಿ ಆಂಜನಪ್ಪ, ಬೇರಿಕಿ ಪುಟ್ಟಪ್ಪ, ದಾದಿನಾಯಕನದೊಡ್ಡಿ ವೆಂಕಟಗಿರಿಯಪ್ಪ, ಮಾಲೂರು ಸೊಣ್ಣಪ್ಪನ ಗ್ಯಾನದಲ್ಲೇ ಇರುವ ಗಂಗಪ್ಪ ಎಲ್ಲಾದರೂ ಒಂದು ತುಣುಕು ಬರೆದರೂ ಸೀರಿಯಸ್ ಆಗಿ ಓದುವ ನನ್ನ ಹಸಿವನ್ನು ತಣಿಸಿದ್ದು ‘ಧಾವತಿ’ ಕಾದಂಬರಿ. ಓದುಗರ ಆಸಕ್ತಿಯ ಓದಿನ ಹಿತದೃಷ್ಟಿಯಿಂದ ಇಡೀ ಕಾದಂಬರಿಯನ್ನು ಪದರಪದರವಾಗಿ ವಿಶ್ಲೇಷಿಸಲಾರೆ, ಅವರವರು ಓದಿದ್ದು ಅವರವರಿಗೆ ದಕ್ಕಲಿ ಎಂಬುದು ನನ್ನ ಉದ್ದೇಶ.
ಧಾವತಿ ಓದಿದ ನಂತರ ಅವಳು ನಿಮ್ಮನ್ನು ಸುಮ್ಮನೆ ಬಿಡಳು.. ಕ್ಷಣಕ್ಷಣಕ್ಕೂ ಇಟ್ಟಾಡಿಸುತ್ತಾಳೆ, ಕಡೆಗೆ ನಿಮ್ಮ ಎದೆಗೆ ಲಗ್ಗೆ ಇಟ್ಟು ನಿಮ್ಮೆದೆಯಿಂದ ಗಳಗಳನೆ ಕಣ್ಣೀರು ಸುರಿಸುತ್ತಾಳೆ…‌‌‌‌ ಕಡೆಯದಾಗಿ ನಮ್ಮ ಗಂಗಪ್ಪ ಇನ್ನಷ್ಟು ಬರೆಯಲಿ, ಕನ್ನಡ ಸಾಹಿತ್ಯ ಲೋಕದಲ್ಲಿ ಯುವತಾರೆಯಾಗಿ ಮಿಂಚಲಿ ಎಂಬುದು ನನ್ನ ಆಶಯ ಮತ್ತು ಹಾರೈಕೆ….
ಸಿ.ಎಸ್.ದ್ವಾರಕಾನಾಥ್

One thought on “ಸಿ.ಎಸ್.ದ್ವಾರಕಾನಾಥ್ ಕಂಡ ‘ಧಾವತಿ’”

Leave a Reply

Your email address will not be published. Required fields are marked *