ಅದು 2002-2003ರ ಕಾಲ, ಬಿವಿಎಸ್ ಚಳುವಳಿಯ ಆರಂಭದ ದಿನಗಳವು. ಬಿವಿಎಸ್ ಚಳುವಳಿ ಎಂದರೆ ಈ ನಾಡಿನ ಶೋಷಿತ ಸಮುದಾಯಗಳಿಗೆ ತಮ್ಮ ನಿಜವಾದ ಚರಿತ್ರೆಯನ್ನು ಪರಿಚಯಿಸಿ ಸಾಮಾಜಿಕ ಕ್ರಾಂತಿಗೆ ಅಡಿಪಾಯ ಹಾಕಿದ ಚಳುವಳಿ. ‌ಫುಲೆ-ಅಂಬೇಡ್ಕರ್ ಚಳುವಳಿಯಾಗಿ ರೂಪುಗೊಂಡ ಇದು ಶೋಷಿತ ಸಮುದಾಯಗಳಿಗೆ ಬುದ್ಧ, ಬಸವ, ನಾರಾಯಣ ಗುರು, ತಂದೆ ಪೆರಿಯಾರ್, ಜ್ಯೋತಿ ಬಾಫುಲೆ, ಸಾವಿತ್ರಿ ಭಾಫುಲೆ, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಬಾಬಾಸಾಹೇಬ್ ಅಂಬೇಡ್ಕರ್ ವಿಚಾರಧಾರೆಯನ್ನು ಪ್ರತಿ ಹಳ್ಳಿ ಹಳ್ಳಿಗೆ ತಲುಪಿಸಿತು.‌ ಮಾತ್ರವಲ್ಲದೆ ಪ್ರತಿ ಶೋಷಿತ ಸಮುದಾಯಗಳಿಗೆ ಈ ಎಲ್ಲಾ ಪೂರ್ವಿಕರ ಜನ್ಮದಿನವನ್ನು ಮನೆಯ ಹಬ್ಬವನ್ನಾಗಿ ಆಚರಿಸುವ ರೂಢಿಯನ್ನು ಆರಂಭಿಸಿತು.‌ ಇದರ ಜೊತೆಗೆ ಪ್ರಮುಖವಾಗಿ ಸೇರ್ಪಡೆಗೊಂಡ ಮತ್ತೊಂದು ಹಬ್ಬ ಅಥವಾ ಉತ್ಸವವೇ ‘ಕೊರೆಗಾವ್ ವಿಜಯೋತ್ಸವ’.

ಅಸ್ಪೃಶ್ಯ ಸಮುದಾಯವೆಂದರೆ ಮೇಲ್ಜಾತಿಯ ಜನರ ದಬ್ಬಾಳಿಕೆಗೆ ನೋವುಂಡು, ಗುಲಾಮರಾಗಿ ಮಾತ್ರ ಬದುಕಿ ಸತ್ತು ಹೋದ ಸಮುದಾಯ ಮಾತ್ರ ಅಲ್ಲ, ಹತಾಶೆಯಿಂದ ಬದುಕುವ ಸಮುದಾಯ ಮಾತ್ರ ಅಲ್ಲ, ಸಂದರ್ಭ ಬಂದಾಗ ತಮ್ಮ ಸ್ವಾಭಿಮಾನದ ಉಳಿವಿಗಾಗಿ ಶೋಷಕರ ವಿರುದ್ಧ ತಿರುಗಿ ಬಿದ್ದು ಐತಿಹಾಸಿಕ ಗೆಲುವು ದಾಖಲಿಸಿದ ವೀರರ ಸಮುದಾಯ ಎಂಬ ಸಂದೇಶವನ್ನು ಕೊರೆಗಾವ್ ಚರಿತ್ರೆಯ ಮೂಲಕ ಬಿವಿಎಸ್ ಸಾರಿ ಸಾರಿ ಹೇಳಿತು.‌ ಇದರಿಂದಾಗಿ ಸಮುದಾಯಗಳೊಳಗೆ ಕೊರೆಗಾವ್ ನಲ್ಲಿ ನಡೆದ ಮಹಾಕಾಳಗದ ಬಗ್ಗೆ ಹೆಮ್ಮಯೂ, ಆತ್ಮಾಭಿಮಾನವೂ ಮೂಡುವಂತೆ ಬಿವಿಎಸ್ ಗ್ರಾಮ ಮಟ್ಟದಲ್ಲಿ ಕೆಲಸ ಮಾಡಿತು.‌ ಲೇಖಕಿ, ಸಂಶೋಧಕಿ ವಿಜಯಾ ಮಹೇಶ್ ಅವರ ಬರಹಗಳಂತೂ ಸಮುದಾಯದ ವೈಚಾರಿಕ ಅರಿವನ್ನು ವಿಸ್ತಾರಗೊಳಿಸಿದವು. ಪರಿಣಾಮವಾಗಿ ಹಳ್ಳಿ ಹಳ್ಳಿಗಳಲ್ಲಿ ಜನವರಿ 1 ರ ದಿನ ‘ಕೊರೆಗಾವ್ ವಿಜಯೋತ್ಸವ’ ಆಚರಣೆಗಳು ಪ್ರಾರಂಭವಾದವು.‌

ಹ್ಯಾಪಿ ನ್ಯೂ ಇಯರ್ ಅಂತ ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದ ದಲಿತ ಸಮುದಾಯ ‘ಹ್ಯಾಪಿ ಕೊರೆಗಾವ್ ವಿಕ್ಟರಿ ಡೇ’ ಎಂದು ಶುಭಾಶಯ ಕೋರುವುದನ್ನು ಸಂಭ್ರಮದಿಂದ ರೂಢಿಮಾಡಿಕೊಂಡಿತು. ಡಿಸೆಂಬರ್ 31 ರ ಮಧ್ಯರಾತ್ರಿ ಯುವಕರು, ಗ್ರಾಮಸ್ಥರೆಲ್ಲಾ ಸೇರಿ ಊರ ಮಧ್ಯೆ, ಪ್ರಮುಖ ಸ್ಥಳದಲ್ಲಿ ಅಥವಾ ಶಾಲೆಗಳ ಅಂಗಳದಲ್ಲಿ ಕೊರೆಗಾವ್ ಸ್ಮಾರಕದ ಚಿತ್ರ ಬರೆದು ಅದನ್ನು ಹೂಗಳಿಂದ ಅಲಂಕರಿಸಿ, ಸುತ್ತಲೂ ಮೇಣದ ಬತ್ತಿಯನ್ನು ಹಚ್ಚುವ ಮೂಲಕ ಆಚರಣೆ ಮಾಡುವುದು ಸಾಮಾನ್ಯವಾಯಿತು.‌ ಮರುದಿನ ಕೂಡ ಆ ನೆಪದಲ್ಲಿ ಶುಭಾಶಯಗಳನ್ನು ಕೋರುವುದು, ಸಿಹಿ ಹಂಚುವುದು ಹಬ್ಬದ ಭಾಗವಾಯಿತು. ಹೀಗೆ ಪ್ರತಿವರ್ಷ ಕೊರೆಗಾವ್ ವಿಜಯೋತ್ಸವ ಆಚರಿಸುತ್ತಾ ಬಂದ ಕಾರಣ ಬಹುತೇಕರಿಗೆ ಕೊರೆಗಾವ್ ವಿಜಯೋತ್ಸವದ ಬಗ್ಗೆ ಮಾಹಿತಿಯ ಜೊತೆಗೆ ಪ್ರಚಾರವೂ ಆಯಿತು.‌ ಕನ್ನಡದಲ್ಲಿ ಇದರ ಬಗ್ಗೆ ಬಹಳಷ್ಟು ಲೇಖನಗಳು ಕೂಡ ಪತ್ರಿಕೆಗಳಲ್ಲಿ ಪ್ರಕಟವಾದವು. ಜ್ಯೋತಿ ಬಾಫುಲೆ, ಸಾವಿತ್ರಿಭಾಫುಲೆ ವಿಚಾರಗಳನ್ನು ಅಂದು ಬಿವಿಎಸ್ ಪ್ರಚಾರ ಮಾಡಲು ಶುರುಮಾಡಿದ ಕಾರಣದಿಂದಾಗಿ ಇಂದು ಫುಲೆ ದಂಪತಿಗಳು ಕರ್ನಾಟಕದ ಪ್ರತಿ ಮನೆಮನೆಗೂ ತಲುಪಿದ್ದಾರೆ.‌ ಅಕ್ಷರದವ್ವ ಮಾತೆ ಸಾವಿತ್ರಿಭಾಫುಲೆಯವರಂತೂ ಇಂದು ಪ್ರತಿ ಶಾಲೆ, ಪ್ರತಿ ಮನೆಗಳನ್ನೂ ತಲುಪಿದ್ದಾರೆ ಮಾತ್ರವಲ್ಲ ಸರ್ಕಾರ, ವಿವಿಧ ಸಂಘ ಸಂಸ್ಥೆಗಳಲ್ಲಿ, ಶಿಕ್ಷಣ ಇಲಾಖೆಯಲ್ಲಿ ಆರಾಧನಾ ಪ್ರತಿಮೆಯಾಗಿ ಸ್ಥಾನ ಪಡೆದುಕೊಂಡಿದ್ದಾರೆ.‌

ಶಾಹು ಮಹಾರಾಜರು, ನಾಲ್ವಡಿ ಅವರು ಶೋಷಿತ ಸಮುದಾಯಗಳಿಗೆ ನೀಡಿದ ಪ್ರಾತಿನಿಧ್ಯ, ಇಂದಿನ ಮೀಸಲಾತಿಯ ಪರಿಕಲ್ಪನೆಯ ಬುನಾದಿಯ ಬಗ್ಗೆ ಬಿವಿಎಸ್ ಅರಿವು ಮೂಡಿಸಿದೆ. ತಂದೆ ಪೆರಿಯಾರರ ದ್ರಾವಿಡ ಚಳುವಳಿಯನ್ನು ಬಿವಿಎಸ್ ಕರ್ನಾಟಕದಲ್ಲಿ ತೀವ್ರವಾಗಿ ಪರಿಚಿಯಿಸಿದ ಕಾರಣಕ್ಕೆ ಇಂದು ಇಲ್ಲಿ ದ್ರಾವಿಡ ಚಳುವಳಿಯ ಉಗಮಕ್ಕೆ, ಬೆಳವಣಿಗೆಗೆ ನಾಂದಿಯಾಡಿದೆ. ಹೀಗೆ ಅಂದು ಬಿವಿಎಸ್ ನ ರಾಜ್ಯ, ಜಿಲ್ಲೆಗಳ, ತಾಲ್ಲೂಕುಗಳ, ಗ್ರಾಮಗಳ ವಿಭಾಗಗಳಲ್ಲಿ ನಡೆಯುತ್ತಿದ್ದ ಈ ಎಲ್ಲಾ ಪೂರ್ವಿಕರ ವಿಚಾರಗಳು ಇಂದು ಸಮಾಜದ ಮುಖ್ಯವಾಹಿನಿಗೆ ಬಂದು ತಲುಪಿವೆ, ಮಾನ್ಯತೆಯನ್ನೂ ಪಡೆದಿವೆ.‌‌ 2001 ರಿಂದ ಇಲ್ಲಿಯವರೆಗೆ ಸುಮಾರು ಎರಡು ದಶಕಗಳು ಕರ್ನಾಟಕ ಚಳುವಳಿಯ ಇತಿಹಾಸದಲ್ಲಿ ಬಿವಿಎಸ್ ಹುಟ್ಟು ಹಾಕಿದ ವಿಚಾರ ಕ್ರಾಂತಿಗೆ ವಿಶಿಷ್ಟ ಸ್ಥಾನವಿದೆ.‌
ಬಿವಿಎಸ್ ಅಷ್ಟರಮಟ್ಟಿಗೆ ಈ ನೆಲದಲ್ಲೊಂದು ವೈಚಾರಿಕ ಕ್ರಾಂತಿಯನ್ನು ಸದ್ದಿಲ್ಲದೆ ಮಾಡಿದೆ ಎಂದರೆ ಯಾರಿಗಾದರೂ ಅಚ್ಚರಿಯಾಗಬಹುದು.

ಬಿವಿಎಸ್ ಅಂದು ಕೈಗೆತ್ತಿಕೊಂಡ ಅರಿವಿನ ಜಾಗೃತಿಯ ಫಲವಾಗಿ ಇಂದು ಆ ಎಲ್ಲಾ ವಿಚಾರಗಳು ಎಲ್ಲಾ ಜನರ ವಿಚಾರಗಳಾಗಿ ಹೋಗಿವೆ.‌ ಪೂರ್ವಿಕರ ಬಗ್ಗೆ ಹಾಡುಗಳು, ನಾಟಕಗಳು, ಲೇಖನಗಳು, ಸಂಶೋಧನಾ ಬರಹಗಳು, ಕತೆಗಳು ವಿವಿಧ ರೀತಿಯ ಸಾಹಿತ್ಯ ಸೃಷ್ಟಿಯಾಯಿತು. ಅಲ್ಲದೆ ಟಿವಿ ಧಾರಾವಾಹಿ, ಸಿನಿಮಾಗಳು ಕೂಡ ನಿರ್ಮಾಣವಾಗುವ ಕಾಲ ಬಂದಿದೆ.‌ ಡಾ.ಅಂಬೇಡ್ಕರ್ ಅವರ, ಮಾತೆ ಸಾವಿತ್ರಿ ಬಾಫುಲೆಯವರ ವಿಚಾರಗಳನ್ನು ಆಧರಿಸಿದ ವಿವಿಧ ಸಿನಿಮಾಗಳು ಬಂದಿವೆ, ಬರುತ್ತಿವೆ. ಈಗ ಕೊರೆಗಾವ್ ಸರದಿ. ಜನಪ್ರಿಯ ನಿರ್ದೇಶಕ ನಾಗಶೇಖರ್ ಇಂತಹ ಒಂದು ಐತಿಹಾಸಿಕ ಪ್ರಯತ್ನಕ್ಕೆ, ಸಾಹಸಕ್ಕೆ ಕೈ ಹಾಕಿದ್ದಾರೆ.‌ ಛಲವಾದಿ ಕುಮಾರ್ ಎಂಬ ನಿರ್ಮಾಪಕರು ಇದಕ್ಕೆ ದೊಡ್ಡ ಮೊತ್ತದ ಬಂಡವಾಳ ಹೂಡುತ್ತಿದ್ದಾರೆ. ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಕೂಡ ಚಿತ್ರತಂಡದಲ್ಲಿ ಗುರ್ತಿಸಿಕೊಂಡಿದ್ದಾರೆ. ಚಿತ್ರಕ್ಕೆ ‘ಭೀಮಾ ಕೊರೆಗಾವ್’ ಎಂಬ ಹೆಸರಿಡಲಾಗಿದೆ. ಈ ಚಿತ್ರವು ಪ್ಯಾನ್ ಇಂಡಿಯಾ ಚಿತ್ರವಾಗಿ ವಿವಿಧ ಭಾಷೆಗಳಲ್ಲಿ ನಿರ್ಮಾವಾಗುತ್ತಿದೆ ಎಂದು ಹೇಳಲಾಗಿತ್ತಿದೆ. ಚಿತ್ರವು ಅದ್ಬುತವಾಗಿ ಮೂಡಿಬರಲಿ, ಬೆಳ್ಳಿ ತೆರೆಯ ಮೇಲೆ ದಮನಿತರ ಸ್ವಾಭಿಮಾನದ ಪ್ರತೀಕಾರದ ಶೌರ್ಯವು ಸಮಸ್ತ ಶೋಷಿತ ಸಮುದಾಯಗಳೊಳಗೆ ಕೆಚ್ಚನ್ನು, ಸ್ವಾಭಿಮಾನವನ್ನು ಪ್ರೇರೇಪಿಸಿ ವಿಮೋಚನೆಯ ಗುರಿಯತ್ತ ಮುನ್ನಡೆಸಲಿ, ಚಿತ್ರ ಯಶಸ್ವಿಯಾಗಲಿ ಎಂದು ಶುಭಹಾರೈಸೋಣ.
ಅಪ್ಪಗೆರೆ ಡಿ.ಟಿ.ಲಂಕೇಶ್

Leave a Reply

Your email address will not be published. Required fields are marked *