ಕಳೆದ 2018ರ ಚುನಾವಣಾಪೂರ್ವದಲ್ಲಿ 5 ವರ್ಷಗಳ ಕಾಲ ನಿರಾತಂಕವಾಗಿ ಅಧಿಕಾರವನ್ನು ಪೊರೈಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಮರಳದಿರಲು ಯಾವುದೇ ಕಾರಣಗಳಿರಲಿಲ್ಲ.
ಹಾಗೆಯೇ ಸಿದ್ದರಾಮಯ್ಯ ಕೂಡ ಮತ್ತೆ ಅಧಿಕಾರಕ್ಕೆ ಬಂದೇ ಬಿಡುತ್ತೇನೆ ಎಂಬ ವಿಶ್ವಾಸದಲ್ಲಿ ರಾಜ್ಯಾದ್ಯಂತ ದೊಡ್ಡ ದೊಡ್ಡ ಸಭೆಗಳನ್ನು ಮಾಡಿ ತಮ್ಮ ಪ್ರಣಾಳಿಕೆಯ ಬಹುತೇಕ ಆಶ್ವಾಸನೆಗಳನ್ನು ಈಡೇರಿಸಿರುವುದಾಗಿ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಸ್ವತ: ತೆರಳಿ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ನೀಡಿರುವ ಅನುದಾನ ಹಾಗೂ ಅಭಿವೃದ್ದಿ ಕಾರ್ಯಗಳ ಪಟ್ಟಿಯನ್ನು ಹಿಡಿದು ಮತ್ತೆ ಅಧಿಕಾರ ಕೊಡಬೇಕಾಗಿ ಜನರ ಮುಂದೆ ನಿಂತಿದ್ದರು. ಇದು ರಾಜ್ಯಾದಂತ ಸಿದ್ದರಾಮಯ್ಯ ಪರವಾದ ಅಲೆಯು ಇರುವಂತೆಯೇ ಕಾಣುತ್ತಿತ್ತು. ಕಾಂಗ್ರೇಸ್ ಮತ್ತೆ ಸರಳ ಬಹುಮತಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಗೆಲ್ಲಲು ಯಾವುದೇ ತೊಂದರೆ ಇರಲಿಲ್ಲ.

ಪ್ರಸ್ತುತ ಚುನಾವಣೆಯಲ್ಲಿ ಪಂಚರತ್ನ ಯಾತ್ರೆಯ ಮೂಲಕ ಬೆವರು ಸುರಿಸಿದಷ್ಟು ಕುಮಾರಸ್ವಾಮಿ ಯವರು 2018ರ ಚುನಾವಣಾ ಪೂರ್ವದಲ್ಲಿ ಬೆವರು ಹರಿಸಿರಲಿಲ್ಲ. ಅವರ ಬೆನ್ನಿಗೆ ಇದ್ದದ್ದು ಕೇವಲ ಹಿಂದಿನ ಅಧಿಕಾರದ ಅವಧಿಯಲ್ಲಿ ಮಾಡಿದ ಜನಪ್ರಿಯ ಆಡಳಿತ ಮಾತ್ರವೇ ಆಗಿತ್ತು. ಆದಾಗ್ಯೂ 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಅಬ್ಬರ ಹಾಗೂ ಬಿಜೆಪಿಯ ಹಿಂದುತ್ವದ ಅಬ್ಬರ ಹಾಗೂ ತಗ್ಗದ ಮೋದಿ ಅಲೆಯ ನಡುವೆಯೂ ಆ ಎರಡು ಪಕ್ಷಗಳನ್ನು ಬಹುಮತದ ಹತ್ತಿರಕ್ಕೆ ಸುಳಿಯದ ಹಾಗೆ ಕಟ್ಟಿಹಾಕುವಲ್ಲಿ ದೇವಗೌಡ್ರು ಹಾಗೂ ಕುಮಾರಸ್ವಾಮಿ ಸಫಲರಾಗಿದ್ದರು. 

ಇದಕ್ಕೆ ಬಹುಮಖ್ಯ ಕಾರಣವೆಂದರೆ ದೇವೆಗೌಡ್ರು 2018ರ ಚುನಾವಣೆಯ ಸಮಯದಲ್ಲಿ ಉರುಳಿಸಿದ ಬಹುಮುಖ್ಯ ದಾಳ. ಅದು ಬಹುಜನ ಸಮಾಜ ಪಕ್ಷದೊಂದಿಗಿನ ಚುನಾವಣಾ ಪೂರ್ವಮೈತ್ರಿ. ಹೌದು 2018ರ ಚುನಾವಣೆಗೂ ಪೂರ್ವದಲ್ಲಿ BSP ಪಕ್ಷಕ್ಕೆ ರಾಜ್ಯದಲ್ಲಿ ಅಧ್ಯಕ್ಷ ಆಗಿದ್ದ ಎನ್ ಮಹೇಶ್, ಇಡೀ ರಾಜ್ಯಾದ್ಯಂತ  ಪಕ್ಷಕ್ಕೆ ಒಂದು ಪ್ರಬಲ ನೆಲೆಯನ್ನು ಕಟ್ಟಿಕೊಡುವಲ್ಲಿ ಸಫಲರಾಗಿದ್ದರು. ಆ ಪಕ್ಷ ಕೊಳ್ಳೇಗಾಲ ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಲೆಕ್ಕಾಚಾರವನ್ನು ಬುಡಮೇಲು ಮಾಡುವ ಸಾಮರ್ಥ್ಯವನ್ನು ದೇವೆಗೌಡರು ಬಹುಬೇಗ ಕಂಡುಕೊಂಡೇ BSP ಜೊತೆಗಿನ ಹೊಂದಾಣಿಕೆಗೆ ಮಾಯವತಿಯವರ ಮನೆ ಬಾಗಿಲನವರೆಗೂ ಹೋಗಿದ್ದು.

ದೇವೆಗೌಡರ ಲೆಕ್ಕಾಚಾರ ಎಂದೂ ತಪ್ಪುವುದಿಲ್ಲ ಎಂಬಂತೆಯೇ ರಾಜ್ಯದಲ್ಲಿ BSP ತನ್ನ ಮತಬ್ಯಾಂಕ್ ನ್ನು ಯಶಸ್ವಿಯಾಗಿ JDSಗೆ ವರ್ಗಾವಣೆ ಮಾಡಿತು. ಬಹುಶಃ ಮೊದಲಬಾರಿಗೆ ಇಷ್ಟರ ಮಟ್ಟಿನ ಮತ ವರ್ಗಾವಣೆಯ ಪ್ರಾಮಾಣಿಕ ಪ್ರಯತ್ನವಾಗಿದ್ದು ಕರ್ನಾಟಕದಲ್ಲಿ ಇದೇ ಮೊದಲು. ಆನಂತರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿಯೂ ಸಹಾ ಪರಸ್ಪರ ಮತ ವರ್ಗಾವಣೆಯಲ್ಲಿ ಒಳ ಇರಿತಗಳೇ ಜಾಸ್ತಿಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಸ್ವತಃ ಕುಮಾರಸ್ವಾಮಿ ಯವರ ಮಗ ನಿಖಿಲ್ ಕೂಡ ಈ ಒಳ ಇರಿತದ ಬಲಪಶು ಕೂಡ. ಈ ವಿಷಯದಲ್ಲಿ ಎನ್ ಮಹೇಶ್ ರೂಪಿಸಿದ BSP ಕಾರ್ಯಕರ್ತರ ಪ್ರಾಮಾಣಿಕತೆ ಹಾಗೂ ಬದ್ದತೆಗೆ ಒಂದು ಸಲಾಂ ಹೇಳಲೇಬೇಕು. ಆದರೆ ಆ ಪಕ್ಷದ ಕಾರ್ಯಕರ್ತರನ್ನು ಚುನಾವಣೆ ನಂತರ JDS ಪಕ್ಷದ ಶಾಸಕರು ಎಲ್ಲಿಯೂ ಗೌರವಯುತವಾಗಿ ನಡೆಸಿಕೊಂಡಿಲ್ಲ ಎಂಬುದು ಕಾಂಗ್ರೆಸ್ ಕಡೆಗೆ ಪ್ರಸಕ್ತ ಚುನಾವಣೆಯಲ್ಲಿ ಇಡಿಗಂಟಾಗಿ ದಲಿತ ಮತಗಳು ಹರಿಯಲು ಒಂದು ಕಾರಣವೂ ಹೌದು.

ಇನ್ನೂ ಬಹುಮುಖ್ಯ ವಿಚಾರವೆಂದರೆ ಕಳೆದ ಚುನಾವಣೆಯ ನಂತರ ಎನ್ ಮಹೇಶ್ JDS -Congress ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾದರೂ ಕೆಲವೇ ತಿಂಗಳಲ್ಲಿ ಅವರನ್ನು ಸಂಪುಟದಿಂದ ಕೈ ಬಿಡಲಾಯಿತು. ಈ ಸಂಧರ್ಭದಲ್ಲಿ ‌ಕುಮಾರಸ್ವಾಮಿಯಾಗಲೀ ದೇವೇಗೌಡರೇ ಆಗಲಿ ಇದರ ದೂರಗಾಮಿ ಪರಿಣಾಮ ಊಹಿಸಬೇಕಿತ್ತು. ಹಾಗೂ ಎನ್ ಮಹೇಶ್ ಸಂಪುಟದಲ್ಲಿ ಉಳಿಸಿಕೊಳ್ಳಬೇಕಿತ್ತು.‌ ಕುಮಾರಸ್ವಾಮಿ ಸರ್ಕಾರ ಅಂದು ಸಂಖ್ಯಾ ಆಧಾರದ ಮೇಲೆ ಕಟ್ಟಿರುವ ಕಟ್ಟಡವಾಗಿತ್ತು. ಅಲ್ಲಿ ಒಂದೊಂದು ಇಟ್ಟಿಗೆಗೂ ಅದರದೇ ಆದ ಬೆಲೆ ಇತ್ತು. ಎನ್ ಮಹೇಶ್ ಸಂಪುಟದಿಂದ ಹೊರಗೆ ಬಂದ ತಕ್ಷಣವೇ ಬಿಜೆಪಿ ಪಾಳಯದಲ್ಲಿ ಹೊಸ ಆಸೆಯು ಚಿಗುರಿರಲು ಸಾಧ್ಯವಿದೆ.

ಇನ್ನೊಂದಿಷ್ಟು ಇಟ್ಟಿಗೆಗಳನ್ನು ಕಿತ್ತುಕೊಂಡರೆ ಹೊಸ ಕಟ್ಟಡವನ್ನೇ ಕಟ್ಟಬಹುದು ಎಂಬ ಲೆಕ್ಕಾಚಾರ BJP ಪಾಳೆಯದಲ್ಲಿ ಸುರುವಾಗಿದ್ದೆ ಆ ಸಂದರ್ಭದಲ್ಲಿ ಕೂಡ ಇರಬಹುದು. ಹೋಗಲಿ ಲೋಕಸಭಾ ಚುನಾವಣೆಯ ನಂತರದಲ್ಲಿ ಆದರೂ ಕುಮಾರಸ್ವಾಮಿ ಎನ್ ಮಹೇಶ್ ಕಡೆಗೆ ನೋಡಬೇಕಿತ್ತು. ಆ ಪಕ್ಷದ ಹೈಕಮಾಂಡ್ ಜೊತೆಗೆ ಮಾತನಾಡಿ ಎನ್ ಮಹೇಶ ರವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವರೆಂಬ ಎನ್ ಮಹೇಶ್ ರವರ ನಿರೀಕ್ಷೆಯನ್ನು ಕುಮಾರಸ್ವಾಮಿ ಹುಸಿಗೊಳಿಸಿದರು. ಬದಲಾಗಿ ತಮ್ಮ ಕೋಟಾದಡಿ ಒಂದು ಮಂತ್ರಿ ಸ್ಥಾನ ಉಳಿದ ಲಾಭದ ಲೆಕ್ಕ ಆ ಕ್ಷಣದಲ್ಲಿ ಕುಮಾರಸ್ವಾಮಿಯವರ ತಲೆ ಹೊಕ್ಕಿರಲೂಬಹುದು. ಈ ಅಸಮಾಧಾನವೇ ಎನ್ ಮಹೇಶ್ ವಿಶ್ವಾಸಮತಯಾಚನೆ ಸಂಧರ್ಭದಲ್ಲಿ ಕುಮಾರಸ್ವಾಮಿ ಸರ್ಕಾರದ ಪರವಾಗಿ ಮತ ಚಲಾಯಿಸದಿರಲು ಒಂದು ಪ್ರಬಲ ಕಾರಣವಾಗಿರಬಹುದು. ಮುಂದೆ ಎನ್ ಮಹೇಶ್ ಉಚ್ಚಾಟನೆ ಹಿಂದೆ ಇವರ ಪಾತ್ರ ಎಷ್ಟಿದೆ ಎಂಬುದನ್ನು ಮಾಯವತಿಯವರು ಮಾತ್ರವೇ ಹೇಳಬೇಕು.

ಉಚ್ಚಾಟನೆ ಸಂಧರ್ಭದಲ್ಲಿ ಎನ್ ಮಹೇಶ್ ರವರ ಶಾಸಕ ಸ್ಥಾನದ ಅನರ್ಹತೆ ಅರ್ಜಿ ಸಲ್ಲಿಸಲು ಕುಮಾರಸ್ವಾಮಿ ಯವರಿಗೆ ಮಾಯವತಿಯವರೇ ಪತ್ರ ನೀಡಿದ್ದರು ಎಂಬುದನ್ನು ಕೇಳಿದ್ದೇನೆ. ನಾನು ಎರಡು ಬಾರಿ ಅವರೊಟ್ಟಿಗೆ ಚುನಾವಣೆಯನ್ನು ಎದುರಿಸುವ ಸಂಧರ್ಭದಲ್ಲಿ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಸೀಮಿತ ಸಂಪನ್ಮೂಲದಲ್ಲಿ ಅವರು ಪಕ್ಷ ಸಂಘಟಿಸುತ್ತಿದ್ದ ಬಗೆಯೇ ನನ್ನನ್ನು ಅಚ್ಚರಿಗೊಳಿಸುತ್ತಿತ್ತು. ಮಾಯವತಿಯವರ ಮೇಲಿನ ಅವರ ನಿಷ್ಠೆಯ ಪರಾಕಾಷ್ಠತೆ ಅಳತೆಗೆ ಮಿಗಿಲಾದುದ್ದು. ಉಚ್ಚಾಟನೆಯ ಒತ್ತಡದಿಂದ ಆಸ್ಪತ್ರೆಯಲ್ಲಿದ್ದ ಅವರು ಹೇಳಿದ ಮಾತು ಬೆಹನ್ಜಿ ನನಗೆ ವಾಸ್ತವವಾಗಿ ಇಲ್ಲಿ ಏನಾಗಿದೆ ಎಂಬುದನ್ನು ಹೇಳಿಕೊಳ್ಳಲು ಒಂದು ಅವಕಾಶ ಕೊಡಬೇಕಿತ್ತು. ನಾನು ಗೆದ್ದ ನಂತರ ನನ್ನ ಕಾರ್ಯಕರ್ತರು ನನ್ನ ಒಂದು ಗೆಲುವನ್ನು ಮುಂದಿನ ಚುನಾವಣೆ ಹೊತ್ತಿಗೆ ಕನಿಷ್ಠ 5 ಗೆಲುವನ್ನಾಗಿ ಮಾಡುವ ಗುರಿ ಹಾಗೂ ಕಾರ್ಯಯೋಜನೆಯೊಂದಿಗೆ ಅತೀವ ಹುಮ್ಮಸ್ಸಿನಿಂದ ಕಾರ್ಯನಿರ್ವಹಿಸುತ್ತಿದ್ದರು. ನನ್ನನ್ನು ಮಂತ್ರಿ ಸ್ಥಾನದಿಂದ ಇಳಿಸಿ ಕಾರ್ಯ ಕರ್ತರ ಉತ್ಸಾಹವನ್ನು ಕುಗ್ಗಿಸಿದರು. ಇಂದು ನನ್ನನ್ನು ಉಚ್ಚಾಟನೆ ಮಾಡಿ ನನ್ನ ಪಕ್ಷದೊಂದಿಗೆ ನನ್ನನ್ನು ಕಳೆದರು. ಸ್ವಾಭಿಮಾನಕ್ಕಾಗಿಯೇ ರಾಜಕಾರಣ ಮಾಡಿದ ನಾನು ಇಂದು ಯಾರ ಮನೆ ಬಾಗಿಲಿಗೂ ಹೋಗುವ ಮನಸ್ಥಿತಿಯಲ್ಲಿ ಇಲ್ಲ. ಅವರಿಗೆ ಸ್ವಲ್ಪ ದಿನ ಆದ ಮೇಲೆ ಎಲ್ಲವೂ ಮನವರಿಕೆ ಆಗುತ್ತದೆ. ಆಗ ಎಲ್ಲವೂ ಸರಿಯಾಗುತ್ತದೆ. ಈಗ ಬೇರೆಯವರು ಕರೆಯುತ್ತಾರೆ ಎಂದ ಮಾತ್ರಕ್ಕೆ ಹೋಗುವುದು ಸರಿಯಲ್ಲ ಎಂಬ ತಮ್ಮ ಪಕ್ಷದ ಮೇಲಿನ ಅಚಲ ನಿಷ್ಠೆಯನ್ನು ಆಗಲೂ ಇಟ್ಟುಕೊಂಡಿದ್ದರು. ಪಾಪ ಅವರ ನಿರೀಕ್ಷೆ ಸುಳ್ಳಾಯಿತು. ಆದರೆ ಇದು ಕುಮಾರಸ್ವಾಮಿ ಮತ್ತು ದೇವೆಗೌಡರಿಗೆ ಬಹಳ ಸೂಕ್ಷ್ಮ ಸಂಧರ್ಭವಾಗಿತ್ತು.

ಹೇಗೂ ಸರ್ಕಾರ ಬಿದ್ದಿತ್ತು. ಬಹಳ ವಿವೇಚನೆಯಿಂದ ಎನ್ ಮಹೇಶ್ BSP ಪಕ್ಷದಲ್ಲಿ ಉಳಿಸಿಕೊಳ್ಳಲು ಆ ಹೈಕಮಾಂಡ್ ಗೆ ಹೇಳಬೇಕಿತ್ತು. ಅದರ ಲಾಭ ಹಿಂದಿಗಿಂತಲೂ ಈ ಚುನಾವಣೆಯಲ್ಲಿ JDS ಹೆಚ್ಚಿನ ಲಾಭ ತಂದುಕೊಡುತ್ತಿತ್ತು. ಕುಮಾರಸ್ವಾಮಿಯವರು ಅಧಿಕಾರದ ಸಮೀಪಕ್ಕೆ ಹೋಗಬೇಕಾದರೆ ಅವರನ್ನು ಆ ಎತ್ತರಕ್ಕೆ ಎತ್ತಲು ಹಳೇ ಮೈಸೂರು ಭಾಗದಲ್ಲಿ ಅಲ್ಪ ಪ್ರಮಾಣದ ದಲಿತರ ಮತಗಳ ಗಳಿಕೆ ಬೇಕೆ ಬೇಕಿದೆ. ಈ ಸಣ್ಣ ಪ್ರಮಾಣದ ದಲಿತರ ಮತಗಳನ್ನು ಎಲ್ಲಾ ಕ್ಷೇತ್ರದಲ್ಲಿ ತಂದುಕೊಡಬಹುದಾದ ಏಕೈಕ ಸಾಮರ್ಥ್ಯ ಇದ್ದದ್ದು BSP ಯಲ್ಲಿ ಎನ್ ಮಹೇಶ್ ಗೆ ಮಾತ್ರ ಎಂಬುದು ಹಿಂದೆಯೇ ಸಾಬೀತಾಗಿತ್ತು. BSPಯಿಂದ ಎನ್ ಮಹೇಶ್ ಉಚ್ಚಾಟನೆಗೆ ಬೆಂಬಲ ನೀಡುವ ಬದಲು BSPಯಲ್ಲಿ ಎನ್ ಮಹೇಶ್ ಉಳಿಸಲು ಕುಮಾರಸ್ವಾಮಿಯಾಗಲೀ ದೇವೆಗೌಡರಾಗಲಿ ಅಂದು ಪ್ರಯತ್ನಿಸಿದ್ದರೆ ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಒಂಟಿ ಆಟಗಾರನಾಗಿ ಕ್ರೀಸ್ ನ ಒಂದು ತುದಿಯಲ್ಲಿ ನಿಂತು ರನ್ ರಹಿತ ಆಟವಾಡುವ ಸಂಧರ್ಭವಂತು ಒದಗಿ ಬರುತ್ತಿರಲಿಲ್ಲ. ಬದಲಾಗಿ ಇಂದು ಕೂಡ ಕುಮಾರಸ್ವಾಮಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಸಂದರ್ಭವೇ ಇರುತ್ತಿತ್ತು.

ರಾಮಚಂದ್ರೇಗೌಡ, ಮೈಸೂರು

Leave a Reply

Your email address will not be published. Required fields are marked *