ಕರ್ನಾಟಕದಲ್ಲಿ ದೊಡ್ಡಮಟ್ಟದ ವಿವಾದವಾಗಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮುಜುಗರಕ್ಕೆ ಕಾರಣವಾಗಿದ್ದ ಹಿಜಾಬ್ ವಿವಾದ, ಈಗ ಬುರ್ಖಾ ರೂಪದಲ್ಲಿ ತೆಲಂಗಾಣಕ್ಕೆ ಕಾಲಿಟ್ಟಿದೆ.
ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಬುರ್ಖಾ ತೆಗೆಯುವಂತೆ ಒತ್ತಾಯಿಸಿದ್ದಲ್ಲದೆ, ಪುರುಷ ಸಿಬ್ಬಂದಿಗಳ ಮುಂದೆಯೇ ತೆಗೆಯುವಂತೆ ಒತ್ತಡ ಹೇರಲಾಗಿದೆ ಎಂದು ಅಲ್ಲಿನ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಹೈದರಾಬಾದ್‌ನ ಸಂತೋಷ್ ನಗರದಲ್ಲಿರುವ ಕೆ.ವಿ. ರಂಗ ರೆಡ್ಡಿ ಪದವಿ ಕಾಲೇಜಿನಲ್ಲಿ ಮಧ್ಯಂತರ ಪೂರಕ ಪರೀಕ್ಷೆ ವೇಳೆ ಈ ಪ್ರಕರಣ ವರದಿಯಾಗಿದೆ. ಕಾಲೇಜಿನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಗಳ ಮಾಡಿದ ಎಡವಟ್ಟಿನಿಂದಾಗಿ ಬುರ್ಖಾಧಾರಿ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವುದು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಡ್ಡಾಯವಾಗಿ ಬುರ್ಖಾ ತೆಗೆದು ಪರೀಕ್ಷೆಗೆ ಬರೆಯಬೇಕು ಎಂಬ ನಿಯಮ ಬೇರೆ ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ಇಲ್ಲ. ಆದರೆ, ಈ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
‘ಪುರುಷ ಸಿಬ್ಬಂದಿಯ ಮುಂದೆಯೇ ಬುರ್ಖಾ ತೆರವು ಮಾಡುವಂತೆ ನಮ್ಮನ್ನು ಒತ್ತಾಯಿಸಲಾಯಿತು. ತೆರವು ಮಾಡಲು ಸ್ವಲ್ಪ ಸಮಯ ನೀಡುವಂತೆ ಮನವಿ ಮಾಡಿದರೂ ಕಾಲೇಜು ಆಡಳಿತ ಪರಿಗಣಿಸಲಿಲ್ಲ’ ಎಂದು ವಿದ್ಯಾರ್ಥಿನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಅಲಿ ಈ ಕುರಿತು ಪ್ರತಿಕ್ರಿಯಿಸಿ, ‘ಕೆಲವು ಮುಖ್ಯ ಶಿಕ್ಷಕರು ಅಥವಾ ಪ್ರಾಂಶುಪಾಲರು ಈ ರೀತಿ ಮಾಡುತ್ತಿದ್ದಾರೆ. ಆದರೆ, ಸಂಪೂರ್ಣವಾಗಿ ಜಾತ್ಯತೀತವಾಗಿರುವುದು ನಮ್ಮ ಧೋರಣೆ, ಜನರು ತಾವು ಬಯಸಿದ ಬಟ್ಟೆಗಳನ್ನು ತೊಡಬಹುದು. ಆದರೆ, ಯುರೋಪಿಯನ್ನರ ಉಡುಪುಗಳನ್ನು ಧರಿಸುವುದು ಸರಿಯಲ್ಲ. ನಾವು ಭಾರತೀಯ ವಸ್ತ್ರಗಳನ್ನೇ ಧರಿಸಬೇಕು. ಬುರ್ಖಾ ಹಾಕಿಕೊಳ್ಳಬಾರದು ಎಂದು ಎಲ್ಲಿಯೂ ಬರೆದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ.