ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿಗಳಲ್ಲಿ ನಿರುದ್ಯೋಗಿ ಭತ್ಯೆಯೂ ಒಂದು. ಮೊದಲಿಗೆ ಇದು ನಿರುದ್ಯೋಗಿ ಯುವಕರಿಗೆ ಶಾಶ್ವತವಾದ ಆಶಾಕಿರಣವಲ್ಲದಿದ್ದರೂ ಟೆಂಪರರಿ ರಿಲೀಫ್ ಆಗಿರುವುದು ಖಚಿತ.
ಇಲ್ಲಿನ ಮಾಧ್ಯಮಗಳು ಊಳಿಡುವಂತೆ ಇದು ಸರ್ಕಾರಕ್ಕೆ ಅಥವಾ ದೇಶದ ಜಿಡಿಪಿಗೆ ಯಾವುದೇ ರೀತಿಯ ಧಕ್ಕೆ ಉಂಟುಮಾಡುವುದಿಲ್ಲ. ಈ ಮಾಧ್ಯಮಗಳು ಪಾಕಿಸ್ತಾನ, ಶ್ರೀಲಂಕಾ ಮುಂತಾದ ದೇಶಗಳ ಗುಮ್ಮಗಳನ್ನು ತೋರಿಸಿ, ಭಾರತವೂ ಹಾಗಾಗಿ ಬಿಡುತ್ತದೆ, ಹೀಗಾಗಿ ಬಿಡುತ್ತದೆ ಎನ್ನುತ್ತಿವೆ. ಇದರ ಅರ್ಥ ಆ ಮಾಧ್ಯಮಗಳಿಗೆ ಅಧ್ಯಯನದ ಕೊರತೆ ಇದೆ. ಇಲ್ಲದಿದ್ದರೆ ಇಂಥ ಪುಂಖಾನುಪುಂಖ ಸುಳ್ಳುಗಳನ್ನು ಹೇಳುತ್ತಾ, ವಿಕ್ಷಕರನ್ನು ಭಯದಲ್ಲಿ ಇಡುತ್ತಿರಲಿಲ್ಲ. ಈ ಭಯೋತ್ಪಾದಕ ಮಾಧ್ಯಮಗಳ ಹೇಳಿಕೆಗಳಿಗೆ ಯಾವುದೇ ಮಹತ್ವ ಕೊಡುವುದು ಅಗತ್ಯವೇ ಇಲ್ಲ. ಯಾಕೆಂದರೆ, ಶ್ರೀಲಂಕಾ, ಪಾಕಿಸ್ತಾನಗಳ ಜಪ ಮಾಡುವ ಈ ಮಾಧ್ಯಮಗಳು ಅಮೆರಿಕಾ, ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾ ಮುಂತಾದ ಶ್ರೀಮಂತ ದೇಶಗಳೂ ಕೂಡಾ ನಿರುದ್ಯೋಗಿ ಭತ್ಯೆಯನ್ನು ಬಹಳ ಹಿಂದಿನಿಂದಲೇ ಕೊಡುತ್ತಾ ಬರುತ್ತಿರುವ ಸತ್ಯವನ್ನು ಹೇಳುವುದಿಲ್ಲ.
ಹೌದು, ಉದಾಹರಣೆಗೆ ಹೇಳುವುದಾದರೆ, ಅಮೆರಿಕ ತಿಂಗಳಿಗೆ 22 ಸಾವಿರ ರೂಪಾಯಿಯಿಂದ 44 ಸಾವಿರ ರೂಪಾಯಿಗಳಷ್ಟು ನಿರುದ್ಯೋಗಿ ಭತ್ಯೆ ಕೊಟ್ಟರೆ, ಬ್ರಿಟನ್ ಸುಮಾರು 32,000 ರಿಂದ 41,000 ರೂಪಾಯಿ ಕೊಟ್ಟರೆ, ಸ್ಕಿಲ್ಡ್ ವರ್ಕರ್ಸ್ಗಳ ಸ್ವರ್ಗವೆಂದೇ ಪರಿಗಣಿಸಲಾಗುವ ಕೆನಡಾ ಸುಮಾರು 17,000 ರಿಂದ 32,000 ಕೊಡುತ್ತದೆ. ಹಾಗೆಯೇ, ಆಸ್ಟ್ರೇಲಿಯಾ ದೇಶವು ತನ್ನ ದೇಶದ ನಿರುದ್ಯೋಗಿಗಳಿಗೆ ಸುಮಾರು 34,000 ರಿಂದ 44,000 ರೂಪಾಯಿಗಳ ಭತ್ಯೆ ಕೊಟ್ಟು, ಅವರ ಆತಂಕವನ್ನು ನಿವಾರಿಸುವ ಕೆಲಸ ಮಾಡುತ್ತಿವೆ. ಹಾಗಂತ ಆ ದೇಶಗಳು ಇಂದು ಪಾಕಿಸ್ತಾನ, ಶ್ರೀಲಂಕಾ ರಾಷ್ಟ್ರಗಳ ಥರದಲ್ಲಿ ನಿರ್ಗತಿಕ ಸ್ಥಿತಿಗಂತೂ ತಲುಪಿಲ್ಲವಲ್ಲ? ಶ್ರೀಲಂಕ, ಪಾಕಿಸ್ತಾನ, ವೆನೆಜುವೆಲಾ, ಸೂಡಾನ್ ಮುಂತಾದ ದೇಶಗಳು ಇಂದು ದುಃಸ್ಥಿತಿಗೆ ತಲುಪಲು ಅಲ್ಲಿನ ಆಡಳಿತ ವ್ಯವಸ್ಥೆ, ಭ್ರಷ್ಟಾಚಾರ, ಕುತಂತ್ರ ಮುಂತಾದ ಆಂತರಿಕ ಸಮಸ್ಯೆಗಳು ಮಾತ್ರವೇ ಕಾರಣ; ಅಲ್ಲಿನ ಬಡವರಾಗಲೀ, ನಿರುದ್ಯೋಗಿಗಳಾಗಲೀ ಕಾರಣರಲ್ಲ.
ಇದಲ್ಲದೆ, ಜಗತ್ತಿನ ಮುಂದುವರೆದ ಅದೆಷ್ಟೋ ರಾಷ್ಟ್ರಗಳು ಈ ರೀತಿಯ ನಿರುದ್ಯೋಗಿ ಭತ್ಯೆಗಳನ್ನು ಕಡ್ಡಾಯವಾಗಿ ನೀಡುತ್ತಿವೆ. ಅದನ್ನು ಕೊಡುವ ಯಾವುದೇ ಸರ್ಕಾರಗಳು ಅದು ತಮ್ಮ ಪಕ್ಷದ ಕೊಡುಗೆ ಎಂದು ಹೇಳಿಕೊಳ್ಳುವುದಿಲ್ಲ. ಯಾಕೆಂದರೆ ಅದು ಮೂಲಭೂತ ಆದ್ಯತೆಗಳಲ್ಲಿ ಒಂದು. ಆದರೆ ಭಾರತದ ಸ್ಥಿತಿ ಹಾಗಿಲ್ಲ. ಇಲ್ಲಿ ಎಲ್ಲವನ್ನೂ ಮಾರ್ಕೆಟಿಂಗ್ ಮಾಡಲಾಗುತ್ತದೆ. ಒಂದು ಪಕ್ಷ ಅಕ್ಕಿ ಕೊಟ್ಟು ಮಾರ್ಕೆಟಿಂಗ್ ಮಾಡಿದರೆ, ಮತ್ತೊಂದು ಪಕ್ಷ ಧರ್ಮದ ಅಮಲನ್ನು ಹಂಚುವ ಮಾರ್ಕೆಟಿಂಗ್ ಮಾಡುತ್ತದೆ. ಇದೆಲ್ಲವೂ ನಮ್ಮ ದೇಶದಲ್ಲಿ ಚುನಾವಣಾ ತಂತ್ರಗಾರಿಕೆಯಾಗಿದೆ. ಅಷ್ಟೇ. ಈ ತಂತ್ರಗಾರಿಕೆಯನ್ನೇ ಮಾಧ್ಯಮಗಳು ಕೂಡ ಉಪ ಉದ್ಯಮವನ್ನಾಗಿ ಬಳಸಿಕೊಂಡು, ಅದರಿಂದಲೇ ದೊಡ್ಡ ಮೊತ್ತವನ್ನು ಪಡೆಯುತ್ತಿರುವುದು ಇಂದು ಗುಟ್ಟಾಗಿ ಉಳಿದಿಲ್ಲ.
ಆದ್ದರಿಂದ ಇಂದಿನ ಮೇನ್ಸ್ಟ್ರೀಮ್ ಮಾಧ್ಯಮಗಳು ಹೇಳುವ ಸುದ್ದಿಗಳನ್ನು ಆದಷ್ಟೂ ವಿರುದ್ಧವಾಗಿ ಅರ್ಥಮಾಡಿಕೊಂಡರೆ ಎಲ್ಲವೂ ಸರಿಯಿರುತ್ತದೆ.
-ವಿ.ಆರ್.ಸಿ.
ಬಿಜೆಪಿಗರು ಹೇಳುವುದನ್ನು ಅನೇಕವೇಳೆ ನಾವು ಉಲ್ಟಾಪಲ್ಟಾನೇ ತಿಳ್ಕಬೇಕು. ಅವರು ಆಡಳಿತದ ದಿನಗಳಲ್ಲಿ ಏನು ಮಾಡಿದರು? ಈ ದೇಶದ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಂಡವರಂತೆ ಮಾತನಾಡುತ್ತಿದ್ದಾರಾದರೂ
ಅವರು ಒಂದು ಕಡೆಯಿಂದ ಬಡವರ ಸವಲತ್ತುಗಳನ್ನೆಲ್ಲ ಕಿತ್ತುಕೊಳ್ಳುತ್ತಾ ಬಂದವರು ಎಂಬುದನ್ನು ಮರೆಯಬೇಡಿ. ಅದು ಇಂದಿರಾ ಕ್ಯಾಂಟೀನ್ ಗಳನ್ನ ಸ್ಥಗಿತಗೊಳ್ಳುವಂತೆ ಮಾಡಿದ್ದಿರಬಹುದು, ಸೊಸೈಟಿಯಲ್ಲಿ ನೀಡಲಾಗುತ್ತಿದ್ದ ೭ ಅಕ್ಕಿಯನ್ನು ೫ ಕೆ.ಜಿ.ಗೆ ಇಳಿಸಿದ್ದಿರಬಹುದು, ರಾಗಿ ಮತ್ತು ಗೋಧಿ ಕೊಡುವುದನ್ನು ನಿಲ್ಲಿಸಿದ್ದಿರಬಹುದು, ಬೆಂಗಳೂರು- ಮೈಸೂರು ಹೆದ್ದಾರಿಯ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆಯನ್ನ ಅಭಿವೃದ್ಧಿ ಪಡಿಸದೆ ಹಳ್ಳಿಯ ರೈತಾಪಿಗಳು ಪರಿತಪಿಸುವಂತೆ ಮಾಡಿದ್ದು, ರೈತರ ಆದಾಯವನ್ನ ಎರಡುಪಟ್ಟು ಮಾಡುತ್ತೇವೆಂದು ಹೇಳಿ ರಸಗೊಬ್ಬರಗಳ ಬೆಲೆ ಏರಿಸಿ ಅವರ ಬದುಕನ್ನು ಮೂರಾಬಟ್ಟೆ ಮಾಡಿದ್ದು, ಅವರು ಯಾವುದೇ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿದರೂ ಅತ್ತ ತಿರುಗಿಯೂ ನೋಡದೆಹೋದದ್ದು, ಬಡವರ ಪಾಲಿನ ಶಾಲೆಗಳನ್ನು ಮುಚ್ಚುತ್ತಾ ಅವರನ್ನು ಶಿಕ್ಷಣದಿಂದ ವಂಚಿಸುವುದಕ್ಕಾಗಿ ಹುನ್ನಾರ ನಡೆಸಿದ್ದು, ಬಡ ಮಕ್ಕಳಿಗೆ ಅವರ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಸಕಾಲದಲ್ಲಿ ನೀಡದೆ ಅನೇಕ ಮಕ್ಕಳು ಶಾಲೆ/ ಕಾಲೇಜು ತೊರೆಯುವಂತೆ ಮಾಡಿದ್ದು – ಇವೆಲ್ಲವನ್ನೂ ಜೊತೆಗಿಟ್ಟು ಅವರ ಹೇಳಿಕೆಗಳನ್ನು ಗಮನಿಸಬೇಕು. ಆಗ ಬಡವರಿಗೆ ಸೌಲಭ್ಯಗಳನ್ನು ಒದಗಿಸಿದರೆ ಯಾಕೆ ಅಡ್ಡಗಾಲು ಹಾಕುತ್ತಾರೆ ಎಂಬುದು ಅರ್ಥವಾಗಿಬಿಡುತ್ತದೆ. ಅವರಿಗೆ ಗುಜರಾತಿ ಕಾರ್ಪೊರೇಟ್ ಕುಳಗಳು ೧೨ ಲಕ್ಷ ಕೋಟಿ ಕೈ ಎತ್ತಿದರೆ ಇವರು ಮಾತನಾಡುವುದಿಲ್ಲ, ಬ್ಯಾಂಕುಗಳಲ್ಲಿ ಲಕ್ಷಾಂತರ ಕೋಟಿ ಸಾಲ ಮಾಡಿ ಕೈ ಕೊಟ್ಟರೆ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ. ಬದಲಿಗೆ ಬಡವರಿಗೆ ಮೂಲಭೂತ ಅಗತ್ಯಗಳನ್ನು ಪೂರೈಸಿದರೆ ದೇಶವೇ ದಿವಾಳಿ ಎದ್ದು ಬಿಡುತ್ತದೆ ಎಂದು ಬೊಬ್ಬೆ ಹೊಡೆಯುತ್ತಾರೆ. ಬಡವರಿಗೆ ಸೌಲಭ್ಯಗಳನ್ನು ಕೊಟ್ಟರೆ ದೇಶ ಶ್ರೀಲಂಕಾ, ಪಾಕಿಸ್ತಾನದಂತೆ ಆಗಿಬಿಡುತ್ತದೆ ಎನ್ನುತ್ತಾರೆ ಬಡಭಾರತದ ಈ ವಿರೋಧಿಗಳು.
– ದಯಾನಂದ ಮೂರ್ತಿ ಕುಕ್ಕರಹಳ್ಳಿ
೦೩-೦೬-೨೦೨೩
Good weeb site you have gott here.. It’s ifficult to find quality writing like yours thwse days.
I trily appreciate individuals liike you! Take care!!