“ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ತ್ರಿಭಾಶಾ ಸೂತ್ರ. ಅದರ ಪ್ರಕಾರ ಹಿಂದಿ ಇಂಗ್ಲಿಶುಗಳು ಬಲಾತ್ಕಾರದ ಭಾಶೆಗಳಾಗುತ್ತವೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ತ್ರಿಭಾಶಾ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ” (ಕುವೆಂಪು, ಸಮಗ್ರಗದ್ಯ ಸಂ-2, ಪು.534) ಎಂದು ‘ಬಹುಭಾಶೆಗಳಲ್ಲಿ ದ್ವಿಭಾಶೆ’ ಎಂಬ ತಮ್ಮ ಲೇಖನವೊಂದರಲ್ಲಿ ಕುವೆಂಪು ಅಭಿಪ್ರಾಯ ಪಟ್ಟಿದ್ದಾರೆ. ಅಂದರೆ ಇಲ್ಲಿ ಇಂಗ್ಲಿಶ್ ಮತ್ತು ಹಿಂದಿ ಎರಡೂ ಭಾಶೆಗಳನ್ನು ಬಲಾತ್ಕಾರದಿಂದ ಜನರ ಮೇಲೆ ಹೇರುತ್ತಿರುವುದನ್ನು ಕುವೆಂಪು ಸ್ಪಶ್ಟವಾಗಿ ಗುರುತಿಸಿದ್ದಾರೆ. ಇನ್ನೂ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಇದು ‘ರಾಜಕೀಯ ದುರಭಿಮಾನ’ದಿಂದ ಅಧಿಕಾರಸ್ಥರ ಭಾಶೆಗಳನ್ನು ಜನರ ಮೇಲೆ ಹೇರಲಾಗುತ್ತಿರುವುದನ್ನೂ ಗುರುತಿಸಿದ್ದಾರೆ. ಹೀಗೆ ಗುರುತಿಸುತ್ತ ಅವರು ಮುಂದುವರೆದು ಹೇಳುವಂತೆ, “ಐವತ್ತು ಕೋಟಿ ಭಾರತೀಯರೂ ಹಿಂದಿ ಕಲಿಯಬೇಕೆನ್ನುವ ವಾದದಲ್ಲಿ ಗತ ಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ” ಎನ್ನುತ್ತಾರೆ. ಅಂದರೆ ಒಕ್ಕೂಟ ಸರ್ಕಾರ ತನ್ನ ಅಧಿಕಾರವನ್ನು ಬಳಸಿ ಈ ದೇಶದ ಜನರ ಮೇಲೆ ಅನ್ಯ ಭಾಶೆಗಳನ್ನು ಹೇರುತ್ತಿದೆ; ಮತ್ತು ಒಕ್ಕೂಟ ಸರ್ಕಾರ ತನ್ನ ವಿಸ್ತರಣಾವಾದಿ ಸಾಮ್ರಾಜ್ಯಶಾಹಿ ನಿಲುವಿನಿಂದ ಈ ಕೆಲಸ ಮಾಡುತ್ತಿದೆ ಎಂಬುದನ್ನೂ ಗುರುತಿಸಿದ್ದಾರೆ. ಸ್ವತಂತ್ರ ಭಾರತದ ಆಳುವವರು ಆರಂಭಿಸಿದ ಭಾಶಾ ಹೇರಿಕೆಯ ಕೆಲಸವನ್ನು ಇಂದಿನ ಒಕ್ಕೂಟ ಸರ್ಕಾರ ಮತ್ತಶ್ಟು ಆಕ್ರಮಣಕಾರಿಯಾಗಿ ಜಾರಿಗೆ ತರುತ್ತಿದೆ. ಅಶ್ಟೇ ಅಲ್ಲದೆ ಉತ್ತರ ಭಾರತದ ಬಂಡವಾಳಿಗರಿಗೆ ಉದ್ಯೋಗಸ್ಥರಿಗೆ ಅನುಕೂಲವಾಗುವಂತೆ ಭಾಶಾನೀತಿಯನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ.
ಹೀಗೆ ಅಧಿಕಾರಸ್ಥರ ಭಾಶೆಗಳನ್ನು ದೇಶದ ಜನರ ಮೇಲೆ ಹೇರುವ ಪ್ರಕ್ರಿಯೆ ಬ್ರಿಟಿಶ್ ವಸಾಹತುಶಾಹಿಯಿಂದ ಆರಂಭವಾದುದು ಗೊತ್ತಿರುವ ವಿಚಾರ. ಹೀಗೆ ಅಧಿಕಾರಸ್ಥರ ಭಾಶೆಗಳನ್ನು ಹೇರುವ ಪ್ರಯತ್ನ ‘ಒಕ್ಕೂಟ ರಾಶ್ಟ್ರ’ ನಿರ್ಮಾಣ ಪ್ರಯತ್ನದ ಮೂಲಕ ಮತ್ತಶ್ಟು ವ್ಯವಸ್ಥಿತವಾಗಿ ಮುಂದುವರಿಯಿತು. ಇದಕ್ಕೆ ಸಂವಿಧಾನದ ಊರುಗೋಲನ್ನು ಸೃಶ್ಟಿಸಿಕೊಳ್ಳಲಾಯಿತು. ಸಂವಿಧಾನದ 343ರಿಂದ 351ನೇ ನಡುವಿನ ಕಲಮುಗಳನ್ನು ಗಮನಿಸಿದರೆ ಇದು ಸ್ಪಶ್ಟವಾಗುತ್ತದೆ. ಮತ್ತೆ ಸಂವಿಧಾನದ ನೀತಿಗಳ ಆಧಾರದ ಮೇಲೆ ತ್ರಿಭಾಶಾ ಸೂತ್ರವನ್ನು ರೂಪಿಸಲಾಯಿತು. ಕೊಠಾರಿ ಕಮಿಶನ್ ಎಂದೇ ಜನಪ್ರಿಯವಾಗಿರುವ ದೇಶದ ಮೊದಲ ಶಿಕ್ಶಣ ಆಯೋಗವು ತ್ರಿಭಾಶಾ ನೀತಿಯನ್ನು ಶಿಫಾರಸ್ಸು ಮಾಡಿತು. ಅದರ ಪ್ರಕಾರ ಈ ದೇಶದ ಶಿಕ್ಶಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಮೂರು ಭಾಶೆಗಳನ್ನು ಕಲಿಯುವಂತೆ ವ್ಯವಸ್ಥೆ ಮಾಡಲಾಯಿತು. ಅಲ್ಲಿಗೆ ಭಾಶೆಗಳ ಹೇರಿಕೆಯನ್ನು ಸಂವಿಧಾನದ ಮಾನ್ಯತೆ ಮತ್ತು ಶಿಕ್ಶಣದ ಮೂಲಕ ಅಧಿಕೃತಗೊಳಿಸಲಾಯಿತು. ಹೀಗೆ ಆರಂಭವಾದ ಪ್ರಕ್ರಿಯೆ ಹಿಂದಿ-ಇಂಗ್ಲಿಶುಗಳನ್ನು ಈ ದೇಶದಲ್ಲಿ ಬಹಳ ಆಳವಾಗಿ ಬೇರೂರಿಸಲಾಗಿದೆ. ಬ್ರಿಟಿಶ್ ಭಾರತ ಮತ್ತು ಸ್ವತಂತ್ರ ಒಕ್ಕೂಟ ರಾಶ್ಟ್ರಗಳ ನಡುವೆ ಹೋಲಿಕೆ ಮಾಡಿ ನೋಡಿದರೆ ಇಂದು ಇಂಗ್ಲಿಶ್ ಮತ್ತು ಹಿಂದಿಗಳನ್ನು ಬಳಸುವವರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿರುವುದು ಗಮನಕ್ಕೆ ಬರುತ್ತದೆ. ಇಂತಹ ಹೆಚ್ಚಳಕ್ಕೆ ಶಿಕ್ಶಣ ವ್ಯವಸ್ಥೆ ಮತ್ತು ಸಾಂವಿಧಾನಿಕ ಸೂತ್ರಗಳೇ ಪ್ರಮುಖ ಕಾರಣ.
ಇದರ ಪರಿಣಾಮವಾಗಿ ಒಕ್ಕೂಟ ರಾಶ್ಟ್ರದಲ್ಲಿ ದೇಶಭಾಶೆಗಳು ತಮ್ಮ ಉಳಿವಿಗಾಗಿ ಅನ್ಯಭಾಶೆಗಳ ಇಲ್ಲವೇ ಅಧಿಕಾರಸ್ಥ ಭಾಶೆಗಳ ಜೊತೆಗೆ ತೀವ್ರ ಸಂಘರ್ಶ ನಡೆಸಬೇಕಾದ ಸ್ಥಿತಿಯಿದೆ. ನಮ್ಮ ರಾಜಕೀಯ ಅಧಿಕಾರ ವ್ಯವಸ್ಥೆ ಅಧಿಕಾರಸ್ಥ ಭಾಶೆಗಳ ಬೆನ್ನಿಗೆ ನಿಂತ ಕಾರಣ ಜನಭಾಶೆಗಳಿಗೆ ಕಂಟಕ ಸೃಶ್ಟಿಯಾಗಿದೆ. ಹಾಗಾಗಿ ಇಂದಿಗೂ ಜನಭಾಶೆಗಳಲ್ಲಿ ಶಿಕ್ಶಣವನ್ನು ಕಲ್ಪಿಸಲು ಸಾಧ್ಯವಿಲ್ಲದಂತಾಗಿದೆ. ಈಚೆಗೆ ಈ ಸಮಸ್ಯೆ ಮತ್ತಶ್ಟು ಬಿಗಡಾಯಿಸಿದೆ. ಸುಪ್ರಿಮ್ ಕೋರ್ಟ್ ಅಡ್ಡಗಾಲು ಹಾಕಿದೆ.
ಈ ನಡುವೆ ನಮ್ಮ ದೇಶದಲ್ಲಿ ಒಕ್ಕೂಟ ರಾಶ್ಟ್ರದ ಕಲ್ಪನೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕಿ ಇದನ್ನು ಏಕರೂಪಿಯಾದ ‘ಅಖಂಡ ರಾಶ್ಟ್ರ’ಸ್ಥಾಪಿಸುವ ಸಾಮ್ರಾಜ್ಯಶಾಹಿ ಉದ್ದೇಶದಿಂದ ಹಿಂದಿಯನ್ನು ಮತ್ತಶ್ಟು ವ್ಯಾಪಕಗೊಳಿಸಲಾಗುತ್ತಿದೆ. ಬಹಭಾಶಿಕ ಭಾರತವನ್ನು ನಾಶಮಾಡಿ ಏಕಭಾಶಿಕವಾದ ಹಿಂದಿ ರಾಶ್ಟ್ರ ಸ್ಥಾಪಿಸುವ ಹುನ್ನಾರ ನಡೆದಿದೆ. ಇದು ಇಲ್ಲಿಗೂ ನಿಲ್ಲದೆ ನಿಡುಗಾಲದಲ್ಲಿ ‘ಸಂಸ್ಕøತಭಾರತ’ ನಿರ್ಮಾಣ ಮಾಡುವ ರಹಸ್ಯಕಾರ್ಯಸೂಚಿಯೊಂದಿಗೆ ಕೆಲಸ ನಡೆದಿದೆ. ಒಕ್ಕೂಟ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಹಿಂದಿಯನ್ನು ಮತ್ತಶ್ಟು ಕಡ್ಡಾಯಗೊಳಿಸಿ ಅಲ್ಲಿಂದ ಕನ್ನಡ ತಮಿಳುಗಳಂತಹ ಜನಭಾಶೆಗಳನ್ನು ಹೊರತಳ್ಳಲಾಗುತ್ತಿದೆ. ಎಲ್‍ಐಸಿ, ರೈಲ್ವೆ, ರಾಶ್ಟ್ರೀಕೃತ ಬ್ಯಾಂಕುಗಳು, ಮೆಟ್ರೋ ರೈಲು ಹೀಗೆ ಎಲ್ಲ ಕಡೆ ಹಿಂದಿಯನ್ನು ಕಡ್ಡಾಯಗೊಳಿಸಿ ಅಲ್ಲಿಂದ ಜನಭಾಶೆಗಳನ್ನು ಹೊರತಳ್ಳಲಾಗುತ್ತಿದೆ. ಅಂದರೆ ಜನಭಾಶೆಗಳ ಬಳಕೆಯ ವಲಯಗಳನ್ನು ಕಡಿಮೆ ಮಾಡಲಾಗುತ್ತಿದೆ. ಇದು ಕೇವಲ ಭಾಶೆಗಳನ್ನು ಹೊರತಳ್ಳುವುದು ಮಾತ್ರವಲ್ಲ. ಆ ಭಾಶೆಗಳನ್ನು ಮಾತನಾಡುವ ಜನರನ್ನು ಅವಕಾಶಗಳಿಂದ ವಂಚಿಸುವುದು ಮತ್ತು ನಮ್ಮ ನೆಲದಲ್ಲಿಯೇ ಇರುವ ಸಂಸ್ಥೆಗಳ ಮೇಲೆ ಹೊರಭಾಶಿಕರು ಹಿಡಿತ ಸಾಧಿಸುವುದೇ ಆಗಿದೆ. ಇಂದಿನ ಒಕ್ಕೂಟ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಹಿಂದಿ ಭಾಶಿಕರ ಪ್ರಾಬಲ್ಯ ಹೆಚ್ಚಿ ಸ್ಥಳೀಯರು ಮೂಲೆಗುಂಪಾಗುತ್ತಿರುವುದನ್ನು ಗಮನಿಸಿದರೆ ಇದು ಖಚಿತವಾಗುತ್ತದೆ. ಹೀಗೆ ಮಾಡಲು ನೆರವಾದುದು ತ್ರಿಭಾಶಾ ಸೂತ್ರ. ಇದನ್ನು ಆಯುಧವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇಂತಹ ಅಪಾಯವನ್ನು ಅರಿತ ತಮಿಳು ನಾಡು ರಾಜ್ಯ ಸರ್ಕಾರವು ತ್ರಿಭಾಶಾ ಸೂತ್ರವನ್ನು ಒಪ್ಪದೆ ದ್ವಿಭಾಶಾ ಸೂತ್ರವನ್ನು ಮಾತ್ರ ಜಾರಿಗೆ ತಂದು ಹಿಂದಿಯನ್ನು ಹೊರಗಟ್ಟಿ ಅಪಾಯದಿಂದ ಪಾರಾಗಿದೆ. ಈಚೆಗೆ ಒಕ್ಕೂಟ ಸರ್ಕಾರ ಎಲ್ಲ ಆಡಳಿತ ವ್ಯವಹಾರವನ್ನು ಇಂಗ್ಲಿಶ್ ಮೂಲಕ ನಡೆಸುವುದಾಗಿ ಶಾಸನ ರೂಪಿಸಿದೆ. ನೂತನ ರಾಶ್ಟ್ರೀಯ ಶಿಕ್ಶಣ ನೀತಿಯಲ್ಲಿ ಪ್ರಸ್ತಾಪಿಸಿರುವ ತ್ರಿಭಾಶಾ ನೀತಿಯನ್ನು ವಿರೋಧಿಸುವುದಾಗಿ ಘೋಶಿಸಿದೆ. ಆ ಮೂಲಕ ಒಕ್ಕೂಟ ರಾಶ್ಟ್ರದಲ್ಲಿ ಒಂದು ದೃಢ ನಿರ್ಣಯವನ್ನು ಕೈಗೊಂಡಿರುವ ರಾಜ್ಯವಾಗಿ ತಮಿಳು ನಾಡು ಕಾಣಿಸುತ್ತಿದೆ.
ಆದರೆ ದಕ್ಶಿಣ ಭಾರತದಲ್ಲಿ ನಮ್ಮ ರಾಜ್ಯ ತ್ರಿಭಾಶಾ ಸೂತ್ರವನ್ನು ಒಪ್ಪಿಕೊಂಡಿತು. ಅದನ್ನು ಶಿಕ್ಶಣದಲ್ಲಿ ಅಳವಡಿಸಿಕೊಂಡು ಹಿಂದಿ ಕಲಿಕೆಗೆ ಜಾಗಮಾಡಿಕೊಟ್ಟಿತು. ಹೀಗೆ ಜಾಗ ಕಲ್ಪಿಸಿದ ಪರಿಣಾಮವಾಗಿ ಹಿಂದಿಯ ರಾಶ್ಟ್ರಭಾಶೆಯೆಂದು ಅಪಪ್ರಚಾರ ನಡೆಸಲಾಯಿತು. ಆ ಮೂಲಕ ಅದನ್ನು ಮತೀಯವಾದಿ ರಾಶ್ಟ್ರೀಯ ಸಿದ್ದಾಂತಗಳನ್ನು ಬೆಳೆಸಲು ಬಳಸಿಕೊಳ್ಳಲಾಯಿತು. ಹಾಗಾಗಿ ಇಂದು ಅನೇಕ ಕನ್ನಡಿಗರು ತಮ್ಮ ಹುಸಿ ರಾಶ್ಟ್ರೀಯತೆಯ ಸಂಕೇತವಾಗಿ ಹಿಂದಿಯನ್ನು ಭಾವಿಸಿ ಅದರ ಪರ ವಕಾಲತ್ತು ವಹಿಸುತ್ತಾರೆ. ಅದನ್ನು ದೇಶಭಕ್ತಿಯ ಸಂಕೇತವಾಗಿಸಿದ್ದಾರೆ. ಅದನ್ನು ಪ್ರಶ್ನೆ ಮಾಡುವವರನ್ನು ದೇಶದ್ರೋಹಿಗಳೆಂದು ಅಪಮಾನಿಸಲಾಗುತ್ತದೆ. ಅಂದರೆ ಹಿಂದಿ ವಿಚಾರದಲ್ಲಿ ಕನ್ನಡ ಭಾಶಿಕರ ನಡುವೆ ಎರಡು ಗುಂಪುಗಳಾಗಿ ವಿಭಜನೆಗೊಂಡಿದೆ. ಈ ಕೆಲಸವನ್ನು ಇಂಗ್ಲಿಶ್ ಮತ್ತು ಸಂಸ್ಕøತಗಳೂ ಮಾಡಿವೆ. ಇಂತಹ ಸ್ಥಿತಿ ನಿರ್ಮಾಣಗೊಳ್ಳಲು ವೇದಿಕೆ ರೂಪಿಸಿದ್ದೇ ಒಕ್ಕೂಟ ಸರ್ಕಾರದ ‘ತ್ರಿಭಾಶಾ ನೀತಿ’. ಈ ನೀತಿಯನ್ನು ಇಂದು ಬಲಪಂಥೀಯ ಶಕ್ತಿಗಳು ತಮ್ಮ ಹಿತಾಸಕ್ತಿಗೆ ತಕ್ಕಂತೆ ಬಳಸುತ್ತಿರುವ ಕಾರಣ ಅದರ ಪರವಾಗಿ ಹುಸಿಭಕ್ತಿಯಿಂದ ವಕಾಲತ್ತು ವಹಿಸುವವರ ಪ್ರಮಾಣವೂ ಹೆಚ್ಚಾಗಿದೆ. ಇದು ಕನ್ನಡದ ಅಸ್ಮಿತೆಯನ್ನೇ ಪ್ರಶ್ನೆ ಮಾಡುವಂತಹ ಸ್ಥಿತಿ ಸೃಶ್ಟಿಸಿದೆ. ಹುಸಿ ಧಾರ್ಮಿಕ ಮತ್ತು ಸಾಂಸ್ಕøತಿಕ ರಾಶ್ಟ್ರೀಯತೆಗಳ ಪ್ರಭಾವಕ್ಕೆ ಒಳಗಾದ ಜನರು ಕನ್ನಡದ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ.
ಹಾಗಾಗಿ ಇಂದು ತ್ರಿಭಾಶಾ ಸೂತ್ರದ ಬಗೆಗೆ ಮರುಚಿಂತಿಸಬೇಕಾದ ಸಂದರ್ಭ ನಿರ್ಮಾಣವಾಗಿದೆ. ಈ ಬಗೆಗೆ ಚರ್ಚೆ ನಡೆದು ತ್ರಿಭಾಶಾ ಸೂತ್ರವನ್ನು ಕೈಬಿಡಬೇಕಾಗಿದೆ. ಅಂದರೆ ತ್ರಿಭಾಶಾ ನೀತಿಯಿಂದ ಹಿಂದಿಯನ್ನು ಕೈಬಿಡಬೇಕಾಗಿದೆ. ಯಾಕೆಂದರೆ ಇಂದು ನಮಗೆ ಹಿಂದಿ ಮತ್ತು ಇಂಗ್ಲಿಶ್‍ಗಳ ನಡುವೆ ವಿಶೇಶ ಅಂತರವಿಲ್ಲ. ಎರಡೂ ಅಧಿಕಾರಸ್ಥರ ಭಾಶೆಗಳಾಗಿ ಹೇರಿಕೆಯಾಗುವಂತಹ ಭಾಶೆಗಳೆ. ಆದರೆ ಒಕ್ಕೂಟ ಸರ್ಕಾರದ ಜೊತೆಗೆ ಮತ್ತು ಅಂತಾರಾಶ್ಟ್ರೀಯ ವ್ಯವಹಾರಗಳಿಗೆ ಎರಡಕ್ಕೂ ವಸಾಹತುಶಾಹಿ ಅಧಿಕಾರದ ಹೇರಿಕೆಯಾಗಿ ಬಂದ ಇಂಗ್ಲಿಶ್ ಹೆಚ್ಚು ನಮ್ಮನ್ನು ಪ್ರಭಾವಿಸಿದೆ. ಅಂತಾರಾಶ್ಟ್ರೀಯವಾಗಿರೂ ಬಲಿಶ್ಟವಾಗಿದೆ. ಅಲ್ಲದೆ ಅದು ಇಂದು ತನ್ನ ಬಲಿಶ್ಟತೆಯ ಕಾರಣಕ್ಕಾಗಿ ಜನಪ್ರಿಯವೂ ಆಗಿದೆ. ಎಲ್ಲರೂ ಇಂಗ್ಲಿಶ್ ಅನ್ನು ಕಲಿತರೇ ಮಾತ್ರವೇ ತಮ್ಮ ಭವಿಶ್ಯ ಬೆಳಕಾಗುವುದೆಂದು ನಂಬಿದ್ದಾರೆ. ಆದ್ದರಿಂದಲೇ ಎಲ್ಲೆಡೆ ಇಂಗ್ಲಿಶ್ ಮಾಧ್ಯಮದ ಶಿಕ್ಶಣಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗೆ ಶತಮಾನಗಳಿಂದಲೂ ಬೆಳೆದು ಬಂದ ಕಾರಣ ಇಂಗ್ಲಿಶ್ ಇಂದು ಭಾರತೀಯ ಭಾಶೆಯಂತೆಯೂ ಬೆಳೆದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಇದನ್ನು ಭಾರತೀಯ ಭಾಶೆಗಳ ಪಟ್ಟಿಯಲ್ಲಿ ಸೇರಿಸಿದೆ. ಭಾರತೀಯ ಲೇಖಕರು ಇಂಗ್ಲಿಶ್ನಲ್ಲಿ ಬರೆಯುವುದೂ ನಡೆದಿದ್ದು ಇದರ ಪ್ರಮಾಣವೂ ಹೆಚ್ಚಿದೆ. ಅದು ಮಧ್ಯಮ ವರ್ಗದ ಪ್ರಭಾವಿ ಭಾಶೆಯೂ ಆಗಿದೆ. ಹಾಗೆಯೇ ಅಂತಾರಾಶ್ಟ್ರೀಯ ಮಾರುಕಟ್ಟೆಯ ಭಾಶೆಯೂ ಆಗಿದೆ. ಇದು ಇಂಗ್ಲಿಶ್ ನಮ್ಮ ನೆಲದಲ್ಲಿಯೂ ಆಳವಾಗಿ ಬೇರೂರಿರುವುದನ್ನು ತೋರಿಸುತ್ತದೆ.
ಇದಲ್ಲದೆ ತ್ರಿಭಾಶಾ ಸೂತ್ರವನ್ನು ದಿಕ್ಕರಿಸಿ ದ್ವಿಭಾಶಾ ಸೂತ್ರವನ್ನು ತಮಿಳು ನಾಡು ಒಪ್ಪಿದೆ. ಮತ್ತೆ ಅರುಣಾಚಲ ಪ್ರದೇಶ ಇಂಗ್ಲಿಶನ್ನು ತನ್ನ ಪ್ರಥಮ ಭಾಶೆಯೆಂದು ಪರಿಗಣಿಸಿದೆ. ಈಶಾನ್ಯ ಭಾರತದ ಇತರೆ ಕೆಲವು ರಾಜ್ಯಗಳು ಇಂಗ್ಲಿಶ್ ಅನ್ನು ಎರಡನೆಯ ಅಧಿಕೃತ ಆಡಳಿತ ಭಾಶೆಯನ್ನಾಗಿಸಿಕೊಂಡಿವೆ. ಆ ಮೂಲಕ ಹಿಂದಿ ಹೇರಿಕೆಯನ್ನು ನಿವಾರಿಸಿಕೊಂಡಿವೆ. ಅಲ್ಲದೆ ಶಿಕ್ಶಣವನ್ನು ವಿಪರೀತ ಖಾಸಗೀಕರಣ ಮಾಡಿದ ಪರಿಣಾಮ ಇಡೀ ದೇಶವು ಮತ್ತಶ್ಟು ಇಂಗ್ಲಿಶ್ಮಯಗೊಂಡಿದೆ. ಇದು ಹಿಂದಿಗಿಂತಲೂ ಇಂಗ್ಲಿಶ್ ಹೆಚ್ಚು ಜನಪ್ರಿಯವಾಗಿದೆ. ಹೀಗಿರುವಾಗ ಒಕ್ಕೂಟದ ಆಡಳಿತ ವ್ಯವಸ್ಥೆ ಮತ್ತು ಅಂತಾರಾಶ್ಟ್ರೀಯ ವ್ಯವಹಾರ ಎರಡಕ್ಕೂ ಇಂಗ್ಲಿಶ್ ಬಳಕೆ ಮಾಡಬಹುದು. ಮತ್ತು ಅದನ್ನು ಈಗಾಗಲೇ ಮಾಡಲಾಗುತ್ತಿದೆ. ಅಲ್ಲದೆ ಕನ್ನಡ ಒಂದೇ ಭಾಶೆ ಬಲ್ಲವರಿಗೆ ಉಳಿದೆಲ್ಲ ಭಾಶೆಗಳ ವ್ಯವಹಾರವೂ ಅಂತಾರಾಶ್ಟ್ರೀಯ ಭಾಶೆಯ ವ್ಯವಹಾರವೇ ಆಗಿರುತ್ತದೆ. ಹಾಗಾಗಿ ಒಕ್ಕೂಟ ಸರ್ಕಾರ ಜೊತೆಗಿನ ಮತ್ತು ಅಂತಾರಾಶ್ಟ್ರೀಯ ವ್ಯವಹಾರಕ್ಕೆ ಇಂಗ್ಲಿಶ್ ಒಂದನ್ನೇ ಬಳಸಬಹುದಾದುದರಿಂದ ಅಲ್ಲಿ ಹಿಂದಿಯ ಅಗತ್ಯವೇನಿದೆ?
ಸದ್ಯ ಕರ್ನಾಟಕವೂ ದ್ವಿಭಾಶಾ ನೀತಿಯನ್ನು ಅನುಸರಿಸಿದರೆ ಮಾತ್ರ ಹಿಂದಿ ಹೇರಿಕೆಯನ್ನು ನಿವಾರಿಸಿಕೊಳ್ಳಲು ಸಾಧ್ಯ. ಆಗಲೇ ಚರ್ಚಿಸಿದಂತೆ ನಮ್ಮ ಶಿಕ್ಶಣ ವ್ಯವಸ್ಥೆಯಲ್ಲಿ ಇಂಗ್ಲಿಶ್ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿರುವುದರಿಂದ ಅದು ಎಲ್ಲರ ಬೇಡಿಕೆಯ ಮತ್ತು ಪರಿಚಿತವಾದ ಭಾಶೆಯಾಗಿ ಬೆಳೆದಿದೆ. ಇದೇ ಭಾಶೆಯನ್ನು ಬಳಸಿ ತಮಿಳು ನಾಡಿನಂತೆ ಒಕ್ಕೂಟ ರಾಶ್ಟ್ರದ ಜೊತೆಗೆ ಕರ್ನಾಟಕ ರಾಜ್ಯವೂ ವ್ಯವಹಾರ ನಡೆಸಬಹುದು. ಆ ಮೂಲಕ ಹಿಂದಿಯನ್ನು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ ಅಧಿಕೃತ ವ್ಯವಹಾರ ಭಾಶೆಯ ಸ್ಥಾನದಿಂದ ಪಲ್ಲಟಗೊಳಿಸಬಹುದು. ಈ ಜಾಗದಿಂದ ಅದನ್ನು ಪಲ್ಲಟಗೊಳಿಸಿದರೆ ಸಹಜವಾಗಿಯೇ ಅದರ ಉಕ್ಕಿನ ಪಾದದ ತುಳಿತ ಕಡಿಮೆಯಾಗುತ್ತದೆ. ಬೇಕಿದ್ದರೆ ಆಸಕ್ತರು ತಮ್ಮ ಸ್ವಯಿಚ್ಚೆಯಿಂದ ಹಿಂದಿಯನ್ನು ಕಲಿತುಕೊಳ್ಳಬಹುದು ಇಲ್ಲವೇ ಬೇಡವಾದವರು ಕೈಬಿಡಬಹುದು.
ಹಿಂದಿಯನ್ನು ನಮ್ಮ ಶಿಕ್ಶಣ ವ್ಯವಸ್ಥೆಯಿಂದ ಹೊರಗಿಡದ ಹೊರತು ಅದರ ಪ್ರಭಾವದಿಂದ ಹೊರಬರಲಾಗದು. ಇಂಗ್ಲಿಶ್ ಅನ್ನೇ ಒಕ್ಕೂಟ ಸರ್ಕಾರದ ಮತ್ತು ಅಂತಾರಾಶ್ಟ್ರೀಯ ಉದ್ದೇಶಗಳಿಗೆ ಬಳಸುವುದರಿಂದ ಇಂಗ್ಲಿಶನ್ನು ಬಿಟ್ಟಂತೆಯೂ ಆಗುವುದಿಲ್ಲ. ಕುವೆಂಪು ಅವರು ಹೇಳಿದಂತೆ ‘ಬಹುಭಾಶೆಗಳಲ್ಲಿ ದ್ವಿಭಾಶೆ’ ಎಂಬ ತತ್ವವನ್ನು ಅನುಸರಿಸಿ ದ್ವಿಭಾಶಾ ನೀತಿಯನ್ನು ಜಾರಿಗೆ ತರಬಹುದು. ಆಗಲೇ ಹೇಳಿದಂತೆ ಈ ದಾರಿಯಲ್ಲಿ ಹಲವು ರಾಜ್ಯಗಳು ಮುನ್ನಡೆದಿವೆ. ಇದಲ್ಲದೆ ಉತ್ತರ ಭಾರತದ ರಾಜ್ಯಗಳು ತ್ರಿಭಾಶಾ ಸೂತ್ರದಡಿಯಲ್ಲಿ ದಕ್ಶಿಣ ಭಾರತದ ಯಾವ ಭಾಶೆಗಳನ್ನು ಕಲಿಸುತ್ತಿಲ್ಲ. ಹಿಂದಿ ಇಂಗ್ಲಿಶ್ಗಳ ಜೊತೆಗೆ ಸಂಸ್ಕøತವನ್ನು ಕಲಿಸುತ್ತಿವೆ. ಇದು ಸಂಪೂರ್ಣವಾಗಿ ಉತ್ತರದ ಯಜಮಾನಿಕೆಯ ಸಂಕೇತವಾಗಿದೆ. ದಕ್ಶಿಣದ ರಾಜ್ಯಗಳ ಬಗೆಗೆ ಉತ್ತರ ಭಾರತ ತೋರುತ್ತಿರುವ ಅಸಡ್ಡೆಯೂ ಆಗಿದೆ. ಇಲ್ಲಿಯವರೆಗೂ ತ್ರಿಭಾಶಾ ಸೂತ್ರದಡಿ ದಕ್ಶಿಣ ಭಾರತದ ಒಂದೂ ಭಾಶೆಯನ್ನು ಕಲಿಸದ ಉತ್ತರ ರಾಜ್ಯಗಳ ಜನರು, ದಕ್ಶಿಣದವರು ಹಿಂದಿಯನ್ನು ಕಲಿಯಲು ಯಾಕೆ ಒತ್ತಾಯಿಸಬೇಕು?
ಇಲ್ಲಿನ ಮುಖ್ಯ ಸಮಸ್ಯೆಯೆಂದರೆ, ಒಕ್ಕೂಟ ಸರ್ಕಾರದ ಸಂಸ್ಥೆಗಳಲ್ಲಿ ಹಿಂದಿಯನ್ನು ಕಡ್ಡಾಯ ಮಾಡುವುದರು ಒಂದೆಡೆ ನಡೆದರೆ, ಮತ್ತೊಂಡೆದೆ ರಾಜ್ಯಮಟ್ಟದಲ್ಲಿ ನೆಲೆಸಿದ್ದ ಬ್ಯಾಂಕುಗಳನ್ನು ರಾಶ್ಟ್ರೀಯ ಬ್ಯಾಂಕುಗಳಲ್ಲಿ ವಿಲೀನಗೊಳಿಸಲಾಗಿದೆ. ಹೀಗೆ ಮಾಡಿದ್ದರಿಂದ ಕನ್ನಡ ಬಲ್ಲವರು ನೇಮಕಾತಿಗಳಲ್ಲಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಉತ್ತರ ಭಾರತದ ಹಿಂದಿ ಪ್ರದೇಶದವರೇ ರಾಶ್ಟ್ರೀಕೃತ ಬ್ಯಾಂಕುಗಳಲ್ಲಿ ಎಲ್ಲೆಡೆ ಸೇರಿಕೊಂಡು ಮೇಲುಗೈ ಸಾಧಿಸುತ್ತಿದ್ದಾರೆ. ಇದರಿಂದ ನಮ್ಮ ನೆಲದಲ್ಲಿಯೇ ಇರುವ ಒಕ್ಕೂಟ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಕೆಲಸ ಗಳಿಸಿಕೊಳ್ಳಲಾಗದೆ ಸ್ಥಳೀಯರು ಅವಕಾಶ ವಂಚಿತವಾಗುತ್ತಿದ್ದಾರೆ. ಹಾಗಾಗಿ ಒಕ್ಕೂಟ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಬೇಕು. ಮತ್ತು ಅದೇ ವೇಳೆ ನಮ್ಮ ಶಿಕ್ಶಣ ವ್ಯವಸ್ಥೆಯಿಂದ ಹಿಂದಿಯನ್ನು ಹೊರಗಿಡುವಂತೆಯೂ ಕ್ರಮ ಕೈಗೊಳ್ಳಬೇಕು. ಆ ಮೂಲಕ ಸಾಂಸ್ಥಿಕವಾಗಿ ಹೇರಿಕೆಯಾಗುತ್ತಿರುವ ಹಿಂದಿಯನ್ನು ಹಿಮ್ಮೆಟ್ಟಿಸಬೇಕಾಗಿದೆ. ಆದ್ದರಿಂದ ನಮ್ಮ ಶಿಕ್ಶಣ ವ್ಯವಸ್ಥೆಯಲ್ಲಿ ಇದುವರೆಗೂ ಅಳವಡಿಸಿಕೊಂಡಿರುವ ತ್ರಿಭಾಶಾ ಸೂತ್ರವನ್ನು ಕೈಬಿಡುವಂತೆ ಮೊದಲು ಒತ್ತಾಯಿಸಬೇಕು. ದ್ವಿಭಾಶಾ ಸೂತ್ರವನ್ನು ಅಳವಡಿಸಿಕೊಂಡು ಕನ್ನಡ ಇಂಗ್ಲಿಶ್‍ಗಳ ವ್ಯವಹಾರ ನಡೆಸಬೇಕು. ಸದ್ಯಕ್ಕೆ ಇರುವುದು ಇದೊಂದೇ ದಾರಿ. ಹೊಸ ರಾಶ್ಟ್ರೀಯ ಶಿಕ್ಶಣ ನೀತಿಯನ್ನು ಜಾರಿಗೆ ತರುತ್ತಿರುವ ಈ ಹೊತ್ತಿನಲ್ಲಿ ‘ತ್ರಿಭಾಶಾ ಸೂತ್ರ’ವನ್ನು ಕೈಬಿಡುವಂತೆ ಒತ್ತಾಯಿಸಬೇಕು. ಈ ದಿಸೆಯಲ್ಲಿ ನಾವೆಲ್ಲರೂ ಇಂದು ಗಂಭೀರವಾಗಿ ಯೋಚಿಸಬೇಕಿದೆ. ಮತ್ತು ಸರ್ಕಾರ ನೀತಿಗಳು ಬದಲಾಗುವಂತೆ ಒತ್ತಡ ತರಬೇಕಿದೆ.