ಲೇಖಕ ಕಾಫ್ಕಾ ಒಮ್ಮೆ ಬರ್ಲಿನ್ನ ಪಾರ್ಕಿನಲ್ಲಿ ತಿರುಗಾಡುತ್ತಿದ್ದ. ಗೊಂಬೆ ಕಳೆದುಕೊಂಡ ಪುಟ್ಟ ಹುಡುಗಿಯೊಬ್ಬಳು ಅಳುತ್ತಾ ಕುಳಿತಿದ್ದಳು. ಅವಳ ಅಳುವಿಗೆ ಕರಗಿದ ಕಾಫ್ಕಾ ಆಕೆಯೊಂದಿಗೆ ಗೊಂಬೆಯನ್ನು ಹುಡುಕಿದ. ಅದು ಸಿಗಲಿಲ್ಲ.
ಅವಳನ್ನು ಸಮಾಧಾನಗೊಳಿಸಲು ʼನಾಳೆ ಬಾ, ಮತ್ತೆ ಗೊಂಬೆ ಹುಡುಕೋಣʼ ಎಂದು ಸಮಾಧಾನ ಮಾಡಿ ಕಳಿಸಿದ.
ಮರುದಿನ ಕಾಫ್ಕಾ ಅದೇ ಪಾರ್ಕಿಗೆ ಬಂದ, ಹುಡುಗಿಯೂ ಅದಾಗಲೇ ಬಂದು ಕಾಫ್ಕಾನಿಗಾಗಿ ಕಾಯತ್ತಿದ್ದಳು. ಆ ಹುಡುಗಿಗೆ ಕಾಫ್ಕಾ ಒಂದು ಪತ್ರ ಕೊಟ್ಟು, ʼಇದು ನಿನ್ನ ಗೊಂಬೆಯ ಪತ್ರʼ ಎಂದು, ಬಿಚ್ಚುತ್ತಾ ಅವನೇ ಗೊಂಬೆಯಂತೆ ನಟಿಸುತ್ತಾ, ʼನನ್ನ ಮುದ್ದು ಗೆಳತಿಯೇ, ನಾನೀಗ ಜಗತ್ತನ್ನು ಅರಿಯಲು ಪ್ರವಾಸ ಹೊರಟಿದ್ದೇನೆ. ಆದಷ್ಟೂ ಬೇಗ ಬಂದು ನಿನ್ನನ್ನು ಸೇರಿಕೊಳ್ಳುತ್ತೇನೆ. ಅಲ್ಲಿಯವರೆಗೆ ನಿನಗೆ ದಿನವೂ ಪತ್ರಗಳನ್ನು ಬರೆಯುತ್ತೇನೆʼ ಎಂದು ಓದಿದ.
ಗೊಂಬೆಯಿಂದ ಆ ಹುಡುಗಿಗೆ ದಿನವೂ ಪತ್ರ ಬರುತ್ತಿತ್ತು. ಬೆಟ್ಟ-ಗುಟ್ಟ-ಪರ್ವತಗಳು, ಪ್ರಾಣಿ-ಪಕ್ಷಿ-ಕ್ರಿಮಿ-ಕೀಟಗಳು, ಮಹಾತ್ಮರು-ದುರಾತ್ಮರು-ಕಿಡಿಗೇಡಿಗಳು-ಪ್ರೇಮಕ್ಕೆ ಬಿದ್ದವರು, ಸಾಧಾರಣ ಮನುಷ್ಯರ ವಿವರಗಳು ಸೇರಿದಂತೆ ಜಗತ್ತಿನ ಆಗುಹೋಗುಗಳ, ಪುಳಕ ಹುಟ್ಟಿಸುವ ವಿವರಗಳು ಪತ್ರಗಳಲ್ಲಿ ಇರುತ್ತಿತ್ತು.
ಒಂದುದಿನ ಕಾಫ್ಕಾ ಆ ಹುಡುಗಿಗೆ ಗೊಂಬೆಯೊಂದನ್ನು ತಂದುಕೊಟ್ಟ. ಅದನ್ನು ನೋಡಿದ ಹುಡುಗಿ, ʼಇದು ನನ್ನ ಗೊಂಬೆಯಲ್ಲʼ ಎಂದು ತಕರಾರು ತೆಗೆದಳು. ಮಾರನೇ ದಿನ ಮತ್ತೊಂದು ಪತ್ರ ಬಂದಿತು. ʼಜಗತ್ತನ್ನು ತಿರುಗಿದ ನಾನು ಸಾಕಷ್ಟು ಬದಲಾಗಿ ಹೋಗಿದ್ದೇನೆ.ʼ ಎಂದು ಬರೆದಿತ್ತು. ಆ ಹುಡುಗಿ ಗೊಂಬೆಯನ್ನು ಅಪ್ಪಿ ಮುದ್ದಾಡಿದಳು. ಅದು ತನ್ನ ಗೊಂಬೆಯೆಂದೇ ನಂಬಿದಳು. ಅಂದಿನಿಂದ ಕಾಫ್ಕಾ ಆ ಹುಡುಗಿಗೆ ಸಿಗಲಿಲ್ಲ.
ಒಂದು ದಿನ ಗೊಂಬೆಯ ಹಿಂಭಾಗದಲ್ಲಿ ಯಾವುದೋ ಪತ್ರ ಇರುವುದು ಕಂಡು ಬಂತು. ತೆಗೆದು ಓದಿದಳು. ʼನಾವು ಪಡೆದುಕೊಳ್ಳುವ ಎಲ್ಲವೂ ಒಂದು ದಿನ ಇಲ್ಲವಾಗುತ್ತದೆ. ಅದೂ ಮತ್ತೇ ಬೇರೆ ರೂಪದಲ್ಲಿ ನಮ್ಮನ್ನು ಸೇರುತ್ತದೆ.ʼ ಎಂದು ಬರೆದಿತ್ತು.
ಇಷ್ಟೂ ಪತ್ರಗಳನ್ನು ಕಾಫ್ಕಾ ತನ್ನ 44 ವಯಸ್ಸಿನಲ್ಲಿ ಸಾಯುವ ಒಂದು ವರ್ಷದ ಮುಂಚಿನ ವರೆಗೂ ಆ ಹುಡುಗಿಗೆ ಬರೆಯುತ್ತಿದ್ದ. ಆತನಿಗೆ ಖಾಯಿಲೆ ಆದಾಗ ಆ ಹುಡುಗಿಯನ್ನು ನೋಡಲು ಬಯಸಿದ್ದ ಕೂಡಾ. ಮದುವೆ, ಮಕ್ಕಳು ಯಾವುದೊಂದು ಇಲ್ಲದ ಅವನಿಗೆ ಅವಳ ವಿಳಾಸವಾಗಲೀ, ವಿವರಗಳಾಗಲೀ ತಿಳಿದಿರಲಿಲ್ಲ…
-ವಿ.ಆರ್.ಸಿ.