ಸೂರ್ಯ ಮತ್ತು ಚಂದ್ರ ಜೀವವಿಕಾಸದ ನಿರ್ವಾಹಕರು ವಿಶೇಷವಾಗಿ ಮಾನವ ಕುಲದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಹಂದರದ ಗಟ್ಟಿ ಜೀವಸಂಜೀವನಿಗಳು, ಬಹುತೇಕ ನೆಲದ ರಾಜವಂಶಗಳು ತಮ್ಮನ್ನು ತಾವು ಎನಿಸಿಕೊಳ್ಳಲು ಸೂರ್ಯವಂಶ ಮತ್ತು ಚಂದ್ರ ವಂಶಗಳ ಎಂದೇ ಕರೆದುಕೊಳ್ಳುತ್ತಿದ್ದವು, ಇವೆರೆಡೂ ವಂಶಗಳ ಸಾಂಗತ್ಯ ಬೆಳೆಸಲು ಇತರೆ ರಾಜವಂಶಗಳು ಹಾತೊರೆಯುತ್ತಿದ್ದವು, ಏಕೆಂದರೆ ಸೂರ್ಯ-ಚಂದ್ರರು ಅಜರಾಮರರು ಎಂದು, ಮಹಾನ್ ಪರಾಕ್ರಮಿ ಗಳೆಂದು. ಸ್ವಾಭಾವಿಕವಾಗಿಯೇ ಇವೆರೆಡೂ ಧೃಗ್ಗೋಚರ ಅದ್ಭುತಗಳ ಕುರಿತು ಸಹಸ್ರಾರು ಚಿಂತನೆ, ಕಥನಾಕ, ಕಾವ್ಯ, ಪುರಾಣಗಳು ಹುಟ್ಟಿಕೊಂಡವು. ಪುರಾಣ ವೈಭವ ಅನುಭವಿಸಲು ಮಾನವನೆಂಬ ಕುತೂಹಲಿ ಲಾಗಾಯ್ತಿನಿಂದಲೂ ಹಾತೊರೆಯುತ್ತಲೇ ಇದ್ದ, ಪ್ರಯೋಗಗಳನ್ನು ನಡೆಸುತ್ತಲೇ ಇದ್ದ, ಅದರ ಫಲವಾಗೇ ಖಗೋಳ ವಿಜ್ಞಾನ ಬೃಹದಾಕಾರವಾಗಿ ಬೆಳೆದು ಎಲ್ಲಾ ವಿಜ್ಞಾನಗಳನ್ನು ಜೊತೆಜೊತೆಯಾಗಿಯೇ ಬೆಳಸಿ ಎಲ್ಲಾ ಪುರಾಣ ಮಿಥ್ಯೆಗಳನ್ನ ಒಡೆದು ನವನವೀತ ಜ್ಞಾನ ಗಳನ್ನು ಉಣಬಡಿಸಿತು ಅದರ ಫಲಶೃತಿಯೇ ಚಂದ್ರನಂಗಳದಮೇಲೆ ಮಾನವನ ದೈತ್ಯ ಹೆಜ್ಜೆ ಊರಿ ಬಾವುಟ ನೆಟ್ಟು ಚಂದ್ರಾಧಿಪತಿಯಾದ.
ನಾವು ಕೂಡ ವಿಕ್ರಂಸಾರಾಬಾಯಿ, ಸತೀಶ್ ಧವನ್,ಸಿ.ವಿರಾಮನ್ ಅಂತಹ ಧೀಮಂತ ವಿಜ್ಞಾನಿಗಳ ಪರಿಶ್ರಮದಿಂದ ನಿಧಾನವಾಗಿ ನಮ್ಮ ಬಡತನಕೊಡವಿ ವಿಜ್ಞಾನದ ಮೇಲೆ ಹಿಡಿತ ಸಾಧಿಸುತ್ತಾ ನಭಾಂಗಣದ ಹಿಡಿತ ಸಾಧಿಸಿದೆವು, ಮೊನ್ನೆ ಮೊನ್ನೆ ಚಂದ್ರನ ನೆಲಜ ಮೇಲೂ ತಿರಂಗ ನೆಟ್ಟೆವು.
ಪ್ರಗ್ಯಾನ್ ರೋವರ್ ಚಂದ್ರನ ನೆಲದಮೇಲೆ ಏಕಾಂಗಿಯಾಗಿ ತೆವಳುತ್ತಾ ವಿಕ್ರಂ ಮುಖಾಂತರ ಚಂದ್ರನ ಒಳಗುಟ್ಟನ್ನು ತಿಳಿಸುತ್ತಿದೆ…
ಇಂದು ಸೂರ್ಯನಂತರಂಗದ ಮರ್ಮತಿಳಿಯಲು ಆದಿತ್ಯ -ಎಲ್1 ಸಿಧ್ಧವಾಗಿದೆ
ಚಂದ್ರನಿಗೆ ನಾನೇನು ಕಡಿಮೆ ಎಂದು.
ಶ್ರೀಹರಿಕೋಟದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇಂದು ಶನಿವಾರ ಬೆಳಿಗ್ಗೆ 11.50 ಕ್ಕೆ ಪಿಎಸ್ಎಲ್ವಿ-ಸಿ 57 ರಾಕೆಟ್ ಮೂಲಕ ಆದಿತ್ಯ ಎಲ್1 ಉಡಾವಣೆ ನಡೆಯಲಿದೆ.
ಇದರಲ್ಲಿ ಸೂರ್ಯನ ಅಧ್ಯಯನ ನಡೆಸಲು ಒಟ್ಟು ಏಳು ಉಪಕರಣಗಳು (ಪೇಲೋಡ್) ಇರಲಿವೆ.
ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಾಂಗ್ರೇಜ್ ಎಲ್ ಒನ್ ಬಿಂದುವಿನಲ್ಲಿ ಆದಿತ್ಯ ಎಲ್-1 ಅಂತರಿಕ್ಷ ವೀಕ್ಷಣಾಲಯವನ್ನು (ಅಬ್ಬರ್ವೇಟರಿ) ಇರಿಸಿಸೂರ್ಯನ ಹೊರಾಂಗಣದ ಆಟವನ್ನು ಗಮನಿಸಿ ನಮಗೆ ತಿಳಿಸುತ್ತದೆ.
ಲಾಂಗ್ರೇಜ್ ಬಿಂದು ಎಂದರೆ ಭೂಮಿಗೂ ಗುರುತ್ವ ಇದೆ ಹಾಗೆ ಸೂರ್ಯನಿಗೂ ಗುರುತ್ವ ಇದೆ.. ಇವೆರೆಡೂ ಕಾಯಗಳು ಪರಸ್ಪರ ಗುರುತ್ವಾಕರ್ಷಣ ಶಕ್ತಿಯ ಕಾರಣಕ್ಕೇನೆ ಅಸ್ತಿತ್ವ ಪಡೆದಿರುವುದು, ಆ ಶಕ್ತಿಗಳ ಒಡೆತನ ಗಳಿಸುವ ಕಾರಣಕ್ಕೇನೆ ಶಕ್ತಿಸಂಗ್ರಹಿಸಿರುವುದು, ಜೀವಮಂಡಲ ಸೃಷ್ಟಿಸಿಕೊಂಡಿರುವುದು. ಪರಸ್ಪರ ಗುರುತ್ವಾಕರ್ಷಣೆಯ ಸಮಸ್ಥಿತಿ ಒಂದು ಬಿಂದುವಿನಲ್ಲಿ ಗುರುತ್ವ ಸಮ ಸ್ಥಿತಿಯಲ್ಲಿ ಇರುತ್ತದೆ ಆ ಸಮ ಸ್ಥಿತಿ ಬಿಂದುವೇ ಲಾಂಗ್ರೇಜ್ ಬಿಂದು.
ಆ ಬಿಂದು ಭೂಮಿಯಿಂದ ಸುಮಾರು 15ಲಕ್ಷ ಕಿಲೋಮೀಟರ್ ಎತ್ತರದೂರದಲ್ಲಿದೆ… ಅದು ಭೂಮಿ -ಸೂರ್ಯನ ನಡುವಿನ ಅಂತರ ಸರಾಸರಿ ಸುಮಾರು 15ಕೋಟಿ ಕಿಲೋಮೀಟರು ಹಾಗೂ ಗಾತ್ರಗಳ ಸರಾಸರಿ 100ಕ್ಕೂಅಧಿಕ(ಸೂರ್ಯನ ಅಗಲ 1ಲಕ್ಷದ 39ಸಾವಿರ ಕಿ.ಮಿ, ಭೂಮಿ ಅಗಲ 127442) ಕಿಲೋಮೀಟರ್, ಸೂರ್ಯನೊಳಗೆ ಸುಮಾರು 13ಲಕ್ಷಭೂಮಿ ತುಂಬಬಹುದು) ಗಳ ಸೆಳತದ ಸಮಸ್ಥಿತಿ ಪ್ರದೇಶ.
ಇಲ್ಲಿ ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ಗಮನಿಸಲು ಸೂಕ್ತ ಸ್ಥಳ (ಸೂರ್ಯ ಭೂಮಿ ತರ ತಂಪುಕಾಯ ಅಲ್ಲ ಕೋಟ್ಯಾಂತರಡಿಗ್ರಿ ಶಾಖ ಉತ್ಪತ್ತಿ ಮಾಡುವ ಸೌರ ಒಲೆ, ಹಾಗಾಗಿ ಅಲ್ಲಿ ಇಳಿಯುವುದಿರಲಿ ಬಡ್ಡೆಗೂ ಹೋಗಲಾಗುವುದಿಲ್ಲ)
ಇಂದು ಹಾರಲಿರುವ ಆದಿತ್ಯ ಇದನ್ನೆಲ್ಲ ಗಮನಿಸುತ್ತದೆ. ನಾಲ್ಕು ಪ್ರತ್ಯೇಕ ಉಪಕರಣಗಳಿಂದ ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ (ಕೊರೋನಾ) ಅಧ್ಯಯನವನ್ನು ನಿರಂತರವಾಗಿ ನಡೆಸಲಿದೆ.
ಅದರಲ್ಲಿನ ಬೇರೆ ಬೇರೆ ಮೂರು ಉಪಕರಣಗಳು ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ನಡೆಸುತ್ತವೆ.
ಆದಿತ್ಯ ಎಲ್1 ಅನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ನಮ್ಮದೇ ವೀಕ್ಷಣಾಲಯ.
ಚಂದ್ರಯಾನ ತಂದುಕೊಟ್ಟಿ ಖುಷಿ, ಗೌರವ, ವಿಜ್ಞಾನ ವಿಜಯವನ್ನು ಈ ನಮ್ಮ ಆದಿತ್ಯನೂ ತಂದುಕೊಡಲಿ.
ಸೂರ್ಯ-ಚಂದ್ರರ ರಮ್ಯಕತೆಗೆ ವಿಜ್ಞಾನದೀವಿಗೆ ನವೋದಯದ ಕವಿತೆ ಹಾಡಲಿ.
- ಅಹಮದ್ ಹಗರೆ
ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ