ನಮ್ಮದು ಪ್ರಜಾಪ್ರಭುತ್ವ ಇರುವ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಇಲ್ಲಿ ಪ್ರಜೆಗಳೇ ಪ್ರಭುಗಳು, ಪ್ರಜೆಗಳದೇ ಸರ್ಕಾರ… ಎಂದೆಲ್ಲಾ ಬಣ್ಣಿಸುತ್ತೇವೆ. ಆದರೆ ನಿಜಕ್ಕೂ ನಮ್ಮಲ್ಲಿ ಪ್ರಜಾಪ್ರಭುತ್ವ ಇದೆಯೇ? ಜನರಿಗೆ ಸಿಕ್ಕಿರುವ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ತಾನು ಈ ದೇಶದ ಪ್ರಜೆ, ತನ್ನ ಸಾಂವಿಧಾನಿಕ ಹಕ್ಕು ಚಲಾಯಿಸಿ ಪ್ರಜಾಸರ್ಕಾರ ರಚನೆಗೆ ಕಾರಣವಾಗಿದ್ದೇನೆ. ಇದು ನನ್ನ ಸರ್ಕಾರ ಎಂಬ ಗರ್ವ ಇರಬೇಕು. ಜನರ ಕೈಲಿರುವ ಮತದಾನ ಪವರ್ ಪಾಲಿಟಿಕ್ಸ್ ಗೆ ಬಹಳ ಪವರ್ ಫುಲ್ ಅಸ್ತ್ರ. ಅದನ್ನು ಪವರ್ ಫುಲ್ ಆಗಿ ಬಳಸುವ ಮೂಲಕವೇ ನಾವು ಸಶಕ್ತವಾದ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು. ಇದೇ ನಾವು ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವ ಬಗೆ. ಆದರೆ…
ಪ್ರಜಾಪ್ರಭುತ್ವ ವ್ಯವಸ್ಥೆ ಬಂದಾಗಿಂದಲೂ ದೇಶದಲ್ಲಿ ಶೇ.75 ಕ್ಕಿಂತ ಹೆಚ್ಚು ಮತದಾನ ಆಗುವುದೇ ಇಲ್ಲ. ಆರಂಭದ ಕಾಲದಲ್ಲಿ ಕೇವಲ 40% ಮತದಾನ ಮಾತ್ರ ನಡೆದಿದೆ. ಇದಕ್ಕೆ ಕಾರಣ ಜನರ ಅನಕ್ಷರತೆ, ಮತದಾನದ ಬಗ್ಗೆ ತಿಳುವಳಿಕೆಯ ಕೊರತೆಗಳು ಕಾರಣ ಎಂದು ಹೇಳಲಾಗುತ್ತಿತ್ತು. ಬರಬರುತ್ತಾ ವಿವಿಧ ರೀತಿಯ ಸುಧಾರಣಾ ಕ್ರಮಗಳಿಂದ ಮತದಾನ ಈಗ 75% ತನಕ ಏರಿಕೆ ಕಂಡಿದೆ. ಈ ಏರಿಕೆ ಸಹ ವಿದ್ಯಾವಂತರಿಂದ ಆಗಿರುವಂತಾದ್ದಲ್ಲ! ಈಗಲೂ ಗ್ರಾಮಾಂತರ ಪ್ರದೇಶದ ನಿರಕ್ಷರಿಗಳಿಂದಲೇ ಇಷ್ಟು ಪ್ರಮಾಣದ ಮತದಾನ ಆಗುತ್ತಿರುವುದು.
ನಗರ ಪ್ರದೇಶದ ಅಕ್ಷರಸ್ಥ ಮತದಾರರು. ಈಗಲೂ ಪ್ರಜಾಪ್ರಭುತ್ವ ವ್ಯವಸ್ಥೆಯ ಈ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸೋದೇ ಇಲ್ಲ! ದುರಂತವೆಂದರೆ ಪ್ರಜಾಪ್ರಭುತ್ವದ ಪವರ್ ಪಾಲಿಟಿಕ್ಸ್ ನ ಸಂಪೂರ್ಣ ಲಾಭ ಪಡೆಯುವವರೇ ಈ ಉಡಾಳರೂ ಬೇಜವಾಬ್ದಾರಿಗಳೂ ಆದ ಅಕ್ಷರಸ್ಥರು! ತಮ್ಮ ಹೊಲಮನೆ ಕೂಲಿನಾಲಿ ಕೆಲಸದ ನಡುವೆಯೂ ಸಮಯ ಮಾಡಿಕೊಂಡು, ಬಿಸಿಲೋ ಮಳೆಯೋ ಇನ್ನೇನೋ ಸಂಕಷ್ಟದ ನಡುವೆಯೂ ಸರತಿಯಲ್ಲಿ ಕಾದು ನಿಂತು ತಪ್ಪದೆ ಮತದಾನದ ಹಕ್ಕನ್ನು ಚಲಾಯಿಸುವ ಗ್ರಾಮಾಂತರ ಪ್ರದೇಶದ ಜನರಿಗೆ ಮಾತ್ರ ಸರ್ಕಾರದ ಬಹುತೇಕ ಸೌಲಭ್ಯಗಳು ಲಭ್ಯವಾಗುವುದೇ ಇಲ್ಲ!
ಓಟಿಗಾಗಿ ಅಭ್ಯರ್ಥಿಗಳು ನೀಡುವ ಒಂದಷ್ಟು ಪುಡಿಗಾಸಷ್ಟೇ ನಮ್ಮ ಓಟಿಗಿರುವ ಬೆಲೆ ಎಂದು ಭಾವಿಸುವ ಬಹುಜನ ಅನಕ್ಷರಸ್ಥ ಭಾರತೀಯರು ಭಾವಿಸಿದ್ದಾರೆ. ಇಂತಹ ಅನಕ್ಷರಸ್ಥರ ಓಟಿನಿಂದ ಪವರ್ ಗೆ ಬರುವ ಸರ್ಕಾರಗಳು, ಪವರ್ ಸಿಕ್ಕ ನಂತರ ಮಾತ್ರ ಮತದಾನವನ್ನೇ ಮಾಡದ ಬೇಜವಾಬ್ದಾರಿ ಅಕ್ಷರಸ್ಥರ, ಐಟಿ, ಬಿಟಿ ತರದ ನೌಕರಶಾಹಿಗಳ, ಕಾರ್ಪೊರೇಟ್ ಜನರ ಸೇವೆಗೆ ಕಟಿಬದ್ದವಾಗಿ ಕೆಲಸ ಮಾಡುತ್ತವೆ! ಇದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹವಲ್ಲವೇ?
ಶೇ.25 ರಿಂದ 30ರಷ್ಟು ಮತದಾನ ಮಾಡದ, ಪ್ರಜಾಪ್ರಭುತ್ವದಲ್ಲಿ ಭಾಗವಹಿಸದ ಬೇಜವಾಬ್ದಾರಿ ಜನರಿಗೆ ಸರ್ಕಾರದ ಸವಲತ್ತುಗಳನ್ನು ನಿರಾಕರಿಸಬೇಕು. ತಿಳಿದೂ ತಿಳಿದು ಮತದಾನದಲ್ಲಿ ಭಾಗವಹಿಸದ ಇಂತಹವರ ಕೃತ್ಯವನ್ನು ದೇಶದ್ರೋಹವೆಂದೇ ಪರಿಗಣಿಸಬೇಕು. ಅವರಿಗೆ ನೀಡಿರುವ ಎಲ್ಲಾ ಸರ್ಕಾರಿ ದಾಖಲೆಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕು.
ಇಂತಹ ಬೇಜವಾಬ್ದಾರಿ ಜನರೇ ಆಳುವ ಸರ್ಕಾರಗಳನ್ನು ನಿಯಂತ್ರಿಸುತ್ತಾರೆ… ಸರ್ಕಾರದ ತೀರ್ಮಾನಗಳನ್ನು ಟೀಕಿಸುತ್ತಾರೆ… ಬಡಜನರಿಗೆ ನೀಡುವ ಒಂದೆರಡು ಸವಲತ್ತುಗಳನ್ನು ವ್ಯಂಗ್ಯಮಾಡುತ್ತಾರೆ… ತಮ್ಮ ಮೊಹಲ್ಲಾಗಳಲ್ಲಿ ಎಂದಾದರೊಂದು ದಿನ ಕಸ ವಿಲೇವಾರಿಯಾಗದಿದ್ದರೆ… ಒಂದು ಘಳಿಗೆ ಕರೆಂಟ್ ಹೋದರೆ, ನೀರು ಬಾರದಿದ್ದರೆ ಬೊಬ್ಬೆ ಹೊಡೆಯುತ್ತಾರೆ. ಸರ್ಕಾರವನ್ನು, ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ! ಪವರ್ ಪಾಲಿಟಿಕ್ಸ್ ಪ್ರಜಾಪ್ರಭುತ್ವದಲ್ಲಿಯೇ ಭಾಗವಹಿಸದ ಇಂತಹ ಠಕ್ಕರೇ ದೇವರು, ಧರ್ಮ, ಜಾತಿ, ಇತ್ಯಾದಿ ಹೆಸರಲ್ಲಿ ಗಲಭೆ ಸೃಷ್ಟಿಸೋರು. ಇಂತಹ ಮತಗಳ್ಳರೇ ಆಹಾರ, ಆಚಾರ, ಸಂಪ್ರದಾಯಗಳ ಹೆಸರಲ್ಲಿ ಸಮಾಜದಲ್ಲಿ ಶಾಂತಿ ಕದಡೋರು. ಓಟನ್ನೇ ಚಲಾಯಿಸದೆ, ಪ್ರಜಾತಂತ್ರಕ್ಕೆ ದ್ರೋಹ ಬಗೆವ ಇವರು ಇಷ್ಟು ಪವರ್ ತೋರುತ್ತಾರೆ!
ಮತದಾನ ಮಾಡದವರು ಯಾವುದೇ ಸವಲತ್ತುಗಳಿಗೆ ಅನರ್ಹರು ಎಂದು ಘೋಷಿಸಿದರೆ ಮಾತ್ರ ಇವರಿಗೆ ಬುದ್ದಿ ಬರೋದು. ಇಂತಹ ಉಡಾಳರಿಂದಲೇ ಪುಡಾರಿಗಳು ಕೊಬ್ಬುತ್ತಾರೆ. ಇದಕ್ಕೆ ಅವಕಾಶ ಕೊಡುವುದನ್ನು ನಿಲ್ಲಿಸಬೇಕು. ಓಟು ಹಾಕುವ ಪ್ರಜೆಗಳಿಗೆ ಹೆಚ್ಚೆಚ್ಚು ಸರ್ಕಾರದ ಸೌಲಭ್ಯಗಳು ಸಿಗಬೇಕು. ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕಿಗಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬ್ರಿಟೀಷ್ ಸರ್ಕಾರದಲ್ಲಿ ಹೋರಾಟ ಮಾಡಿ ಸಫಲರಾಗಿದ್ದಾರೆ. “ನಿಮಗೆ ದೊರಕಿರುವ ಈ ಮತವು ನಿಮ್ಮ ಭವಿಷ್ಯ ರೂಪಿಸುವ ಅಸ್ತ್ರವಾಗಿದೆ. ಇದರ ಮೌಲ್ಯವು ಕೋಟಿಗಟ್ಟಲೆಯಾಗಿದೆ. ಜಾಣ್ಮಯಿಂದ ಬಳಸಿ ನಿಮ್ಮ ಅಭಿವೃದ್ದಿಯನ್ನು ಕಂಡುಕೊಳ್ಳಿ” ಎಂದು ಕರೆಕೊಟ್ಟಿದ್ದರು ಬಾಬಾಸಾಹೇಬರು.
ಇದೇ ಒಂದು ಓಟಿನ ಹಕ್ಕಿಗಾಗಿ ದಕ್ಷಿಣ ಆಫ್ರಿಕಾದ ಜನ ಸತತ ಮೂವತ್ತು ವರ್ಷಗಳ ಕಾಲ ರಕ್ತಪಾತದ ಹೋರಾಟ ಮಾಡಿದ್ದಾರೆ. ಹಲವು ಜನರು ಈ ಹೋರಾಟದಲ್ಲಿ ಹತರಾಗಿದ್ದಾರೆ. ತನ್ನದೇ ನೆಲದಲ್ಲಿ ತನ್ನದೇ ಜನರ ಓಟಿನ ಹಕ್ಕಿಗಾಗಿ ನೆಲ್ಸನ್ ಮಂಡೇಲ ಹೋರಾಟ ಮಾಡಿದ ಸಲುವಾಗಿ ಸತತ 26 ವರ್ಷಗಳ ಸೆರಮನೆ ಶಿಕ್ಷೆ ಅನುಭವಿಸಿದ್ದರು. ಕೊನೆಗೂ ಅವರಿಗೆ ಹಲವರ ಬಲಿದಾನದ ಫಲವಾಗಿ ಓಟು ಹಾಕುವ ಹಕ್ಕು ಸಿಕ್ಕು ನೆಲ್ಸನ್ ಮಂಡೇಲಾರೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರೂ ಆದದ್ದು ಪ್ರಜಾಪ್ರಭುತ್ವದ ಅದ್ಬುತ. ಇದಕ್ಕೆ ಭಾರತದ ಸಂವಿಧಾನವೇ ಅವರಿಗೆ ಪ್ರೇರಣೆ ಎಂಬುದನ್ಬು ಮಂಡೇಲಾ ಭಾರತ ಭೇಟಿಯ ಸಮಯದಲ್ಲಿ ಹೇಳಿದ್ದರು. ಅದೂ ಅಲ್ಲದೆ ಭಾರತದಂತಹ ಸಂವಿಧಾನವೇ ಬೇಕೆಂದು ಭಾರತೀಯ ತಜ್ಞರಿಂದಲೇ ಸಂವಿಧಾನ ಬರೆಸಿಕೊಂಡರು.
ಇದು ಸಂವಿಧಾನದ ಪವರ್. ಇದೇ ಪ್ರಜಾಪ್ರಭುತ್ವದ ಪವರ್. ಇದನ್ನು ಪ್ರಜೆಗಳು ಸರಿಯಾಗಿ ಬಳಸಿದರೆ ಭಾರತಕ್ಕೆ ಎಂತಹ ಸರ್ಕಾರ ಬೇಕು, ಎಂತಹ ಸರ್ಕಾರ ಬೇಡ ಎಂಬುದನ್ನು ತೀರ್ಮಾನಿಸಬಹುದು. ಯಾವುದೇ ರಾಜಕಾರಣಿಯನ್ನೂ ಪ್ರಜೆಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಹಾಗೆ ಮಾಡಬಹುದು. ದೇಶವನ್ನು ಅಭಿವೃದ್ದಿಯ ಉತ್ತುಂಗಕ್ಕೇರಿಸಬಹುದು. ದೇಶದ ಅಭಿವೃದ್ದಿ ಇರುವುದು ನಮ್ಮದೇ ಕೈಲಿ. ಇದೇ ಪ್ರಜಾಪ್ರಭುತ್ವದ ಬ್ಯೂಟಿ ಮತ್ತು ಡೈನಮಿಸಂ ಎಂದರೆ.
–ಡಾ.ಚಮರಂ
[…] ಡಾ. ಚಮರಂ ಅವರ ಈ ಲೇಖನವನ್ನೂ ಓದಿ: ಮತದಾನ ಮಾಡದವರಿಗೆ ಸವಲತ್ತುಗಳಿಲ್ಲ ಎಂಬ ಕಾ… […]