ಈ ಪೂನಾ ಒಪ್ಪಂದ ದಿಂದ ಕೇವಲ SC STಗಳಿಗೆ‌ ಮಾತ್ರ ದ್ರೋಹವಾಗಲಿಲ್ಲ OBC ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೂ ಮಹಾದ್ರೋಹವಾಯಿತು..!

ಭಾರತದ ಶೋಷಿತರ ಇಂದಿನ ಸರ್ವಶೋಚನೀಯ ಸ್ಥಿತಿಗೆ ಅಂದಿನ ಪೂನ ಒಪ್ಪಂದವೇ‌ ಕಾರಣ.

ಹೌದು, ಇಂದಿನ ರಾಜಕೀಯ ಭ್ರಷ್ಟತೆ ಅರಾಜಕತೆ, ಸ್ವೇಚ್ಛಾಚಾರದ ಸರ್ವಾಧಿಕಾರಿ ಆಡಳಿತ, ಪರಧರ್ಮ ಅಸಹಿಷ್ಣುತೆ, ಸಂವಿಧಾನ ವಿರೋಧೀ ಚಟುವಟಿಕೆ ಭಯೋತ್ಪಾದನೆ, ಪ್ರಜಾಪ್ರಭುತ್ವದ ನಾಶ, ಕೋಮುವಾದದ ಆಟಾಟೋಪ, ಅಘೋಷಿತ ತುರ್ತುಪರಿಸ್ಥಿತಿ ಹೇರಿಕೆ, ಆರ್ಥಿಕ ಹಿಂಜರಿತ, ಇತ್ಯಾದಿ ಇತ್ಯಾದಿಗಳಿಗೂ ಅಂದಿನ ಮೋ.ಕ.ಚ.ಗಾಂಧಿಯವರ ಕುತಂತ್ರದ ಜಾತೀಗ್ರಸ್ತ ಮನಸ್ಥಿತಿಯಿಂದ ಹುಟ್ಟಿ ಅಂತ್ಯಕಂಡ ಪೂನಾ ಒಪ್ಪಂದಕ್ಕೂ ನೇರವಾದ ಸಂಬಂಧವಿದೆ..!

“ಪೂನಾ ಒಪ್ಪಂದ” ಎಂದರೆ ಶೋಷಿತರ ಮಹಾನಾಯಕರಾದ ಬಾಬಾಸಾಹೇಬರನ್ನು ಇಕ್ಕಟ್ಟಿನ ಹಿಂಸೆಗೆ ಸಿಲುಕಿಸಿ ಅವರು ಹೋರಾಡಿ ಗಳಿಸಿದ ಹಕ್ಕುಅಧಿಕಾರಗಳನ್ನು ಅವರಿಂದ ಕಿತ್ತುಕೊಂಡು‌‌‌ ಶತಮಾನಗಳ ದಾಸ್ಯದಿಂದ ವಿಮೋಚನೆಗೊಳ್ಳಲು ಇನ್ನೇನು ಒಂದೇ ಗೇಣು ದೂರದಲ್ಲಿದ್ದ ಶೋಷಿತ ಬಹುಜನ ಸಮುದಾಯವನ್ನು ಮತ್ತೆ ಶಾಶ್ವತ ಗುಲಾಮಗಿರಿಯ ಕೂಪದೊಳಗೆ ತಳ್ಳಿದ ಬ್ಲಾಕ್ ಮೇಲ್ ಬಲವಂತದ ಒಪ್ಪಂದ.‌ ಇದರ ಹಿಂದಿನ ಮಾಸ್ಟರ್ ಮೈಂಡ್ ಮುಗ್ಧಜನರಿಂದ ಈಗಲೂ ಬಾಪೂ ಅಹಿಂಸಾವಾದೀ ಮಹಾತ್ಮನೆಂದು ಕೊಂಡಾಡಿಸಿಕೊಳ್ಳುತ್ತಿರುವ ಮಾನ್ಯ ಮೋಹನದಾಸ ಕರಮಚಂದ ಗಾಂಧಿ!

1930-35ಕ್ಕೂ ಮುನ್ನ ಇಂಡಿಯನ್-ಬ್ರಿಟಿಷ್ ಕೌನ್ಸಿಲ್ ಪಾರ್ಲಿಮೆಂಟಿನೊಳಗೆ ಇಡೀ ಭಾರತೀಯ ಜನತೆಯನ್ನು ಪ್ರತಿನಿಧಿಸುತ್ತಿದ್ದದ್ದು ಎರಡೇ ಜಾತಿಯ ನಾಯಕರು. ಒಂದು ನೆಹರೂ ಜನಾಂಗದ ಬ್ರಾಹ್ಮಣ ಪುರುಷರು, ಇನ್ನೊಂದು ಗಾಂಧೀ ಜನಾಂಗದ ಬನಿಯಾ ಪುರುಷರು (ವೈಶ್ಯರು) ಯಾಕೆಂದರೆ ಆಗ ಚುನಾವಣೆಗೆ ಸ್ಪರ್ಧಿಸಲು ಮತ್ತು ಮತಚಲಾಯಿಸಲು ಶಿಕ್ಷಣದ ಮಟ್ಟ ಮತ್ತು ತೆರಿಗೆ ಪಾವತಿಯೇ ಮಾನದಂಡವಾಗಿತ್ತು.‌ ಸಹಜವಾಗಿ ಸ್ವಲ್ಪಸಂಖ್ಯಾತರಾದರೂ ವಿದ್ಯೆಯ ವಾರಸುದಾರರಾದ ಬ್ರಾಹ್ಮಣ ಪುರುಷರು, ಸಂಪತ್ತಿನ ವಾರಸುದಾರರಾದ ವೈಶ್ಯ ಪುರುಷರೇ ಯಾವಾಗಲೂ ಪಾರ್ಲಿಮಿಂಟಿನೊಳಗೆ ಇರುತ್ತಿದ್ದರು. ಅಲ್ಲಿದ್ದುಕೊಂಡು ಸಹಜವಾಗಿ ಅವರವರ ಜನಾಂಗವನ್ನು ಮಾತ್ರವೇ ಸರ್ವರೀತಿಯಲ್ಲಿಯೂ ಮತ್ತಷ್ಟು ಬಲಿಷ್ಟಗೊಳಿಸುತ್ತಿದ್ದರು.

ಪೂನಾ ಒಪ್ಪಂದ

ಈ ಅನ್ಯಾಯದಿಂದ ಹಿಂದೂಗಳಲ್ಲದ ಅರ್ಥಾತ್ ಬ್ರಾಹ್ಮಣ, ಬನಿಯಾಗಳಲ್ಲದ ಮುಸಲ್ಮಾನರು, ಕ್ರೈಸ್ತರು ಮತ್ತು ಸಿಖ್ಖರು ತಮ್ಮ ತಮ್ಮ ಸಮಸ್ಯೆಗಳನ್ನೂ ಪರಿಹರಿಸಲು ತಮ್ಮ ಜನಾಂಗವನ್ನು ಪ್ರತಿನಿಧಿಸುವ ನಮ್ಮ ಜನರೂ ಪಾರ್ಲಿಮೆಂಟ್ ಪ್ರವೇಶಿಸುವಂಥ ಪ್ರತ್ಯೇಕ ಮತದಾನ ಪದ್ಧತಿಯನ್ನು ಜಾರಿಗೊಳಿಸಬೇಕೆಂದು ಒಗ್ಗಟ್ಟಿನಿಂದ ಹೋರಾಡಿ ಕೆಲ ಆಯ್ದ ಮೀಸಲು ಕ್ಷೇತ್ರಗಳಲ್ಲಿ ತಮ್ಮವರು ಮಾತ್ರವೇ ಸ್ಪರ್ಧಿಸುವ ಮತ್ತು ಅವರಿಗೇ ತಮ್ಮ ಜನಾಂಗವೇ ಮತ ಚಲಾಯಿಸುವ ಹೊಸ ಹಕ್ಕು ಅವಕಾಶವನ್ನು ಪಡೆಯುವಲ್ಲಿ ಯಶಸ್ವಿಯಾದರು.

ಆದರೆ ಹೆಸರಿಗೆ ಮತ್ತು ಲೆಕ್ಕಕ್ಕೆ ಮಾತ್ರ ಹಿಂದೂ ಧರ್ಮದೊಳಗೆ ಸೇರಿಸಿಕೊಂಡು ಅವರ ಯಾವ ಅಭಿವೃದ್ಧಿಗೂ ಶ್ರಮಿಸದೆ ಕಡೆಗಣಿಸಿದ್ದ ವಂಚಿತ ಸಮುದಾಯಗಳು, ತಮಗೂ ಮುಸಲ್ಮಾನ ಕ್ರೈಸ್ತರಂತೆ ಪ್ರತ್ಯೇಕ ಮತದಾನ ಪದ್ಧತಿ ನೀಡಬೇಕೆಂದೂ ತಮ್ಮ ಜನರೂ ಪಾರ್ಲಿಮೆಂಟಿನೊಳಗೆ ನಮ್ಮನ್ನು ಪ್ರತಿನಿಧಿಸಿ ನಮ್ಮ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳಬೇಕೇಂದೂ ಹೋರಾಟ ಆರಂಭಿಸಿದರು. ಅದರ ನೇತೃತ್ವವನ್ನು ಸ್ವತಃ ಬಾಬಾಸಾಹೇಬರು ವಹಿಸಿಕೊಂಡಿದ್ದರು. ಮೊದಲಿಗೆ ಬ್ರಿಟಿಷರೇ 1911ರ ಜಾತಿಜನಗಣತಿಯ ಸಂದರ್ಭದಲ್ಲಿ ಹಿಂದೂಗಳಲ್ಲದ 429 ಜಾತಿಗಳನ್ನು (Sc/st) ಗುರುತಿಸಿದ್ದರಿಂದ ಹಿಂದೂಗಳಲ್ಲದ‌ ನಮಗೂ ಪ್ರತ್ಯೇಕ ಮತದಾನ ವ್ಯವಸ್ಥೆ ಮಾಡಿ ಎಂದು ಬಾಬಾಸಾಹೇಬರು ಪಟ್ಟುಹಿಡಿದರು.

ಬಾಬಾಸಾಹೇಬ್-ಮತ್ತು OBC ಹಿಂದುಳಿದ ವರ್ಗದ ಶಾಹುಮಹರಾಜರ ದೂರದೃಷ್ಟಿಯ ಪ್ಲಾನ್ ಏನಿತ್ತೆಂದರೆ, ಮೊದಲು Scst ಗಳಿಗೆ ಈ ವಿಶೇಷ ಹಕ್ಕು ದೊರೆತ ಕೂಡಲೇ, ಅದೇ ಆಧಾರದ ಮೇಲೆ ಇತರೆ ಹಿಂದುಳಿದ OBC ಜನಾಂಗಗಳಿಗೂ ಇದನ್ನು ನೀಡುವಂತೆ ಒತ್ತಡ ಹೇರಿ ಸರ್ವಜನಾಂಗದವರಿಗೂ ಸರಿಸಮವಾಗಿ ಹಕ್ಕು-ಅಧಿಕಾರವನ್ನು ಜಾತಿಜನಸಂಖ್ಯಾವಾರು ಹಂಚುವುದೇ ಆಗಿತ್ತು. ಗಾಂಧಿಯವರು SCst ಗಳಿಗೆ ಬಾಬಾಸಾಹೇಬರು ಕೇಳಿದ ಈ ವಿಶೇಷ ರಾಜಕೀಯಹಕ್ಕನ್ನು ಖಂಡಾತುಂಡವಾಗಿ ಉಗ್ರವಾಗಿ ವಿರೋಧಿಸಿದರು. ಆದರೆ ಬಾಬಾಸಾಹೇಬರ ಕರಾರುವಕ್ಕಾದ ವಿಷಯಮಂಡನೆಯ ಹೋರಾಟಕ್ಕೆ ಮಣಿದು ಬ್ರಿಟಿಷ್ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ, ಎರಡು ಓಟುಗಳ ವಿಶೇಷ ಚುನಾಯಕಗಳನ್ನೇ ನೀಡಿದರು. ಆದರೆ ಮಹಾತ್ಮರು ಬಾಬಾಸಾಹೇಬ್-ಶಾಹುಜೀ ಮಹಾರಾಜರ ದೂರದೃಷ್ಟಿಯನ್ನು ಛಿದ್ರಮಾಡಿ, ಮೊದಲಿಗೆ ಇದು SCST ಗಳಿಗೇ ಈ ಹಕ್ಕು ಸಿಗದಿರುವಂತೆ ಉಪವಾಸ ಸತ್ಯಾಗ್ರಹ ಮಾಡಿ ಬಾಬಾಸಾಹೇಬರನ್ನು ಹೆದರಿಸಿ, ಬೆದರಿಸಿ, ಕಣ್ಣೀರು ಹಾಕಿಸಿ ಅವರು ಹೋರಾಡಿ ಬ್ರಿಟಿಷರಿಂದ ತಂದಿದ್ದ ವಿಶೇಷ ಹಕ್ಕು ಅಧಿಕಾರಗಳನ್ನು ಕಸಿದುಕೊಂಡರು. ಇದೇ “ಪೂನಾ ಒಪ್ಪಂದ” ಶತಶತಮಾನಗಳಿಂದಲೂ ದಾಸ್ಯದಲ್ಲಿದ್ದ ಬಹುಜನ ಸಮಾಜವು ವಿಮೋಚನೆಯಾಗುವ ಹೊತ್ತಿಗೆ, ಸನ್ಮಾನ್ಯ ಗಾಂಧಿಯವರ ಜಾತಿಪ್ರೇಮ ಶೋಷಿತ ಸಮುದಾಯವನ್ನು ಮತ್ತೆ ಗುಲಾಮಗಿರಿಗೆ ತಳ್ಳಿತು.

ಬಂಧುಗಳೇ, ಹೇಗೂ ಭಾರತದಲ್ಲಿ “ಜಾತಿ”ಯೇ ಸತ್ಯವಾಗಿರುವಾಗ ಆಯಾ ಜಾತಿಯ ಪ್ರತಿನಿಧಿಗಳನ್ನು ಆಯಾ ಜಾತಿಯವರೇ ಆರಿಸುವ ಅವಕಾಶ ಇದ್ದಿದ್ದರೆ, ಎಲ್ಲಾ ಜಾತಿಯ ಜನರಿಗೂ ಅವರವರ ಜಾತಿಜನಸಂಖ್ಯಾವಾರು ಮೀಸಲು ಕ್ಷೇತ್ರಗಳಿದ್ದು ಆರಿಸಿ ಹೋಗುವಂತಿದ್ದಿದ್ದರೆ ಎಲ್ಲರಿಗೂ ಸಮಾನ ಅವಕಾಶಗಳಿರುತ್ತಿತ್ತು. ಯಾವ ಜನಾಂಗಕ್ಕೂ ಯಾವುದೇ ವಿಶೇಷ ಮೀಸಲಾತಿ ಸವಲತ್ತಿನ ಭಿಕ್ಷೆಗಳೂ ಬೇಕಾಗುತ್ತಿರಲಿಲ್ಲ. ಎಲ್ಲರೂ ಸಮಾನಗೌರವದ ಸಮಾನ ಅಂತಸ್ತಿನ ಘನತೆಯ ಜೀವನವನ್ನು ನಡೆಸಬಹುದಿತ್ತು. ಬಾಬಾಸಾಹೇಬರು ಮತ್ತು ಶಾಹುಮಹಾರಾಜರು ಬಯಸಿದ್ದಂತೆಯೇ ಆಗಿದ್ದರೆ ಈಗಿರುವಂತೆ ಮೂರವರೆ ಪರ್ಸೆಂಟ್ ಜನ 96ವರೆ ಪರ್ಸೆಂಟ್ ಜನರನ್ನು ಆಳುವ ದುಸ್ಥಿತಿ ಬರುತ್ತಿರಲಿಲ್ಲ! ಈ ಬಗೆಯ ರಾಜಕೀಯ ಅರಾಜಕತೆ ಕೋಮುವಾದ ಭ್ರಷ್ಟಾಚಾರ ಸ್ವೇಚ್ಛಾಚಾರ ಸರ್ವಾಧಿಕಾರ ತಲೆಯೆತ್ತುತ್ತಿರಲಿಲ್ಲ. ಯಾರ ಮೇಲೆಯೂ ಯಾವುದರ ಹೇರಿಕೆಯೂ ಸಾಧ್ಯಗುತ್ತಿರಲಿಲ್ಲ ದೇಶದ ಸಂವಿಧಾನ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತಿರಲಿಲ್ಲ. ದೇಶದಲ್ಲಿ ಈ ಮಟ್ಟದ ಆರ್ಥಿಕ ಹಿಂಜರಿತ ಆಗುತ್ತಿರಲಿಲ್ಲ.

ಪೂನಾ ಪ್ಯಾಕ್ಟ್‌ ಕುರಿತ ಡಾ. ಕೃಷ್ಣಮೂರ್ತಿ ಚಮರಂ ಅವರ ಬಹುಜನರ ಬದುಕಿಗೆ ಬೆಂಕಿಯಿಟ್ಟ ಗಾಂಧಿ! ಈ ಲೇಖನವನ್ನೂ ಓದಿ

So, ಇಂದಿನ ಕೆಟ್ಟ ಈ ವ್ಯವಸ್ಥೆಯ ಕೊಡುಗೆ ಮಾನ್ಯ ಗಾಂಧಿಯವರದ್ದು! ನಾವು ಅವರ ವಿರೋಧಿಯಲ್ಲ; ಇದು ವಯಕ್ತಿಕ ದ್ವೇಷವೂ ಇಲ್ಲ. ಸತ್ಯವನ್ನು ಸತ್ಯವೆಂದೂ ಸುಳ್ಳನ್ನು ಸುಳ್ಳೆಂದು ಧೈರ್ಯವಾಗಿ ಹೇಳಲು ಕಲಿಸಿಕೊಟ್ಟ ಬುದ್ಧ-ಬಾಬಾಸಾಹೇಬರ ಅನುಯಾಯಿಗಳು. ತನ್ನ ಜನಾಂಗವಾದ ಸ್ವಲ್ಪ ಸಂಖ್ಯಾತರಾದ ಬ್ರಾಹ್ಮಣ-ಬನಿಯಾಗಳು ಶಾಶ್ವತವಾಗಿ ಈ ದೇಶದ ಬಹುಸಂಖ್ಯಾತರನ್ನು ಆಳಲು ಅವಕಾಶ ಮಾಡಿಕೊಡಲು ಬಹುಜನಸಮಾಜವನ್ನು ಶಾಶ್ವತ ಗುಲಾಮಗಿರಿಗೆ ತಳ್ಳಲು ಭಾರತದ ಬಹುಸಂಖ್ಯಾತ SC/ST/OBC/RMರ ಪಾಲಿಗೆ ತಣ್ಣಗೆ ಕೊಳ್ಳಿ ಇಟ್ಟುಹೋದ ಮಹಾತ್ಮ ಅಂದು ಹಚ್ಚಿದ ಆ ಬೆಂಕಿಯಿಂದ ಇಂದಿಗೂ ಭಾರತ ಒಳಗೊಳಗೇ ಸುಟ್ಟುಹೋಗುತ್ತಿದೆ.

ಗಾಂಧಿಯವರ ಈ ಕರಾಳ ಮುಖವನ್ನು ಒಪ್ಪಲಾರದ ಕೆಲವರು “ಅದು ಆ ಕಾಲ, ಇದು ಈ ಕಾಲ. 1932ರ ಗಾಂಧಿಯೇ ಬೇರೆ 1947ರ ಗಾಂಧಿಯವರೇ ಬೇರೆ. ಅವರು ಬದಲಾಗಿದ್ದರು ಅವರ ಮತ್ತು ಅಂಬೇಡ್ಕರರ ಸಂಬಂಧ ಚೆನ್ನಾಗಿಯೇ ಇತ್ತು ಎಂಬ ಮಕ್ಕಿಕಾಮಕ್ಕಿಯನ್ನೇ ಹಾಗೆ ಹೀಗೆ ಎಂದು ಹೇಳಬೇಡಿ..” ಗಾಂಧಿಯವರ ನಿಜರೂಪವನ್ನು 1955 ರಲ್ಲಿಯೂ BBCಯ ಸಂದರ್ಶನದಲ್ಲಿ ಬಾಬಾಸಾಹೇಬರು I never call him Mahatma he wont deserve for it…! ನಾನು ಅವರನ್ನು ಮಹಾತ್ಮ ಎಂದು ಕರೆಯುವುದಿಲ್ಲ ಅದಕ್ಕೇ ಆ ಮನುಷ್ಯ ಯೋಗ್ಯನಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಮಗೆ ಬಾಬಾಸಾಹೇಬರೇ ಅಂತಿಮ..!

BBC ನಡೆಸಿದ ಬಾಬಾ ಸಾಹೇಬರ ಸಂದರ್ಶನ

ಕೆಲವರಿಗೆ ಅಥವಾ ಕೆಲವು ಜಾತಿಧರ್ಮದವರಿಗೆ ಅವರಿಂದ ಅನುಕೂಲವಾಗಿದ್ದರೆ ಅಂಥವರು ಇವರನ್ನು ಹಾಡಿ ಹೊಗಳಿ. ನಮ್ಮ ಅಭ್ಯಂತರವಿಲ್ಲ. ಆದರೆ ನಾವು ಅವರನ್ನು ದ್ವೇಷಿಸುವುದಿಲ್ಲ ಆದರೆ ಅವರ ನಡೆಯನ್ನು ಮನಸ್ಥಿತಿಯನ್ನು ಖಂಡಾತುಂಡವಾಗಿ ವಿರೋಧಿಸುತ್ತಲೇ ಇರುತ್ತೇವೆ. ಇವರ ನಯವಂಚಕತನದ ಬಗ್ಗೆ ಜನರಿಗೆ ಎಚ್ಚರಿಸುತ್ತಲೇ ಇರುತ್ತೇವೆ..!

ಜೈಭೀಮ್

Leave a Reply

Your email address will not be published. Required fields are marked *