ದೇವನಹಳ್ಳಿ : ಕೃಷಿ ಚಟುವಟಿಕೆಗೆ ತಾಲೂಕಿನಲ್ಲಿ ಕೃಷಿಯನ್ನೇ ಅವಲಂಬಿಸಿರುವ ರೈತರಿಗೆ ಅಗತ್ಯವಿರುವ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಇದರಿಂದಾಗಿ ಸಕಾಲದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ, ಯೂರಿಯಾ ಪೂರೈಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇತರೆ ಜಿಲ್ಲೆಗಳಲ್ಲಿ ಯೂರಿಯಾ ದಾಸ್ತಾನು ಇದ್ದರು ದೇವನಹಳ್ಳಿ ತಾಲೂಕಿಗೆ ಅಗತ್ಯ ಪ್ರಮಾಣದ ಯೂರಿಯಾ ಪೂರೈಕೆ ಮಾಡುವುದರಲ್ಲಿ ಕಡಿತ ಮಾಡುತ್ತಿರುವ ಮರ್ಮವೇನು? ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಇದರಿಂದಾಗಿ ಹೆಚ್ಚಿನ ಬೆಲೆ ತೆತ್ತು ಬೇರೆಡೆಯಿಂದ ಯೂರಿಯಾ ಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವರಿಕೆ ಮಾಡಿ ರೈತರಿಗೆ ಸಮರ್ಪಕವಾಗಿ ಯೂರಿಯಾ ಪೂರೈಕೆ ಮಾಡಲು ಸಹಕಾರ ಸಂಘ ಮುಂದಾಗಬೇಕು. ಯೂರಿಯಾ ಕೊರತೆಯಿಂದ ರೈತರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಬೇಕು. ಯೂರಿಯಾ ದೊರೆಯದೆ ಹೈರಾಣಾಗಿರುವ ರೈತರ ಪ್ರಮುಖ ಸಮಸ್ಯೆಯನ್ನು ಈ ಕೂಡಲೇ ಬಗೆಹರಿಸಬೇಕು, ಎಂದು ಕಾರಹಳ್ಳಿಯಲ್ಲಿ ಶನಿವಾರ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಮಹಾ ಸಭೆಯಲ್ಲಿ ರೈತರಿಂದ ಒಕ್ಕೊರಲಿನ ಆಗ್ರಹ ವ್ಯಕ್ತವಾಯಿತು.

ಯೂರಿಯಾ ಕೊರತೆಯ ಬಗೆಗಿನ ಅಸಮಾದಾನದ ನಡುವೆಯೇ ನಡೆದ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಮಹಾ ಸಭೆಯಲ್ಲಿ ರೈತರ ಆಕ್ರೋಶವನ್ನು ಆಲಿಸಿದ ಮುಖಂಡರುಗಳು ಮತ್ತು ಪದಾಧಿಕಾರಿಗಳು ಈ ಬಗ್ಗೆ ಯೂರಿಯಾ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ, ಎಂದು ಭರವಸೆ ನೀಡಿದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜೆಡಿಎಸ್ ತಾಲೂಕು  ಅಧ್ಯಕ್ಷ ಆರ್ ಮುನೆಗೌಡ ಮಾತನಾಡಿ, ʻಷೇರುದಾರರು ಕೇವಲ ಲಾಭಾಂಶವನ್ನು ಮಾತ್ರ ಲೆಕ್ಕಚಾರ ಹಾಕಬಾರದು, ಸಂಘದ ನಷ್ಟ ಮತ್ತು ಖರ್ಚು-ವೆಚ್ಚಗಳನ್ನು ಗಮನಿಸಿ ವ್ಯವಹರಿಸುವ ಮೂಲಕ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬ ಷೇರುದಾರರು ಹಾಗೂ ಆಡಳಿತ ಮಂಡಳಿ ಶ್ರಮಿಸಬೇಕು. ಸಂಘದಲ್ಲಿ ಜನತಾ ಬಜಾರ್ ನ ವ್ಯಾಪಾರ ವಹಿವಾಟು ನಿಲ್ಲಿಸಿ ಎನ್ನುವುದು ಸಮಂಜಸವಲ್ಲ. ಅಡೆ-ತಡೆಗಳ ಬಗ್ಗೆ ಸಂಘದಲ್ಲಿ ಚರ್ಚಿಸಿ ಮುನ್ನಡೆಯುವ ಮೂಲಕ ಸಹಕಾರ ಸಂಘದ ಅಭಿವೃದ್ಧಿಗೆ ಕೈಜೋಡಿಸಿʼ ಎಂದರು.

ಯೂರಿಯಾ

ಬಿಡಿಸಿಸಿ ಬ್ಯಾಂಕ್ ವೃತ್ತಿ ಪರ ನಿರ್ದೇಶಕ ಹಾಲಿ ತಾಲೂಕು ಸೊಸೈಟಿ ನಿರ್ದೇಶಕ ಕಾಮೇನಹಳ್ಳಿ ರಮೇಶ್ ಮಾತನಾಡಿ, ʼಸಂಘದ ಅಭಿವೃದ್ಧಿ ಮತ್ತು ಕಾರ್ಯಚಟುವಟಿಕೆಗಳ ಬಗೆಗಿನ ಕುರಿತು ತಿಳಿದು ಸಲಹೆ ಸೂಚನೆಗಳನ್ನು ಷೇರುದಾರು ನೀಡಲಿ ಎಂಬ ಉದ್ದೇಶದಿಂದ ವಾರ್ಷಿಕ ಸಾಮಾನ್ಯ ಮಹಾಸಭೆ ನಡೆಯುತ್ತದೆ. ಸಂಘದ ಹೆಸರಿನ ಬದಲಾವಣೆಯು ಕೇಂದ್ರ ಸರ್ಕಾರದ ನಿರ್ದೇಶನದಲ್ಲಿ ನಡೆದಿದೆ ಯಾವುದೇ ಉದ್ದೇಶದ ವ್ಯವಹಾರ ವಹಿವಾಟು ನಡೆಸಲು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘ ಎಂದು ಮಾರ್ಪಡು ಮಾಡಲಾಗಿದೆʼ ಎಂದ ಅವರು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸುಧೀರ್ಘ ವಿವರಣೆ ನೀಡಿದರು.

ದೇವನಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎ. ದೇವರಾಜ್‌ ಮಾತನಾಡಿ ʼನೂತನ ಕಟ್ಟಡ ನಿರ್ಮಾಣದ ನಂತರ ಸಿಬ್ಬಂದಿಗಳ ಕೊರತೆ ಎದುರಾಗಿದೆ. ಇದರ ಜೊತೆಗೆ ಸರ್ವರ್ ಡೌನ್ ಸಮಸ್ಯೆಗಳಿಂದ ದೂರದ ಹಳ್ಳಿಗಳಲ್ಲಿನ ರೈತರು ಕಾರಹಳ್ಳಿಗೆ ಬಂದು ವ್ಯಾಪಾರ ವಹಿವಾಟು ಮಾಡುವುದಕ್ಕೆ ಉಂಟಾಗಿರುವ ಚಿಕ್ಕ ಪುಟ್ಟ ಅಡಚಣೆಗಳ ಸರಿಪಡಿಸಲು ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಗಮನ ನೀಡಲಾಗುತ್ತಿದೆʼ ಎಂದರು.

ಸಂಘದ ಅಧ್ಯಕ್ಷ  ಆರ್ ಮಂಜುನಾಥ್ ಮಾತನಾಡಿ, ʻಕಾರಹಳ್ಳಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 12.75 ಲಕ್ಷ ರೂ ಆದಾಯಗಳಿಸಿದೆ. ಸಹಕಾರಿ ಬ್ಯಾಂಕ್ ನಲ್ಲಿ  ರೈತರು ಕೃಷಿ ಸಾಲವನ್ನು ಪಡೆಯಬಹುದು ನಮ್ಮ ಸಹಕಾರ ಸಂಘದ ವ್ಯಾಪ್ತಿಗೆ ಬರುವ ಸ್ವಸಹಾಯ ಸಂಘಗಳು ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ರೈತರು ಸಹಕಾರ ಸಂಘದಲ್ಲಿ ಸಾಲಗಳನ್ನು ಪಡೆದು ಮರುಪಾವತಿಸಿ ಕಾರಹಳ್ಳಿ ಸಹಕಾರ ಸಂಘದ ಅಭಿವೃದ್ಧಿಗೆ ಸಕರಿಸಬೇಕುʼ ಎಂದರು.

ಈ ಸಂದರ್ಭದಲ್ಲಿ ಕಾರಹಳ್ಳಿ ವಿವಿಧೋದ್ದೇಶ ಪ್ರಾಥಾಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷ ಮುನಿಕೆಂಪಣ್ಣ, ಆಡಳಿತ ಮಂಡಳಿಯ ಸದಸ್ಯರುಗಳಾದ ಎ .ದೇವರಾಜು, ಎನ್. ರಮೇಶ್, ಎನ್. ಶಶಿಕುಮಾರ್ , ದೊಡ್ಡಮಲ್ಲಾಚಾರ್, ಲಕ್ಷ್ಮಮ್ಮ, ಸುಬ್ಬಮ್ಮ, ನಾರಾಯಣಮ್ಮ, ಗಂಗಪ್ಪ, ಆಂಜಿನಪ್ಪ, ನಾಗೇಶ್, ಸಿ ಪ್ರಕಾಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ದ್ಯಾವಪ್ಪ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರು ಮುಂತಾದವರು ಇದ್ದರು.

ವರದಿ: ಹೈದರ್‌ ದೇವನಹಳ್ಳಿ

Leave a Reply

Your email address will not be published. Required fields are marked *