ಮಾನವ ವ್ಯಕ್ತಿತ್ವಕ್ಕೆ ಗೌರವ ತೋರಿಸದ ಯಾವುದೇ ಸಮಾಜವು ದರೋಡೆಕೋರರ ಒಂದು ತಂಡವಷ್ಟೆ. ಪುರುಷರು ಈ ವಿಚಾರವನ್ನು ತಮ್ಮ ಮನದಾಳಕ್ಕೆ ತೆಗೆದುಕೊಂಡು ಅವಲೋಕಿಸಿದರೆ ಪುರುಷರು ದರೋಡೆಕೋರರೆ ಎಂದಾಗುತ್ತದೆ. ಕಾಲ ದೇಶದ ಹೊರೆ ಹೊರುವ ನೆಪದಲ್ಲಿ ತಾನೇ ಬೌದ್ಧಿಕವಾಗಿ, ಸಾಹಸಿಯಾಗಿ, ಮಾನವ ಜನಾಂಗದ ಪ್ರತಿನಿಧಿ ಎಂಬ ಸಾಂಸ್ಕೃತಿಕ ಹೊರೆಯನ್ನು ಪುರುಷ ಕಳಚಬೇಕು. ಈ ಗರ್ವದ ವಿಸರ್ಜನೆಯಿಂದಾಗಿಯೇ ಪ್ರತಿ ಪುರುಷನೂ ಸಮತೆಯ ವಿವೇಕವನ್ನು ಅಂತಸ್ಥಗೊಳಿಸಿಕೊಳ್ಳುವ ಜ್ಞಾನವನ್ನು ಅಪ್ಪಿಕೊಳ್ಳಬೇಕು.
ಪ್ರಾಕೃತಿಕವಾದ ಗಂಡು ಹೆಣ್ಣು ಎಂಬ ಭಿನ್ನತೆ ಸೃಷ್ಟಿಸಹಜವಾದದ್ದು. ಆದರೆ ಈ ಭಿನ್ನತೆಗೆ ಸಾಮಾಜಿಕ ತರತಮದ ಪ್ರತ್ಯೇಕತೆಯ ಗಂಡು ಶ್ರೇಷ್ಠ ಹೆಣ್ಣು ಕನಿಷ್ಠ ಎಂಬ ಲೇಪನ ಹಚ್ಚುವುದು ಪ್ರಕೃತಿಗೆ ವಿರೋಧ ಹಾಗೂ ನಾಗರೀಕ ಸಮಾಜಕ್ಕೂ ಇದು ಸಾಮಾಜಿಕ ಕೇಡಾಗಿ ಪರಿಣಮಿಸಬಲ್ಲದು. ಬಾಬಾ ಸಾಹೇಬರ ವ್ಯಕ್ತಿ ಘನತೆಯ ತತ್ವ ಕೇವಲ ರಾಜಕೀಯ ಚಿಂತನೆಯ ಪಶ್ಚಿಮದ ವ್ಯಕ್ತಿವಾದದ ತಿರುಳಲ್ಲ. ಇದು ತಾರತಮ್ಯದ ಅಮೂರ್ತವಾಗಿ ವ್ಯಕ್ತಿಬಂಧನದ ವಿಕಾರಗಳಿಂದ ಹೊರ ಬರುವ ವ್ಯಕ್ತಿ ಸಮಷ್ಠಿಯ ಹೊಣೆ ಹೊರುವ ಸಮತೆಯ ವಿವೇಕದ್ದು.
ವಿಮೋಚನೆಗೆ ಗಂಡು ಹೆಣ್ಣೆಂಬ ಭೇದವಿಲ್ಲ. ಜೀವವನ್ನು ಅಡಿಯಾಳಾಗಿಸುವ ಎಲ್ಲ ಕಾಲದೇಶಗಳ ವ್ಯಕ್ತಿ ಅಂದರೆ ಆತ ಅಥವಾ ಆಕೆಯನ್ನು ನಿರ್ಬಂಧಿಸುವ ಎಲ್ಲ ಮಾನುಷ ವಿರೋಧಿ ಪ್ರವೃತ್ತಿಗಳಿಂದ ಹೊರಬರುವುದೇ ವಿಮೋಚನೆಯಾಗಿದೆ. ಆಧ್ಯಾತ್ಮವೂ ಸಹ ಇಲ್ಲಿಗೆ ತಲುಪಿಯೇ ಜೀವವನ್ನು ಭೇದವಿಲ್ಲದೆ ಚೈತನ್ಯದ ತುದಿಗೇರಿಸಬೇಕಾಗುತ್ಯದೆ. ಆನು,ತಾನು ಎಂಬ ಪರ ವಿರೋಧದ ವಾಚಕಗಳು ವ್ಯಕ್ತಿ ಮತ್ತು ಸಾಮಾಜಿಕ ಅಹಂ ಆಗದಿರಲಿ ಎಂಬುದು ನಮ್ಮ ಈ ಹೊತ್ತಿನ ಇಂಗಿತವಾಗಬೇಕು.
ಈ ದಿಸೆಯಲ್ಲಿ ಬಂಧಿಗಳಾಗಿರುವ ನಮ್ಮಂತೆಯೆ ಇದ್ದು, ಭಿನ್ನವಾಗಿರುವ ಮಹಿಳಾ ಜಗತ್ತಿನ ಸಮತೆಗಾಗಿ ಹೃತ್ಪೂರ್ವಕವಾಗಿ ನಡೆಯುವ ಅಗತ್ಯವಿದೆ. ಇದು ನಮ್ಮ ಬಾಳ ದಿಟ್ಟಿಯೂ ಆಗಬೇಕು.
ಮಹಿಳೆ ಎಂಬ ಜೀವಚೇತನದ ವ್ಯಕ್ತಿತ್ವಕ್ಕೆ ಶರಣು ಹೇಳುತ್ತ, ಮಹಿಳಾ ದಿನಾಚರಣೆಯ ಶುಭಾಶಯಗಳು ಎಲ್ಲರಿಗೂ….
ಜೈಭೀಮ್….
ಡಾ. ಪ್ರಕಾಶ್ ಮಂಟೇದ